ಕವಾಯತು : ಶಾಂತಿ ಮತ್ತು ಯುದ್ಧಕಾಲಗಳಲ್ಲಿ ಯೋಧರು ಸಾಮೂಹಿಕವಾಗಿಯೂ ವೈಯಕ್ತಿಕವಾಗಿಯೂ ನಿರ್ವಹಿಸಬೇಕಾದ ಹೊಣೆಗಾರಿಕೆಗಳ ವಿಧಿಬದ್ಧ ಅಭ್ಯಾಸ (ಮಿಲಿಟೆರಿ ಡ್ರಿಲ್). ಆಜ್ಞಾಪದಗಳಿಗೆ ಅನುಸಾರವಾಗಿ ಅಂಗ ಅಥವಾ ಆಯುಧಚಲನೆ ಮಾಡುವುದು ತನ್ಮೂಲಕ ಗುರಿ ಸಾಧಿಸುವುದು ಇಲ್ಲಿನ ಉದ್ದೇಶ. ಪರಿಸ್ಥಿತಿ ಯಾವುದೇ ಇರಲಿ, ಕವಾಯತಿಯಲ್ಲಿ ಒಂದು ಆಜ್ಞೆಗೆ ಒಂದು ಕ್ರಿಯೆ ಅಪ್ರಯತ್ನಿತವಾಗಿ ನಡೆಯಬೇಕು. ಕವಾಯತಿಯ ಉಪಯೋಗಗಳಿಷ್ಟು _ ಯೋಧರಿಗೆ ತಮ್ಮ ಹಾಗೂ ತಮ್ಮ ದಳದ ವಿಚಾರದಲ್ಲಿ ಅಭಿಮಾನ ಮೂಡುತ್ತದೆ; ತಮ್ಮ ಆಯುಧಗಳ ಗಾಢ ಪರಿಚಯ ಬೆಳೆಯುತ್ತದೆ; ಸ್ವನಿಯಂತ್ರಣ ಗುಣ ಪೋಷಿತವಾಗುತ್ತದೆ; ಧೃತಿವರ್ಧನೆ ಆಗುತ್ತದೆ; ವರಿಷ್ಠ ಅಧಿಕಾರಿಗಳನ್ನು ಯುಕ್ತವಾಗಿ ಗೌರವಿಸುವ ಶಿಸ್ತು ಬೆಳೆಯುತ್ತದೆ; ಧುರೀಣತ್ವದ ಪ್ರದರ್ಶನಕ್ಕೆ ಯೋಗ್ಯಾವಕಾಶ ಒದಗುತ್ತದೆ.

ಕವಾಯತಿಯ ನಿರ್ವಹಣೆಯ ಸ್ಥೂಲ ವಿಧಿಗಳಿವು. ಒಬ್ಬ ನಾಯಕ ಒಂದು ದಳವನ್ನು ನಿಯಂತ್ರಿಸುತ್ತಾನೆ. ಅವನ ಆಜ್ಞಾನುಸಾರ ಆ ದಳದ ಯೋಧರು ವರ್ತಿಸುತ್ತಾರೆ. ಇಲ್ಲಿ ಅವರ ಪೂರ್ಣ ಮನಸ್ಸಿನ ಒಪ್ಪಿಗೆ ಇರಲೇಬೇಕು_ಅನಾವಶ್ಯಕ ಪ್ರಶ್ನೆಗಳಿಗಾಗಲೀ ಧರ್ಮಾರ್ಥ ಸೂಚನೆಗಳಿಗಾಗಲೀ ಎಡೆ ಇರುವುದಿಲ್ಲ. ಈ ವಿಧದಲ್ಲಿ ಶಿಸ್ತಿನಿಂದ ಸಾಮೂಹಿಕವಾಗಿ ಯೋಧರು ಕ್ರಿಯೆ ಎಸಗುವಾಗ ಅವರಲ್ಲಿನ ಸುಪ್ತ ಧುರೀಣತ್ವಗುಣ ಪ್ರಕಾಶಕ್ಕೆ ಬರಲು ಯೋಗ್ಯ ಸನ್ನಿವೇಶ ತಲೆದೋರುತ್ತದೆ. ಸಮರ್ಥನಾದವ ಧುರೀಣನಾಗುತ್ತಾನೆ; ಮುಂದೆ ಈ ಪರಂಪರೆ ಹೀಗೆಯೇ ಬೆಳೆಯುತ್ತದೆ. ಆದ್ದರಿಂದಲೇ ಬಂದಿದೆ ಈ ಜನಪ್ರಿಯ ಹೇಳಿಕೆ_ಆಜ್ಞೆಯನ್ನು ಪಾಲಿಸಲು ಕಲಿಯದ ವಿನಾ ಆಜ್ಞೆಯನ್ನು ನೀಡಲುಬಾರದು.

ಬೆರಳೆಣಿಕೆಯ ಪೊಲೀಸರ ಲಾಠಿಪ್ರಹಾರದ ಎದುರು ಭಾರೀ ಜನಸ್ತೋಮ ದಿಕ್ಕಾಪಾಲಾಗಿ ಚದರಿಹೋಗುವ ದೃಶ್ಯವನ್ನು ಸ್ಮರಿಸಿಕೊಂಡರೆ ಕವಾಯತಿಯ ತಿರುಳು ತಿಳಿಯುತ್ತದೆ. ವ್ಯವಸ್ಥಿತ ಹಾಗೂ ಉದ್ದೇಶಿತ ಬಲವನ್ನು ಪೊಲೀಸರು ಪ್ರಯುಕ್ತಿಸುತ್ತಾರೆ_ಇದರಿಂದ ಶಕ್ತಿಯ ಅಪವ್ಯಯವಿಲ್ಲ; ಅದು ಪೂರ್ಣವಾಗಿ ಉದ್ದೇಶ ಸಾಧನೆಯ ಎಡೆಗೆ ಬಳಕೆ ಆಗುತ್ತದೆ. ಪೊಲೀಸರ ಎದುರು ನಿಂತಿರುವ ಜನಸ್ತೋಮದಲ್ಲಿ ಇಂಥ ವ್ಯವಸ್ಥಿತ ವಿಧಾನವಿಲ್ಲದಿರುವುದರಿಂದ, ಒಟ್ಟಾಗಿ ಆ ಸ್ತೋಮದ ಬಲ ಪೊಲೀಸರ ಒಟ್ಟು ಬಲಕ್ಕಿಂತ ಅದೆಷ್ಟೋ ಪಟ್ಟು ಅಧಿಕವಾಗಿದ್ದರೂ ಶಕ್ತಿ ಹ್ರಾಸವಾಗಿ ಜನ ಕಾಲಿಗೆ ಬುದ್ಧಿ ಹೇಳಬೇಕಾಗುತ್ತದೆ. ರಕ್ಷಣಬಲಗಳ ಕ್ಷಿಪ್ರ ಚಲನೆಗಳಲ್ಲಿ, ಯುದ್ಧರಂಗಗಳಲ್ಲಿನ ತೀವ್ರ ಹೋರಾಟಗಳಲ್ಲಿ ಯೋಚನೆಗೆ ಸಮಯ ಇರುವುದಿಲ್ಲ. ಆಗ ಎಲ್ಲ ದಳಗಳೂ ವಿಧಿವತ್ತಾಗಿ ಶಿಸ್ತಿನಿಂದ ವರ್ತಿಸಿದರೆ ಮಾತ್ರ ಗಂಡಾಂತರ ತಪ್ಪುತ್ತದೆ. ಇಂಥ ವರ್ತನೆ ನಿರಂತರ ಕವಾಯತಿಯ ಫಲವೇ ಹೊರತು ಆ ಸನ್ನಿವೇಶದಲ್ಲಿ ಸಹಜವಾಗಿ ಮಾಡುವ ಪ್ರತಿಕ್ರಿಯೆಯಲ್ಲ.

ಜನಾಂಗಗಳ ಚರಿತ್ರೆ ಎಂದರೆ ಯುದ್ಧಗಳ ಚರಿತ್ರೆ ಎಂಬ ರೂಢಿಯ ಮಾತು ಇದೆ. ಇದಕ್ಕೆ ಅನುಮತಿಯಾಗಿ ಯುದ್ಧಗಳ ಚರಿತ್ರೆ ಎಂದರೆ ಕವಾಯತಿಯ ಚರಿತ್ರೆ ಎಂದು ಹೇಳಬಹುದು. ವಾಲ್ಮೀಕಿ ವ್ಯಾಸರ ಕಾಲಗಳಲ್ಲೇ ಸೈನ್ಯಗಳ ವ್ಯವಸ್ಥಿತ ವಿನ್ಯಾಸಗಳ ಉಲ್ಲೇಖವಿದೆ. ರಾಜಕುಮಾರರಿಗೆ ಬಿಲ್ಲುವಿದ್ಯೆ ಕಲಿಸುತ್ತಿದ್ದ ಕ್ರಮವೂ ಒಂದು ಕವಾಯತಿಯೇ. ಆದ್ದರಿಂದ ಭಾರತ ದೇಶದಲ್ಲಿ ಕವಾಯತಿಯ ಉಗಮ ಇತಿಹಾಸದ ಅಸ್ಪಷ್ಟ ಗರ್ಭದಲ್ಲಿ ಹುದುಗಿದೆ. ಇಂದು ಕವಾಯತು ಎಂದಾಗ ನಮಗೆ ಮೂಡುವ ಅರ್ಥದ ಕವಾಯತನ್ನು ಆರಂಭಿಸಿದವರು ಪ್ರಾಚೀನ ಗ್ರೀಕರು. ಮುಂದೆ ಹೊಸ ಹೊಸ ಅಸ್ತ್ರಗಳು ವಾಹನಗಳು ಆವಿಷ್ಕರಣಗೊಂಡಂತೆ ಕವಾಯತಿಯ ವಿಧಾನವೂ ಬದಲಾಗಿ ಇಂದಿನ ಬಲು ಸಂಕೀರ್ಣ ವಿಧಾನಗಳು ತಲೆದೋರಿವೆ. ಹಾಗಿದ್ದರೂ ಕವಾಯತಿಯ ಮೂಲಸೂತ್ರ ಬದಲಾಗಿಲ್ಲ. (ಎ.ಎನ್.ಎಸ್.ಎಂ.)

"https://kn.wikipedia.org/w/index.php?title=ಕವಾಯತು&oldid=615432" ಇಂದ ಪಡೆಯಲ್ಪಟ್ಟಿದೆ