ಸವಾರಿಯನ್ನು ಚಾತುರ್ಯದಿಂದ ನಿರ್ವಹಿಸುವುದು, ಕುದುರೆಯ ಚಲನವಲನಗಳನ್ನೂ ದಿಕ್ಕು, ಮಾರ್ಗ, ವೇಗಗಳನ್ನೂ ಹತೋಟಿಯಲ್ಲಿಡುವುದು ರಾವುತವಿದ್ಯೆ. ಕುದುರೆಯ ಪೂರ್ತಿ ಸಹಾಯವನ್ನು ಪಡೆದು ಆದಷ್ಟು ಕಡಿಮೆ ಪರಿಶ್ರಮದಿಂದ ಅತ್ಯಂತ ಫಲಕಾರಿಯಾಗುವಂತೆ ಅದಕ್ಕೆ ಮಾರ್ಗದರ್ಶನ ಕೊಡುವುದು ನಿಪುಣ ಸವಾರನ ಲಕ್ಷಣ. ಮ್ಯಾಸಿಡೋನಿಯ ದೇಶದ ರಾಜನ ಕುದುರೆಯನ್ನು ಅಂಕೆಯಲ್ಲಿಡಲು ಯಾರಿಗೂ ಸಾಧ್ಯವಾಗದಿದ್ದಾಗ ಅವನ ಚಿಕ್ಕ ಮಗ ಅದನ್ನು ನಿಗ್ರಹಿಸಿದ. ಅವನೇ ವಿಶ್ವವಿಜೇತ ಅಲೆಗ್ಸಾಂಡರ್ ಮಹಾಶಯ. ಅಮೆರಿಕದ ರೆಡ್ ಇಂಡಿಯನರು ಎರಡು ಕೈಗಳಲ್ಲೂ ಬಿಲ್ಲು, ಅಂಬುಗಳನ್ನು ಹಿಡಿದುಕೊಂಡು ಲಗಾಮು, ಜೀನುಗಳಿಲ್ಲದೆ ಸವಾರಿ ಮಾಡುತ್ತಿದ್ದರು. ಚೆಂಗಿeóïಖಾನನ ಸವಾರಿ ಲೋಕವನ್ನು ಬೆರಗು ಗೊಳಿಸಿತು.[೧]

ಕುದುರೆ ಸವಾರಸಂಪಾದಿಸಿ

ಕುದುರೆಗೂ ಸವಾರನಿಗೂ ಸಂಪೂರ್ಣ ಐಕ್ಯ, ಅನ್ವಯ ಇರಬೇಕು. ಯಜಮಾನನಿಗೆ ತನ್ನ ಮೇಲೆ ಮಮತೆಯಿದೆ, ಅವನು ತನಗೆ ಕೆಡುಕು ಮಾಡುವುದಿಲ್ಲವೆಂದು ಅದಕ್ಕೆ ನಂಬಿಕೆ ಬಂದರೆ ಅದು ವಿಶ್ವಾಸದಿಂದ ವಿಧೇಯವಾಗಿರುತ್ತದೆ. ಆಜ್ಞಾಪಾಲನೆ ಅದಕ್ಕೆ ಮನಃಪ್ರವೃತ್ತಿಯಾಗುವಂತೆ ವಿವೇಕದ ಒತ್ತಾಯ. ಶಿಸ್ತಿನಿಂದ ರೂಢಿ ಮಾಡಿಸಬೇಕು. ತಪ್ಪು ಮಾಡಿದಾಗ ಅದನ್ನು ಸೌಮ್ಯವಾಗಿ ಪ್ರತಿಫಲ-ಶಿಕ್ಷೆ (ರಿವಾರ್ಡ್ ಅಂಡ್ ಪನಿಷ್‍ಮೆಂಟ್) ವಿಧದಿಂದ ತಿದ್ದಬೇಕು; ಸಿಡುಕು, ಚಾವಟಿ, ಮುಳ್ಳುಕಂಟಕಗಳಿಂದಲ್ಲ. ಭೀತಿ ಅದರ ವಿವೇಚನೆಯನ್ನು ಕುಗ್ಗಿಸುತ್ತದೆ. ಪ್ರತಿಯೊಂದು ವಿಧೇಯತೆಗೂ ಕೂಡಲೇ ಅದಕ್ಕೆ ಬಹುಮಾನ ಕೊಡಬೇಕು. ಶಿಕ್ಷೆಯನ್ನು ಅದಕ್ಕೆ ಅತ್ಯಾವಶ್ಯಕವಿದ್ದಾಗ ಮಾತ್ರ ಔಷಧಿಯಂತೆ ಕೊಡಬೇಕು. ಲಗಾಮನ್ನು ಎಳೆದ ಕೂಡಲೇ ಅದು ನಿಂತರೆ, ಲಗಾಮನ್ನು ಸಡಿಲಿಸಿ ಹೆಗಲ ಮೇಲೆ ತಟ್ಟಿ ಮೆಚ್ಚಿಗೆಯನ್ನು ತೋರಿಸಬೇಕು. ವಿಧೇಯತೆಗೆ ಅಂಥ ಬಹುಮಾನವನ್ನು ಅದು ಸದಾ ನಿರೀಕ್ಷಿಸುತ್ತದೆ. ತಪ್ಪು ಮಾಡಿದ ಕೂಡಲೆ ಶಿಕ್ಷಿಸಬೇಕು. ಅವಿಧೇಯತೆಗೆ ಲಗಾಮನ್ನು ಬಿಗಿಹಿಡಿದು ಬಾಯಿ ಎಳೆದರೆ ಶಿಕ್ಷೆ. ತಡಮಾಡಿ ಶಿಕ್ಷಿಸಿದರೆ ತಪ್ಪೇನೆಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಕುದುರೆ ಮೊಂಡತನದಿಂದ ಅವಿಧೇಯವಾಗಿದ್ದರೆ ಮಾತ್ರ ಚಾವಟಿಯ ಪ್ರಯೋಗ. ಅದೂ ಒಂದು ಸಾರಿ ಮಾತ್ರ; ಪದೇ ಪದೇ ಹೊಡೆಯಬಾರದು. ಹೊಸ ವಿಲಕ್ಷಣ ಪರಿಸ್ಥಿತಿಗಳಲ್ಲಿ ಕುದುರೆ ಗಾಬರಿಯಿಂದ ಹೆದರುತ್ತದೆ. ಆಗ ಅದನ್ನು ದಕ್ಷತೆಯಿಂದ ಸಂತೈಸಿ ಧೈರ್ಯ ಕೊಟ್ಟರೆ ಅದು ಎಂಥ ಸಾಹಸಕ್ಕೂ ಸಿದ್ಧವಾಗುತ್ತದೆ. ಸುಡುವ ಮರುಭೂಮಿಯಲ್ಲಿ ಬಹುಕಾಲ ನೀರಿಲ್ಲದೆ ನಾಗಾಲೋಟದಲ್ಲಿ ಹೋಗುತ್ತದೆ. ಹಿಮದ ಕೊರೆತದಲ್ಲಿ ಜಾರುಬಂಡಿಯನ್ನೆಳೆಯುತ್ತದೆ. ಕಗ್ಗತ್ತಲ ರಾತ್ರಿಯಲ್ಲಿ ಸವಾರನನ್ನು ನೆನಪಿನಿಂದ ಕಡಿದಾದ ಪರ್ವತ ಜಾಡೆಯಲ್ಲಿ ಒಯ್ಯುತ್ತದೆ. ಉರಿಯುತ್ತಿರುವ ಜ್ವಾಲೆಯಲ್ಲಿ ಸವಾರನೊಡನೆ ನೆಗೆದು ಪಾರಾಗುತ್ತದೆ. ಗಾಯಗೊಂಡ ರಾವುತನನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುತ್ತದೆ.[೨]

ಕುದುರೆಯ ಲಕ್ಷಣಸಂಪಾದಿಸಿ

ಸವಾರಿಗೆ ತಕ್ಕ ಕುದುರೆಯ ಆಯ್ಕೆ ಬಹುಮುಖ್ಯ. ಶ್ರೇಷ್ಠ ಕುದುರೆಯ ಲಕ್ಷಣಗಳಿವು: ತಲೆ, ಕತ್ತು, ಶರೀರಗಳ ಸಮಕಟ್ಟು ; ತೆಳ್ಳನೆ ಚರ್ಮ, ಭಾರ ತಡೆಯಲು ಬಲಿಷ್ಠ ಸ್ನಾಯುಗಳ ಅಡಕ ಬೆನ್ನು; ಮಧುರ ಆಕಾರ; ಎದೆಯ ವರೆಗೂ ಬಾಗಿರುವ ಅಗಲವಾದ ಹೆಗಲು, ಜಿಂಕೆಯದರಂತೆ ಚೂಪಾದ ತಲೆ, ತೆಳುವಾದ ಕಾಲುಗಳು ; ಅಗಲವಾದ ಹಣೆ, ಚೂಪಾಗುವ ಚಿಕ್ಕ ಬಾಯಿ, ಚುರುಕಾದ ದೊಡ್ಡ ಕಣ್ಣುಗಳು, ಹಿಗ್ಗುವ ಮೂಗಿನ ಹೊಳ್ಳೆಗಳು, ದಪ್ಪಗಿರದೆ ಮೊನೆಯಾಗುವ ಕತ್ತು ; ಶೀಘ್ರ ಗ್ರಾಹಿ ಬುದ್ಧಿ. ಸವಾರಿ ಕುದುರೆಗಳಲ್ಲಿ ವಂಶಾವಳಿ ಬಹು ಮುಖ್ಯ. ಥರೋಬ್ರೆಡ್ ಎಂಬ ಜಾತಿಯ ಕುದುರೆ ಪರಮಶ್ರೇಷ್ಠ.ರಾವುತ ಕುದುರೆಯನ್ನು ಪೂರ್ತಿ ಹತೋಟಿಯಲ್ಲಿಟ್ಟು ತನ್ನ ಮನೋಗತವನ್ನು ಅದಕ್ಕೆ ತಿಳಿಸಿ ಅದನ್ನು ತನ್ನ ಇಚ್ಛೆಯಂತೆ ನಡೆಯಿಸಲು ನಾಲ್ಕು ನೆರವುಗಳಿವೆ. ಕೈಯಿಂದ ಲಗಾಮು. ಕಡಿವಾಣಗಳನ್ನು ನಿಯಂತ್ರಿಸುವುದು ; ಕಾಲುಗಳಿಂದ ಕುದುರೆಯನ್ನು ಒತ್ತುವುದು ; ಮೈ ಹವಣಿಕೆಯನ್ನು ಬದಲಿಸುವುದು; ಬಾಯಿಮಾತು. ಸವಾರನ ಕೈಕಾಲುಗಳ ಸೂಕ್ಷ್ಮ ಚಲನೆಯ ಸಂಜ್ಞೆಗಳಿಂದ ಕುದುರೆ ನಿಲ್ಲುತ್ತದೆ, ಹೊರಡುತ್ತದೆ, ತಿರುಗುತ್ತದೆ, ನಡಿಗೆಗಳನ್ನು ಬದಲಿಸುತ್ತದೆ.

ಕುದುರೆಗು ಸವಾರನುಗು ಇರುವ ಸಂಬಂಧಸಂಪಾದಿಸಿ

ಸವಾರ ಎಡಗಾಲನ್ನು ಕುದುರೆಯ ಪಕ್ಕಕ್ಕೆ ಒತ್ತಿದರೆ ಅದು ಬಲಕ್ಕೆ ತಿರುಗಿಹೋಗುತ್ತದೆ. ಬಲಗಾಲನ್ನು ಒತ್ತಿದರೆ ಎಡಕ್ಕೆ ಹೋಗುತ್ತದೆ. ಕುದುರೆಯ ಬಾಯಲ್ಲಿರುವ ಕಡಿವಾಣಕ್ಕೆ ಜೋಡಿಸಿರುವ ಲಗಾಮನ್ನು ಬಲಕ್ಕೆ ಎಳೆದರೆ ಕಡಿವಾಣ ಕುದುರೆಬಾಯಿಯ ಮೇಲೆ ಎಳೆದು ತನ್ನ ತಲೆ ಶರೀರಗಳನ್ನು ಆ ದಿಕ್ಕಿಗೆ ತಿರುಗಿಸುತ್ತದೆ. ಸವಾರ ಕುದುರೆ ಚಲಿಸುವ ದಿಕ್ಕಿಗೆ ತನ್ನ ಭಾರವನ್ನು ಸರಿಸುತ್ತಾನೆ. ಅದು ಮುಂದೆ ಹೋಗುವಾಗ ಅವನು ಕುದುರೆಯ ಬೆನ್ನಿನ ಮೇಲೆ ಮುಂದಕ್ಕೆ ಸರಿಯುತ್ತಾನೆ. ಅದು ತಿರುಗುವಾಗ ಬಲಕ್ಕೂ ಎಡಕ್ಕೂ ಸರಿಯುತ್ತಾನೆ. ನಡಿಗೆಯನ್ನು ನಿಧಾನ ಮಾಡುವಾಗ ಅಥವಾ ನಿಲ್ಲಿಸುವಾಗ ಜೀನಿನ ಮೇಲೆ ಸ್ವಲ್ಪ ಹಿಂದಕ್ಕೆ ಸರಿಯುತ್ತಾನೆ. ಚತುರ ಸವಾರ ಇವನ್ನೆಲ್ಲ ಎಷ್ಟು ಸೂಕ್ಷ್ಮವಾಗಿ ಮಾಡುತ್ತಾನೆಂದರೆ ಅವು ಕುದುರೆಗೆ ವಿನಾ ಮತ್ತಾರಿಗೂ ಅರಿವಾಗುವುದಿಲ್ಲ. ಕುದುರೆಯನ್ನು ನಿಲ್ಲಿಸಲು ಅವನು ಜೀನಿನ ಮೇಲೆ ಸ್ವಲ್ಪ ಬಾಗಿ ಬೆಟ್ಟುಗಳಿಂದ ಹಿಸುಕಿ ಲಗಾಮಿನ ಒತ್ತಡವನ್ನು ಸಡಿಲಿಸುತ್ತಾನೆ; ಲಗಾಮನ್ನು ಜಗ್ಗಿ ಎಳೆಯುವುದಿಲ್ಲ. ಕುದುರೆಯನ್ನು ದೊಡ್ಡ ವರ್ತುಲ, ಚಿಕ್ಕ ವರ್ತುಲಗಳಲ್ಲಿ ಎಡಕ್ಕೂ ಬಲಕ್ಕೂ ತಿರುಗಿಸುವುದು; ವೇಗವನ್ನು ಬದಲಿಸುವುದು; ತೊಡಕಾದ ಕೋನಗಳಲ್ಲಿ ತಿರುಗಿಸುವುದು ; ಮುಂತಾದವುಗಳನ್ನು ರಾವುತ ಕೈಚಳಕದಿಂದ ನಿರ್ವಹಿಸುತ್ತಾನೆ. ಅಶ್ವ ಶಿಕ್ಷಣಕ್ಕೆ ತಾಳ್ಮೆ, ಕೌಶಲ, ಅನುಭವ, ಕುದುರೆಗಳ ಸ್ವಭಾವ ವೈಚಿತ್ರ್ಯಗಳ ತಿಳಿವಳಿಕೆ ಇರಬೇಕು. ಕುದುರೆಗೆ ಬಲವಾದ, ದೀರ್ಘ ಜ್ಞಾಪಕಶಕ್ತಿಯಿದೆ.ನಾನಾ ಬಗೆಯ ಜೀನುಗಳಿವೆ. ಸವಾರನಿಗೆ ಆರಾಮಕರವಾದ, ಸವಾರಿಯ ಉದ್ದೇಶಕ್ಕೆ ತಕ್ಕುದಾದುವುಗಳನ್ನು ಉಪಯೋಗಿಸಬೇಕು. ಜೀನು ಕುದುರೆಯ ಬೆನ್ನೆಲುಬನ್ನು ಮುಟ್ಟದಂತೆ, ಬೆನ್ನಿಗೂ ಪಕ್ಕಗಳಿಗೂ ಗಾಯವಾಗದಂತೆ ಮೆತ್ತೆ ಹಾಕಬೇಕು. ನಾನಾ ಬಗೆಯ ಕಡಿವಾಣಗಳಿವೆ. ಕುದುರೆಯ ಬಾಯಿಗೆ ಹೊಂದಿಕೆಯಾಗಿ, ನೋವು ಮಾಡದಂಥವುಗಳನ್ನು ಹಾಕಬೇಕು.

ಕುದುರೆಗೆ ನಾನಾ ಬಗೆಯ ನಡಿಗೆಗಳಿವೆಸಂಪಾದಿಸಿ

(1) ಹೆಜ್ಜೆ ಇಡುತ್ತ ನಡೆಯುವುದು. (2) ಗಂಟೆಗೆ 9 ಮೈಲಿಗಳ ವೇಗದ ಕುಕ್ಕೋಟ. ರಾವುತ ರಿಕಾಬುಗಳಲ್ಲಿ ನಿಂತು, ತಗ್ಗಿ ಜೀನಿನ ಮೇಲೆ ಕೂತು, ಪುನಃ ಮೇಲೇರಿ ಅಂಗವಿನ್ಯಾಸಗಳಿಂದ ಸವಾರಿ ಮಾಡುತ್ತಾನೆ. (3) ಗಂಟೆಗೆ 12-40 ಮೈಲಿಗಳ ವೇಗದ ಬಲವಾದ ಜಿಗಿತಗಳಲ್ಲಿ ದೂಡಿಕೊಂಡು ಹೋಗುವ ನಾಗಾಲೋಟ. ಉಯ್ಯಾಲೆಯನ್ನು ನೂಕಿ ಹೆಚ್ಚು ಹೆಚ್ಚು ಎತ್ತರಕ್ಕೆ ಹೋಗುವಂತೆ ಸವಾರ ಕುದುರೆಯನ್ನು ತನ್ನ ಹಿಂಬದಿಯಿಂದ ದೂಡುತ್ತಾನೆ. (4) ಆಯಾಸವಿಲ್ಲದ ನಾಗಾಲೋಟ. (5) ಕುಕ್ಕೋಟಕ್ಕಿಂತ ವೇಗವಾದ ಪೇಸ್. ಸವಾರ ಇವುಗಳಲ್ಲೆಲ್ಲ ಪಾರಂಗತನಾಗಿರಬೇಕು. ಸವಾರಿಯಲ್ಲಿ ಪ್ರವೀಣರಾದ ಸ್ತ್ರೀಯರೂ ಅನೇಕರಿದ್ದಾರೆ. ಝಾನ್ಸಿರಾಣಿ ಲಕ್ಷ್ಮೀಬಾಯಿ, ರಜಿಯ ಬೇಗಂರ ಸವಾರಿ ಚಾತುರ್ಯ ಇತಿಹಾಸ ಪ್ರಸಿದ್ಧವಾದದ್ದು.

 ಪೋಲೋ ಆಟಸಂಪಾದಿಸಿ

ಪೋಲೋ ಆಟದಲ್ಲಿ ಸವಾರ ಲಗಾಮನ್ನು ಎಡಗೈಯಲ್ಲಿ ಮಾತ್ರ ಹಿಡಿದು, ಕುದುರೆಯನ್ನು ಗಂಟೆಗೆ 60 ಮೈಲಿಗಳ ವೇಗದಲ್ಲಿ ಓಡಿಸುತ್ತ, ಥಟ್ಟನೆ ನಿಲ್ಲಿಸಿ. ಎದುರಾಳಿ ರಾವುತರನ್ನು ಆಕ್ರಮಿಸಿ, ಬಲಗೈಯ ಕೋಲಿನಿಂದ ಚೆಂಡನ್ನು ಹೊಡೆಯುತ್ತ ಕುದುರೆಯನ್ನು ಓಡಿಸಿಕೊಂಡು ನುಗ್ಗಲು ವಿಚಕ್ಷಣನಾಗಿರಬೇಕು. ಬೇಟೆಗಾರ ಕುದುರೆಗಳನ್ನು ಕಣಿವೆ, ಕಾಲುವೆ, ಎತ್ತರದ ಬೇಲಿ, ಗೋಡೆಗಳ ಮೇಲೆಲ್ಲ ಹಾರಿಸಿಕೊಂಡು ಸವಾರಿ ಮಾಡುತ್ತಾನೆ. ಕುದುರೆಗಳನ್ನು ಚಿಕ್ಕಂದಿನಿಂದ ತರಬೇತಿ ಮಾಡಿ ಎರಡನೆಯ ವಯಸ್ಸಿನಲ್ಲೇ ಕುದುರೆ ಜೂಜಿನಲ್ಲಿ ಓಡಿಸುತ್ತಾರೆ. ಗೆದ್ದ ಕುದುರೆಗೆ ಒಂದು ಲಕ್ಷ ಡಾಲರ್ ಬಹುಮಾನ ಬಂದಿದೆ. ಸಹಿಷ್ಣುತೆ, ದೀರ್ಘ ದೂರದ ದಾಳಿ, ಗ್ರಾಮಾಂತರ ಪ್ರದೇಶಗಳ ಓಟ ಮತ್ತು ಅಶ್ವದಳಗಳು ಇಲ್ಲೆಲ್ಲ ರಾವುತರು ಭಾಗಿಯಾಗಿದ್ದಾರೆ. ನಾಗಾಲೋಟದ ಕುದುರೆಯ ಮೇಲಿರುವವನು ಟೆನ್ಟ್ ಪೆಗ್ ಎಂಬ ಕ್ರೀಡೆಯಲ್ಲಿ ಭೂಮಿಯಲ್ಲಿ ನೆಟ್ಟಿರುವ ಗೂಟವನ್ನು ಭಲ್ಲೆಯಿಂದ ಚುಚ್ಚಿ ಎತ್ತುತ್ತಾನೆ; ನೆಲದ ಮೇಲಿರುವ ಕೈವಸ್ತ್ರವನ್ನು ಹಿಡಿಯುತ್ತಾನೆ; ಪಿಗ್‍ಸ್ಟಿಕಿಂಗ್ ಎಂಬ ಕ್ರೀಡೆಯಲ್ಲಿ ಕಾಡುಹಂದಿಯನ್ನು ಕತ್ತಿಯಿಂದಿರಿಯುತ್ತಾನೆ. ನಿಪುಣ ರಾವುತ ಕುದುರೆಯ ಮೇಲೆ ನಿಂತುಕೊಂಡು ಸವಾರಿ ಮಾಡುತ್ತ ಥಟ್ಟನೆ ಮಗ್ಗುಲಲ್ಲಿ ಓಡುತ್ತಿರುವ ಕುದುರೆಯ ಮೇಲೆ ನಿಂತು ಸವಾರಿ ಮಾಡಬಲ್ಲ.

ರಾಣಾ ಪ್ರತಾಪಸಿಂಹಸಂಪಾದಿಸಿ

ರಾಣಾ ಪ್ರತಾಪಸಿಂಹನನ್ನು ಅವನ ಶತ್ರುಗಳು ಸುತ್ತುವರಿದಿದ್ದಾಗ ಅವನ ವೀರ ಕುದುರೆ ಚೇತಕ್ ದೆಹಲಿಯ ಕೋಟೆಯನ್ನೂ ಪಕ್ಕದ ಕಂದಕವನ್ನೂ ಒಂದೇ ಜಿಗಿತದಲ್ಲಿ ಹಾರಿ ತನ್ನ ಒಡೆಯನನ್ನು ಶತ್ರುಗಳಿಂದ ಪಾರು ಮಾಡಿದ್ದು ಪ್ರಚಂಡ ಸಾಹಸ. ಇಂಗ್ಲೆಂಡಿನ ಎಡ್ವರ್ಡ್ ಸ್ಟೋಕ್ಸ್ ಪೂರ್ತಿ ಕುರುಡನಾಗಿ ಹೋದರೂ ಬೇಟೆ ನಾಯಿಗಳೊಡನೆ ಕುದುರೆಸವಾರಿ ಮಾಡುತ್ತಾ ಬೇಟೆಯಾಡುತ್ತಿದ್ದ. ದಾರಿಯಲ್ಲಿದ್ದ ವಿಘ್ನಗಳನ್ನು ಅವನ ಸಂಗಾತಿ ಗಂಟೆ ಬಾರಿಸಿ ಸೂಚಿಸಿದಾಗ ಅವನು ಕುದುರೆಯನ್ನು ಹಾರಿಸಿ ತೊಡರುಗಳನ್ನು ದಾಟುತ್ತಿದ್ದ. ಪ್ರೌಢ ಶಿಕ್ಷಣದಿಂದ ಅಶ್ವಗಳಿಗೆ ಎಂಥ ಅದ್ಭುತ ವಿಧೇಯತೆಯನ್ನು ಕಲಿಸಬಹುದು ಮತ್ತು ಪ್ರವೀಣ ಸವಾರರು ಎಷ್ಟರಮಟ್ಟಿಗೆ ಹಿಡಿತವಿಡಬಲ್ಲರು ಎಂಬುದನ್ನು ಒಲಿಂಪಿಕ್ ಅಶ್ವಕ್ರೀಡಾ ಪಂದ್ಯಗಳೂ ಅಂತರರಾಷ್ಟ್ರೀಯ ಅಶ್ವಪ್ರದರ್ಶನಗಳೂ ನಿರ್ದೇಶಿಸುತ್ತವೆ. ಅಗ್ರೇಸರ ರಾವುತರೂ ಸರ್ವೋತ್ತಮ ಕುದುರೆಗಳೂ ಜೊತೆಗೂಡಿ ಪ್ರದರ್ಶಿಸುವ ಆಶ್ಚರ್ಯಚಕಿತ ಸಾಹಸಗಳು ರೋಮಾಂಚಗೊಳಿಸುತ್ತವೆ.  

ಉಲ್ಲೇಖಗಳುಸಂಪಾದಿಸಿ