ಕಾಲುಬಾಯಿ ಜ್ವರ
ಕಾಲುಬಾಯಿ ಜ್ವರವು (ಗೆರಸಲು, ಗೂಬೆರೋಗ) ದನ, ಎಮ್ಮೆ, ಕುರಿ, ಆಡು, ಹಂದಿ ಮುಂತಾದ ಜಾನುವಾರುಗಳಿಗೆ ಬರುವ ಜ್ವರದೋಪಾದಿಯ ತೀವ್ರ ಬೇನೆ. ಬಾಯಿಯಲ್ಲಿ, ಪಾದದಲ್ಲಿ ಕೆಚ್ಚಲಿನ ಚರ್ಮದ ಮೇಲೆ, ಮೊಲೆತೊಟ್ಟಿನ ಮೇಲೆ ಗುಳ್ಳೆಗಳು ಸಿಡಿಯುವುದು ಈ ರೋಗದ ಲಕ್ಷಣ.
ಎಲ್ಲೆಲ್ಲಿ ಮತ್ತು ಯಾವ ಪ್ರಾಣಿಗಳಲ್ಲಿ ಕಂಡುಬರುತ್ತದೆ
ಬದಲಾಯಿಸಿಪ್ರಪಂಚದ ಎಲ್ಲ ದೇಶಗಳಲ್ಲೂ ಈ ಬೇನೆ ಕಾಣಬರುತ್ತದೆ. ಆಫ್ರಿಕದಲ್ಲಿ, ಏಷ್ಯದ ಎಲ್ಲ ಭಾಗಗಳಲ್ಲಿ ಅದರಲ್ಲೂ ಭಾರತದಲ್ಲಿ ಇದು ಯಾವಾಗಲೂ ಇರುತ್ತದೆ. ಸಾಕಿದ ಪ್ರಾಣಿಗಳಿಗೂ ಸಸ್ಯಹಾರಿಗಳಾದ ಜಿಂಕೆ, ಸಾರಂಗ, ಕಾಡೆಮ್ಮೆ, ಮುಂತಾದ ಪ್ರಾಣಿಗಳೂ ಇದು ಬರುತ್ತದೆ. ವಯಸ್ಕ ಪ್ರಾಣಿಗಳು ಈ ಬೇನೆಗೆ ತುತ್ತಾದಾಗ ಚೇತರಿಸಿಕೊಳ್ಳಬಲ್ಲವು. ವಯಸ್ಸಿಗೆ ಬರದ ಪ್ರಾಣಿಗಳಲ್ಲಿ 85%ರಷ್ಟು ಸಾಯುತ್ತವೆ. ಸಣ್ಣಕರುಗಳು, ಆಡು, ಹಂದಿ ಕುರಿಮರಿಗಳು-ಇವುಗಳಲ್ಲಿ ಈ ರೋಗ ಉಲ್ಬಣರೂಪದಲ್ಲಿ ತೋರಿಬರುತ್ತದೆ.
ರೋಗಕಾರಕ ಸೂಕ್ಷ್ಮಜೀವಿ
ಬದಲಾಯಿಸಿಒಂದು ರೀತಿಯ ವೈರಸ್‍ಗಳು (ಅತಿಸೂಕ್ಷ್ಮಾಣು ಜೀವಿಗಳು) ಈ ರೋಗಕ್ಕೆ ಕಾರಕ. ಕ್ರಿಮಿಯ ಗಾತ್ರ ಒಂದು ಇಂಚಿನ 25ದಶಲಕ್ಷದಲ್ಲಿ ಒಂದು ಭಾಗ. ಇವರಲ್ಲಿ 7 ಜಾತಿಗಳಿವೆ. ಪ್ರತಿ ಜಾತಿಯಲ್ಲೂ ಹಲವಾರು ಉಪಜಾತಿಗಳಿವೆ. ಔ, ಅಂ, ಅ ಎಂಬ ಹೆಸರಿನ ವೈರಸುಗಳು ಪ್ರಪಂಚದ ಎಲ್ಲಾ ಕಡೆಗಳಲ್ಲೂ ಇವೆ. ಏಷ್ಯ, ಸ್ಯಾಟ್/1, ಸ್ಯಾಟ್/2, ಮತ್ತು ಸ್ಯಾಟ್/ 3 ಎಂಬ ವೈರಸುಗಳು ಏಷ್ಯ ಮತ್ತು ಆಫ್ರಿಕದಲ್ಲಿ ಮಾತ್ರ ಕಾಣಬರುತ್ತವೆ. ಇವೆಲ್ಲ ವೈರಸುಗಳಿಂದಲೂ ಬರುವ ರೋಗ ಚಿಹ್ನೆ ಒಂದೇ. ಆದರೆ ಸೋಂಕು ತಡೆಕ್ರಮಗಳು ಒಂದೊಂದಕ್ಕೂ ಬೇರೆ. ಒಂದು ಜಾತಿಯ ವೈರಸಿನಿಂದ ಜ್ವರ ಬಂದ ಮೇಲೆ ಮತ್ತೊಂದರಿಂದ ಜ್ವರ ಬರುವುದಿಲ್ಲ ಎಂದೇನೂ ಇಲ್ಲ.
ರೋಗದ ಹರಡುವಿಕೆ
ಬದಲಾಯಿಸಿಬಾಯಿ, ಕಾಲುಗಳ ಮೇಲೆ ತೋರಿರುವ ಗುಳ್ಳೆಗಳಲ್ಲಿ ರೋಗಕಾರಕ ವೈರಸ್ ಇರುತ್ತದೆ. ಗುಳ್ಳೆಗಳು ಒಡೆದು ಕೀವು ಹೊರಕ್ಕೆ ಬಂದಾಗ ಅದರಲ್ಲಿರುವ ವೈರಸ್‍ಗಳು ಪ್ರಸರಣೆಗೊಳ್ಳುತ್ತವೆ. ವ್ಯಾಧಿಗ್ರಸ್ತ ಪ್ರಾಣಿಗಳು ಗುಳ್ಳೆಯ ಕಾರಣದಿಂದ ಹೆಚ್ಚು ಜೊಲ್ಲು ಸುರಿಸುತ್ತವೆ. ಜೊಲ್ಲಿನಲ್ಲೂ ವೈರಸ್ ಇರುತ್ತದೆ. ರೋಗ ಹರಡುವುದಕ್ಕೆ ಜೊಲ್ಲು ಮುಖ್ಯ ಕಾರಣ. ಹಾಗೆಯೇ ಮೂತ್ರ, ಸೆಗಣಿ, ಕಾಲಿನಿಂದ ಸೋರಿದ ಕೀವು ಸಹ ರೋಗ ಹರಡುವುದಕ್ಕೆ ಕಾರಕಗಳು. ರೋಗ ತಗುಲಿದ ಪ್ರಾಣಿಯೊಡನೆ ಸಂಪರ್ಕಗೊಂಡ ವಸ್ತುಗಳ ಮೂಲಕ ವೈರಸ್ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿ ರೋಗ ಹರಡುತ್ತದೆ. ಆಹಾರ ಪಾತ್ರೆಗಳು, ನೀರಿನ ಖಾನೆ, ಗೋದಣಿಗೆ, ಕೊಯ್ದು ಒಣಗಿಸಿದ ಹುಲ್ಲು, ಹಾಲು ಮತ್ತು ಹಾಲಿನ ಪದಾರ್ಥಗಳು, ಚರ್ಮ, ಕೊಟ್ಟಿಗೆ ಗೊಬ್ಬರ, ದೊಡ್ಡಿ, ದನಕೂಡುವ ರೈಲುಗಾಡಿ ದನಕಾಯುವವರು ಮತ್ತು ಅವರ ಬಟ್ಟೆಗಳು-ಇವೆಲ್ಲವೂ ರೋಗಾಣುಗಳು ಹರಡಲು ಸಹಾಯಕಗಳು. ರೋಗಬಂದ ಪ್ರಾಣಿಗಳನ್ನು ಚಿಕಿತ್ಸೆಮಾಡುವ ಜನ ಸಾಕಷ್ಟು ಜಾಗರೂಕತೆ ವಹಿಸಿ, ಕೈಕಾಲುಗಳನ್ನು ಸೋಂಕು ಕಳೆಯುವಂತೆ ಶುದ್ಧಮಾಡಿಕೊಳ್ಳದಿದ್ದಲ್ಲಿ ಅವರೇ ರೋಗ ಹರಡುವುದಕ್ಕೆ ಕಾರಣರಾಗಬಹುದು. ಪಿತ್ತಕೋಶ ಮತ್ತು ಮೂತ್ರಕೋಶದಲ್ಲಿರಬಹುದಾದ ಈ ವೈರಸ್ ಶೀತಳ ಪರಿಸ್ಥಿತಿಯಲ್ಲೂ 4-5 ತಿಂಗಳ ಕಾಲ ಬದುಕಬಲ್ಲದು. ವೈರಸ್ ಸೋಂಕು ಆದ ಮೇಲೆ ರೋಗದ ಚಿಹ್ನೆ ಕಾಣಲು 1-15 ದಿವಸಗಳ ಅವಧಿ ಬೇಕು. ಸಾಧಾರಣವಾಗಿ 2-6 ದಿವಸಗಳ ಅವಧಿಯಲ್ಲಿ ರೋಗ ಕಾಣಿಸಿಕೊಳ್ಳತ್ತದೆ. ರೋಗದ ಸೋಂಕು ಆಹಾರದಮೂಲಕ ಉಚ್ಛ್ವಾಸ ಮತ್ತು ಗಾಯದ ಮೂಲಕ ಪ್ರಾಣಿ ದೇಹವನ್ನು ಸೇರುತ್ತದೆ.
ಚಿಹ್ನೆಗಳು ಮತ್ತು ಗುಳ್ಳೆಗಳು
ಬದಲಾಯಿಸಿಸೋಂಕು ತಗುಲಿದ ಪ್ರಾಣಿಗೆ ಮಂಕು ಬಡಿಯುತ್ತದೆ. ಅದು ಆಹಾರವನ್ನು ನಿರಾಕರಿಸುತ್ತದೆ. 104° ರಿಂದ 105° ಫ್ಯಾ. ಜ್ವರ ಬರುತ್ತದೆ. ಕಾಲಿನಲ್ಲೂ ಬಾಯಿಯಲ್ಲೂ ಗುಳ್ಳೆಗಳು ಕಾಣಿಸಿಕೊಳ್ಳುವವರೆಗೂ ಅದು ಇಳಿಯುವುದಿಲ್ಲ. ಜೊಲ್ಲುವೃದ್ಧಿಯಾಗಿ ಬಾಯಿಯಿಂದ ದಾರದಂತೆ ಇಳಿಬೀಳುತ್ತದೆ. ಪ್ರಾಣಿ ನಾಲಗೆಯನ್ನು ಬಾಯಿಯಿಂದ ಹೊರಚಾಚುತ್ತದೆ. ಗುಳ್ಳೆಗಳು ಹೊಪ್ಪಳೆಯಾಗಿ ಒಡೆದು ಗಾಯಗಳಾಗುತ್ತವೆ. ಹುಣ್ಣುಗಳು ಕೆನ್ನೆಯ ಒಳಭಾಗದಲ್ಲಿ ನಾಲಗೆ ಮೇಲೆ ವಸಡಿನಲ್ಲಿ ಉಂಟುಗಾತ್ತವೆ. ಒಡದೆ ಗಾಯದಿಂದ ಹುಲುಹಳದಿ ಬಣ್ಣದ ಕೀವು ಹೊರಬರುತ್ತದೆ. ಒಂದೆರಡು ವಾರಗಳಲ್ಲಿ ಹುಣ್ಣು ವಾಸಿಯಾಗುತ್ತದೆ. ಗುಳ್ಳೆಗಳ ನೋವಿನಿಂದ ಪ್ರಾಣಿಗಳು ಗಟ್ಟಿಯಾದ ಆಹಾರವನ್ನು ತಿನ್ನಲಾರವು. ದ್ರವ ಅಥವಾ ಮೆದು ಆಹಾರವನ್ನು ತೆಗೆದುಕೊಳ್ಳುವುದು ಸಾಧ್ಯ. ಬಾಯಿಯಲ್ಲಿ ಗುಳ್ಳೆಗಳು ಮೊದಲು ಕಾಣ್ಣಿಸಿಕೊಳ್ಳುತ್ತವೆ. ಅದಾದ 4-5 ದಿವಸಗಳ ಮೇಲೆ ಕಾಲಿನಲ್ಲಿ ಗುಳ್ಳೆಗಳು ಏಳುತ್ತವೆ. ಕಾಲಿನಲ್ಲಿ ಹೊಪ್ಪೆಳೆಗಳು ಉಗುರಿನ ಮಧ್ಯೆ ಗೊರೆಸು ಚರ್ಮ ಸಂಧಿಸುವೆಡೆ ತಲೆದೋರುವುವು. ದನ ಕುಂಟುವುದಕ್ಕೆ ಪ್ರಾರಂಭಿಸುತ್ತದೆ. ಕಾಲನ್ನು ಆಗಾಗ ಝಾಡಿಸುತ್ತದೆ.
ಕುರಿ ಹಂದಿಗಳಲ್ಲಿ ಬಾಯಿಗಿಂತ, ಕಾಲಿನ ಮೇಲಿನ ಗುಳ್ಳೆಗಳೇ ಸಾಮಾನ್ಯ. ಹಸು, ಹೆಣ್ಣುಕುರಿ, ಹೆಣ್ಣುಹಂದಿ ಮುಂತಾದ ಕರೆಯುವ ಪ್ರಾಣಿಗಳಲ್ಲಿ ಗುಳ್ಳೆಗಳು ಮೊಲೆತೊಟ್ಟಿನ ಕೆಚ್ಚಲು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಗುಳ್ಳೆಗಳು ಒಣಗಿದರೂ ರೋಗ ಪೂರ್ಣ ಶಮನವಾಗಲು 2-3 ವಾರಗಳೇ ಬೇಕು. ಮಂದೆಗಳಲ್ಲಿ ಅವುಗಳ ಗಾತ್ರ ದನಗಳ ಸಂಪರ್ಕಕ್ಕನುಗುಣವಾಗಿ 1ರಿಂದ 11/2 ತಿಂಗಳ ಕಾಲ ರೋಗ ಉಳಿಯುವುದು ಸಾಧ್ಯ.
ವಯಸ್ಕ ಪ್ರಾಣಿಗಳಲ್ಲಿ ಈ ರೋಗದಿಂದ ಸಾವು 1-5%ರಷ್ಟು ಕಡಿಮೆಯಾದರೂ ಕುಂಟು, ಹಾಲು ಕ್ಷೀಣಿಸುವುದು, ಚರ್ಮ ಒರಟಾಗುವುದು, ಮಂಕು ಕವಿಯುವಿಕೆ, ಗೊರಸು ಮೆತವಾಗುವುದು ಮುಂತಾದ ತೊಂದರೆಗಳಿಂದ ನಷ್ಟ ಅನಿವಾರ್ಯ.
ಔಷಧಿಗಳು ಮತ್ತು ಲಸಿಕೆಗಳು
ಬದಲಾಯಿಸಿಒಂದು ಜಾತಿಯ ಕಾಲು ಬಾಯಿ ಜ್ವರದಿಂದ ದನ ಉಳಿದರೆ ಮತ್ತೊಂದು ಜಾತಿಯ ಕಾಲು, ಬಾಯಿ ಸೋಂಕಿನೆದುರು ನಿರೋಧಶಕ್ತಿ ಏನೂ ಇರಲಾರದು. ವಿವಿಧ ಜಾತಿಯ ಕಾಲು, ಬಾಯಿ ಜ್ವರದ ಸೋಂಕು ನಿವಾರಣೆಗೆ ಲಸಿಕೆಗಳು ಇವೆ. ಆದರೆ ಇವುಗಳ ಸೋಂಕು ತಡೆಯುವ ಶಕ್ತಿ ಕೇವಲ ಆರೇ ತಿಂಗಳು. ಅಮೆರಿಕ, ಬ್ರಿಟನ್, ಕೆನಡ, ನಾರ್ವೆ, ಐರ್ಲೆಂಡ್ ಮುಂತಾದ ದೇಶಗಳಲ್ಲಿ ರೋಗ ಸ್ಥಳೀಯವಾಗಿರುವುದು. ಅಂಥ ಸಂದರ್ಭಗಳಲ್ಲಿ ಮಾಲೀಕರಿಗೆ ಪರಿಹಾರ ಕೊಟ್ಟು ಸೋಂಕುತಗುಲಿದ ದನಗಳನ್ನು ಕೊಂದು ರೋಗ ತಡೆಗಟ್ಟುವುದು ಸಾಧ್ಯ. ಮುಖ್ಯವಾಗಿ ನೇರ ಅಥವಾ ಪರೋಕ್ಷ ಸಂಪರ್ಕ ತಪ್ಪಿಸಿ ರೋಗ ಹರಡುವುದನ್ನು ತಡೆಯುತ್ತಾರೆ. ಬ್ರಿಟನ್ನಿನಲ್ಲಿ ಸಾಂಕ್ರಾಮಿಕ ರೋಗಗಳ ಕಾನೂನು ಪಟ್ಟಿಯಲ್ಲಿ ಕಾಲು, ಬಾಯಿ ಜ್ವರ ಸೇರಿದೆ. ಅಮೆರಿಕದಲ್ಲಿ ಈ ಜ್ವರದ ಉಪದ್ರವವನ್ನು ಪೂರ್ಣವಾಗಿ ತೊಡೆದು ಹಾಕಿರುತ್ತಾರೆ. ರೋಗವಿರುವ ದೇಶಗಳಿಂದ ದನ, ಕುರಿ, ಹಂದಿ ಇವುಗಳ ಆಮದು ನಿಷಿದ್ಧ. ಕಾಲು ಬಾಯಿ ಜ್ವರ ವ್ಯಾಧಿ ಚಿಕಿತ್ಸೆಯಲ್ಲಿ ಸ್ವಲ್ಪ ಮತ್ತು ಜೀವಿ ವಿರೋಧನ ಔಷಧಿಗಳು ಉಪಸೋಂಕುಗಳಿಂದ ಕ್ಲಿಷ್ಟವಾಗುವುದನ್ನು ತಪ್ಪಿಸಲಷ್ಟೇ ಸಹಕಾರಿ. ಬಾಯಿ ತೊಳೆಯುವ ಪೂತಿನಾಶಕ ದ್ರವಗಳಿಂದ, ಇಲ್ಲವೇ ಕಾಲಿಗೆ ಕಟ್ಟುವಂಥ ಔಷಧಿಗಳಿಂದ ಜ್ವರಕ್ಕೆ ಚಿಕಿತ್ಸೆಮಾಡಬಹುದು.
ಬಾಯಿಹುಣ್ಣು
ಬದಲಾಯಿಸಿದನ, ಹಂದಿ ಮುಂತಾದುವುಗಳಿಗೆ ವಿಸಿಕ್ಯುಲರ್ ಸ್ಟೆಮೇಟಿಸ್ ಎಂಬ ಬಾಯಿ ಹುಣ್ಣು ಬರುತ್ತದೆ. ಇದರ ಲಕ್ಷಣಗಳು ಕಾಲು, ಬಾಯಿಜ್ಚರದ ಹಾಗೇ ಇರುತ್ತದೆ. ಕುದರೆಗಳಿಗೂ ಈ ರೋಗ ಬರುತ್ತದೆ. ಬಾಯಿಯಲ್ಲಿ ಮಾತ್ರ ಗುಳ್ಳೆಗಳು ಕಾಣಿಸುತ್ತವೆ. ಆದರೆ ರೋಗ ಅಷ್ಟು ಹರಡುವುದಿಲ್ಲ. ದೊಡ್ಡರೋಗ ಬಂದಾಗ ದನಗಳಲ್ಲಿ ಬಾಯಿಯಲ್ಲಿ ಕಾಣುವ ಗುಳ್ಳೆಗಳೂ ಸ್ವಲ್ಪ ಮಟ್ಟಿಗೆ ಕಾಲು, ಬಾಯಿ ಜ್ವರದ ಗುಳ್ಳೆಗಳನ್ನು ಹೋಲುತ್ತವೆ. ಆದರೆ ದೊಡ್ಡರೋಗದ ಗುಳ್ಳೆಗಳು ಸಣ್ಣಗಿರುತ್ತವೆ. ಒತ್ತಾಗಿರುವುದಿಲ್ಲ. ಜೊಲ್ಲು ಉದ್ದವಾಗಿ ದಾರದೋಪಾದಿಯಲ್ಲಿರುವುದಿಲ್ಲ. ಉಗ್ರ ನೆಗಡಿ ಜ್ವರದ ಕೆಲಹಂತಗಳಲ್ಲಿ ಕಾಲು ಬಾಯಿ ಜ್ವರದ ಲಕ್ಷಣ ಕಾಣಬರುತ್ತದೆ. ಒಂದನ್ನು ಇನ್ನೊಂದು ಎಂದು ತಪ್ಪು ತಿಳಿದುಕೊಳ್ಳುವ ಸಂಭವ ಉಂಟು. ಉಗ್ರ ನೆಗಡಿಜ್ವರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಮುಂದೆಯಲ್ಲಿ ಹರಡುವುದಿಲ್ಲ. ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುತ್ತದೆ. ಕಾಲು, ಬಾಯಿ ಜ್ವರದಲ್ಲಿ ಹೀಗಾಗುವುದಿಲ್ಲ.
ಇತರೆ ಮಾಹಿತಿ
ಬದಲಾಯಿಸಿಈ ರೋಗಕ್ಕೆ ಕಾರಣವಾದ ವೈರಾಣು, ರೇಬೀಸ್ ರೋಗದ ವೈರಾಣುವಿನ ಜೊತೆ ಹತ್ತಿರದ ಸಂಬಂಧ ಹೊಂದಿದೆ. ಈ ಕುಟುಂಬದ ವೈರಾಣುಗಳು ಸೂರ್ಯನ ರಶ್ಮಿಗೆ ಬಹು ಬೇಗನೆ ಸಾಯುತ್ತದೆ. ಹಾಗಾಗಿ ಇವು ಪ್ರಾಣಿಯ ದೇಹ ಹೊರಗೆ ಹೆಚ್ಚು ಕಾಲ ಬದುಕುವುದಿಲ್ಲ.
ಈ ರೋಗದಲ್ಲಿ, ವೈರಾಣುವು, ಯಾವುದೋ ಪ್ರಾಣಿಯ ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಥೈರಾಡ್ ಗ್ರಂಥಿಗಳಿಗೆ ಹಾನಿಯುಂಟು ಮಾಡುತ್ತದೆಯಾದ್ದರಿಂದ ಅವುಗಳ ಕೂದಲು ಒರಟಾಗುತ್ತದೆ (ಗೂಬೆರೋಗ) ಹಾಗೂ ಪಚನಕ್ರಿಯೆ ಕುಂಠಿತಗೊಂಡು ಪ್ರಾಣಿಗಳ ಉತ್ಪಾದನೆ ಮತ್ತು ಸಂತಾನೋತ್ಪತ್ತಿಯ ಮೇಲೆ ಅತೀವ ಹಾನಿ ಉಂಟಾಗುತ್ತದೆ.
ಭಾರತವು ಪರದೇಶಗಳಿಗೆ ಹಾಲನ್ನು ರಫ್ತು ಮಾಡಲು ಕೆಲವು ಮಾನದಂಡಗಳಿವೆ. ಅವುಗಳಲ್ಲಿ ಹಾಲು ಕಾಲುಬಾಯಿ ವೈರಾಣು ಮುಕ್ತವಾಗಿರಬೇಕು ಎಂಬುದೂ ಒಂದು. ಹಾಗಾಗಿ ಇದೀಗ ಸರಕಾರವು ಪ್ರತೀ ರಾಸುವಿಗೂ ವರ್ಷಕ್ಕೆ 3 ಬಾರಿ (4 ತಿಂಗಳಿಗೊಮ್ಮೆ) ಲಸಿಕೆ ಹಾಕಿಸಿ ಕಾಲುಬಾಯಿ ರೋಗ ಮುಕ್ತ ದೇಶವಾಗಲು ಪ್ರಯತ್ನಶೀಲವಾಗಿದೆ.
ಭಾರತದ ದೇಶೀ ತಳಿಗಳಲ್ಲಿ ಕಾಲುಬಾಯಿ ಜ್ವರದ ರೋಗೋತ್ತರ ಪರಿಣಾಮ ವಿದೇಶೀ ಅಥವಾ ಮಿಶ್ರತಳಿ ಹಸುಗಳಿಗಿಂತ ಕಡಿಮೆ ಇದೆ.
ಹೊರಗಿನ ಕೊಂಡಿಗಳು
ಬದಲಾಯಿಸಿ- FMD Myocarditis in Pigs
- Stenfeldt, C.; Pacheco, J. M.; Smoliga, G. R.; Bishop, E.; Pauszek, S. J.; Hartwig, E. J.; Rodriguez, L. L.; Arzt, J. (2014). "Detection of Foot-and-mouth Disease Virus RNA and Capsid Protein in Lymphoid Tissues of Convalescent Pigs Does Not Indicate Existence of a Carrier State". Transboundary and Emerging Diseases. 63 (2): 152–164. doi:10.1111/tbed.12235. PMID 24943477.
- Foot-and-Mouth Disease Archived 2013-05-20 ವೇಬ್ಯಾಕ್ ಮೆಷಿನ್ ನಲ್ಲಿ. 12-part comprehensive overview from the Center for Infectious Disease Research and Policy
- FMD portal Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ.
- 2007 Outbreak Foot and Mouth Disease Timeline
- Armstrong R, Davie J, Hedger RS (1967). "Foot-and-mouth disease in man". Br Med J. 4 (5578): 529–30. doi:10.1136/bmj.4.5578.529. PMC 1749100. PMID 4294412.
- Current status of Foot and Mouth Disease worldwide at OIE. WAHID Interface—OIE World Animal Health Information Database
- Disease card
- The European Commission for the Control of Foot-and-Mouth Disease (EuFMD)
- Species Profile - Foot and Mouth Disease, National Invasive Species Information Center, United States National Agricultural Library.