ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ

ಕಾವೇರಿ ನದಿಯ ಮೇಕೆದಾಟು ಬದಲಾಯಿಸಿ

 • ಮೇಕೆ ದಾಟುಒಂದು ವಿಹಾರ ಸ್ಥಳ, ಬೆಂಗಳೂರಿನಿಂದ 90 ಕಿ. ಮೀ. ದೂರದಲ್ಲಿದೆ. ಕನ್ನಡ ಭಾಷೆಯಲ್ಲಿ, ಮೇಕೆ ಹಾರುವಷ್ಟು ಸ್ಥಳ. ಕಾವೇರಿನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿದಾಟುವಷ್ಟು ಜಾಗಮಾತ್ರ. ಕಾವೇರಿ-ಅರ್ಕಾವತಿನದಿಯ ಸಂಗಮದ ಹತ್ತಿರದವರೆಗೆ ವಾಹನದಲ್ಲಿ ಹೋಗಬಹುದು. ಚುಂಚಿ ಜಲಪಾತ ಅರ್ಕಾವತಿ ನದಿಯು ಸೃಷ್ಟಿಸಿರುವ ಸುಂದರ ಜಲಪಾತವು. ಇದು ಸುಮಾರು 70 ಅಡಿಗಳಷ್ಟು ಎತ್ತರವಿದ್ದು ಕನಕಪುರದಿಂದಮೇಕೆದಾಟು/ಸಂಗಮಕ್ಕೆ ಹೋಗುವ ದಾರಿಯಲ್ಲಿ ಮುಖ್ಯ ರಸ್ತೆಯಿಂದ 5 ಕಿ.ಮೀ ದೂರದಲ್ಲಿದೆ.
 
ಕಾವೇರಿಯ ಮೇಕೆದಾಟು

ಮೇಕೆದಾಟು ಅಣೆಕಟ್ಟು ಯೋಜನೆ ಮತ್ತು ವಿವಾದ ಬದಲಾಯಿಸಿ

 • ಕೇರಳ, ಕರ್ನಾ­ಟಕ, ತಮಿಳುನಾಡು ಮತ್ತು ಪುದುಚೇರಿಗಳ ನಡುವೆ, ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಬಹಳ ಹಿಂದಿನಿಂದಲೂ ವಿವಾದ ನಡೆಯುತ್ತಲೇ ಇದೆ. ಅದರಲ್ಲೂ ಕರ್ನಾಟಕ ಮತ್ತು ತಮಿಳು­ನಾಡಿನ ಮಧ್ಯೆ ಕಗ್ಗಂಟು ಬಿಗಡಾಯಿಸಿದ ಸ್ಥಿತಿಯಲ್ಲೇ ಇದೆ.
 • ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಅಂತಿಮ ಆದೇಶದಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಬಿಟ್ಟಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ.
 • ಉತ್ತಮವಾಗಿ ಮಳೆಯಾದಂತಹ ವರ್ಷಗಳಲ್ಲೂ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಆಕ್ಷೇಪ ಎತ್ತುತ್ತದೆ. ಇದನ್ನು ತಡೆಗಟ್ಟಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಕರ್ನಾಟಕದ ಬಯಕೆ.
 • ನ್ಯಾಯಮಂಡಳಿ ತಗ್ಗು ಪ್ರದೇಶಗಳಿಗೆ ನಿಗದಿಪಡಿಸಿರುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕರ್ನಾಟಕ ತನ್ನ ಸ್ವಂತ ನಿರ್ಧಾರದ ಮೇಲೆ ಜಲ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.
 • ೪೯.೪೫೨ ಟಿಎಂಸಿ ಅಡಿ ಶೇಖರಣಾ ಸಾಮರ್ಥ್ಯ ಹೊಂದಿರುವ ಕೃಷ್ಣರಾಜ­ಸಾಗರವು ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಏಕೈಕ ಜಲಾಶಯ. ಇದು ಕಾವೇರಿ ನದಿಯ ಮೇಲ್ಭಾಗದಲ್ಲಿದ್ದು, ಜಲಾಶಯದ ಕೆಳಭಾಗದಲ್ಲಿ ನದಿಯು ತಮಿಳುನಾಡನ್ನು ಸೇರುವವರೆಗೆ ಯಾವುದೇ ಶೇಖರಣಾ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಕಾವೇರಿಯು ತಮಿಳುನಾಡನ್ನು ಸೇರುವ ಸುಮಾರು ೧೮೯ ಕಿ.ಮೀ.ವರೆಗೆ ಅನಿಯಂತ್ರಿತವಾಗಿ ಹರಿಯುತ್ತದೆ.
 
ಮೇಕೆದಾಟು

ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಕರ್ನಾ­ಟಕದ ಯೋಜನೆ ಬದಲಾಯಿಸಿ

 • ಕೃಷ್ಣರಾಜ­ಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿ.ಮೀ. ಕೆ.ಆರ್.ಎಸ್. ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದ್ದು, ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತದೆ.
 • ಹೀಗಾಗಿ ಇಂತಹ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟುವಿನ ಮೇಲ್ಭಾಗದಲ್ಲಿ ಶೇಖರಣಾ ಜಲಾಶಯಗಳನ್ನು ನಿರ್ಮಿಸಲು ಕರ್ನಾಟಕ ಚಿಂತಿಸುತ್ತಿದೆ. ಇದರಿಂದ ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯದ ಕೆಳಭಾಗದ ಅನಿಯಂತ್ರಿತ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತದೆ. ಆಗ ಮೇಲ್ಭಾಗದ ಜಲಾಶಯಗಳಾದ ಕೆ.ಆರ್.ಎಸ್, ಕಬಿನಿ, ಹೇಮಾವತಿ, ಹಾರಂಗಿಯಿಂದ ಬಿಡಬೇಕಾದ ನೀರನ್ನು ನಿಯಂತ್ರಿಸುವಲ್ಲಿ ಇರುವ ಒತ್ತಡವನ್ನು ಸಹ ಕಡಿಮೆ ಮಾಡಬಹುದಾಗಿದೆ.
 • ಬೆಂಗಳೂರಿನಿಂದ ಸುಮಾರು ೧೦೦ ಕಿ.ಮೀ. ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು, ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ. ಇದರಿಂದ ಕೊಳವೆ ಬಾವಿಗಳು ಒಣಗಿಹೋಗಿವೆ. ೬೦೦ ಅಡಿ ಆಳದವರೆಗೆ ಕೊರೆದಿರುವ ಕೊಳವೆ ಬಾವಿಗಳಲ್ಲಿನ ನೀರು ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರು ನಗರದ ಜನಸಂಖ್ಯೆಯೂ ಬಹಳ ವೇಗವಾಗಿ ಏರುತ್ತಿದ್ದು, ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಮೇಕೆದಾಟುವಿನ ಬಳಿ ಸುಮಾರು ೪೫ ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ.
 • ಆದ್ದರಿಂದ ಕೆ.ಆರ್‌.ಎಸ್. ಅಣೆಕಟ್ಟಿನ ಕೆಳ ಪ್ರದೇಶದಿಂದ ರಾಜ್ಯದ ಗಡಿವರೆಗಿನ ಕಾವೇರಿ ನದಿಗೆ ಅಡ್ಡಲಾಗಿ ಸೂಕ್ತ ಸಾಮರ್ಥ್ಯದ ನೀರು ಶೇಖರಣಾ ಜಲಾಶಯಗಳನ್ನು ನಿರ್ಮಿಸಲು ಸ್ಥಳ ಗುರುತಿಸಿ, ನಕ್ಷೆ ಹಾಗೂ ವಿನ್ಯಾಸದೊಂದಿಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪರಿಣತರಿಗಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ಸರ್ಕಾರ ಜಾಗತಿಕ ಮಟ್ಟದಲ್ಲಿ ಆಹ್ವಾನ ನೀಡಿದೆ. ಯೋಜನಾ ವರದಿ ಸ್ವೀಕೃತವಾದ ನಂತರ, ಮುಂದಿನ ವಿಧಿವಿಧಾನಗಳು ಅಂತಿಮಗೊಳ್ಳಲಿವೆ.
 • ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಾಪಿಸ­ಲಾಗಿದ್ದ ನ್ಯಾಯಮಂಡಳಿಯು 2007ರ ಫೆಬ್ರವರಿ 5ರಂದು ನೀಡಿರುವ ಅಂತಿಮ ತೀರ್ಪಿನ ಅನ್ವಯ, ಎರಡೂ ರಾಜ್ಯಗಳಿಗೆ ಗಡಿಯಾಗಿರುವ ಬಿಳಿಗುಂಡ್ಲು­ವಿನಿಂದ ಕರ್ನಾಟಕವು ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ನಿಗದಿತ ಪ್ರಮಾಣದ ನೀರು ಬಿಟ್ಟ ನಂತರವೂ ಉಳಿಯುವ ಹೆಚ್ಚುವರಿ ನೀರನ್ನು ಕುಡಿಯುವ ನೀರು, ವಿದ್ಯುತ್‌ ಉತ್ಪಾದನೆ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶ ಇದೆ. ನ್ಯಾಯ­ಮಂಡಳಿ ಕೂಡ ತನ್ನ ತೀರ್ಪಿನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ, ಕಾವೇರಿ ಕಣಿವೆಯಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಕರ್ನಾಟಕ ಬಳಸಬಹುದು. ರಾಜ್ಯದಿಂದ ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು 1990ರಿಂದಲೂ ಗಮನಿಸಿದರ;. ನಾಲ್ಕು ವರ್ಷಗಳನ್ನು ಬಿಟ್ಟು (2002, 2003, 2004 ಮತ್ತು 2012) ಉಳಿದೆಲ್ಲ ವರ್ಷಗಳಲ್ಲೂ 192 ಟಿಎಂಸಿ ಅಡಿಗಿಂತ ಹೆಚ್ಚು ನೀರನ್ನು ಅತ್ತ ಬಿಡಲಾಗಿದೆ. ವಾಸ್ತವವಾಗಿ ಶಿವನಸಮುದ್ರ ನಂತರ ಕಾವೇರಿ ಕಣಿವೆಯಲ್ಲಿ 192 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿಯುತ್ತದೆ.
 • ಅಂದಾಜಿನ ಪ್ರಕಾರ, ಸರಾಸರಿ 60ರಿಂದ 70 ಟಿಎಂಸಿ ಅಡಿ ಕಾವೇರಿ ನೀರು ಸಮುದ್ರ ಸೇರುತ್ತದೆ. ತಮಿಳುನಾಡಿಗೆ ಬಿಡಬೇಕಾದ ನೀರನ್ನು ಬಿಟ್ಟು, ವೃಥಾ ಪೋಲಾಗುವ ಉಳಿಕೆ ನೀರನ್ನು ಮೇಕೆ­ದಾಟು­­ವಿನಲ್ಲಿ ಸಂಗ್ರಹಿಸಿ ಕುಡಿಯುವ ನೀರಿಗೂ, ವಿದ್ಯುತ್‌ ಉತ್ಪಾದನೆಗೂ ಬಳಸುವುದು ಸರ್ಕಾರದ ಯೋಚನೆ. ಅಂದಾಜು 45ರಿಂದ 50 ಟಿಎಂಸಿ ಅಡಿ ನೀರನ್ನು ಇಲ್ಲಿ ಸಂಗ್ರಹಿಸಬಹುದು. ಸುಮಾರು 500 ಮೆ.ವಾ. ವಿದ್ಯುತ್‌ ಉತ್ಪಾದನೆಯನ್ನೂ ಮಾಡಬಹುದು.
 • ಮೇಕೆದಾಟು ಪ್ರದೇಶದಲ್ಲಿ ಎಷ್ಟು ಅಣೆಕಟ್ಟು ನಿರ್ಮಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಬೇಕು. ಅರಣ್ಯ, ಪರಿಸರ ಸೇರಿದಂತೆ ವಿವಿಧ ಇಲಾಖೆಗಳು ಅನುಮತಿ ನೀಡಬೇಕು. ಇದಕ್ಕೆಲ್ಲ ಒಂದು ವರ್ಷ ಹಿಡಿಯ­ಬಹುದು. ಆದಷ್ಟು ಬೇಗ ಈ ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಅಪೇಕ್ಷೆ.
 • ಬೆಂಗಳೂರಿಗೆ 25 ಟಿಎಂಸಿ ಅಡಿ ನೀರು: ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಹೇಮಾವತಿ ಜಲಾಶಯದಿಂದ 25 ಟಿಎಂಸಿ ಅಡಿ ನೀರನ್ನು ಹೆಚ್ಚು ಶ್ರಮಪಡದೆ ಬೆಂಗಳೂರು ನಗರಕ್ಕೆ ತರಬಹುದು!
 • ಸದ್ಯ ಹೇಮಾವತಿ ಜಲಾಶಯದಿಂದ 20ರಿಂದ 25 ಟಿಎಂಸಿ ಅಡಿ ನೀರನ್ನು ಕೆ.ಆರ್.ಎಸ್‌.ಗೆ ಹರಿಸಲಾಗುತ್ತಿದೆ. ಒಂದು ವೇಳೆ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿದರೆ, ಕಬಿನಿ, ಹಾರಂಗಿ ಮತ್ತು ಕೆಆರ್‌ಎಸ್‌ ಅಣೆಕಟ್ಟುಗಳಿಂದಲೇ ತಮಿಳುನಾಡಿಗೆ 192 ಟಿಎಂಸಿ ಅಡಿ ನೀರು ಬಿಡಬಹುದು. ಹೇಮಾವತಿ ನೀರನ್ನು ತುಮಕೂರಿನಿಂದ 22 ಕಿ.ಮೀ ದೂರದಲ್ಲಿರುವ ಶಿವಗಂಗೆಗೆ ತಂದು ಅಲ್ಲಿಂದ ಒಂದು ಕಾಲದಲ್ಲಿ ಬೆಂಗಳೂರಿನ ನೀರಿನ ಮೂಲವಾಗಿದ್ದ ತಿಪ್ಪಗೊಂಡನಹಳ್ಳಿ ಮತ್ತು ಹೆಸರಘಟ್ಟ ಕೆರೆಗಳಿಗೆ ಹರಿಸಬಹುದು. ಇದರಿಂದಾಗಿ ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ದಾಹ ತಣಿಸಬಹುದು.
 • ತಮಿಳುನಾಡಿಗೂ ಪ್ರಯೋಜನ: ಈ ಯೋಜನೆಯಿಂದ ತಮಿಳು­ನಾಡಿಗೂ ಲಾಭವಿದೆ. ಅಣೆಕಟ್ಟೆಯಲ್ಲಿ ಸಂಗ್ರಹ­ವಾಗುವ ನೀರನ್ನು ಕಾಲಕ್ಕೆ ತಕ್ಕಂತೆ ನೆರೆಯ ರಾಜ್ಯಕ್ಕೆ ಬಿಡಬಹುದು. ಒಂದು ವೇಳೆ ನಾವು ಅಲ್ಲಿ ಜಲ ವಿದ್ಯುತ್‌ ಯೋಜನೆ ಕೈಗೆತ್ತಿ­ಕೊಂಡರೆ, ವಿದ್ಯುತ್‌ ಉತ್ಪಾದನೆಯ ನಂತರದ ನೀರು ಸಹಜವಾಗಿ ತಮಿಳುನಾಡಿಗೆ ಹರಿಯುತ್ತದೆ. ಹಾಗಾಗಿ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.
 • ಆದರೆ, ಕ್ಯಾತೆ ತೆಗೆಯುವುದನ್ನೇ ಚಾಳಿಯನ್ನಾಗಿಸಿಕೊಂಡಿರುವ ತಮಿಳು­ನಾಡು ಈ ಯೋಜನೆಯ ವಿರುದ್ಧವೂ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ಯೋಜನೆಯಿಂದ ತನ್ನ ಹಿತಾಸಕ್ತಿಗೆ ಧಕ್ಕೆ ಇಲ್ಲ ಎಂಬುದು ಗೊತ್ತಿದ್ದರೂ ಅದು ವಿರೋಧಿಸುತ್ತಿರುವುದು ದುರದೃಷ್ಟಕರ.
 • ಬ್ರಿಟಿಷರ ಕಾಲದಿಂದಲೂ ತಮಿಳುನಾಡು ಕಾವೇರಿ ವಿಚಾರದಲ್ಲಿ ತಕರಾರು ತೆಗೆಯುತ್ತಿದೆ. ತನಗೆ ನೀರಿಲ್ಲ, ರೈತರಿಗೆ ಕಷ್ಟವಾಗು­ತ್ತದೆ ಎಂದು ಅದು ಕಣ್ಣೀರು ಸುರಿಸುತ್ತಿದ್ದರೂ, ಅಲ್ಲಿನ ರೈತರು ಪ್ರತಿ ವರ್ಷ ಎರಡು – ಮೂರು ಬೆಳೆ ಬೆಳೆಯುತ್ತಾರೆ.
 • ಆದರೆ ಈ ಯೋಜನೆ ವಿಚಾರದಲ್ಲಿ ಕಾನೂನು ನಮ್ಮ ಪರವಾಗಿ ಇದೆ. ತಮಿಳುನಾಡು ಸುಪ್ರೀಂ­-ಕೋರ್ಟ್‌ಗೆ ಹೋಗಿದೆ,ಕರ್ನಾಟಕವೂ ಹೋಗಿದೆ.

ನಾಲ್ಕು ಪ್ರಮುಖ ಲಾಭ ಬದಲಾಯಿಸಿ

ಈ ಯೋಜನೆಗಳಿಂದ ಆಗುವ 4 ಪ್ರಮುಖ ಲಾಭಗಳನ್ನು ಪಟ್ಟಿ ಮಾಡಿದ್ದಾರೆ.

 • ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್‌ ಉತ್ಪಾದನೆ
 • ಬೆಂಗಳೂರಿನ ಬಳಕೆಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹ
 • ಕೆ.ಆರ್.ಎಸ್‌, ಕಬಿನಿ ಅಣೆಕಟ್ಟೆಗಳಿಂದ ಹರಿಯುವ ಹೆಚ್ಚುವರಿ ನೀರಿನ ಸಂಗ್ರಹ
 • ವಿದ್ಯುತ್‌ ಉತ್ಪಾದನೆ ಜೊತೆಗೆ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನ್ವಯ ತಮಿಳುನಾಡಿಗೆ ಹರಿಸಬೇಕಾದ ನೀರಿನ ಕೊರತೆಯೂ ಆಗದ,ಹೆಚ್ಚೂ ಆಗದ ನಿಯಂತ್ರಣ.

ನೋಡಿ ಬದಲಾಯಿಸಿ

ಆಧಾರ ಬದಲಾಯಿಸಿ

 • ಪ್ರಜಾವಾನಣಿ ೨೯-೧೧-೨೦೧೪ -(ಪ್ರೊ. ಅರವಿಂದ ಗಲಗಲಿ : ಲೇಖಕರು ಕೃಷ್ಣಾ ಭಾಗ್ಯ ಜಲ ನಿಗಮದ ನಿರ್ದೇಶಕರು) ಮತ್ತು ಟಿ.ಬಿ.ಜಯಚಂದ್ರ: ರಾಜ್ಯದ ಕಾನೂನು ಸಚಿವರು)