ಪಾರಂಪಾರಿಕ ವೈದ್ಯಕೀಯ ಪದ್ಧತಿಯ ಅಪೂರ್ವ ಜ್ಞಾನನಿಧಿಯೆಂದೇ ಹೆಸರುಮಾಡಿರುವ ಕುಂಜಿರ ಮೂಲ್ಯ, 'ನಾಟೀವೈದ್ಯ ಪದ್ಧತಿಯ ಪರಿಣಿತರ'ಲ್ಲೊಬ್ಬರು. ೫ ವರ್ಷಗಳ ಹಿಂದೆ ನಾಟಿ ವೈದ್ಯಲೋಕದ ಸಂಪನ್ಮೂಲ ವ್ಯಕ್ತಿಯೆಂದೇ ಗುರುತಿಸಲ್ಪಟ್ಟಿರುವ ’ರಾಷ್ಟ್ರೀಯ ನಾವೀನ್ಯ ಪ್ರತಿಷ್ಠಾನದ ಜ್ಞಾನ ಸಂಪನ್ನ ವಿಭಾಗ'ದ 'ರಾಷ್ಟ್ರೀಯ ಪ್ರಶಸ್ತಿ'ಗೆ ಆಯ್ಕೆಯಾಗಿ, ಸನ್ ೨೦೦೫ ರಲ್ಲಿ ಆಗಿನ 'ರಾಷ್ಟ್ರಪತಿ ಅಬ್ದುಲ್ ಕಲಾಂ'ರವರಿಂದ ವಿಶೇಷ ಪುರಸ್ಕಾರಗಳಿಸುವ ಮೂಲಕ 'ನಾಟಿ ವೈದ್ಯ'ಕ್ಕೆ ಮತ್ತೊಮ್ಮೆ 'ರಾಷ್ಟ್ರೀಯ ಮನ್ನಣೆ' ಗಳಿಸಿಕೊಟ್ಟ ಸಾಧಕರವರು. ಒಳ್ಳೆಯ ಅನುಭವಿ. ೫೦೦ ಕ್ಕೂ ಮಿಕ್ಕಿದ ಗಿಡಮೂಲಿಕೆ ಜಡಿಬೂಟಿಗಳನ್ನು ಚೆನ್ನಾಗಿ ಬಲ್ಲ ಹಾಗೂ ಅವುಗಳನ್ನು ರೋಗಿಗಳಮೇಲೆ ಪ್ರಯೋಗಿಸಿ ಅನುಭವಹೊಂದಿದರು. ಆ ಪ್ರದೇಶದಲ್ಲೆಲ್ಲಾ ನಾಟಿವೈದ್ಯರಾಗಿ ಪ್ರಸಿದ್ಧರು. ಅವರ ಸುದೀರ್ಘ ಸೇವಾ ಬದುಕಿನವಧಿಯಲ್ಲಿ ಸುಮಾರು ಐದು ಸಾವಿರಕ್ಕೂ ಮಿಕ್ಕಿದ ರೋಗಿಗಳಿಗೆ ಚಿಕಿತ್ಸೆ ನೀಡಿ, ಒಬ್ಬ ನಿಷ್ಣಾತ ವೃತ್ತಿಪರ ವ್ಯಕ್ತಿಯೆಂದು ಹೆಸರುವಾಸಿಯಾದವರು.

ಪರಿವಾರ ಬದಲಾಯಿಸಿ

ಕುಂಜರ ಮೂಲ್ಯ ಕಾರ್ಕಳ ತಾಲ್ಲೂಕಿನ ಮಾಳಗ್ರಾಮದಲ್ಲಿ ಜನಿಸಿದರು. ಅವರಿಗೆ, ನಾಲ್ಕುಜನ ಗಂಡುಮಕ್ಕಳು. ತಂದೆಯ ವೃತ್ತಿಯ ಬಗ್ಗೆ, ಅವರ ತತ್ವ ಮತ್ತು ಸಿದ್ಧಾಂತಗಳಿಗೆ ಮಕ್ಕಳು ಹೆಚ್ಚು ಬೆಲೆಕೊಡದೆ ತಮ್ಮ ತಮ್ಮ ಯೋಗ್ಯತೆಗನುಗುಣವಾಗಿ ಕೆಲಸ ಹುಡುಕಿಕೊಂಡು ಹೋದರು. ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯಮಗಳು ಮದುವೆಯಾಗಿದ್ದರೂ, ಗಂಡನಿಂದ ಪರಿತ್ಯಕ್ತೆಯಾಗಿ ಒಬ್ಬ ಮಗನಜೊತೆಗೆ ವಾಪಸ್ಸಾಗಿದ್ದಾರೆ. ಕಿರಿಯ ಮಗಳು ಮದುವೆಗೆ ಮೊದಲೇ ಮಾನಸಿಕ ಅಸ್ವಸ್ಥೆಗೆ ಗುರಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸಲಾಗದೆ ಯಾರೋ ಪರಿಚಯಸ್ತರ ಮೂಲಕ ಚಿಕ್ಕಮಗಳೂರಿನ ಆಶ್ರಮವೊಂದರಲ್ಲಿ ಸೇರಿಕೊಂಡಿದ್ದಾರೆ. ಮನೆ ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ನೀರು, ವಿದ್ಯುತ್, ಯಾವ ಗೃಹೋಪಕರಣಗಳೂ ಇಲ್ಲದ ಹರುಕು-ಮನೆಯಲ್ಲಿ ವಾಸ. ವೃತ್ತಿಯಲ್ಲಿ ದೊರೆತ ಪ್ರಶಸ್ತಿಫಲಕಗಳನ್ನು ಇಡಲೂ ಮನೆಯಲ್ಲಿ ಸರಿಯಾದ ಸ್ಥಳವಿಲ್ಲ.

ಕುಂಜಿರ ಮೂಲ್ಯರು, ಗುರುತಿಸಪಟ್ಟಿದ್ದು ಬದಲಾಯಿಸಿ

ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಜೀವಶಾಸ್ತ್ರ ಪ್ರಾಧ್ಯಾಪಕ, ಡಾ. ಪ್ರಭಾಕರ ಆಚಾರ್ಯರವರು, ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯಗಳ ಬಗ್ಗೆ ಬಹುಕಾಲ ಸಂಶೋಧನೆ ನಡೆಸಿದರು. ತಮ್ಮ ಅಗಾಧ ಪರಿಶ್ರಮ,ಆಸಕ್ತಿಗಳಿಗೆ ಸ್ಪಂದಿಸುವಂತಹ ಒಬ್ಬ ಸಹಾಯಕನ ಅವಶ್ಯಕತೆ ಅವರಿಗಿತ್ತು. ಅಲ್ಲಿನ ದುರ್ಗಮ ಕಾಡುಗಳಲ್ಲಿ ಹೆದರಿಕೆಯಿಲ್ಲದೆ ಸಸ್ಯ ಪ್ರಭೇದಗಳನ್ನು ಹುಡುಕಿಕೊಂಡು ಅಲೆದಾಡಲು ಮತ್ತು ಅನೇಕ ವೈವಿಧ್ಯಮಯ ಗಿಡಮೂಲಿಕೆಗಳನ್ನು ಸಂಗ್ರಹಿಸಲು ಒಬ್ಬ ಸಮರ್ಥ ಹಾಗೂ ವಿಶ್ವಸನೀಯ ವ್ಯಕ್ತಿಯ ಹುಡುಕಾಟದಲ್ಲಿದ್ದಾಗ ಸುಲಭವಾಗಿ ಕಣ್ಣಿಗೆ ಕಂಡ ವ್ಯಕ್ತಿ,ಕುಂಜಿರ ಮೂಲ್ಯರು. ಆಚಾರ್ಯರು ಅವರನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ಕುಂಜಿರ ಮೂಲ್ಯರು ಪರಿಚಯಿಸಿದ ಗಿಡಮೂಲಿಕೆಗಳು ಮತ್ತು ಜೀವ ವಿವಿಧ್ಯ ಪ್ರಭೇದಗಳನ್ನು ಆಳವಾಗಿ ಅಧ್ಯಯನಕೊಳಪಡಿಸಿ ಪಾರಂಪರಿಕ ಜ್ಞಾನಕ್ಕೆ ಕನ್ನಡಿಹಿಡಿದರು. ಮೂಲ್ಯರಿಂದ ಚಿಕಿತ್ಸೆಪಡೆದ ರೋಗಿಗಳನ್ನು ಹುಡುಕಿ ಮಾತಾಡಿಸಿ ನಾಟಿ ವೈದ್ಯ ಚಿತ್ಸೆಯ ಪರಿಣಾಮಗಳನ್ನು ದಾಖಲಿಸಿದರು ಡಾ.ಆಚಾರ್ಯರು.'ಕುಂಜಿರ ಮೂಲ್ಯರ ಬದುಕು-ಬಾಲ್ಯ-ಸಾಧನೆಗಳ ವಿವರಗಳನ್ನು ಕಲೆಹಾಕಿ ಹುಟ್ಟುದಾರಿದ್ರ್ಯದ ಮೂರ್ತಿರೂಪವೆಂಬಂತಿದ್ದ ಮೂಲ್ಯರಿಗೆ ಸಂಕಷ್ಟದ ದಿನಗಳಲ್ಲಿ ಆರ್ಥಿಕ ನೆರವು ನೀಡಿದರು. ದೇಶ ವಿದೇಶಗಳ ಸಂಶೋಧನಾ ತಂಡಗಳಿಗೆ 'ಕುಂಜಿರ ಮೂಲ್ಯ' ರನ್ನು ಪರಿಚಯಿಸಿ, ೧೯೯೬ ರಲ್ಲಿ ಭುವನೇಂದ್ರ ಕಾಲೇಜ್ ನಲ್ಲಿ ಸನ್ಮಾನಿಸುವ ಮೂಲಕ ಮುಂದಿನ ಸರಣಿ ಸನ್ಮಾನಗಳಿಗೆ ಕಾರಣರಾದರು.

  • ಸಾಂಪ್ರದಾಯಿಕ ಜ್ಞಾನವನ್ನು ಖ್ಯಾತ ಪರಿಸರ ತಜ್ಞಗೂ ಹೋರಟಗಾರ ಪ್ರೊ.ಮಾಧವ ಘಾಡ್ಗಿಲ್ ರ ಮಾರ್ಗದರ್ಶನದಲ್ಲಿ ’ಭಾರತೀಯ ವಿಜ್ಞಾನ ಮಂದಿರದ ಕಾರ್ಕಳ-ಕ್ಷೇತ್ರ ಪರಿಸರ ವಿಜ್ಞಾನ ಕೇಂದ್ರದ ಮುಖಾಂತರ ದಾಖಲಿಸಿ ’ರಾಷ್ಟ್ರೀಯ ನಾವೀನ್ಯ ಪ್ರತಿಷ್ಠಾನಕ್ಕೆ ಒಪ್ಪಿಸಿದರು.
  • 'ಕುಂಜಿರ ಮೂಲ್ಯ'ರಂತಹ ಸಂಪಲ್ಮೂಲ ವ್ಯಕ್ತಿಗಳನ್ನು ಸಮಾಜ ದುಡಿಸಿಕೊಂಡಿದೆ, ಬಳಸಿಕೊಂಡಿದೆ, ಆದರೆ ಸಮರ್ಪಕವಾಗಿ ನಡೆಸಿಕೊಂಡಿಲ್ಲ ; ನೊಂದವರ ನೋವಿಗೆ ಪರಿಹಾರ ನೀಡಿ ಬದುಕು ಸವೆಸಿದ ಅವರ ಸೇವೆಗೆ, ಸಮರ್ಪಕವಾಗಿ ಸ್ಥಳೀಯವಾಗಿ ಅವರಿಗೆ ಬೆಂಬಲ ಹರಿದುಬಂದಂತಿಲ್ಲ. ಅವರ ಮನೆ ಮಠ, ಸಂಸಾರಸ್ಥಿತಿ-ಗತಿಗಳು ಅವರ ನೆಮ್ಮದಿಯ ಜೀವನಕ್ಕೆ ಕನ್ನಡಿ ಹಿಡಿಯುತ್ತವೆ. ಜನರ ನಿರ್ಲಕ್ಷ್ಯ, ಉಪೇಕ್ಷೆ, ದಾರಿದ್ರ್ಯದ ಹುತ್ತದೊಳಗೆ ಹುದುಗಿ ಅಡಗಿದ್ದ ಅಪೂರ್ವ ಜ್ಞಾನನಿಧಿಯನ್ನು ಹೊರತೆಗೆದರು. ಮುಂದಿನ ಪೀಳಿಗೆಗೆ ಬಹುಮೂಲ್ಯ ಭಂಡಾರವನ್ನು ಅವರು ಪರಿಚಯಿಸಿದ್ದಾರೆ.

ಗೌರವ ಸನ್ಮಾನಗಳು ಬದಲಾಯಿಸಿ

'ಕುಂಜಿರ ಮೂಲ್ಯ' ರ ಪ್ರತಿಭೆಗೆ ಸಂದ ಗೌರವಗಳು ಹಲವಾರು. ಅನೇಕ ಸಂಘಸಂಸ್ಥೆಗಳ ಮೂಲಕ ದೇಶದ ವಿವಿದೆಡೆಗಳಲ್ಲಿ 'ಕುಂಜಿರ ಮೂಲ್ಯ ರು ಹಲವಾರು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.

  • ೧೯೯೬ ರಲ್ಲಿ, ೪೨ ನೇ ’ವನ್ಯಜೀವಿ ಸಪ್ತಾಹ’ ಸಂಧರ್ಭದಲ್ಲಿ ಕಾರ್ಕಳದ ’ಭುವನೇಂದ್ರ ನೇಚರ್ ಕ್ಲಬ್' (ಇಂಡಿಯಾ) ವತಿಯಿಂದ ನದೆದ ’ಸಲೀಂ ಆಲಿ ಜನ್ಮಶತಾಭ್ದಿಯ’ ವಿಚಾರ ಸಂಕಿರಣದಲ್ಲಿ ಡಾ. ಶಿವರಾಂತರ ಸಮ್ಮುಖದಲ್ಲಿ,ಮೊದಲಬಾರಿಗೆ, ಕುಂಜಿರ ಮೂಲ್ಯರನ್ನು ಸನ್ಮಾನಿಸಲಾಯಿತು.
  • ತಿಪಟೂರಿನ ’ಬೈಫ್’ 'ಪಾರಂಪರಿಕ ವೈದ್ಯ ಪರಿಷತ್ ಕರ್ನಟಕ' [ರಿ] ಆಯೋಜಿಸಿದ 'ರಾಜ್ಯ ಸಮ್ಮೆಳನದಲ್ಲಿ ಸನ್ಮಾನ'.
  • ೨೦೦೩ ರಲ್ಲಿ ನವದೆಹಲಿಯ ’ರಾಷ್ಟ್ರೀಯ ಔಷಧಿ ಸಸ್ಯಗಳ ಮಂಡಳಿಯಿಂದ ಚಿತ್ರದುರ್ಗದ ಸಿರಿಗೆರೆ ಬೃಹನ್ಮಠದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ 'ಕಂಚಿನ ಧನ್ವಂತರಿ ಮೂರ್ತಿ' ಮತ್ತು ೧೦ ಸಾವಿರ ನಗದು ಒಳಗೊಂಡ ’ವನೌಷಧಿ ಪಂಡಿತ'-೨೦೦೩ ಪ್ರಶಸ್ತಿ.
  • ಅಹಮದಾಬಾದ್ ನ ರಾಷ್ಟ್ರೀಯನಾವೀನ್ಯ ಪ್ರತಿಷ್ಥಾನ್’ ಎರ್ಪಡಿಸಿದ್ದ ಜನಸಾಮಾನ್ಯರ ನೂತನ ಆವಿಶ್ಕಾರಗಳ ಮತ್ತು ಸಾಂಪ್ರದಾಯಿಕ ಜ್ಞಾನ ಸಂಪನ್ನ ವ್ಯಕ್ತಿಗಳ ವಿಭಾಗದಿಂದ ಆಯ್ಕೆಗೊಂಡ 'ಏಕೈಕ ನಾಟಿ ವೈದ್ಯ'ರೆಂಬ ಹೆಗ್ಗಳಿಕೆಯ ಜತೆ, ೨೦೦೫ ಜನವರಿ ಐದರಂದು, ರಾಷ್ಟ್ರಪತಿ ಡಾ. ಏಪಿಜೆ ಅಬ್ದುಲ್ ಕಲಾಂರವರಿಂದ ಪ್ರಶಸ್ತಿ ಸ್ವೀಕಾರಮಾಡಿದರು.

ನಾಟೀವೈದ್ಯರಾಗಿ ಜೀವನ ನಿರ್ವಹಣೆಯ ಅನುಭವಗಳು ಬದಲಾಯಿಸಿ

ಒಂದು ಕುಟುಂಬದ ೬ ಮಂದಿಯ ಜೀವ ಉಳಿಸಿದ ಖ್ಯಾತಿ. ಇದುವರವಿಗೂ 'ಕುಂಜಿರ ಮೂಲ್ಯ' ರವರ ಚಿಕಿತ್ಸೆ ಫಲಿಸದೆ ಯಾವರೋಗಿಯೂ ಮರಣಿಸದ ಇತಿಹಾಸವಿಲ್ಲ. ದಾಖಲೆ ಇಟ್ಟುಕೊಂಡಿಲ್ಲವಾದರೂ ಮೃತ್ಯುವಿನತ್ತ ಮುಖಮಾಡಿದ ಅನೇಕರು ಬದುಕಿದ ನೆನಪು ಉದಾಹರಣೆಗಳಿವೆ. ೨೦ ವರ್ಷಗಳ ಹಿಂದೆ ಒಂದು ಮಳೆಗಾಲದಲ್ಲಿ ವಿಷದಿಂದ ಕೂಡಿದ್ದ ಕಾಡು ಅಣಬೆಯ ಪದಾರ್ಥ ಸೇವಿಸಿ ಸಾವಿನಂಚಿಗೆ ಸಂದಿದ್ದ ಓಬಯ್ಯ ಗೌಡ ಎಂಬುವರ ಕುಟುಂಬದ ೬ ಮಂದಿಯನ್ನು ಬದುಕಿಸಿದ ಸಂಗತಿ ಊರಮಂದಿಗೆ ಇದುವರೆಗೂ ನೆನಪೊಇದಎಲ್ ಈ ಸಂದರ್ಭದಲ್ಲಿ 'ಕುಂಜಿರ ಮೂಲ್ಯ'ರಿಗೆ ಕರೆ ಕಳುಹಿಸಿದ ಮತ್ತು ಅವರ ಔಷಧಿಯಿಂದ ಪವಾಡ ಸದೃಶ ಗುಣ ಕಂಡ ನೆನಪಿಗೆ ಶಂಕರ ಜೋಶಿ ಸಾಕ್ಷಿಯಾಗಿ ಇಂದಿಗೂ ಇದ್ದಾರೆ.ಪಶ್ಚಿಮ ಘಟ್ಟದ ಅರಣ್ಯದ ಬೆಟ್ಟದಲ್ಲಿ ಅಲ್ಲಿ ಹರಿದುಬರುವ ಹೊಳೆ ತೋಡುಗಳ ಬದಿಯಲ್ಲೆ ಬೆಳೆದಿರುವ ವೈವಿಧ್ಯಮಯ ಗಿಡಮೂಲಿಕೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಾಮಾನ್ಯವಲ್ಲ. ಹಾಗೆಯೇ ಅಗತ್ಯಬಿದ್ದಾಗ ಬಳಸಿಕೊಳುವುದು ಒಂದು ಸವಾಲು. ಕೆಲವು ವೇಳೆ ಕೆಲವೊಂದು ಬಗೆಯ ಸಸ್ಯಗಳನ್ನು ತತ್ಕಾಲಕ್ಕೆ ಹಸಿಯಾಗಿಯೇ ತಂದು ಬಳಸಬೇಕು. ಹೊತ್ತಿಲ್ಲದ ಹೊತ್ತಿನಲ್ಲಿ ವೈದ್ಯರನ್ನು ಅರಸಿಕೊಂಡು ಬರುವ ತುರ್ತು ಲಭ್ಯವಾಗಿರಬೇಕು. 'ಕುಂಜಿರ ಮೂಲ್ಯ'ರ ಮಕ್ಕಳಿಗೆ ಇದನ್ನು ಹೇಳಿದರೆ ಅವರೂ ಕೇಳಿಸಿಕೊಳ್ಳುವುದಿಲ್ಲ. ನಾಟೀವೈದ್ಯ ಹೊಟ್ಟೆತುಂಬಿಸಿಕೊಳ್ಳುವ ಕಸಬಲ್ಲ. ಆಸ್ಪತ್ರೆಗೆ ಹೋದರೆ ಇಷ್ಟು ಎಂದು ಕೊಟ್ಟು ಔಷಧಿ ಪಡೆಯಬೇಕು. ಇಲ್ಲಿ ಯಾರೂ ಹಣಕೊಡಲು ಮುಂದೆಬರುವುದಿಲ್ಲ. ಹಿಂದೇಟು ಹೊಡೆಯುತ್ತಾರೆ.ಸೇವೆಗೆ ಶುಲ್ಕ ಕೇಖಳುವ ಪರಿಪಾಠವಿಲ್ಲದ ನಾಟಿ ವೈಧ್ಯದ ನೈತಿಕತೆಯ ಪ್ರಶ್ನೆ ಒಂದುಕಡೆ. ಪ್ರಯೋಜನಪಡೆದವರು ಸೇವೆಗೆ ಸಮನಾದ ಪ್ರತಿಫಲ ಕೊಡಲು ಲಕ್ಷ್ಯ ವಹಿಸುವುದಿಲ್ಲ. ಆಸ್ಪತ್ರೆಯಲ್ಲಿ ಧಾರಳವಾಗಿ ಹಣತೆತ್ತು ವೈದ್ಯಕೀಯ ಸವಲತ್ತುಗಳನ್ನು ಪಡೆಯುವ ರೋಗಿಗಳು, ನಾಟಿ ವೈದ್ಯರ ಮುಂದೆ ಕಡುಲೋಭಿಗಳಂತೆ ವರ್ತಿಸುವುದು ಗಮನಿಸಬೇಕಾದ ಸಂಗತಿ.

ನಾಟಿವೈದ್ಯರಾಗಿ ಜೀವನ ನಿರ್ವಹಣೆ ಅತಿ ಕಷ್ಟಕರ ಬದಲಾಯಿಸಿ

'ಕುಂಜಿರ ಮೂಲ್ಯ'ರಿಗೆ, ರಾಷ್ಟ್ರಮಟ್ಟದ ಪ್ರಶಸ್ತಿ ಸನ್ಮಾನಗಳು ಸಂದಿದ್ದರೂ,ಮಾದ್ಯಮಗಳ ಪ್ರಚಾರವಾಗಿ ೬ ವರ್ಷಗಳಾದರು, ಪ್ರಸಿದ್ಧಿಪಡೆದಿದ್ದರೂ,ನಾಟಿ ವೈದ್ಯರ ಬದುಕಿನಲ್ಲಿ ಬೆಳಕು ಮೂಡಿಲ್ಲ. ತಮ್ಮ ಜೀವನದಲ್ಲಿನ ಪ್ರೌಢಿಮೆ ಪರಿಶ್ರಮಗಳನ್ನು ನಗದೀಕರಿಸುವ ಚಿಂತನೆ ಮಾಡದ, ಚಾಲಾಕಿ ಮಾತುಗಳನ್ನು ಆಡಲರಿಯದ ಮುಗ್ಧಮನಸ್ಸಿನ ವ್ಯಕ್ತಿ,ತನ್ನ ಬದುಕಿನುದ್ದಕ್ಕೂ ಸಂಕಷ್ಟಗಳ ಮಧ್ಯೆ ನಡೆದುಬಂದರುವ ತಂದೆಯವರ ವ್ರತ್ತಿಯ ಆಯ್ಕೆ ಮಕ್ಕಳಿಗೆ ಪ್ರಿಯವಿಲ್ಲ. ಕುಂಜಿರ ಮೂಲ್ಯರ ತಂದೆಯವರು ಇದೇ ವೃತಿಯನ್ನೇ ಅವಲಂಭಿಸಿ ಜೀವನವನ್ನು ಸಾಗಿಸಿದ್ದರು. ಈ ವೃತ್ತಿಯಲ್ಲಿ ಹೆಸರಾಗಿದ್ದರು ಸಹಿತ. ಚಿಕ್ಕಂದಿನಿಂದಲೇ ಮಗ ಕುಂಜಿರ ಮೂಲ್ಯರನ್ನೂ ಇದೇ ಕಸುಬಿಗೆ ತೊಡಗಿಸಿದರು. ಪರಲೋಕದಲ್ಲಿರುವ ತಂದೆಯವರ ಹೆಸರನ್ನು ಉಳಿಸಬೇಕೆನ್ನುವುದೇ ಕುಂಜಿರ ಮೂಲ್ಯರ ಜೀವನದ ಪರಮೋದ್ದೇಶ.

ನಾಟಿ ವೈದ್ಯಪದ್ಧತಿ ಬದಲಾಯಿಸಿ

ಇದೊಂದು ಗುಪ್ತ ಜ್ಞಾನ ; ಕ್ರಮೇಣ ಅಳಿವಿನ ಅಂಚಿನಲ್ಲಿರುವಂತಹದು. ಹಲವು ವೇಳೆ ತಂದೆಗೆ ತಿಳಿದಿದ್ದ ಹಾವಿನ ವಿಷದ ಔಷಧಿಯ ಗುಟ್ಟನ್ನು ಅವನ ಮಗನಿಗೂ ತಿಳಿಸಲಾರದಷ್ಟು ಗುಟ್ಟಾಗಿ ಇಡಲಾಗುತ್ತಿತ್ತು. ತಂದೆಯ ಸಾವಿನೊಂದಿಗೆ ಆ ಮದ್ದಿನ ಬಳಕೆಯೂ ಕೊನೆಗೊಳ್ಳುತ್ತಿತ್ತು. ಆದರೆ ನಾಟಿ ವೈದ್ಯಪದ್ಧತಿ, ವಂಶಪಾರಂಪರ್ಯವಾಗಿಯೇ ಉಳಿದು ಸೇವೆಯಮೂಲಕ ಹರಿದುಬಂದಿದೆ. ಈ ಪದ್ಧತಿಯ ವೈದ್ಯ ಮೌಖಿಕವಾಗಿ ಬಂದದ್ದು ಎಲ್ಲೂ ಲಿಖಿತರೂಪದಲ್ಲಿಲ್ಲ. ಈಗ್ಗೆ ೪೦ ವರ್ಷಗಳ ಹಿಂದೆ ಇದೇ ಪದ್ಧತಿಯ ಚಿಕಿತ್ಸೆ ಭಾರತದ ಮೂಲೆಮೂಲೆಯ ಹಳ್ಳಿಹಳ್ಳಿಪಟ್ಟಣಗಳಲ್ಲೂ ಪ್ರಚಲಿತದಲ್ಲಿತ್ತು. ಉಡುಪಿಯಂತಹ ಘಟ್ಟದ ಪರಿಸರದಲ್ಲಿ ನೈಸರ್ಗಿಕ ಸಂಪತ್ತನ್ನು ಬಲ್ಲ, ಹಾಗೂ ಅವನ್ನು ಔಷಧಿಯಾಗಿ ಬಳಸುವ ೫೦ ಕ್ಕೂ ಮಿಕ್ಕಿದ ನಾಟಿ ವೈದ್ಯರಿದ್ದಾರೆ. ನಾಟಿ ವೈದ್ಯ ಚಿಕೆತ್ಸೆಯಲ್ಲೇ ಪರಿಹಾರ ಕಂಡುಕೊಂಡು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದರು.ಎಲ್ಲೂ ಲೊಳಲೊಟ್ಟೆಯೆಂಬಂತೆ ಮಾತಾಡಿದ ಸಂಧರ್ಭಗಳಿಲ್ಲ. ಆಯುರ್ವೇದ ಶಾಸ್ತ್ರದಲ್ಲಿ ಬರೆದಿಟ್ಟ ಪುಸ್ತಕಗಳಿವೆ. ಚರಕ,ಶುಷೃತ ಮುಂತಾದ ಮಹಾನ್ ಆಯುರ್ವೇದಾಚಾರ್ಯರು, ಸಂಗ್ರಹಿಸಿ ಬರೆದಿಟ್ಟಿರುವ ಹೊತ್ತಿಗೆಗಳು ಪಾಶ್ಚಾತ್ಯ ಪದ್ಧತಿಯ ಪ್ರತಿಪಾದನೆ, ಕಂಪೆನಿಗಳ ಲಾಬಿ, ಸ್ವದೇಶಿ ಪ್ರತಿಪಾದಕರ್ಫ಼ ಪ್ರತಿರೋಧ, ಜನನರ ನಂಬಿಕೆ ಮಾತ್ರ ಹಗ್ಗದ ಜಗ್ಗಾಟದ ತರಹ ನಡೆಯುತ್ತಲೇ ಇದೆ. ಪೂರ್ವಗ್ರಹಗಳಿಲ್ಲದೆ ಸಂಶೋಧನೆಗೆ ಇನ್ನೂ ಎಡೆಮಾಡಿಲ್ಲ.

ಆಯುರ್ವೇದ ಮತ್ತು ನಾಟಿಪದ್ಧತಿಗಳು ಬದಲಾಯಿಸಿ

ಆಯುರ್ವೇದ ಮತ್ತು ನಾಟಿ ವೈದ್ಯಪದ್ಧತಿಗಳಿಗೆ ಮೂಲದ್ರವ್ಯ ಗಿಡಮೂಲಿಕೆಗಳು,ಮರ,ಗಿಡ, ಬಳ್ಳಿ,ತೊಗಟೆ, ಎಲೆ, ಕಾಯಿ, ಹಣ್ಣು, ಹೂವು, ಬೀಜಗಳು, ಬೇರು ಮುಂತಾದವುಗಳು. ಆದರೆ, ನಾಟಿ ವೈದ್ಯನ ಕಸಬು ಅತಿ ಕಷ್ಟಕರ ಹಾಗೂ ಜೀವನಕ್ಕೆ ಸಾಕಾದಷ್ಟು ಹಣ ಸಿಗುವುದಿಲ್ಲ. ಬಹಳ ಹಿಂದೆ, ಅಲೋಪತಿಕ್ ಔಷಧಿಗಳು ಇನ್ನೂ ಪ್ರಾರಂಭಾವಸ್ತೆಯಲ್ಲಿದ್ದಾಗ, ನಾಟಿ, ಆಯುರ್ವೇದ, ಯುನಾನಿ ಪದ್ಧತಿಗಳು ಪ್ರಚಲಿತದಲ್ಲಿದ್ದವು. ಕಷ್ಟಪಟ್ಟು ಬೆವರುಸುರಿಸಿ ಕೆಲಸಮಾಡುವ ಪರಿಸ್ಥಿತಿ ಜೀವನ ಎಲ್ಲ ರಂಗಗಳಲ್ಲೂ ಪ್ರಚಲಿತವಾಗಿತ್ತು. ಜನ ತಮಗೆ ದೊರೆತ ಇದೇ ಪದ್ಧತಿಗಳನ್ನೇ ಬಳಸಿ ಸುಖವಾಗಿದ್ದರು.

-’ತರಂಗ ಕನ್ನಡ ಪತ್ರಿಕೆಯ ಆಯ್ದ ಭಾಗಗಳಿಂದ’, ೨೦, ಜನವರಿ, ೨೦೧೧ ಆರ್,ಕೆ. ಪದ್ಮಾಕರ ಭಟ್, ಪು.೬೮,