ಮೊದಲನೆಯ ಕೆಂಪೇಗೌಡ
ಹಿರಿಯ ಕೆಂಪೇಗೌಡರು (೧೫೧೦–೧೫೬೯) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.
ಹಿರಿಯ ಕೆಂಪೇಗೌಡರು (1510-1569) | |
---|---|
Born | ಕೆಂಪೇಗೌಡಲ್ ಕ್ರಿ.ಶ.೧೫೧೦, ಜೂನ್ ೨೭ ಯಲಹಂಕ |
Died | ಕ್ರಿ.ಶ.1569 [೧] |
Other names | ಕೆಂಪಯ್ಯ. ಕೆಂಪರಾಯ, ಕೆಂಪೇಗೌಡ, ಬೆಂಗಳೂರು ಕೆಂಪೇಗೌಡ, |
Years active | ಕ್ರಿ.ಶ.೧೫೩೧-೧೫೬೯ |
Known for | ಬೆಂಗಳೂರಿನ ನಿರ್ಮಾತೃ |
Predecessor | ಕೆಂಪನಂಜೇಗೌಡ |
Successor | ಗಿಡ್ಡೇಗೌಡ |
Children | ಇಮ್ಮಡಿ ಕೆಂಪೇಗೌಡ |
Parent | ಕೆಂಪನಂಜೇಗೌಡ ಮತ್ತು ಲಿಂಗಾಂಬೆ |
ಇತಿವೃತ್ತ
- ವಿಜಯನಗರದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ವ್ಯಾಪ್ತಿಯು ಹಿರಿಯ ಕೆಂಪೇಗೌಡರ ಕಾಲದಲ್ಲಿ ಈಗಿನ ಬೆಂಗಳೂರಿನ ಹೊರವಲಯದಲ್ಲಿರುವ ಆವತಿಯಿಂದ ಹಿಡಿದು ಕೋಲಾರ, ಶಿವಗಂಗೆ, ಹುಲಿಕಲ್, ಕುಣಿಗಲ್, ಹುಲಿಯೂರುದುರ್ಗ, ಹುತ್ರಿದುರ್ಗ, ಮಾಗಡಿ, ರಾಮನಗರ, ಸಾವನದುರ್ಗದವರೆಗೂ ವಿಸ್ತರಿಸಿತ್ತು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.
- ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರ ನಂತರ ಇವರ ಸಂತತಿಯವರಿಗೆ ಮಾಗಡಿ ಕೆಂಪೇಗೌಡರೆಂಬ ಹೆಸರು ಬಂದಿದೆ. ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಇವರ ಕೊನೆಯ ಪೀಳಿಗೆಯವರು ಸದ್ಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.
ಕೆಂಪೇಗೌಡರ ಜನನ
- ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ ೧೫೧೦ರಲ್ಲಿ ಯಲಹಂಕದಲ್ಲಿ ಜನಿಸಿದ ಮೊದಲನೆಯ ಕೆಂಪೇಗೌಡರು[೨].
- ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುತ್ತಿರುತ್ತಾರೆ. ಬಾಲಕ ಕೆಂಪಯ್ಯನನ್ನು ಪ್ರಜೆಗಳು ಗೌರವಾದರದಿಂದ, ಚಿಕ್ಕರಾಯ, ಕೆಂಪರಾಯ ಎಂದು ಸಂಭೋಧಿಸುತ್ತಿರುತ್ತಾರೆ.
- ೧೫೦೯ರಲ್ಲಿ ವಿಜಯನಗರದ ಸಿಂಹಾಸನವೇರಿದ್ದ ಶ್ರೀಕೃಷ್ಣದೇವರಾಯರು ಹಲವಾರು ಯುದ್ದಗಳಲ್ಲಿ ಜಯಗಳಿಸಿ ತಮ್ಮ ಸೈನ್ಯದ ಅಸಾಧಾರಣ ಸಾಮರ್ಥ್ಯ ಹಾಗೂ ವಿಜಯನಗರದ ಸಾಮ್ರಾಜ್ಯದ ವೈಭೋಗವನ್ನು ಅನಾವರಣ ಮಾಡಲೆಂದು ೧೫೧೫ರಲ್ಲಿ ರಾಜಧಾನಿ ಹಂಪಿಯಲ್ಲಿ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವವನ್ನು ಆರಂಭಿಸಿದರು. ಈ ಅಧ್ಭುತ ಸಮಾರಂಭಕ್ಕೆ ತಂದೆಯವರ ಜೊತೆ ಹೋಗಿದ್ದ ಬಾಲಕ ಕೆಂಪರಾಯನ ವಯಸ್ಸು ಆಗ ಐದು ವರ್ಷ.
ಗುರುಕುಲದಲ್ಲಿ ಕೆಂಪರಾಯ
- ಬಾಲ್ಯದಲ್ಲಿಯೇ ಚುರುಕಾಗಿದ್ದ ಕೆಂಪರಾಯನಿಗೆ ಅರಮನೆಯ ಪುರೋಹಿತರೂ, ಹಿತಚಿಂತಕರೂ ಆಗಿದ್ದ ಐಗಂಡಪುರದ ಮಾಧವಭಟ್ಟರ ಗುರುಕುಲಾಶ್ರಮದಲ್ಲಿ ಸಾಮಾನ್ಯ ವಿಧ್ಯಾರ್ಥಿಗಳ ಜೊತೆಯಲ್ಲಿಯೇ ವಿಧ್ಯಾಭ್ಯಾಸ ಮಾಡಿಸುತ್ತಾರೆ. ರಾಮಾಯಣ-ಮಹಾಭಾರತದ ಕಥೆಗಳು ಹಾಗೂ ತಮ್ಮ ವಂಶಸ್ಥರ ಪುಣ್ಯಕಾರ್ಯಗಳನ್ನು ಕೇಳಿ ಬೆಳೆದಿದ್ದ ಬಾಲಕನಿಗೆ ಸಹಜವಾಗಿಯೇ ವಿದ್ಯಾಭಾಸದ ಬಗ್ಗೆ ಗಮನವಿರುತ್ತದೆ.
- ಗುರುಕುಲದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ರಾಜೋಚಿತವಾದ ಕತ್ತಿವರಸೆ, ಕುದುರೆ ಸವಾರಿ, ಮಲ್ಲಕಾಳಗ, ರಾಜನೀತಿ, ಆರ್ಥಿಕ ತಿಳಿವಳಿಕೆಮುಂತಾದ ವಿಷಯಗಳಲ್ಲೂ ಪರಿಣತಿ ಪಡೆಯುತ್ತಾರೆ.
ಲೋಕಾನುಭವ
- ಯುವಕ ಕೆಂಪರಾಯನು ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಗುರುಗಳ ಆದೇಶದಂತೆ ನಾಡಿನಾದ್ಯಂತ ಸಂಚರಿಸಿ ಲೋಕಾನುಭವ ಪಡೆದುಕೊಳ್ಳುತ್ತಾರೆ. ಗುರುಕುಲದಲ್ಲಿದ್ದಾಗ ಕೆಂಪರಾಯನಿಗೆ ಏಕಾಂಬರ ಶಾಸ್ತ್ರಿ, ಗುರು ನಂಜೇಶ ಹೀಗೆ ಹಲವು ಪಂಡಿತರ ಗೆಳೆತನವಿತ್ತು. ಇವರ ಜೊತೆಗೆ ಸಹಪಾಠಿ ವೀರಣ್ಣನ ಸ್ನೇಹವನ್ನು ಗುರುಕುಲವನ್ನು ತೊರೆದ ನಂತರವೂ ಕಾಪಾಡಿಕೊಂಡು ಬರುತ್ತಾರೆ. ಮುಂದೆ ಕೆಂಪರಾಯನು ಬೆಳೆದು ದೊಡ್ಡವನಾದಂತೆ ಕೆಂಪೇಗೌಡರೆಂಬ ಹೆಸರು ಬರುತ್ತದೆ.
- ಹೀಗಿರುವಾಗ ಒಮ್ಮೆ ಯುವಕರಾಗಿದ್ದ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಮಲ್ಲಯುದ್ದ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲರಾಯರನ್ನು ಸೋಲಿಸಿ ಶ್ರೀಕೃಷ್ಣ ದೇವರಾಯರಿಂದ ಮೆಚ್ಚುಗೆ ಗಳಿಸುತ್ತಾರೆ. ಅಲ್ಲಿಂದೀಚೆಗೆ ಕೆಂಪೇಗೌಡರ ಭುಜಬಲದ ಬಗ್ಗೆ ತಂದೆಯವರಿಗೆ ನಂಬಿಕೆ ಬಂದು ವಿಜಯನಗರದ ಅರಸರ ಪರವಾಗಿ ತಾವು ಭಾಗವಹಿಸುವ ಯುದ್ದಗಳಲ್ಲಿ ಮಗನನ್ನೂ ಕರೆದೊಯ್ಯುತ್ತಾರೆ. ವಿಜಯನಗರದ ಸಾರ್ವಭೌಮತೆಗೆ ಧಕ್ಕೆ ತರಲು ಹೊಂಚು ಹಾಕುತ್ತಿದ್ದ ಶತೃ ಸಾಮಂತರನ್ನು ಸದೆಬಡಿಯುತ್ತಾರೆ.
ಕೆಂಪೇಗೌಡರ ಯುವರಾಜ ಪಟ್ಟಾಭಿಷೇಕ ಮತ್ತು ಮದುವೆ
- ೧೫೨೮ರಲ್ಲಿ ಕೆಂಪೇಗೌಡರಿಗೆ ಹಳೆ ಬೆಂಗಳೂರಿನ ಸೋದರಮಾವನ ಮಗಳಾದ ಚೆನ್ನಾಂಬೆಯವರೊಡನೆ (ಚೆನ್ನಮ್ಮ)ಮದುವೆ ಹಾಗೂ ಇದೇ ಸಂಧರ್ಭದಲ್ಲಿ ಯುವರಾಜ ಪಟ್ಟಾಭಿಷೇಕವನ್ನು ಮಾಡಲಾಗುತ್ತದೆ. ಈ ಸುಂದರ ಸಮಾರಂಭಕ್ಕೆ ಶ್ರೀಕೃಷ್ಣದೇವರಾಯರ ಪ್ರತಿನಿಧಿಗಳಾದಿಯಾಗಿ ಚೆನ್ನಪಟ್ಟಣ, ಶಿರಾ, ಸೋಲೂರು, ಕೆಳದಿ, ಚಿತ್ರದುರ್ಗ ಮುಂತಾದ ಸಂಸ್ಥಾನಗಳ ಪಾಳೆಯಗಾರರು ಆಗಮಿಸಿ ಶುಭಕೋರುತ್ತಾರೆ.
- ತಂದೆಯವರ ಆಡಳಿತದಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಯುವರಾಜ ಕೆಂಪೇಗೌಡರಿಗೆ ಕೆಲವೇ ಕಾಲದಲ್ಲಿ ಯಾವುದು ಒಳಿತು, ಯಾವುದು ತಪ್ಪು ಎಂಬಿತ್ಯಾದಿ ರಾಜನೀತಿಯ ಸಕಲ ಪಟ್ಟುಗಳು ಕರಗತವಾಗುತ್ತವೆ. ೧೫೨೯ರಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯರು ನಿಧನರಾಗಲಾಗಿ ಅನೇಕ ಸಾಮಂತರಾಜರುಗಳು ಸ್ವತಂತ್ರರಾಗುತ್ತಾರೆ. ೧೫೩೦ರಲ್ಲಿ ಕೆಂಪೇಗೌಡರ ಜೇಷ್ಠ ಪುತ್ರನಾಗಿ ಗಿಡ್ಡೇಗೌಡರು ಜನಿಸುತ್ತಾರೆ.
ಯಲಹಂಕ ನಾಡಪ್ರಭುವಾಗಿ
- ಮುಪ್ಪಿನಲ್ಲಿದ್ದ ಕೆಂಪನಂಜೇಗೌಡರು ಮಗನಿಗೆ ರಾಜ್ಯವಾಳುವ ಎಲ್ಲಾ ಅರ್ಹತೆಯಿದೆಯೆಂದು ತಿಳಿದು ಮಗ ಕೆಂಪೇಗೌಡರಿಗೆ ೧೫೩೧ರಲ್ಲಿ ನಾಡಪ್ರಭುಗಳ ಅಧಿಕಾರ ವಹಿಸಿಕೊಡುತ್ತಾರೆ. ವಿಜಯನಗರದ ಅರಸರು ಹಿಂದಿನಿಂದಲೂ ತಮ್ಮ ವಂಶಸ್ಥರ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಕೆಂಪೇಗೌಡರು ಉಳಿದ ಸಾಮಂತರಂತೆ ಸ್ವತಂತ್ರರಾಗಲೊಪ್ಪುವುದಿಲ್ಲ. ಬದಲಿಗೆ ವಿಜಯನಗರ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರೆಸುತ್ತಾರೆ.
- ಗೌಡರ ಅಧಿಕಾರಕ್ಕೆ ಬಂದ ಕಾಲಕ್ಕೆ ಯಲಹಂಕನಾಡಿನಲ್ಲಿ ಗಂಭೀರ ಪರಿಸ್ಥಿತಿಯಿತ್ತು. ನೆರೆಯ ಪಾಳೇಗಾರರರು ಅಸೂಯೆಯಿಂದ ಕುದಿಯುತ್ತಿದ್ದರು. ಅತ್ತ ವಿಜಯನಗರದ ಗಡಿಯಲ್ಲಿ ಬಹಮನಿ ಸುಲ್ತಾನರ ಸೈನ್ಯದ ಕೋಟಲೆ ಹೆಚ್ಚಿತ್ತು. ವಿಜಯನಗರದ ಅಖಂಡತೆಯನ್ನು ಕಾಪಾಡಲು ಸದಾ ಸಿದ್ದವಾಗಿದ್ದ ಗೌಡರು ಸೋದರ ಸೋಮೇಗೌಡ ಮತ್ತು ಬಸವೇಗೌಡರ ಜೊತೆ ಸೇರಿ ಹಲವು ಯುದ್ದಗಳನ್ನು ಜಯಿಸುತ್ತಾರೆ.
ರಾಜಧಾನಿಯ ನಿರ್ಮಾಣಕ್ಕೆ ಸ್ಥಳದ ಆಯ್ಕೆ
- ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಈ ಎಲ್ಲಾ ವೈಭವಗಳನ್ನು ಮರು ಪ್ರತಿಷ್ಠಾಪಿಸುವ ಬಯಕೆ ಮನೆ ಮಾಡಿತ್ತು. ಇದರಿಂದಾಗಿ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನೂ ಮನದಟ್ಟು ಮಾಡಿಕೊಂಡು ಬಂದಿದ್ದರು.
- ನಗರ ನಿರ್ಮಾಣಕ್ಕೆ ಸೂಕ್ತ ಜಾಗವನ್ನರಸುತ್ತಾ ಅಮಾತ್ಯ ವೀರಣ್ಣ ಹಾಗೂ ಕೆಲ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದೂರ ದಾಟಿ ಎತ್ತರದ ಪ್ರದೇಶವೊಂದಕ್ಕೆ ಬರುವ ಕೆಂಪೇಗೌಡರಿಗೆ ಸಣ್ಣ-ಪುಟ್ಟ ತೊರೆಗಳಿಂದ ಕೂಡಿದ ಹಸಿರಿನಿಂದ ನಳನಳಿಸುತ್ತಿದ್ದ ಕಾಡು ಎದುರಾಗುತ್ತದೆ. ಕಾಡಿನ ನಡುವೆ ಸಾಗುತ್ತಿದ್ದಂತೆ ಒಂದು ವಿಸ್ಮಯಕಾರಿ ಘಟನೆ ಕೆಂಪೇಗೌಡರ ಎದುರಿನಲ್ಲೇ ನಡೆಯುತ್ತದೆ. ಪುಟ್ಟ ಮೊಲವೊಂದು ತನ್ನನ್ನು ತಿನ್ನಲೆಂದು ಬಂದ ಬೇಟೆ ನಾಯಿಯೊಂದನ್ನು ಓಡಿಸಿಕೊಂಡು ಹೋಗುತ್ತಿರುವುದು ಕೆಂಪೇಗೌಡರಿಗೆ ಕಂಡುಬರುತ್ತದೆ.
- ಇಲ್ಲಿರುವ ಸಾಮಾನ್ಯ ಮೊಲವೊಂದಕ್ಕೆ ಇಷ್ಟು ಧೈರ್ಯವಿರಬೇಕಾದರೆ ಇದು ಖಂಡಿತ ವೀರಭೂಮಿಯೇ ನಿಜ ಎನಿಸುತ್ತದೆ. ಹೀಗಾಗಿ ನಗರ ನಿರ್ಮಾಣಕ್ಕೆ ಇದೇ ಸೂಕ್ತವಾದ ಪ್ರದೇಶವೆಂದು ಕೆಂಪೇಗೌಡರು ಭಾವಿಸುತ್ತಾರೆ. ಅಲ್ಲದೆ ನಾನಾಕಡೆಗಳಿಂದ ತೊರೆಗಳಾಗಿ ಹರಿದು ಅರ್ಕಾವತಿ ನದಿಗೆ ಸೇರುತ್ತಿದ್ದ ಪ್ರದೇಶವೂ ಇದಾದ್ದರಿಂದ ನೀರಾವರಿಗೂ ಯೋಗ್ಯವಾಗಿದೆಯೆಂದು ಗೌಡರು ತೀರ್ಮಾನಿಸುತ್ತಾರೆ. ತಮ್ಮ ಪರಿವಾರದ ಹಿರಿಯರೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆಯುತ್ತಾರೆ.
- ಜ್ಯೋತಿಷಿಗಳನ್ನೂ, ಭೂಗರ್ಭ-ನೀರಾವರಿ ತಜ್ಞರನ್ನೂ ವಾಸ್ತುಶಿಲ್ಪಿಗಳನ್ನೂ ಕರೆಸಿ ಸ್ಥಳ ಮತ್ತು ಪರಿಸರದ ಪರಿಶೀಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ರಾಜಧಾನಿಯ ನಿರ್ಮಾಣದ ಅನುಮತಿಗಾಗಿ ವಿಜಯನಗರದ ಅರಸರ ಅಚ್ಯುತರಾಯರನ್ನು ಭೇಟಿ ಮಾಡುತ್ತಾರೆ. ಸಂತಸಗೊಂಡ ಅರಸರು ಗೌಡರ ಕಾರ್ಯಕ್ಕೆ ಶುಭಕೋರಿ ಅಗತ್ಯ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿ ಕಳುಹಿಸುತ್ತಾರೆ.
ರಾಜಧಾನಿಯ ನಿರ್ಮಾಣಕ್ಕೆ ಧನ ಸಂಗ್ರಹ
- ಯಲಹಂಕ ನಾಡಿನ ಸಾಮಂತರಾಗಿದ್ದ ಕೆಂಪೇಗೌಡರಿಗೆ ವಿಜಯನಗರದ ಅರಸ ಅಚ್ಯುತರಾಯರು 1532ರಲ್ಲಿ ಯಲಹಂಕ ಸೇರಿದಂತೆ ಹಳೆಯ ಬೆಂಗಳೂರು, ವರ್ತೂರು, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕನ್ನಲ್ಲಿ, ಕುಂಬಳಗೋಡು, ಬಾಣಾವರ ಮತ್ತು ಹೆಸರುಘಟ್ಟ ಹೋಬಳಿಗಳನ್ನು ಯಲಹಂಕ ಅಮರನಾಯಕತನಕ್ಕೆ ಬಿಟ್ಟು ಕೊಟ್ಟಿರುತ್ತಾರೆ.
- ಆದರೆ ಈ ಎಲ್ಲ ಪ್ರದೇಶಗಳಿಂದ ಸಂಗ್ರಹವಾಗುತ್ತಿದ್ದ ರಾಜಾದಾಯದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಮಾತ್ರ ಸಾಮಂತರು ಬಳಸಿಕೊಂಡು ಉಳಿದಿದ್ದನ್ನು ವಿಜಯನಗರದ ಅರಸರ ಸನ್ನಿಧಾನಕ್ಕೆ ಒಪ್ಪಿಸಬೇಕಿತ್ತು. ರಾಜಧಾನಿಯ ನಿರ್ಮಾಣ ಕಾರ್ಯಕ್ಕೆ ಅಪಾರ ಹಣದ ಅವಶ್ಯಕತೆ ಇದ್ದಿದ್ದರಿಂದಾಗಿ ಗೌಡರು ಅಗತ್ಯವಾದ ಧನ ಸಹಾಯ ಮಾಡಬೇಕೆಂದು ತಮ್ಮ ವ್ಯಾಪ್ತಿಯ ಪ್ರದೇಶದ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಾರೆ.
- ಮನವಿಗೆ ಓಗೊಟ್ಟ ಹಲಸೂರು, ಜಿಗಣಿ, ಬಾಣಾವರ, ಬೇಗೂರು, ತಲಘಟ್ಟಪುರ, ಕುಣಿಗಲ್ ಮತ್ತಿತರ ಕಡೆಗಳಿಂದ ಸ್ವಲ್ಪ ಪ್ರಮಾಣದ ಹಣ ಹರಿದು ಬರುತ್ತದೆ. ಉಳಿದಂತೆ ನಿರ್ಮಾಣ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಗಾಡಿಗಳ ಮೂಲಕ ಕೆಲವರು ತಲುಪಿಸುತ್ತಾರೆ ಮತ್ತು ಕೋಟೆಯ ನಿರ್ಮಾಣದಲ್ಲಿ ನೆರವಾಗಲು ನೂರಾರು ಮಂದಿ ಸ್ವಪ್ರೇರಿತರಾಗಿ ಮುಂದೆ ಬರುವುದಾಗಿ ಗೌಡರಿಗೆ ಧೈರ್ಯ ನೀಡುತ್ತಾರೆ.
- ಆಸ್ಥಾನದ ಪ್ರಮುಖರೊಂದಿಗೆ ಚರ್ಚಿಸಿ ಗುರುತಿಸಿದ ಪ್ರದೇಶದಲ್ಲಿ ಕೋಟೆ, ಪೇಟೆ, ಗುಡಿ, ಕೆರೆ ಮತ್ತು ಉದ್ಯಾನ ಈ ಐದು ಅಂಗಗಳಿಂದ ಕೂಡಿದ ರಾಜಧಾನಿಯ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸುತ್ತಾರೆ. ನಂತರ ಪುರೋಹಿತರಿಂದ ನಗರ ನಿರ್ಮಾಣಕ್ಕೆ ಮುಹೂರ್ತವನ್ನು ನಿಗದಿ ಮಾಡಿಸುತ್ತಾರೆ. ಅಮಾತ್ಯರಾಗಿದ್ದ ಗಿಡ್ಡೇಗೌಡರನ್ನು ವಿಜಯನಗರಕ್ಕೆ ತೆರಳಿ ಅರಸರನ್ನು ಕಂಡು ನಗರ ನಿರ್ಮಾಣಕ್ಕೆ ಸ್ವಲ್ಪ ಮಟ್ಟಿನ ಹಣಕಾಸಿನ ನೆರವು ನೀಡುವಂತೆ ಕೋರಿಕೊಂಡು ಬರುವಂತೆ ಕಳುಹಿಸುತ್ತಾರೆ.
ರಾಜಧಾನಿಗೆ ನಾಮಕರಣ
- ಕೆಂಪೇಗೌಡರ ತಾಯಿ ಕೆಂಪಾಂಬೆ ಮತ್ತು ಪತ್ನಿ ಚೆನ್ನಮಾಂಬೆ(ಸೋದರ ಮಾವನ ಮಗಳು) ಇಬ್ಬರೂ ಹಳೆ ಬೆಂಗಳೂರಿನವರು. ಹಾಗಾಗಿ ಇಬ್ಬರ ಪ್ರೀತಿಯ ನೆನಪಿಗಾಗಿ ತಾವು ನಿರ್ಮಿಸಿದ ಪಟ್ಟಣಕ್ಕೆ ಬೆಂಗಳೂರು ಎಂದು ಹೆಸರಿಟ್ಟಿರೆಂಬುದು ಹಲವು ವಿದ್ವಾಂಸರ ಅಭಿಪ್ರಾಯ.
ಬೆಂಗಳೂರಿನ ಹೆಸರಿನ ಮೂಲ ಕುರಿತು ಮತ್ತಷ್ಟು ಊಹೆಗಳು
- ಬೆಣಚು ಕಲ್ಲೂರು: ಬೆಣಚು ಕಲ್ಲುಗಳಿಂದ ಕೂಡಿದ್ದರಿಂದಾಗಿ.
- ಬೆಂಗುಮರಗಳೂರು: ಈ ಪ್ರದೇಶದಲ್ಲಿದ್ದ ಬೆಂಗು ಮರಗಳಿಂದಾಗಿ.
- ಬೆಂಗಾವಲೂರು: ಗಂಗರು ಬೆಂಗಾವಲಿಗೆಂದು ನಿರ್ಮಿಸಿದ ಕಾರಣಕ್ಕಾಗಿ.
- ವೆಂಗಳೂರು: ತಮಿಳಿನ ಶಾಸನವನ್ನು ಉಲ್ಲೇಖಿಸಿ.
- ಬೆಂದ ಕಾಡೂರು: ಇಲ್ಲಿದ್ದ ಕಾಡನ್ನು ಕಡಿಸಿ-ಸುಡಿಸಿ ನಗರ ನಿರ್ಮಿಸಿದ ಕಾರಣ.
- ವೆಂಕಟೂರು: ವೆಂಕಟರಮಣ ಸ್ವಾಮಿ ಗುಡಿಯನ್ನು ಕಟ್ಟಿಸಿದ ಕಾರಣ.
ಬೆಂಗಳೂರು ನಗರಕ್ಕೆ ವಿಜಯನಗರದ ಅರಸರಾದ ಶ್ರೀಕೃಷ್ಣದೇವರಾಯ ಮತ್ತು ಅಚ್ಯುತರಾಯರ ನೆನಪಿನಲ್ಲಿ ‘ದೇವರಾಯಪಟ್ಟಣ’ ಎಂಬ ಪ್ರತಿನಾಮವೂ ಬಂದಿತ್ತು. ಬಹುಶಃ ಅಚ್ಯುತರಾಯರ ಅವಧಿಯಲ್ಲೇ ಶುರುವಾದ ಆಂತರಿಕ ಕಲಹಗಳ ಕಾರಣ ವಿಜಯನಗರ ಸಾಮ್ರಾಜ್ಯದ ಘನತೆ ಕಡಿಮೆಯಾಗುತ್ತಾ ಹೋದ ಕಾರಣದಿಂದ ಆ ಹೆಸರು ಉಳಿದುಕೊಳ್ಳಲಿಲ್ಲ ಎನ್ನಲಾಗಿದೆ.
ಬೆಂಗಳೂರು ನಗರದ ನಿರ್ಮಾಣ
- ಎಲ್ಲವೂ ಅಂದುಕೊಂಡಂತೆ ನಡೆದುದರ ಪರಿಣಾಮ ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣ ಕಾರ್ಯ 1537ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆಯೊಂದಿಗೆ ಶುರುವಾಗುತ್ತದೆ. ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸುತ್ತಾರೆ.
- ಅರ್ಚಕರು ನಿರ್ಧರಿಸಿದಂಥ ಶುಭಕಾಲದಲ್ಲಿ ಈಗಿನ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಲ್ಲಿ ನಾಲ್ಕು ನೇಗಿಲಿಗೆ ಆರು ಕಟ್ಟಿ ತಯಾರಾಗಿ ನಿಂತಿದ್ದ ನಾಲ್ವರು ರೈತರನ್ನೂ ನಾಲ್ಕು ದಿಕ್ಕಿಗೆ ಸಾಗುವಂತೆ ತಿಳಿಸಿದರು. ಎತ್ತುಗಳು ನಿಂತ ಜಾಗವೇ ಎಲ್ಲೆಯೆಂದು ತಿಳಿದುಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಮತ್ತು ದಕ್ಷಿಣದಲ್ಲಿ ಆನೆಕಲ್ (ಸಿಟಿ ಮಾರುಕಟ್ಟೆ) ಬಾಗಿಲವರೆಗೆ ಈ ಎತ್ತುಗಳು ಸಾಗಿ ನಿಂತವು ಅಲ್ಲೆಲ್ಲ ಗುರುತಿಗಾಗಿ ಕಲ್ಲುಗಳನ್ನು ನೆಡಲಾಯಿತು. ಈ *ಜಾಗಗಳಲ್ಲಿ ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಕೋಟೆಯ ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ದೇವಾಲಯಗಳಲ್ಲಿ ಪ್ರತಿದಿನವೂ ಪೂಜೆಗಳು ನಡೆಯುತ್ತಿರಬೇಕು ಮತ್ತು ಒಂಬತ್ತು ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು, ಗೌಡರ ಇಚ್ಛೆಯಂತೆ ಕೋಟೆಗೆ ನಾಲ್ಕು ಮಹಾದ್ವಾರಗಳನ್ನೂ, ಐದು ಕಿರಿ ದ್ವಾರಗಳನ್ನು ನಿರ್ಮಿಸಲಾಯಿತು. ಮತ್ತು ರಕ್ಷಣೆಗಾಗಿ ಕೆಲ ರಹಸ್ಯ ದ್ವಾರಗಳನ್ನು ಇಡಲಾಯಿತು.
ನಾಲ್ಕು ಮಹಾದ್ವಾರಗಳು
- ಪೂರ್ವಕ್ಕೆ ಹಲಸೂರು ದ್ವಾರ
- ಪಶ್ಚಿಮಕ್ಕೆ ಸೊಂಡೆಕೊಪ್ಪದ ದ್ವಾರ
- ಉತ್ತರಕ್ಕೆ ಯಲಹಂಕದ ದ್ವಾರ
- ದಕ್ಷಿಣಕ್ಕೆ ಆನೆಕಲ್ ದ್ವಾರ
ಐದು ಕಿರಿ ದ್ವಾರಗಳು
- ವರ್ತೂರು ಬಾಗಿಲು
- ಸರ್ಜಾಪುರದ ಬಾಗಿಲು
- ಕೆಂಗೇರಿ ಬಾಗಿಲು
- ಯಶವಂತಪುರದ ಬಾಗಿಲು
- ಕಾನಕಾನಹಳ್ಳಿ(ಕನಕಪುರ) ಬಾಗಿಲು
ಅರಸರಿಂದ ಹಣಕಾಸಿನ ನೆರವು
- ಕೋಟೆಯ ನಿರ್ಮಾಣ ಕಾರ್ಯ ಸಾಗುತ್ತಿದ್ದಂತೆ ಅಂದರೆ, 1538ರಲ್ಲಿ ನಾಡಪ್ರಭುಗಳ ಅಮಾತ್ಯರಾಗಿದ್ದ ಗಿಡ್ಡೇಗೌಡರು ಸಿಹಿಸುದ್ದಿಯೊಂದನ್ನು ಹೊತ್ತು ತಂದಿದ್ದರು. ಅದರಂತೆ ವಿಜಯನಗರದ ಚಕ್ರವರ್ತಿ ಅಚ್ಯುತರಾಯರು 1532ರಲ್ಲಿ ಕೆಂಪೇಗೌಡರಿಗೆ ಅಮರನಾಯಕತನಕ್ಕೆ ನೀಡಿದ್ದ ಹನ್ನೆರಡು ಹೋಬಳಿಗಳಿಂದ ಸಂಗ್ರಹವಾಗುವ ಕಂದಾಯವನ್ನು ಯಲಹಂಕ ನಾಡಿನ ಶ್ರೇಯೋಭಿವೃದ್ದಿಯ ನಿಟ್ಟಿನಲ್ಲಿ ರಾಜಧಾನಿ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದರು.
- ಆಗಿನ ಕಾಲಕ್ಕೆ ಈ ಹನ್ನೆರಡು ಹೋಬಳಿಗಳಿಂದ 30,000 ಪಗೋಡಗಳಷ್ಟು ಹಣ ಕಂದಾಯದ ರೂಪದಲ್ಲಿ ಬರುತ್ತಿತ್ತು. ಈ ಹಣದಿಂದಾಗಿ ಕೆಂಪೇಗೌಡರ ಕನಸಿನ ನಗರದ ಕೋಟೆ-ಪೇಟೆಗಳ ನಿರ್ಮಾಣ ಕಾರ್ಯಕ್ಕೆ ಯಾವ ಅಡೆತಡೆಯೂ ಉಂಟಾಗಲಿಲ್ಲ.ssss
ಲಕ್ಷ್ಮಿದೇವಿಯ ಬಲಿದಾನ
- ಕೋಟೆಯು ನಿರ್ಮಾಣವಾಗುತ್ತಿದ್ದ ಸಂಧರ್ಭದಲ್ಲಿ ನಡೆದ ಬಲಿದಾನದ ಕಥೆಯೊಂದು ಬೆಂಗಳೂರಿನ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಲಕ್ಷ್ಮಿದೇವಿ ಕೆಂಪೇಗೌಡರ ಮಗ ಸೋಮಣ್ಣ ಗೌಡರ (ದೊಡ್ಡವೀರಪ್ಪಗೌಡರು) ಯವರ ಪತ್ನಿ. ಕೆಂಪೇಗೌಡರು ಬೃಹತ್ ಕೋಟೆ ಕಟ್ಟುತಿರುವ ಸಂದರ್ಭದಲ್ಲಿ ದಕ್ಷಿಣದ ಹೆಬ್ಬಾಗಿಲಿನ ಕಂಬ ಪದೇ ಪದೇ ಎಷ್ಟು ಕಟ್ಟಿದರು ಕುಸಿದು ಬೀಳುತ್ತಿತ್ತು .
- ರಾಜಧಾನಿಯ ಬೆಂಗಳೂರು ನಗರದ ಕೋಟೆಯ ನಿರ್ಮಾಣದ ಕಾರ್ಯ ಭರದಿಂದ ಸಾಗಿದ್ದ ಸಮಯವದು. ದಕ್ಷಿಣದ ಬಾಗಿಲನ್ನು ನಿಲ್ಲಿಸಲು ಮುಹೂರ್ತ ನಿಗದಿಯಾಗಿರುತ್ತದೆ. ಅದರಂತೆ ಅರ್ಚಕರು ಬಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಂಬಗಳನ್ನು ನಿಲ್ಲಿಸಿದ ನಂತರ ಎಲ್ಲರೂ ಸೇರಿ ಭೈರವೇಶ್ವರನನ್ನು ನೆನೆಯುತ್ತಾ ದೈತ್ಯಾಕಾರದ ಬಾಗಿಲುಗಳನ್ನು ನಿಲ್ಲಿಸುತ್ತಾರೆ. ಬಾಗಿಲು ನಿಲ್ಲಿಸುವ ವೇಳೆಗೆ ಸಂಜೆಯಾಗುವ ಕಾರಣ ದಣಿದಿದ್ದ ಕೆಲಸಗಾರರು ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ.
- ಗೌಡರೂ ಸಹ ಬಾಗಿಲು ನಿಂತ ಸಂಭ್ರಮದಲ್ಲಿ ಅರಮನೆಗೆ ಹಿಂದಿರುಗಿ ಮನೆ ಮಂದಿಯ ಜೊತೆ ಸಂತಸ ಹಂಚಿಕೊಳ್ಳುತ್ತಾರೆ. ಆದರೆ ಮರುದಿನ ಬೆಳಿಗ್ಗೆ ದೂತರು ಓಡಿಬಂದು ಬಾಗಿಲು ಬಿದ್ದು ಹೋಗಿರುವ ಸುದ್ದಿಯನ್ನು ಗೌಡರಿಗೆ ಮುಟ್ಟಿಸುತ್ತಾರೆ. ಒದಗಿದ ವಿಘ್ನವನ್ನು ಕಂಡು ಹೌಹಾರಿದ ಗೌಡರು ಸ್ಥಳಕ್ಕೆ ಬಂದು ಎಲ್ಲವನ್ನು ಪರಿಶೀಲಿಸುತ್ತಾರೆ. ಕೆಲಸಗಾರರು ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೂ ಬಾಗಿಲು ಬಿದ್ದಿರುವುದನ್ನು ನೋಡುತ್ತಾರೆ.
- ಎದೆಗುಂದದೆ ಎಲ್ಲರಿಗೂ ಹುರುಪು ತುಂಬಿ ಮತ್ತೆ ಬಾಗಿಲನ್ನು ಯಥಾಪ್ರಕಾರ ನಿಲ್ಲಿಸಿ ಅರಮನೆಯನ್ನು ತಲುಪುತ್ತಾರೆ. ಆದರೂ ಮತ್ತೆಲ್ಲಿ ಬಾಗಿಲು ಬಿದ್ದು ತಮ್ಮ ವಿರುದ್ದ ಕತ್ತಿ ಮಸೆಯುತ್ತಿದ್ದ ನೆರೆಯ ಸಾಮಂತರ ಅಪಹಾಸ್ಯಕ್ಕೆ ತುತ್ತಾಗುತ್ತೇನೋ ಎಂಬ ಅಂಜಿಕೆಯೂ ಗೌಡರನ್ನು ಕಾಡುತ್ತಿರುತ್ತದೆ. ಇದರಿಂದಾಗಿ ರಾತ್ರಿಯೆಲ್ಲ ನಿದ್ರಿಸದೆ ಕಾಲ ಕಳೆಯುವ ಗೌಡರಿಗೆ ಮರುದಿನ ಅದೇ ದುರ್ವಾರ್ತೆ ಬಂದಪ್ಪಳಿಸುತ್ತದೆ.
- ಇದರಿಂದ ದಿಗ್ಭ್ರಾಂತಗೊಂಡು ಜ್ಯೋತಿಷಿಗಳ ಬಳಿ ಹೋಗುವ ಗೌಡರಿಗೆ ಇದು ಭೂತದ ಚೇಷ್ಟೆಯೆಂದೂ ಇದರ ಶಮನಕ್ಕಾಗಿ ತುಂಬುಗರ್ಭಿಣಿಯೊಬ್ಬಳ ಬಲಿಯ ಅವಶ್ಯಕೆತೆಯಿದೆಯೆಂಬುದು ತಿಳಿಯುತ್ತದೆ. ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಗೌಡರಿಗೆ ಈ ವಿಚಾರ ನುಂಗಲಾರದ ತುತ್ತಾಗುತ್ತದೆ. ಗರ್ಭಿಣಿಯನ್ನು ಬಲಿ ನೀಡುವುದು ಸಾಧ್ಯವಿಲ್ಲವೆಂದು ನಿರ್ಧರಿಸುತ್ತಾರೆ. ಪ್ರತಿ ದಿನ ಬಾಗಿಲನ್ನು ನಿಲ್ಲಿಸಿ ಬರುವುದು. ಬೆಳಿಗ್ಗೆಯ ವೇಳೆಗೆ ಬೀಳುವುದು ಇದೇ ಪುನರಾವರ್ತನೆಯಾಗತೊಡಗುತ್ತದೆ.
- ಇದರಿಂದಾಗಿ ಗೌಡರಿಗೆ ತಮ್ಮ ಜೀವಮಾನದ ಕನಸಾಗಿದ್ದ ರಾಜಧಾನಿಯ ನಿರ್ಮಾಣಕ್ಕೆ ಎದುರಾದ ವಿಘ್ನವನ್ನು ತಡೆಯಲು ಸಾಧ್ಯವಿಲ್ಲವಲ್ಲ ಎಂಬ ಕೊರಗು ದಿನೇ ದಿನೇ ಹೆಚ್ಚಾಗುತ್ತದೆ. ಎಷ್ಟು ಬಾರಿ ನಿಲ್ಲಿಸಿದರು ಮತ್ತೆ ಮತ್ತೆ ಬೀಳುತ್ತಿದ್ದ ಕಂಬದ ಬಗ್ಗೆ ತೀವ್ರ ಚಿಂತೆಗೆ ಒಳಗಾಗಿದ್ದ ಗೌಡರು ಆಸ್ಥಾನದ ಪುರೋಹಿತರನ್ನು ಸಂಪರ್ಕಿಸಿದಾಗ ಅವರು ಕೊಟ್ಟ ಸಲಹೆ ತುಂಬು ಗರ್ಭಿಣಿಯ ಬಲಿಯಾಗಿತ್ತು. ಗೌಡರು ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು.
- ಇದನ್ನೆಲ್ಲ ಗಮನಿಸುತ್ತಿದ್ದ ಸೊಸೆ ಲಕ್ಷ್ಮಿದೇವಿ ಮಾವನವರ ಕೊರಗನ್ನು ಕಂಡು ತಾನೇ ಬಲಿದಾನ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ. ಒಂದು ರಾತ್ರಿ ಯಾರಿಗೂ ತಿಳಿಯದಂತೆ ಕೋಟೆಯ ಬಾಗಿಲ ಬಳಿ ಹೋಗಿ ಮನೆ ದೇವರನ್ನು ನೆನೆದು ಕೋಟೆಯ ಬಾಗಿಲು ನಿಲ್ಲಲೆಂದು ಪ್ರಾರ್ಥಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತಾಳೆ. ಗೌಡರ ಸೊಸೆ ಲಕ್ಷ್ಮಮ್ಮ ತನ್ನ ಮಾವನ ಯಾತನೆಯನ್ನು ಕೇಳಲಾರದೆ ತಮ್ಮ ಪ್ರಾಣವನ್ನು ಅರ್ಪಿಸುವ ನಿರ್ಧಾರ ಮಾಡಿಯೇ ಬಿಟ್ಟರು.
- ಅಂತೆಯೇ ಅದೇ ದಿನ ಕಡು ಕತ್ತಲಿನಲ್ಲಿ ಯಾರಿಗೂ ತಿಳಿಯದಂತೆ ಕುಡುಗೋಲಿನಿಂದ ತಮ್ಮ ಜೀವದಾನ ಮಾಡಿದರು. ಮಾರನೇ ದಿನ ಕೋಟೆಯ ದ್ವಾರ ಬೀಳದೆ ಇದ್ದದ್ದನ್ನು ಕಂಡು ಆಶ್ಚರ್ಯಚಕಿತರಾದರು ಮತ್ತು ಸೊಸೆಯ ಹೆಣವನ್ನು ಮಗ್ಗುಲಲ್ಲಿ ಕಂಡು ಸಂಕಟಪಟ್ಟುಕೊಂಡರು. ಮರುದಿನ ಕೋಟೆಯ ಬಾಗಿಲು ನಿಂತಿರುವುದನ್ನು ದೂರದಿಂದಲೇ ಕಂಡು ಸಂಭ್ರಮಿಸುವ ಗೌಡರಿಗೆ ಅಲ್ಲಿ ನಿಂತಿದ್ದ ಅಪಾರ ಜನರನ್ನು ಕಂಡು ದುಗುಡ ಹೆಚ್ಚುತ್ತದೆ. ಅಲ್ಲಿಯೇ ಇದ್ದ ದೂತರು ನಡೆದಿರುವ ಘಟನೆಯ ವರದಿ ನೀಡುತ್ತಾರೆ. * ತಮ್ಮ ಸೊಸೆಯೇ ಕೋಟೆಗಾಗಿ ಸ್ವತಃ ಜೀವ ತೆತ್ತಿರುವುದನ್ನು ಕೇಳಿ ಮಾತು ಬರದವರಾಗುತ್ತಾರೆ. ಮಗಳ ಹಾಗೆ ಮನೆಯನ್ನು ಬೆಳಗುತ್ತಿದ್ದ ಜೀವ ನನ್ನ ಹಿತಕ್ಕಾಗಿ ಬಲಿಯಾಯಿತಲ್ಲ ಎಂದು ರೋಧಿಸುತ್ತಾರೆ.ಪರಿವಾರದವರ ಆಕ್ರಂದನ ಮುಗಿಲು ಮುಟ್ಟುತ್ತದೆ. ಗಂಡನ ಮನೆಯ ಗೌರವವನ್ನು ಉಳಿಸುವ ಸಲುವಾಗಿ ತನ್ನನ್ನೇ ಸಮರ್ಪಿಸಿಕೊಂಡ ಲಕ್ಷ್ಮೀದೇವಿಯ ತ್ಯಾಗವು ನಾಡಿನೆಲ್ಲೆಡೆ ಹಬ್ಬುತ್ತದೆ.
- ಬೀಗರ ಬಯಕೆಯಂತೆ ಆಕೆಯ ದೇಹವನ್ನು ಆಕೆಯ ತವರೂರಾದ ಕೋರಮಂಗಲದಲ್ಲೇ ಸಕಲ ವಿಧಿ-ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಮುಂದೆ ಮಹಾರಾಣಿಯಾಗಿ ಜೀವನ ನಡೆಸಬೇಕಿದ್ದ ಲಕ್ಷ್ಮಿದೇವಿಯು ನಾಡಿನ ಪ್ರಜೆಗಳ ಹಿತಕ್ಕಾಗಿ ಬಲಿದಾನ ಮಾಡಿದ ಸ್ಮರಣಾರ್ಥ ಆಕೆಯ ಸಮಾಧಿ ಸ್ಥಳದಲ್ಲೇ ನಾಡಪ್ರಭುಗಳು ಲಕ್ಷ್ಮೀದೇವಿಯ ಗುಡಿಯನ್ನು ನಿರ್ಮಿಸುತ್ತಾರೆ.
- ನಗರದ ಭಾಗ್ಯಲಕ್ಷ್ಮಿಯಾಗಿ ಹಸಿದು ಬಂದವರಿಗೆ ಅನ್ನ ನೀರು ನೀಡುತ್ತಾ ಹರಸುವಂತೆ ಬೇಡಿಕೊಳ್ಳುತ್ತಾರೆ. ನಗರದಲ್ಲಿ ಎಲ್ಲೇ ಶುಭಕಾರ್ಯಗಳು ಜರುಗಲಿ ಮೊದಲು ‘ಲಕ್ಷ್ಮಿದೇವಿಯ ಗುಡಿ’ಗೆ ಪೂಜೆಯನ್ನು ಸಲ್ಲಿಸಿ ನಂತರ ಮುಂದುವರೆಯಬೇಕೆಂದು ಪ್ರಜೆಗಳಲ್ಲಿ ಮನವಿ ಮಾಡಿಕೊಳ್ಳುತ್ತಾರೆ.ಕೋರಮಂಗಲದ ಬಳಿ ಲಕ್ಷ್ಮಮ್ಮ ನವರ ದೇವಾಲಯವಿದೆ ಹಾಗೂ ಸ್ಮಾರಕ ಸ್ಥಳವಿದೆ.
- ಬೆಂಗಳೂರು ನಗರ ನಿರ್ಮಾಣಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದರೆನ್ನಲಾಗುವ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿಯ ಪ್ರತಿಮೆ ಏಪ್ರಿಲ್ 11 ರಂದು ಬೆಂಗಳೂರಿನ ಮಹಾನಗರ ಪಾಲಿಕೆಯ ಮುಂದೆ ಪ್ರತಿಷ್ಠಾಪನೆಯಾಗಲಿದೆ. ದಂತಕಥೆಯಾಗಿದ್ದ ಲಕ್ಷ್ಮೀದೇವಿಯನ್ನು ಬೆಂಗಳೂರಿನ ಮೇಯರ್ ಜಿ ಪದ್ಮಾವತಿಯವರು ಪಾಲಿಕೆಯ ಮುಂದೆ ಪ್ರತಿಷ್ಠಾಪಿಸುವುದರ ಮೂಲಕ ಆಕೆಯ ತ್ಯಾಗ-ಬಲಿದಾನವನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಅಂದ ಹಾಗೆ ಪ್ರತಿಮೆಯ ಶಿಲ್ಪಿ ಜಗದೀಶ್.
ಪೇಟೆಗಳ ನಿರ್ಮಾಣ
- ರಾಜಧಾನಿಯ ಕೋಟೆ ನಿರ್ಮಾಣದ ಜೊತೆಗೆ ಕೆಂಪೇಗೌಡರು ಸುಮಾರು 64 ಪೇಟೆಗಳನ್ನು ನಿರ್ಮಿಸಿದರೆಂದು ತಿಳಿದುಬರುತ್ತದೆ. ಇವುಗಳಲ್ಲಿ 54 ಪೇಟೆಗಳ ಹೆಸರುಗಳು ಮಾತ್ರ ಇತಿಹಾಸಕಾರರಿಗೆ ಲಭ್ಯವಾಗಿವೆ. ಪೇಟೆಯ ಹೆಸರುಗಳನ್ನಾಧರಿಸಿ ಗೌಡರು ನಿರ್ಮಿಸಿದ ಪೇಟೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳೆಂದರೆ-
- ವೃತ್ತಿಯಾಧಾರಿತ ಪೇಟೆಗಳು
- ಜಾತಿ ಅಥವಾ ವ್ಯಕ್ತಿಯಾಧಾರಿತ ಪೇಟೆಗಳು
- ಸುಮಾರು 500 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರು ನಿರ್ಮಿಸಿದ ಈ ಎಲ್ಲಾ ಪೇಟೆಗಳು ಇಂದಿಗೂ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ವಾಣಿಜ್ಯ ವ್ಯವಹಾರದ ದೃಷ್ಠಿಯಿಂದ ಭಾರಿ ಮಹತ್ವವನ್ನೊಂದಿವೆ.
- ನಗರವು ಗಡಿಗಳನ್ನು ಮೀರಿ ಬೆಳೆಯುತ್ತಿದ್ದರೂ ನಗರದ ಆದಾಯದ ಸಿಂಹಪಾಲು ಈ ಪೇಟೆಗಳಿಂದ ಬರುತ್ತಿರುವುದು ವಿಶೇಷ. ಗೌಡರು ತಾವು ನಿರ್ಮಿಸಿದ ಪೇಟೆಯ ಬೀದಿಗಳಲ್ಲಿ ವಿವಿಧ ಕಸುಬಿನ ಜನರಿಗೆ ಸೌಕರ್ಯ ಒದಗಿಸಿಕೊಟ್ಟು ಆ ಜನರ ಕುಲದೇವತೆಗಳ ದೇವಾಲಯಗಳನ್ನು ನಿರ್ಮಿಸಿಕೊಟ್ಟರು.
- ಕೆಂಪೇಗೌಡರು ಅನ್ಯ ಜಾತಿಯ ಧರ್ಮಿಯರಿಗೆ ಕಟ್ಟಿದ ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್ಪೇಟೆ, ಬಿನ್ನಿಪೇಟೆಗಳು, ಉದ್ಯಾನಗಳು, ಕೆರೆಗಳು, ನಗರದ ಯೋಜನೆಗಳು ಇದಕ್ಕೆ ಸಾಕ್ಷಿ.
ಕೆಂಪೇಗೌಡರು ಕಟ್ಟಿಸಿದ ಕೆರೆಗಳು
- ಕೆಂಪೇಗೌಡರೂ ಸಹ ತಂದೆಯವರಂತೆ ಕೃಷಿ ಮತ್ತು ಗೃಹ ಬಳಕೆಗೆ ಸಂಬಂಧಿಸಿದಂತೆ ನೀರಿನ ಪೂರೈಕೆ ವಿಷಯದಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಇನ್ನು ನಗರ ನಿರ್ಮಾಣಕ್ಕೆ ನಿಂತ ಮೇಲೆ ನೀರಿನ ಸಮರ್ಪಕ ಸರಬರಾಜು ಅಗತ್ಯವೆಂಬ ಅರಿವು ನಾಡಪ್ರಭುಗಳಿಗಿತ್ತು. ಇದರಿಂದಾಗಿಯೇ ಕೆಂಪೇಗೌಡರು ಸುಭದ್ರವಾದ ರಾಜಧಾನಿಯ ನಿರ್ಮಾಣದ ಜೊತೆಗೆ ಬೆಂಗಳೂರು ಸೇರಿದಂತೆ ನಾಡಿನ ತುಂಬಾ ಹಲವು ಕೆರೆ ಕಟ್ಟೆಗಳನ್ನೂ ನಿರ್ಮಿಸಿದರು.
- ನಾಡಿನ ಇತಿಹಾಸದಲ್ಲಿ ಯಾವುದೇ ಸ್ವತಂತ್ರ ರಾಜರೂ ಸಹ ತಮ್ಮ ಅವಧಿಯಲ್ಲಿ ಇಷ್ಟು ಕೆರೆಗಳನ್ನು ಕಟ್ಟಿಸಿರುವುದು ಕಂಡುಬರುವುದಿಲ್ಲ ಎಂಬುದು ಇವರ ಹೆಗ್ಗಳಿಕೆ.
ಕಟ್ಟಿಸಿದ ಕೆರೆಗಳು
l.ಕೆಂಪಾಂಬುಧಿ ಕೆರೆ, 2.ಧರ್ಮಾಂಬುಧಿ ಕೆರೆ. 3.ಸಂಪಂಗಿರಾಮ ಕೆರೆ, 4.ಚೆನ್ನಮ್ಮನ ಕೆರೆ, 5.ಕಾರಂಜಿ ಕೆರೆ, 6.ಹಲಸೂರು ಕೆರೆ, 7.ಕೆಂಪಾಪುರ ಅಗ್ರಹಾರ ಕೆರೆ, 8.ಸಿದ್ದಿಕಟ್ಟೆ ಕೆರೆ, 9.ಗಿಡ್ಡಪ್ಪನ ಕೆರೆ ಮುಂತಾದವುಗಳು. 10.ಬೆಣ್ಣೆ ಹೊನ್ನಮ್ಮನ ಕೆರೆ (ಕಲ್ಲುದೇವನ ಹಳ್ಳಿ,)
11.ಬೆಣ್ಣೆ ಹೊನ್ನಮ್ಮನ ಕರೆ (ಕರಿಗೌಡನದೊಡ್ಡಿ) 12.ಅಂದಲ ಕೆರೆ (ಅಂದಲ ಎಂದರೆ ಒಡ್ಡರು ಅಥವ ಭೋವಿ ಎಂದರ್ತ) 13.ಗುಲಗಂಜಿ ಕೆರೆ 14.ಹೊಂಬಾಳಮ್ಮನ ಕೆರೆ 15.ಮತ್ತಿಕೆರೆ ಈ ಕೆರೆಗಳ ಪೈಕಿ ಸುಮಾರು ಅಭಿವೃದ್ಧಿಯ ಹೆಸರಿನಲ್ಲಿ ಕಾಣದಂತಾಗಿವೆ ಹಾಗೆಯೇ ಸುಮಾರು ಕೆರೆಗಳನ್ನು ಗ್ರಾಮೀಣ ಪ್ರದೇಶದ ಜನರಿಗಾಗಿ ಕುಡಿಯುವ ನೀರಿಗಾಗಿ ...... ನಿರ್ಮಿಸಲಾಗಿದೆ
ಕಲ್ಯಾಣಿಗಳು
ಕೃಷಿ ಕೆಲಸಗಳಿಗೆ ಮತ್ತು ಕುಡಿಯುವ ನೀರಿಗಾಗಿ ತಮ್ಮ ಆಳ್ವಿಕೆಗೆ ಒಳಪಟ್ಟ್ಟ ಬಹುತೇಕ ಎಲ್ಲ ಹಳ್ಳಿಗಳ ಸುತ್ತ ಮುತ್ತ ಕೆರೆ-ಕಟ್ಟೆ ಮತ್ತು ಬಾವಿಗಳನ್ನು ಕಟ್ಟಿಸಿದ್ದರೆಂಬುದು ನಿಜವೇ. ಅಂತೆಯೇ ನೀರಿನ ಸಂಗ್ರಹಣೆ ಮಾಡಿ ಧಾರ್ಮಿಕ ಕಾರ್ಯಗಳಿಗೆ ನೆರವಾಗಲೆಂದು ನಾಡಿನಲ್ಲಿದ್ದ ದೇವಾಲಯ ಗಳ ಬಳಿಯಲ್ಲೆಲ್ಲ ಒಂದರಂತೆ ಸುಮಾರು ನೂರಕ್ಕೂ ಹೆಚ್ಚು ಕಲ್ಯಾಣಿಗಳನ್ನೂ ನಿರ್ಮಿಸಿದ್ದರು. ಅವುಗಳಲ್ಲಿ ಅಣ್ಣಮ್ಮ ದೇವಾಲಯದ ಹತ್ತಿರವಿದ್ದ ಕಲ್ಯಾಣಿ, ಚಿಕ್ಕ ಲಾಲ್‍ಬಾಗ್, ಚಿಕ್ಕಪೇಟೆ, ಸಿದ್ದಿಕಟ್ಟೆ, ಸಂಪಂಗಿನಗರ ಮುಂತಾದ ಪ್ರದ ಪ್ರದೇಶಗಳಲ್ಲಿದ್ದ ಕಲ್ಯಾಣಿಗಳು ಪ್ರಸಿದ್ದವಾಗಿದ್ದವು.
ರಸ್ತೆಯ ಬದಿ ಮರ ಗಿಡಗಳು
- ರಸ್ತೆಗಳು ಜನರನ್ನು ಸದಾ ತಮ್ಮ ಸಂಪರ್ಕದಲ್ಲಿರಿಸುವ ಮೂಲಕ ಮತ್ತಷ್ಟು ಜನಸೇವೆಗೆ ಅನುವು ಮಾಡಿಕೊಡುತ್ತವೆ ಮತ್ತು ಪ್ರಜೆಗಳ ನಡುವಿನ ಸಂಬಂಧಗಳನ್ನು ಬೆಸೆಯುತ್ತವೆ ಎಂಬುದನ್ನು ನಾಡಪ್ರಭುಗಳು ಅರಿತಿದ್ದರು. ತಾವೇ ಸ್ವತಃ ಆಗಾಗ ರಸ್ತೆಗಳಲ್ಲಿ ಸಂಚರಿಸುತ್ತಾ ಜನತೆಗೆ ಕಳ್ಳಕಾಕರ ಭಯವಿರದಂತೆ ನೋಡಿಕೊಳ್ಳುತ್ತಿದ್ದರು. ಒಬ್ಬ ಅರಸರಿಗಿಂತ ಕಡಿಮೆಯಿಲ್ಲದ ಜನೋಪಯೋಗಿ ಕಾರ್ಯಗಳನ್ನು ಮಾಡಿದ ಕೆಂಪೇಗೌಡರು ತಮ್ಮ ಅವಧಿಯಲ್ಲಿ ನಾಡಿನಲ್ಲಿದ್ದ ಬಹುತೇಕ ಎಲ್ಲ ರಸ್ತೆಗಳ ಎರಡೂ ಬದಿಗಳಲ್ಲಿ ಸಾಲುಮರಗಳನ್ನು ನೆಡೆಸಿದ್ದರು.
- ಇವುಗಳಲ್ಲಿ ಬಹುಪಾಲು ಹೊಗೆಯ ಮರಗಳಾಗಿದ್ದು ಉಳಿದಂತೆ ಹಣ್ಣುಗಳನ್ನು ನೀಡುವಂತವಾಗಿದ್ದವು. ಹೊಂಗೆಯ ಮರಗಳು ತಂಪಾದ ನೆರಳನ್ನು ನೀಡುವುದರ ಜೊತೆಗೆ ಆಗಿನ ಕಾಲಕ್ಕೆ ದೀಪಗಳನ್ನು ಉರಿಸಲು ಅಗತ್ಯವಾಗಿದ್ದ ಹೊಂಗೆ ಎಣ್ಣೆಯನ್ನು ತಯಾರಿಸಲು ಉಪಯೋಗವಾಗು ತ್ತಿದ್ದವು. ತಲೆಯ ಮೇಲೆ ಹೊರೆ ಹೊತ್ತು ಸಾಗುತ್ತಿದ್ದ ಹಳ್ಳಿಯ ಮಂದಿಗೆ ದಣಿವಾರಿಸಿಕೊಳ್ಳಲು ನೆರವಾಗುವಂತೆ ದಾರಿಯ ಮಧ್ಯೆ ಅಲ್ಲಲ್ಲಿ ಹೊರೆಗಲ್ಲುಗಳನ್ನು ಹಾಕಿಸಿದ್ದರು ಮತ್ತು ವಿಶ್ರಾಂತಿಗಾಗಿ ಇಂತಿಷ್ಟು ದೂರದ ನಡುವೆ ತಂಗುದಾಣಗಳನ್ನೂ ನಿರ್ಮಿಸಿದ್ದರು.
ಉದ್ಯಾನಗಳು
- ನಾಡಪ್ರಭುಗಳು ರಸ್ತೆಯ ಬದಿ ಸಾಲುಮರಗಳನ್ನು ನೆಡಿಸಲು ತೊಡಗಿದರೆಂದಾಗಲೇ ಅವರ ಪರಿಸರ ಪ್ರೇಮ ಎಷ್ಟಿತ್ತು ಎಂಬುದು ತಿಳಿದುಬರುತ್ತದೆ. ಹೂ, ಹಣ್ಣಿನ ತೋಟಗಳನ್ನೂ ಬೆಳೆಸಲು ಉತ್ತೇಜನ ನೀಡುವುದರ ಜೊತೆಗೆ ನಗರದ ಪ್ರಜೆಗಳ ವಿಶ್ರಾಂತಿಗೆಂದು ಉದ್ಯಾನಗಳನ್ನೂ ನಿರ್ಮಿಸಿದ್ದರು. ಹೀಗಾಗಿ ಅಂದಿನ ಕಾಲಕ್ಕೆ ಬೆಂಗಳೂರಿನ ಕೋಟೆಯ ಹೊರಭಾಗದಲ್ಲಿ 4 ರಾಜೋದ್ಯಾನಗಳನ್ನು ನಿರ್ಮಿಸಿದ್ದರು.
- ಈಗಿನ ಲಾಲ್ ಬಾಗ್ ಎಂದು ಕರೆಸಿಕೊಳ್ಳುವ ಪ್ರದೇಶದಲ್ಲಿ ಕೆರೆಯೊಂದನ್ನು ಅಭಿವೃದ್ದಿಪಡಿಸಿ ಕೆರೆಯ ಪಕ್ಕದಲ್ಲಿ ವಿವಿಧ ರೀತಿಯ ಮಾವಿನ ಸಸಿಗಳಿರುವ ಮಾವಿನ ತೋಪುಗಳನ್ನು ಮಾಡಿಸಿದ್ದರು. ಇವುಗಳ ನಿರ್ವಹಣೆಗೆಂದೇ ತೋಟಗಾರಿಕೆಯಲ್ಲಿ ಪ್ರವೀಣರಾಗಿದ್ದ ಪಳ್ಳಿಗಳೆಂಬ ತಿಗಳ ಸಮುದಾಯದವರನ್ನು ಕರೆತಂದು ಆಶ್ರಯ ನೀಡಿದ್ದರು.
ಆಡಳಿತ ನಿರ್ವಹಣೆ
- ನಾಡಿನ ನಿರ್ವಹಣೆಗೆಂದು ನಾಡಪ್ರಭುಗಳ ಆಸ್ಥಾನದಲ್ಲಿ ಎಂಟು ಜನ ಮಂತ್ರಿಗಳಿದ್ದರು. ತಮ್ಮ ನಾಡಿನ ಯಾವುದೇ ಮೂಲೆಯಲ್ಲಿ ಏನೇ ಸಂಭವಿಸಿದರೂ ವರದಿ ತರಿಸಿಕೊಂಡು ಆ ಊರಿನ ಹಿರಿಯರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಗ್ರಾಮಗಳಲ್ಲಿ ಸುಲಲಿತವಾಗಿ ಆಡಳಿತ ನಡೆಸಲು ಅನುಕೂಲವಾಗುವಂತೆ ಕೂಟ ಅಥವಾ ಗ್ರಾಮ ಪಂಚಾಯತಿ ವ್ಯವಸ್ಥೆ ತರಲಾಗಿತ್ತು.
- ಸಾಮಾಜಿಕ ವ್ಯವಹಾರಗಳನ್ನು ವಿಚಾರಿಸುವುದು, ತೆರಿಗೆ ವಸೂಲಾತಿ, ಕೆರೆ-ಕಟ್ಟೆ, ರಸ್ತೆಗಳ ದುರಸ್ತಿ ಕಾರ್ಯ, ದೇವಾಲಯಗಳ ಉಸ್ತುವಾರಿ, ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಇತ್ಯಾದಿಗಳು ಗ್ರಾಮ ಪಂಚಾಯ್ತಿಗಳ ಕಾರ್ಯಗಳಾಗಿದ್ದವು. ಆಗಿನ ಕಾಲಕ್ಕಾಗಲೇ ಆಡಳಿತ ವಿಕೇಂದ್ರಿಕರಣ ಗೊಂಡಿದ್ದರ ಪರಿಣಾಮವಾಗಿ ಶ್ಯಾನುಭೋಗ, ಪಟೇಲ, ಜೋಯಿಸ, ಬಡಗಿ, ಕಮ್ಮಾರ, ನಾಯಿಂದ, ತೋಟಿ, ತಳವಾರ, ನೀರುಗಂಟಿ, ಅಕ್ಕಸಾಲೆ, ಕುಂಬಾರ ಕಾರ್ಯ ವಿಭಾಗಗಳಿದ್ದವು. ತಮ್ಮಂದಿರಲ್ಲೊಬ್ಬರಾದ ಬಸವಯ್ಯರನ್ನು ರಾಮಗಿರಿಯ ಉಸ್ತುವಾರಿಗೂ ಮತ್ತು ಕೆಂಪಸೋಮಯ್ಯ ನವರನ್ನು ಶಿವಗಂಗೆಯನ್ನು ನೋಡಿಕೊಳ್ಳಲೆಂದು ನೇಮಿಸಿದ್ದರು.
ತೆರಿಗೆಗಳು
- ನಾಡಪ್ರಭುಗಳ ಕಾಲದಲ್ಲಿ ವಿಜಯನಗರದ ಇತರ ಸಂಸ್ಥಾನಗಳಂತೆ ಇಲ್ಲೂ ಕೂಡ ಅನೇಕ ರೀತಿಯ ತೆರಿಗೆಗಳು ಚಾಲ್ತಿಯಲ್ಲಿದ್ದವು. ಅವುಗಳಲ್ಲಿ ಪ್ರಮುಖವಾಗಿ ಮನೆ ತೆರಿಗೆ, ದನದ ಸುಂಕ, ಅಂಗಡಿ ಸುಂಕ, ಮಗ್ಗದ ತೆರಿಗೆ ಹೀಗೆ ಆದಾಯವನ್ನು ಗಮನದಲ್ಲಿಟ್ಟುಕೊಂಡು ಸುಂಕ ವಿಧಿಸಲಾಗುತ್ತಿತ್ತು. ಸಕಾಲಕ್ಕೆ ಇವುಗಳನ್ನು ವಸೂಲು ಮಾಡಲೆಂದು ಶ್ಯಾನುಭೋಗ, ಪಟೇಲ ಮತ್ತು ಕೋಲುಕಾರರನ್ನು ನೇಮಿಸಲಾಗಿತ್ತು.
- ಇವುಗಳಿಂದ ಬರುತ್ತಿದ್ದ ಬಹುಪಾಲು ಭಾಗ ಹಣವು ವಿಜಯನಗರÀದ ಅರಸರಿಗೆ ಮತು ಸೈನ್ಯದ ಖರ್ಚಿಗೆ ಬಳಸಲಾಗುತ್ತಿತ್ತು. ಕೆಂಪೇಗೌಡರ ಸೈನಿಕರಲ್ಲಿ ಬಹುತೇಕರು ರೈತರೇ ಆಗಿದ್ದು ಯುದ್ದಕಾಲದಲ್ಲಿ ಶಸ್ತ್ರಸನ್ನದ್ದರಾಗಿ ಬಂದು ಸೇರುತ್ತಿದ್ದರು. ಉಳಿದ ತೆರಿಗೆಯ ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.
ದೇವಾಲಯಗಳ ನಿರ್ಮಾಣ
- ಸನಾತನ ಹಿಂದೂ ಸಂಸ್ಕೃತಿಯ ಉಳಿವಿಗಾಗಿಯೇ ಸ್ಥಾಪನೆಯಾಗಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ತಮ್ಮ ಪೂರ್ವಿಕರಂತೆಯೇ ಮಹಾ ದೈವ ಭಕ್ತರಾಗಿದ್ದು ದೇವಾಲಯಗಳ ನಿರ್ಮಾಣ, ಹಳೆಯ ದೇವಾಲಯಗಳ ಜೀರ್ಣೋದ್ದಾರ ಕಾರ್ಯಗಳು, ಅರ್ಚಕರ ಜೀವನೋಪಾಯಕ್ಕಾಗಿ ಜಮೀನು ನೀಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.
- ಸ್ವತಃ ಭೈರವೇಶ್ವರನ ಪರಮಭಕ್ತರಾಗಿದ್ದ ಗೌಡರು ನಿರ್ಮಿಸಿರುವ ಶಿವನ ದೇವಾಲಯಗಳು ಬೆಂಗಳೂರಿನ ಸುತ್ತಮುತ್ತ ಹಲವಾರು ಇರುವುದನ್ನು ಕಾಣಬಹುದಾಗಿದೆ. ಜಾತ್ಯಾತೀತ ರಾಜರಾಗಿದ್ದ ಕೆಂಪೇಗೌಡರು ಮತ್ತು ಅವರ ವಂಶಸ್ಥರು ಜಾತಿಮತ ಭೇದವೆಣಿಸದೆ ಎಲ್ಲ ವರ್ಗದ ಜನರಿಗೂ ತಮಗಿಷ್ಟವಾದ ದೇವಾಲಯಗಳನ್ನು ನಿರ್ಮಿಸಲು ಸಹಾಯ ಮಾಡಿದ್ದರು ಎಂಬುದಕ್ಕೆ ನಿದರ್ಶನಗಳು ಸಾಕಷ್ಟಿವೆ.
ಅವರು ನಿರ್ಮಿಸಿದ ಮತ್ತು ಅಭಿವೃದ್ದಿಪಡಿಸಿದ ದೇವಾಲಯಗಳು
- ರಾಜಧಾನಿ ಬೆಂಗಳೂರಿನ ಕೋಟೆಯ ನಿರ್ಮಾಣದ ಸಮಯದಲ್ಲಿ ಕೋಟೆಯ ಒಳಗೆ ಬಸವೇಶ್ವರ ಗುಡಿಯನ್ನು ಕಟ್ಟಿಸಿದರು. ಕೋಟೆಯ ಉತ್ತರ ದ್ವಾರದ ಹತ್ತಿರ ವಿನಾಯಕನ ಗುಡಿ ಮತ್ತು ಆಂಜನೇಯನ ಗುಡಿಗಳನ್ನೂ ಮತ್ತು ದಕ್ಷಿಣ ದಿಕ್ಕಿನ ಕಾರಂಜಿ ಕೆರೆಯ ದಡದಲ್ಲಿ ಬೃಹದಾಕಾರದ ದೊಡ್ಡ ಗಣಪತಿ, ಆಂಜನೇಯ ಮತ್ತು ಬಸವನ ವಿಗ್ರಹಗಳನ್ನು ಕೆತ್ತಿಸಿದರು. ಇದರಿಂದಾಗಿಯೇ ಇಲ್ಲಿ
- ದೊಡ್ಡ ಬಸವನಗುಡಿ,
- ಆಂಜನೇಯನ ಗುಡಿ ಮತ್ತು
- ಗಣಪತಿ ದೇವಾಲಯಗಳು ನಿರ್ಮಾಣವಾದವು.ಮುಂದೆ
- ದೊಡ್ಡ ಬಸವನಗುಡಿ,
- ಗವಿಗಂಗಾಧರೇಶ್ವರ ಗುಹಾಂತರ ದೇವಾಲಯದ ಅಭಿವೃದ್ದಿ,
- ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯದ ಅಭಿವೃದ್ದಿ,
- ನಗರ ದೇವತೆ ಅಣ್ಣಮ್ಮ ಮತ್ತು
- ಶಿವಗಂಗೆಯ ಅಭಿವೃದ್ದಿ ಕಾರ್ಯಗಳು ಪ್ರಮುಖವಾದವು.
ಶಿವಗಂಗೆಯ ಅಭಿವೃದ್ದಿ
- ದೇವರಸಗೌಡನ ಕಾಲಕ್ಕೆ ಹೆಸರು ಮಾಡಿದ್ದ ಶಿವಗಂಗೆಯ ಬೆಟ್ಟದ ಮೇಲಿಂದ ಹೊಯ್ಸಳ ದೊರೆ ಬಿಟ್ಟಿದೇವನ (ವಿಷ್ಣುವರ್ಧನ) ಪತ್ನಿ ಶಾಂತಲೆಯು ಬಿದ್ದಳೆಂಬ ಐತಿಹ್ಯವಿದೆ. ಆದರೂ ಆಗಿನ ಕಾಲದಲ್ಲಿ ಬೆಟ್ಟವನ್ನೇರುವುದು ಬಹಳ ಪ್ರಯಾಸಕರವಾಗಿತ್ತು. 1550ರಲ್ಲಿ ಕೆಂಪೇಗೌಡರು ಶಿವಗಂಗೆಯನ್ನು ವಶಪಡಿಸಿಕೊಳ್ಳುತ್ತಾರೆ. ಇಲ್ಲಿನ ಕುಂದುಕೊರತೆಗಳತ್ತ ಗಮನ ಹರಿಸುವ ಗೌಡರು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ.
- ಯಾತ್ರಾರ್ಥಿಗಳು ಬೆಟ್ಟದ ತುದಿಗೆ ಸುಗಮವಾಗಿ ಹತ್ತಲು ನೆರವಾಗುವಂತೆ ಕಡಿದಾದ ಕಲ್ಲಿನ ಬಂಡೆಗಳ ಮೇಲೆ ಮೆಟ್ಟಿಲುಗಳನ್ನು ಕಡೆಸುತ್ತಾರೆ. ಈ ಮೆಟ್ಟಿಲುಗಳು ಶಿವಗಂಗೆಯಿಂದ ಕಾಶಿಗೆ ಎಷ್ಟು ಮೈಲು ದೂರವಿತ್ತೋ ಅಷ್ಟು ಸಂಖ್ಯೆಯ ಮೆಟ್ಟಿಲುಗಳನ್ನು ನಿರ್ಮಿಸಿ ಭಕ್ತರಿಂದ ಪ್ರಶಂಸೆಗೊಳಗಾಗುತ್ತಾರೆ. ಕೆಂಪೇಗೌಡರ ಖಜಾನೆಯೂ ಇಲ್ಲಿತ್ತು ಮತ್ತು ಖಜಾನೆಯ ಉಸ್ತುವಾರಿಯನ್ನು ತಮ್ಮ ಸಹೋದರನಾದ ಬಸವೇಗೌಡರಿಗೆ ವಹಿಸಿದ್ದರು.
ಕೋಟೆಗಳು
- ಸುಭದ್ರ ರಾಜಧಾನಿಯ ನಿರ್ಮಾಣದ ಜೊತೆ ಜೊತೆಗೆ ನಾಡಿನ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಗಳನ್ನು ಕಟ್ಟಿಸಿ ಸೈನಿಕರನ್ನು ನಿಯೋಜಿಸಿದರು. ಸೈನಿಕರ ಕುಟುಂಬದವರಿಗೆಂದೇ ಕೋಟೆಗಳ ಸಮೀಪದಲ್ಲಿಯೇ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಕೋಟೆಗಳ ನಿರ್ಮಾಣಕ್ಕೆ ಹತ್ತಿರದಲ್ಲೇ ದೊರೆಯುತ್ತಿದ್ದ ಕಲ್ಲು ಮತ್ತು ಮಣ್ಣಿನ ಇಟ್ಟಿಗೆಗಳನ್ನು ಬಳಸಿ ತ್ವರಿತಗತಿಯಲ್ಲಿ ಕಟ್ಟಲಾಯಿತು. ಅವುಗಳಲ್ಲಿ ಕೆಲವನ್ನು ಹಿರಿಯಕೆಂಪೇಗೌಡರ ನಂತರದ ಪೀಳಿಗೆಯವರು ತಮ್ಮ ಕಾಲದಲ್ಲಿ ಅಭಿವೃದ್ದಿ ಪಡಿಸುತ್ತಾ ಹೋದರು.
- ಹೀಗಾಗಿ ಇಂದಿಗೂ ಕೆಂಪೇಗೌಡರ ಕಾಲದ ಏಳು ಪ್ರಮುಖ ಕೋಟೆಗಳು ಪ್ರಮುಖವಾಗಿವೆ. ಅವೆಂದರೆ-
- ಬೆಂಗಳೂರಿನ ಕೋಟೆ
- ಮಾಗಡಿ ಕೋಟೆ
- ಸಾವನದುರ್ಗ ಕೋಟೆ ಮತ್ತು ನೆಲಪಟ್ಟಣ
- ಹುತ್ರಿದುರ್ಗದ ಏಳು ಸುತ್ತಿನ ಕೋಟೆ
- ಹುಲಿಯೂರುದುರ್ಗದ ಕೋಟೆ
- ಕುದೂರಿನ ಭೈರವನದುರ್ಗದ ಕೋಟೆ
- ರಾಮನಗರದ ರಾಮದುರ್ಗ ಕೋಟೆ
ಕೆಂಪೇಗೌಡರ ಬಂಧನ
ಅಳಿಯ ರಾಮರಾಯ ಮತ್ತು ಅರಸ ಸದಾಶಿವರಾಯರ ಸಂವಹನದ ಕೊರತೆಯಿದ್ದ ಸಂಧರ್ಭದಲ್ಲಿ ನೆರೆಯ ಸಾಮಂತರ ಕುತಂತ್ರದಿಂದಾಗಿ ಭೈರವನಾಣ್ಯವನ್ನು ಠಂಕಿಸಿದರೆಂಬ ಆರೋಪದ ಮೇಲೆ ಸುಮಾರು ಐದು ವರ್ಷಗಳ ಕಾಲ ಆನೆಗೊಂದಿಯ ಸೆರೆಮನೆಯಲ್ಲಿ ಬಂಧಿಯಾಗುವ ಗೌಡರು ವಾಸ್ತವಾಂಶ ತಿಳಿದು ಅರಸರು ಬಿಡುಗಡೆ ಮಾಡುವ ವೇಳೆಗೆ ವಿಜಯನಗರದ ಪತನ ಸನ್ನಿಹಿತವಾಗಿರುತ್ತದೆ.
1565ರ ತಾಳಿಕೋಟೆ ಯುದ್ದದಲ್ಲಿ ಕೆಂಪೇಗೌಡರ ಸೈನ್ಯ
ಕೆಂಪೇಗೌಡರ ಪುತ್ರರಾದಿಯಾಗಿ ಸುಮಾರು 2000ದಷ್ಟು ಸೈನಿಕರು ವಿಜಯನಗರದ ಪರವಾಗಿ ತಾಳಿಕೋಟೆಯ ಯುದ್ದದಲ್ಲಿ ಭಾಗವಹಿಸಿದ್ದರುಎಂದು ಹೇಳಲಾಗುತ್ತದೆ. ಆದರೆ ವಿಜಯನಗರವು ದಖನ್ನಿನ ಸುಲ್ತಾನರಿಂದ ನಿರ್ನಾಮವಾಗಿದ್ದು ಜೊತೆಗೆ ಬಂಧುಗಳು,ಸೈನಿಕರು ಈ ಯುದ್ದದಲ್ಲಿ ಸಾವನ್ನಪ್ಪಿದ್ದು ಕೆಂಪೇಗೌಡರ ಮನಸ್ಸಿನಲ್ಲಿ ಅಳಿಸಲಾರದ ನೋವನ್ನುಂಟುಮಾಡುತ್ತದೆ.
ಕೆಂಪೇಗೌಡರ ಮರಣ ಮತ್ತು ವೀರ ಸಮಾಧಿಯ ಹಿನ್ನೆಲೆ
ವಿಜಯನಗರದ ಪತನಾನಂತರ ಯಲಹಂಕ ನಾಡಿನ ಮೇಲೆ ಶತ್ರುಗಳು ದಂಡೆತ್ತಿ ಬರಬಹುದೆಂದು ಶಂಕಿಸಿ ಸುತ್ತಲ ಕೋಟೆ ಕೊತ್ತಲಗಳಲ್ಲಿ ಪಹರೆಯನ್ನು ಬಿಗಿಗೊಳಿಸಲು ಮಾಗಡಿ, ಹುತ್ರಿದುರ್ಗ, ಹುಲಿಯೂರುದುರ್ಗ ಮತ್ತು ಶಿವಗಂಗೆಗಳಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ. ಹೀಗಿರುವಾಗ ಕುಣಿಗಲ್ ನಿಂದ ಬರುವಾಗ ಮಾಗಡಿಗೆ ಸಮೀಪದ ಕೆಂಪಾಪುರ(ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಮತ್ತು ಕೆಂಚನ ಹಳ್ಳಿ ನಡುವೆ ಇರುವ ಗ್ರಾಮ-ಕೆಂಪೇಗೌಡರ ಸಮಾಧಿ ಸ್ಥಳವೆಂಬ ಕಾರಣಕ್ಕೆ ಕೆಂಪಾಪುರ ಎಂಬ ಹೆಸರು ಬರಲು ಕಾರಣವಾಗಿಹುದು.)ಎಂಬಲ್ಲಿ ನಡೆದ ಭೀಕರ ಯುದ್ದದಲ್ಲಿ ಮಡಿದರೆಂಬುದು ತಿಳಿದುಬರುತ್ತದೆ(ಕಾಲ ಸುಮಾರು 1569-70). ಅವರು ಮಡಿದ ಸ್ಥಳದಲ್ಲಿ ಪುತ್ರ ಇಮ್ಮಡಿ ಕೆಂಪೇಗೌಡರು ತಂದೆಯವರ ಸ್ಮರಣಾರ್ಥ ವೀರ ಸಮಾಧಿ ಗೋಪುರವನ್ನು ನಿರ್ಮಿಸಿ ಪಕ್ಕದಲ್ಲಿ ಬಸವಣ್ಣನ ದೇವಾಲಯವನ್ನು ನಿರ್ಮಿಸಿರುತ್ತಾರೆ.ಆದರೆ ಸುಮಾರು 4 ಶತಮಾನಗಳ ಕಾಲ ಅಜ್ಞಾತವಾಗಿದ್ದ ಈ ವೀರ ಸಮಾಧಿಯು ದಿನಾಂಕ: 07/03/2015ರಂದು ಕೆಂಪೇಗೌಡರ ಇತಿಹಾಸದ ಕುರಿತು ಅಧ್ಯಯನ ನಡೆಸುತ್ತಿದ್ದ ಮರೂರು ಗ್ರಾಮದ ಪ್ರಶಾಂತರವರಿಗೆ ಕಂಡುಬಂದಿರುತ್ತದೆ. ಈ ಗೋಪುರ ಮತ್ತು ಗೋಪುರದ ಮೇಲಿದ್ದ "ಪಿರಿಯ ಕೆಂಪೆಯಗಉಡರಯ್ಯನವರು ಕುಣಿಗಿಲಿಂದ ಬಂದು ಯಿಬಳಿ ಜಗಳವನು ಮಾಡಿ ಅಯಿಕ್ಯವಾಗಿ ಕೈಲಾಸಕೆ ಪೋದ ಸ್ಥಳ" ಎಂಬ ಶಾಸನದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕೆಗಳಿಗೆ ಕಳುಹಿಸುವ ಮೂಲಕ ಇತಿಹಾಸಕಾರರುಗಳ ಗಮನ ಸೆಳೆಯುತ್ತಾರೆ. ಇದಕ್ಕೆ ಸ್ಪಂದಿಸಿದ ಕರ್ನಾಟಕ ಇತಿಹಾಸ ಅಕಾಡೆಮಿ ಇದು ಕೆಂಪೇಗೌಡರ ಸಮಾಧಿಯೆಂದು ಸ್ಪಷ್ಟಿಕರಿಸಿರುತ್ತವೆ. ಸೆಪ್ಟೆಂಬರ್ 3ರಂದು ವಿಜಯವಾಣಿಯ ರಾಮನಗರ ಆವೃತ್ತಿಯಲ್ಲಿ ಮತ್ತು ಸೆಪ್ಟೆಂಬರ್ 9ರಂದು Bangalore Mirror ಪತ್ರಿಕೆಯಲ್ಲಿ ಮೊದಲ ಬಾರಿಗೆ ವರದಿಗಳು ಪ್ರಕಟವಾದವು. ಬಿಬಿಎಂಪಿಯ ಮೇಯರ್ ರವರ ಆದೇಶದ ಮೆರೆಗೆ ದಿನಾಂಕ 31/10/2015ರಂದು ಬೆಂಗಳೂರು ವಿವಿಯ ಕೆಂ.ಮಾ.ಅಧ್ಯಯನ ಸಮಿತಿಯು ಇದು ಕೆಂಪೇಗೌಡರ ವೀರ ಸಮಾಧಿ ಎಂದು
ಇವನ್ನೂ ನೋಡಿ
ಉಲ್ಲೇಖಗಳು