ಕಸಾಯಿಖಾನೆ
ಕಸಾಯಿಖಾನೆ ಆಹಾರಕ್ಕಾಗಿ ಸಾಕಿದ ಪ್ರಾಣಿಗಳನ್ನು ಕೊಂದು, ಅವುಗಳ ಮಾಂಸವನ್ನು ಪರಿಷ್ಕರಿಸಲು ಇರುವ ಸೌಲಭ್ಯವಾಗಿದೆ. ಸಾಮಾನ್ಯವಾಗಿ ದನ, ಆಡು (ಮೇಕೆ), ಕುರಿ, ಕೋಳಿ ಮತ್ತು ಹಂದಿಗಳ ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ಇವುಗಳನ್ನು ಕೊಂದು ಇವುಗಳ ಮಾಂಸವನ್ನು ಪರಿಷ್ಕರಿಸಲು ಕಸಾಯಿಖಾನೆಯಲ್ಲಿ ಸೌಲಭ್ಯವಿರುತ್ತದೆ.
ಹಿಂದಿನಕಾಲದಲ್ಲಿ ಕಸಾಯಿ ಪ್ರಕ್ರಿಯೆ ಸಾರ್ವಜನಿಕವಾಗಿ ಎಲ್ಲರಿಗೂ ಕಾಣುವಂತೆ ನಡೆಯುತ್ತಿದ್ದು, ದುರ್ನಾತ ಹೆಚ್ಚಾಗಿ, ಜನರು ವಾಸಿಸಲು ಇರಬೇಕಾದ ಉತ್ತಮ ಪರಿಸರವನ್ನು ಹಾಳು ಮಾಡುತ್ತಿತ್ತು. ನಂತರದ ದಿನಗಳಲ್ಲಿ ಪಟ್ಟಣ ಮತ್ತು ನಗರಗಳು ಹೆಚ್ಚಾಗಿ, ಅಲ್ಲಿ ಮಾಂಸದ ಬೇಡಿಕೆ ಹೆಚ್ಚಾದ್ದರಿಂದ ಹಾಗೂ ಸಾರ್ವಜನಿಕವಾಗಿ ಕಸಾಯಿ ಪ್ರಕ್ರಿಯೆ ಮಾಡಲು ಸಾಧ್ಯವಾಗದೇ ಇದ್ದರಿಂದ ಕಸಾಯಿಖಾನೆಯ ಸಂಪ್ರದಾಯ ಬೆಳೆದುಬಂತು. ಬೇರೆ ಬೇರೆ ದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮತ್ತು ಮಾಂಸವನ್ನು ಪರಿಷ್ಕರಿಸುವ ಕ್ರಮ ಆಯಾ ಪ್ರದೇಶದ ಅವಶ್ಯಕತೆಗೆ ಅನುಗುಣವಾಗಿ ಭಿನ್ನವಾಗಿ ಇರುತ್ತದಾದರೂ, ಆಧುನಿಕತೆಗೆ ತಕ್ಕಂತೆ ಕಸಾಯಿಖಾನೆಯ ಸಂಪ್ರದಾಯಗಳು ಬದಲಾಗುತ್ತಿದೆ.
ಪ್ರಸ್ತುತ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಸಾಯಿಖಾನೆಗಳ ವಿನ್ಯಾಸ ಹಾಗೂ ಕಾರ್ಯಶೈಲಿಯಲ್ಲಿ ಸಾಕಷ್ಟು ಬದಲಾಗಬೇಕಿದೆ. ಒಂದೆಡೆ ಪ್ರಾಣಿ ದಯಾ ಸಂಘಟನೆಗಳು ಹಾಗೂ ಮಾಂಸಾಹಾರ ತ್ಯಜಿಸಿದ/ನಿಷೇಧಿಸಿದ ಧರ್ಮಗಳು ಮಾಂಸಹಾರವನ್ನು ಸಂಪೂರ್ಣ ನಿಷೇಧಿಸುವ ನಿಲುವನ್ನು ಪ್ರಕಟಿಸಿ ಹೋರಾಡುತ್ತಿದ್ದರೆ, ಇನ್ನೊಂದೆಡೆ ಪರಿಸರ ಪ್ರಿಯರು ಮತ್ತು ಪರಿಸರ ಸಂಘಟನೆಗಳು, ಕಸಾಯಿಖಾನೆಯಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ವಿಷಾದ ವ್ಯಕ್ತ ಪಡಿಸುತ್ತಿದ್ದರೆ ಮತ್ತೊಂದೆಡೆ ಮಾಲಿನ್ಯ ನಿಯಂತ್ರಣ ಮಂಡಳಿಗಳು, ಪರಿಸರದ ಕಾನೂನುಗಳನ್ನು ಈ ಕಸಾಯಿಖಾನೆಗಳು ಪಾಲಿಸದಿರುವ ಕುರಿತು ಸ್ಥಳೀಯ ನಗರಪಾಲಿಕೆಗಳ ಮೇಲೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಕಸಾಯಿಖಾನೆಯ ಕುರಿತು ಇಷ್ಟೆಲ್ಲಾ ಚರ್ಚೆಗಳು, ಹೋರಾಟಗಳು ನಡೆದಿರುವಾಗ, ನಮ್ಮಲ್ಲಿ ಕಸಾಯಿಖಾನೆಗಳಲ್ಲಿ ವೈಜ್ಞಾನಿಕ ಬದಲಾವಣೆ ಆಗದಿರುವುದು ದುರಾದೃಷ್ಟಕರ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರತಿ ಸ್ಥಳೀಯ ಪಾಲಿಕೆಗಳಿಗೆ ಪರಿಸರದ ಅಧಿಕಾರಿಗಳನ್ನು ನಿಯಮಿಸಿದ್ದು ಇವರಲ್ಲಿ ಕೆಲವರಷ್ಟೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದು ವಿಷಾದಕರ. ಈ ಎಲ್ಲಾ ಹಿನ್ನಡೆಗೆ ಪರಿಸರದ ಅಧಿಕಾರಿಗಳನ್ನು ದೂಷಿಸುವುದೂ ಸಹ ಸಲ್ಲ. ಅವರಿಗೂ ಮಾಹಿತಿಯ ಕೊರತೆಯಿದ್ದು ಹಿರಿಯ ಅಧಿಕಾರಿಗಳ ಬೆಂಬಲ ಹಾಗೂ ಪ್ರೋತ್ಸಾಹ ಇಲ್ಲದಿರುವುದು ಸಹ ಒಂದು ಕಾರಣವಾಗಿದೆ.
ಕಸಾಯಿಖಾನೆಯ ಪ್ರಕ್ರಿಯೆ
ಬದಲಾಯಿಸಿ- ಪ್ರಾಣಿಗಳನ್ನು ಸಾಕುವೆಡೆಯಿಂದ ಕಸಾಯಿಖಾನೆಗೆ ವಾಹನಗಳಲ್ಲಿ ಸಾಗಾಟ ಮಾಡುವುದು.
- ಕೊಲ್ಲುವ ಮುನ್ನ ಪ್ರಾಣಿಗಳ ಸ್ಥಿತಿಗತಿಯ ಪರೀಕ್ಷಣೆ.
- ಕೊಲ್ಲಲ್ಪಡುವ ಪ್ರಾಣಿಗಳ ಪ್ರಜ್ಞೆ ತಪ್ಪಿಸುವುದು.
- ಪ್ರಾಣಿಗಳಿಗೆ ಹೆಚ್ಚು ನೋವಾಗದಂತೆ ಅವುಗಳ ಜೀವ ತೆಗೆಯುವುದು.
- ಮಾಂಸವನ್ನು ವಿಭಜಿಸಿ, ಶುಚಿಗೊಳಿಸಿ, ಮಾರಾಟಕ್ಕೆ ಅನುವುಗೊಳಿಸುವುದು.
- ತ್ಯಾಜ್ಯಗೊಂಡ ಮಾಂಸ, ಕೂದಲು, ಸಗಣಿ ಮೊದಲಾದವುಗಳನ್ನು ತ್ಯಾಜ್ಯ ನಿರ್ವಹಣೆಯ ಸಾಧನಗಳ ಮೂಲಕ ಶುದ್ಧೀಕರಿಸುವುದು.