ಕಾಲೇವಾಲಾ - ಫಿನ್‍ಲೆಂಡಿನ ಪ್ರಾಚೀನ ಜನತೆಯ ಮಹಾಕಾವ್ಯ.



ಸಂಪಾದನೆ

ಬದಲಾಯಿಸಿ

ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಕವಿಗಳಿಂದ ರಚಿತವಾಗಿವೆಯೆಂದು ಹೇಳಲಾಗಿದೆ.

ವಿಶ್ವದ ಜಾನಪದ ಕ್ಷೇತ್ರದಲ್ಲಿ ಫಿನ್ಲೆಂಡ್ ತನ್ನ ಸಮೃದ್ಧವಾದ ಜಾನಪದ ಸಂಗ್ರಹ ಹಾಗೂ ಅದರ ವೈಜ್ಞಾನಿಕ ಅಧ್ಯಯನದ ಬಲದಿಂದ ತೀರ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದೆ. ಈ ದೇಶದಲ್ಲಿ 16ನೆಯ ಶತಮಾನದಲ್ಲಿ ಆರಂಭವಾದ ಜಾನಪದ ಸಂಗ್ರಹಕಾರ್ಯ ಲೋನಾರ್ಟ್ ಎಲಿಯಾಸ್, ಜೂಲಿಯಸ್ ಕ್ರಾನ್, ಕಾರ್ಲೆಕ್ರಾನ್ ಮತ್ತು ಆಂಟಿ ಆರ್ನೆ ಮೊದಲಾದ ವಿದ್ವಂಸರ ಸತತ ಪರಿಶ್ರಮದ ಕಾರಣದಿಂದ ಉತ್ನತ ಮಟ್ಟವನ್ನು ಮುಟ್ಟಿತು. ಫಿನ್ಲೆಂಡಿನ ಸಾಹಿತ್ಯದ ಬಹುಭಾಗ ಜನಪದ ಸಾಹಿತ್ಯವೇ ಆಗಿದೆ. ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಫಿನ್ಲೆಂಡಿನ ಜಾನಪದಕ್ಕೆ ಕಾಲೇವಾಲ ಎಂಬ ಮಹಾಕಾವ್ಯ ಕೋಡು ಮೂಡಿಸಿದೆ.

ಹಂಚಿಹೋಗಿದ್ದ ಇತರ ಹಾಡುಗಳನ್ನೆಲ್ಲ ಡಾ. ಟೊಪೀಲಿಯಸ್ ಎಂಬಾತ 1822ರಲ್ಲಿ ಮೊಟ್ಟಮೊದಲಿಗೆ ಒಂದೆಡೆ ಕಲೆಹಾಕಿದ.

ಟೊಪೀಲಿಯಸನ ಅನಂತರ ಹೆಚ್ಚು ಪ್ರಾಮಾಣಿಕವಾಗಿ ಇದರ ಹಾಡುಗಳನ್ನು ಸಂಗ್ರಹಿಸಿ, ವ್ಯವಸ್ಥಿತವಾಗಿ ಸಂಪಾದಿಸಿ, ಇದಕ್ಕೆ ಒಂದು ಮಹಾಕಾವ್ಯದ ಆಕಾರವನ್ನು ತಂದುಕೊಟ್ಟ (1835) ಕೀರ್ತಿ ಎಲಿಯಾಸ್ ಲೋನಾರ್ಟ್ ಎಂಬ ವಿದ್ವಾಂಸನಿಗೆ ಸಲ್ಲುತ್ತದೆ.

ಸಮಗ್ರ ಕಾಲೇವಾಲಾದಲ್ಲಿ 50 ಅಧ್ಯಾಯಗಳಿವೆ. ಭಾರತಕ್ಕೆ ರಾಮಾಯಣ, ಮಹಾಭಾರತ, ಗ್ರೀಸಿಗೆ ಇಲಿಯಡ್, ಒಡಿಸ್ಸಿಗಳೆಂದ್ದಂತೆ ಫಿನ್ಲೆಂಡಿಗೆ ಕಾಲೇವಾಲಾ.

ಈ ಕೃತಿ ಮತ್ತು ಕಾಲೇವಾ ಎಂಬ ವ್ಯಕ್ತಿ

ಬದಲಾಯಿಸಿ

ಕಾಲೇವಾಲಾ ಎಂಬ ಹೆಸರು ಕಾಲೇವಾ ಎಂಬ ಪದದಿಂದ. ಕಾಲೇವಾ ಎಂಬುದು ಫಿನ್ಲೆಂಡಿನ ಎಲ್ಲ ವೀರರಿಗೂ ಮೂಲಪುರುಷನಾಗಿರುವ ವ್ಯಕ್ತಿಯ ಹೆಸರು. ಈ ಕಾವ್ಯದಲ್ಲಿ ಈತ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಆದಸಿ ಈ ಕೃತಿಯಲ್ಲಿ ನಡೆಯುವ ಎಲ್ಲ ಬಗೆಯ ಧೈರ್ಯ, ಶೌರ್ಯಯುತ ಕಾರ್ಯಗಳಿಗೆಲ್ಲ ಈತ ಸ್ಫೂರ್ತಿಶಕ್ತಿಯಾಗಿದ್ದಾನೆ. ಈ ಕೃದಯ ಪ್ರಮುಖ ಪಾತ್ರಗಳಾದ ವೆನ್ನಾಮೆನನ್, ಇಲ್ ಮೇರಿನೆನ್ ಮತ್ತು ಲೆಮ್ಮಿನ್‍ಕೈನೆನ್ ಈ ಮೂವರು ಒಂದು ಅರ್ಥದಲ್ಲಿ. ಈತನ ಮಕ್ಕಳೆಂದೇ ತಿಳಿಯಲು ಆಧಾರಗಳಿವೆ.

ಕಾಲೇವಾಲಾ ನಾಡು

ಬದಲಾಯಿಸಿ

ಸ್ವದೇಶಪ್ರೇಮ ಪ್ರಮುಖವಾಗಿರುವ ಈ ಕೃತಿಯಲ್ಲಿನ ಕಾಲೇವಾಲಾ ಅಂದರೆ ವೀರರ ನಾಡು, ಫಿನ್ಲೆಂಡ್ ದೇಶವೇ ಎಂಬುದರಲ್ಲಿ ಸಂಶಯವಿಲ್ಲ.

ಕಥಾವಸ್ತು

ಬದಲಾಯಿಸಿ

ಈ ದೇಶವನ್ನು ಎದುರಿಸಿ ಯುದ್ಧಮಾಡಿದ ಪಹಜೋಲಾ ಎಂಬ ದೇಶ ಫಿನ್ಲೆಂಡಿನ ಉತ್ತರ ದಿಕ್ಕಿನಲ್ಲಿರುವ ಲ್ಯಾಂಪ್‍ಲ್ಯಾಂಡ್ ಅಥವಾ ಅದಕ್ಕೂ ಉತ್ತರದಲ್ಲಿರುವ ಒಂದು ದ್ವೀಪ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಈ ಎರಡು ದೇಶಗಳ ವೀರರ ನಡುವೆ ನಡೆಯುವ ಯುದ್ಧ ಅದಕ್ಕೆ ಕಾರಣ, ಅದಕ್ಕೆ ಪೂರಕವಾದ ಘಟನೆಗಳು ಮತ್ತು ಪಾತ್ರಗಳು, ಆ ಪಾತ್ರಗಳ ವೈಯಕ್ತಿಕ ಚರಿತ್ರೆ- ಈ ಎಲ್ಲ ಅಂಶಗಳು ಈ ಮಹಾಕಾವ್ಯದ ವಸ್ತುವನ್ನು ರೂಪಿಸಿವೆ. ಕಾಲೇವಾಲಾ ಮತ್ತು ಪಹಜೋಲಾ ದೇಶಗಳ ನಡುವಣ ಸಂಘರ್ಷ ಕ್ರಮವಾಗಿ ಬೆಳಕು ಹಾಗೂ ಕತ್ತಲೆಗಳ ಸಂಘರ್ಷವನ್ನು ಆ ಮೂಲಕ ಒಳ್ಳೆಯದು ಮತ್ತು ಕೆಟ್ಟುದರ ಸಂಘರ್ಷವನ್ನು ಸಂಕೇತಿಸುತ್ತದೆ. ಕೊನೆಯಲ್ಲಿ ಕಾಲೇವಾಲಾ ದೇಶಕ್ಕೆ ಜಯವಾಗುವುದು ಸತ್ಯ ಮೇವ ಜಯತೇ ಎಂಬ ಸೂತ್ರವನ್ನು ಎತ್ತಿ ಹಿಡಿಯುತ್ತದೆ. ಈ ದೃಷ್ಟಿಯಿಂದ ಈ ಮಹಾಕಾವ್ಯ ನೀತಿಬೋಧಕವೂ ಹೌದು ಎಂದು ಹೇಳಬಹುದು.

ಕಥಾಸಂವಿಧಾನ

ಬದಲಾಯಿಸಿ

ಕಥಾಸಂವಿಧಾನದ ದೃಷ್ಟಿಯಿಂದ ನೋಡಿದಾಗ ಕಾಲೇವಾಲ ಮೂರು ಬಗೆಯ ಹಾಡುಗಳಿಂದ ಕೂಡಿರುವುದು ಕಂಡುಬರುತ್ತದೆ. 1 ಸ್ಯಾಂಪೋಗೆ ಸಂಬಂಧಿಸಿದ ಹಾಡುಗಳು, 2 ಪಾತ್ರಗಳ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಡುಗಳು 3 ಮಂತ್ರಮಾಟಗಳಿಗೆ, ಕಾಲ್ಪನಿಕ ಸಂಗತಿಗಳಿಗೆ ಸಂಬಂಧಿಸಿದ ಹಾಡುಗಳು ಈ ಹಾಡುಗಳಲ್ಲಿ ಅಡಕವಾಗಿರುವ ಕಥಾಚಕ್ರದಲ್ಲಿ ಸ್ಯಾಂಪೋಗೆ ಸಂಬಂಧಿಸಿದ ಹಾಡುಗಳು ಈ ಮಹಾಕಾವ್ಯದ ಕೇಂದ್ರವಸ್ತು ಎಂದು ಹೇಳಬಹುದು. ಈ ಕೃತಿಗೆ ಒಂದು ಆಕಾರ ಬಂದಿರಲು ಕಾರಣ ಸ್ಯಾಂಪೋ; ಇಲ್ಲದಿದ್ದರೆ ಇಲ್ಲಿನ ಹಾಡುಗಳೆಲ್ಲ ನಾಲ್ಕಾರು ವೀರರಿಗೆ ಸಂಬಂಧಿಸಿದ ಕಥಾಚಕ್ರಗಳಾಗಿ ಸಿಡಿದುಹೋಗುತ್ತಿದ್ದವು. ಎಲ್ಲ ಹಾಡುಗಳನ್ನೂ ಕೇಂದ್ರೀಕರಿಸಿ, ಕಥೆಗೆ ಏಕಸೂತ್ರತೆ ಬರುವಂತೆ ಮಾಡಿದ ವಸ್ತು ಸ್ಯಾಂಪೋ. ಜನ ಬೇಡಿದಾಗ, ಅವರು ಬೇಡಿದಷ್ಟು ಆಹಾರ ಧಾನ್ಯಗಳನ್ನು, ಉಪ್ಪನ್ನು, ಚಿನ್ನವನ್ನು ಕೊಟ್ಟು ದೇಶವನ್ನು ಸುಭಿಕ್ಷವಾಗಿ ಇಡುವ ಮಾಂತ್ರಿಕ ಯಂತ್ರವೇ ಸ್ಯಾಂಪೋ. ಇದು ಆ ದೇಶದ ಏಳಿಗೆಯ ಸಂಕೇತ. ಇದನ್ನು ಆದಿ ಕಮ್ಮಾರನಾದ ಇಲ್‍ಮೇರಿನೆನ್ ಬಹಳ ಶ್ರಮದಿಂದ ಹಾಗೂ ದೈವದತ್ತಶಕ್ತಿಯಿಂದ ಪಹಜೋಲಾದ ರಾಣಿ ಲೌಹಿಯ ಮಗಳನ್ನು ತನ್ನ ಅಣ್ಣ ವೆನ್ನಾಮೆನನ್‍ಗೆ ಮದುವೆ ಮಾಡಿಸುವ ಉದ್ದೇಶಕ್ಕಾಗಿ, ಪಹಜೋಲಾದಲ್ಲಿ ರಚಿಸುವುದು; ಲೌಹಿ ಇದನ್ನು ಮೋಸದಿಂದ ಬಚ್ಚಿಟ್ಟು ವೆನ್ನಾಮೆನನ್‍ಗೆ ಮೋಸ ಮಾಡುವುದು; ಅವಳ ಮೇಲೆ ಕೋಪಗೊಂಡ ವೆನ್ನಾಮೆನನ್, ಇಲ್‍ಮೇರಿನನ್ ಮತ್ತು ಲೆಮ್ಮಿನ್ ಕೈನೆನ್ ಈ ಮೂವರು ಸಹೋದರರೂ ಸ್ಯಾಂಪೋವನ್ನು ತರಲು ಪಹಜೋಲಾಕ್ಕೆ ಹೋಗಿ ಅಲ್ಲಿ ಭಯಂಕರವಾಗಿ ಯುದ್ಧ ಮಾಡುವುದು; ಸ್ಯಾಂಪೋ ಚೂರುಚೂರಾಗಿ ಒಡೆದುಹೋಗಿ ಕಾಲೇವಾಲಾದ ವೀರರಿಗೆ ಅನೇಕ ಚೂರುಗಳು ದೊರೆತು ಅವರು ವಿಜಯಿಗಳಾಗುವುದು: ಹೀಗಾಗಿ ಪಯಜೋಲಾದವರಿಗೆ ಸೋಲಾಗುವುದು; ಕೊನೆಯಲ್ಲಿ ತನ್ನ ದೇಶಕ್ಕಾಗಿ ಇಷ್ಟೆಲ್ಲ ಶ್ರಮಪಟ್ಟರೂ ಕಾಲೇವಾಲದ ಜನರ ಕಲ್ಪನೆಯಲ್ಲಿ ವರ್ಜಿನ್ ಮೇರಿ ಎನಿಸಿದ್ದ ಮರ್ಜೆಟ್ಟಾ ಎಂಬುವಳಿಗೆ ಅವಳು ಕನ್ಯೆಯಾಗಿದ್ದಾಗಲೇ ಹುಟ್ಟಿದ ಮಗ ಕರೇಲಿಯಾದ ರಾಜನಾದ್ದರಿಂದ ನಿರಾಶನಾದ ವೆನ್ನಾಮೆನನ್ ಕಾಲೇವಾಲಾವನ್ನು ತೊರೆದು ಹೋಗುವುದು-ಈ ಪ್ರಮುಖ ಘಟನೆಗಳು ಈ ಮಹಾಕಾವ್ಯದಲ್ಲಿ ನಡೆಯುತ್ತವೆ. ಇದರ ಜೊತೆಗೆ ವೆನ್ನಾಮೆನನ್, ಇಲ್‍ಮೇರಿನೆನ್, ಲೆಮ್ಮಿನ್ ಕೈನೆನ್, ಕುಲ್ಲೆರ್ವೋ, ಯೌಕಾಹೈನೆನ್, ಲೌಹಿ ಮೊದಲಾದವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ, ಅವರ ಸಾಹಸ ಕಾರ್ಯಗಳಿಗೆ ಸಂಬಂಧಿಸಿದ ಕಥೆಗಳೂ ಸೇರಿಕೊಂಡಿವೆ. ಮಂತ್ರ, ಮಾಟ, ಯುದ್ಧಗಳ ವರ್ಣನೆಯಲ್ಲಿ ಫಿನ್‍ಲೆಂಡಿನ ಜನಪದ ಸಂಪ್ರದಾಯಗಳು ಹಾಗೂ ನಂಬಿಕೆಗಳು ಸ್ಪಷ್ಟವಾಗಿ ತಿಳಿಯುತ್ತವೆ. ಕಾಲೇವಾಲಾ ಅದ್ಭುತ ರಮ್ಯ ಕಥೆಗಳಿಂದ ತುಂಬಿದೆ. ಪುರಾಣಗಳು ಮತ್ತು ಐತಿಹ್ಯಗಳು ಈ ಕಾವ್ಯದಲ್ಲಿ ವಿಶೇಷವಾಗಿ ದೊರೆಯುತ್ತವೆ.


ಕೃತಿಯ ಮಹತ್ವ, ಜನಪ್ರಿಯತೆ

ಬದಲಾಯಿಸಿ

ಇಂಥ ಜನಪದ ಮಹಾಕಾವ್ಯ, ಪರಕೀಯರ ಸತತವಾದ ದಬ್ಬಾಳಿಕೆಯಲ್ಲಿದ್ದ ಫಿನ್ಲೆಂಡಿನ ಜನರಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ತುಂಬಿ ತಾವು ಸ್ವತಂತ್ರರಾಗಬೇಕೆಂಬ ಹೆಬ್ಬಯಕೆಯನ್ನು ತಂದುಕೊಟ್ಟಿತು ಈ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ ಲೇನಾರ್ಟ್ ಎಲ್ಲಿಯಾಸನಿಗೆ ಅಭೂತಪೂರ್ವವಾದ ಜನಪ್ರಿಯತೆ, ಪ್ರೀತಿ, ಗೌರವಗಳು ದೊರೆತವು. ತಾನು ಸಂಪಾದಿಸಿದ ಕಾಲೇವಾಲಾ ಮಹಾಕಾವ್ಯಕ್ಕೆ 1835ರ ಫೆಬ್ರವರಿ 28ರಂದು ಈತ ಮುನ್ನುಡಿ ಬರೆದ. ಪ್ರತಿವರ್ಷವೂ ಈ ದಿನವನ್ನು ಇಂದಿಗೂ ರಾಷ್ಟ್ರೀಯ ರಜಾದಿನವೆಂದು ಘೋಷಿಸಿ, ರಾಷ್ಟ್ರೀಯ ಹಬ್ಬವನ್ನು ಆಚರಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ಕಾಲೇವಾಲಾ ಇಂಗ್ಲಿಷ್ ಜರ್ಮನ್, ಇಟಾಲಿಯನ್, ಫ್ರೆಂಚ್, ಹೆಂಗೇರಿಯನ್, ರೂಮೇನಿಯನ್, ಜಪಾನೀ ಮೊದಲಾದ ಇಪ್ಪತ್ತು ಪ್ರಮುಖ ಭಾಷೆಗಳಿಗೆ ಭಾಷಾಂತರವಾಗಿದೆ. ಶ್ರೇಷ್ಠ ಜಾನಪದ ವಿದ್ವಾಂಸರಾದ ಜೂಲಿಯಸ್ ಕ್ರಾನ್, ಕಾರ್ಲೆಕ್ರಾನ್ ಮೊದಲಾದವರು ಈ ಕೃತಿಯ ಬಗ್ಗೆ ಸಂಶೋಧನೆ ನಡೆಸಿದ್ದಾರೆ.     

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: