ಕಲ್ನಾರು
ಕಲ್ನಾರು : ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ ರೂಪ ತಳೆಯಬಲ್ಲ ಅತ್ಯುಪಯುಕ್ತ ಖನಿಜಗಳ ಸಾಮಾನ್ಯನಾಮ (ಆಸ್ ಬೆಸ್ಟಸ್). ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣದಿಂದ ಕಲ್ನಾರಿಗೆ ಪ್ರಾಮುಖ್ಯ ಬಂದಿದೆ. ಈ ಖನಿಜವನ್ನು ನಾರಿನಂತೆ ಎಳೆ ಎಳೆಯಾಗಿ ಬಿಡಿಸಬಹುದು. ಎಳೆಗಳು ರೇಷ್ಮೆಯಂತೆ ನಯವಾಗಿವೆ. ಇದರ ಬಣ್ಣ ಬಿಳುಪು; ಕಾಠಿಣ್ಯ ೩.೫_೪.೧; ಸಾಪೇಕ್ಷ ಸಾಂದ್ರತೆ ೨.೫_೨.&. ಇದರಲ್ಲಿ ಆಂಫಿಬೋಲ್ ಕಲ್ನಾರು ಮತ್ತು ಕ್ರೈಸೊಲೈಟ್ ಕಲ್ನಾರು ಎಂಬೆರಡು ಜಾತಿಗಳಿವೆ. ಮೊದಲನೆಯದು ಶುದ್ಧವಾದುದು. ಎರಡನೆಯದು ವ್ಯಾಪಾರದ ಬಹುಭಾಗವನ್ನು ಪುರೈಸುತ್ತದೆ. ಎರಡೂ ನಮ್ಮ ದೇಶದಲ್ಲಿವೆ. ಮೊದಲನೆಯದು ಮೈಸೂರು ಜಿಲ್ಲೆಯಲ್ಲಿರುವ ಮಾವಿನಹಳ್ಳಿ ಮತ್ತು ಗೋಪಾಲಪುರದ ಬಳಿ. ಹಾಸನ ಜಿಲ್ಲೆಯಲ್ಲಿ ಹೊಳೇನರಸೀಪುರದ ಹತ್ತಿರ ಇಡೆಗೊಂಡೆನಹಳ್ಳಿ ಮತ್ತು ಕಬ್ಬೂರಿನ ಬಳಿ ಸಿಕ್ಕುತ್ತದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲೂ ಬಿಹಾರ್, ರಾಜಸ್ತಾನಗಳಲ್ಲಿಯೂ ಸಿಕ್ಕುತ್ತದೆ. ಈ ಕಲ್ನಾರಿನ ನೂಲಿನ ಎಳೆಯ ಶಕ್ತಿ ಅಲ್ಪವಾದ್ದರಿಂದ ಇದು ಬಟ್ಟೆ ತಯಾರಿಕೆಗೆ ಅರ್ಹವಲ್ಲ. ಅಗ್ನಿನಿರೋಧಕ ಕಾಗದ, ಹಲಗೆ ಮೊದಲಾದವನ್ನು ಇದರಿಂದ ತಯಾರಿಸಬಹುದು. ಅಕ್ವಿನೊಲೈಟ್ ಪತ್ರಶಿಲೆ ಇದರ ಮುಖ್ಯ ಆಕರ; ಇದು ಕ್ಯಾಲ್ಸಿಯಂ-ಮೆಗ್ನೀಸಿಯಂ-ಐರನ್-ಸಿಲಿಕೇಟ್. ಅಮೊಸೈಟ್ ಮೆಗ್ನೀಸಿಯಂ_ಐರನ್ ಸಿಲಿಕೇಟ್. ಇದು ನೀಳವಾದ ನೂಲುಗಳಿರುವ ಶುದ್ಧವಾದ ಕಲ್ನಾರು. ಅಗ್ನಿಸ್ಪರ್ಶದಿಂದಲೇ ಇದರ ಬಟ್ಟೆ ಶುದ್ಧವಾಗುತ್ತದೆ. ಕ್ರಾಸಿಡೋಲೈಟ್ ನೀಲವರ್ಣದ ಸೋಡಿಯಂ_ಐರನ್_ಸಿಲಿಕೇಡ್; ಇದು ಮಾರ್ಪಟ್ಟು ಹೊಂಬಣ್ಣದ ಛಾಯೆಯ ಕೆಂಪು ಬಣ್ಣವನ್ನು ಹೊಂದುವುದುಂಟು; ಆಗ ಇದರಲ್ಲಿ ಸಿಲಿಕ ನಿಕ್ಷೇಪವಾದರೆ ಬಲು ಅಂದವಾಗಿ ಕಾಣುತ್ತದೆ. ಇದೊಂದು ಅಲಂಕಾರಶಿಲೆ (ಆರ್ನಮೆಂಟಲ್ ಸ್ಟೋನ್). ವೈಡೂರ್ಯ, ಆಮೊಸೈಟ್, ಕ್ರಾಸಿಡೊಲೈಟುಗಳು ಆಮ್ಲಗಳಿಗೆ ಜಗ್ಗುವುದಿಲ್ಲ. ಕ್ರೈಸೊಲೈಟ್ ಕಲ್ನಾರು ಆಮ್ಲಗಳಿಂದ ರಾಸಾಯನಿಕ ಪರಿವರ್ತನೆ ಹೊಂದುತ್ತದೆ. ಎರಡನೆಯ ಜಾತಿಯ ಈ ಕಲ್ನಾರು ಸರ್ಪೆಂಟೀನ್, ಹೈಡ್ರಸ್. ಮೆಗ್ನೀಸಿಯಂ_ಸಿಲಿಕೇಟ್ [ಒg೬Si೪ಔ೧೦ (ಔಊ)s] ಶಿಲಾರಾಶಿಗಳಲ್ಲಿರುವ ಅಸಂಖ್ಯಾತ ಸಿರಗಳಲ್ಲಿ ಸಿಕ್ಕುತ್ತದೆ. ಸಿಲಿಕಾ (Siಔ೨) ಅಲ್ಪವಾಗಿರುವ ಅಗ್ನಿಶಿಲೆಗಳಲ್ಲಿರುವ ಆಲಿವೀನ್ (ಒg೨Siಔ೪) ಖನಿಜ ಬಹುಬೇಗ ನೀರನ್ನು ಹೀರಿ ಸರ್ಪೆಂಟೀನ್ ಆಗುತ್ತದೆ. ಈ ಖನಿಜದ ತೆಳುವಾದ ಸಿರಗಳಲ್ಲಿರುವ ರೇಷ್ಮೆಯ ಎಳೆಗಳಂತಿರುವ ವಸ್ತುವಿಗೆ ಕಲ್ನಾರಿನ ಗುಣಗಳಿವೆ. ಇದರಿಂದ ಕಲ್ನಾರಿನ ಹೆಂಚು, ಹಾಳೆ ಮೊದಲಾದ ಅಗ್ನಿನಿರೋಧಕ ವಸ್ತು ನಿರ್ಮಾಣವಾಗುತ್ತದೆ. ಶುದ್ಧವಾದ ಕಲ್ನಾರನ್ನು ಔಷಧಕ್ಕೂ ಬಳಸುತ್ತಾರೆ. ಇದರೊಡನೆ ಮ್ಯಾಗ್ನೆಸೈಟ್ ಮತ್ತು ಕ್ರೋಮೈಟ್ ಎಂಬ ಉಪಯುಕ್ತ ಖನಿಜಗಳು ಸಿಕ್ಕುವುದುಂಟು. ಉದಾಹರಣೆಗೆ ನಂಜನಗೂಡಿನ ಬಳಿ ಕಡಕೊಳದ ಗಣಿಗಳು, ಸೇಲಂ ಜಾಕ್ ಬೆಟ್ಟಗಳು ಇವೆರಡೂ ಆದಿಯುಗದವು (ಆರ್ಕೇಯನ್).
ಆರೋಗ್ಯ ಅಪಾಯ
ಬದಲಾಯಿಸಿಕಲ್ನಾರಿನ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈ ಶ್ವಾಸಕೋಶದ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಕಲ್ನಾರಿನಿಂದಾಗಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದರು. ಕಲ್ನಾರಿನ ಬಳಕೆ ಮತ್ತು ಉತ್ಪಾದನೆಯನ್ನು ಯುರೋಪ್ ಮತ್ತು ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನಿಷೇಧಿಸಲಾಗಿದೆ.ಕಲ್ನಾರಿನ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ Archived 2019-05-08 ವೇಬ್ಯಾಕ್ ಮೆಷಿನ್ ನಲ್ಲಿ.
ಅದಿರುಗಳು
ಬದಲಾಯಿಸಿನಾನಾಬಗೆಯ ಕಲ್ನಾರುಗಳಲ್ಲಿ ಕ್ರೈಸೊಲೈಟ್ ಬಗೆ ಬಹು ಮುಖ್ಯವಾದುದು. ಮೆಗ್ನೀಸಿಯಂ ಸಿಲಿಕೇಟ್ ಮತ್ತು ಮ್ಯಾಂಗನೀಸ್ ಹೈಡ್ರೋ ಸಿಲಿಕೇಟುಗಳು ಇದರಲ್ಲಿವೆ. ಇದರ ಒಂದು ದಾರವನ್ನು ಪರಿಶೀಲಿಸಿದಾಗ ಅದು ಬಿಳುಪಾಗಿ ಕಂಡರೂ ಅದರ ಒಳಗಡೆ ಇರುವ ಕಣಗಳು ಹಸುರು ಮಿಶ್ರಿತ ಹಳದಿ ಬಣ್ಣವನ್ನು ಪ್ರದರ್ಶಿಸುತ್ತವೆ. ಈ ದಾರ ಅರ್ಧ ನೂಲಿನಿಂದ ಒಂದೂವರೆ ನೂಲಿನಷ್ಟು ದಪ್ಪವಾಗಿಯೂ ಹನ್ನೆರಡು ಅಂಗುಲಗಳಷ್ಟು ಉದ್ದವಾಗಿಯೂ ಇರುತ್ತದೆ. ಕಲ್ನಾರಿನ ಅದುರು ಕ್ವೆಬೆಕಿನಲ್ಲಿ ಬಹಳ ಹೆಚ್ಚಾಗಿ ಸಿಗುತ್ತದೆ. ಕ್ರೆಸೊಲೈಟ್ ಸುಣ್ಣಕಲ್ಲಿನ ಪ್ರದೇಶದಲ್ಲೂ ಸಿಗುತ್ತದೆ. ಇನ್ನೊಂದು ಬಗೆಯ ಕಲ್ನಾರನ್ನು ಆಂಥೋಫಿಲ್ಯೇಟ್ ಅದಿರಿನಿಂದ ಪಡೆಯುತ್ತಾರೆ. ಇದು ಮೆಗ್ನೀಸಿಯಂ ಕಬ್ಬಿಣದ ಸಿಲಿಕೇಟನ್ನು ಒಳಗೊಂಡಿರುತ್ತದೆ. ಇದರ ಎಳೆ ಬಹಳ ಒರಟು. ನಮ್ಯತೆ ಬಲು ಕಡಿಮೆ. ಇನ್ನೊಂದು ಬಗೆಯಲ್ಲಿ ಕಬ್ಬಿಣದ ಕಣಗಳು ಹೆಚ್ಚಿಗೆ ಇದ್ದು ಅದರ ಎಳೆಗಳು ಬಹಳ ಅಗಲ ಮತ್ತು ಉದ್ದವಾಗಿರುತ್ತವೆ. ಇವುಗಳ ಬಣ್ಣ ಕಂದು ಮತ್ತು ಹಳದಿ ಮಿಶ್ರಿತ ಹಸುರು. ಈ ಬಗೆಯ ಕಲ್ನಾರು ಬಹಳ ಬೇಗನೆ ಪುಡಿಯಾಗುತ್ತದೆ. ಆದರೆ ರಾಸಾಯನಿಕ ಆಮ್ಲಗಳು ಬಿದ್ದಾಗ ಯಾವ ಪ್ರತಿಕ್ರಿಯೆಯನ್ನೂ ತೋರುವುದಿಲ್ಲ. ಸೋಡಾಕಬ್ಬಿಣ ಮಿಶ್ರವಾಗಿರುವ ಇನ್ನೊಂದು ಬಗೆಯ ಅದಿರನ್ನೂ ಕಲ್ನಾರು ಎನ್ನುತ್ತಾರೆ. ಇದು ಪ್ರಕೃತಿಯಲ್ಲಿ ೩" ಅಗಲದ ವರೆಗೂ ದೊರೆಯುತ್ತದೆ. ಇದಕ್ಕೆ ಅಧಿಕ ನಮ್ಯತೆ ಇದೆ. ಇದು ಹೆಚ್ಚಿಗೆ ಉಷ್ಣವನ್ನು ತಡೆದುಕೊಳ್ಳಲಾರದೆ ಕೆಲವು ಸಂದರ್ಭಗಳಲ್ಲಿ ಕರಗಿಹೋಗುತ್ತದೆ. ಅತ್ಯುತ್ತಮವಾದ ಕಲ್ನಾರು ಎಂದರೆ ಟ್ರೈಮೋಲ್ಯೇಟ್ ಕಲ್ನಾರು. ಇದು ಬಹಳ ನುಣುಪಾಗಿಯೂ ಸಣ್ಣಸಣ್ಣ ಎಳೆಯಾಗಿಯೂ ದೊರೆಯಬಲ್ಲುದು. ಇದು ಕ್ಯಾಲ್ಸಿಯಂ, ಮೆಗ್ನೀಸಿಯಂ, ಹೈಡ್ರಾಕ್ಸೈಡುಗಳಿಂದ ಕೂಡಿರುತ್ತದೆ. ಇದರ ಬಣ್ಣ ಬಹಳ ಬಿಳುಪಾಗಿಯೂ ಕೆಲವು ಸಂದರ್ಭಗಳಲ್ಲಿ ಕಂದು ಮಿಶ್ರಿತ ಬಿಳುಪಾಗಿಯೂ ಇರುತ್ತದೆ. ಇದರ ಘನಸಾಂದ್ರತೆ ಒಂದಕ್ಕಿಂತ ಕಡಿಮೆ.
ಉಪಯೋಗಗಳು
ಬದಲಾಯಿಸಿಕಲ್ನಾರು ಅಗ್ನಿನಿರೋಧಕವಾಗಿರುವುದರಿಂದಲೂ ಸುಲಭವಾಗಿ ದಾರದ ಎಳೆಯಿಂದ ಮಾಡಿರುವುದರಿಂದಲೂ ಇದನ್ನು ಹೆಚ್ಚಾಗಿ ಕೈಗಾರಿಕಾ ವಸ್ತುವನ್ನಾಗಿ ಉಪಯೋಗಿಸುತ್ತಾರೆ. ಕಲ್ನಾರಿನ ಎಳೆ ಕೆಲವು ಸಾರಿ ಮೆರುಗು ಕೊಟ್ಟ ತಂತಿಯನ್ನು ಹೋಲುತ್ತದೆ. ಉದ್ದವಾದ ಎಳೆಗಳನ್ನು ದಾರಗಳನ್ನಾಗಿ ಮಾಡಬಹುದು.ಹತ್ತಿ, ತಾಮ್ರ, ಹಿತ್ತಾಳೆ ಎಳೆಗಳನ್ನು ಸೇರಿಸಿ ಕಲ್ನಾರಿನ ದಾರಗಳನ್ನು ಮಾಡಬಹುದು. ಕಲ್ನಾರನ್ನು ಆವಿಯ ಕೊಳವೆಯ ಸುತ್ತಲೂ ಸುತ್ತುವುದಕ್ಕೇ ಗೋಡೆಗಳ ಮೇಲೆ ಹಲಗೆಗಳಂತೆ ಹಾಸಲಿಕ್ಕೆ ಮಾತ್ರವಲ್ಲದೆ ಚಿತ್ರ ಮತ್ತು ನಾಟಕಮಂದಿರಗಳಲ್ಲಿ ಅಲಂಕರಣ ಹಾಗೂ ರಕ್ಷಣಸಾಮಗ್ರಿಯಾಗಿಯೂ ಉಪಯೋಗಿಸುತ್ತಾರೆ. ಸಣ್ಣ ತಂತಿಗಳನ್ನು ಕಲ್ನಾರಿನ ಪುಡಿಗಳಲ್ಲಿ ಮಿಶ್ರಮಾಡಿ ವಾಹನಗಳ ವೇಗವನ್ನು ಹಿಡಿಯುವ ಸಾಧನವನ್ನಾಗಿ ಮಾಡುತ್ತಾರೆ. ಅದುರಿನ ಜೊತೆಯಲ್ಲಿ ರಬ್ಬರನ್ನು ಮಿಶ್ರಮಾಡಿ ಉಷ್ಣವನ್ನು ತಡೆಯುವ ಸಾಧನವನ್ನಾಗಿ ಉಪಯೋಗಿಸುತ್ತಾರೆ. ಕಲ್ನಾರಿನ ಅದುರನ್ನು ಗ್ರಾಫೈಟ್ ಮತ್ತು ಗ್ರೀಸ್ ಮಿಶ್ರಣದ ಜೊತೆಯಲ್ಲಿ ಉಗಿಬಂಡಿಗಳಲ್ಲಿ ಉಪಯೋಗಿಸುತ್ತಾರೆ. ಈ ಮಿಶ್ರಣದಿಂದ ಹಗ್ಗ, ದಾರಗಳನ್ನು ಸಹ ಮಾಡುತ್ತಾರೆ. ಹೆಚ್ಚಿಗೆ ಬೆಂಕಿ ಇರುವ ಸ್ಥಳಗಳಲ್ಲಿ ಕೆಲಸ ಮಾಡುವವರು ಕಲ್ನಾರಿನಿಂದ ತಯಾರಿಸಿದ ಕವಚಗಳು ಮತ್ತು ಕೈಚೀಲಗಳನ್ನು ಉಪಯೋಗಿಸುತ್ತಾರೆ. ಇದು ವಿದ್ಯುಚ್ಛಕ್ತಿ ನಿರೋಧಕ. ಸಿಮೆಂಟ್ ಮತ್ತು ಜಿಪ್ಸಂಗಳನ್ನು ಕಲ್ನಾರಿನ ಅದಿರಿನಲ್ಲಿ ಮಿಶ್ರಮಾಡಿ ನಾನಾ ರೀತಿಯ ಕಲ್ನಾರುಗಳನ್ನು ಹಲಗೆಗಳ ರೂಪದಲ್ಲಿ ತಯಾರಿಸುತ್ತಾರೆ. ಹೆಂಚುಗಳನ್ನೂ ಕಾಗದವನ್ನೂ ಕಲ್ನಾರಿನಿಂದ ತಯಾರಿಸುತ್ತಾರೆ. ಅದಿರಿನ ಸಣ್ಣ ಕಣಗಳಿಗೆ ಬಣ್ಣದ ತಯಾರಿಕೆಯಲ್ಲಿ ಉಪಯೋಗವುಂಟು. ಇದರಿಂದ ತಯಾರಿಸಿದ ಹಲಗೆಗಳನ್ನು ಮೇಲ್ಚಾವಣಿಗೆ ಉಪಯೋಗಿಸುತ್ತಾರೆ. ಇದರ ಕೊಳವೆಗಳನ್ನು ಹೊಗೆ ಮತ್ತು ನೀರು ಸಾಗಿಸಲು ಬಳಸುತ್ತಾರೆ. ಕೊಳವೆಗಳು ನೀರಾವರಿ ಕೆಲಸಗಳಲ್ಲಿ ಬಹಳ ಉಪಯೋಗವಾಗುತ್ತವೆ. ಆದರೆ ಹೆಚ್ಚಿಗೆ ತೂಕಬಿದ್ದಾಗ ಇವು ಒಡೆದುಹೋಗುತ್ತವೆ. (ಎ.ಎನ್.ಎಸ್.ಐ.; ಜಿ.ಟಿ.ಜಿ.)