ಕಾರ್ನಾಡ್ ಸದಾಶಿವ ರಾವ್

(ಕಾರ್ನಾಡ ಸದಾಶಿವರಾಯರು ಇಂದ ಪುನರ್ನಿರ್ದೇಶಿತ)

ಕಾರ್ನಾಡ್ ಸದಾಶಿವ ರಾವ್ 1881-1937. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರು. 1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು; ಅವರು ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ರಸಿದ್ಧರಾಗಿದ್ದರು. ತಾಯಿ ರಾಧಾಬಾಯಿ.

ಕಾರ್ನಾಡ್ ಸದಾಶಿವ ರಾವ್
ಜನನ1881
ಮರಣಜನವರಿ 9, 1937
OrganizationIndian National Congress
ಚಳುವಳಿಭಾರತದ ಸ್ವಾತಂತ್ರ್ಯ ಸಂಗ್ರಾಮ

ಶಿಕ್ಷಣ

ಬದಲಾಯಿಸಿ

ಸದಾಶಿವರಾಯರು ಮಂಗಳೂರಿನಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಪದವೀ ಧರರಾದರು. ಮುಂಬಯಿ ಯಲ್ಲಿ ನ್ಯಾಯಶಾಸ್ತ್ರ ಪದವಿ ಗಳಿಸಿ ಮಂಗಳೂರಿನಲ್ಲಿ 1906ರಲ್ಲಿ ವಕೀಲಿಯನ್ನಾರಂ ಭಿಸಿದರು.

ಸ್ವಾತಂತ್ರ್ಯ ಚಳವಳಿ

ಬದಲಾಯಿಸಿ

ಇವರು ಬಲು ಬೇಗ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದರಾದರೂ ಇವರ ಮನಸ್ಸು ದೇಶದ ಉನ್ನತಿಗಾಗಿ ಸದಾ ತುಡಿಯುತ್ತಿತ್ತು. ಸ್ತ್ರೀಯರ ಪ್ರಗತಿಗಾಗಿ ಮಹಿಳಾ ಸಭಾ ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿದರು. ಇವರೂ ಇವರ ಪತ್ನಿ ಶಾಂತಾಬಾಯಿಯವರೂ ಈ ಸಂಸ್ಥೆಯ ಆಶ್ರಯದಲ್ಲಿ ಮಹಿಳೆಯರಿಗೆ ಉಪಯುಕ್ತ ಕಸಬುಗಳನ್ನು ಹೇಳಿಕೊಡುತ್ತಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾದಾಗ ಯುವಕರಿಗೆ ರಾಷ್ಟ್ರೀಯ ಶಿಕ್ಷಣವನ್ನು ನೀಡುವತ್ತ ಇವರ ಮನಸ್ಸು ಹರಿಯಿತು. ಇವರು ತಿಲಕ್ ವಿದ್ಯಾಲಯ ಎಂಬ ರಾಷ್ಟ್ರೀಯ ವಿದ್ಯಾಶಾಲೆಯನ್ನ ಆರಂಭಿಸಿದರು. ಹಿಂದಿ ಭಾಷೆಯನ್ನು ಬೋಧಿಸುವುದರ ಜೊತೆಗೆ ಅಲ್ಲಿ ನೂಲುವುದು, ನೇಯುವುದು ಮುಂತಾದ ಉಪಯುಕ್ತ ಕೈಕಸಬುಗಳನ್ನೂ ಹೇಳಿಕೊಡಲಾಗುತ್ತಿತ್ತು.

ಇವರು ಗಾಂಧೀಯವರು ಸತ್ಯಾಗ್ರಹ ಚಳವಳಿಯನ್ನಾರಂಭಿಸಿದಾಗ ಕರ್ನಾಟಕದಲ್ಲಿ ಅದರ ಪ್ರತಿಜ್ಞೆಗೆ ಸಹಿಹಾಕಿದವರಲ್ಲಿ ಇವರು ಮೊದಲಿಗರು. ಇವರು ಈ ಚಳವಳಿಯಲ್ಲಿ ದುಮುಕಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸು ಬಲಗೊಂಡಿತು. ದಕ್ಷ ಹಾಗೂ ನಿಷ್ಠಾವಂತ ಸತ್ಯಾಗ್ರಹಿಗಳ ತರಬೇತಿಗಾಗಿ ಇವರು ಧಾರಾಳವಾಗಿ ಹಣ ಸುರಿದರು. ಹಲವು ವರ್ಷಗಳ ಕಾಲ ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರಲ್ಲದೆ ಅದರ ಅಧ್ಯಕ್ಷರೂ ಆಗಿದ್ದರು (1931-34). ಇವರ ಖ್ಯಾತಿ ಅಖಿಲಭಾರತ ಮಟ್ಟಕ್ಕೂ ಏರಿತು. ಇವರು ಅಖಿಲಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾದರು.

ಮಹಾತ್ಮ ಗಾಂಧೀಯವರ ಅಚ್ಚುಮೆಚ್ಚಿನ ಅನುಯಾಯಿಗಳಲ್ಲೊಬ್ಬ ರಾಗಿದ್ದ ಇವರು ಗಾಂಧೀಯವರು ಆರಂಭಿಸಿದ ಉಪ್ಪಿನ ಸತ್ಯಾಗ್ರಹ ಸಮಯದಲ್ಲಿ ವೈಯುಕ್ತಿಕ ಸತ್ಯಾಗ್ರಹಿಯಾಗಿ ದಸ್ತಗಿರಿಯಾಗಿ ಕಾರಾಗೃಹವಾಸಅನುಭವಿಸಿದರು. 1937ರಲ್ಲಿ ಫೈಜ್‍ಪುರದಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಇವರ ಆರೋಗ್ಯ ಕೆಟ್ಟಿತು. 1937 ಜನವರಿ 9ರಂದು ಇವರು ಮುಂಬಯಿಯಲ್ಲಿ ನಿಧನರಾದರು.

ಇವರು ಐಶ್ವರ್ಯವಂತರ ಮನೆತನದಲ್ಲಿ ಹುಟ್ಟಿ ಬೆಳೆದವರಾದರೂ ದೀನದಲಿತರ ಬಗ್ಗೆ ಸದಾ ಅನುಕಂಪಹೊಂದಿದ್ದರು. ಅವರ ಉದ್ಧಾರಕ್ಕಾಗಿ ಇವರು ಬಹಳ ಶ್ರಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಸುಧಾರಕರ ದೊಡ್ಡ ಪಡೆಯನ್ನೇ ಕಟ್ಟಿದರು. ಮಹಿಳೆಯರ ಪ್ರಗತಿಗಾಗಿಯೂ ರಾಷ್ಟ್ರೀಯ ಶಿಕ್ಷಣಕ್ಕಾಗಿಯೂ ಇವರು ಕಟ್ಟಿದ ಸಂಸ್ಥೆಗಳು ಯಶಸ್ವಿಯಾಗಿ ಕೆಲಸ ಮಾಡಿದವು. ದಲಿತೋದ್ಧಾರ ಕಾರ್ಯದಲ್ಲಿ ಇವರು ಕೊನೆಯ ವರೆಗೂ ನಿರತರಾಗಿದ್ದರು. ಇವರು ಕೆನರಾ ಸಾರಸ್ವತ ಸಂಘದ ಅಧ್ಯಕ್ಷರಾಗಿದ್ದರು (1924-25).

ಇವರು ಸರಸಿ, ಸರಳ ಜೀವಿ. ಮಹಾತ್ಮ ಗಾಂಧೀಯವರಿಗೆ ಇವರಲ್ಲಿ ತುಂಬ ವಿಶ್ವಾಸವಿತ್ತು. ಬೆಂಗಳೂರಿನಲ್ಲಿ ಸೇರಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅರವತ್ತೈದನೆಯ ಅಧಿವೇಶನದ (1960) ಸ್ಥಳಕ್ಕೆ ಸದಾಶಿವನಗರ ಎಂದು ಹೆಸರಿಡಲಾಗಿತ್ತು. ಬೆಂಗಳೂರಿನಲ್ಲಿ ಇವರ ಹೆಸರಿನ ಒಂದು ಬಡಾವಣೆ ಇದೆ.

ಹೆಚ್ಚಿನ ವಿವರಕ್ಕೆ ಹೊರ ಸಂಪರ್ಕ

ಬದಲಾಯಿಸಿ


ಉಲ್ಲೇಖ

ಬದಲಾಯಿಸಿ