ಕೊಂತಿ ಪೂಜೆ
ಕೊಂತಿಪೂಜೆಯು ಕರ್ನಾಟಕದ ವಿಶಿಷ್ಟ ಜಾನಪದ ಸಂಪ್ರದಾಯಗಳಲ್ಲಿ ಒಂದು.
ಕೊಂತಿ ಮತ್ತು ಪೂಜೆ
ಬದಲಾಯಿಸಿಕೊಂತಿಪೂಜೆಯ ನಾಯಿಕೆ ಮಹಾಭಾರತದ ಕುಂತಿದೇವಿ. ಕುಂತಿ ಎಂಬ ಪದ ಆಡುಮಾತಿನಲ್ಲಿ ಕೊಂತಿ ಆಗಿದೆ. ಕೊಂತಿ ಆದರ್ಶ ಸತಿ, ಆದರ್ಶ ಮಾತೆ, ಮಿಗಿಲಾಗಿ ಸತ್ಸಂತಾನ ಪಡೆದ ಆದರ್ಶ ನಾರೀಮಣಿ. ತಮಗೂ ಅವಳಂತೆಯೇ ಸತ್ಸಂತಾನ, ತನ್ಮೂಲಕ ಸತ್ಕೀರ್ತಿ ಲಭ್ಯವಾಗಲೆಂಬ ಸದಭಿಲಾಷೆಯಿಂದ ಹಳ್ಳಿಯ ಜನ ಕೊಂತಿಯನ್ನು ತಮ್ಮ ಇಷ್ಟದೇವತೆಯೆಂದು ಪರಿಗಣಿಸಿ ಪೂಜಿಸುತ್ತ ಬಂದಿದ್ದಾರೆ. ಪ್ರತಿವರ್ಷದ ಮೊದಲ ಕಾರ್ತಿಕದ ಹುಣ್ಣಿಮೆ ರಾತ್ರಿಗಳಲ್ಲಿ ಹದಿನಾರು ದಿವಸಗಳವರೆಗೆ ಅವ್ಯಾಹತವಾಗಿ ಈ ಪೂಜೆ ನಡೆಯುತ್ತದೆ.
ಮೈನೆರೆದ ಕನ್ಯೆಯನ್ನು ಗುಡ್ಲು ಕೂರಿಸುವ ಶಾಸ್ತ್ರ, ಮದುವೆಯಾದ ಹೆಣ್ಣಿನ ಒಸಗೆ ಶಾಸ್ತ್ರ-ಇವುಗಳಿಗೂ ಕೊಂತಿಪೂಜೆಗೂ ಸಾಂಕೇತಿಕ ಸಂಬಂಧವಿರುವಂತಿದೆ. ಕೊಂತಿಪೂಜೆಯ ಮೂಲೋದ್ದೇಶ ಸತ್ ಸಂತಾನಾಭಿಲಾಷೆ ಎಂಬ ಮಾತಿಗೆ ಇದೂ ಪುಷ್ಟಿಕೊಡುತ್ತದೆ.
ಪೂಜೆಯ ಪದ್ಧತಿ
ಬದಲಾಯಿಸಿರಾತ್ರಿ ಮನೆಗೆಲಸಗಳಾದ ಮೇಲೆ ಹೆಂಗಸರು ಒಂದೆಡೆ ಸೇರಿ ಗೋವಿನ ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸಿದ ಪಡಸಾಲೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ, ನೆಲದಿಂದ ಒಂದು ಮೊಳ ಮೇಲಕ್ಕಾದಂತೆ, ಹಸಿ ಎರೆಮಣ್ಣಿನಿಂದ ಅಥವಾ ಗೋವಿನ ಸೆಗಣಿಯಿಂದ '1' ಹೀಗೆ ಕುದುರೆಗೊರಸಿನ ಆಕೃತಿಯ ಒಂದು ಪ್ರಾಕಾರವನ್ನು ಬಿಡಿಸುವರು. ಇದೇ ಋತುಮತಿಯಾದ ಕೊಂತಿಯನ್ನು ಕೂರಿಸುವ ಗುಡಿಸಲು. ಪ್ರಾಕಾರದ ಒಳಗಡೆ ಎರೆಮಣ್ಣಿನಿಂದ ತಿದ್ದಿ ಮಾಡಿದ ಸುಂದರವಾದ ಸ್ತ್ರೀವಿಗ್ರಹವನ್ನು ಇಡುವರು. ಇದೇ ಕೊಂತಿ. ಪೂಜಾರ್ಹ ವಿಗ್ರಹವನ್ನು ಹುಚ್ಚೆಳ್ಳು ಹೂ ಮುಂತಾದ ಹೂಪತ್ರೆಗಳಿಂದ ಅಲಂಕರಿಸುವರು. ಪೂಜಾ ಸಾಮಗ್ರಿಗಳನ್ನೂ ತಿಂಡಿ ಪದಾರ್ಥಗಳನ್ನೂ ಮುಂದೆ ಇಟ್ಟು, ಎಲ್ಲರೂ ಕುಳಿತು, ಭಕ್ತಿಯಿಂದ ಕೊಂತಿಯನ್ನು ಪೂಜಿಸುವರು.
ಪೂಜೆಯ ಹಾಡುಗಳು
ಬದಲಾಯಿಸಿಪೂಜೆಯ ಸಮಯದಲ್ಲಿ ತಪ್ಪದೆ ಕೊಂತಿಪದಗಳನ್ನು ಹಾಡುವರು. ಇವು ಜಾನಪದ ಮಹಿಳೆಯರ ಸಾಂಘಿಕ ಸೃಷ್ಟಿಯಾಗಿದ್ದು ತುಳುನಾಡಿನ ಪಾಡ್ದನಗಳಂತೆ, ದಕ್ಷಿಣ ಕನ್ನಡದ ದಕ್ಕೆಬಲಿಯ ಹಾಡುಗಳಂತೆ, ಬಯಲುನಾಡಿನ ತಿಂಗಳಮಾವನ ಹಾಡುಗಳಂತೆ ವಿಶಿಷ್ಟ ಗೀತೆಗಳಾಗಿವೆ. ಬೆಡಗಿನ ಭಾವಗೀತೆಗಳ ಬೆರಗಿನ ಧಾಟಿಗಳಿಗೆ ಇವು ಪ್ರಸಿದ್ಧವಾಗಿವೆ.
ಒನ್ಕೊಂತಿ ಪೂಜೆ, ಒನ್ನೆಲ್ವ ತಾರ್ಸಿ
ಇಂಬಿಗೆ ಹೋದಣ್ಣ, ಏನೇನು ತಂದಾನು
ಇಂಬಾಳೆ ತಂದಾನು, ಮುಂಬಾಳೆ ತಂದಾನು
ಇಷ್ಟೆಲ್ಲನೂ ತಂದೋನೂ„„
ನಮ್ಕೊಂತಿಗೆ ಹೂವೇಕೆ ತರಲಿಲ್ಲವೋ„„
ಇದು ಕುಂತಿಪೂಜೆಯ ನಾಂದಿಹಾಡು. ಕೊಂತಿಪದಗಳಲ್ಲಿ ಕೊಂತಿಯನ್ನು ಪ್ರಧಾನವಾಗಿಟ್ಟುಕೊಂಡು ಪಾಂಡವರಿಗೆ ಸಂಬಂಧಿಸಿದಂತೆ ಹುಟ್ಟಿರುವ ಗೀತೆಗಳೇ ಹೆಚ್ಚಾಗಿವೆ. `ಮಲ್ಲಿಗೆ ಹೂವ ತಂದ ಕೊಂತಮ್ಮ, ಚಿಲಕ ಬಟ್ಟಲ ನೀಡೋ; `ಶಿವರಾಯ ದಂಡೆತ್ತಿ ಕೇಳಿಬಂದಾ, ಸಾಲುಮಲ್ಲಿಗೆ ಕೊಂತಮ್ಮನ ಮಡಿಗೆರಡು ಮುತ್ತಿನ ಕುಚ್ಚು; `ತಣ್ಣೀರು ತನುವಾಯಿತೋ, ಕೊಂತಮ್ಮ ತಾವರೆ ಕೊಳವಾಯಿತೋ; `ಓಕುಳೋಕುಳಿಯೋ ಬೆಟ್ಟದ ಮೇಲಿರುವ ನೆಲ್ಲಿಮರಕ್ಕೆ ಚೆಲ್ಲಿದರೋಕುಳಿಯೋ; `ಅಚ್ಚೆಚ್ಚಳ ಬೆಳುದಿಂಗಳೋ ಕೊಂತಮ್ಮನಿಗೆ ನಿತ್ಯವೈಭೋಗವೋ; `ದುಂಡಿ ನಿನಗಂಡ ದಂಡೆತ್ತಿ ಹೋಗುತಾನೆ, ಹೋಗೋಗೆ ಕೊಂತೀ ಗಂಡಾನ ಮನೆಗೆ-ಈ ಮೊದಲಾದ ಪಲ್ಲವಿಗಳನ್ನೊಳಗೊಂಡ ಕೊಂತಿಪದಗಳು ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ. ಕೊಂತಿಪೂಜೆಯ ಮುಕ್ತಾಯದ ಗೀತೆ ಹೀಗಿದೆ:
ಬಾಳೆಯ ತೋಟದಲಿ ಬಾಲನಾಡುತ ಬಂದ
ಬಾಲೆಸ್ತ್ರೀ ಶಿವನ ಪಾದಕ್ಕೆ ಎತ್ತಿದಳಾರತಿಯ
ಶ್ರೀ ದ್ರೌಪದೀ ದೇವಿ ಬೆಳಗದಳಾರತಿಯ.
ಮನೆಯಲ್ಲಿ ಪ್ರಾರಂಭವಾಗುವ ಕೊಂತಿಪೂಜೆ ಬಾಳಿಗೆ
ಸಂಕೇತವೋ ಎನ್ನುವಂತೆ ಬಯಲಿನಲ್ಲಿ ಮುಕ್ತಾಯವಾಗುತ್ತದೆ. ಇದು ಹಳ್ಳಿಗರಷ್ಟೇ ಸರಳವಾದ ಒಂದು ಕಟ್ಟಳೆ; ಅರ್ಥವತ್ತಾದುದು.
ಕೊಂತಿಪೂಜೆ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದರೂ ಕರ್ನಾಟಕದ ಬಹುಭಾಗಗಳಲ್ಲಿ ಆಚರಣೆಯಲ್ಲಿದೆ. (ಡಿ. ಎಲ್.)