ಕೈಬಳಕೆ

ಒಂದು ಕೈಯ ಬಳಕೆಗಾಗಿ ಉತ್ತಮ ಪ್ರದರ್ಶನ ಅಥವಾ ವೈಯಕ್ತಿಕ ಆದ್ಯತೆ

ಕೈಬಳಕೆ ದೇಹದ ಸ್ವಯಂಚಾಲಿತ ಮೋಟಾರ್ ಕ್ರಿಯೆಗಳಲ್ಲಿ ಯಾವುದೇ ಒಂದು ಪಾಶ್ರ್ವದ ಕೈಯ ಬಳಕೆಗೆ ಇರುವ ಒಲವು (ಹ್ಯಾಂಡೆಡ್‍ನೆಸ್). ಕೈಗಳ ಉಪಯೋಗದಲ್ಲಿ ಜನರಿಗೆ ಸ್ಪಷ್ಟ ಒಲವು (ಪ್ರಿಫರೆನ್ಸ್) ಇರುವುದು ಎಲ್ಲರಿಗೂ ತಿಳಿದದ್ದೇ. ಈ ಕಾರಣದಿಂದ ಜನರನ್ನು ಎಡಗೈ, ಬಲಗೈ ಹಾಗೂ ಇಕ್ಕೈ ಬಳಕೆಯವರು ಎಂಬ ಮೂರು ವರ್ಗಗಳಾಗಿ ವರ್ಗೀಕರಿಸಬಹುದು. ಯಾವ ನಿರ್ದಿಷ್ಟ ಒಲವಿಲ್ಲದವರೇ, ಎಂದರೇ ಎರಡು ಕೈಗಳನ್ನೂ ಸಮಾನ ಲಾಘವದಿಂದ ಬಳಸಬಲ್ಲವರೇ, ಇಕ್ಕೈ ಬಳಕೆಯವರು. ಎಡಗೈ ಬಳಕೆ ಸ್ತ್ರೀಯರಿಗಿಂತ ಪುರುಷರಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿರುತ್ತದೆ.[]

ವೈಜ್ಞಾನಿಕ ಕಾರಣ

ಬದಲಾಯಿಸಿ

ಕೈಬಳಕೆಯನ್ನು ಕುರಿತು ಮೂರು ವೈಜ್ಞಾನಿಕ ಊಹೆಗಳನ್ನು ಮಂಡಿಸಲಾಗಿದೆ. ಅದು ಅನುವಂಶೀಯವಾಗಿ ಬರುತ್ತದೆ ಎಂದು ಒಂದು ಊಹೆ ಹೇಳಿದರೆ ಅಭ್ಯಾಸ ಬಲವೇ ಇಲ್ಲಿ ಪ್ರಧಾನವಾದದ್ದು ಎಂದು ಎರಡನೆಯ ಊಹೆ ತಿಳಿಸುತ್ತದೆ. ಮೂರನೆಯ ಊಹೆಯಾದರೋ ಶಿಶು ಗರ್ಭಸ್ಥವಾಗಿರುವಾಗ ಗರ್ಭದೊಳಗಿನ ಹಾಗೂ ಅದರ ಹೊರಗಿನ ಸನ್ನಿವೇಶಗಳನ್ನು ಅವಲಂಬಿಸಿ ಅದು ಮುಂದೆ ಕೈಬಳಕೆಯನ್ನು ಪಡೆಯುತ್ತದೆ ಎಂದಿದೆ. ವಾಸ್ತವಿಕ ಕಾರಣ ಪ್ರಾಯಶಃ ಈ ಮೂರು ಊಹೆಗಳ ಸಂಯುಕ್ತ ಫಲವಿರಬಹುದು. ಮಗು ಜನಿಸಿದೊಡನೆಯೇ ಸಾಮಾನ್ಯವಾಗಿ ಒಂದು ಕೈಯ್ಯನ್ನು ಆಡಿಸುತ್ತದೆ. ಮುಂದೆ ಅದು ಬೆಳೆದಂತೆ ವಸ್ತುಗಳನ್ನು ಹಿಡಿಯಲು ಮೇಲಿಂದ ಮೇಲೆ ಒಂದು ಕೈಯ ಬಳಕೆಗೆ ಸ್ಪಷ್ಟ ಒಲವನ್ನು ವ್ಯಕ್ತಪಡಿಸುತ್ತದೆ. ಕೈಗಳ ಚಲನವಲನಗಳನ್ನು ನಿಯಂತ್ರಿಸುವ ಮಿದುಳ ಪಾರ್ಶ್ವದ ಚಟುವಟಿಕೆಯ ಪ್ರಕಟಿತರೂಪ ಇದಾಗಿರಬಹುದೆಂದು ಊಹಿಸಿದ್ದಾರೆ. ಆದ್ದರಿಂದ ಒಂದು ಮಗು ಅದರ ಕೈಗಳ ಉಪಯೋಗವನ್ನು ಸಮರ್ಥವಾಗಿ ಪಡೆಯುತ್ತಿರುವಾಗ, ಅದರ ಒಲವು ಹೇಗೆಯೇ ಇದ್ದರೂ ಸಹಜ ವಿಕಾಸಕ್ಕೆ ಅಡ್ಡಿ ಬರಬಾರದು-ಎಂದರೆ ಎಡಗೈ ಬಳಕೆಯ ಮಗುವನ್ನು ಬಲತ್ಕಾರದಿಂದ ಬಲಗೈ ಬಳಕೆಗೆ ಪ್ರವರ್ತಿಸುವಂತೆ ಮಾಡಬಾರದು; ಇದರಿಂದ ಅದರ ಮಿದುಳಿನ ನಿಯಂತ್ರಣದಲ್ಲಿ ಏರುಪೇರು ಉಂಟಾಗಿ ಮಾನಸಿಕ ಉದ್ರೇಕ ತಲೆದೋರಬಹುದು, ಮಾತಿನಲ್ಲಿ ಉಗ್ಗು ಉಂಟಾಗಬಹುದು ಎಂದು ಮನೋವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಶರೀರದಲ್ಲಿರುವ ಪಾರ್ಶ್ವಸ್ಥತೆ (ಲ್ಯಾಟರೇಲಿಟಿ)

ಬದಲಾಯಿಸಿ

ವಾಕ್‍ಶಕ್ತಿಯ ಕೇಂದ್ರ ಮಿದುಳಿನ ಪ್ರಧಾನವಾದ ಗೋಳಾರ್ಧದಲ್ಲಿಯೇ ಇರುತ್ತದೆ ಎನ್ನುವುದಕ್ಕೆ ಕಾರಣಗಳಿವೆ. ಈ ಶಕ್ತಿ ಕೇಂದ್ರ ಯಾವಾಗಲೂ ಪ್ರಧಾನವಾದ ಕೈಬಳಕೆಯ ಪಾರ್ಶಸ್ಥ ಕಡೆಯಲ್ಲಿ (ಲ್ಯಾಟರಲ್ ಸೈಡ್) ಇರುತ್ತದೆ. ಮಿದುಳಿನ ಪ್ರಧಾನವಲ್ಲದ ಗೋಳಾರ್ಧದಿಂದ ಬರುವ ಆಲ್ಫ ತರಂಗಗಳು ಪ್ರಧಾನವಾದ ಗೋಳಾರ್ಧದಿಂದ ಬರುವ ಆಲ್ಫ ತರಂಗಗಳಿಗಿಂತ ಎದ್ದುಕಾಣುವ ರೀತಿಯಲ್ಲಿರುತ್ತವೆ. ಇವುಗಳಲ್ಲಿ ಯಾವೊಂದು ಕಾರಣವೊ ನಿರ್ಣಾಯಕವಾಗಿ ವ್ಯಕ್ತಿಯ ಕೈಬಳಕೆ ಅನುವಂಶೀಯವಾಗಿ ಹೇಗೆ ಬರುತ್ತದೆ ಎಂಬುದನ್ನು ತಿಳಿಸುವುದಿಲ್ಲ. ಪ್ರಧಾನ ಗೋಳಾರ್ಧದ ಸಿದ್ಧಾಂತದ ಪ್ರಕಾರ ಮಿದುಳಿನ ಪ್ರಧಾನ ಗೋಳಾರ್ಧದ ಅಧೀನಕ್ಕೊಳಪಟ್ಟಿರುವ ಶರೀರದ ಭಾಗಗಳು ಏಕರೀತಿ ಕಾರ್ಯಪಟುಗಳಾಗಿರುತ್ತವೆ ಎನ್ನುವ ಅಭಿಪ್ರಾಯವನ್ನು ಎತ್ತಿಹಿಡಿಯುವುದಕ್ಕಾಗುವುದಿಲ್ಲ. ಯಾವಾಗಲೂ ಪ್ರಧಾನವಾದ ಕೈ ಪ್ರಧಾನವಾದ ಕಾಲಿನ ಕಡೆಯೇ ಇರುವುದಿಲ್ಲ. ಸುಮಾರು ಮುಕ್ಕಾಲು ಭಾಗ ಬಲಗೈ ಬಳಕೆಯವರೂ ಮೂರನೆಯ ಒಂದು ಭಾಗ ಎಡಗೈ ಬಳಕೆಯವರೂ ಗುರಿಹಿಡಿ ಯುವುದಕ್ಕೆ ತಮ್ಮ ಬಲಗಣ್ಣನ್ನೇ ಉಪಯೋಗಿಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. Papadatou-Pastou, M; Martin, M; Munafò, MR; Jones, GV (September 2008). "Sex differences in left-handedness: a meta-analysis of 144 studies". Psychological Bulletin. 134 (5): 677–99. doi:10.1037/a0012814. PMID 18729568.


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈಬಳಕೆ&oldid=1060213" ಇಂದ ಪಡೆಯಲ್ಪಟ್ಟಿದೆ