ಕೀಟನಾಶಕಗಳು
ಪೈರುಗಳಿಗೆ ಹಾನಿಕಾರಕವಾದ, ಜನಜೀವನಕ್ಕೆ ಉಪದ್ರವಕಾರಿಯಾದ ಕೀಟಗಳ ನಿರ್ಮೂಲನಕ್ಕೆ ಬಳಸುವ ರಾಸಾಯನಿಕಗಳು (ಇನ್‍ಸೆಕ್ಟಿಸೈಡ್ಸ್). ಈ ರಾಸಾಯನಿಕಗಳ ಪ್ರಭಾವಕ್ಕೆ ಒಳಗಾದ ಕೀಟಗಳ ಜೈವಿಕ ಕ್ರಿಯೆಗಳು ಏರುಪೇರಾಗಿ ಅವು ಸಾಯುವುವು.ಕೀಟನಾಶಕಗಳು ಸಾವಯವ ಅಥವಾ ನಿರವಯವ ವಸ್ತುಗಳಾಗಿರಬಹುದು. ಬಹುಪಾಲು ಕೀಟನಾಶಕಗಳು ಸಂಯೋಜಿತವಾದವು. ಅವುಗಳ ಕಾರ್ಯವಿಧಾನಕ್ಕೆ ಅನುಗುಣವಾಗಿ [೧]
ಕೀಟನಾಶಕಗಳನ್ನು ಮುಂದೆ ಸೂಚಿಸಿರುವಂತೆ ವಿಂಗಡಿಸುವುದು ವಾಡಿಕೆ
ಬದಲಾಯಿಸಿ1 ಜಠರ ವಿಷಗಳು: ಗಿಡಗಳಿಗೆ ಇವನ್ನು ಸಿಂಪಡಿಸಲಾಗುವುದು. ಎಲೆಗಳನ್ನು ಅಗಿದು ತಿನ್ನುವ ಕೀಟಗಳಿಗೆ ಇವು ಮಾರಕವಾಗುವುವು. ಕ್ಯಾಲ್ಸಿಯಂ ಮತ್ತು ಸೀಸದ ಆರ್ಸಿನೇಟುಗಳು, ಪ್ಯಾರಿಸ್ ಗ್ರೀನ್ ಇವುಗಳಲ್ಲಿ ಮುಖ್ಯವಾದವು. 2 ಸಂಪರ್ಕ ವಿಷಗಳು: ಕೀಟಗಳ ಮೇಲೆಯೇ ಇವನ್ನು ಪ್ರಯೋಗಿಸುವರು. ಎಲೆಗಳನ್ನು ಕೊರೆದು ದ್ರವರೂಪದ ಆಹಾರವನ್ನು ಹೀರುವ ಜಾತಿಗೆ ಸೇರಿದ ಕೀಟಗಳು ಇವುಗಳಿಂದ ಸಾಯುವುವು. ಸುಣ್ಣ-ಗಂಧಕ ಮಿಶ್ರಣ, ನಿಕೊಟಿನ್ ದೂಳು, ಸೀಮೆಎಣ್ಣೆಯ ಎಮಲ್ಷನ್‍ಗಳು ಈ ಗುಂಪಿಗೆ ಸೇರಿದ ವಸ್ತುಗಳು. 3 ಉಳಿವ ಕೀಟನಾಶಕಗಳು: ಇವನ್ನು ತುಂತುರು ರೂಪದಲ್ಲಿ ಗಿಡದ ಹೊರಮೈ ಮೇಲೆ ಹರಡಲಾಗುವುದು. ಇವುಗಳ ಸಂಪರ್ಕಕ್ಕೆ ಬಂದ ಕ್ಷಣವೇ ಮಾರಕಪ್ರಮಾಣದ ವಿಷ ಕೀಟಕ್ಕೆ ತಗಲುವುದು. 4 ವ್ಯಾಪಕ ಕೀಟನಾಶಕಗಳು: ಸಸ್ಯಾದ್ಯಂತ ಇವು ವ್ಯಾಪಿಸಿದ್ದು ಸಸ್ಯದ ಯಾವ ಭಾಗವನ್ನು ತಿಂದರೂ ಕೀಟ ಸಾಯುವುದು. 5 ಕೀಟನಾಶಕ ಧೂಮಗಳು: ಉಗ್ರಾಣಗಳಲ್ಲಿ ಕೂಡಿಟ್ಟ ಧಾನ್ಯಗಳ ಸಂರಕ್ಷಣೆಗೆ ಮತ್ತು ಸಿಂಪಡಿಸುವ ವಿಧಾನದಿಂದ ನಾಶಪಡಿಸಲು ಸಾಧ್ಯವಾಗದ ಕೊರೆಯುವ ಕೀಟಗಳ ನಿವಾರಣೆಗೆ ಇವು ಸಹಾಯಕಾರಿ. ಅನಿಲರೂಪದಲ್ಲಿ ಅಥವಾ ಸುಲಭವಾಗಿ ಅನಿಲಸ್ಥಿತಿ ತಳೆಯುವ ದ್ರವರೂಪದಲ್ಲಿ ಬಳಸಿದಾಗ ಇವು ಕೀಟಗಳ ಉಸಿರಿನೊಡನೆ ಬೆರೆತು ಅವುಗಳ ದೇಹಗತವಾಗಿ ಕೊಲ್ಲುವುವು. ಇಂಗಾಲದ ಡೈಸಲ್ಫೈಡ್ . ಹೈಡ್ರೊಜನ್ ಸಯನೈಡ್ ಈಥೈಲ್ ಅಸಿಟೇಟ್ ಮತ್ತು ಇಂಗಾಲದ ಟೆಟ್ರಕ್ಲೋರೈಡುಗಳ ಮಿಶ್ರಣ ಈ ವರ್ಗಕ್ಕೆ ಸೇರಿದ ರಾಸಾಯನಿಕಗಳು. 6 ಆಕರ್ಷಕಗಳು: ಆಹಾರಾಂಶವಿರುವ ಸಸ್ಯಭಾಗಗಳನ್ನು ಕೊರೆದು ತಮ್ಮೆಡೆಗೆ ಬರುವಂತೆ ಕೀಟಗಳನ್ನು ಆಕರ್ಷಿಸುವ ಶಕ್ತಿಯಿರುವ ರಾಸಾಯನಿಕಗಳಿವು. 7 ವಿಕರ್ಷಕಗಳು: ಕೀಟಗಳು ಸಸ್ಯಗಳ ಬಳಿ ಸುಳಿಯದಂತೆ ಹಿಮ್ಮೆಟ್ಟಿಸುವ ವಸ್ತುಗಳು.ಮೇಲ್ಕಂಡ ವಿಧಾನಗಳಲ್ಲಿ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಕೀಟನಾಶಕಗಳು ಇರುವುದರಿಂದ, ಇದನ್ನು ಕಟ್ಟುನಿಟ್ಟಾದ ವರ್ಗೀಕರಣ ಎನ್ನಲುಬಾರದು. ಈಗ ಮುಖ್ಯ ಕೀಟನಾಶಕ ವರ್ಗಗಳ ವೈಶಿಷ್ಟವನ್ನು ವಿವೇಚಿಸಲಾಗುವುದು.[೨]
ಜಠರ ವಿಷಗಳು
ಬದಲಾಯಿಸಿಬಹುತೇಕ ಇವು ಆರ್ಸೆನಿಕ್ ಸಂಯುಕ್ತಗಳು. ಸೀಸದ ಆರ್ಸಿನೇಟ್, ಕ್ಯಾಲ್ಸಿಯಂ ಆರ್ಸಿನೇಟ್ ಮತ್ತು ಪ್ಯಾರಿಸ್ ಗ್ರೀನ್ ಇವುಗಳಲ್ಲಿ ಮುಖ್ಯವಾದವು. ಇವುಗಳ ತಯಾರಿಕೆಗೆ ಆರ್ಸೆನಿಕ್ ಟ್ರೈಆಕ್ಸೈಡ್ ಅಗತ್ಯ. ತಾಮ್ರ ಮತ್ತು ಸೀಸದ ಅದುರುಗಳನ್ನು ಸಂಸ್ಕರಿಸುವಾಗ ಹೊರಬೀಳುವ ಧೂಮದಲ್ಲಿ ಆರ್ಸೆನಿಕ್ ಟ್ರೈಆಕ್ಸೈಡ್ ಇರುತ್ತದೆ. ಇದನ್ನು ಕೋಶಗಳಲ್ಲಿ ಸಂಗ್ರಹಿಸುವರು. ದಾರುಣ ವಿಷವಾದುದರಿಂದ ಕಾರ್ಖಾನೆಯ ಹೊಗೆಯನ್ನು ಇದರಿಂದ ಪಾರು ಮಾಡಲೇಬೇಕೆಂಬ ನಿಯಮವಿದೆ. ಹೀಗಾಗಿ ಆರ್ಸೆನಿಕ್ ಟ್ರೈಆಕ್ಸೈಡ್ ಅನಿವಾರ್ಯವಾಗಿ ಲಭಿಸುವುದು ಒಂದು ಅನುಕೂಲವೇ. ಇದಕ್ಕಾಗಿ ಕಾಟ್ರೆಲ್ ವಿದ್ಯುತ್ ಒತ್ತರಕಾರಕವನ್ನು ಉಪಯೋಗಿಸುತ್ತಾರೆ. ತಾಮ್ರದ ಉತ್ವಾದನೆಯ ಕಾಲದಲ್ಲಿ ಹುಟ್ಟುವ ಆರ್ಸೆನಿಕ್ ಟ್ರೈಆಕ್ಸೈಡಿನ ವಾರ್ಷಿಕ ಪ್ರಮಾಣ ಸುಮಾರು 90% ಭಾಗ ಆರ್ಸೆನಿಕ್‍ಯುಕ್ತ ಕೀಟನಾಶಕಗಳನ್ನು ತಯಾರಿಸಲು ವಿನಿಯೋಗವಾಗುವುದು.ಹೀಗೆ ಉಪವಸ್ತುವಾಗಿ ಒದಗಿದ ಆರ್ಸೆನಿಕ್ ಟ್ರೈಆಕ್ಸೈಡನ್ನು ಸೋಡಿಯಂ ಆರ್ಸಿನೇಟ್ ಆಗುತ್ತದೆ. ಇದನ್ನು ದ್ರಾವಣ ಮಾಡಿಕೊಂಡು ಸೀಸದ ಮತ್ತು ಕ್ಯಾಲ್ಸಿಯಂ ಆರ್ಸಿನೇಟುಗಳನ್ನು ತಯಾರಿಸಬಹುದು. ಮತ್ತೊಂದು ವಿಧಾನದಲ್ಲಿ ಆರ್ಸೆನಿಕ್ ಟ್ರೈಆಕ್ಸೈಡಿನ ದ್ರಾವಣಕ್ಕೆ ಕ್ಲೋರಿನ್ ಹಾಯಿಸಿ ಕಾಯಿಸುವರು. ಕ್ರಿಯೆಯಲ್ಲಿ ಉತ್ವತ್ತಿಯಾದ ಹೈಡ್ರೋಕ್ಲೋರಿಕ್ ಆಮ್ಲವನ್ನು ಹೊರದೂಡುವುದು ಇದರ ಉದ್ದೇಶ. ಅನಂತರ ನೈಟ್ರಿಕ್‍ಆಮ್ಲವನ್ನು ಸೇರಿಸಿಪಾಕದ ಸ್ಥಿತಿಗೆ ಬಟ್ಟಿ ಇಳಿಸಿದರೆ ಆರ್ಸೆನಿಕ್‍ಆಮ್ಲ ಉಂಟಾಗುವುದು. ಕರ್ಪೂರೀಕರಿಸಿದ ಹಳದಿ ಲಿಥಾರ್ಜನ್ನು ನೀರಿನಲ್ಲಿ ಕಲಸಿ ಕೆನೆಯಂತೆ ಮಾಡಿ ಆರ್ಸೆನಿಕ್‍ಆಮ್ಲಕ್ಕೆ ಹಾಕಿದರೆ, ಸಾಮಾನ್ಯ ಉಷ್ಣತೆಯಲ್ಲೇ ಸೀಸದ ಆರ್ಸಿನೇಟು ಒತ್ತರಿಸುವುದು. ಇದನ್ನು ಶೋಧಿಸಿ ಒಣಗಿಸಿ ಹುಡಿಯ ರೂಪದಲ್ಲಿ ರಪ್ತು ಮಾಡುವರು. ಉಪಯೋಗಿಸಿರುವ ಸೀಸದ ಮಾನಾಕ್ಸೈಡಿನ (ಲಿಥಾರ್ಜ್) ಪ್ರಮಾಣಕ್ಕೆ ಅನುಗುಣವಾಗಿ ಆಮ್ಲೀಯ ಅಥವಾ ತಟಸ್ಥ ಸೀಸದ ಆರ್ಸಿನೇಟುಗಳು ಒತ್ತರಿಸುವುವು. ಇದನ್ನು ಕೆಳಕಂಡ ಸಮೀಕರಣಗಳು ಸೂಚಿಸುತ್ತವೆ. ಆಮ್ಲೀಯ ಸೀಸದ ಆರ್ಸಿನೇಟ್ ತಟಸ್ಧ ಸೀಸದ ಆರ್ಸಿನೇಟ್
ಸೀಸದ ಆರ್ಸಿನೇಟ್
ಬದಲಾಯಿಸಿಸೀಸದ ಆರ್ಸಿನೇಟ್ ಬೇಗ ಒತ್ತರಿಸುವುದಿಲ್ಲ. ಇದೊಂದು ಅನುಕೂಲವೆನ್ನಬಹುದು. ಏಕೆಂದರೆ ಸಸ್ಯಕ್ಕೆ ಸಿಂಪಡಿಸುವ ಮುನ್ನ ಅದರ ವಿಲಂಬಿತ ದ್ರಾವಣ ಮಾಡುತ್ತೇವಷ್ಟೆ. ಆಗ ದೀರ್ಘಕಾಲ ವಿಲಂಬಿತ ಸ್ಥಿತಿಯಲ್ಲಿ ಅದು ಉಳಿಯದಿದ್ದರೆ ತೊಂದರೆಯಾಗುತ್ತಿತ್ತು. ಸೀಸದ ನೈಟ್ರೇಟ್ ಅಥವಾ ಆಸಿಟೇಟನ್ನು ಉಪಯೋಗಿಸಿಯೂ ಕ್ರಮವಾಗಿ ಅಥವಾ ತಟಸ್ಥಲವಣಗಳನ್ನು ಮಾಡಿಕೊಳ್ಳಬಹುದು.ಆಮ್ಲೀಯ ಸೀಸದ ಆರ್ಸಿನೇಟ್ ಬಹುಕಾಲ ವಿಲಂಬಿತ ಸ್ಥಿತಿಯಲ್ಲಿ ಇರಬಲ್ಲುದು. ಅದರಲ್ಲಿರುವ ಆರ್ಸೆನಿಕ್ಕಿನ ಅಂಶವೂ ಹೆಚ್ಚು. ಆದ್ದರಿಂದ ಕೀಟದ ಮೇಲೆ ತತ್‍ಕ್ಷಣ ಪರಿಣಾಮವಾಗುವುದು. ಗಿಡವನ್ನು ಗಾಸಿ ಮಾಡದೆ ಕೀಟವನ್ನು ನಾಶಪಡಿಸುವ ಶಕ್ತಿ ತಟಸ್ಥ ಲವಣಕ್ಕಿದೆ. ಪೀಚ್ ಮತ್ತು ಪ್ಲಮ್ ಹಣ್ಣಿನ ಗಿಡಗಳಿಗೆ ಇದನ್ನು ಉಪಯೋಗಿಸುವರು. ಸೀಸದ ಆರ್ಸಿನೇಟ್ ತಯಾರಿಸುವ ಈ ವಿಧಾನಗಳಲ್ಲಿ ಕೊಂಚ ಆರ್ಸೆನಿಕ್‍ಆಮ್ಲ ವರ್ತಿಸದೆ ಹಾಗೆಯೇ ಉಳಿದು ಬಿಡುವ ಸಂಭವವಿದೆ. ದ್ರಾವ್ಯ ಆರ್ಸೆನಿಕ್ಕಿನ ಅಂಶ 1% ಕ್ಕಿಂತ ಹೆಚ್ಚಿರುವುದು ಮಾನವನಿಗೆ ಅಪಾಯಕಾರಿ. ಹಾಗಿರಕೂಡದೆಂದು ಕಾನೂನು ಸಹ ಇದೆ. ಆದ್ದರಿಂದ ಮೆಗ್ನೀಸಿಯಂ ಹೈಡ್ರಾಕ್ಸೈಡ್ ಸೇರಿಸಿದರೆ ಅದು ಉಳಿದ ಆರ್ಸೆನಿಕ್‍ಆಮ್ಲದೊಡನೆ ಕೂಡಿ ಆಮ್ಲೀಯ ಮೆಗ್ನೀಸಿಯಂ ಆರ್ಸಿನೇಟ್ ಆಗುವುದು.ಮತ್ತು ಮಿಶ್ರಣ ಶ್ರೇಷ್ಠ ಕೀಟನಾಶಕವೆಂದು ಕಂಡುಬಂದಿದೆ. ಪುಡಿಮಾಡಿದ ಸೀಸದ ಸಲ್ಛೈಡ್ ಅಥವಾ ಸೀಸವನ್ನೇ ಆರ್ಸೆನಿಕ್ ಟ್ರೈಆಕ್ಸೈಡಿನೊಂದಿಗೆ ಹೈಡ್ರೊಕಾರ್ಬನ್ ಉರುವಲಿನ ಸಂಪರ್ಕದಲ್ಲಿ ದಹಿಸಿಯೂ ಸೀಸದ ಆರ್ಸಿನೇಟ್ ಪಡೆಯಬಹುದು.ಸೋಡಿಯಂ ಆರ್ಸಿಟೇಟಿನ ಕ್ಷಾರೀಯ ದ್ರಾವಣಕ್ಕೆ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣವನ್ನು ಸೇರಿಸಿದಾಗ ಕ್ಯಾಲ್ಸಿಯಂ ಆರ್ಸಿನೇಟ್ ಕೆಳಕಂಡಂತೆ ಒತ್ತರಿಸುವುದು.
ಕ್ಯಾಲ್ಸಿಯಂ ಆರ್ಸಿನೇಟ
ಬದಲಾಯಿಸಿಒತ್ತರಿಸಿದ ಕ್ಯಾಲ್ಸಿಯಂ ಆರ್ಸಿನೇಟನ್ನು ಬೇರ್ಪಡಿಸಿ ಒಣಗಿಸಿ ಹುಡಿ ಅಥವಾ ಸರಿಯರೂಪದಲ್ಲಿ ಮಾರುಕಟ್ಟೆಗೆ ಒದಗಿಸಲಾಗುವುದು. ಕೋಮಲವಾದ ಎಳೆಗಳಿರುವ ಗಿಡಗಳಿಗೆ ಕ್ಯಾಲ್ಸಿಯಂ ಆರ್ಸಿನೇಟನ್ನು ಪ್ರಯೋಗಿಸಬಾರದು. ಏಕೆಂದರೆ ಅದು ಗಿಡವನ್ನು ಗಾಸಿಪಡಿಸುವ ಸಾಧ್ಯತೆಯಿದೆ. ಉಳಿದ ಸಸ್ಯವರ್ಗಕ್ಕೆ ಬಳಸಲು ಅದು ಸೀಸದ ಆರ್ಸಿನೇಟಿಗಿಂತ ಉತ್ತಮ. ಆದರೆ ಅದಕ್ಕಿಂತ ಅಂಟುಗುಣ ಕಡಿಮೆ. ಬೋರ್ಡೋ ಮಿಶ್ರಣ ಅಥವಾ ಸುಣ್ಣದೊಡನೆ ಉಪಯೋಗಿಸಿದರೆ ಈ ತೊಂದರೆ ಇರುವುದಿಲ್ಲ. ಸೀಸದ ಆರ್ಸಿನೇಟಿಗಿಂತ ಕ್ಯಾಲ್ಸಿಯಂ ಲವಣ ಅಗ್ಗ. ಹತ್ತಿಯನ್ನು ಕಾಡುವ ಹುಳುವನ್ನು ಇದು ನಿವಾರಿಸುತ್ತದೆ. ಅಮೆರಿಕ ಸಂಯುಕ್ತಸಂಸ್ಧಾನಗಳಲ್ಲಿ ಇದಕ್ಕಾಗಿಯೇ ನಿಯೋಜಿತವಾದ ವಿಮಾನದಳವೊಂದಿದೆ. ಗಿಡದಿಂದ ಸುಮಾರು 3" ಅಂತರದಲ್ಲಿ ಹಾರುತ್ತ ಗಂಟೆಗೆ 300-400 ಎಕರೆಗಳಷ್ಟು ಹತ್ತಿಯ ಬೆಳೆಯ ಮೇಲೆ ಕ್ಯಾಲ್ಸಿಯಂ ಆರ್ಸಿನೇಟಿನ ದೂಳನ್ನು ಇದರ ಮೂಲಕ ಚೆಲ್ಲುವರು. ವಿಮಾನ ಚಾಲಕನಿಗೆ ಇದೊಂದು ಅಪಾಯಕಾರಿ ಕಾರ್ಯಕ್ರಮವೇ ಸರಿ. ಹತ್ತಿಯ ಬೆಳೆಯ ವ್ಯಾಪಕ ಸಂರಕ್ಷಣೆಗೆ ಬಳಸಿದಾಗ ಹೆಚ್ಚು ವೆಚ್ಚ ತಗಲುತ್ತದೆ. ಆದ್ದರಿಂದ ಅಗ್ಗದ ವಿಧಾನಗಳು ಹುಟ್ಟಿಕೊಂಡಿವೆ. ಅಲ್ಲದೆ ಶುದ್ಧ ಕ್ಯಾಲ್ಸಿಯಂ ಕಾರ್ಬೊನೇಟಿನ ಕಣಗಳ ಮೇಲೆ ಕ್ಯಾಲ್ಸಿಯಂ ಆರ್ಸಿನೇಟ್ ಕೂರಿಸಿ ಅಂಥ ಪುಡಿಯನ್ನು ಚೆಲ್ಲುವುದರಿಂದ ಒಟ್ಟು ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಅಲ್ಲದೆ ಶುದ್ಧ ಕ್ಯಾಲ್ಸಿಯಂ ಆರ್ಸಿನೇಟಿನಷ್ಟೇ ಪರಿಣಾಮಕಾರಿಯಾಗಿರುತ್ತದೆ. ಮತ್ತೊಂದು ವಿಧಾನದಲ್ಲಿ ಒತ್ತರಿಸಿದ ಕ್ಯಾಲ್ಸಿಯಂ ಕಾರ್ಬೊನೇಟನ್ನು ಆರ್ಸೆನಿಕ್ ಟ್ರೈಆಕ್ಸೈಡಿನೊಡನೆ ಧಾರಾಳವಾಗಿ ಗಾಳಿಯ ಸಂಪರ್ಕದಲ್ಲಿ 650º ಉಷ್ಣತೆಗೆ ಕಾಯಿಸುವರು.ಸಿಂಪಡಿಸುವ ದ್ರಾವಣನ್ನು ತಯಾರಿಸಲು ಒಂದು ಪೌಂಡು ಸೀಸದ ಅಥವಾ ಕ್ಯಾಲ್ಸಿಯಂ ಆರ್ಸಿನೇಟನ್ನು 50 ಗ್ಯಾಲನ್ ನೀರಿನಲ್ಲಿ ಕದಡುವುದು ರೂಢಿ. ಅಂದರೆ ಸುಮಾರು 0.25% ದ್ರಾವಣವಾಗುತ್ತದೆ. ಪೆಟ್ರೋಲ್‍ಚಾಲಿತ ಪಂಪೊಂದನ್ನು ಟ್ರಾಕ್ಟರಿನ ಮೇಲೆ ಹೂಡಿಕೊಂಡು ಅದರ ಸಹಾಯದಿಂದ ಒಬ್ಬಾತಗಿಡದ ಮೇಲೆ ದ್ರಾವಣ ಎರಚುತ್ತಿರುವಾಗ ಮತ್ತೊಬ್ಬ ಟ್ರಾಕ್ಟರನ್ನು ನಡೆಸುತ್ತಿರಬೇಕು. ಆದ್ದರಿಂದ ಈ ಕೆಲಸಕ್ಕೆ ಇಬ್ಬರ ಅಗತ್ಯವಿದೆ. ಆಲೂಗಡ್ಡೆಯನ್ನು ತಿಂದುಹಾಕುವ ತಿಗಣೆಯೊಂದಿದೆ. ಇದರ ವಿರುದ್ಧ ಪ್ಯಾರಿಸ್ ಗ್ರೀನ್ ಚೆನ್ನಾಗಿ ಕೆಲಸಮಾಡುತ್ತದೆ. ಆರ್ಸಿನಿಯಸ್ ಆಮ್ಲಕ್ಕೆ ತಾಮ್ರದ ಅಸಿಟೇಟ್ ದ್ರಾವಣ ಸೇರಿಸಿದರೆ ತಾಮ್ರದ ಅಸಿಟೋ ಆರ್ಸಿನೈಟ್ ಒತ್ತರಿಸುವುದು ಇದನ್ನು ಒತ್ತಡದಿಂದ ಶೋಧಿಸಿ ಒಣಗಿಸಿ ಉಪಯೋಗಿಸಬೇಕು. ಸೀಸದ ಆರ್ಸಿನೇಟಿಗಿಂತ ಪ್ಯಾರಿಸ್‍ಗ್ರೀನ್ ಹೆಚ್ಚು ಪ್ರಮಾಣ ದ್ರಾವ್ಯರೂಪದ ಆರ್ಸೆನಿಕ್ ಧರಿಸಬಲ್ಲುದು. ಆದರೂ ಅದರ ಪ್ರಮಾಣ 3.5% ಮೀರಿರಬಾರದು. ಇದರ ಪ್ರಯೋಗದಿಂದ ಸಸ್ಯ ಸುಟ್ಟು ಹೋಗುವ ಸಂಭವವಿರುವುದರಿಂದ ಅದಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದಂತಾಗಿದೆ.
ಸಂಪರ್ಕ ಕೀಟನಾಶಕಗಳು
ಬದಲಾಯಿಸಿಶಲ್ಕ ಕೀಟಗಳು (ಸ್ಕೇಲ್ ಇನ್‍ಸೆಕ್ಟ್ಸ್), ಸಸ್ಯಹೇನುಗಳು, ಕೆಂಪು ತಿಗಣೆ, ಕೆಂಜೇಡ, ದ್ರಾಕ್ಷಿಕೀಟ ಮೊದಲಾದ ಮೃದು ದೇಹರಚನೆಯುಳ್ಳ ಮತ್ತು ಕೊರೆಯುವ ಸ್ವಭಾವದ ಕೀಟಗಳಿಗೆ ಇವು ಪರಿಣಾಮಕಾರಿ. ಕೀಟಗಳ ಶರೀರದ ಮೇಲಿರುವ ಶ್ವಾಸರಂಧ್ರಗಳನ್ನು ಮುಚ್ಚಿಯೋ ಚರ್ಮದ ಮೂಲಕ ಪಸರಿಸಿಯೋ ಅವನ್ನು ನಿಶ್ವೇಷ್ಟಿತಗೊಳಿಸಿ ಕೊಲ್ಲುವುವು. ಸುಣ್ಣ-ಗಂಧಕ ಮಿಶ್ರಣ, ನಿಕೋಟಿನ್, ಸಾಬೂನು ದ್ರಾವಣ, ಸೀಮೆಎಣ್ಣೆ ಮತ್ತು ತೈಲೆಮಲ್ಷನ್‍ಗಳು ಶ್ವಾಸಕ್ರಿಯಾ ನಿರೋಧಕಗಳು. ಪೈರೆತ್ರಮ್, ರೋಟೆನೋನ್, ಡಿ.ಡಿ.ಟಿ. ಇತ್ಯಾದಿಗಳು ಚರ್ಮಗತ ವಿಷಗಳು.ಸುಣ್ಣ-ಗಂಧಕ ಮಿಶ್ರಣವನ್ನು ದ್ರಾವಣ ಅಥವಾ ದೂಳಿನ ರೂಪದಲ್ಲಿ ಸಿಂಪಡಿಸಬಹುದು. ಸುಣ್ಣದ ಕೆನೆಯೊಡನೆ ಗಂಧಕವನ್ನು ಕುದಿಸಿದಾಗ, ಪ್ರಧಾನವಾಗಿ ಕ್ಯಾಲ್ಸಿಯಂ ಪಾಲಿಸಲ್ಛೈಡಿರುವ ಹಳದಿ-ಕಂದು ದ್ರಾವಣ ದೊರೆಯುವುದು ಶೋಧಿಸಿ ಬಂದ ದ್ರಾವಣದಲ್ಲಿ 24% ಗಂಧಕವಿರುವಂತೆ ಬಿಟ್ಟಿ ಇಳಿಸಲಾಗುವುದು. ಇದನ್ನು ಭದ್ರವಾದ ಮರದ ಪೀಪಾಯಿಗಳಲ್ಲಿಟ್ಟು ರವಾನಿಸುವರು. ಇದಕ್ಕೆ ಅಗತ್ಯ. ಪ್ರಮಾಣ ನೀರನ್ನು ಸೇರಿಸಿ (8-54 ಭಾಗ) ಉಪಯೋಗಿಸಬೇಕು. ಈ ಕೀಟನಾಶಕದ ವಾರ್ಷಿಕ ಉತ್ಪಾದನೆ ಸುಮಾರು ಹತ್ತು ಮಿಲಿಯನ್ ಟನ್ನುಗಳು. ಸೇಬು, ಪಿಯರ್ ಮತ್ತು ಪೀಚ್ ಹಣ್ಣಿನ ತೋಟಗಳಲ್ಲಿ ಇದರ ಬಳಕೆ ಸಾಮಾನ್ಯ.ಹೊಗೆಸೊಪ್ಪಿನ ಕಸದಿಂದ ನಿಕೊಟಿನ್ ಸಲ್ಛೇಟನ್ನು ರೂಪಿಸಬಹುದು. ಇದರ 40% ದ್ರಾವಣ ಮಾರುಕಟ್ಟೆಯ ವಸ್ತು. 50 ಗ್ಯಾಲನ್ ನೀರಿನಲ್ಲಿ 2 ಪೌಂಡು ಸಾಬೂನನ್ನು ಸೇರಿಸಿ ಅದರಲ್ಲಿ ನಿಕೊಟೆನ್ ಸಲ್ಛೇಟ್ ವಿಲಂಬಿಸಿ ಉಪಯೋಗಿಸಿದರೆ ಸಾಬೂನು ವಿಷವ್ಯಾಪನೆಗೆ ನೆರವಾಗುವುದು. ಈ ಮಿಶ್ರಣದಲ್ಲಿ 0.06%ಕ್ಕಿಂತ ಕಡಿಮೆ ನಿಕೊಟಿನ್ ಇದ್ದರೆ ಪ್ರಯೋಜನವಿಲ್ಲ. ಒಣಗಿದ ಹೊಗೆಸೊಪ್ಪಿನ ಕಾಂಡಗಳನ್ನು ಸಾಮಾನ್ಯ ಉಷ್ಣತೆಯಲ್ಲಿ ನೀರಿನಲ್ಲಿ ನೆನೆಹಾಕಿಯೂ ಮನೆಯಲ್ಲೇ ನಿಕೋಟಿನ್ ಕಷಾಯ ತಯಾರಿಸಬಹುದು. ಕಾಂಡಗಳನ್ನು ಹುಡಿ ಮಾಡಿ ಜಿಪ್ಸಂ (ಕ್ಯಾಲ್ಸಿಯಂ ಸಲ್ಛೇಟ್). ಕೆಯೊಲಿನ್ (ಬಿಳಿಯ ಜೇಡಿಯ ಮಣ್ಣು) ಅಥವಾ ಸುಣ್ಣದೊಡನೆ ಮಿಶ್ರಮಾಡಿ ಉಪಯೋಗಿಸುವುದುಂಟು. ಯಾವ ವಸ್ತುವನ್ನು ನಿಕೋಟಿನ್ನಿನೊಂದಿಗೆ ಸೇರಿಸಬೇಕೆಂಬುದು ಅದನ್ನು ಯಾವ ಸಸ್ಯದ ರಕ್ಷಣೆಗೆ ಮತ್ತು ಯಾವ ಕೀಟದ ವಿರುದ್ಧ ಬಳಸುತ್ತೇವೆ ಎಂಬುದನ್ನು ಅವಲಂಬಿಸಿದೆ.
ಕೀಟನಾಶಕಗಳ ತಯಾರಿಕೆ
ಬದಲಾಯಿಸಿಕೀಟನಾಶಕ ಸಾಬೂನಿನ ದ್ರಾವಣಗಳಲ್ಲಿ ಮೀನಿನ ಎಣ್ಣೆಯಿಂದ ತಯಾರಿಸಿದ ಸಾಬೂನುಗಳಿವೆ. 4 ಗ್ಯಾಲನ್ ನೀರಿಗೆ 1 ಪೌಂಡು ಸಾಬೂನನ್ನು ಸೇರಿಸುವುದು ವಾಡಿಕೆ. ನಿರ್ದಿಷ್ಟ ಕೀಟನಾಶಕ್ಕೆ ನಿರ್ದಿಷ್ಟ ಪ್ರಬಲತೆಯ ದ್ರಾವಣ ಅಗತ್ಯ. ಮೀನಿನ ಎಣ್ಣೆಯ ದ್ರಾವಣಗಳು ಸಸ್ಯಹೇನುಗಳನ್ನು ನಿರ್ನಾಮ ಮಾಡುವುವು. ಕೇವಲ ಸಾಬೂನಿನ ದ್ರಾವಣವನ್ನು ಉಪಯೋಗಿಸುವುದು ವಿರಳ, ಅದರೊಡನೆ ನಿಕೊಟಿನ್ ಸಲ್ಛೇಟ್, ಸೀಸದ ಆರ್ಸಿನೇಟ್ ಮತ್ತು ಬೋರ್ಡೊ ಮಿಶ್ರಣ ಸೇರಿಸುವುದು ವಾಡಿಕೆ. ಮೀನಿನ ಎಣ್ಣೆಯಿಂದ ಮಾಡಿದ ಪೊಟ್ಯಾಸಿಯಂ ಸಾಬೂನಾದರೆ ಸರ್ವೋತ್ತಮ.ಸೀಮೆಎಣ್ಣೆ, ಕ್ರೂಡ್ ಆಯಿಲ್ ಮತ್ತು ಕೀಲೆಣ್ಣೆಗಳ ಎಮಲ್ಷನ್‍ಗಳು ಸಹ ಜಯಪ್ರದವಾಗಿ ಉಪಯೋಗಿಸಲ್ಪಡುತ್ತಿವೆ. ಸೀಮೆಎಣ್ಣೆಯ ಎಮಲ್ಷನನ್ನು ಕೆಳ ಕಂಡಂತೆ ತಯಾರಿಸಬಹುದು. ಅರ್ಧ ಪೌಂಡು ಮೀನಿನ ಎಣ್ಣೆಯ ಸಾಬೂನನ್ನು 1 ಗ್ಯಾಲನ್ ನೀರಿನಲ್ಲಿ ಕರಗಿಸಿ ಅದನ್ನು ಬಿಸಿ ಮಾಡಿ 2 ಗ್ಯಾಲನ್ ಸೀಮೆ ಎಣ್ಣೆಯನ್ನು ಸೇರಿಸಬೇಕು. ಅದನ್ನು ಚೆನ್ನಾಗಿ ಕುಲುಕಿದರೆ ಎಮಲ್ಷನ್ ರೂಪಕ್ಕೆ ಬರುವುದು. ತಣಿದಾಗ ಒತ್ತರಿಸದೆ ವಿಲಂಬಿತ ಸ್ಥಿತಿಯಲ್ಲೇ ಉಳಿಯುವುದು. 1 ಭಾಗ ಎಮಲ್ಷನ್ನಿಗೆ 7 ಭಾಗ ನೀರು ಬೆರೆಸಿ ಸುಪ್ತಾವಸ್ಥೆಯಲ್ಲಿರುವ ಗಿಡಗಳಿಗೆ ಪ್ರಯೋಗಿಸುವರು. ಮೀನಿನ ಎಣ್ಣೆಯ ಸಾಬೂನಿನೊಡನೆ ಸೀಮೆಎಣ್ಣೆ, ಪ್ಯಾರಫಿನ್ ಎಣ್ಣೆ ಮತ್ತು ರೋಸಿನ್ ಎಣ್ಣೆ. ಕಾರ್ಬಾಲಿಕ್‍ಆಮ್ಲಗಳನ್ನೂ ಸೇರಿಸಿ ಎಮಲ್ಷನ್ ಮಾಡಿ ಬಳಸುವುದುಂಟು.ತೋಟಗಳಲ್ಲಿ ಮತ್ತು ಮನೆಗಳಲ್ಲಿ ಬಳಕೆಗೆ ಅನುಕೂಲವಾದ ಕೀಟನಾಶಕಗಳೆಂದರೆ ಪೈರೆತ್ರಮ್ ಮತ್ತು ರೋಟೆನೋನ್. ಇವು ದ್ರಾವಣ ಅಥವಾ ದೂಳಿನ ರೂಪದಲ್ಲಿರಬಹುದು. ಕ್ರೈಸ್ಯಾನ್ತಮಮ್ ವರ್ಗದ ಹೂಗಳಿಂದ ಪೈರೆತ್ರಮ್ ಮಾಡುವರು. ಇದು ಬಹುವಾಗಿ ಜಪಾನ್, ಕೀನ್ಯ್ಯ, ಬ್ರಿಟಿಷ್, ಪೂರ್ವ ಆಫ್ರಿಕ ಮತ್ತು ಬೆಲ್ಜಿಯನ್ ಕಾಂಗೊಗಳಲ್ಲಿ ಬೆಳೆಯುತ್ತದೆ. ಅಮೆರಿಕ ಸಂಯುಕ್ತಸಂಸ್ಧಾನವೊಂದೇ ಸಹಸ್ರಾರು ಟನ್ನುಗಳಷ್ಟು ಪೈರೆತ್ರಮ್‍ನ್ನು ಈ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ನೊಣಗಳಿಗೆ ಇದು ಮಾರಕವಾದ್ದರಿಂದ ನಿತ್ಯಬಳಕೆಗೆ ಅನುಕೂಲ. ಇದರ ಸಂಪರ್ಕಕ್ಕೆ ಬಂದ ಕೀಟ ಕೊಡಲೇ ನಿಶ್ಚೇಷ್ಟಿತವಾಗುವುದು. ಡಿ.ಡಿ.ಟಿ. ಬೆರೆಸಿದರೆ ಪ್ರಭಾವ ಇನ್ನು ಹೆಚ್ಚುತ್ತದೆ. ಪೈರೆತ್ರಮ್ ಹುಡಿಗಿಂತ ಕಷಾಯ ಮೇಲು.ಮಲಯಾ ಮತ್ತು ಇಂಡೊನೇಷ್ಯ ದೇಶಗಳಲ್ಲಿ ಡೆರ್ಸಿಸ್ ಎಲಿಪ್ಟಿಕಾ ಎಂಬ ಗಿಡ ಹೇರಳವಾಗಿ ಬೆಳೆಯುತ್ತದೆ. ಇದರಿಂದ ತಯಾರಿಸಬಹುದಾದ ಆರು ಆಲ್ಕಲಾಯ್ಡುಗಳಲ್ಲಿ ರೋಟೆನೋನ್ ಹೆಚ್ಚು ಕ್ರಿಯಾಶಾಲಿಯಾದುದು. ಅದರ ಬೇರನ್ನು ಪುಡಿಮಾಡಿ, ಟಾಲ್ಕ್ ಬೆರೆಸಿ 1% ಮಿಶ್ರಣ ಮಾಡುವರು; ಅಥವಾ ಬೇರಿನಿಂದ ಕಷಾಯ ಇಳಿಸಿ ಬಳಸುವರು.ಕೀಟನಾಶಕವಾಗಿ ಸೋಡಿಯಂ ಫ್ಲೋರೈಡು ಈಚೆಗೆ ಬಳಕೆಯಾಗುತ್ತಿದೆ. ಇದು ಜಿರಲೆಗಳನ್ನು ನಿರ್ಮೂಲ ಮಾಡಬಲ್ಲುದು. ಸಾಕುಪ್ರಾಣಿಗಳನ್ನು ಬಾಧಿಸುವ ಹೇನುಗಳನ್ನು ಇದು ಯಶಸ್ವಿಯಾಗಿ ತೊಡೆದು ಹಾಕುತ್ತದೆ. ಇದರ ಪ್ರಯೋಗದಿಂದ ಸಸ್ಯಗಳಿಗೆ ನಂಜಾಗುವುದರಿಂದ ಅವುಗಳ ಮೇಲೆ ಪ್ರಯೋಗಿಸಬಾರದು.
ಸಂಯೋಜಿತ ಸಾವಯವ ಕೀಟನಾಶಕಗಳು
ಬದಲಾಯಿಸಿಇವುಗಳಲ್ಲಿ ಹೆಸರಾಂತ ಡಿ.ಡಿ.ಟಿ. ಜನ್ಮ್ಮತಾಳಿದ್ದು ಎರಡನೆಯ ಮಹಾಯುದ್ದದ ಆದಿಭಾಗದಲ್ಲಿ. ಪೈರೆತ್ರಮ್ ಮತ್ತು ರೋಟೆನೋನ್‍ಗಳ ಕೊರತೆಯನ್ನು ಇದು ತುಂಬಿತೆನ್ನಬಹುದು. ಇದು ವಿಶಿಷ್ಟವಾಸನೆಯುಳ್ಳ ಬಿಳಿಯ ಪುಡಿ. ಡೈಕ್ಲೊರೋ ಡೈಫೀನೈಲ್ ಟ್ರೈಕ್ಲೋರೋ ಈಥೇನ್ ಎಂಬ ರಾಸಾಯನಿಕ ನಾಮದ ಮೊದಲ ಅಕ್ಷರಗಳನ್ನು ಜೋಡಿಸಿ ಡಿ.ಡಿ.ಟಿ. ಎಂಬ ಸಂಕ್ಷಿಪ್ತ ಹೆಸರನ್ನು ರಚಿಸಲಾಗಿದೆ. ಕ್ಲೋರಾಲ್ ಮತ್ತು ಅದರ ಎರಡರಷ್ಟು ಪ್ರಮಾಣ ಕ್ಲೋರೊ ಬೆಂಜಿóನ್ ಸೇರಿಸಿ ಪ್ರಬಲ ಸಲ್ಛ್ಯೂರಿಕ್ ಆಮ್ಲದ ಸಂಪರ್ಕದಲ್ಲಿ ಕಾಯಿಸಿದರೆ ಇದು ದೊರೆಯುವುದ.ಕ್ರಿಯಾಂತ್ಯದಲ್ಲಿ ಮಿಶ್ರಣವನ್ನು ನೀರಿಗೆ ಸುರಿದರೆ ಡಿ.ಡಿ.ಟಿ. ಬೇರ್ಪಡುವುದು. ಪ್ರಾಸಂಗಿಕವಾಗಿ ಇತರ ಕ್ಲೋರಿನ್‍ಯುಕ್ತ ಈಥೇನ್ ಉತ್ಪನ್ನಗಳೂ ಉಂಟಾಗುವುದರಿಂದ ಮಾರುಕಟ್ಟೆಯ ಡಿ.ಡಿ.ಟಿ. ಕೇವಲ 70% ಶುದ್ಧವಾಗಿರುತ್ತದೆ. ಅದನ್ನು ಸಾವಯವ ಲೀನಕಾರಿಗಳಲ್ಲಿ ಅಥವಾ ನೀರಿನಲ್ಲಿ ಎಮಲ್ಷನ್ ಮಾಡಿ ಚಿಮುಕಿಸಿದರೆ ನೊಣ, ಸೊಳ್ಳೆಯ ಕಾಟ ತಪ್ಪುವುದು. ಏರೊಸಾಲ್ ಬಾಂಬ್‍ಗಳಲ್ಲಿ ಡಿ.ಡಿ.ಟಿ. ವಿಶೇಷವಾಗಿ ಬಳಕೆಯಾಗುತ್ತಿದೆ. ಅದರೊಡನೆ ಪೈರೆತ್ರಮ್ ಎಳ್ಳೆಣ್ಣೆ ಮತ್ತು ಸೋಯಾ ಅವರೆ ಎಣ್ಣೆಯನ್ನು ಸೇರಿಸುವುದು ಪದ್ಧತಿ. ಇವುಗಳ ಸಂಪರ್ಕದಲ್ಲಿ ಡಿ.ಡಿ.ಟಿ.ಯ ಪ್ರಭಾವ ಹೆಚ್ಚುವುದು ವ್ಯಕ್ತವಾಗಿದೆ. ಹುಡಿಯೊಡನೆ ಸಾಮಾನ್ಯವಾಗಿ ಬೆಂಟೊನೈಟ್ ಜಿಪ್ಸಂ ಮೊದಲಾದ ಜಡವಸ್ತುಗಳನ್ನು ಸೇರಿಸಿ ಉಪಯೋಗಿಸುವರು. ಅದಕ್ಕೆ ತೇವಕಾರಕಗಳನ್ನು ಸೇರಿಸಿದರೆ, ಸರಾಗವಾಗಿ ನೀರಿನಲ್ಲಿ ವಿಲಂಬಿತವಾಗುವ ಮಿಶ್ರಣವಾಗುತ್ತದೆ. ಹಣ್ಣಿನ ತೋಟಗಳಲ್ಲಿ ಮಾಡುವುದು ಹೀಗೆಯೇ. ಡಿ.ಡಿ.ಟಿ.ಯಿಂದ ಸೇಬಿನ ನಿರ್ನಾಮವಾಗುವುದು.ಕೀಟದ ಬಾಧೆಗಳನ್ನು ಅದು ನಿವಾರಿಸಲು ಶಕ್ತವಾಗಿದೆ. ಯುದ್ಧಕಾಲದಲ್ಲಿ ಯೂರೋಪಿನಲ್ಲಿ ಕಾರ್ಯನಿರತರಾಗಿದ್ಧ ಸೈನಿಕರಿಗೆ ಡಿ.ಡಿ.ಟಿ. ಲೇಪಿತ ಅಂಗಿಗಳನ್ನು ಒದಗಿಸಲಾಗಿತ್ತು. ಇದರಿಂದ ಟೈಫಸ್ ಜ್ವರ ಹರಡದೆ ಸಹಸ್ರಾರು ನಾಗರಿಕರ ಜೀವ ಉಳಿಯಿತು. ನಿಂತ ನೀರಿನಲ್ಲಿ ವೃದ್ಧಿಯಾಗುವ ಮಲೇರಿಯಾವಾಹಕ ಸೊಳ್ಳೆಗಳನ್ನು ಇದು ನಿರ್ಮೂಲ ಮಾಡುತ್ತದೆ. ಪ್ರಾಣಿದೇಹದ ಕೊಬ್ಬಿನ ಅಂಗಾಂಶಗಳಲ್ಲಿ ಡಿ.ಡಿ.ಟಿ. ಸಂಗ್ರಹವಾಗುವುದು. ಹಣ್ಣುಗಳನ್ನು ತೊಳೆದರೂ ಅದು ಹೋಗದಿರುವುದು. ಹಸುವಿನ ಹಾಲಿನ ಮೂಲಕವೂ ಅದು ನಮ್ಮ ದೇಹಗತವಾಗುವ ಸಂಭವವಿರುವುದು ಮೊದಲಾದ ದೋಷಗಳಿಂದ ಡಿ.ಡಿ.ಟಿ. ಪ್ರಯೋಗದ ಬಗ್ಗೆ ಒಲವು ತಗ್ಗುತ್ತಿದೆ.
==ಹೆಕ್ಸ ಕ್ಲೋರೋ ಸೈಕ್ಲೊಹೆಕ್ಸೇನ್== ಮತ್ತೊಂದು ಪ್ರಮುಖ ಕೀಟನಾಶಕವೆಂದರೆ -ಬಿ.ಎಚ್.ಸಿ. ಹೆಕ್ಸ ಕ್ಲೋರೋ ಸೈಕ್ಲೊಹೆಕ್ಸೇನ್ ಎಂಬುದು ಇದರ ರಾಸಾಯನಿಕ ಹೆಸರು. ಇದರಲ್ಲಿ 16 ಬಗೆಯುಂಟು. ಇವುಗಳ ಪೈಕಿ ಗ್ಯಾಮಾ ಸಂಯುಕ್ತಕ್ಕೆ ಕೀಟನಾಶಕ ಗುಣವಿದೆ. ಅಲೆಯುದ್ದ ಕಡಿಮೆ ಇರುವ ಬೆಳಕಿನ ಪ್ರಭಾವದಲ್ಲಿ ಕ್ಲೋರಿನ್ ಬೆಂಜೀóನಿ ನೊಡನೆ ವರ್ತಿಸಿದಾಗ ಬರುವ ಉತ್ಪನ್ನದಲ್ಲಿ 10%-14% ಗ್ಯಾಮಾ ಸಂಯುಕ್ತ ಇರುತ್ತದೆ. ಅದರ ಪರಮಾಣು ರಚನಾ ವಿನ್ಯಾಸವನ್ನು ಪಕ್ಕದ ಚಿತ್ರದಲ್ಲಿ ತೋರಿಸಿದೆ. ಅದರ ದ್ರವೀಕರಣ ಬಿಂದು 112.5ºಸೆಂ. ಇದರಿಂದ ಅದನ್ನು ಗುರುತಿಸಬಹುದು.ಇದರ ವಾಸನೆ ಬಹುಕಾಲ ಉಳಿದು ಬಿಡುವುದರಿಂದ ಆಹಾರ ಬೆಳೆಗಳಿಗೆ ಸಿಂಪಡಿಸಲು ಇದು ತಕ್ಕುದಲ್ಲ. ಹತ್ತಿಯ ಸಂರಕ್ಷಣೆಗೆ ಉಪಯೋಗಿಸುವುದೇ ಹೆಚ್ಚು. ಡಿ.ಡಿ.ಟಿ.ಗೆ ಇದು ಪೂರಕವಾಗಿದೆಯೇ ಹೊರತು ಅದರ ಸ್ಧಾನವನ್ನು ಆಕ್ರಮಿಸಲಾರದು. ಆಕ್ಟ ಕ್ಲೊರೋ ಟೆಟ್ರಹೈಡ್ರೊಇಂಡೇನ್ ಎಂಬ ಮತ್ತೊಂದು ಕೀಟನಾಶಕ ಕ್ಲೋರ್‍ಡೇನ್ ಎಂಬ ಹೆಸರಿನಿಂದ ಬಳಸಲ್ಪಡುತ್ತಿದೆ. ಅದರ ರಚನಾ ಸೂತ್ರವನ್ನು ಕೆಳಗೆ ಚಿತ್ರಿಸಲಾಗಿದೆ. ಮಿಡತೆಗಳು, ಜಿರಲೆಗಳು ಮತ್ತು ಇರುವೆಗಳನ್ನೂ ಡಿ.ಡಿ.ಟಿ.ಯೊಡನೆ ಮಿಶ್ರಮಾಡಿ ಬಳಸಿದರೆ ತಿಗಣೆಗಳನ್ನೂ ಇದು ನಾಶಪಡಿಸುತ್ತದೆ. ಡಿ.ಡಿ.ಟಿ.ಗೆ ಹೊಂದಿಕೊಂಡು ಸಾಯದೆ ಉಳಿಯುವ ಕೀಟಗಳ ನಿವಾರಣೆಗೋಸ್ಕರ ಹಲವು ಕ್ಲೋರಿನ್‍ಯುಕ್ತ ಹೈಡ್ರೋ ಕಾರ್ಬನ್ ಕೀಟನಾಶಕಗಳ ಶೋಧವಾಗಿದೆ. ಅವುಗಳಲ್ಲಿ ಟಿ.ಡಿ.ಇ., ಡಿಲಾನ್ ಮೀಥಾಕ್ಸಿಕ್ಲೋರ್ ಮುಂತಾದ ಡಿ.ಡಿ.ಟಿ. ಸಂಬಂಧಿಗಳನ್ನೂ ಹೆಪ್ಪಕ್ಲೋರ್, ಆಲ್ಡ್ರಿನ್, ಡೈಎಲ್ಡ್ರಿನ್, ಎಂಡ್ರಿನ್, ಟಾಕ್ಸ ಫೀನ್ ಮೊದಲಾದ -ಬಿ.ಎಚ್.ಸಿ. ಸಂಬಂಧಿಗಳನ್ನೂ ಹೆಸರಿಸಬಹುದು. ಸಂಯೋಜಿತ ಕಾರ್ಬಮೇಟ್ ಕೀಟನಾಶಕಗಳಿಗೂ ಪ್ರಾಶಸ್ತ್ಯ ಹೆಚ್ಚುತ್ತಿದೆ. ಇವುಗಳಲ್ಲಿ ಡಿಮೆಟಾನ್, ಪೈರೊಲಾನ್, ಐಸೊಲಾನ್, ಪಿರಮ್ಯಾಟ್ ಮತ್ತು ಸೆವಿನ್ ಮುಖ್ಯವಾದವು. ಈಚಿನ ವರದಿಗಳ ಪ್ರಕಾರ ಸೊಳ್ಳೆ, ನೊಣ, ಹತ್ತಿಹುಳ ಮತ್ತು ಆಲೂಗೆಡ್ಡೆ ಕ್ರಿಮಿ ಸಹ ಕ್ಲೋರೀನ್‍ಯುಕ್ತ ಹೈಡ್ರೋಕಾರ್ಬನ್ ಕೀಟನಾಶಕಗಳಿಗೆ ಮಣಿಯದ ಹೊಸ ಪೀಳಿಗೆಯನ್ನು ಸೃಜಿಸಿ ಕೊಂಡಿವೆ. ಹೀಗಾಗಿ ಪ್ರಾಚ್ಯ ದೇಶಗಳ ಜನಾರೋಗ್ಯಕ್ಕೆ ಭಾರಿ ಆತಂಕ ಉಂಟಾಗಿದೆ.
ಏರೊಸಾಲ್‍ಗಳು
ಬದಲಾಯಿಸಿಕಲಾಯ್ಡ್ ಸ್ಧಿತಿಯಲ್ಲಿ ಘನ ಅಥವಾ ದ್ರವ ವಸ್ತುಗಳು ಗಾಳಿಯಲ್ಲಿ ವಿಲಂಬಿತವಾಗಿದ್ದರೆ ಅವನ್ನು ಏರೊಸಾಲ್‍ಗಳು ಎನ್ನುತ್ತೇವೆ. ತುಂಬ ಬಳಕೆಯಲ್ಲಿರುವ ಏರೊಸಾಲ್ ಮಿಶ್ರಣದ ತಯಾರಿಕೆಯ ವಿವರ ಹೀಗಿದೆ. ಫ್ರಿಯಾನ್-12 ಮುಂತಾದ ದ್ರವಿತ ಅನಿಲಗಳನ್ನೂ ಕೀಟನಾಶಕದ ತೈಲದ್ರಾವಣವನ್ನೂ ಬೆರೆಸಿ ಮಿಶ್ರಣವನ್ನು ಒತ್ತಡದಿಂದ ಒಂದು ಬಾಂಬಿನೊಳಗೆ ತುಂಬಲಾಗುವುದು. ಅದಕ್ಕೊಂದು ನಿಯಂತ್ರಿತ ಕವಾಟವಿರುವುದು. ಅದನ್ನು ಸಾಕಷ್ಟು ತೆರೆದರೆ ದ್ರವ ಹೊರಬಿದ್ದು ತತ್‍ಕ್ಷಣ ಆವಿಯಾಗುವುದು. ಈ ರಭಸಕ್ಕೆ ಕೀಟನಾಶಕ ಸಿಂಪಡಿಸಲ್ಪಡುವುದು. ವಿಲಂಬಿತ ಸ್ಧಿತಿಯಲ್ಲಿ ಸಿಂಪಡಿಸಿದ ಜಾಗದಲ್ಲಿ ಉಳಿಯುವುದು. ಕವಾಟವನ್ನು ಮುಚ್ಚಿ, ಉಳಿದ ದ್ರವಮಿಶ್ರಣವನ್ನು ಅಗತ್ಯ ಬೀಳುವವರೆಗೆ ಹಿಡಿದಿಟ್ಟಿರುಬಹುದು. ಗುಡಾರ ಅಥವಾ ಮುಚ್ಚಿದ ಆವರಣದಲ್ಲಿರುವ ಸೊಳ್ಳೆ ಇತ್ಯಾದಿಗಳ ನಾಶಕ್ಕೆ ಇದು ಅನುಕೂಲವಾಗಿದೆ. ಬಾಂಬುಗಳಲ್ಲಿರುವ ಮಿಶ್ರಣದಲ್ಲಿ 80%-90% ಭಾಗ ದ್ರವಿತ ಅನಿಲ, 20%-10% ಭಾಗ ಕೀಟನಾಶಕವಿರುತ್ತವೆ. ಮನುಷ್ಯರ ಬಳಿ ಕೀಟಗಳು ಸುಳಿಯದಂತೆ ಮಾಡಬೇಕಾದಾಗ ಡೈಮೀಥೈಲ್‍ಫ್ತ್ಯಾಲೇಟ್ ಇರುವ ಬಾಂಬನ್ನು ಬಳಸುವರು.
ಕೀಟನಾಶಕ ಧೂಮಗಳು
ಬದಲಾಯಿಸಿಕೂಡಿಟ್ಟ ಗೋದಿ ಮತ್ತು ಇತರ ಧಾನ್ಯಗಳಿಗೆ ಕೀಟಬಾಧೆ ಹೆಚ್ಚು. ಅವುಗಳ ಮೇಲೆ ಇಂಗಾಲದ ಡೈಸಲ್ಛೈಡ್ ಸುರಿದು ಎಲ್ಲ ದ್ವಾರಗಳನ್ನೂ ಮುಚ್ಚಿಬಿಟ್ಟರೆ ಕೀಟಗಳು ಸಾಯುವುವು. ಪೂರ್ಣವಾಗಿ ಮೊಹರು ಮಾಡಬಹುದಾದ ಉಗ್ರಾಣಗಳಲ್ಲಿ ಮಾತ್ರ ಇದು, ಸಾಧ್ಯ. ಇಲ್ಲದಿದ್ದರೆ ಇಂಗಾಲದ ಡೈಸಲ್ಛೈಡು ಮತ್ತು ಗಾಳಿಯ ಮಿಶ್ರಣದಿಂದ ಆಸ್ಛೋಟನೆ ಮತ್ತು ಬೆಂಕಿಯ ಅಪಾಯವಿದೆ. ಅದ್ದಕ್ಕಿಂತ ಸುಲಭವಾಗಿ ಆವಿಯಾಗುವ, ಅಷ್ಟೇ ಕೀಟನಾಶಕ ಗುಣವುಳ್ಳ ಈಥೈಲ್ ಅಸಿಟೇಟ್ ಮತ್ತು ಇಂಗಾಲದ ಟೆಟ್ರಕ್ಲೋರೈಡಿನ ಮಿಶ್ರಣಕ್ಕೆ ಪ್ರಾಶಸ್ತ್ಯ ಹೆಚ್ಚುತ್ತಿದೆ. ಇದಕ್ಕೆ ಸ್ಛೋಟಕ ಗುಣವಿಲ್ಲ.ಹೈಡ್ರೋಜನ್ ಸಯನೈಡ್ ಉತ್ತಮ ಕೀಟನಾಶಕವೇನೋ ಹೌದು. ಆದರೆ ಇದು ಮಾನವನಿಗೂ ಉಗ್ರ ವಿಷವಾದುದರಿಂದ ಇದನ್ನು ತುಂಬ ಎಚ್ಚರಿಕೆಯಿಂದ ಉಪಯೋಗಿಸಬೇಕಾಗುತ್ತದೆ. ಅಗತ್ಯ ಪ್ರಮಾಣ ಸೋಡಿಯಂ ಸಯನೈಡನ್ನು ಒಂದು ಬಟ್ಟಲಿನಲ್ಲಿಟ್ಟು ಅದರ ಮೇಲೆ ಸಲ್ಛ್ಯೂರಿಕಾಮ್ಲವಿರುವ ಸೀಸೆಯನ್ನಿಡಬೇಕು. ಅದಕ್ಕೆ ಒಂದು ದಾರವನ್ನು ಕಟ್ಟಿ ರಾಟೆಯ ಮೇಲೆ ಹಾಯಿಸಿರಬೇಕು. ಬಾಗಿಲ ಹತ್ತಿರ ಬಂದ ಕ್ಷಣದಲ್ಲಿ ದಾರವನ್ನು ಎಳೆದು ಹೊರಗಿನಿಂದ ಬಾಗಿಲನ್ನು ಭದ್ರಪಡಿಸಬೇಕು. ಆಗ ಆಮ್ಲ ಸಯನೈಡಿನ ಮೇಲೆ ಬಿದ್ದು ಹೈಡ್ರೊಜನ್ ಸಯನೈಡ್ ಬಿಡುಗಡೆಯಾಗಿ ಕ್ರಿಮಿಕೀಟಗಳನ್ನು ಕೊಲ್ಲುವುದು. ಕ್ಯಾಲಿಫೋರ್ನಿಯದಲ್ಲಿ ಸಿಟ್ರಸ್ ಜಾತಿಯ ಗಿಡಗಳ ರಕ್ಷಣೆಗೆ ಈ ವಿಧಾನವನ್ನು ಬಳಸುವರು. ಪೂರಾಗಿಡಕ್ಕೇ ದಪ್ಪವಾದ ಬಟ್ಟೆಯ ಬುರುಕಿಯನ್ನು ಹಾಕಿ, ನೆಲದ ಮೇಲೆ ಹೈಡ್ರೊಜನ್ ಸಯನೈಡನ್ನು ಮೇಲ್ಕಂಡಂತೆ ಉತ್ಪಾದಿಸಿ ಕೀಟವನ್ನು ನಾಶಮಾಡುವರು. ಗಿಡಕ್ಕೆ ಸ್ವಲ್ಲವೂ ತೊಂದರೆಯಾಗುವುದಿಲ್ಲ. ಕ್ಯಾಲ್ಸಿಯಂ ಸಯನೈಡ್ ಸಹ ಹೀಗೆ ವಿನಿಯೋಗವಾಗುತ್ತಿದೆ. (1:9) ಪ್ರಮಾಣ ಎಥಿಲೀನ್ ಆಕ್ಸೈಡ್ ಮತ್ತು ಇಂಗಾಲದ ಡೈಆಕ್ಸೈಡಿನ ಮಿಶ್ರಣಕ್ಕೆ ಕಾರ್ಬಾಕ್ಸೈಡ್ ಎಂಬುದು ವ್ಯವಹಾರನಾಮ. ಇದನ್ನು ಒತ್ತಡದಲ್ಲಿ ಉಕ್ಕಿನ ಕೊಳಾಯಿಗಳಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ. ಬಾಯಿ ತೆರೆದಾಗ ತುಂತುರು ರೂಪದಲ್ಲಿ ಹೊರಬಿದ್ದು ತತ್‍ಕ್ಷಣ ಆವಿಯಾಗಿ ಕಾರ್ಯೋನ್ಮುಖವಾಗುವುದು. ದಹ್ಯ ಮತ್ತು ಸ್ಛೋಟಕ ಗುಣವಿರದ ಈ ಮಿಶ್ರಣ ಉತ್ತಮ ಕೀಟನಾಶಕ ಹಾಗೂ ಬಳಸಲು ಸುರಕ್ಷಿತ.ಗೆಡ್ಡೆಗಳು ಮತ್ತು ಬೇರುಗಳನ್ನು ಹೊಕ್ಕು ಕೊರೆದು ಹಾಳು ಮಾಡುವ ತಂತುವಿನ ಆಕಾರದ ಜಂತುಹುಳುಗಳಿವೆ. ಇವುಗಳಿಂದ ಆಲೂಗೆಡ್ಡೆ, ಬೀಟ್ ಸಕ್ಕರೆ ಇತ್ಯಾದಿ ಫಸಲುಗಳಿಗೆ ಅಪಾರ ಹಾನಿ. ಅದ್ದರಿಂದ ಇವುಗಳ ನಾಶಕ್ಕಾಗಿಯೇ ನಿಯೋಜಿತವಾದ ವಿಷಗಳಿವೆ. ಅವುಗಳಲ್ಲಿ ಕ್ಲೋರೊಪಿಕ್ರಿನ್‍ಮುಖ್ಯವಾದುದು, ಪಿಕ್ರಿಕ್ ಆಮ್ಲವನ್ನು ಚಲುವೆ ಪುಡಿ ಮತ್ತು ನೀರಿನೊಡನೆ ಕುದಿಸಿ ಇದನ್ನು ಪಡೆಯಬಹುದು. ಅದರ ಬೆಲೆ ಹೆಚ್ಚು. ಆದ್ದರಿಂದ ಅಗ್ಗದ ಡಿ.ಡಿ.ಟಿ. ಮಿಶ್ರಣ ಬಳಕೆಗೆ ಬಂದಿದೆ. ಡೈಕ್ಲೊರೋ ಪ್ರೊಪೇನ್ ಮತ್ತು ಡೈಕ್ಲೊರೋ ಪ್ರೊಪೀನ್ ಮಿಶ್ರಣವಿದು. ಇದನ್ನು ಡೌಪ್ಯೊಮ್ ಎಮ್ ಎಂದೂ ಕರೆಯುವರು. ಎಥಿಲೀನ್ ಡೈಬ್ರೋಮೈಡ್ ಮತ್ತು ಮೀಥೈಲ್ ಬ್ರೊಮೈಡುಗಳಿಗೂ ಜಂತುಹುಳು ನಾಶಕ ಗುಣವಿದೆ. ಪೀಚ್ ಗಿಡವನ್ನು ಕೊರೆಯುವ ಕೀಟವುಂಟು. ಇದು ಭೂಮಟ್ಟದಲ್ಲಿ ಗಿಡವನ್ನು ಕೊರೆಯುವುದರಿಂದ ಸಿಂಪಡಿಸುವ ವಿಧಾನದಿಂದ ಅದು ಸಾಯುವುದಿಲ್ಲ. ಆದ್ದರಿಂದ ಗಿಡದ ಸುತ್ತ ಸಣ್ಣ ಕಂದಕವನ್ನು ತೋಡಿ ಅದರಲ್ಲಿ ಪ್ಯಾರಾ ಡೈಕ್ಲೋರೊ ಬೆಂಜೀóನನ್ನು ಇಟ್ಟು ಮುಚ್ಚಿದರೆ ಕೀಟನಾಶವಾಗುವುದು.
ವಿಕರ್ಷಕಗಳು
ಬದಲಾಯಿಸಿಮಾನವ, ಅವನ ಆಹಾರ ಸಂಗ್ರಹ, ಸಾಕುಪ್ರಾಣಿಗಳು, ಬೆಳೆಗಳು, ಬಟ್ಟೆ ಮುಂತಾದವನ್ನು ರಕ್ಷಿಸುವುದರಲ್ಲಿ ಇವುಗಳ ಪಾತ್ರ ಹಿರಿದು. ಸೊಳ್ಳೆ, ನೊಣ, ತಿಗಣೆ, ಇಲಿ ಮತ್ತು ಹೆಗ್ಗಣಗಳ ವಿರುದ್ಧ ಇವು ಬಳಸಲ್ಪಡುತ್ತಿವೆ. ವಿದ್ಯುತ್ ಕೇಬಲ್ಲುಗಳನ್ನು ಕಡಿದು ಹಾಳು ಮಾಡುವ ಅಳಿಲು ಮೊದಲಾದವನ್ನೂ ಜಿಗಣೆಯನ್ನೂ ದೂರವಿರಿಸಲು ಸೂಕ್ತ ವಿಕರ್ಷಕಗಳಿವೆ. ರಕ್ತಹೀರುವ ಕೀಟಗಳ ವಿರುದ್ಧ ನಾಲ್ಕು ವಿಕರ್ಷಕಗಳು ತುಂಬ ಬಳಕೆಯಲ್ಲಿವೆ. ಸಿಟ್ರೊನೆಲ್ಲಾ ಎಣ್ಣೆ, ಡೈಮೀಥೈಲ್ ಫ್ತ್ಯಾಲೇಟ್, ಇಂಡಲೋನ್ (ನಾರ್ಮಲ್ ಬ್ಯೂಟೈಲ್ ಮೆಸಿಟಿಲ್ ಆಕ್ಸೈಡ್ ಆಕ್ಸಲೇಟ್) ಮತ್ತು ರಟ್ಗೆರ್ಸ್-612 (2: ಈಥೈಲ್ ಹೆಕ್ಸೇನ್ ಡಯೊಲ್ 1:3) ಈ ನಾಲ್ಕು ವಿಕರ್ಷಕಗಳು. ಕೊನೆಯ ಮೂರು ವಿಕರ್ಷಕಗಳ 6:2:2 ಪ್ರಮಾಣದ ಮಿಶ್ರಣ ಸೈನಿಕರ ವಿಶಿಷ್ಟ ಉಪಯೋಗಕ್ಕಾಗಿ ರೂಪುಗೊಂಡು, ಈಗ ಸಾರ್ವಜನಿಕವಾಗಿ ಉಪಯೋಗವಾಗುತ್ತಿದೆ. ಈಗ ಯೋಧರು ವಿಶೇಷವಾಗಿ ಉಪಯೋಗಿಸುವ ಕೀಟನಿರೋಧಕವೆಂದರೆ ಎಮ್. 2020. ಅದರಲ್ಲಿ ಡೈಮೀಥೈಲ್ ಫ್ತ್ಯಾಲೇಟ್, ರಟ್ಗೆರ್ಸ್-612 ಮತ್ತು ಡೈಮೀಥೈಲ್ ಕಾರ್ಬೆಟ್ 4:3:3 ಪ್ರಮಾಣದಲ್ಲಿರುತ್ತವೆ. ಈ ಮಿಶ್ರಣ ಸೊಳ್ಳೆಯನ್ನು ಎರಡು ತಾಸಿನ ವರೆಗೂ ಉಣ್ಣೆ ಮೊದಲಾದ ಹುಳುಗಳನ್ನು ನಾಲ್ಕು ತಾಸಿನ ವರೆಗೂ ಹತ್ತಿರ ಸುಳಿಯಗೊಡುವುದಿಲ್ಲ. ಬಟ್ಟೆಗಳಿಂದ ಕೀಟಗಳನ್ನು ದೂರವಿರಿಸಲು ಮುಂದೆ ಸೂಚಿಸಿರುವ ಮಿಶ್ರಣ ಅಗತ್ಯ. ಬೆಂಜೆóೈಲ್ ಬೆಂಜೊóಯೇಟ್, ನಾರ್ಮಲ್ ಬ್ಯೂಟೈಲ್ ಅಸಿಟನಿಲೈಡ್, 2-ಬ್ಯೂಟೈಲ್ 2-ಈಥೈಲ್ 1:3 ಪ್ರೋಪೆನ್‍ಡಯೋಲ್ ತಲಾ 30% ಮತ್ತು ಟ್ವೀನ್-80ರ 10% ಮಿಶ್ರಣಕ್ಕೆ ಎಮ್. 1960 ಎಂದು ಹೆಸರು. ಒಂದು ಚದರ ಗಜ ಬಟ್ಟೆಗೆ 18 ಗ್ರಾಂ ಮಿಶ್ರಣ ಸವರಿದರೆ 7 ದಿವಸಗಳ ಕಾಲ ಕೀಟಗಳು ಹತ್ತಿರ ಬರಲಾರವು. ನುಸಿಗುಳಿಗೆಯ ರೂಪದಲ್ಲಿ ನ್ಯಾಫ್ತಲೀನಿನ ಬಳಕ ನಮಗೆ ಚಿರಪರಿಚಿತವಾಗಿದೆ. ಒಂದು ಸಾಮಾನ್ಯ ಗಾತ್ರದ ಪೆಟ್ಟಿಗೆಯಲ್ಲಿರುವ ಬಟ್ಟೆಬರೆಗಳನ್ನು ಕಾಪಾಡಲು ಸುಮಾರು ಎರಡು ಪೌಂಡುಗಳಷ್ಟು ನ್ಯಾಫ್ತಲೀನ್ ಅಗತ್ಯ. ಆದರೆ ನಾವು ಇಷ್ಟು ಪ್ರಮಾಣದಲ್ಲಿ ಅದನ್ನು ಬಳಸದೆ ಇರುವುದರಿಂದ, ಅದು ಪರಿಣಾಮಕಾರಿ ಕೀಟನಿರೋಧಕವೆನಿಸಿಕೊಳ್ಳದೆ ಹೋಗಿದೆ. ಮಿಲಿಟರಿ ಬಳಕೆಯಲ್ಲಿರುವ ಇತರ ಕೀಟನಿರೋಧಕಗಳೆಂದರೆ ನಾರ್ಮಲ್ ಬ್ಯೂಟೈಲ್ ಅಸಿಟನಿಲೈಡ್, ನಾರ್ಮಲ್ ಪ್ರೋಪೈಲ್ ಅಸಿಟನಿಲೈಡ್ ಹೆಕ್ಸೈಲ್ ಮ್ಯಾಂಡಲೇಟ್ ಮತ್ತು ಉಂಡೆಕಲೀನಿಕ್ ಆಮ್ಲ.
ಸಾವಯವ ರಂಜಕಯುಕ್ತ ಕೀಟನಾಶಕಗಳು
ಬದಲಾಯಿಸಿಸಾವಯವ ರಂಜಕಯುಕ್ತ ಕೀಟನಾಶಕಗಳು 1947ರಿಂದ ಈಚೆಗೆ ಸುಮಾರು 50 ಸಾವಿರ ರಂಜಕಯುಕ್ತ ಕೀಟನಾಶಕಗಳ ಶೋಧವಾಗಿದೆ. ಪ್ಯಾರಾಥಯೋನ್ ಮತ್ತು ಮೀಥೈಲ್ ಪ್ಯಾರಾಥಯೋನ್ ಎಂಬ ಎರಡು ವಸ್ತುಗಳ ವಿಶ್ವ ಉತ್ವಾದನೆಯೇ 1958ರಲ್ಲಿ 2 ಕೋಟಿ ಪೌಂಡುಗಳಷ್ಟಿತ್ತು. ಬಿಸಿರಕ್ತದ ಪ್ರಾಣಿಗಳಿಗೆ ಇವು ನಂಜನ್ನುಂಟುಮಾಡುತ್ತವೆ. ಅಲ್ಪ ದುಷ್ಪರಿಣಾಮಕಾರಿ ಕೀಟನಾಶಕಗಳು ಇಲ್ಲದಿಲ್ಲ. ಅವುಗಳಲ್ಲಿ ಟೆಟ್ರಈಥೈಲ್‍ಪೈರೊಪಾಸ್ಛೇಟ್, ಕ್ಲೋರೊಥಯೋನ್ ಮ್ಯಾಲ ಥಯೋನ್. ಡಿ.ಡಿ.ವಿ.ಪಿ., ಡೆಲ್ನಾವ್, ಗುಥಯೋನ್, ಟ್ರೈಥಯೋನ್, ಇಥಯೋನ್, ಇ.ಪಿ.ಎನ್. ಮತ್ತು ಡಿಪ್ಪೆರೆಕ್ಸ್ ಇವನ್ನು ಹೆಸರಿಸಬಹುದು. ಷ್ರಾದನ್ ಕೀಟನಾಶಕದ ಸ್ಥಾನ ವಿಶಿಷ್ಟವಾದುದು. ಇದು ಚಿಮುಕಿಸಿದ ಸ್ಧಳಕ್ಕೆ ಮಾತ್ರ ಸೀಮಿತವಾಗದೆ, ಸಸ್ಯಗತವಾಗಿ ಅಲ್ಲಿ ಇನ್ನೂ ಉಗ್ರವಾದ ವಿಷವಾಗಿ ಮಾರ್ಪಟ್ಟು, ಸಸ್ಯದ್ರವವನ್ನು ಹೀರಲು ಬಂದ ಕೀಟಗಳ ಮಾರಣ ಹೋಮವಾಗುವುದು. ಸಸ್ಯ ಬೆಳೆದಂತೆಲ್ಲ ಅದರ ಶಾಖೋಪಶಾಖೆಗಳಿಗೂ ಹರಡಿ ರಕ್ಷಿಸುವುದು ಈ ಕೀಟನಾಶಕದ ವೈಶಿಷ್ಟ್ಯ. ಆದರೆ ಇತರ ಜಠರ ವಿಷಗಳಲ್ಲಿ ಹೀಗಾಗುವುದಿಲ್ಲ. ಸಿಂಪಡಿಸಿದ ಸ್ಥಳಕ್ಕೆ ಮಾತ್ರ ರಕ್ಷಣೆ ಸೀಮಿತವಾಗಿರುತ್ತದೆ. ಬೆಳೆದ ಭಾಗಗಳಿಗೆ ಯಾವ ರಕ್ಷಣೆಯೂ ಇರುವುದಿಲ್ಲ. ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ಡೆಮಟೋನ್, ಡಿ-ಸಿಸ್ಟನ್, ಥಿಮೆಟ್ ಮತ್ತು ಫಾಸ್ಡ್ರಿನ್‍ಗಳಿಗೆ ಷ್ರಾದನಷ್ಟೇ ಕೀಟನಾಶಕ ಗುಣವಿದೆಯೆಂದು ವರದಿಯಾಗಿದೆ.
ಕೀಟನಾಶಕಗಳ ಪ್ರಯೋಗ ಕಾಲದಲ್ಲಿ ಗಮನಿಸಬೇಕಾದ ಕೆಲವಂಶಗಳಿವೆ
ಬದಲಾಯಿಸಿ1 ದೂಳಿನ ರೂಪದಲ್ಲಿ ಬಳಸುತ್ತಿದ್ದರೆ ಮುಂಜಾನೆ ಪ್ರಯೋಗಿಸುವುದು ಉತ್ತಮ. ಆಗ ಗಿಡದ ಮೇಲಿರುವ ಹಿಮದ ಹನಿಗಳಿಂದ ಅದು ಗಿಡಕ್ಕೆ ಅಂಟಿಕೊಂಡು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 2 ಬೀಸುಗಾಳಿ ಇರದಿರುವುದು ಲೇಸು. ಅಂಥ ಸಮಯವನ್ನೇ ಕಾದು ಪ್ರಯೋಗಿಸುವುದು ವಿವೇಕ. ಇಲ್ಲದಿದ್ದರೆ ಬಹುಭಾಗ ಕೀಟನಾಶಕ ಗಾಳಿಯ ಪಾಲಾಗುವುದು. 3 ಈ ಕಾರಣಗಳಿಂದ ದೂಳಿನ ರೂಪದಲ್ಲಿ ಉಪಯೋಗಿಸುವುದಕ್ಕಿಂತ ಸಿಂಪಡಿಸುವ ಪದ್ಧತಿ ತೃಪ್ತಿಕರ. 4 ಯಾವ ಕೀಟದ ನಾಶಕ್ಕೆ ಹವಣಿಸುತ್ತಿದ್ದೇವೆಯೋ, ಅದು ತನ್ನ ಜೀವಿತ ಚಕ್ರದ ಯಾವ ಘಟ್ಟದಲ್ಲಿದೆ ಮತ್ತು ಯಾವ ಹಂತದಲ್ಲಿ ಪ್ರಯೋಗಿಸಿದರೆ ಅದಕ್ಕೆ ಮಾರಕವಾಗುವುದು ಎಂಬುದರ ಅರಿವು ಅಗತ್ಯ. 5 ಬರೀ ಕೀಟನಾಶಕದ ಬದಲು ಅದರೊಡನೆ ನಿರ್ದಿಷ್ಟ ರಾಸಾಯನಿಕಗಳನ್ನು ಕೂಡಿಸಿದರೆ, ಮಿಶ್ರಣದ ಕ್ರಿಯಾಶಕ್ತಿ ವೃದ್ಧಿಯಾಗುವುದು ಕಂಡುಬಂದಿದೆ. ಇಂಥ ಸ್ವಯಂ ಕೀಟನಾಶಕಗಳಲ್ಲದ ಉತ್ತೇಜಕಗಳಿಗೆ ಸಿನೆರ್ಜಿಸ್ಟ್ಸ್ ಎನ್ನುತ್ತಾರೆ. ಪಿಪೆರೊನಿಲ್ ಬ್ಯೂಟಾಕ್ಸೈಡ್ ಮತ್ತು ಸೆಸಾಕ್ಸೇನ್ ಎರಡು ಪ್ರಮುಖ ಪೈರೆತ್ರಮ್ ಸಿನೆರ್ಜಿಸ್ಟುಗಳು.
ಇಲಿ ಪಾಷಾಣಗಳು
ಬದಲಾಯಿಸಿಇಲಿ ಪಾಷಾಣಗಳನ್ನೂ ಕೀಟನಾಶಕಗಳ ವ್ಯಾಪ್ತಿಗೆ ಒಳ ಪಡಿಸುವುದು ಆಚರಣೆಗೆ ಬಂದಿದೆ. ಆದ್ದರಿಂದ ಅವನ್ನು ಇಲ್ಲಿ ಹೆಸರಿಸಬಹುದು. ಆಂಟೂ (ಆಲ್ಛಾ ನ್ಯಾಫ್ತೈಲ್ ಥಯೊಯೂರಿಯಾ) ಒಂದು ಪ್ರಸಿದ್ಧವಾದ ಇಲಿಪಾಷಾಣ. ಇದು ಮಾನವನಿಗೆ ನಿರುಪದ್ರವಿಯಾದ್ದರಿಂದ ಬಳಸಲು ಅಡ್ಡಿಯಿಲ್ಲ. ಬೇರಿಯಂ ಕಾರ್ಬೊನೇಟ್ ಮತ್ತೊಂದು. ಇದರ ಬಳಕೆ ಹೆಚ್ಚುತ್ತಿದೆ. ಸೋಡಿಯಂ ಪ್ಲೋರ ಸಿಟೇಟ್‍ನಿಂದಲೂ ಉತ್ತಮ ಫಲಿತಾಂಶ ದೊರೆತಿದೆ. ಆದರೆ ಇದು ನಮಗೂ ಕೆಡುಕುಮಾಡಬಹುದಾದ್ದರಿಂದ ತಜ್ಞರ ನೇತೃತ್ವದಲ್ಲಿ ಮಾತ್ರ ಬಳಸಬಹುದು. ವ್ಯಾಪಕ ಪ್ರಯೋಗಕ್ಕೆ ಥ್ಯಾಲಿಯಂ ಸಲ್ಛೇಟ್, ಜಿಂಕ್ ಫಾಸ್ಛೇಟ್ ಮತ್ತು ಸ್ಟ್ರಿಕ್‍ನೈನ್, ಇಂದಿಗೂ ಉತ್ತಮ ಇಲಿ ಪಾಷಾಣಗಳು.
ಉಲ್ಲೇಖಗಳು
ಬದಲಾಯಿಸಿ