ಕಾಡುಪಾಪ
Smit.Faces of Lorises.jpg
ಕಾಡುಪಾಪಗಳು
Egg fossil classification
Kingdom:
animalia
Phylum:
Class:
Order:
Family:
ಲೋರಿಸಿಡೆ
Subfamily:
ಲೋರಿನೆ

(ಜಾನ್ ಎಡ್ವರ್ಡ್) ಗ್ರೇ, 1821
ಜೀನಸ್ (ಕುಲ)

ಲೊರಿಸ್
ನಿಕ್ಟಿಸೆಬಸ್

ಕಾಡುಪಾಪ - ಭಾರತದ ಅನೇಕ ಅಭಯಾರಣ್ಯಗಳಲ್ಲಿ ಕಂಡುಬರುವ ಸಸ್ತನಿ ಇದಾಗಿದೆ. ಕಾಡುಪಾಪವು ಪ್ರೈಮೇಟ್ ಗಣದ ಲೋರಿಸಿಡೀ ಕುಟುಂಬದ ಲೋರಿಸ್ ಜಾತಿಯ ಮತ್ತು ಲೀಮರಿಡೀ ಕುಟುಂಬದ ಲೀಮರ್ ಜಾತಿಯ ಕೋತಿಗಳಿಗೆ ಇರುವ ಸಾಮಾನ್ಯ ಹೆಸರು. ಇವುಗಳಲ್ಲಿ ಲೋರಿಸ್ ಜಾತಿಯ ಕಾಡುಪಾಪ ಭಾರತ, ಸಿಂಹಳಗಳಲ್ಲಿ ವಾಸಿಸುತ್ತದೆ. ಲೀಮರ್ ಜಾತಿಯವು ಮಡಗಾಸ್ಕರ್ ದ್ವಿಪದ ನಿವಾಸಿಗಳು.

ಲೀಮರ್ ಕಾಡುಪಾಪಸಂಪಾದಿಸಿ

ಲೀಮರ್ ಕಾಡುಪಾಪ ವೃಕ್ಷವಾಸಿ. ಪ್ರೈಮೇಟ್ ಗಣದ ಬಹಳ ಪ್ರಾಚೀನ ಲಕ್ಷಣಗಳನ್ನು ತೋರಿಸುತ್ತದೆ. ನೋಡುವುದಕ್ಕೆ ಅಳಿಲಿನಂತೆಯೇ ಕಾಣುತ್ತದೆ. 120-440 ಮಿಮೀ. ಉದ್ದದ ಪೊದೆಪೊದೆಯಾದ ಬಾಲ, ದೊಡ್ಡ ಕಿವಿಗಳು, ತಲೆಯ ಮುಂಭಾಗದಲ್ಲಿರುವ ಪ್ರಧಾನವಾಗಿ ಕಾಣುವ ದೊಡ್ಡ ಕಣ್ಣುಗಳು-ಇದರ ಪ್ರಧಾನ ಲಕ್ಷಣಗಳು. ದೇಹದ ಮೇಲೆಲ್ಲ ಉಣ್ಣೆಯಂಥ ಕೂದಲಿವೆ. ಹಿಂಗಾಲುಗಳು ಮುಂಗಾಲು (ಕೈ)ಗಳಿಗಿಂತ ಚಿಕ್ಕವು. ಕೈಕಾಲುಗಳೆರಡರಲ್ಲೂ ರೆಂಬೆಗಳನ್ನು ಹಿಡಿಯಲು ಅನುಕೂಲವಾಗುವಂಥ, ಉಳಿದ ನಾಲ್ಕು ಬೆರಳುಗಳಿಗೆ ಎದುರಾಗಿರುವ ಹೆಬ್ಬೆರಳಿದೆ. ಕಾಲಿನ ಎರಡನೆಯ ಬೆರಳಿನಲ್ಲಿ ಪಂಜವಿದೆ. ಉಳಿದ ಬೆರಳುಗಳಲ್ಲಿ ಉಗುರುಗಳಿವೆ. ಸಾಮಾನ್ಯವಾಗಿ ಇವು 10-20 ಪ್ರಾಣಿಗಳನ್ನೊಳಗೊಂಡ ಗುಂಪುಗಳಲ್ಲಿ ವಾಸಿಸುತ್ತವೆ. ರೆಂಬೆಯಿಂದ ರೆಂಬೆಗೆ ಹಾರಿ ಚಲಿಸುತ್ತವಾದರೂ ನೆಲದ ಮೇಲೆ ಓಡುವುದು, ನೆಗೆಯುವುದು ಉಂಟು. ಇವು ನಿಶಾಚರಿಗಳು. ಹಗಲನ್ನು ಯಾವುದಾದರೂ ಮರದಲ್ಲಿ ನಿದ್ರಿಸುತ್ತ ಕಾಲ ಕಳೆಯುತ್ತವೆ. ನಿದ್ರಿಸುವಾಗ ಅಥವಾ ವಿಶ್ರಮಿಸುವಾಗ ಬಾಲವನ್ನು ಯಾವುದಾದರೂ ರೆಂಬೆಗೆ ಸುತ್ತುತ್ತವೆ. ಇವುಗಳ ಆಹಾರ ಕೀಟಗಳು, ಹಣ್ಣು, ಎಲೆ ಇತ್ಯಾದಿ. ಇವು ಪ್ರೈಮೇಟ್ ಗಣಕ್ಕೆ ಸೇರಿದ್ದರೂ ಸಂತಾನೋತ್ಪತ್ತಿ ಕ್ರಮದಲ್ಲಿ ಪ್ರಾಚೀನವಾದ ಈಸ್ಟ್ರಸ್ ಆವೃತ್ತಗಳನ್ನೇ ತೋರಿಸುತ್ತವೆ. ಒಂದು ವರ್ಷದಲ್ಲಿ ಹಲವಾರು ಈಸ್ಟ್ರಸ್ ಆವೃತ್ತಗಳಿರುತ್ತವೆ. ಗರ್ಭಕೋಶದಲ್ಲಿ ಎರಡು ಕವಲುಗಳಿವೆ. ಗರ್ಭಕೋಶ ತುಂಬ ಹಿಂದುಳಿದ ಲಕ್ಷಣವನ್ನು ತೋರುತ್ತವೆ. ಹುಟ್ಟಿದಾಗ ಮರಿಗಳಿಗೆ ತುಂಬ ದೊಡ್ಡ ತಲೆಯೂ, ರೋಮರಹಿತ ಬಾಲವೂ ಇರುವುವು. ತಂದೆತಾಯಿಗಳೆರಡೂ ಮರಿಗಳ ಪಾಲನೆ ಮಾಡುತ್ತದೆ.

ಮಡಗಾಸ್ಕರಿನಲ್ಲೇ ಕಾಣಬರುವ ಇಂಡ್ರಿಸ್ ಮತ್ತು ಅಯ್ ಅಯ್ ಎಂಬ ಎರಡು ಪ್ರಾಣಿಗಳೂ ಲೀಮರಿಡೀ ಕುಟುಂಬಕ್ಕೆ ಸೇರಿದ್ದು ಕಾಡುಪಾಪವನ್ನೆ ಹೋಲುತ್ತವೆ.

ಇಂಡ್ರಿಸ್ಸಂಪಾದಿಸಿ

ಇಂಡ್ರಿಸ್ ಪ್ರಾಣಿಗೆ ಇಂಡ್ರಿ ಇಂಡ್ರಿ ಎಂಬ ಶಾಸ್ತ್ರೀಯನಾಮವಿದೆ. ಬೆಕ್ಕಿನ ಅಥವಾ ಅಳಿಲಿನ ಪ್ರಮಾಣದ ಶರೀರ, ದೊಡ್ಡ ಕಣ್ಣು, ನರಿಯಂಥ ಮುಖ, ನಾಯಿಯ ಮೂಗು ಇದರ ಲಕ್ಷಣಗಳು. ಇದು ಸಂಕೋಚ ಸ್ವಭಾವದ್ದು. ನಿಶಾಚರಿ. ಇದರ ಇತರ ಲಕ್ಷಣಗಳೆಲ್ಲ ಲೀಮರಿನಂತೆಯೆ.

ಅಯ್ ಅಯ್  (ಮ್ಯಾಲಗ್ಸೆ ಕಾಡುಪಾಪ)ಸಂಪಾದಿಸಿ

ಅಯ್ ಅಯ್ ಎಂಬುದಕ್ಕೆ ಮ್ಯಾಲಗ್ಸೆ ಕಾಡುಪಾಪ ಎಂಬ ಇನ್ನೊಂದು ಹೆಸರಿದೆ. ಇದರ ವೈಜ್ಞಾನಿಕ ನಾಮ ಡಾಬೆಂಟೋನಿಯ ಮಡಗಾಸ್ಕರಿಯೆನ್ಸಿಸ್. ಇದೂ ನಿಶಾಚರಿಯೇ. ಬಿದಿರು ಮೆಳೆಗಳಲ್ಲಿ ವಾಸಿಸುತ್ತದೆ. ಕೀಟಗಳು, ಕಂಬಳಿ ಹುಳುಗಳು, ಹಕ್ಕಿಗಳ ಮೊಟ್ಟೆ, ಬಿದಿರಿನ ಎಳೆಯಕಾಂಡ ಮುಂತಾದವನ್ನು ತಿಂದು ಜೀವಿಸುತ್ತದೆ.

ಲೋರಿಸ್ ಟಾರ್ಡಿಗ್ರೇಡಸ್ಸಂಪಾದಿಸಿ

ಭಾರತದಲ್ಲಿ ಸಿಕ್ಕುವ ಕಾಡುಪಾಪಗಳು ಲೋರಿಸ್ ಟಾರ್ಡಿಗ್ರೇಡಸ್ ಎಂಬ ಪ್ರಭೇದಕ್ಕೆ ಸೇರಿವೆ. ದಕ್ಷಿಣ ಭಾರತ ಮತ್ತು ಸಿಂಹಳಗಳ ಕಾಡುಗಳಲ್ಲಿ ಸಾಮಾನ್ಯ ಕರ್ಣಾಟಕದಲ್ಲಿ ಮಲೆನಾಡ ಕಾಡುಗಳಲ್ಲಿ ಹೇರಳವಾಗಿ ಕಾಣಬರುತ್ತವೆ. ಇವಕ್ಕೆ 'ಅಡವಿ ಮನುಷ್ಯ' 'ಬೆದೆರ ಮೇಗಣ ಚದುರೆ' ಎಂಬ ಹೆಸರುಗಳೂ ಇವೆ. ಬಲು ಸಂಕೋಚದ ಸ್ವಭಾವದಿಂದಾಗಿ ಇವಕ್ಕೆ ಈ ಹೆಸರು ಬಂದಿರಬೇಕು. ಇವು ಕೂಡ ವೃಕ್ಷವಾಸಿಗಳು. ದೇಹದ ಉದ್ದ 175-275 ಮಿಮೀ. ಮೇಲೆಲ್ಲ ಹಳದಿ ಮಿಶ್ರಿತ ಬೂದು ಅಥವಾ ಕಗ್ಗಂದು ಬಣ್ಣದ ಉಣ್ಣೆಯಂಥ ಮೃದುವಾದ ಕೂದಲಿದೆ. ಬಾಲ ಇಲ್ಲ. ಹೆಬ್ಬೆರಳು ಮನುಷ್ಯರಲ್ಲಿರುವಂತಿದೆ. ಇದರಿಂದ ರೆಂಬೆಗಳನ್ನು ಹಿಡಿಯಲು ಅನುಕೂಲ. ಕಣ್ಣು ಬಲುದೊಡ್ಡವು; ಗುಂಡಗಿವೆ. ತಲೆಯ ಮೇಲೆ ಎರಡು ಪ್ರಧಾನವಾಗಿ ಕಾಣುವ ಕಿವಿಗಳಿವೆ.

ಇವೂ ನಿಶಾಚರಿಗಳೇ. ಹಗಲೆಲ್ಲ ಯಾವುದಾದರೊಂದು ಮರದ ಮೇಲೆ ನಿದ್ರಿಸುತ್ತ ಕಾಲ ಕಳೆಯುತ್ತವೆ. ನಿದ್ರಿಸುವಾಗ ತಲೆಯನ್ನು ಕಾಲುಗಳ ಮಧ್ಯೆ ತೂರಿಸಿ ಉಂಡೆಯಂತೆ ಮಲಗಿಬಿಡುತ್ತವೆ. ಇವುಗಳ ಓಡಾಟ ಬಲು ನಿಧಾನ. ಕೀಟಗಳು, ಹಲ್ಲಿಗಳು, ಮರಗಪ್ಪೆಗಳು, ಹಕ್ಕಿಗಳು ಇವುಗಳ ಆಹಾರ. ಸಾಕಿದ ಕಾಡುಪಾಪಗಳು ಹಾಲು, ಹಣ್ಣು ಸೇವಿಸುವುದೂ ಉಂಟು. ಹೊಸ ಆವರಣಗಳಲ್ಲಿ, ಪ್ರಖರವಾದ ಬಿಸಿಲಿನಲ್ಲಿ ಇವು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಓಡಾಡುತ್ತವಲ್ಲದೆ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ಮಸಕು ಬೆಳಕಿನಲ್ಲಿ ಮತ್ತು ತನ್ನ ಸ್ವಕ್ಷೇತ್ರದಲ್ಲಿ ಬಲು ಚುರುಕಾಗಿ ಓಡಾಡುವುದಂಟು. ಅಲ್ಲದೆ ಸಿಡುಕಿನ ಸ್ವಭಾವದವೆಂದೂ ಹೇಳುವುದಿದೆ.

ವರ್ಷಕ್ಕೆ ಒಂದು ಸೂಲು, ಒಂದು ಅಪೂರ್ವವಾಗಿ ಎರಡು ಮರಿಗಳನ್ನು ಹೆರುತ್ತವೆ. ಮರಿ ಒಂದು ವರ್ಷ ವಯಸ್ಸಿನದಾಗುವವರೆಗೂ ತಾಯಿಯ ಪಾಲನೆಯಲ್ಲೇ ಬೆಳೆಯುತ್ತದೆ.

ಉಪಯೋಗ ಸಂಪಾದಿಸಿ

ಕಾಡುಪಾಪವನ್ನು ಹಾವಾಡಿಗರು ಸಾಕಿ ಮಾರುವುದೂ ಉಂಟು. ಇದರ ಕಣ್ಣುಗಳನ್ನು ನೇತ್ರಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸುವ ರೂಢಿ ಭಾರತದ ಕೆಲವು ಪ್ರದೇಶಗಳಲ್ಲಿದೆ. 

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಾಡುಪಾಪ&oldid=817630" ಇಂದ ಪಡೆಯಲ್ಪಟ್ಟಿದೆ