ಕಾರ್ನಿವೊರ ಗಣದ ಕ್ಯಾನಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ವನ್ಯಪ್ರದೇಶವಾಸಿ ನಾಯಿಗಳಿಗಿರುವ ಸಾಮಾನ್ಯ ಹೆಸರು (ವೈಲ್ಡ್ ಡಾಗ್, ಹಂಟಿಂಗ್ ಡಾಗ್). ಪ್ರಮುಕವಾಗಿ ಏಷ್ಯದ ನಿವಾಸಿಯಾದ ಕ್ಯೂಆನ್ ಅಲ್ಪಿನಸ್, ಆಫ್ರಿಕದಲ್ಲಿ ಕಾಣಬರುವ ಲೈಕೇಯೋನ್ ಪಿಕ್ಟಸ್ ಮತ್ತು ಆಸ್ಟ್ರೇಲಿಯದಲ್ಲಿ ವಾಸಿಸುವ ಕೇನಿಸ್ ಡಿಂಗೋ ಎಂಬ ಮೂರು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ. [೧]

ಕ್ಯೂಆನ್ ಆಲ್ಪಿನಸ್ ಎಂಬುದು ರಷ್ಯ, ಸೈಬೀರಿಯ, ಕೊರಿಯ, ಚೀನದ ಕೆಲವು ಪ್ರದೇಶಗಳು, ಭಾರತದಲ್ಲಿ ಇದಕ್ಕೆ ದೋಲ್ ಎಂಬ ಹೆಸರಿದೆ. ಕೆಲವೆಡೆ ಇದನ್ನು ಸೀಳುನಾಯಿ ಎಂದೂ ಕರೆಯುವುದುಂಟು. ಸುಮಾರು 76-100 ಸೆಂಮೀ. ಉದ್ದ ಮತ್ತು 14-21 ಕಿಗ್ರಾಂ. ತೂಕ ಇರುವ ಈ ನಾಯಿ ನೋಡುವುದಕ್ಕೆ ಸಾಕುನಾಯಿಯಂತೆಯೇ ಕಾಣುತ್ತದೆ. ಆದರೆ ಕಿವಿಗಳು ತುದಿ ಗುಂಡಗಿರುವುದರಿಂದ. ಹೆಣ್ಣು ನಾಯಿಯಲ್ಲಿ 6-7 ಜೊತೆ ಮೊಲೆಗಳಿರುವುದರಿಂದ ಮತ್ತು ಕೆಳದವಡೆಯಲ್ಲಿನ ಕೊನೆಯ ದವಡೆ ಹಲ್ಲು ಇಲ್ಲದಿರುವುದರಿಂದ ಇದು ಸಾಕು ನಾಯಿಗಿಂತ ಭಿನ್ನವಾಗಿದೆ. ಇದರ ಮೈಬಣ್ಣ ಆಯಾ ಪ್ರದೇಶದ ಮೇಲೆ ವ್ಯತ್ಯಾಸವಾಗುತ್ತದೆ. ಉತ್ತರ ಏಷ್ಯದ ನಾಯಿಯ ಮೈಮೇಲೆ ದಟ್ಟವಾದ ಉಣ್ಣೆಯಂಥ ಕೂದಲಿದೆ. ಭಾರತದ ಬಗೆಯದಕ್ಕೆ ಕೂದಲು ಕಡಿಮೆ. ಎರಡು ಬಗೆಗಳಲ್ಲೂ ಬಾಲ ಹೆಚ್ಚುಕಡಿಮೆ ನರಿಯ ಬಾಲದಂತಿದೆ. ದೋಲ್‍ಗಳು ಸಾಮಾನ್ಯವಾಗಿ ಹಿಂಡುಗಳಲ್ಲಿರುತ್ತವೆ. ಒಂದೊಂದು ಹಿಂಡಿನಲ್ಲಿ 3 ರಿಂದ 30 ನಾಯಿಗಳಿರಬಹುದು. ಸಾಧಾರಣವಾಗಿ ಗುಹೆಗಳಲ್ಲೋ ಪೊದೆಗಳಲ್ಲೋ ವಾಸಿಸುವುದುಂಟು. ರಾತ್ರಿ, ಹಗಲು ಎರಡು ಕಾಲದಲ್ಲೂ ಆಹಾರ ಪ್ರಾಣಿಗಳನ್ನು ಬೇಟೆಯಾಡುವುವಾದರೂ ಸಾಮಾನ್ಯವಾಗಿ ರಾತ್ರಿ ವಿಶ್ರಮಿಸುವುದೇ ಹೆಚ್ಚು. ಇದು ಉರುಡಿ ಕೊಲ್ಲುತ್ತವೆ. ಇವು ಬೇಟೆಯಾಡುವುದರಲ್ಲಿ ಬಹಳ ನೈಪುಣ್ಯವನ್ನು ತೋರಿಸುತ್ತವೆ. ವಿವಿಧ ಬಗೆಯ ಎರೆಗಳನ್ನು ಇವು ಬೇಟೆಯಾಡುತ್ತವೆ. ಜಿಂಕೆ, ಕಾಡುಕುರಿ, ಕಾಡುಹಂದಿ, ಕೋಣ ಮುಂತಾದುವೇ ಪ್ರಮುಖ ಎರೆಗಳು. ಕೆಲವೊಮ್ಮೆ ಹಿಂಡು ದೊಡ್ಡದಿದ್ದಾಗ ಹುಲಿ, ಚಿರತೆ, ಕರಡಿ ಮುಂತಾದ ಹಿಂಸ್ರಪ್ರಾಣಿಗಳನ್ನು ಎದುರಿಸುವ ದೈರ್ಯ ಮಾಡುವುದೂ ಉಂಟು. ಬೇಟೆಯಾಡುವ ಕ್ರಮ ಬಲು ವಿಶಿಷ್ಟವಾದುದು. ತಮ್ಮ ಚುರುಕಾದ ಘ್ರಾಣ ಶಕ್ತಿಯಿಂದ ಎರೆಯ ಸುಳಿವು ಹಿಡಿದು ಅದನ್ನು ಬೆನ್ನಟ್ಟುತ್ತವೆ. ಹಿಂಡಿನ ಮುಂಚೂಣಿಯಲ್ಲಿ ದೊಡ್ಡ ಗಂಡು ನಾಯಿಯೊಂದಿರುತ್ತದೆ. ಎರೆಯ ಸುಳಿವು ಸಿಕ್ಕ ತತ್‍ಕ್ಷಣ ಸಿಳ್ಳಿನಂಥ ಕೂಗಿನಿಂದ ಹಿಂಡಿನ ಉಳಿದೆಲ್ಲ ಪ್ರಾಣಿಗÀಳನ್ನು ಕರೆಯುತ್ತದೆ. ನಿಧಾನವಾಗಿ ಎರೆಯನ್ನು ಓಡಿಸಿ ಕೊಂಡು ಹೋಗಿ ಯಾವುದಾದರು ಇಕ್ಕಟ್ಟಿನ ಸ್ಥಳದಲ್ಲಿ ಅದನ್ನು ಸಿಕ್ಕಿಸಿಕೊಂಡು ಎಲ್ಲ ದಿಕ್ಕಿನಿಂದಲೂ ಸುತ್ತುವರಿಯುತ್ತವೆ. ಎರೆಯನ್ನು ಬೆನ್ನಟ್ಟುವಾಗ ಸಾಮಾನ್ಯವಾಗಿ ಯಾವ ಬಗೆಯ ಸದ್ದನೂ ಮಾಡುವುದಿಲ್ಲ. ಆದರೆ ಆಗಿಂದಾಗ ಕುಂಯಿಗುಡುವದುಂಟು. ಮುಂದಾಳು ಮಾತ್ರ ಲಘುವಾಗಿ ಬಗುಳುವುದರ (ಯಾಪ್) ಮೂಲಕ ಬೇಟೆಯನ್ನು ನಿರ್ದೇಶಿಸುತ್ತದೆ. ಬಲು ಎಚ್ಚರಿಕೆಯಿಂದ ಎರೆಯನ್ನು ಸುತ್ತುವರಿದು, ಅದು ಸಾಕಷ್ಟು ಬಳಲಿದಾಗ, ಅದು ಯಾವುದೋ ಒಂದು ಕ್ಷಣ ಜೋಕೆ ತಪ್ಪಿದಾಗ ಮುಂದಾಳು ನಾಯಿ ಅದರ ಮೇಲೆ ಹಠಾತ್ತನೆ ಎರಗಿ ಅದರ ಕತ್ತಿಗೊ ಹೊಟ್ಟೆಗೊ ಬಾಯಿ ಹಾಕುತ್ತದೆ. ಇದೆ ಸಂಜ್ಞೆಯೆಂಬಂತೆ ಹಿಂಡಿನ ಉಳಿದೆಲ್ಲ ನಾಯಿಗಳು ಒಂದೇ ಬಾರಿಗೆ ಆಹಾರ ಪ್ರಾಣಿಯ ಮೇಲೆರಗಿ ಅದನ್ನು ಮುಗಿಸಿಬಿಡುತ್ತವೆ. ಇದು ಕ್ರೂರ ಎನಿಸಿದರೂ, ಚಿಕ್ಕ ಹಲ್ಲುಗಳುಳ್ಳ ಸಣ್ಣ ಪ್ರಾಣಿಗಳಾದ ಇವು ಬೇರೆ ಯಾವರೀತಿಯಿಂದಲೂ ಎರೆಯನ್ನು ಕೊಲ್ಲಲಾಗುವುದಿಲ್ಲ.

ದೋಲ್‍ಗಳ ಕೂಗು ಬೇರೆ ನಾಯಿಗಳ ಬಗುಳುವಿಕೆಯಂತಿಲ್ಲ. ಇವು ಊಳಿಡುವುದು, ಲಘು ಬಗುಳು (ಯಾಪ್), ಸಿಳ್ಳಿನಂತೆ ಕೂಗುವುದು ಮುಂತಾದುವನ್ನು ಮಾತ್ರ ಮಾಡುತ್ತವೆ. ಇವು ಮರಿ ಹಾಕುವ ಕಾಲ ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳುಗಳು. ಗರ್ಭಧಾರಣೆಯ ಅವಧಿ ಸುಮಾರು 9 ವಾರಗಳು. ಒಂದು ಬಾರಿಗೆ 2-6 ಮರಿಗಳು ಹುಟ್ಟುತ್ತವೆ. ಹುಟ್ಟಿದಾಗ ಮರಿಗಳ ಕಣ್ಣು ತೆರೆದೇ ಇರುವುದಿಲ್ಲ. ಅವುಗಳ ಚರ್ಮದ ಮೇಲೆ ಕೂದಲೂ ಇರುವುದಿಲ್ಲ. ಮರಿಗಳನ್ನು ಹೆರುವ ಸಮಯದಲ್ಲಿ ನಾಯಿಗಳು ಯಾವುದಾದರೂ ಗವಿಯನ್ನು ಸೇರಿ ಸಾಮೂಹಿಕವಾಗಿ ಮರಿ ಹಾಕುತ್ತವೆ. ಸಾಧಾರಣವಾಗಿ ಮರಿಗಳಿಗೆ ಒಂದು ವರ್ಷವಾಗುವವರೆಗೂ ತಂದೆತಾಯಿಗಳು ಅವುಗಳ ಪಾಲನೆ ಮಾಡುತ್ತವೆ. ಈ ಕಾಲದಲ್ಲಿ ಹಿಂಡು ಬೇಟೆಗೆಂದು ಹೋದಾಗ ಹೆಣ್ಣು ನಾಯೊಂದು ಮರಿಗಳ ರಕ್ಷಣೆ ಮಾಡುತ್ತದೆ. ಮರಿಗಳು ಒಂದು ವರ್ಷದಲ್ಲಿ ಪೂರ್ಣವಾಗಿ ಬೆಳೆದು ಪ್ರಬುದ್ಧಾವಸ್ಥೆ ತಲುಪುತ್ತವೆ. ಈ ನಾಯಿಗಳು ಹೊಲಗದ್ದೆಗಳಿಗೆ ನುಗ್ಗಿ ಪೈರನ್ನು ಹಾಳುಮಾಡುವ ಕಾಡುಹಂದಿಗಳನ್ನು ಕೊಂದು ಮಾನವನಿಗೆ ಉಪಕಾರಿಗಳೆನಿಸಿದ್ದರೂ ಕೆಲವೊಮ್ಮೆ ಸಾಕಿದ ಪ್ರಾಣಿಗಳನ್ನು ತಿಂದು ಹಾನಿ ಮಾಡುವುದುಂಟು. ಕಾಡುನಾಯಿಗಳನ್ನು ಪಳಗಿಸುವುದಕ್ಕಾಗುವುದಿಲ್ಲ.

ಆಫ್ರಿಕದಲ್ಲಿನ ಕಾಡುನಾಯಿಯಾದ ಲೈಕೇಯೋನ್ ಪಿಕ್ಟಸ್ ಪ್ರಭೇದದ ಪ್ರಾಣಿಗೆ ಕೇಪ್ ಹಂಟಿಂಗ್ ಡಾಗ್ ಎಂಬ ಸಾಮಾನ್ಯ ಹೆಸರಿದೆ. ಸಹರಾ ಮರುಭೂಮಿಯ ದಕ್ಷಿಣಕ್ಕಿರುವ ಪ್ರದೇಶಗÀಳಲ್ಲಿ ಇದು ಹೇರಳವಾಗಿವೆ. ಸಣ್ಣ ತೋಳದ ಗಾತ್ರದ ಈ ಪ್ರಾಣಿ ತನ್ನ ಹಲವಾರು ಲಕ್ಷಣಗಳಲ್ಲಿ ತೋಳವನ್ನು ಹೋಲುತ್ತದೆ. ಬಲಯುತವಾದ ದೇಹ, ನೀಳವಾದ ಕಾಲುಗಳು, ದಪ್ಪ ತಲೆ, ಬಲವಾದ ದವಡೆಗಳು, ಪೊದೆಯಂಥ ಬಾಲ-ಇದರ ಪ್ರಮುಖ ಲಕ್ಷಣಗಳು. ಇದರ ದೇಹದ ಬಣ್ಣ ಕಪ್ಪುಮಿಶ್ರಿತ ಕಂದು. ಅಲ್ಲಲ್ಲೆ ಹಳದಿ, ಕಪ್ಪು ಅಥವಾ ಬಿಳಿಯ ಬಣ್ಣದ ಮಚ್ಚೆಗಳಿವೆ. ಕಿವಿಗಳು ದೊಡ್ಡವು, ಅಂಡಾಕಾರವಾಗಿವೆ. ಹೆಚ್ಚುಕಡಿಮೆ ಕತ್ತೆಕಿರುಬದ ಕಿವಿಗಳಂತಿವೆ. ಇವುಗಳ ಜೀವನಕ್ರಮ, ಬೇಟೆಯಾಡುವ ರೀತಿ, ಸಂತಾನೋತ್ಪತ್ತಿಯ ಕ್ರಮ ಎಲ್ಲ ಹೆಚ್ಚುಕಡಿಮೆ ಭಾರತದ ಕಾಡುನಾಯಿಗಳಂತೆಯೇ. ಸಿಂಹಗಳು ಇವುಗಳ ಸ್ವಾಭಾವಿಕ ವೈರಿಗಳು.

ಆಸ್ಟ್ರೇಲಿಯದ ಕಾಡುನಾಯಿಯ ವೈಜ್ಞಾನಿಕ ಹೆಸರು ಕೇನಿಸ್ ಡಿಂಗೊ. ಸಾಮಾನ್ಯ ಹೆಸರು ಡಿಂಗೊ. ಸ್ವಲ್ಪಮಟ್ಟಿಗೆ ತೋಳವನ್ನು, ಸ್ವಲ್ಪಮಟ್ಟಿಗೆ ಸಾಕುನಾಯಿಯನ್ನು ಹೋಲುವ ಈ ಪ್ರಾಣಿ ಆಸ್ಟ್ರೇಲಿಯದ ಏಕೈಕ ಹಿಂಸ್ರಪ್ರಾಣಿ (ಕಾರ್ನಿವೋರ್). ಸಣ್ಣ ನಾಯಿಯ ಗಾತ್ರ, ಮೃದುವಾದ ಕೂದಲುಗಳು, ಪೊದೆಯಂಥ ಬಾಲ, ಚೂಪು ತುದಿಯ ನೇರವಾದ ಕಿವಿಗಳು, ಕಂದುಬಣ್ಣ, ಹೊಟ್ಟೆ, ಪಾದ ಮತ್ತು ಬಾಲದ ತುದಿಯಲ್ಲಿ ಬಿಳಿಯ ಚುಕ್ಕೆಗಳು ಇದರ ಪ್ರಮುಖ ಲಕ್ಷಣಗಳು. ಆಸ್ಟ್ರೇಲಿಯದ ಬಯಲು ಪ್ರದೇಶಗಳಲ್ಲಿ ಒಂಟಿಯಾಗಿಯೊ ಸಣ್ಣಸಣ್ಣ ಗುಂಪುಗಳಲ್ಲೊ ಬೇಟೆಯಾಡುತ್ತ ಓಡಾಡುತ್ತದೆ. ಕಾಂಗರೂಗಳು, ಮೊಲಗಳು ಇದರ ಪ್ರಧಾನ ಆಹಾರ. ಆದರೆ ಕುರಿಗಳನ್ನೂ ಬೇಟೆಯಾಡಿ ತಿನ್ನುವುದರಿಂದ ಅಲ್ಲಿನ ಜನರ ದ್ವೇಷವನ್ನು ಗಳಿಸಿದೆ. ಡಿಂಗೋಗಳನ್ನು ಪಳಗಿಸಿ ಸಾಕಬಹುದು. ಕೆಲವು ವೇಳೆ ಸಾಕುನಾಯಿಗಳೊಡನೆ ಸಂಪರ್ಕವೇರ್ಪಡಿಸಿ ಅಡ್ಡತಳಿಗಳನ್ನು ಪಡೆಯಬಹುದು. ಶುದ್ದತಳಿಯ ಡಿಂಗೋದ ಕೂಗು ಊಳಿಡುವುದು ಮಾತ್ರ ಆಗಿದ್ದರೂ ಮಿಶ್ರತಳಿಗಳು ಡಿಂಗೋ ನಾಯಿಗಳಂತೆ ಬಗುಳಬಲ್ಲುದು. ಡಿಂಗೋ ವರ್ಷಕ್ಕೊಮ್ಮೆ 4-8 ಮರಿಗಳನ್ನು ಈಯುತ್ತದೆ. ಡಿಂಗೋವನ್ನು ಬಹುಪುರಾತನ ಕಾಲದಲ್ಲಿ ಮಲಯದ ಕಡೆಯಿಂದ ವಲಸೆಹೋದ ಆದಿವಾಸಿ ಜನ ಆಸ್ಟ್ರೇಲಿಯಕ್ಕೆ ಕೊಂಡೊಯ್ದರೆಂದು ಹೇಳಲಾಗಿದೆ.

ಉಲ್ಲೇಖನೆಗಳು:ಸಂಪಾದಿಸಿ

  1. https://en.wikipedia.org/wiki/African_wild_dog