ಕೆರ
ಕೆರ ಎಂದರೆ ಒಂದು ಬಗೆಯ ತೆರೆದ ಪಾದರಕ್ಷೆ. ಇದು ಧರಿಸುವವನ ಪಾದಕ್ಕೆ, ಮೇಲ್ಗಾಲಿನ ಮೇಲೆ, ಮತ್ತು ಕೆಲವೊಮ್ಮೆ, ಕಣಕಾಲಿನ ಸುತ್ತ ಹಾದುಹೋಗುವ ಪಟ್ಟಿಗಳಿಂದ ಹಿಡಿದಿಟ್ಟಲ್ಪಟ್ಟಿರುವ ಅಟ್ಟೆಯನ್ನು ಹೊಂದಿರುತ್ತದೆ. ಕೆರಗಳು ಹಿಮ್ಮಡಿ ಕಟ್ಟನ್ನು ಕೂಡ ಹೊಂದಿರಬಹುದು. ಕೆರಗಳು ಮತ್ತು ಇತರ ಬಗೆಯ ಪಾದರಕ್ಷೆಗಳ ನಡುವಿನ ವ್ಯತ್ಯಾಸವು ಕೆಲವೊಮ್ಮೆ ಮಸುಕಾಗಿರಬಹುದಾದರೂ, ಸಾಮಾನ್ಯ ತಿಳುವಳಿಕೆ ಏನೆಂದರೆ ಕೆರವು ಪಾದವನ್ನು ಸಂಪೂರ್ಣವಾಗಿ ಅಥವಾ ಅದರ ಬಹುತೇಕ ಭಾಗವನ್ನು ತೆರೆದಿಡುತ್ತದೆ. ಜನರು ಹಲವಾರು ಕಾರಣಗಳಿಗಾಗಿ ಕೆರಗಳನ್ನು ಧರಿಸಲು ಆಯ್ದುಕೊಳ್ಳಬಹುದು. ಇವುಗಳಲ್ಲಿ ಬಿಸಿ ಹವಾಮಾನದಲ್ಲಿ ಸೌಖ್ಯಕ್ಕಾಗಿ, ಮಿತವ್ಯಯ (ಕೆರಗಳಿಗೆ ಶೂಗಳಿಗಿಂತ ಕಡಿಮೆ ಸಾಮಗ್ರಿ ಬೇಕಾಗುವ ಸಾಧ್ಯತೆ ಹೆಚ್ಚು ಮತ್ತು ಸಾಮಾನ್ಯವಾಗಿ ಕೆರಗಳನ್ನು ನಿರ್ಮಿಸುವುದು ಹೆಚ್ಚು ಸುಲಭವಾಗಿರುತ್ತದೆ), ಮತ್ತು ಫ಼್ಯಾಷನ್ ಆಯ್ಕೆಯಾಗಿರುವುದು ಸೇರಿವೆ.
ಸಾಮಾನ್ಯವಾಗಿ, ಹೆಚ್ಚು ಬಿಸಿ ವಾತಾವರಣಗಳಲ್ಲಿ ಅಥವಾ ವರ್ಷದ ಹೆಚ್ಚು ಸೆಕೆಯಾದ ಭಾಗಗಳ ಅವಧಿಯಲ್ಲಿ, ತಮ್ಮ ಪಾದಗಳನ್ನು ತಂಪಾಗಿ ಮತ್ತು ಒಣ ಇಡುವ ಸಲುವಾಗಿ ಜನರು ಕೆರಗಳನ್ನು ಧರಿಸುತ್ತಾರೆ. ಪಾದದ ತಾಮರೆ ಕಾಣಿಸಿಕೊಳ್ಳುವ ಅಪಾಯವು ಮುಚ್ಚಿದ ಶೂಗಳಿಗಿಂತ ಕಡಿಮೆಯಿರುತ್ತದೆ, ಮತ್ತು ಅಂತಹ ಸೋಂಕಿಗಾಗಿ ಕೆರಗಳನ್ನು ಧರಿಸುವುದು ಚಿಕಿತ್ಸಾ ಕ್ರಮದ ಭಾಗವಾಗಿರಬಹುದು.
ಪರಿಚಿತವಿರುವ ಅತ್ಯಂತ ಹಳೆಯ ಕೆರಗಳನ್ನು (ಮತ್ತು ಪರಿಚಿತವಿರುವ ಅತ್ಯಂತ ಹಳೆಯದಾದ ಯಾವುದೇ ಬಗೆಯ ಪಾದರಕ್ಷೆ) ಅಮೇರಿಕದ ಒರೆಗಾನ್ ರಾಜ್ಯದ ಫ಼ೋರ್ಟ್ ರಾಕ್ ಗುಹೆಯಲ್ಲಿ ಕಂಡುಹಿಡಿಯಲಾಯಿತು; ಇದನ್ನು ಹೆಣೆಯಲಾದ ಸೇಜ್‍ಬ್ರಶ್ ಪಟ್ಟೆಯ ಇಂಗಾಲ ಕಾಲನಿರ್ಧಾರಣವು ಕನಿಷ್ಠಪಕ್ಷ ೧೦೦೦೦ ವರ್ಷದ ಹಿಂದಿನ ಕಾಲವನ್ನು ಸೂಚಿಸುತ್ತದೆ.[೧] ಪ್ರಾಚೀನ್ ಈಜಿಪ್ಟ್‌ನವರು ತಾಳೆ ಎಲೆಗಳು ಮತ್ತು ಜೊಂಡು ಹುಲ್ಲಿನಿಂದ ತಯಾರಿಸಿದ ಕೆರಗಳನ್ನು ಧರಿಸುತ್ತಿದ್ದರು. ಇವನ್ನು ಕೆಲವೊಮ್ಮೆ ಕೆರ ಧಾರಕರು ಹೊತ್ತೊಯ್ಯುತ್ತಿರುವಂತೆ ಈಜಿಪ್ಶಿಯನ್ ಪ್ರತಿಮೆಗಳು ಮತ್ತು ಉಬ್ಬುಕೆತ್ತನೆಗಳ ಪಾದಗಳ ಮೇಲೆ ಕಾಣಬಹುದು. ಹೆರೊಡಾಟಸ್‍ನ ಪ್ರಕಾರ, ಜೊಂಡು ಹುಲ್ಲಿನ ಕೆರಗಳು ಈಜಿಪ್ಷಿಯನ್ ಪೂಜಾರಿಗಳ ಅಗತ್ಯವಾದ ಮತ್ತು ವಿಶಿಷ್ಟ ಲಕ್ಷಣದ ಉಡುಪಿನ ಭಾಗವಾಗಿದ್ದವು.
ಕೆರವು ರಬ್ಬರು, ಚಕ್ಕಳ, ಕಟ್ಟಿಗೆ, ಟಾಟಾಮಿ ಅಥವಾ ಹಗ್ಗದಿಂದ ತಯಾರಿಸಲಾದ ಅಟ್ಟೆಯನ್ನು ಹೊಂದಿರಬಹುದು. ಇದು ಸಾಮಾನ್ಯವಾಗಿ ಮೊದಲ ಮತ್ತು ಎರಡನೇ ಕಾಲ್ಬೆರಳ ನಡುವೆ ಸಾಗುವ ಕಿರಿದಾದ ಪಟ್ಟಿಯಿಂದ, ಅಥವಾ ಪಾದದ ಕಮಾನಿನ ಮೇಲೆ ಅಥವಾ ಕಣಕಾಲಿನ ಸುತ್ತ ಹಾದುಹೋಗುವ, ನಾನಾ ಬಗೆಯಾಗಿ ಬಾರು, ಸ್ಯಾಬೊ ಪಟ್ಟಿ ಎಂದು ಕರೆಯಲ್ಪಡುವ ಲೇಸಿನಿಂದ ಪಾದಕ್ಕೆ ಹಿಡಿದಿಟ್ಟಲ್ಪಟ್ಟಿರಬಹುದು. ಕೆರವು ಹಿಮ್ಮಡವನ್ನು (ಕೆಳ ಅಥವಾ ಎತ್ತರದ) ಅಥವಾ ಹಿಮ್ಮಡ ಪಟ್ಟಿಯನ್ನು ಹೊಂದಿರಬಹುದು ಅಥವಾ ಹೊಂದದಿರಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Robbins, William G. (2005). Oregon: This Storied Land. Oregon Historical Society Press. ISBN 978-0875952864.