ಕೈಗಾರಿಕಾ ಶುಷ್ಕೀಕರಣ
ನೀರು ಅಥವಾ ಇತರ ಲೀನಕಾರಿಗಳನ್ನೊಳಗೊಂಡ ಆದ್ರ್ರ ಘನವಸ್ತುಗಳಲ್ಲಿನ ಆದ್ರ್ರತೆಯನ್ನು ಕೈಗಾರಿಕಾ ಗಾತ್ರದಲ್ಲಿ ನಿವಾರಿಸುವ ಕ್ರಿಯೆ (ಇಂಡಸ್ಟ್ರಿಯಲ್ ಡ್ರೈಯಿಂಗ್). ಅನಿಲಗಳಲ್ಲಿರುವ ಜಲಾಂಶ ಅಥವಾ ಇತರ ಬಗೆಯ ಆದ್ರ್ರತೆಗಳ ನಿವಾರಣೆಯನ್ನು ಸಹ ಈ ಶೀರ್ಷಿಕೆಯಲ್ಲಿ ಸೇರಿಸಬಹುದು. ಆದರೆ ದ್ರವಗಳಲ್ಲಿನ ಜಲಾಂಶ ನಿವಾರಣೆ ಕೈಗಾರಿಕಾ ಶುಷ್ಕೀಕರಣದ ಅಧ್ಯಾಯಕ್ಕೆ ಸೇರದು. ಆದ್ರ್ರತೆಯನ್ನು ನಿವಾರಿಸಿದಾಗ ವಸ್ತುವಿನಲ್ಲಿ ರಾಸಾಯನಿಕ ಬದಲಾವಣೆಗಳುಂಟಾದರೆ ಇಂಥ ಕ್ರಿಯೆ ಶುಷ್ಕೀಕರಣ ಕ್ರಿಯೆಯಲ್ಲ; ಅದರ ಹೆಸರು ನಿರ್ಜಲೀಕರಣ (ಡೀ ಹೈಡ್ರೇಷನ್).[೧]
ಘನವಸ್ತುಗಳ ಶುಷ್ಕೀಕರಣ
ಬದಲಾಯಿಸಿಶುಷ್ಕೀಕರಣಕ್ಕೆ ಒಳಗಾಗುವ ವಸ್ತುಗಳು ಪುಡಿ, ಹೆಂಟೆ, ಕದಡುಮಿಶ್ರಣ, ತೆಳುಮಿಶ್ರಣ ಅಥವಾ ಹಿರಿಯಗಾತ್ರದ ಘನರೂಪಗಳು, ಹಾಳೆಗಳು ಎಳೆಗಳು ಮೊದಲಾದ ಅನೇಕ ಬಗೆಯ ಭೌತ ರೂಪಗಳನ್ನು ಪಡೆದಿರಬಹುದು. ಶುಷ್ಕೀಕರಣ ವಿಧಾನ ಮತ್ತು ಉಪಕರಣಗಳ ರಚನೆಗಳು ವಸ್ತುಗಳ ಭೌತರೂಪ, ಅವುಗಳಲ್ಲಿನ ಆದ್ರ್ರತೆಯ ಮಟ್ಟ, ನಿರೀಕ್ಷಿಸುವ ಶುಷ್ಕೀಕರಣದ ಮಟ್ಟ, ಶುಷ್ಕೀಕರಣಕ್ಕೆ ಒಳಗಾದಾಗ ವಸ್ತುವಿನಲ್ಲಿ ಆಗಬಹುದಾದ ಬದಲಾವಣೆಗಳು ಮೊದಲಾದ ಹಲವು ಅಂಶಗಳನ್ನು ಅವಲಂಬಿಸಿರುತ್ತವೆ.ಘನವಸ್ತುಗಳ ಕೈಗಾರಿಕಾ ಶುಷ್ಕೀಕರಣದಲ್ಲಿ ಸಾಮಾನ್ಯವಾಗಿ ಉಷ್ಣವನ್ನು ಬಳಸಲಾಗುತ್ತದೆ. ಉಷ್ಣ ವರ್ಗಾವಣೆ ಶುಷ್ಕೀಕರಣ ಉಪಕರಣದ ರಚನೆಗೆ ಅನುಗುಣವಾಗಿ ಬಿಸಿವಸ್ತುಗಳ ಸಂಪರ್ಕದಿಂದ ಆಗುವ ವಹನದಿಂದಾಗಲಿ (ಕಂಡಕ್ಷನ್) ಕಣಗಳ ನಯನದ (ಕನ್ಸೆಕ್ಷನ್) ಮೂಲಕವಾಗಿ ಆಗಲಿ ಪ್ರಸರಣದಿಂದಾಗಲಿ (ರೇಡಿಯೇಷನ್) ಆಗಿ ಶುಷ್ಕೀಕರಣಕ್ಕೊಳಗಾಗಿರುವ ವಸ್ತು ಉಷ್ಣವನ್ನು ಪಡೆಯುತ್ತದೆ. ಹಲವು ವಿಶಿಷ್ಟ ಸಂದರ್ಭಗಳಲ್ಲಿ ಉಷ್ಣಪೂರೈಕೆಯಿಲ್ಲದೆ ಶುಷ್ಕೀಕರಣ ಅಗತ್ಯ ಮತ್ತು ಸಾಧ್ಯ.[೨]
ಶುಷ್ಕೀಕರಣದ ಪೂರ್ಣ ಜ್ಞಾನ
ಬದಲಾಯಿಸಿಶುಷ್ಕೀಕರಣದ ಪೂರ್ಣ ಜ್ಞಾನವನ್ನು ಪಡೆಯಲು ಘನವಸ್ತುಗಳಲ್ಲಿ ದ್ರವ ವಸ್ತುವಿನ ಕಣಗಳ ಅಥವಾ ಅಣುಗಳ ಸಂಚಲನೆ ಹೇಗೆ ನಡೆಯುವುದೆಂಬುದನ್ನು ತಿಳಿಯುವುದು ಅಗತ್ಯ. ಆದರೆ ಈ ಬಗೆಯ ದ್ರವಸಂಚಲನೆ ಘನವಸ್ತುವಿನ ಒಳಗಿನ ವಿವಿಧ ಎಡೆಗಳಲ್ಲಿರುವ ಒತ್ತಡದ ವ್ಯತ್ಯಾಸಗಳು, ಕೇಶಿಕಾತ್ವ (ಕ್ಯಾಪಿಲ್ಲಾರಿಟಿ), ಉಷ್ಣ ಪ್ರಯೋಗದಿಂದಾಗುವ ಸಂಕೋಚನ ಮತ್ತು ಇತರ ಬದಲಾವಣೆಗಳು, ಸೂಕ್ಷ್ಮಾಭಿಸರಣ (ಆಸ್ಮಾಸಿಸ್), ವಿಸರಣ (ಡಿಫ್ಯೂಷóನ್) ಮೊದಲಾದ ಹಲವಾರು ಅಂಶಗಳನ್ನು ಅವಲಂಬಿಸಿದ ಸಂಕೀರ್ಣಕ್ರಿಯೆಯಾದುದರಿಂದ ಶುಷ್ಕೀಕರಣದ ಪೂರ್ಣಜ್ಞಾನ ನಮಗಿನ್ನೂ ಲಭ್ಯವಾಗಿಲ್ಲ. ಆದರೂ ಆದ್ರ್ರವಸ್ತುವಿನ ಮೇಲ್ಭಾಗದಲ್ಲಿ ಚಲಿಸುವ ಗಾಳಿಯ ವೇಗ, ವಾತಾವರಣದಲ್ಲಿನ ಆದ್ರ್ರತೆ (ಹ್ಯುಮಿಡಿಟಿ), ಉಷ್ಣತೆ, ಶುಷ್ಕೀಕರಣಕ್ಕೊಳಗಾಗಿರುವ ವಸ್ತುವಿನ ಭೌತರೂಪ ಮೊದಲಾದವು ಶುಷ್ಕೀಕರಣದ ಮೇಲೆ ಬೀರುವ ಪ್ರಭಾವಗಳನ್ನು ಸಾಕಷ್ಟು ಅಧ್ಯಯನ ಮಾಡಿ ಉತ್ತಮ ಮತ್ತು ಶೀಘ್ರ ಶುಷ್ಕೀಕರಣವನ್ನು ಸಾಧಿಸಲು ಆವಶ್ಯಕವಾದ ಅಂಶಗಳನ್ನು ಸೂಕ್ತರೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಶುಷ್ಕೀಕರಣಕ್ಕೆ ಉಪಯೋಗಿಸುವ ಉಪಕರಣಗಳನ್ನು ಸ್ಥೂಲವಾಗಿ ಮೂರು ಬಗೆಗಳಾಗಿ ವಿಂಗಡಿಸಬಹುದು
ಬದಲಾಯಿಸಿ1 ಸರಳ ಉಪಕರಣ (ಡೈರೆಕ್ಟ್ ಡ್ರೈಯರ್) ಅಥವಾ ನಯನ ಬಗೆಯ (ಕನ್ವೆಕ್ಷನ್ ಟೈಪ್) ಉಪಕರಣಗಳು. 2 ಪರೋಕ್ಷ ಅಥವಾ ಸಂಪರ್ಕವಹನ ಬಗೆಯ (ಕಂಡಕ್ಷನ್ ಟೈಪ್) ಉಪಕರಣಗಳು. 3 ಅತಿನೇರಳೆ (ಇನ್ಫ್ರಾರೆಡ್) ಅಥವಾ ಕಿರಣಪ್ರಸರಣಬಗೆಯ (ರೇಡಿಯೆಂಟ್) ಉಪಕರಣಗಳು
ಸರಳ ಶುಷ್ಕೀಕರಣ ಉಪಕರಣಗಳು
ಬದಲಾಯಿಸಿಈ ಬಗೆಯ ಉಪಕರಣಗಳಲ್ಲಿ ಆದ್ರ್ರ ಘನ ವಸ್ತುವಿಗೆ ಪ್ರವಹಿಸುವ ಬಿಸಿ ಅನಿಲಗಳೊಡನೆ ನೇರ ಸಂಪರ್ಕವಿದೆ. ಅಲ್ಲಿ ಆದ್ರ್ರತೆಗೆ ಕಾರಣವಾದ ದ್ರವ ಅನಿಲರೂಪಕ್ಕೆ ಮಾರ್ಪಟ್ಟು ಪ್ರವಹಿಸುತ್ತಿರುವ ಬಿಸಿ ಅನಿಲಗಳೊಡನೆ ನಿಷ್ಕ್ರಮಿಸುತ್ತದೆ. ಆಗ ಆದ್ರ್ರತೆ ನಿವಾರಣೆಯಾಗುತ್ತದೆ. ಬಿಸಿಗಾಳಿ, ಸಾರಜನಕ, ಅತಿಬಿಸಿಯಾದ ನೀರಿನ ಆವಿ ದಹನಾನಿಲಗಳನ್ನು ಪ್ರವಾಹ ಅನಿಲಗಳಾಗಿ ಉಪಯೋಗಿಸಲಾಗುತ್ತದೆ. ಈ ಅನಿಲಗಳ ಉಷ್ಣತೆ ಸಂದರ್ಭಕ್ಕೆ ಅನುಗುಣವಾಗಿ ವಾತಾವರಣದ ಉಷ್ಣತೆಯಿಂದ ಮೊದಲುಗೊಂಡು 7500 ಸೆಂ. ವರೆಗೂ ಇರಬಹುದು. ಈ ಬಗೆಯ ಉಪಕರಣಗಳಲ್ಲಿ ಎರಡು ಮುಖ್ಯ ವಿಭಾಗಗಳಿವೆ. ಮೊದಲನೆಯ ಬಗೆಯಾದ ಅವಿಚ್ಛಿನ್ನರೀತಿಯ ಉಪಕರಣಗಳಲ್ಲಿ ಘನವಸ್ತು ಚಲಿಸುವ ಲೋಹದ ತಟ್ಟೆ, ಹಾಳೆ ಅಥವಾ ಜಾಲರಿಗಳ ಮೇಲೆ ಇರುವಾಗ ಬಿಸಿ ಅನಿಲಗಳು ವಿರುದ್ಧ ದಿಕ್ಕಿನಲ್ಲಿ ಪ್ರವಹಿಸುತ್ತಿದ್ದು ಅವಿಚ್ಛಿನ್ನ ಶುಷ್ಕೀಕರಣ ಏಕವೇಗದಲ್ಲಿ ಏಕರೀತಿಯಾಗಿ ನಡೆಯುತ್ತದೆ. ಎರಡನೆಯದಾದ ಪಂಗಡ ರೀತಿಯ (ಬ್ಯಾಚ್ ಟೈಪ್) ಉಪಕರಣಗಳಲ್ಲಿ ಆದ್ರ್ರ ವಸ್ತುವನ್ನುಳ್ಳ ತಟ್ಟೆಗಳು ಚಲಿಸದೆ ಕೇವಲ ಬಿಸಿ ಅನಿಲಗಳ ಪ್ರವಾಹ ಮಾತ್ರವಿದ್ದು ಒಂದು ಪಂಗಡದ ಘನವಸ್ತು ಶುಷ್ಕವಾದ ಅನಂತರ ಅದನ್ನು ಹೊರತೆಗೆದು ಮತ್ತೊಂದು ಪಂಗಡದ ಆದ್ರ್ರವಸ್ತುವನ್ನು ತಟ್ಟೆಗಳಿಗೆ ತುಂಬಲಾಗುತ್ತದೆ.
ಪರೋಕ್ಷ ಶುಷ್ಕೀಕರಣ ಉಪಕರಣಗಳು
ಬದಲಾಯಿಸಿಈ ಬಗೆಯ ಉಪಕರಣಗಳಲ್ಲಿ ಅನಿಲ ಪ್ರವಾಹದ ಬದಲು ಉಷ್ಣದ ಪೂರೈಕೆ ಬೇರೊಂದು ರೀತಿಯಲ್ಲಿ ಆಗುತ್ತದೆ. ಆದ್ರ್ರ ವಸ್ತುವನ್ನು ಬಿಸಿಯಾದ ಲೋಹದ ಹಾಳೆಗಳ ಮೇಲೆ ಹರಡಿದಾಗ ಆದ್ರ್ರತೆಗೆ ಕಾರಣವಾದ ದ್ರವವಸ್ತು ಅನಿಲವಾಗಿ ಮಾರ್ಪಟ್ಟು ಘನವಸ್ತುವಿನಿಂದ ಬೇರಾಗುತ್ತದೆ. ಬಿಸಿ ಹಾಳೆಗೂ ಆದ್ರ್ರ ವಸ್ತುವಿಗೂ ಇರುವ ಸಂಪರ್ಕ ಈ ಉಪಕರಣಗಳಲ್ಲಿ ಬಹು ಮುಖ್ಯ ಅಂಶ. ಈ ಬಗೆಯ ಶುಷ್ಕೀಕರಣ ಉಪಕರಣಗಳಲ್ಲಿಯೂ ಅವಿಚ್ಛಿನ್ನ ರೀತಿಯವು ಮತ್ತು ಪಂಗಡ ರೀತಿಯವೆಂಬ ಎರಡು ಬಗೆಗಳಿವೆ. ಕಾಗದ ಬಟ್ಟೆ ಮೊದಲಾದವುಗಳನ್ನು ಲೋಹದ ಹಾಳೆಗಳ ಬದಲು ಬಿಸಿ ಸಿಲಿಂಡರುಗಳ ಮೇಲೆ ಹಾಯಿಸಿ ಆದ್ರ್ರತೆಯನ್ನು ನಿವಾರಿಸುವಾಗ ಅದು ಅವಿಚ್ಛಿನ್ನ ಶುಷ್ಕೀಕರಣವಾಗುತ್ತದೆ. ಪಂಗಡರೀತಿಯ ಆದ್ರ್ರವಸ್ತುಗಳನ್ನು ಕಂಪನಕ್ಕೆ ಒಳಪಡಿಸಿ ಶುಷ್ಕೀಕರಣ ವೇಗವಾಗಿ ಆಗುವಂತೆ ಮಾಡಲಾಗುತ್ತದೆ. ಉಷ್ಣದ ಪೂರೈಕೆಯನ್ನು ನೇರವಾದ ಉರಿ, ನೀರಿನ, ಆವಿ, ಬಿಸಿ ಅನಿಲಗಳು, ವಿದ್ಯುತ್ತು ಮೊದಲಾದ ಯಾವರೀತಿಯಿಂದಲಾದರೂ ಮಾಡಬಹುದು. ಆದ್ರ್ರತೆಯನ್ನು ಬೇಗ ನಿವಾರಿಸಲು ಸಾಮಾನ್ಯವಾಗಿ ನಿರ್ವಾತ ಪಂಪ್ (ವ್ಯಾಕ್ಯೂಂ ಪಂಪ್) ಒಂದರೊಡನೆ ಸಂಪರ್ಕವೇರ್ಪಡಿಸಿ ಆದ್ರ್ರತಾ ದ್ರವವನ್ನು ಅನಿಲರೂಪದಲ್ಲಿ ಹೊರಸೆಳೆಯಲಾಗುತ್ತದೆ. ಆದ್ರ್ರತಾ ದ್ರವವನ್ನು ಪುನಃ ಶೇಖರಿಸಲು ಸಹ ಅವಕಾಶವಿದೆ. ನಿರ್ವಾತಪಂಪನ್ನು ಉಪಯೋಗಿಸುವುದರಿಂದ ಯಾವ ಉಷ್ಣತೆಯಲ್ಲಿ ಬೇಕಾದರೂ ಶುಷ್ಕೀಕರಣವನ್ನು ಮಾಡುವುದು ಸಾಧ್ಯ. ಹಲವು ಪ್ರತ್ಯೇಕ ಸಂದರ್ಭಗಳಲ್ಲಿ 00 ಸೆಂ.ಗಿಂತಲೂ ಕಡಿಮೆಯ ಉಷ್ಣತೆಯಲ್ಲಿಯೂ ಶುಷ್ಕೀಕರಣವನ್ನು ಮಾಡಲಾಗುತ್ತದೆ.
ಕಿರಣಪ್ರಸರಣ ಉಪಕರಣಗಳು
ಬದಲಾಯಿಸಿಉಷ್ಣಕಿರಣಗಳನ್ನು ಹೊರಸೂಸುವ ದೀಪಗಳು ಅಥವಾ ಕಿರಣ ಸೂಸಬಲ್ಲ ಬಿಸಿಮಾಡಿದ ವಸ್ತುಗಳನ್ನು ಉಷ್ಣದ ಆಕರವಾಗಿ ಬಳಸುವ ಈ ಬಗೆಯ ಉಪಕರಣಗಳು ಹೆಚ್ಚು ಉಪಯೋಗದಲ್ಲಿಲ್ಲ. ಇಂಥ ಕಿರಣಗಳನ್ನು ಆದ್ರ್ರವಸ್ತು ಎಷ್ಟರಮಟ್ಟಿಗೆ ಹೀರಬಲ್ಲುದು ಎಂಬ ಅಂಶ ಈ ಬಗೆಯ ಶುಷ್ಕೀಕರಣದಲ್ಲಿ ಬಹುಮುಖ್ಯ. ಕಿರಣ ಅಥವಾ ಪ್ರಸರಣ ಮೂಲ ಮತ್ತು ಇದರಿಂದ ವಸ್ತುವಿಗೆ ಇರುವ ದೂರವನ್ನು ಅವಲಂಬಿಸಿದೆ. ಈ ಉಪಕರಣಗಳಲ್ಲಿ ಆದ್ರ್ರವಸ್ತು ಕಿರಣಮೂಲಗಳ ಎದುರಿನಲ್ಲಿ ಚಲಿಸುತ್ತ ತನ್ನ ಆದ್ರ್ರತೆಯನ್ನು ಕಳೆದುಕೊಳ್ಳುತ್ತದೆ.
ಅನಿಲಗಳ ಶುಷ್ಕೀಕರಣ
ಬದಲಾಯಿಸಿಹಲವಾರು ಬಗೆಯ ಉಪಯೋಗಗಳಿಗಾಗಿ ಅನಾದ್ರ್ರ ಅನಿಲಗಳ ಅಗತ್ಯವಿದೆ. ಅನಿಲಗಳನ್ನು ಅನಾದ್ರ್ರಗೊಳಿಸಲು ಆದ್ರ್ರತಾದ್ರವವನ್ನು ಹೀರಬಲ್ಲ ಶೋಷಕವಸ್ತುಗಳನ್ನು ಬಳಸಲಾಗುತ್ತದೆ. ಅನಿಲಗಳನ್ನು ಶೋಷಕವಸ್ತುಗಳನ್ನುಳ್ಳ ಕೊಳವೆ ಅಥವಾ ಗೋಪುರಾಕಾರದ ಉಪಕರಣಗಳ ಮೂಲಕ ಹಾಯಿಸಿದಾಗ ಆದ್ರ್ರತಾದ್ರವ ಶೋಷಕಗಳೊಡನೆ ಉಳಿದು ಅನಾದ್ರ್ರ ಅನಿಲಗಳು ಹೊರ ಬರುತ್ತವೆ. ಉಷ್ಣತೆಯನ್ನು ಕೆಳಕ್ಕಿಳಿಸಿ ಆದ್ರ್ರತಾ ದ್ರವವನ್ನು ಘನೀಭವಿಸುವಂತೆ ಮಾಡಿ ಬೇರ್ಪಡಿಸುವುದೂ ಅನಿಲ ಶುಷ್ಕೀಕರಣದ ಒಂದು ವಿಧಾನ.
ಉಲ್ಲೇಖಗಳು
ಬದಲಾಯಿಸಿ- ↑ http://kannada.oneindia.com/news/karnataka/karnataka-new-industrial-policy-highlights-088440.html
- ↑ http://www.kanaja.in/%E0%B2%AF%E0%B3%81%E0%B2%B0%E0%B3%8B%E0%B2%AA%E0%B3%8D-%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF-%E0%B2%B5%E0%B2%BF%E0%B2%B5%E0%B2%BF%E0%B2%A7-%E0%B2%86%E0%B2%AF-22/