ಕುಮಾರ ಕಕ್ಕಯ್ಯ ಪೋಳ

ಶ್ರೀ ಬಿ.ಎಸ್‌. ಪೋಳರು ಕುಮಾರ ಕಕ್ಕಯ್ಯ ಪೋಳ ಎಂಬ ಕಾವ್ಯನಾಮದಿಂದ ಅನೇಕ ದಲಿತ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಾಂದಕವಠೆಯಲ್ಲಿ ಸಾಯಬಣ್ಣ – ರಾಯವ್ವ ದಂಪತಿಗಳಿಗೆ ದಿನಾಂಕ ೨೮.೦೭.೧೯೨೬ ರಂದು ಭೀಮರಾವ್‌ ಪೋಳ ಏಕೈಕ ಗಂಡು ಮಗುವಾಗಿ ಜನಿಸಿದರು.

ಸಾಹಿತ್ಯ

ಬದಲಾಯಿಸಿ

ಕುಮಾರ ಕಕ್ಕಯ್ಯ ಪೋಳ ಅವರ ಕೆಲವು ಕವನಸಂಕಲನಗಳು:

  • ಮೂಕ ಮಾತನಾಡಿದಾಗ

ಅಸ್ಪೃಶ್ಯತೆ

ಬದಲಾಯಿಸಿ

“ಶರಣ ಕುಮಾರ ಕಕ್ಕಯ್ಯ ಪೋಳ ಹತ್ತು ಹನ್ನೆರಡು ವರುಷದ ಬಾಲಕನಾಗಿದ್ದಾಗ. ಕ್ರಿ.ಶ. ೧೯೪೧ ರಲ್ಲಿ ನಡೆದ ಒಂದು ಭಯಾನಕ ಘಟನೆ, ಆತನನ್ನು ಸಂಪೂರ್ಣವಾಗಿ ನಾಸ್ತಿಕನನ್ನಾಗಿಸಿತು. ಮಹಾತ್ಮಾ ಗಾಂಧೀಜಿಯವರು ‘ಹರಿಜನೋದ್ಧಾರ, ಅಸ್ಪೃಶ್ಯತಾ ನಿವಾರಣೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಮುಸಲ್ಮಾನರು ತಮಗಾಗಿ ಸ್ವತಂತ್ರ, ದೇಶ ‘ಪಾಕಿಸ್ತಾನ’ದ ಬೇಡಿಕೆ ಇಟ್ಟಿದ್ದಂತೆ ದಕ್ಷಿಣ ಭಾರತದ ದಲಿತರು ‘ದ್ರಾವಿಡ ಸ್ಥಾನ’ ಬೇಕೆಂದು ಹಟ ಹಿಡಿದಾಗ ‘ದಲಿತ ಜನರ ಕಣ್ಣೊರೆಸಲು ಆಗಿನ ನೇತಾರರಿಂದ ಒಂದು ದೊಡ್ಡ ನಾಟಕವೇ ನಡೆದು ಹೋಯಿತು’ ಎಂದು ಈ ಪ್ರಸಂಗ ದಾಖಲಿಸಿದ್ದಾರೆ.

ಸರಕಾರದ ಪರವಾಗಿ ಆ ಸಂದರ್ಭದಲ್ಲಿ ಚಾಂದಕವಠೆಗೆ ಬಂದಿದ್ದ ಪೋಲೀಸರು, ಅಸ್ಪೃಶ್ಯತಾ ನಿವಾರಣೆ ಸಲುವಾಗಿ ಬಸವಣ್ಣ ದೇವರ ಗುಡಿಯ ಪಕ್ಕದಲ್ಲಿರುವ ನೀರನ್ನು ಹೊಕ್ಕು ತುಂಬುವ ಬಾವಿಯ ಮೆಟ್ಟಿಲು ಹತ್ತಿರ ‘ಈ ಬಾವಿಯು ಸಾರ್ವಜನಿಕರ ಉಪಯೋಗಕ್ಕಾಗಿ’ ಎಂದು ಬೋರ್ಡ್ ಹಾಕಿದರು. ಅಲ್ಲಿಯೇ ಊರಿನ ಜನರನ್ನು ಸಭೆ ಸೇರಿಸಿ ಅಸ್ಪೃಶ್ಯೋದ್ಧಾರ, ದಲಿತೋದ್ಧಾರದ ಬಗ್ಗೆ ಕಾರ್ಯಕರ್ತರಿಂದ ಭಾಷಣ ಮಾಡಿಸಿ, ‘ಹರಿಜನರಿಗಾಗಿ ಬೇರೆ ದ್ರಾವಿಡ ಸ್ಥಾನ ಬೇಡ, ಅವರೂ ಈ ಸನಾತನ ದೇಶದ ಪ್ರಜೆಗಳೇ ಇದ್ದಾರೆ. ಎಲ್ಲರೂ ಕೂಡಿಯೇ ಬಾಳಬೇಕು’ ಎಂದು ಹೇಳಿದರು. ಇಲ್ಲಿ ಯಾರಾದರೂ ಹರಿಜನರು ಇದ್ದರೆ ಬರಬೇಕು ಎಂದು ಸಭೆಯಲ್ಲಿದ್ದವರು ಕೂಗಿದರು. ಸಭೆಯ ಈ ಮಾತುಗಳನ್ನು ದೂರದ ಗುಡಿಸಲು ಮುಂದೆ ಕುಳಿತು ಕೇಳುತ್ತಿದ್ದ ಅಜ್ಜ ತುಳಜಾರಾಮನ ಮಗ ಶಂಕರನನ್ನು ಒತ್ತಾಯದಿಂದ ಪೋಲೀಸರು ಕರೆತಂದರು. ಆತನು ಒಲ್ಲೆ ಒಲ್ಲೆನೆಂದು ಕೊಸರಾಡಿದರೂ ಸಹ ಬಿಟ್ಟು ಬಿಡದೇ ಪೊಲೀಸರು, ತಾವೇ ತಂದಿದ್ದ ಒಂದು ಖಾಲಿ ಕೊಡ ಇವರ ಕೈಯಲ್ಲಿ ಕೊಟ್ಟು ಒತ್ತಾಯ ಮಾಡಿ ಬಾವಿಯೊಳಗೆ ಕರೆದೊಯ್ದು ನೀರು ಮುಟ್ಟಿಸಿ ಕೊಡ ತುಂಬಿಸಿ ಮೇಲೆ ಕರೆದುಕೊಂಡು ಬಂದರು. ಇಂದಿನಿಂದ ಹರಿಜನರೂ ಸಹ ಉಳಿದ ಕುಲಜರಂತೆ ಸಾರ್ವಜನಿಕವಾಗಿ ಕೆರೆ ಹಳ್ಳ ಬಾವಿಗಳನ್ನು ಬಳಸಬೇಕು ಎಂದು ಭಾಷಣ ಬಿಗಿದು ಫೋಟೊ ತೆಗೆಸಿಕೊಂಡು ಹೋದರು.

ಪೊಲೀಸರು ಹಾಗೂ ಗಾಂಧೀಜಿ ಅನುಯಾಯಿ ಕಾರ್ಯಕರ್ತರು ಅತ್ತ, ಹೋದಕೂಡಲೇ ಇತ್ತ ಕುಲಜರು ಶಂಕರನನ್ನು (ಕುಮಾರ ಕಕ್ಕಯ್ಯ ಪೋಳ ಅವರ ಸೋದರ ಮಾವನನ್ನು) ಗುಡಿಯ ಪೌಳಿಯ ಅಂಗಳದಲ್ಲಿ ಕಟ್ಟಿ ಒದ್ದುದ್ದಲ್ಲದೆ ದನಕ್ಕೆ ಬಡಿದಂತೆ ಬಡಿದರು. ಆಗ ಅಜ್ಜ ತುಳಜಾರಾಮನು ‘ತಪ್ಪಾಯಿತು, ನಮ್ಮ ಮಗ ತಿಳಿಯದ ಹುಡುಗ, ಪೊಲೀಸರ ಒತ್ತಾಯಕ್ಕೆ ಬಾವಿ ಮುಟ್ಯಾನ, ಕ್ಷಮಿಸಬೇಕು’ ಎಂದು ಅಂಗಲಾಚಿ ಸೆರೆಗೊಡ್ಡಿ ಗೋಗರೆದು ಕೊಂಡರೂ ಬಿಡದೆ, ಹೊಡೆದು ಹಣ್ಣಗಾಯಿ ನೀರಿಗಾಯಿ ಮಾಡಿದ್ದಲ್ಲದೆ ಪೋಳ ಅವರ ಅಜ್ಜನಿಂದ ಆ ಕಾಲದಲ್ಲಿ ಹದಿನೈದು ರೂಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿಕೊಂಡರು.

ಹನ್ನರಡನೆಯ ಶತಮಾನದಲ್ಲಿ ಯಾವ ಬಸವಣ್ಣ ‘ಬೊಪ್ಪಾನು ನಮ್ಮ ಡೋಹರ ಕಕ್ಕಯ್ಯ’ ಎಂದು ಅಪ್ಪಿ ಕುಣಿದಾಡಿದ್ದನೋ ಅದೇ ಬಸವಣ್ಣ ದೇವರ ಗುಡಿ ಅಂಗಳದಲ್ಲಿ ಅದೇ ಡೋಹರ ಜನಾಂಗದ ಹುಡುಗ ಶಂಕರನಿಗೆ ಇಂತಹ ಹಿಂಸೆ? ಇದನ್ನು ಕಂಡು ಮಾನಸಿಕ ಅಘಾತವಾದ ಬಾಲಕ ಭೀಮನು “ದೇವರು ಎಲ್ಲಿದ್ದಾನೆ? ದೇವರ ಇದ್ದರೆ ಹೀಗೆಲ್ಲ ಆಗುತ್ತಿತ್ತೇ? ಧರ್ಮ – ದೇವರು ಎಲ್ಲಾ ಬರೀ ಸುಳ್ಳು” ಎಂದು ನಿರ್ಧರಿಸಿ, ಸಂಪೂರ್ಣ ನಾಸ್ತಿಕತೆಯೆಡೆಗೆ ತಿರುಗಿದನು.

ವಿದ್ಯಾಭ್ಯಾಸ

ಬದಲಾಯಿಸಿ

ತಮ್ಮ ಮನೆಯಲ್ಲಿ ಜರುಗಿದ ಈ ದುರ್ಘಟನೆ, ಅಂದಿನ ಕಾಲದ ಸಮಾಜದ ಕ್ರೂರ ಮುಖ ಕಂಡು, ಊರು ತೊರೆದ ಬಾಲಕ ಭೀಮನು ಹೆಚ್ಚಿನ ವಿದ್ಯಾಭ್ಯಾಸ ಮಾಡಲೇಬೇಕೆಂಭ ಛಲ ಹೊತ್ತು ಸಿಂದಗಿಗೆ ಬಂದು ಅಲ್ಲಿ ಧರ್ಮಾರ್ಥ ಬೊರ್ಡಿಂಗ್‌ಸೇರಿ, ೫.೬.೭ನೆಯ ಕ್ಲಾಸಿನವರೆಗೆ ಅಭ್ಯಾಸ ಮಾಡಿದನು. ಸ್ವತಃ ಅವರೇ ಮೂಕನ ಭಾಷಣ ಪ್ರಸ್ತಕದಲ್ಲಿ ಬರೆದುಕೊಂಡಿರುವಂತೆ ‘ಎಲ್ಲ ಹುಡುಗರೂ” ಮಠದ ಪಡಸಾಲೆಯಲ್ಲಿ ಕುಳಿತು ಊಟ ಮಾಡುತ್ತಿದ್ದರೆ, ನಾನು ಹೊರಗಿನ ಬೇವಿನ ಮರದ ಕೆಳಗೆ ನಾಯಿಯ ಹಾಗೆ ಕಾದು ಕುಳಿತು, ಹಾಕಿದಾಗ ತಿಂದು ಎದ್ದಿದ್ದೇನೆ’ ಇಂತಹ ಅವಮಾನಕರ ಹೀನ ನೋವು – ದುಃಖ ಅನುಭವಿಸುತ್ತಲೇ ಮುಲ್ಕಿ ಪರೀಕ್ಷೆಯಲ್ಲಿ ಕುಲಜರ ಹುಡುಗರಿಗಿಂತ ಹೆಚ್ಚು ಅಂಕ ಪಡೆದು ಉತ್ತಮ ದರ್ಜೆಯಲ್ಲಿ ಪಾಸಾದರು.

ಹೆಚ್ಚಿನ ವಿದ್ಯಾಭ್ಯಾಸ ಮಾಡಲೇಬೇಕೆಂಬ ಛಲಹೊತ್ತ ಭೀಮನು ಬಿಜಾಪುರಕ್ಕೆ ಬಂದು, ಅಲ್ಲಿ ದಲಿತ(ಹರಿಜನ) ವಿದ್ಯಾರ್ಥಿಗಳಿಗಾಗಿಯೇ ಇದ್ದ ಕಾಕಾ ಕಾರ್ಖಾನೀಸ್‌ರ ಬೋರ್ಡಿಂಗ್‌ದಲ್ಲಿ ಪ್ರವೇಶ ಪಡೆದು ಪಿ.ಡಿ.ಜೆ. ಹೈಸ್ಕೂಲಿಗೆ ಎಂಟನೇ ತರಗತಿಗೆ ಸೇರಿದರು. ಅಲ್ಲಿಯೂ ಬೆನ್ನು ಬಿಡದ ಜಾತಿಯ ಭೂತ ಕಾಡಿತು. ಹರಿಜನ ಹುಡುಗರಿಗಾಗಿ ಎಂಟನೇ ‘ಸಿ’ ಕ್ಲಾಸು ಮಾತ್ರ ಮೀಸಲಾಗಿತ್ತು. ಎಂಟನೆಯ ವರ್ಗ ಪಾಸಾಗಿ, ಅಲ್ಲಿಂದ ಶರಣ ಫ.ಗು. ಹಳಕಟ್ಟಿಯವರು ಸ್ಥಾಪಿಸಿದ್ದ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಸಿದ್ದೇಶ್ವರ ಹೈಸ್ಕೂಲ್‌ ಸೇರಿ, ೯ ಮತ್ತು ೧೦ನೇ ವರ್ಗಗಳನ್ನು ಕಲಿತರು. ‘ಸೆಕೆಂಡರಿ ಸ್ಕೂಲ್‌ಸರ್ಟಿಫಿಕೇಟ್‌ಎಕ್ಜಾಮಿನೇಶನ್‌ಬೋರ್ಡ್, ಬಾಂಬೆ’, ಮೂಲಕ ಮಾರ್ಚ್ ೧೯೫೧ ರಲ್ಲಿ ಎಸ್.ಎಸ್‌.ಸಿ ಪದವಿ ಪಡೆದರು.

ಪ್ರಾಥಮಿಕ ಶಾಲೆಯಲ್ಲಿ ದಾಖಲಾಗಿದ್ದ ಹೆಸರು ‘ಭೀಮ್ಯಾ ಸಾಯಿಬ್ಯಾ ಡ್ವಾರ’ ಎಂಬೋದು ಹೈಸ್ಕೂಲಿಗೆ ಬಂದ ನಂತರ ‘ಭೀಮಣ್ಣ ಸಾಯಬಣ್ಣ ಡೋರ’ ಎಂದು ಪರಿವರ್ತನೆಗೊಂಡಿತು (೧೯೫೧). ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೋಲಾಪುರದ ದಯಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಸೈನ್ಸ್‌ ತರಗತಿಗೆ ಹೆಸರು ಹಚ್ಚಿದರು. ಆರ್ಥಿಕ ತೊಂದರೆ, ಕಿತ್ತು ತಿನ್ನುವ ಕಡುಬಡತನದಿಂದಾಗಿ ಕಾಲೇಜು ಶಿಕ್ಷಣ ಪೂರ್ಣಗೊಳ್ಳಲಿಲ್ಲ.

ಮುಂದೆ ೪.೨.೧೯೫೨ ರಲ್ಲಿ ಬದಾಮಿ ಕೋರ್ಟ್‌‌ನಲ್ಲಿ ಅಫಿಡಾವಿಟ್‌ಮಾಡಿಸುವ ಮೂಲಕ ತಮ್ಮ ಹೆಸರನ್ನು ‘ಭಿಮರಾವ್‌ ಸಾಯಬಣ್ಣಾ ಪೋಳ’ ಎಂದು ಬದಲಿಸಿಕೊಂಡರು. ತಮ್ಮ ಪ್ರಾರಂಭದ ಸಾಹಿತ್ಯ ಕೃತಿಗಳಲ್ಲಿ ಬಿ.ಎಸ್‌.ಪೋಳ, ಚಾಂದಕವಠೆ, ಎಂದೇ ಉಲ್ಲೇಖಿಸಿದ್ದಾರೆ. ಅನಂತರ ಶರಣ ಸಾಹಿತ್ಯ ರಚನೆ, ಬಸವಧರ್ಮದ ಸತ್ಯ ಅರಿತು ‘ಕುಮಾರ ಕಕ್ಕಯ್ಯ ಪೋಳ’ ಆಗಿ ಶರಣರೂ ನೂತನ ವಚನಕಾರರೂ ಆದರು.

ವೃತ್ತಿ

ಬದಲಾಯಿಸಿ

ಶ್ರೀ ಬಿ.ಎಸ್‌. ಪೋಳ ಅವರು ೧೯೫೧ರಲ್ಲಿ ಎಸ್‌.ಎಸ್‌.ಸಿ. ಪಾಸಾದ ನಂತರ, ಪ್ರಥಮ ವರ್ಷದ ವಿಜ್ಞನ ಓದಲು ಆರ್ಥಿಕ ಅಡಚಣೆಯಿಂದ ಸಾಧ್ಯವಾಗದೇ ಹೋದಾಗ ಒಂದು ವರುಷ ಸೋಲಾಪುರದ ಆರೋಗ್ಯ ಇಲಾಖೆಯಲ್ಲಿ ಇನ್ಯಾಕುಲೇಟರ್ ಅಂದರೆ ‘ವ್ಯಾಕ್ಸಿನೇಶನ ಹಾಕುವ ಆರೋಗ್ಯ ಕಾರ್ಯಕರ್ತ’ ಎಂದು ಸೇವೆ ಸಲ್ಲಿಸಿದರು.

೧೯೫೬ರಲ್ಲಿ ಒಂಭತ್ತು ತಿಂಗಳು ಬಸವನ ಬಾಗೇವಾಡಿಯಲ್ಲಿ ಕಾರಕೂನರಾಗಿ ನೌಕರಿ ಮಾಡಿದರು. ೧೯೫೩ರಲ್ಲಿ ಚಾಂದಕವಠೆ ಹತ್ತಿರದ ನವಲಿ ನದಿಗೆ ರಾಮನಹಳ್ಳಿ ಬಳಿ ಕೆರೆ ನಿರ್ಮಾಣ ಕಾಲಕ್ಕೆ ಡಿಪಾರ್ಟಮೆಂಟನಲ್ಲಿ ದ್ವಿತೀಯ ದರ್ಜೆಯ ಕಾರನಕೂನರಾಗಿ (ಎಸ್‌.ಡಿ.ಸಿ) ಸೇವೆಗೆ ಸೇರಿದರು. ಬದಾಮಿಯಲ್ಲಿ (೧೯೫೪ – ೫೮) ಸೇವೆಸಲ್ಲಿಸಿ ಬಸವನ ಬಾಗೇವಾಡಿಗೆ ವರ್ಗವಾಗಿ ಬಂದು ಮೂರು ವರುಷ(೧೯೫೮ – ೬೧) ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಡೆದ ಜನಗಣತಿ ಕಾರ್ಯದಲ್ಲಿ ಅಚ್ಚುಕಟ್ಟಾಗಿ ಶ್ರಮಿಸಿ, ಬಿಜಾಪುರ ಜಿಲ್ಲೆಗೆ ‘ಶ್ರೇಷ್ಠ ಜನಗಣತಿ’ ಕಾರ್ಯನಿರ್ವಾಹಕ’ ಎಂದು ಪದಕ ಪಡೆದರು. ಅನಂತರ ೧೯೬೧ ರಿಂದ ೧೯೬೩ ರವರೆಗೆ ತಹಸೀಲ್ದಾರ ಕಛೇರಿಯಲ್ಲಿಯೇ ಕಾರ್ಯನಿರ್ವಹಿಸಿದರು.

೧೯೬೩ರಲ್ಲಿ ಜಮಖಂಡಿಗೆ ಪ್ರಥಮ ದರ್ಜೆ ಕಾರಕೂನರಾಗಿ (ಎಫ್‌.ಡಿ.ಸಿ) ಬಡ್ತಿ ಹೊಂದಿ ಬಂದು ೧೯೬೭ರ ವರೆಗೆ ಸೇವೆ ಸಲ್ಲಿಸಿದರು. ಅಲ್ಲಿಂದ (೧೯೬೭ – ೬೯ ರವರೆಗೆ) ಬಿಜಾಪುರ ನಗರಕ್ಕೆ ವರ್ಗವಾಗಿ ಬಂದು ಮೂರು ವರುಷ ಸೇವೆ, ಅನಂತರ ೧೯೬೯ ರಿಂದ ೧೯೭೧ ರ ವರೆಗೆ ಇಂಡಿಯಲ್ಲಿ ಸೇವೆ. ೧೯೬೯ ರಿಂದ ೧೯೭೧ರ ವರೆಗೆ ಮರಳಿ ವಿಜಾಪುರದಲ್ಲಿ ತಹಸೀಲ್ದಾರ ಮತ್ತು ಜಿಲ್ಲಾಧಿಕಾರಿ ಅಫೀಸಿನಲ್ಲಿ ಸೇವೆ ಸಲ್ಲಿಸಿದರು.

೧೯೭೫ರಲ್ಲಿ ಶಿರಸ್ತೇದಾರ ಆಗಿ ಬಡ್ತಿ ಹೊಂದಿ, ಬಸವನ ಬಾಗೇವಾಡಿಗೆ ಬಂದರು ಅಲ್ಲಿ ೧೯೭೮ರ ವರೆಗೆ ಸೇವೆ ಅಲ್ಲಿಂದಲೇ ತಹಸೀಲ್ದಾರ ಎಂದು ಬಡ್ತಿ ಹೊಂದಿ ಇಂಡಿಗೆ ಆಗಮಿಸಿದರು. ೧೯೭೮ರ ವರೆಗೆ ಇಂಡಿಯಲ್ಲಿ ತಹಸೀಲ್ದಾರರಾಗಿ ಒಳ್ಳೆಯ ಹೆಸರು ಗಳಿಸಿದರು. ಅಲ್ಲಿಂದ ಕಲಬುರ್ಗಿ ಜಿಲ್ಲೆಗೆ ವರ್ಗವಾಘಿ ಬಂದು, ಕಲಬುರ್ಗಿಯ ತಹಸೀಲ್ದಾರರಾಗಿ ೧೯೮೦ – ೧೯೮೨ರ ವರೆಗೆ ಸೇವೆ ಸಲ್ಲಿಸಿದರು.

ಈ ಸಮಯಕ್ಕಾಗಲೇ ಶ್ರೀ ಬಿ.ಎಸ್‌.ಪೋಳ ಅವರು ದಕ್ಷ ಆಡಳಿತಗಾರರೆಂದು, ಸಮಾಜ ಕಳಕಳಿಯ ಸಾಹಿತ್ಯ ಕ್ಷೇತ್ರದ ಲೇಖಕರೆಂದು ನಾಡಿನಾದ್ಯಂತ ಖ್ಯಾತಿ ಪಡೆದಿದ್ದರಿಂದ, ಇವರನ್ನು ಬಿಜಾಪುಜರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಮೀಸಲು ಮತ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಬೇಕೆಂದು ಅಂದಿನ ದಲಿತ ಮುಖಂಡರು ರಾಜಕೀಯಕ್ಕಿಳಿಸಲು ಪ್ರೇರೇಪಿಸಿದರು. ದಲಿತ ನಾಯಕರ ಒತ್ತಾಯ ರಾಜಕೀಯ, ಅಧಿಕಾರಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬ ಆಂತರಿಕ ತುಡಿತದಿಂದಾಗಿ ಇನ್ನೂ ನಾಲ್ಕಾರು ವರುಷ ಸೇವಾ ಅವಧಿ ಉಳಿದಿದ್ದರೂ ಕೂಡ, ೧೯೮೨ ರಲ್ಲಿ ಗುಲಬರ್ಗಾದ ತಹಸೀಲ್ದಾರ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ಆದರೆ ಮುಂದೆ ನಾಲ್ಕುರು ತಿಂಗಳಲ್ಲಿ ಜರುಗಿದ ರಾಜಕಾರಣಿಗಳ ತಂತ್ರಗಾರಿಕೆಯಿಂದಾಗಿ ಪಕ್ಷದ ಟಿಕೇಟು ಸಿಗದೇ ಹೋದಾಗ, ಇಂತಹ ತಂತ್ರ ಕುತಂತ್ರದ ರಾಜಕೀಯ ರಂಗದ ಬಗ್ಗೆ ಜಿಗುಪ್ಸೆ ತಾಳಿ, ಸಂಪೂರ್ಣವಾಗಿ ಬಸವ ಧರ್ಮ, ಬಸವ ಸಮಾಜ, ಬಸವ ಸಾಹಿತ್ಯ, ಬಸವ ಸಂಸ್ಕೃತಿ, ಬಸವ ತತ್ತ್ವದ ನಿಜಾಚರಣೆಗೆ ಕಟಿಬದ್ಧರಾಗಿ ಸಮಾಜೋ – ಧಾರ್ಮಿಕ ರಂಗದ ಕ್ರಾಂತಿಗೆ ದಿಟ್ಟ ಹೆಜ್ಜೆಯನ್ನಿಟ್ಟರು. ಕಲ್ಯಾಣನಾಡಿನ ಶರಣ ಪರಿಷತ್ತಿನಲ್ಲಿ ಒಳಬಂದು ಅದರ ಅಧ್ಯಕ್ಷರಾಗಿ ಅಪ್ರತಿಮ ಸೇವೆ ಸಲ್ಲಿಸುವಲ್ಲಿ ಅಣಿಯಾದರು.

ಬಿಜಾಪುರ ಜಿಲ್ಲೆ ಸ್ವಾತಂತ್ರ್ಯ ಪೂರ್ವದಲ್ಲಿ ಪೇಶ್ವೆಗಳ ಆಡಳಿತಕ್ಕೊಳಪಟ್ಟಿತ್ತು. ಆಕಾಲದಲ್ಲಿ ದಲಿತ ಮಹಿಳೆಯರು ಮೈ ತುಂಬ ಬಟ್ಟೆ ತೊಡುವಹಾಗಿರಲಿಲ್ಲ. ಬೆಳ್ಳಿ ಬಂಗಾರ ಮೈಮೇಲೆ ಹಾಕಿ – ಕೊಳ್ಳವಂತಿರಲಿಲ್ಲ. ಇದೇ ಪದ್ಧತಿ ಸ್ವಾತಂತ್ರ್ಯದ ಆಸುಪಾಸಿನಲ್ಲಿಯೂ ಚಾಲ್ತಿಯಲ್ಲಿತ್ತು ಅನ್ನುವುದಕ್ಕೆ ಈ ಮುಂದಿನ ಉದಾಹರಣೆ ಸಾಕ್ಷಿಯಾಗಿದೆ.

ಒಂದು ಸಲ ಕುಮಾರ ಕಕ್ಕಯ್ಯ ಪೋಳ ಅವರ ಅಜ್ಜಿ ಎಲ್ಲವ್ವಳು ಅಂಟಳಕಾಯಿ ನೆನೆ ಇಟ್ಟು, ಬುರುಗು ಮಾಡಿ, ತುಳಜಾರಾಮ ಅಜ್ಜನ ಬಿಳಿ ಅಂಗಿ ನೆನೆ ಇಟ್ಟು ತೊಳೆದು ಶುಭ್ರಮಾಡಿ ಒಣಗಿಸಿ ತೊಟ್ಟುಕೊಳ್ಳಲು ಕೊಟ್ಟಳು. ಆಗ ಅಜ್ಜ ಆ ಹೊಸ ಶುಭ್ರ ಅಂಗಿಯನ್ನು ಅಂಗಳದ ಧೂಳ ಮಣ್ಣಿನಲ್ಲಿ ಹೊರಳಾಡಿಸಿ ಹೊಲಸ ಮಾಡಿ ತೊಟ್ಟುಕೊಂಡದ್ದು, ಆ ಅಂಗಿ ಕೈಯಲ್ಲಿ ಹಿಡಿದು ಅಜ್ಜ ‘ಇಷ್ಟೊಂದು ಸ್ವಚ್ಛ ಬಿಳಿ ಅಂಗಿ ಉಟ್ಟಕೊಂಡದ್ದು ಊರಿನ ಮೇಲ್ಜಾತಿಯವರು ನೋಡಿದರೆ, ಈ ಡ್ವಾರಗ ಎಷ್ಟು ಸೊಕ್ಕ ಬಂದಾದ ನೋಡು’ ಎಂದು ಅಪಹಾಸ್ಯ ಮಾಡ್ತಾರ ಎಂಬ ಹೆದರಿಕೆಯಿಂದ ಹೀಗೆ ಮಾಡಿದ್ದು, ಈ ಪ್ರಸಂಗ ಬಾಲಕ ಭೀಮನ ಮನಸ್ಸಿನ ಮೇಲೆ ಪರಿಣಾಮ ಬೀರಿ, ಬಾಳಿನುದ್ದಕ್ಕೂ ಮರೆಯದಂತಾಯಿತು. ಮುಂದೆ ಜೀವನದುದ್ದಕ್ಕೂ ಸ್ವಚ್ಛ, ಶುಭ್ರ, ಉತ್ತಮ ಬಟ್ಟೆಗಳನ್ನು ತೊಟ್ಟು ಕುಲಜರ ಮುಂದೆ ಸ್ವಾಭಿಮಾನದಿಂದ ತಲೆ ಎತ್ತಿ ಬದುಕುವಂತಾಯಿತು” ಈ ತರಹದ ಅಮಾನವೀಯ ಘಟನೆಗಳು ಕಕ್ಕಯ್ಯ ಪೋಳ ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಸರಕಾರಿ ಕೆಲಸ ಸಿಕ್ಕಿತೆಂದು ಸುಮ್ಮನಿರದೆ ತನ್ನವರಿಗಾಗಿ ಚಿಂತಿಸುತ್ತ ಸಾಹಿತ್ಯ ರಚನೆಗೆ ತೊಡಗಿದರು. ಅವರು ರಚಿಸಿದ ಒಟ್ಟು ಕೃತಿಗಳು ಹದಿನಾಲ್ಕು, ಅವುಗಳ ಸಂಕ್ಷಿಪ್ತ ಪರಿಚಯದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮತ್ತು ಜೀವನ ಸಾಧನೆಯನ್ನು ಪರಿಚಯಿಸುವುದು ಪ್ರಸ್ತುತ ಕೃತಿಯ ಉದ್ದೇಶವಾಗಿದೆ.

ಕಥೆ ಕಾದಂಬರಿ

ಬದಲಾಯಿಸಿ

ಕುಮಾರ ಕಕ್ಕಯ್ಯ ಪೋಳ ಅವರು ವಿಚಾರ, ಸಾಮಾಜಿಕ ವಿಮರ್ಶೆ ಜೊತೆ – ಜೊತೆಗೆ ವಚನಗಳ ರಚನೆ ಹಾಗೂ ಒಂದು ಕಥಾಸಂಕಲನ ಎರಡು ಕಾದಂಬರಿಗಳನ್ನು ರಚನೆ ಮಾಡಿದ್ದಾರೆ. ಕಥಾ ಸಾಹಿತ್ಯದಲ್ಲಿ ಸಮಾಜದ ತೊಡರಿಗೆ ಧರ್ಮದ ಕಗ್ಗಂಟು’ ಕಥಾ ಸಂಕಲನವು ಒಂದಾಗಿದೆ. ಒಟ್ಟು ಹದಿನಾರು ಕಥೆಗಳನ್ನೊಳಗೊಂಡ ಸಂಕಲನ ಇದಾಗಿದೆ.ಸಾಹಿತ್ಯವು ಸಮಾಜದ ಬದುಕಿಗೆ ನೈಜತೆಯನ್ನು ತೆರೆದು ತೋರಿಸುವ ಕೈಗನ್ನಡಿಯಾಗಿರಬೇಕು. ಮೌಢ್ಯ, ಅಜ್ಞಾನ, ಗೊಡ್ಡು ಸಂಪ್ರದಾಯಗಳಿಂದ ಜಿಡ್ಡುಗಟ್ಟಿರುವ ಸಮಾಜಕ್ಕೆ ಬದುಕಿನ ಒಳಾಂಗಣಕ್ಕೆ ಕರೆದೊಯ್ಯಬೇಕು. ಸತ್ಯವನ್ನು ಪ್ರತಿಬಿಂಬಿಸುವ, ಶೋಷಣೆಯನ್ನು ಧಿಕ್ಕರಿಸುವ ಎದೆಗಾರಿಕೆ ಬೇಕು. ಮನೋದೌರ್ಬಲ್ಯದಿಂದ ಬಳಲಿ ಬಡಕಲಾದ ಸಮಾಜವನ್ನು ಎತ್ತಿ ನಿಲ್ಲಿಸಬೇಕೆಂಬ ಛಲ ಹೊಂದಿದವರು ಕುಮಾರ ಕಕ್ಕಯ್ಯ ಪೋಳ. ಅವರು ಇದು ನನ್ನ ಸಮಾಜ ಕೃತಿಯಲ್ಲಿ ಚಿಂತಿಸಿದಂತೆ, ಸಮಾಜದ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವುದರ ಮೂಲಕ ತಮ್ಮ ತೀಕ್ಷಣವಾದ ವಿಚಾರಗಳಿಂದ ಸಮಾಜ ಮುಖಿ ಚಿಂತನೆ ಸಂಕಲನದಲ್ಲಿ ಹರಳುಗಟ್ಟಿದೆ.

ಈ ಕಥಾ ಸಂಕಲನದಲ್ಲಿ ಕಣ್ಣು ಮುಚ್ಚಿ ಪುಣ್ಯ ಎನಬೇಡಾ, ದುಷ್ಟಗ್ರಹಗಳು, ಪೇಚಾಡಿದ ಪುನರ್ಜನ್ಮ, ನಾಸ್ತಿಕ, ಅಪ್ಸರೆಯಿಂಧ ಅಂಗಸೇನೆ, ಅಯ್ಯಮಾಡಿದ ಪಾಪ ಕೈಮ್ಯಾಗ, ನೀನನ್ನ ಮುಟ್ಟಬ್ಯಾಡ, ಘೋಷಾದ ಹೆಣ್ಣು, ಸಮಾಜದ ತೊಡರಿಗೆ ಧರ್ಮದ ಕಗ್ಗಂಟು ಈ ಮುಂತಾದ ಹದಿನಾರು ಕಥೆಗಳಿವೆ. ಲೇಖಕರೆ ಹೇಳಿಕೊಂಡಿರುವಂತೆ ನೊರೆ ಹಾಲಿನಂತಿದ್ದ ನೈಜ ಧರ್ಮ, ತಲೆಮಾರುಗಳಿಂದ ಸಾಗಿ ಬಂದ ಸಂಪ್ರದಾಯದ ಪರಿಣಾಮವಾಗಿ ಅದು ಈಗ ತಂಗಳ ಮಜ್ಜಿಗಿಯಂತೆ ಹುಳಚಿಟ್ಟಿದೆ. ಹುಳ ಹೊಕ್ಕ ಕಾಯಿಯಂತೆ ಒಳ ತಿರುಳೆಲ್ಲವೂ ಲಯವಾಗಿ ಕೇವಲ ಶಿಷ್ಟಚಾರದ ಚಿಪ್ಪು ವಿಪರೀತವಾಗಿ ಬೆಳೆದು ನಿಂತಿದೆ. ಇಂದಿನ ಧಾರ್ಮಿಕತೆ ಮತ್ತು ಜಾತೀಯತೆಯ ಕುರುಡು ನಂಬಿಕೆಗೆ ಹಾಗೂ ಶುಷ್ಕ ವಿಚಾರಗಳು ಬಲಹೀನ ಹಾಗೂ ಸ್ವಾರ್ಥಿಗಳ ತಂಡ ತಂಡಗಳನ್ನೇ ನಿರ್ಮಿಸಿರುವವು”

ಸಾವಿರಾರು ವರ್ಷಗಳಿಂದ ಪೌರಾಣಿಕ ಧರ್ಮವು ಹೇಳುತ್ತಾ ಬಂದ ಪ್ರಚಲಿತ ವೈದಿಕ ಸಂಪ್ರದಾಯದಿಂದಾಗಿ (ಹಿಂದೂ ಧರ್ಮ) ಅದಾವ ಗೌರವಯುತ ಘನಕಾರ್ಯವಾಗಿದೆ? ಸಮಾಜದಲ್ಲಿಯ ಸ್ವಪ್ರತಿಷ್ಠೆಯ ಅತಿರೇಕವು ನಾಡನ್ನು ಹಿಂಸಾತ್ಮಕ ನೆಲೆಗೆ ತಂದು ನಿಲ್ಲಿಸಿದೆ. ಇಲ್ಲಿ ಹೆಜ್ಜೆ – ಹೆಜ್ಜೆಗೂ ಜಗದ್ಗುರುಗಳು, ಗಲ್ಲಿಗೊಂದು ಮಠಗಳು, ಎಷ್ಟೊಂದು ಗುಂಪು, ಪಂಥ, ಜಾತಿ ಮತಗಳು ಇರುವ ಇವರಲ್ಲಿ ಒಬ್ಬರಿಗೊಬ್ಬರು ಕಂಡರೆ ಆಗುವುದಿಲ್ಲ. ಹೀಗಿದ್ದೂ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ್ದೇವೆ ಎನ್ನುವ ಒಣಮಂತ್ರ, ನಾಯಿ ಕಚ್ಚಾಡುವಂತೆ ಒಂದು ಕೋಮಿನವರು ಇನ್ನೊಂದು ಕೋಮಿನವರ ಮೇಲೆ ಎರಗುತ್ತಾರೆ. ಜಾತಿಗಳಲ್ಲಿ ಒಳಜಾತಿ ನನ್ನವ ತಮ್ಮವ ಹೀಗೆ ತೀರ ಕೆಳಮಟ್ಟಕ್ಕಿಳಿದ ಸಂಬಂಧಗಳು ಯಾರಲ್ಲೂ ವಿಶ್ವಾಸ ಮೂಡಿಸುತ್ತಿಲ್ಲ. ಆಧುನಿಕ ಯುಗದ ಸಂದರ್ಭದಲ್ಲಾದ ಅಧೋಗತಿ ಅವನತಿ ಮತ್ತೆಲ್ಲೂ ಇಲ್ಲ. ಇದಕ್ಕೆಲ್ಲ ಯಾರು ಹೊಣೆ? ಈ ಎಲ್ಲ ಸಮಾಜೋ ಧಾರ್ಮಿಕ ಅವಘಡಗಳನ್ನು ತೆರೆದಿಡುವ ಜಾಗೃತ ಚಿಂತನೆಗಳ ಗುಚ್ಛವೇ ಈ ಕಥಾ ಸಂಕಲನ, ಲೇಖಕ ಕುಮಾರ ಕಕ್ಕಯ್ಯನವರ ಈ ಕಥಾ ಸಂಕಲನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ವಿಚಾರವಂತ ಸಮಾಜ ಸುಧಾರಕ, ದಲಿತ ನಾಯಕ ಬಿ. ಬಸವಲಿಂಗಪ್ಪನವರು. ಸಮಾಜ ಮುಖಿ ಚಿಂತಕನ ಚಿಂತನೆಗೆ ಇನ್ನೊಬ್ಬ ನೋವಿನ ನೆಲೆಯ ಚಿಂತಕನ ನೆರವು ದೊರೆತದ್ದು ಸಮಾಜೋ ಸಾಂಸ್ಕೃತಿಕ ನೆಲೆಗೆ ಸಿಕ್ಕ ಜಯವೆಂದೇ ಭಾವಿಸಬೇಕಾಗುತ್ತದೆ.

‘ನಿಯತಿ ಶಾಸನ’ ಮತ್ತು ಗೀಜಗನ ಗೂಡು : ನಿಯತಿ ಶಾಸನ ೧೯೭೨ ರಲ್ಲಿ ಗೀಜಗನ ಗೂಡು ೧೯೭೫ ರಲ್ಲಿ ಪ್ರಕಟಗೊಂಡ ಕಾದಂಬರಿಗಳು. ಶರಣ ಸಂಸ್ಕೃತಿಯೇ ಬದುಕೆಂದು ಸ್ವೀಕರಿಸಿ ಅಪ್ರತಿಮ ಶರಣರಂತೆ ಬದುಕಿದ ದಲಿತ ಸಾಹಿತಿ ಕುಮಾರ ಕಕ್ಕಯ್ಯ ಪೋಳ ಅವರು ಬರೆದಿರುವ ಉತ್ಕೃಷ್ಟ ಕಾದಂಬರಿ ‘ನಿಯತಿ ಶಾಸನ’. ಇದು ಸಾಮಾಜಿಕ ನೈತಿಕ ತತ್ವಗಳನ್ನು ಸಾರುವ ಕಾದಂಬರಿಯಾಗಿದೆ. ಇಲ್ಲಿ ಸಲ್ಲುವವರೂ ಅಲ್ಲಿಯೂ ಸಲ್ಲುವವರಯ್ಯ ಎಂಬ ಬಸವಣ್ಣನವರ ವಿಚಾರದಂಥೆ ಬದುಕಿರುವಾಗಲೇ ನರಕ ಯಾತನೆಯನ್ನು ಅನುಭವಿಸುತ್ತಿರುವ ಕಥಾನಾಯಕ ‘ಟಾಕಾರಾಮ’ ಯಾರನ್ನೂ ಮುಟ್ಟಲು, ನೋಡಲು ಅಸಾಧ್ಯವೆಂದು ಮೂಗು ಮುರಿಯುತ್ತಿದ್ದನೋ ಅಂಥ ಧರ್ಮಣ್ಣನ ಆಶ್ರಯದಲ್ಲಿ ಅನಾಥನಂತೆ ಬದುಕುತ್ತಿದ್ದಾನೆ.

ಕಾದಂಬರಿಕಾರರಾದ ಕುಮಾರ ಕಕ್ಕಯ್ಯ ಪೋಳ ಅವರು ಟಾಕಾರಾಮನಿಂದಲೇ ಮಾಹಿತಿ ಪಡೆದು ವಿವರಿಸುವುದರಿಂದ, ಕಾದಂಬರಿಯುದ್ಧಕ್ಕೂ ಕಂಡು ಬರುವ ಘಟನೆಗಳು ನೈಜತೆಯಿಂದ ಮೂಡಿಬಂದಿವೆ. ಇದೊಂದು ತಪ್ಪೊಪ್ಪಿಗೆ, ಆತ್ಮ ನಿವೇದನೆ. ಮಹರ್ಷಿ ಟಾಲ್‌ಸ್ಟಾಯ್‌ರವರ ಕನ್‌ಫೇಶನ್‌, ಮಹಾತ್ಮ ಗಾಂಧೀಜಿಯವರ ಸತ್ಯಶೋಧನೆ ಇವುಗಳ ಮಾದರಿಯಲ್ಲಿ ರೂಪುಗೊಂಡ ಉತ್ತಮ ಕೃತಿಯಾಗಿದೆ.

ಕಾದಂಬರಿಯ ಪ್ರಮುಖ ಪಾತ್ರ ಟಾಕಾರಾಮನು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಅನೈತಿಕ ಸಂಬಂಧದಲ್ಲಿ ತೇಲಾಡಿದವ, ಜೀವನದಲ್ಲಿ ಒಳ್ಳೆಯದನ್ನು ಸಾಧಿಸದೆ ಬದುಕಿದವ, ಹೆಂಡತಿಯ ದುಡಿಮೆಯಲ್ಲಿ ಜೀವನ ನಡೆಸಿದ ಈತ ನೌಕರಿಗಾಗಿ ಅಲೆದ ನೌಕರಿ ಸಿಗಲಿಲ್ಲ. ಕೊನೆಗೆ ತಹಶೀಲ್ದಾರ ಕಛೇರಿಯ ಕಟ್ಟಿಹತ್ತಿ ಅನಕ್ಷರಸ್ಥ ರೈತರಿಗೆ ಸಹಾಯಕನಾಗಿ ಸಮಾಜ ಸೇವೆಗೆ ತೊಡಗಿದ. ಜೀವನಕ್ಕೆ ಅದನ್ನೇ ಆಶ್ರಯ ಮಾಡಿಕೊಂಡು ಟಾಕಾರಾಮನು ಕ್ಲಬ್ಬೊಂದನ್ನು ಆರಂಭಿಸಿದ. ಕ್ಲಬ್ಬಿನಲ್ಲಿ ಅಡುಗೆ ಕೆಲಸಕ್ಕಿದ್ದ ಗಂಡ ಬಿಟ್ಟು ಬೇರೆಯಾಗಿದ್ದ ರಂಗಮ್ಮನಿಂದ ಕ್ಲಬ್ಬಿಗೂ ಟಾಕಾರಾಮನ ಬದುಕಿಗೂ ರಂಗೇರಿತು. ಕ್ಲಬ್ಬಿಗೆ ಬರುವವರ ಸಂಖ್ಯೆ ಹೆಚ್ಚತೊಡಗಿತು. ರಂಗಮ್ಮಳಿಂದಾಗಿ ಸರಕಾರಿ ಅಧಿಕಾರಿಗಳು ಇವನ ಮನೆ ಬಾಗಿಲು ಕಾಯತೊಡಗಿದರು. ಇಷ್ಟಕ್ಕೆ ತೃಪ್ತನಾಗದೆ, ಗಾಂಧೀಜಿಯ ಪ್ರತಿಮೆ ಅನಾವರಣ ಮಾಡಲು ಕೈ ಹಾಕಿದ. ಬಸವ ಜಯಂತಿ ಆಚರಿಸಿ ಮಹಾ ಸ್ವಾಮಿಗಳಿಂದ, ಮಠಾಧೀಶರಿಂದ ಲಕ್ಷಾಂತರ ಹಣ ಸಂಗ್ರಹಿಸಿದ, ಇದರಿಂದಾಗಿ ಒಂದಷ್ಟು ಶ್ರೀಮಂತನಾದ.

ದಶರಥ ಮಕ್ಕಳನ್ನು ಪಡೆಯುವ ಸಲುವಾಗಿ ಪುತ್ರ ಕಾಮೇಷ್ಠೆ ಯಾಗವನ್ನು ಮಾಡಿದಂತೆ ಕಂಡ ಕಂಡ ದೇವರ ಕಾಲು ಹಿಡಿದ. ಭೂಸುರರು ನಾವೇ, ದೇವರು ನಾವೇ ಎಂದು ಹೇಳಿಕೊಳ್ಳುವ ‘ಸ್ವಾಮಿಗಳನ್ನು ಕಂಡು ಕೈಮುಗಿದ ಆದರೂ ಮಕ್ಕಳು ದೊರೆಯಲ್ಲಿಲ್ಲ. ಕೊನೆಗೆ ಡಾ. ಮಹಾದೇವಯ್ಯನ ಚಿಕಿತ್ಸೆಯಿಂದ ಟಾಕಾರಾಮನ ಹೆಂಡತಿ ಗಿರಿಜಾ ಗರ್ಭವತಿಯಾಗಿ ತನ್ನ ಇಚ್ಛೆಯಂತೆ ಹೆಣ್ಣುಮಗುವನ್ನು ಹೆತ್ತಳು. ಅವಳು ಬೆಳೆದು ಕಾಲೇಜು ಕಟ್ಟೆ ಹತ್ತಿದಳು. ಅಸ್ಪೃಶ್ಯರ ಧರ್ಮಣ್ಣನ ಮಗ ಶಂಕರನ ಜೊತೆ ಪ್ರೇಮವಾಯಿತು. ಧರ್ಮ ಪ್ರತಿಷ್ಟೆಯುಳ್ಳ ಟಾಕಾರಾಮ ಅಸ್ಪೃಶ್ಯಯುವಕನನ್ನು ಥಳಿಸಿ ಜೈಲಿಗೆ ಅಟ್ಟಿದ. ಇದಾದ ಬಳಿಕ ಮಗಳು ಮನೆಯ ಮಹಡಿಯ ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡು ಸತ್ತಳು.ಅದನ್ನು ನೋಡಿದ ಗಿರಿಜಾಳು ಆಘಾತಗೊಂಡು ಕೊನೆಯುಸಿರೆಳೆದಳು. ಅಲ್ಲಿಂದ ಟಾಕಾರಾಮ ನಿರ್ಗತಿಕನಾದ. ಅನೇಕ ರೋಗ ರುಜಿನಗಳು ಅವನಿಗೆ ಅಂಟಿಕೊಂಡವು. ಕುಷ್ಠ ರೋಗ ತಗುಲಿ ವಿಪರೀತವಾಗಿ ರಕ್ತ ಬಸಿಯುತ್ತಿದ್ದಾಗ ಊರವರೆಲ್ಲ ಸೇರಿ ಊರ ಹೊರಗಿನ ಗುಡಿಸಲಲ್ಲಿ ಇರಿಸಿದರು. ಧರ್ಮಣ್ಣನೇ ದಿನವೂ ನನಗೆ ಊಟ ನೀಡಿ ಬದುಕಿಸುತ್ತಿದ್ದಾನೆ ಎಂದು ತನ್ನ ಒಳಚರಂಡಿಯಂಥ ಗಬ್ಬುನಾರುವ ಹೃದಯದಿಂದ ಗೋಳಿಟ್ಟಾಘ ಕಾದಂಬರಿಕಾರರು ಅವನನ್ನು ಸಮಾಧಾನ ಪಡಿಸುತ್ತಾರೆ. ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಆಗಲೇಬೇಕು. “ಮಾಡಿದ್ದುಣ್ಣೋ ಮಹಾರಾಯ ” ಎಂಬ ಗಾದೆ ಮಾತಿನಂತೆ ಮಾಡಿದ್ದನ್ನು ಅನುಭವಿಸಲೇ ಬೇಕು ಎಂದು ನಿಯತಿಶಾಸನವನ್ನು ತಿಳಿಸಿದರು.

ಟಾಕಾರಾಮನ ಬದುಕಿನ ಚಿತ್ರಣದ ಮೂಲಕ ಸಮಾಜದ ದುರಂತ, ದುಃಸ್ತಿತಿ ತಿಳಿಸುತ್ತಾ ಬಸವಣ್ಣನವರ ಧರ್ಮ ತತ್ವಗಳ ಮಹತ್ವ ಹಾಗೂ ಅವಶ್ಯಕತೆಗಳನ್ನು ಬಿಂಬಿಸಿದ್ದಾರೆ. ಈ ಭೂಮಿಯ ಮೇಲೆ ಆಗಿ ಹೋದ ಮಾನವೀಯ ಮೌಲ್ಯಗಳ ಪ್ರತಿಪಾದಕರಲ್ಲಿ ಬಸವಣ್ಣನವರು ಶ್ರೇಷ್ಠರಾಗಿದ್ದಾರೆ. ಆತ್ಮ ವಂಚಕರಾದ ಇಂದಿನ ಸಂಪ್ರದಾಯವಾದಿಗಳು, ಧರ್ಮಾಧಿಕಾರಿಗಳು ಹಾಗೂ ಮಠಾಧೀಶರು ಅಂದಿನಿಂದ ಇಂದಿನವರೆಗೂ ತಮ್ಮ ಜೀವ ವಿರೋಧಿ ನೆಲೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಸವ ಚಿಂತನೆಗೆ ಅಗೌರವ ತಂದಿದ್ದಾರೆ. ಬಸವ ಧರ್ಮಕ್ಕೆ, ಚಿಂತನೆಗೆ ಬೇಲಿ ಹಾಕುತ್ತಾ ಕುಬ್ಜರಾಗಿ ವರ್ತಿಸುತ್ತಿದ್ದಾರೆ ಎಂದು ಪೋಳ ಅವರು ಎಚ್ಚರಿಸಿದ್ದಾರೆ.

‘ಗೀಜಗನ ಗೂಡು’ ಇದೊಂದು ಸಾಮಾಜಿಕ ಕಾದಂಬರಿ ಸಮಾಜಮುಖಿ ಚಿಂತನೆಯ ಗುಚ್ಚ ಇದಾಗಿದೆ. ಚರಂಡಿಯ ತೇವವಿಲ್ಲದೆ ಕಪ್ಪೆ. ಬದುಕಿದರೂ ಬದುಕಬಹುದು. ಆದರೆ, ನೌಕರಿ ಇಲ್ಲದೆ ಇಂದಿನ ಆಧುನಿಕ ಯುಗದ ಪದವೀಧರ ಬದುಕಲಾರ. ಶಿವಾನಂದನೆಂಬ ಪದವೀಧರನ ಸುತ್ತ ಹೆಣೆದ ಕಾದಂಬರಿ ಇದಾಗಿದೆ. ಬಿಜಾಪುರದಿಂದ ಧಾರವಾಡಕ್ಕೆ ಓದಲು ಬಂದ ಶಿವಾನಂದ ಸರಕಾರಿ ಕೆಲಸಕ್ಕಾಗಿ ಏನೆಲ್ಲ ಪ್ರಯತ್ನ ಮಾಡುತ್ತಾನೆ. ಕೊನೆಗೆ ಸಿಕ್ಕ ನೌಕರಿ ಕೈಬಿಟ್ಟಾಗ, ಆತನಿಗೆ ತನ್ನ ಜೀವನವೇ ಬೇಸರವೆನಿಸುತ್ತದೆ. ನೌಕರಿ ಇಲ್ಲದೆ ಜೀವನ ವ್ಯರ್ಥವೆಂದು ಭಾವಿಸುತ್ತಾನೆ. ಹೀಗೆ ಆಲೋಚಿಸುತ್ತಿರುವಾಗ ತಮ್ಮೂರಿನ ತೋಟದ ಭಾವಿಯಲ್ಲಿ ನೇತಾಡುವ ಗೀಜಗನಗೂಡನ್ನು ನೋಡುತ್ತಾನೆ. ಗೀಜಗ ಅದೊಂದು ಸಾಮಾನ್ಯ ಹಕ್ಕಿ. ಆ ಹಕ್ಕಿ ಗೂಡು ಕಟ್ಟುವ ಸಲುವಾಗಿ ಯಾವುದೇ ಇಂಜಿನಿಯರಿಂಗ್‌ ಕಾಲೇಜು ಕಟ್ಟಿ ಹತ್ತಿಲ್ಲ. ಅಥವಾ ಡಿಪ್ಲೋಮಾ ಪದವಿ ಮುಗಿಸಿ ಪ್ರಮಾಣ ಪತ್ರ ಪಡೆದಿಲ್ಲ. ಆದಾಗ್ಯೂ ಇಷ್ಟೊಂದು ಕಲಾತ್ಮಕವಾದ ಗೂಡನ್ನು ಅದು ಹೇಗೆ ಕಟ್ಟುತ್ತದೆ. ಹಕ್ಕಿಗಳಂತಹ ಹಕ್ಕಿಗಳು ತಮ್ಮ ಕೊಕ್ಕೆಯ ಬಲದಿಂದ ಜೀವನ ಸಾಗಿಸುತ್ತವೆ. ಬಾಹುಗಳಲ್ಲಿ ಶಕ್ತಿ ಇದ್ದ ನಾನು ಸ್ವಾವಲಂಬಿ ಜೀವನ ಮಾಡಲಾರೆನೇ? ಎಂದು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ಳುತ್ತಾನೆ. ಪ್ರಕೃತಿಯ ಪ್ರೇರಣೇಯಿಂದಾಗಿ ಪ್ರಭಾವಿತನಾಗಿ ಸ್ವಾವಲಂಬಿ ಬದುಕು ಮಾಡುವುದರ ಮೂಲಕ ಸ್ವರ್ಗಸುಖವನ್ನು ಪಡೆಯುತ್ತಾನೆ.