ಕಾರ್ಲೊ ಕಲಾಡಿ
ಕಾರ್ಲೊ ಕಲಾಡಿ(ನವೆಂಬರ್ 24, 1826 –ಒಕ್ಟೋಬರ್ 26, 1890) ಕಾರ್ಲೊ ಲೊರೆನ್ಸಿ ಎಂಬ ಇಟಲಿಯ ಲೇಖಕನ ಕೃತಕನಾಮ. ಮ್ಯಾಟ್ಜನಿಯ ಪರವಾಗಿ ಪತ್ರಿಕೆಗಳಿಗೆ ವಿಪುಲವಾಗಿ ಬರೆದನಲ್ಲದೆ ನಾಟಕ ಮತ್ತು ಕಾದಂಬರಿಗಳನ್ನು ರಚಿಸಿ ಪ್ರಸಿದ್ಧನಾಗಲು ಯತ್ನಿಸಿದ. ಅನಂತರ ಮಕ್ಕಳಿಗಾಗಿ ಗ್ರಂಥರಚನೆ ಮಾಡಲು ಪ್ರಾರಂಭಿಸಿದ. ಈತನ ಮೊದಲೆರಡು ಕೃತಿಗಳಲ್ಲಿ ಉಪದೇಶ ಮತ್ತು ನೀತಿಬೋಧೆ ವಿಪರೀತವಾಗಿ ಬಂದಿರುವುದರಿಂದ ಸಾಹಿತ್ಯಗುಣ ಹಿಂದಾಗಿದೆ. ಅನಂತರ ಈತ ರಚಿಸಿದ ಪಿನೋಕಿಯೋನ ಸಾಹಸಗಳು ಎಂಬ ಕೃತಿ ಜಗತ್ಪ್ರಸಿದ್ಧವಾಗಿದೆ. ಅದು ಮೊದಲು ಧಾರಾವಾಹಿಯಾಗಿ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಮೂರು ವರ್ಷಗಳ ಅನಂತರ ಪುಸ್ತಕರೂಪವಾಗಿ ಬೆಳಕು ಕಂಡಿತು. ಅಲ್ಲಿಂದಾಚೆಗೆ ಪಿನೀಕಿಯೋ ಎಂಬುದು ಪ್ರಪಂಚದಾದ್ಯಂತ ಮಕ್ಕಳ ಬಹು ಪ್ರಿಯ ಕಾದಂಬರಿ ಎನಿಸಿದೆ. ತುಂಟ ಮಕ್ಕಳ ಕ್ರಮರಹಿತ ಜೀವನವನ್ನು ಚಿತ್ರಿಸುವುದು ಇಲ್ಲಿ ಕವಿಯ ಉದ್ದೇಶ. ಬಡಗಿಯೊಬ್ಬ ಮರದ ತುಂಡೊಂದರಿಂದ ಕೆತ್ತಿ ನಿರ್ಮಿಸುತ್ತಿದ್ದ ಬೊಂಬೆಯೊಂದಕ್ಕೆ ಇದ್ದಕ್ಕಿದ್ದ ಹಾಗೆ ಜೀವ ಬಂದುಬಿಡುತ್ತದೆ. ಆ ಕ್ಷಣದಿಂದ ಅದು ತುಂಟಾಟಕ್ಕೆ ಪ್ರಾರಂಭಿಸುತ್ತದೆ. ಊಟ ಉಪಚಾರಗಳಲ್ಲಿ ತಂದೆಯನ್ನು ಗೋಳು ಹುಯ್ದುಕೊಳ್ಳುತ್ತದೆ. ಮನೆ ಬಿಟ್ಟು ಓಡಿಹೋಗುತ್ತದೆ. ಕೈಯಲ್ಲಿದ್ದ ಬಾಲಬೋಧೆಯನ್ನು ಮಾರಿ ನಾಟಕ ನೋಡುತ್ತದೆ. ಕಾಸಿನ ಗಿಡ ಬೆಳೆಸಿ ಸಾಹುಕಾರನಾಗಬಹುದೆಂಬ ಭ್ರಮೆಯಿಂದ ಮೋಸಗಾರ ನರಿಯೊಂದಿಗೆ ಸೇರಿ ಇದ್ದ ಕಾಸನ್ನೆಲ್ಲ ಕಳೆದುಕೊಳ್ಳುತ್ತದೆ. ಬದುಕಿಸ ಬಂದ ಅಪ್ಸರೆಗೆ ಸುಳ್ಳು ಹೇಳಿ ಪಡಬಾರದ ಕಷ್ಟ ಪಡುತ್ತದೆ. ಓದು ಬರೆಹ ಯಾವುದೂ ಇಲ್ಲದ ಕೈತವನಗರಕ್ಕೆ ಹೋಗಿ ಆಟ ಊಟ ವಿಹಾರಗಳಲ್ಲಿ ಮಾತ್ರ ಆಸಕ್ತವಾಗಿ ಕೊನೆಗೊಮ್ಮೆ ಕತ್ತೆಯಾಗುತ್ತದೆ. ಹೀಗೆ ಪಟಿಂಗನಾಗಿ, ನಾನಾ ತೊಂದರೆಗಳಿಗೀಡಾಗಿ ಕೊನೆಗೆ ಅಪ್ಸರೆಯ ಕೃಪೆಯಿಂದ ಮತ್ತೆ ನಿಜವಾದ ಪುಟ್ಟ ಹುಡುಗನಾಗಿ ಶಾಲೆಗೆ ಹೋಗುತ್ತದೆ. ಇಲ್ಲಿ ಕಥೆಗೂ ವಾಸ್ತವಿಕತೆಗೂ ನಡುವಿನ ಅಂತರ ಮರೆತು ಹೋಗುವ ರೀತಿಯಲ್ಲಿ ಕವಿ ವಸ್ತುವನ್ನು ಬೆಳೆಸುತ್ತಾನೆ. ಅವನ ಕಲ್ಪನೆಗೆ ಇಲ್ಲಿ ಗರಿ ಮೂಡಿದೆ.
ಕಾರ್ಲೊ ಕಲಾಡಿ | |
---|---|
ಜನನ | ಫ್ಲೋರೆನ್ಸ್, ಇಟಲಿ | ೨೪ ನವೆಂಬರ್ ೧೮೨೬
ಮರಣ | 26 October 1890 ಫ್ಲೋರೆನ್ಸ್, ಇಟಲಿ | (aged 63)
ವೃತ್ತಿ | ಬರಹಗಾರ,ಕಾದಂಬರಿಕಾರ |
ಪ್ರಕಾರ/ಶೈಲಿ | ಮಕ್ಕಳ ಸಾಹಿತ್ಯ |
ಈ ಗ್ರಂಥ ಇಟಾಲಿಯನ್ ಭಾಷೆಯಲ್ಲೇ ಹಲವಾರು ಮುದ್ರಣ ಕಂಡಿದೆ ; ಇಂಗ್ಲಿಷಿಗೂ ಇತರ ಐರೋಪ್ಯ ಭಾಷೆಗಳಿಗೂ ಅನುವಾದವಾಗಿದೆ. ಇದರ ಹಲವು ಬಗೆಯ ಸಚಿತ್ರ ಸಂಗ್ರಹಗಳು ಬಂದಿವೆ. ವಾಲ್ಟ್ ಡಿಸ್ನೆ ಇದೇ ಹೆಸರಿನ ವರ್ಣರಂಜಿತ ವ್ಯಂಗ್ಯ ಚಿತ್ರವೊಂದನ್ನು ತಯಾರಿಸಿದ್ದಾನೆ. ಮೂಲಕಥೆಯನ್ನು ಹಿಂದಿಗೂ ಪಂಜಾಬಿಗೂ ತರ್ಜುಮೆ ಮಾಡಲಾಗಿದೆ. ಈಚೆಗೆ ಕನ್ನಡದಲ್ಲೂ ಇದು ಭಾಷಾಂತರಗೊಂಡಿದ್ದು (ಅನುವಾದ-ಎನ್. ಪ್ರಹ್ಲಾದರಾವ್) ಇದರ ಬಹುಭಾಗ ಕೈಲಾಸ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದಿದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Pinocchio Park Archived 2008-02-25 ವೇಬ್ಯಾಕ್ ಮೆಷಿನ್ ನಲ್ಲಿ. Collodi Tuscany
- New York Review of Books
- Carlo Collodi National Foundation Archived 2008-03-02 ವೇಬ್ಯಾಕ್ ಮೆಷಿನ್ ನಲ್ಲಿ. Collodi Tuscany
- Works by Carlo Collodi at Project Gutenberg
- Works by or about ಕಾರ್ಲೊ ಕಲಾಡಿ in libraries (WorldCat catalog)
- Project Gutenberg e-text of The Adventures of Pinocchio Archived 2004-04-22 at Archive.is (translated from the Italian by Carol Della Chiesa)
- Find-A-Grave profile for Carlo Collodi
- Carlo Collodi and Modern Politics - Any Parallels ? Archived 2007-10-10 ವೇಬ್ಯಾಕ್ ಮೆಷಿನ್ ನಲ್ಲಿ.
- from "Pinocchio. Le avventure di un burattino" listen to chapt.1 - 2 - 12 audio mp3 for free