“‘ಕೀಕಿರ ಎ ತಮ್ಮಯ್ಯ”’ನವರು (ಜನನ: ೧೦ ಫೆಬ್ರವರಿ ೧೯೩೫ - ನಿಧನ: ೨೯ ಮಾರ್ಚ್ ೨೦೧೧) ಇಂಗ್ಲಂಡ್ ದೇಶದ ಹ್ಯಾರೊ ನಗರದ ಮೇಯರ್ ಆದ ಪ್ರಪ್ರಥಮ ಭಾರತೀಯರು. ಅಲ್ಲದೆ ಈ ಪದವಿಯನ್ನು ಪಡೆದ ಮೊಟ್ಟಮೊದಲ ಏಶ್ಯನ್ನರು. ಇವರು ಕನ್ನಡಿಗರು. ಬೆಂಗಳೂರಿನಲ್ಲಿ ಬಿ ಎ ಪದವಿಯನ್ನು ಪಡೆದು, ಮುಂಬಯಿಯಲ್ಲಿ ವಕೀಲ ಪದವಿಯನ್ನು ಗಳಿಸಿದ ಬಳಿಕ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ನಾಲ್ಕು ವರ್ಷ ವಕೀಲರಾಗಿದ್ದರು. ದಕ್ಷಿಣ ಕೊಡಗಿನಲ್ಲಿ ಜನಿಸಿದ ಇವರು ಕೊಡವರು.

ಕೀಕಿರ ಎ ತಮ್ಮಯ್ಯನವರು
ಚಿತ್ರ:ಕೀಕಿರ ತಮ್ಮಯ್ಯನವರು.JPG
Born೧೯೩೫
ತೆರಾಲು ಗ್ರಾಮ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ
Died೨೯ನೇ ಮಾರ್ಚ್ ೨೦೧೧
Nationalityಭಾರತೀಯ/ಬ್ರಿಟನ್
Educationಎಮ್ ಎ, ಎಲ್ ಎಲ್ ಬಿ
Alma materಸೈಂಟ್ ಜೋಸೆಫ್’ಸ್ ಕಾಲೆಜ್, ಬೆಂಗಳೂರು
ಮುಂಬಯಿ ಸರ್ಕಾರಿ ಕಾನೂನು ಕಾಲೆಜ್, ಮುಂಬಯಿ.
Occupationಬಿಸಿನೆಸ್ ಲಾದಲ್ಲಿ ಲೆಕ್ಚರರ್.
Known forಇಂಗ್ಲಂಡಿನ ಹ್ಯಾರೋ ನಗರದ ಏಶ್ಯಾ ಮೂಲದ ಪ್ರಪ್ರಥಮ ಮೇಯರ್
Parent(s)ಕೀಕಿರ ಬೊಳ್ಳಮ್ಮ (ತಾಯಿ)
ಕೀಕಿರ ಅಣ್ಣಯ್ಯ (ತಂದೆ)

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ತಮ್ಮಯ್ಯನವರು ದಕ್ಷಿಣ ಕೊಡಗಿನ ಮರೆನಾಡಿನ ತೆರಾಲು ಎಂಬ ಹೆಚ್ಚು ಸಂಪರ್ಕವಿರದಿದ್ದ ಸಣ್ಣ ಗ್ರಾಮವೊಂದರಲ್ಲಿ ಕೀಕಿರ ಮನೆತನದ ಅಣ್ಣಯ್ಯ ಮತ್ತು ಬೊಳ್ಳಮ್ಮ ದಂಪತಿಗಳ ಮೊದಲ ಮಗನಾಗಿ ೧೯೩೫ರಲ್ಲಿಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತೆರಾಲು ಗ್ರಾಮದಲ್ಲಿ ಆರಂಭಿಸಿ, ಬಳಿಕ ಅಲ್ಲಿಗೆ ಅನತಿ ದೂರದಲ್ಲಿರುವ ಬಿರುನಾಣಿಯಲ್ಲಿ ಮುಂದುವರೆಸಿದರು. ತದನಂತರ ಪೊನ್ನಂಪೇಟೆ ಮತ್ತು ನಾಪೋಕ್ಲು ಶಾಲೆಗಳಲ್ಲಿ ಪ್ರೌಢಶಿಕ್ಷಣವಾದ ಮೇಲೆ, ಬೆಂಗಳೂರಿನ ಸರಕಾರಿ ಕಾಲೆಜಲ್ಲಿ ೧೯೫೩ - ೫೫ರಲ್ಲಿ ಇಂಟರ್-ಮೀಡಿಯಟ್ ಮುಗಿಸಿದರು. ತದನಂತರ ಅಲ್ಲಿನ ಸೈಂಟ್ ಜೋಸೆಫ್’ಸ್ ಕಾಲೆಜಿ[] ನಲ್ಲಿ ಅಧ್ಯಯನ ಮುಂದುವರೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ ಎ ಪದವಿಯನ್ನು ಪಡೆದರು.


೧೯೫೭ರಿಂದ ೧೯೫೯ರವರೆಗೆ ಮುಂಬಯಿಯ ಸರಕಾರಿ ಕಾನೂನು ಕಾಲೆಜಿ[] ನಿಂದ ತಮ್ಮ ಕಾನೂನು ಪದವಿಯನ್ನು ಗಳಿಸಿದರು. ಆನಂತರ ಮುಂಬಯಿ ವಿಶ್ವವಿದ್ಯಾನಿಲಯ[] ದಿಂದ ೧೯೬೦ರಲ್ಲಿ ಎಮ್ ಎ ಪದವಿಯನ್ನು ಪಡೆದರು.

ವೃತ್ತಿ

ಬದಲಾಯಿಸಿ

ಮುಂಬಯಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ತಮ್ಮಯ್ಯನವರು ಬೆಂಗಳೂರಿಗೆ ಹಿಂದಿರುಗಿ ೧೯೬೦ರಿಂದ ೬೪ರವರೆಗೆ ಅಲ್ಲಿಯ ಉಚ್ಚನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ನಡೆಸಿದರು. ೧೯೬೪ರಲ್ಲಿ ಬಾರ್ ಎಟ್ ಲಾದ ಪ್ರಯುಕ್ತ ಅವರು ಇಂಗ್ಲಂಡಿಗೆ ಹೋದರು. ಆದರೆ ಅವರಿಗೆ ಒಲವಿದ್ದದು ಶಿಕ್ಷಣ ವೃತ್ತಿಯಲ್ಲಿ. ಅಲ್ಲಿನ ವೆಸ್ಟ್ ಮಿನಿಸ್ಟರ್ ಮತ್ತಿತರ ಕಾಲೆಜುಗಳಲ್ಲಿ ಬಿಸಿನೆಸ್ ಲಾದಲ್ಲಿ ಲೆಕ್ಚರರ್ ಆಗಿ ದುಡಿದರು. ಸುಮಾರು ೩೪ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದು ವೃತ್ತಿ ಜೀವನದಿಂದ ನಿವೃತ್ತರಾದರು.


ಸಾಮಾಜಿಕ ಹಾಗೂ ರಾಜಕೀಯ ಸೇವೆಗಳು

ಬದಲಾಯಿಸಿ

ಬೆಂಗಳೂರಿನ ಸೈಂಟ್ ಜೋಸೆಫ್’ಸ್ ಕಾಲೆಜಿನಲ್ಲಿದ್ದಾಗಲೇ ಕಾಲೆಜ್ ವಿದ್ಯಾರ್ಥಿಗಳ ಸಂಘದ ಪ್ರೆಸಿಡೆಂಟ್ ಆಗಿ ಆಯ್ಕೆಗೊಂಡಿದ್ದರು. ನಂತರ ಮುಂಬಯಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘದ ಚೇರ್‌ಮನ್ ಆಗಿದ್ದರು.


ಇಂಗ್ಲಂಡಿನಲ್ಲಿ ‘ನ್ಯಾಶನಲ್ ಯೂನಿಯನ್ ಆಫ್ ಟೀಚರ್ಸ್’[] ನ ಸದಸ್ಯರಾದರಲ್ಲದೆ, ಯೂನಿವರ್ಸಿಟಿ ಅಂಡ್ ಕಾಲೆಜ್ ಲೆಕ್ಚರರ್‌ಸ್ ಯೂನಿಯನ್ನಿನ ಮೆಂಬರಾದರು. ಈ ಚಟುವಟಿಕೆಗಳಿಂದ ಅಲ್ಲಿನ ಸಾಮಾಜಿಕ ಜನಜೀವನದ ನಿಕಟ ಪರಿಚಯವಾಯಿತು. ಇದರಿಂದ ಪ್ರೇರಿತರಾಗಿ ತಮ್ಮಯ್ಯನವರು ೧೯೮೬ರಲ್ಲಿ ಇಂಗ್ಲಂಡಿನ ಲೇಬರ್ ಪಾರ್ಟಿ[] ಗೆ ಸೇರಿ ರಾಜಕೀಯ ಸೇವೆಗಿಳಿದರು. ಎಂಟು ವರ್ಷಗಳ ನಂತರ, ಅಂದರೆ ೬ನೇ ಮೇ ೧೯೯೪ರಂದು ಹ್ಯಾರೋ ನಗರದ ಲೇಬರ್ ಕೌನ್ಸಿಲರ್ ಆಗಿ ಚುನಾಯಿತರಾದರು. ಆಮೇಲೆ ೧೨ನೇ ಮೇ ೧೯೯೯ರಲ್ಲಿ ಹ್ಯಾರೋವಿನ ಡೆಪ್ಯುಟಿ ಮೇಯರ್ ಮತ್ತು ೨೫ನೇ ಮೇ ೨೦೦೦ದಲ್ಲಿ ಆ ನಗರದ ಮೇಯರ್ ಆದರು.


ತಮ್ಮಯ್ಯನವರು ತಮ್ಮ ಸಮಾಜ ಸೇವೆಯನ್ನು ಗಂಭೀರ ಕರ್ತವ್ಯವನ್ನಾಗಿ ಪರಿಗಣಿಸುತ್ತಿದ್ದರು. ನಾರ್ತ್‌ವಿಕ್ ಪಾರ್ಕ್ ಆಸ್ಪತ್ರೆ[] ಯ ಮಕ್ಕಳ ವಿಭಾಗಕ್ಕೆ ಸುಮಾರು ೨೦ ಸಾವಿರ ಪೌಂಡ್‍ಗಳಷ್ಟು ನಿಧಿ ಸಂಗ್ರಹಿಸಿದ್ದರು. ಹ್ಯಾರೋ ನಗರದ ಮೂರು ಶಾಲೆಗಳ ಗವರ್ನರ್ ಆಗಿದ್ದರು.


ಹ್ಯಾರೋ ನಗರದ ಮ್ಯಾನೇಜಿಂಗ್ ಕೌನ್ಸಿಲಿನಲ್ಲಿ ಜನಾಂಗೀಯ ಸಮಾನತೆ, ಹ್ಯಾರೋ ಅಪರಾಧ ನಿಯಂತ್ರಣ ಪ್ಯಾನೆಲ್, ಹ್ಯಾರೋ ವಿಕ್ಟಿಮ್ ಸಪೋರ್ಟ್ ಬ್ಯೂರೋ, ಹ್ಯಾರೋ ಸಿಟ್ಜನ್ಸ್ ಅಡ್ವೈಸ್ ಬ್ಯೂರೋ, ಹ್ಯಾರೋ ಕಮ್ಯುನಿಟಿ ಹೆಲ್ತ್ ಕೌನ್ಸಿಲ್, ಮುಂತಾದೆಡೆಗಳಲ್ಲಿ ತಮ್ಮಯ್ಯನವರ ಕಾರ್ಯ ಸಾಧನೆಗಳು ಚಿರಸ್ಮರಣೀಯ. ತಮ್ಮ ಸಾಮಾಜಿಕ ಕಾರ್ಯ ನಿಮಿತ್ತ ಅವರು ಇಂಗ್ಲಂಡಿನ ಮಹಾರಾಣಿಯವರನ್ನು ಮೂರು ಬಾರಿ ಭೇಟಿಯಾಗಿದ್ದರಲ್ಲದೆ, ರಾಜಕುಮಾರಿ ಮಾರ್ಗರೆಟ್[] ಅವರೊಡನೆ ಚಹಾವನ್ನೂ ಸ್ವೀಕರಿಸಿದ್ದರು. ರಾಜಕುಮಾರ ಎಡ್ವರ್ಡ್ ಮತ್ತು ಸೋಫಿಯವರು ಮುಖ್ಯ ಅತಿಥಿಗಳಾಗಿ ಆಮಂತ್ರಿಸಲ್ಪಟ್ಟಿದ್ದ ಪಾರ್ಸಿ ಸಮುದಾಯದ ಸಮಾವೇಶದಲ್ಲಿ ಭಾಷಣ ಮಾಡಿದ್ದರು.


ಇಪ್ಪತ್ತು ವರ್ಷಗಳ ನಂತರ ಮೇ ೨೦೧೦ರಲ್ಲಿ ತಮ್ಮಯ್ಯನವರು ಸಮಾಜ ಸೇವೆಯಿಂದ ನಿವೃತ್ತರಾದರು.


ವೈಯಕ್ತಿಕ ಜೀವನ

ಬದಲಾಯಿಸಿ

ತಮ್ಮಯ್ಯನವರು ದಕ್ಷಿಣ ಕೊಡಗಿನ ಅಮ್ಮತ್ತಿ ಎಂಬಲ್ಲಿಯ ಕುಟ್ಟಂಡ ಮನೆತನದ ಅಡ್ವೊಕೇಟ್ ತಮ್ಮಯ್ಯನವರ ಪುತ್ರಿ ನೈಲಾರನ್ನು ೧೯೭೨ರಲ್ಲಿ ಮದುವೆಯಾದರು. ನೈಲಾರವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮೈಸೂರಿನ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಮದುವೆಯ ನಂತರ ಅವರು ಪತಿಯೊಡನೆ ಇಂಗ್ಲಂಡಿಗೆ ತೆರಳಿದರು. ಈ ದಂಪತಿಗಳ ಏಕೈಕ ಪುತ್ರ ಪೊನ್ನು ತಮ್ಮಯ್ಯನವರು ಲಂಡನ್ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿ ವೃತ್ತಿಯಲ್ಲಿದ್ದಾರೆ.


ಸದಾ ಹಸನ್ಮುಖಿಯಾಗಿದ್ದ ತಮ್ಮಯ್ಯನವರು ಇಂಗ್ಲಂಡಿನ ಕೊಡವ ಸಮುದಾಯದ ಜನರಿಗೆ "ತಮ್ಮಿ" ಆಗಿದ್ದರೆ ಇತರ ಮಿತ್ರರಿಗೆ "ಕೀಕಿ"ಯಾಗಿದ್ದರು. ಎಲ್ಲಿ, ಯಾರಿಗೆ, ಏನಾದರೂ ಕಷ್ಟ, ಸಮಸ್ಯೆಗಳಿತ್ಯಾದಿಗಳುಂಟಾದರೂ ಅವರ ಹೆಸರು ಮೊದಲು ನೆನಪಾಗುತ್ತಿತ್ತು ಎನ್ನುವಷ್ಟು ಜನಾನುರಾಗಿಗಳಾಗಿದ್ದರು.


೨೦೧೧ರ ಆಗಸ್ಟ್ ತಿಂಗಳಿನಲ್ಲಿ ಲಂಡನಿನಲ್ಲಿ ನಡೆದ ಜಾಗತಿಕ (ಯೂರೋಪ್) ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮಯ್ಯನವರು ಚುನಾಯಿತರಾಗಿದ್ದರು. ಇದರ ಪ್ರಯುಕ್ತ ಅವರು ೨೮ನೇ ಮಾರ್ಚ್ ೨೦೧೧ರಂದು ಒಂದು ಕಾರ್ಯಕಾರೀ ಸಭೆಯನ್ನೂ ತಮ್ಮ ಮನೆಯಲ್ಲಿ ನಡೆಸಿದ್ದರು. ಕೊನೆಯವರೆಗೂ ಸಮಾಜಸೇವೆಯನ್ನೇ ಉಸಿರಾಗಿಟ್ಟುಕೊಂಡಿದ್ದ ಅವರು ಮರುದಿನವೇ ಲಂಡನಿನಲ್ಲಿ ಸ್ವರ್ಗಸ್ಥರಾದರು. ಅವರ ಮಿತ್ರರು, ಸಮುದಾಯದ ಜನರು, ಸಮಾಜದ ಹಾಗೂ ರಾಜಕೀಯ ಗಣ್ಯರು ಮತ್ತು ಮಾಧ್ಯಮಗಳ ಜನರು ಬಹುಸಂಖ್ಯೆಯಲ್ಲಿ ಸೇರಿ ಪೌರ ಸನ್ಮಾನಪೂರಕವಾದ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.


೧. ಪೂಮಾಲೆ ಕೊಡವ ಸಾಪ್ತಾಹಿಕ ೨೭ ಡಿಸೆಂಬರ್ ೨೦೦೦ (ಸಂಪುಟ ೫; ಸಂಚಿಕೆ ೩೫)

೨. ಇತರ ಮೂಲಗಳು


ಉಲ್ಲೇಖ

ಬದಲಾಯಿಸಿ




!