ಕೊಮರಿಕೆ ಇದೊಂದು ಹಣ್ಣು.ಬ್ರೆಜಿಲ್ ದೇಶದ ಕಾಡುಗಳು ಕೊಮರಿಕೆಯ ತೌರು.ಈ ಹಣ್ಣು ಪೋರ್ಚುಗೀಸರ ಮೂಲಕ ಭಾರತಕ್ಕೆ ಪರಿಚಯವಾಯಿತು.ಆದರೆ ಯಾವಾಗಾಯಿತೆಂದು ದಾಖಲೆಗಳಿಲ್ಲ.ಕ್ರಿ.ಶ.೧೫೮೩ರಲ್ಲಿ ಭರತದ ಪೋರ್ಚುಗೀಸ್ ವಲಸೆಗಳಲ್ಲಿ ಸುತ್ತಾಡಿದ ಲಿನ್‍ಶೊಟೆನ್ ಅಲ್ಲಿ ಕಂಡ ಮರವೊಂದನ್ನು ಕುರಿತು ಹೀಗೆ ಬರೆದಿದ್ದಾನೆ ಇಲ್ಲಿ ಕ್ಯಾರಂಬೋಲಾಸ್ ಎಂಬೊಂದು ಹಣ್ಣಿನ ಮರ ಬೆಳೆಯುತ್ತದೆ.ಹಣ್ಣಿಗೆ ಎಂಟು ಮೂಲಗಳಿವೆ,ಸಣ್ಣ ಸೇಬಿನ ಗಾತ್ರದ ಹಣ್ಣು ಹುಳಿರುಚಿ ಉಪ್ಪಿನಕಾಯಿಗೆ ಉಪಯೋಗವಾಗುತ್ತದೆ.

ಪಲುಡಾನಸ್ ಎಂಬಾತ(ವೈದ್ಯ) ಇದಕ್ಕೊಂದು ಟಿಪ್ಪಣಿ ಬರೆದಿದ್ದಾರೆ ಪೊರ್ಚುಗೀಸರು ಮಲಬಾರು ನಿವಾಸಿಗಳು ಇದನ್ನು ಕ್ಯಾರಂಬೊಲಾಸ್ ಎಂದು ಕರೆಯುತ್ತಾರೆ.ದಕ್ಕನಿನಲ್ಲಿ ಕಮಾರಿಕ್ಸ್ ಎಂದೂ,ಕನ್ನಡದಲ್ಲಿ ಕರಂಬೇಲಿ ಎಂದೂ, ಪರ್ಶಿಯನರು ಚಮರೋಕ್ ಎಂದೂ ಹೆಳುತ್ತಾರೆ...ಹಣ್ಣು ಉದ್ದುದ್ದ, ಬಣ್ಣ ಹಳದಿ, ನಾಲ್ಕೈದು ಮೂಲೆಗಳು ಸೇರಿದಂತೆ ರೂಪ...ಹಣ್ಣನ್ನು ಸಕ್ಕರೆಯಲ್ಲಿ ಅದ್ದಿ ಮುರಬ್ಬ ಮಾಡುತ್ತಾರೆ. ಮಾಂಸದೋಂದಿಗೆ ತಿನ್ನುತ್ತಾರೆ. ಕನ್ನಡ ಜನ ಈ ಹಣ್ಣಿನ ರಸವನ್ನು ಜ್ವರಾಪಹಾರಿಯಾಗಿ ಬಳಸುತ್ತಾರೆ... ಈ ಬರಹದಿಂದಲೂ ಲಿನ್‍ಶೋಟೆನ್ ಕಂಡ ಹಣ್ಣು ಕೊಮರಿಕೆ ಎಂದೇ ನಿರ್ಧಾರವಾಗುತ್ತದೆ. ಸುಮಾರು ೪೦೦ ವರ್ಷಗಳಿಂದ ಈ ಹಣ್ಣು ನಮಗೆ ಪರಿಚಿತವಾಗಿರುವುದಾದರು ನಮ್ಮ ಜನದ ಮೆಚ್ಚಿಕೆಯನ್ನು ಅಷ್ಟಾಗಿ ಪಡೆದುಕೊಂಡಿಲ್ಲ.ಹುಣುಸೆ ಹಣ್ಣಿನ ಹುಳಿಗಿಂತಲೂ ಚುರುಕಾದದ್ದು ಕೊಮರಿಕೆ ಹುಳಿ. ತಿಂದಾಗ ಬಾಯಿ ಗಂಟಲುಗಳಿಗೆ ನಸೆನಸೆಯನ್ನುಂಟುಮಾಡುವ ದುರ್ಗುಣ ಕೊಮರಿಕೆಯದು. ಜನಪ್ರಿಯವಾಗಿರುವುದಕ್ಕೆ ಇದೂ ಇಂದು ಕಾರಣವಾಗಿರಬಹುದು. ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಕೊಮರಿಕೆ ಹಣ್ಣನ್ನು ಒಣಗಿಸಿಟ್ಟುಕೊಂಡು ಹುಣುಸೆಗೆ ಬದಲಿಯಾಗಿ ಉಪಯೊಗಿಸುತ್ತಾರೆ.

ಪರಿವಿಡಿ [ಅಡಗಿಸು] ೧ ನಿಲುವು ೨ ಹೆಸರಿನ ಹರವು ೩ ಕೊಮರಿಕೆಯ ಜವುಳಿ ೩.೧ ಉಲ್ಲೇಖ

ನಿಲುವು ಬದಲಾಯಿಸಿ

ಮೊದಮೊದಲು ಮನೆಯ ತೋಟಗಳಲ್ಲಿ ಹುಟ್ಟುಹಾಕಿಕೊಂಡರು.ಈ ಶತಮಾನದ ಆದಿಯಲ್ಲಿ ಸರ್ಕಾರದ ಮುತುವರ್ಜಿಯಿಂದ ಉದಕಮಂದಲದ ಬರ್ಲಿಯಾರ್ ಮತ್ತು ಕಲ್ಲಾರ್ ತೋಟಗಳಲ್ಲಿ ಬೆಳಸಲಾಯಿತು.ವರ್ಷಪೂರ ಹಣ್ಣು ತಳೆಯುವುದಾದರು ವರ್ಷಕ್ಕೆರಡು ಸಲ ಜನವರಿ, ಫೇಬ್ರವರಿ ಮತ್ತು ಸೆಪ್ಟೆಂಬರ್ ಮಾಸಗಳಲ್ಲಿ ಅಧಿಕ ಬೆಳೆ ಸಿಗುತ್ತದೆ.ಅಂಥ ದೊಡ್ಡ ಮರವೇನಲ್ಲ ೩೦-೩೫ ಅಡಿ ಎತ್ತರ ಬೆಳೆಯುತ್ತದೆ. ಸಂಯುಕ್ತ ಪತ್ರಗಳ ದಟ್ಟವಾದ ಹೊದಿಕೆ. ಬಲಿಕೆ ಕಾಂಡ ಕೊಂಬೆಗಳಿಂದ ಹೂಗೊಂಚಲು ಕೊನರಿ ಹಣ್ಣು ಗುತ್ತಿಯಾಗುತ್ತದೆ. ಹೂ ಸಣ್ಣ ವಿಶಿಷ್ಟವಾದ ರೂಪವಿನ್ಯಾಸವೇನೂ ಇಲ್ಲ. ಬಣ್ಣ ಕೆಂಪೂ ಮಿಶ್ರವಾದ ಬಿಳಿ. ಹಣ್ಣು ತಳೆದಾಗ ರೆಂಬೆಗೆ ಅಂಟಿಕೊಂಡಂತೆ ಮಲಗಿರುವ ದೃಶ್ಯ ನೋಟಕ್ಕೆ ಚೆಂದ. ಹಣ್ಣಿನ ರಸಕ್ಕೆ ಸಕ್ಕರೆ ಬೆರಸಿ ಒಂದು ಬಗೆಯ ಷರಬತ್ತು ತಯಾರಿಸುತ್ತಾರೆ. ಮನೆ ವೈದ್ಯದಲ್ಲೂ ಈ ಅನುಪಾಕ ಕಾಣಬರುತ್ತದೆ. ಸೆಕೆಗಾಲದಲ್ಲಿ ತಂಪೀಯುವ ಪಾನೀಯವಂತೆ.

ಹೆಸರಿನ ಹರವು ಬದಲಾಯಿಸಿ

ಭಾರತೀಯ ಭಾಷೆಗಳಲ್ಲಿ ಈ ಹಣ್ಣಿಗೆ ಪ್ರಚಾರದಲ್ಲಿರುವ ಹೆಸರುಗಳೆಲ್ಲ ಒಂದೆ ಬುಡಕಟ್ಟಿಗೆ ಸೇರುವಂತೆ ಕಾಣುತ್ತದೆ.

  • ಕರ್ಮಲ, ಖಮ್‍ರಕ, ಕಮರಂಗ: ಹಿಂದಿ
  • ರಾಂಗ,ಕಮರತ : ಬಂಗಾಳಿ
  • ಕಮರತ್,ಕಮರಖ: ಗುಜರಾತಿ
  • ಖಂರಖ,ಕರಮರ : ಮುಂಬಯಿ ಪ್ರಾಂತ
  • ಕೊಮರಿಕೆ,ಕಮರಕ : ಕನ್ನಡ
  • ಕರಮರಂಗ: ಸಂಸ್ಕೃತ

ಕೊಮರಿಕೆಯ ಜವುಳಿ ಬದಲಾಯಿಸಿ

ಹುಳಿಗಳಲ್ಲಿ ಕೊಮರಿಕೆಗೆ ಸರಿಸಮನಾಗಿ ನಿಂತಿರುವ ಇನ್ನೊಂದು ಸ್ಪೀಷೀಸು ಅವರೋಹ ಬಿಲಿಂಬಿ(Averrhoa bilimbi) ಇದರ ಹೂಟ್ಟುರು ಬ್ರೆಜೀಲೇ ಕೊಮರಿಕೆಯೊಡನೆ ಅಥವಾ ಕೆಲವು ಕಾಲದ ತರವಾಯವೋ ಭಾರತಕ್ಕೆ ಬಂದಿರಬೇಕು.ಪೋರ್ಚುಗೀಸರೇ ಇದನ್ನೂ ಮೊದಮೊದಲು ಬೆಳಸಿರಬೇಕು. ಮರವೂ ಎಲೆಯೂ ಹೂವು ಹೆಚ್ಚು ಕಡಿಮೆ ಕೊಮರಿಕೆಯ ಜಾಡೇ. ಹಣ್ಣುಗಳು ಸಣ್ಣಸೌತೆಕಾಯಿಯಂತಿರುತ್ತದೆ. ಹುಳಿಯಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಹಾಗಿಲ್ಲ.ಕೊಮರಿಕೆಯನ್ನು ಬಳಸುವ ರೀತಿಗಳಿಗೆ ಇದೂ ಸರಿಸಮನಾಗಿ ಒದಗಿಬರುತ್ತದೆ.

ಉಲ್ಲೇಖ ಬದಲಾಯಿಸಿ

  • ↑ ನಮ್ಮ ಹೊಟ್ಟೆಯಲ್ಲಿ ದಕ್ಶಿಣ ಅಮೆರಿಕ,ಬಿ.ಜಿ.ಎಲ್.ಸ್ವಾಮಿ,ಪುಟ ಸಂಖ್ಯೆ೧೧೬
"https://kn.wikipedia.org/w/index.php?title=ಕೊಮರಿಕೆ&oldid=847613" ಇಂದ ಪಡೆಯಲ್ಪಟ್ಟಿದೆ