ಕೆ.ಜಾನಕಿರಾಂ
ಕೆ.ಜಾನಕಿರಾಂ (1934- ). ಕನ್ನಡ ಚಿತ್ರರಂಗದ ಛಾಯಾಗ್ರಾಹಕ, ನಿರ್ಮಾಪಕ ಹಾಗೂ ನಿರ್ದೇಶಕರು
ಬದುಕು ಮತ್ತು ವೃತ್ತಿ
ಬದಲಾಯಿಸಿಕೆ.ಜಾನಕಿರಾಂ 1934ರಲ್ಲಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಗೂಡೂರಿನಲ್ಲಿ ಜನಿಸಿದರು. ತಂದೆಯ ಹೆಸರು ಕೊಳ್ಳರಾಮಯ್ಯ. ಅಂಕಮ್ಮ ಇವರ ತಾಯಿ. ಇಂಟರ್‍ಮೀಡಿಯೆಟ್‍ವರೆಗೂ ವ್ಯಾಸಂಗ. ಜಾನಕಿರಾಂ ಛಾಯಾಗ್ರಹಣ ತಂತ್ರದತ್ತ ಆಕರ್ಷಿತರಾಗಿ, 1952ರಲ್ಲಿ ಮದರಾಸಿಗೆ ಹೊರಟರು. ಆರಂಭದಲ್ಲಿ ಹೆಚ್.ಎಂ.ರೆಡ್ಡಿಯವರ ರೋಹಿಣಿ ಸ್ಟುಡಿಯೋಸಿನಲ್ಲಿ ಛಾಯಾಗ್ರಹಣ ವಿಭಾಗದಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದರು. ತಮಿಳು ಚಿತ್ರವೊಂದರಲ್ಲಿ ಸಹಾಯಕ ಛಾಯಾಗ್ರಾಹಕರಾದರು. ಜಿ.ಎನ್.ವಿಶ್ವನಾಥಶೆಟ್ಟಿರು ಟಿ.ವಿ.ಸಿಂಗ್‍ಠಾಕೂರ್ ನಿರ್ದೇಶನದಲ್ಲಿ ತಯಾರಿಸಿದ ಸೋದರಿ, ``ಹರಿಭಕ್ತ, ``ಓಹಿಲೇಶ್ವರ ಚಿತ್ರಗಳ ಛಾಯಾಗ್ರಾಹಕ ಬಿ.ದೊರೈರಾಜ್ ಅವರಿಗೆ ಸಹಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ``ಸತಿಸಖ್ಖು ಚಿತ್ರದಿಂದ ಆಪರೇಟಿವ್ ಕ್ಯಾಮರಾಮನ್ ಆದ ಜಾನಕಿರಾಂ ಅವರು 1956ರಲ್ಲಿ ಆರೂರು ಪಟ್ಟಾಭಿ ಅವರ ನಿರ್ದೇಶನದ, ಭಕ್ತವಿಜಯ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರು. ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅರ್ಹತಾ ಪ್ರಶಸ್ತಿಯೂ ಲಭಿಸಿತು. ನಂತರ ಶ್ರೀಶೈಲ ಮಹಾತ್ಮೆ, ಬೆರೆತ ಜೀವ, ಭಾಗ್ಯದ ಬಾಗಿಲು, ಗಾಂಧಿನಗರ, ಅನುರಾಧ, ಲಗ್ನಪತ್ರಿಕೆ ಮುಂತಾದ ಚಿತ್ರಗಳಿಗೆ ಛಾಯಾಗ್ರಾಹಕರಾದರು. ನಿರ್ಮಾಪಕ ನಿರ್ದೇಶಕ ಎ.ಎಂ.ಸಮೀಉಲ್ಲಾರ ಆತ್ಮೀಯರಾಗಿ ಅವರು ನಿರ್ಮಿಸಿದ ಎಲ್ಲ ಚಿತ್ರಗಳಿಗೂ ಛಾಯಾಗ್ರಹಣ ನಡೆಸಿದ್ದಾರೆ. ಜಾನಕಿರಾಂ ನಿರ್ದೇಶಕರಾಗಿ ನಿರ್ವಹಿಸಿದ ಮೊದಲ ಚಿತ್ರ ``ಪುಣ್ಯಪುರುಷ. ಇದು ಅವರ ನಿರ್ಮಾಣದ ಚೊಚ್ಚಲ ಚಿತ್ರವೂ ಹೌದು. ಕಾಸಿದ್ರೆ ಕೈಲಾಸ, ಮಾನವ ದಾನವ, ಅಜ್ಞಾತವಾಸ, ಅಂತಿಮಘಟ್ಟ, ಈ ಬಂಧ ಅನುಬಂಧ, ಪೋಲಿ ಹುಡುಗ ಮುಂತಾದ ಚಿತ್ರಗಳ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ.
ಸಂಘಜೀವಿಯಾದ ಜಾನಕಿರಾಂ ಅವರು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿ ಮತ್ತಿತರ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ಕೆಲವು ವರ್ಷಕಾಲ ಆದರ್ಶ ಫಿಲಂ ಇನ್‍ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಪ್ರಾಂಶುಪಾಲರೂ ಆಗಿದ್ದರು.