ಕೊಡವ ಜನಾಂಗವು ಹಾಕಿ ಆಟವನ್ನಾಡುವ ಇತಿಹಾಸ ಬಹಳ ಹಿಂದಿನದು. ಕರ್ನಾಟಕದಲ್ಲಿರುವ ಕೊಡಗು ಜಿಲ್ಲೆಯು ಭಾರತೀಯ ಹಾಕಿ ಆಟದ ತವರು ಎನ್ನುವದು ಜನಜನಿತವಾದದು. ಅಂತರ್ರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕೊಡವರ ಸಂಖ್ಯೆಯು ಐವತ್ತಕ್ಕೂ ಹೆಚ್ಚು. ಇವರಲ್ಲಿ ಎಮ್ ಪಿ ಗಣೇಶ್, ಎಮ್ ಎಮ್ ಸೋಮಯ್ಯ, ಚೆಪ್ಪುಡಿರ ಎಸ್ ಪೂಣಚ್ಚ, ಮೊದಲಾದವರೂ ಸೇರಿ ಏಳು ಮಂದಿ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದಾರೆ.[೧]

ಹಬ್ಬದ ಹುಟ್ಟು ಬದಲಾಯಿಸಿ

  • ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಹಾಗೂ ಪ್ರಥಮ ದರ್ಜೆಯ ಹಾಕಿ ಆಟದ ತೀರ್ಪುಗಾರರಾಗಿದ್ದ ೬೯ ವರ್ಷದ ಪಾಂಡಂಡ ಕುಟ್ಟಪ್ಪ ಎನ್ನುವವರ ಕನಸಿನ ಕೂಸಾಗಿ ಹಾಕಿ ಹಬ್ಬವು ೧೯೯೭ರಲ್ಲಿ ಜನ್ಮ ತಾಳಿತು. ಅವರು ಕೊಡವರ ಎಲ್ಲಾ ಮನೆತನಗಳೂ ಒಂದೆಡೆ ಒಟ್ಟಾಗಿ ಸೇರುವ ಕಲ್ಪನೆಯನ್ನು ಕಂಡರು. ಕೊಡಗಿನ ಯುವ ಹಾಕಿ ಆಟಗಾರರ ಶೋಚನೀಯ ಬೆಳೆವಣಿಗೆಯನ್ನು ಕಂಡಿದ್ದ ಅವರಿಗೆ ಈ ಪಂದ್ಯಾವಳಿಯ ನಿಮಿತ್ತದಲ್ಲಿ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಬಯಸಿದರು.[೨]
  • ಈ ಸ್ಪರ್ಧೆಯ ಪ್ರಪ್ರಥಮ ಉದ್ಘಾಟನಾ ಸಮಾರಂಭದ ಆರ್ಥಿಕ ವೆಚ್ಚವನ್ನು ಕುಟ್ಟಪ್ಪನವರೇ ಭರಿಸಿದರು. ವಿರಾಜಪೇಟೆಯ ಸಮೀಪದ ಕರಡ ಗ್ರಾಮದ ಮೈದಾನದಲ್ಲಿ ಪಾಡಂಡ ಕಪ್ ಎಂದು ಕರೆಯಲ್ಪಟ್ಟ ಈ ಕ್ರೀಡಾಸ್ಪರ್ಧೆಯಲ್ಲಿ ಬರೇ ೬೦ ಮನೆತನಗಳು ಮಾತ್ರ ಭಾಗವಹಿಸಿದ್ದವು.

ಕೊಡವರ ಇನ್ನೂರಕ್ಕಿಂತಲೂ ಹೆಚ್ಚು ಮನೆತನಗಳು ಒಟ್ಟಾಗಿ ಪ್ರತಿವರ್ಷ ಹಾಕಿ ಪಂದ್ಯಾಟಗಳನ್ನು ಹಬ್ಬದೋಪಾದಿಯಲ್ಲಿ ಆಚರಿಸುತ್ತಿರುವದು ಅವರಲ್ಲಿರುವ ಹಾಕಿಯ ಮೇಲಣ ಮಮತೆಗೆ ಸಾಕ್ಷಿಯಾಗಿದೆ.

  • ಪ್ರಪಂಚದ ಅತಿ ದೊಡ್ಡ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಹಾಕಿ ಹಬ್ಬವು ಗಿನೆಸ್ ದಾಖಲೆಗಳ ಪುಸ್ತಕದಲ್ಲಿ ಸೇರ್ಪಡೆಯಾಗಲು ನಿರ್ದೇಶಿಸಲ್ಪಟ್ಟಿದೆ. ಗಿನೆಸ್ ದಾಖಲೆಗಳ ಪುಸ್ತಕಕ್ಕೆ ಭಾರತೀಯ ಪರ್ಯಾಯವಾಗಿರುವ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈಗಾಗಲೇ ಉಲ್ಲೇಖಗೊಂಡಿದೆ.
  • ಒಂದು ತಂಡದ ಆಟಗಾರರೆಲ್ಲರೂ ಒಂದೇ ಮನೆತನಕ್ಕೆ ಸೇರಿದವರಾಗಿರಬೇಕು; ಪ್ರತಿಯೊಬ್ಬರೂ ಆಟದ ಸಂಪೂರ್ಣ ಪೋಷಾಕು ಪರಿಕರಗಳನ್ನು ಧರಿಸಿರಬೇಕು; ಸ್ತ್ರೀಯರೂ ಆಟದಲ್ಲಿ ಭಾಗವಹಿಸಬಹುದು; ವಿವಾಹಿತ ಮಹಿಳೆಯರು ತಾವು ತವರು ಮನೆತನವನ್ನು ಪ್ರತಿನಿಧಿಸಬೇಕೋ ಅಥವಾ ಗಂಡನ ಮನೆತನವನ್ನೋ ಎಂಬುದನ್ನು ಅವರೇ ನಿರ್ಧರಿಸಬೇಕು; ಎಂಬ ಕೆಲವು ಸ್ಥೂಲ ನಿಯಮಗಳನ್ನು ಮಾತ್ರ ಅಳವಡಿಸಲಾಗಿತ್ತು.

ಬೆಳವಣಿಗೆ ಬದಲಾಯಿಸಿ

  • ಉದ್ಘಾಟನಾ ಸ್ಪರ್ಧೆಯ ಬಳಿಕ ಭವಿಷ್ಯದ ಸ್ಪರ್ಧೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲ್ವಿಚಾರಣೆಯನ್ನು ನಡೆಸಿ, ಅಂತಿಮ ತೀರ್ಮಾನವನ್ನು ಕೈಗೊಳ್ಳುವಂತೆ ‘ದ ಕೊಡವ ಹಾಕಿ ಅಕ್ಯಾಡಮಿ’ ಎಂಬ ಹೆಸರಿನ ಪರಿಷತ್ತನ್ನು ಸ್ಥಾಪಿಸಲಾಯಿತು. ಮುಂದಿನ ಸ್ಪರ್ಧೆಗಳನ್ನು ವರ್ಷಕ್ಕೊಮ್ಮೆ ಒಂದೊಂದು ಮನೆತನದವರು ನಡೆಸುವಂತೆಯೂ, ಒಂದು ವರ್ಷದ ಪಂದ್ಯವನ್ನು ನಡೆಸುವ ಮನೆತನದ ಹೆಸರಿನಿಂದ ಗುರುತಿಸಲಾಗುವದೆಂದೂ ತೀರ್ಮಾನವಾಯಿತು.
  • ಆ ಮನೆತನವು ಹಬ್ಬದ ಆರ್ಥಿಕ ಕರ್ಚು ಮತ್ತು ವ್ಯವಸ್ಥೆಯ ಎಲ್ಲಾ ಬಾಬ್ತುಗಳನ್ನು ಏರ್ಪಡಿಸುವ ಜವಾಬ್ದಾರಿಯನ್ನು ಹೊತ್ತಿರಬೇಕೆಂದೂ ನಿರ್ಧಾರವಾಯಿತು. ಸ್ಪರ್ಧೆಯ ಪ್ರಾಯೋಜಕರು ಆರ್ಥಿಕ ಸಹಾಯವನ್ನು ನೀಡುವರಲ್ಲದೆ, ಲಾಟರಿ ಟಿಕೆಟುಗಳನ್ನು ಮಾರುವದರ ಮೂಲಕವೂ ವೆಚ್ಚವನ್ನು ಭರಿಸುವಂತೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಮನೆತನಗಳೂ ತಮ್ಮ ಇಷ್ಟ ಮತ್ತು ಶಕ್ತ್ಯಾನುಸಾರ ಧನಸಹಾಯವನ್ನು ಮಾಡಬೇಕೆಂದೂ ನಿರ್ಣಯವಾಯಿತು.
  • ವರ್ಷದಿಂದ ವರ್ಷಕ್ಕೆ ಈ ಹಾಕಿ ಹಬ್ಬದಲ್ಲಿ ಪಾಲ್ಗೊಳ್ಳುವ ಮನೆತನಗಳ ಸಂಖ್ಯೆ ಹೆಚ್ಚಿತು. ಜಿಲ್ಲೆಯ ಹೊರಗಿರುವ ಸದಸ್ಯರೂ ತಮ್ಮ ಕುಟುಂಬದ ಆಟದಲ್ಲಿ ಭಾಗವಹಿಸಲು ತಮ್ಮ ನೌಕರಿಗೆ ರಜೆಯಿತ್ತು ಬರುತ್ತಾರೆ. ಹಬ್ಬದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕೊಡವರ ವಿವಿಧ ನೃತ್ಯ ಮತ್ತು ಕೋಲಾಟಗಳಿಂದ ಕೂಡಿದ್ದು ಬಹಳ ಆಡಂಬರ ಮತ್ತು ವೈಭವದಿಂದ ಜರುಗುತ್ತವೆ.
  • ಮುಖ್ಯ ಅತಿಥಿಗಳು ಬೆಳ್ಳಿಯ ಹಾಕಿ ಸ್ಟಿಕ್ಕಿನಿಂದ ಪಾಸ್-ಬ್ಯಾಕ್ ಮಾಡುವದರ ಮೂಲಕ ಪ್ರಾರಭಗೊಳ್ಳುತ್ತದೆ. ಅಂಗಡಿ, ಮಳಿಗೆ ಇತ್ಯಾದಿಗಳಿಂದ ಕೂಡಿದ ಕ್ರೀಡಾಕ್ಷೇತ್ರವು ಎಲ್ಲಾ ವಿಧಗಳಲ್ಲೂ ಹಬ್ಬದ ರಂಗು, ಕಳೆ ಮತ್ತು ಸಡಗರಗಳಿಂದ ಕೂಡಿರುತ್ತದೆ.

ಪಂದ್ಯಾವಳಿ ಬದಲಾಯಿಸಿ