ಕಲಾಮಂದಿರಗಳು
ಕಲಾಮಂದಿರಗಳು : ಸಾರ್ವಜನಿಕರಿಗೆ ನಾಟಕ, ನೃತ್ಯ ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುವ ರಂಗಮಂದಿರ ಮತ್ತು ಸಭಾಂಗಣಗಳನ್ನೊಳಗೊಂಡ ಮಂದಿರಗಳಿಗೆ ಕಲಾಮಂದಿರಗಳೆನ್ನುವರು. ವಿವಿಧ ರೀತಿಯ ಚಿತ್ರಕಲೆ, ಶಿಲ್ಪ, ದಂತ, ಕಂಚು ಮೊದಲಾದವುಗಳಲ್ಲಿ ಮಾಡಿದ ಕುಶಲಕಲೆಯ ವಸ್ತುಗಳೇ ಕಲಾಕೃತಿಗಳು. ಸಾಮಾನ್ಯವಾಗಿ ಕಲಾಮಂದಿರವೆಂದರೆ ಕೇವಲ ಚಿತ್ರಗಳನ್ನು ಪ್ರದರ್ಶಿಸುವ ಸ್ಥಳವೆಂದು ತಿಳಿಯುತ್ತಾರೆ. ಆದರೆ ಕಲಾಮಂದಿರದಲ್ಲಿ ವಿವಿಧ ಪ್ರಕಾರಗಳ ಕಲಾವಸ್ತುಗಳು ಪ್ರದರ್ಶಿತವಾಗಿರುತ್ತವೆ. ಮಂದಿರಗಳನ್ನು ಸ್ಥಾಪಿಸುವ ಪದ್ಧತಿ ಹಿಂದಿನಿಂದಲೂ ಬಂದಿದೆ. ಇತಿಹಾಸಪೂರ್ವಯುಗದ ಜನ ಸಹ ಕಲಾಕೃತಿಗಳಿಂದ ಮನೋರಂಜನೆ ಪಡೆಯುತ್ತಿದ್ದರಂಬುದು ಸ್ಪೇನ್ ದೇಶದ ಆಲ್ಟಮೀರ, ಫ್ರಾನ್ಸಿನ ಲೆ ಐಜೀಸ್, ಡಾರ್ಡಾನ್ ಮೊದಲಾದ ಸ್ಥಳಗಳಲ್ಲಿ ಕಾಣಬರುವ ಇತಿಹಾಸಪೂರ್ವ ಶಿಲಾಚಿತ್ರಣಗಳಿಂದ ವ್ಯಕ್ತವಾಗುತ್ತದೆ. ಮನುಷ್ಯ ನಾಗರಿಕನಾಗುತ್ತ ಬಂದಮೇಲೆ ಕಲಾಕೃತಿಗಳಿಂದ ರಾರಾಜಿಸುವ ಅರಮನೆಗಳನ್ನೂ ದೇವಾಲಯಗಳನ್ನೂ ನಿರ್ಮಿಸುವುದು ಪ್ರಾರಂಭವಾಗಿ ಅವು ಕಲಾಮಂದಿರಗಳಂತೆಯೇ ಕಲೋಪಾಸಕರಿಗೆ ಆನಂದವನ್ನುಂಟುಮಾಡುವ ಉದ್ದೇಶವನ್ನು ಸಾಧಿಸಿದುವು. ಪಶ್ಚಿಮ ಪಾಕಿಸ್ತಾನದ ಮೊಹೆಂಜೋದಾರೊ ಮತ್ತು ಹರಪ್ಪ; ಭಾರತದ ಅಜಂತ, ಎಲ್ಲೋರ, ಸಿತ್ತನ್ನವಾಸಲ್ ಮತ್ತು ಲೇಪಾಕ್ಷಿ; ಚೀನದ ತುನ್-ಹುಅನ್ ಗವಿಗಳು; ಈಜಿಪ್ಟಿನ ಕಾರ್ನಾಕ್ ದೇವಾಲಯ, ರೋಂ ನಗರದ ಅಗ್ರಿಪನ ಪ್ಯಾಂಥಿಯಾನ್ ದೇಗುಲ, ಇರಾನಿನ ಪರ್ಸೆಪೊಲಿಸ್ ಅರಮನೆಗಳು; ಅಥೆನ್ಸ್ ನಗರದ ಪಾರ್ಥೆನಾನ್ ದೇವಾಲಯ, ಜಪಾನಿನ ಹೊರ್ಯೂಜಿ ಗುಡಿ ಮೊದಲಾದವುಗಳ ಕಲಾವೈಭವ ಪ್ರಾಚೀನಕಾಲದ ಜನ ಹೇಗೆ ಕಲೆಯಲ್ಲಿ ಸತತ ಆಸಕ್ತಿ ವಹಿಸಿ ಜನರ ಸಂತೋಷಕ್ಕಾಗಿ ತಮ್ಮ ಕಲಾಕೃತಿಗಳನ್ನು ದೇವಾಲಯಗಳಂಥ ಪ್ರಮುಖ ಕಟ್ಟಡಗಳಲ್ಲಿ ಜೋಡಿಸುತ್ತಿದ್ದರೆಂಬುದನ್ನು ಸೂಚಿಸುತ್ತದೆ. ದೃಗ್ಗೋಚರವಾದ ಈ ಕಲೆಗಳನ್ನು ಹೇಗೋ ಹಾಗೆ ಶ್ರವಣಗೋಚರವಾದ ಸಂಗೀತವೇ ಮೊದಲಾದ ಕಲೆಗಳನ್ನೂ ಈ ದೇವಾಲಯಗಳು ಪೋಷಿಸಿಕೊಂಡು ಬಂದಿಲ್ಲ.
ಈ ಪ್ರಾಚೀನ ಕಲಾಕೃತಿಗಳ ವಾಸ್ತವಿಕ ಮಾದರಿಗಳಲ್ಲದೆ ಸಾಹಿತ್ಯದಲ್ಲೂ ಕಲಾಕೃತಿಗಳ ಹಾಗೂ ಚಿತ್ರಶಾಲೆಗಳ ಬಗ್ಗೆ ಉಲ್ಲೇಖಗಳಿವೆ. ಬಾಣಕವಿಯ ಕಾದಂಬರಿಯಲ್ಲಿ ವಿದಿಶಾ ನಗರವನ್ನು ವರ್ಣಿಸುವಾಗ ಸುರಾಸುರಸಿದ್ಧಗಂಧರ್ವವಿದ್ಯಾಧರೋರಗಾಧ್ಯಾ ಸಿತಾಭಿಃ ಚಿತ್ರಶಾಲಾಭಿರಲಂಕೃತಾ_ಎಂದು ಹೇಳಿ, ಆ ನಗರದಲ್ಲಿ ದೇವಗಂಧರ್ವರೇ ಮೊದಲಾದವರ ಚಿತ್ರಗಳನ್ನೂ ಹಾಗೂ ವಿಗ್ರಹಗಳನ್ನೂ ಹೊಂದಿದ ಅನೇಕ ಚಿತ್ರಶಾಲೆಗಳಿದ್ದುವೆಂದು ತಿಳಿಸುತ್ತಾನೆ. ಇದೇ ರೀತಿ ವಿಷ್ಣುಧರ್ಮೋತ್ತರ, ಮಾನಸೋಲ್ಲಾಸ, ಮತ್ತು ಶಿಲ್ಪರತ್ನ ಮೊದಲಾದ ಕೃತಿಗಳಲ್ಲಿ ಸಹ ನರರಿಗೂ ನರಪಾಲಕರಿಗೂ ಆನಂದವನ್ನುಂಟುಮಾಡಲು ಕಲಾಕೃತಿಗಳನ್ನು ಸೃಜಿಸುವ ವಿಧಾನವನ್ನು ಕೂಲಂಕಷವಾಗಿ ವಿವರಿಸಿದೆ.
ಪ್ರಾಚೀನ ಕಾಲದಲ್ಲಿ ಚಿತ್ರಶಾಲೆಗಳಿದ್ದುವೆಂಬುದಕ್ಕೆ ಸಾಹಿತ್ಯದಲ್ಲಿ ಉಲ್ಲೇಖಗಳಿದ್ದರೂ ವಿಶಿಷ್ಟ ಕಲಾಮಂದಿರಗಳನ್ನು ನಿರ್ಮಿಸುವ ಪದ್ಧತಿ ಯುರೋಪಿನಲ್ಲಿ ನಾನೂರು ವರ್ಷಗಳ ಹಿಂದೆ ಬೌದ್ಧಿಕ ಕ್ರಾಂತಿಯ ಕಾಲದಲ್ಲಿ ರೂಢಿಗೆ ಬಂದಂತೆ ಕಾಣುತ್ತದೆ. ಚಿತ್ರಕಲೆ, ಶಿಲ್ಪ ಮತ್ತು ವಾಸ್ತುಶಿಲ್ಪಗಳಲ್ಲಿ ಹಲವಾರು ನಿರ್ದಿಷ್ಟ ಪಂಥಗಳು ಹುಟ್ಟಿಕೊಂಡುದರಿಂದಲೂ ಈ ಪಂಥಗಳು ಸೃಜಿಸಿದ ಕಲಾಕೃತಿಗಳನ್ನು ಮತ್ತು ಅವುಗಳ ಶೈಲಿಗಳನ್ನು ರಕ್ಷಿಸಿ ಪ್ರದರ್ಶಿಸಬೇಕಾದ ಅನಿವಾರ್ಯತೆಯುಂಟಾದುದರಿಂದಲೂ ಈ ಕಲಾಪಂಥಗಳ ಆದರ್ಶಗಳನ್ನು ಪ್ರಚಾರ ಮಾಡುವ ಉದ್ದೇಶದಿಂದಲೂ ಇಂಥ ಕಲಾಮಂದಿರಗಳು ಅಸ್ತಿತ್ವಕ್ಕೆ ಬಂದವು. ಈ ಉದ್ದೇಶಕ್ಕಾಗಿ ಅನೇಕ ಕಲಾಸಂಘಗಳು ಏರ್ಪಟ್ಟು, ಅವು ತಮ್ಮದೇ ಆದ ಕಲಾಮಂದಿರಗಳನ್ನು ಹೊಂದಿದ್ದುವು. ಹೀಗೆ ಯುರೋಪಿನ ಅನೇಕ ಪ್ರಮುಖ ನಗರಗಳಲ್ಲಿ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ದೊಡ್ಡ ಕಲಾವಸ್ತುಶಾಲೆಗಳು ಸ್ಥಾಪಿತವಾದುವು. ಪ್ರಾರಂಭದ ಹಂತಗಳಲ್ಲಿ ಯುರೋಪಿನ ಕಲಾಮಂದಿರಗಳನ್ನು ಆಯಾ ದೇಶದ ಅರಸುಮನೆತನಗಳೇ ಪೋಷಿಸಿಕೊಂಡು ಬಂದುವು. ಅರಮನೆಗಳು ಸಹ ಅಮೋಘ ಕಲಾಕೃತಿಗಳ ಭಂಡಾರಗಳಾದುವು. ತರುವಾಯದ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳು, ನಗರಸಭೆಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಶ್ರೀಮಂತರು ಕಲಾಮಂದಿರಗಳನ್ನು ಏರ್ಪಡಿಸುವ ಪದ್ಧತಿ ಪ್ರಾರಂಭವಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಂತೂ ಖಾಸಗಿ ದಾನಶೀಲರ ನೆರವಿನಿಂದ ಹಲವಾರು ಘನವಾದ ಕಲಾಮಂದಿರಗಳು ಸ್ಥಾಪಿತವಾಗಿವೆ. ಇತ್ತೀಚೆಗೆ, ವಿಶ್ವದ ನಾನಾ ರಾಷ್ಟ್ರಗಳ ಸರ್ಕಾರಗಳು ತಮ್ಮ ನೇತೃತ್ವದಲ್ಲಿ, ಸಾರ್ವಜನಿಕರಿಗೆ ಒದಗಿಸುವ ಸೌಕರ್ಯಗಳ ಅಂಗವಾಗಿ, ಇಂಥ ಕಲಾಮಂದಿರಗಳನ್ನು ಸ್ಥಾಪಿಸಿವೆ. ಸ್ವತಂತ್ರ ಭಾರತದಲ್ಲಿ ನವದೆಹಲಿಯಲ್ಲಿ ಕಲಾವಿಭಾಗಗಳೊಂದಿಗೆ ಒಂದು ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನೂ ಮದ್ರಾಸಿನಲ್ಲಿ ರಾಷ್ಟ್ರೀಯ ಕಲಾಮಂದಿರವನ್ನೂ ಸ್ಥಾಪಿಸಲಾಗಿದೆ.
ಕಲಾಮಂದಿರಗಳಲ್ಲಿ ಅನೇಕ ಬಗೆಗಳಿವೆ. ಕೆಲವು ಕಲಾಮಂದಿರಗಳು ಲಂಡನ್ ನಗರದ ಬ್ರಿಟಿಷ್ ಮ್ಯೂಸಿಯಂ ವಸ್ತುಸಂಗ್ರಹಾಲಯದ ಕಲಾವಿಭಾಗಗಳ ಮಾದರಿಯಲ್ಲಿ ಎಲ್ಲ ದೇಶಗಳ ಪ್ರಾಚೀನ ಕಲಾಕೃತಿಗಳಿಗೆ ಅವಕಾಶವಿತ್ತಿವೆ. ಕೆಲವು, ಪ್ರಾಚೀನ ನಾಗರಿಕತೆಗಳಿಗೆ ಸಂಬಂಧಪಟ್ಟ ಕಲೆಗಳಿಗೆ ಮಾತ್ರ ಮೀಸಲಾಗಿವೆ. ಅಂಥ ಕಲಾಮಂದಿರಗಳಲ್ಲಿ ಒಂದಾದ ಶಿಕಾಗೊ ನಗರದ ಓರಿಯಂಟಲ್ ಇನ್ಸ್ಟಿಟ್ಯೂಟಿನಲ್ಲಿ ಮೆಸಪೊಟೇಮಿಯ ಮತ್ತು ಈಜಿಪ್ಟ್‌ಗಳ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕೆಲವು ಕಲಾಮಂದಿರಗಳಲ್ಲಿ ಮುಖ್ಯವಾಗಿ ಒಂದೇ ದೇಶದ ಎಲ್ಲ ಕಾಲಗಳಿಗೆ ಸಂಬಂಧಪಟ್ಟ ಕಲೆಯನ್ನು ಪ್ರದರ್ಶಿಸುತ್ತಾರೆ. ಚೆನ್ನೈ ರಾಷ್ಟ್ರೀಯ ಕಲಾಮಂದಿರ ಈ ಮಾದರಿಯದು. ಕೇವಲ ಚಿತ್ರಕಲೆಗೇ ಮೀಸಲಾದ ಕೆಲವು ಕಲಾಮಂದಿರಗಳಿವೆ. ಈ ತೆರನಾದ ಚಿತ್ರಶಾಲೆಯ ಗುಂಪಿಗೆ ಸೇರಿದವು ಅಮ್ಸ್ಟರ್ ಡ್ಯಾಂ ನಗರದ ರಿಜಕ್ಸ್ ಮ್ಯೂಸಿಯಂ ಭವನ ಮತ್ತು ವ್ಯಾಟಿಕನ್ ನಗರದ ಕಲಾಮಂದಿರ. ಮತ್ತೆ ಕೆಲವು ಕಲಾಮಂದಿರಗಳು ಶಿಲೆ ಅಥವಾ ಲೋಹಶಿಲ್ಪದ ಮಾದರಿಗಳನ್ನೇ ಪ್ರದರ್ಶಿಸುತ್ತವೆ. ಉದಾ: ತಂಜಾವೂರಿನ ಕಲಾಮಂದಿರಗಳಲ್ಲಿ ಚೋಳರ ಕಾಲದ ಕಂಚಿನ ಮೂರ್ತಿ ಶಿಲ್ಪದ ಅದ್ಭುತ ಮಾದರಿಗಳಿವೆ. ಹಲವು ಕಲಾಮಂದಿರಗಳು ಆಧುನಿಕ ಕಲಾವಸ್ತುಗಳನ್ನು ಸಂಗ್ರಹಿಸಿವೆ. ಹೀಗೆ ಇನ್ನೂ ಅನೇಕ ವಿಧಗಳಲ್ಲಿ ಕಲಾಮಂದಿರಗಳು ವರ್ಗೀಕೃತವಾಗಿವೆ. ವಿಶ್ವದ ಪ್ರಸಿದ್ಧ ಕಲಾಮಂದಿರಗಳಲ್ಲಿ ಗಮನಾರ್ಹವಾದ ಕೆಲವನ್ನು ಮುಂದೆ ವಿವರಿಸಲಾಗಿದೆ.
ಭಾರತ
ಬದಲಾಯಿಸಿಮುಂಬಯಿ, ಕೋಲ್ಕತ, ಚೆನ್ನೈ, ನವದೆಹಲಿ, ಅಲಹಾಬಾದ್, ಗ್ವಾಲಿಯರ್, ಜಯಪುರ, ಹೈದರಾಬಾದು, ಮೈಸೂರು, ತಿರುವನಂತಪುರ, ಲಕ್ನೊ, ವಾರಾಣಸಿ ಮೊದಲಾದ ಸ್ಥಳಗಳಲ್ಲಿರುವ ವಿವಿಧ ವಸ್ತುಸಂಗ್ರಹಾಲಯಗಳಲ್ಲಿ ಕಲಾಮಂದಿರಗಳು ಹಾಗೂ ಕಲಾವಿಭಾಗಗಳಿವೆ.
ಕೋಲ್ಕತ ನಗರದ ಇಂಡಿಯನ್ ಮ್ಯೂಸಿಯಂ ವಸ್ತುಸಂಗ್ರಹಾಲಯದ ಕಲಾವಿಭಾಗದಲ್ಲಿ ಬಾರ್ಹುತ್ನಿಂದ ಸಂಗ್ರಹವಾಗಿರುವ ಶುಂಗ ಕಾಲದ ಪ್ರಸಿದ್ಧ ಶಿಲ್ಪಗಳೂ ಗಾಂಧಾರ ಶಿಲ್ಪಗಳೂ ಪ್ರದರ್ಶಿತವಾಗಿವೆ. ಈ ನಗರದ ವಿಕ್ಟೋರಿಯ ಮೆಮೊರಿಯಲ್ ವಸ್ತುಸಂಗ್ರಹಾಲಯದಲ್ಲಿ ಉತ್ತರ ಭಾರತದ ಸೂಕ್ಷ್ಮವಾದ ವರ್ಣಚಿತ್ರಗಳೂ ೧೯ನೆಯ ಶತಮಾನದ ಯುರೋಪಿನ ಚಿತ್ರಕಾರರ ತೈಲಚಿತ್ರಗಳೂ ಇವೆ. ಮುಂಬಯಿ ನಗರದ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮಿನ ಕಲಾವಿಭಾಗ ಪಶ್ಚಿಮ ಭಾರತದ ರಾಜಸ್ತಾನದ ಸೂಕ್ಷ್ಮ ವರ್ಣಚಿತ್ರಗಳು ಮತ್ತು ಬಾದಾಮಿ ಚಳುಕ್ಯರ ರಾಷ್ಟ್ರಕೂಟರ ಹಾಗೂ ಇನ್ನಿತರ ರಾಜವಂಶಗಳ ಕಾಲದ ಶಿಲ್ಪಗಳ ಶ್ರೇಷ್ಠ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ.
ಚೆನ್ನೈನ ಸರ್ಕಾರಿ ವಸ್ತುಸಂಗ್ರಹಾಲಯದ ಕಲಾವಿಭಾಗದಲ್ಲಿ ವಿಶ್ವಪ್ರಸಿದ್ಧವಾದ ಅಮರಾವತಿ ಶಿಲ್ಪ ಸಂಪ್ರದಾಯದ ವಿಗ್ರಹಗಳೇ ಅಲ್ಲದೆ ದಕ್ಷಿಣ ಭಾರತದ ಕಲ್ಲಿನ ಮತ್ತು ಕಂಚಿನ ವಿಗ್ರಹಗಳ ಅತ್ಯುತ್ತಮ ಮಾದರಿಗಳೂ ಸಂಗ್ರಹವಾಗಿವೆ. ಈ ವಸ್ತು ಸಂಗ್ರಹಾಲಯವಲ್ಲದೇ ಈ ನಗರದಲ್ಲಿ ನಿಜಕ್ಕೂ ಕಲಾದೇಗುಲವೆನಿಸಿರುವ ರಾಷ್ಟ್ರೀಯ ಕಲಾಮಂದಿರ ಇದೆ. ಅದರಲ್ಲಿ ಅತ್ಯುತ್ತಮ ಮಾದರಿಯ ಕಂಚಿನ ವಿಗ್ರಹಗಳು, ಪ್ರಾಚೀನ ಹಾಗೂ ಆಧುನಿಕ ಕಾಲಗಳ ಚಿತ್ರಗಳು, ಮರ, ದಂತ ಮತ್ತು ಲೋಹಗಳಲ್ಲಿ ತಯಾರಿಸಿದ ಕಲಾವಸ್ತುಗಳು ಶೇಖರವಾಗಿವೆ.
ನವದೆಹಲಿಯಲ್ಲಿ ೧೯೪೮ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಚಿತ್ರಕಲೆ, ಶಿಲ್ಪ ಮತ್ತು ಇತರ ಕಲೆಗಳಿಗೆ ಮೀಸಲಾದ ಹಲವು ಕಲಾಮಂದಿರಗಳಿವೆ. ಅವುಗಳಲ್ಲಿ ಸಂಗ್ರಹವಾಗಿರುವ ಮಧ್ಯ ಏಷ್ಯದ ಭಿತ್ತಿವರ್ಣಚಿತ್ರಗಳು; ರಜಪುತ, ಕಾಂಗ್ರಾ, ಬಸ್ರೋಲಿ, ದಖನಿ ಮತ್ತು ಪಶ್ಚಿಮ ಭಾರತದ ಸೂಕ್ಷ್ಮವರ್ಣ ಚಿತ್ರಕಲೆಗೆ ಸಂಬಂಧಿಸಿದ ಹಲವಾರು ಕಲಾಸಂಪ್ರದಾಯಗಳ ಮಾದರಿಗಳು ಗಮನಾರ್ಹವಾಗಿವೆ. ನವದೆಹಲಿಯಲ್ಲಿ ಈ ರಾಷ್ಟ್ರೀಯ ವಸ್ತುಸಂಗ್ರಹಾಲಯದ ಜೊತೆಗೆ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಎಂಬ ಆಧುನಿಕ ಕಲೆಗಳ ಒಂದು ಕಲಾಮಂದಿರವಿದೆ. ಅದರಲ್ಲಿ ಮುಖ್ಯವಾಗಿ ಭಾರತದ ಆಧುನಿಕ ಕಲೆಗಾರರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಹೈದರಾಬಾದಿನಲ್ಲಿ ಭಾರತ ಸರ್ಕಾರದ ಆಡಳಿತದಲ್ಲಿರುವ ಸಾಲಾರ್ಜಂಗ್ ವಸ್ತುಸಂಗ್ರಹಾಲಯದ ಸ್ಥಾಪನೆಗೆ ಸಾಲಾರ್ಜಂಗ್ ಸಂಗ್ರಹಿಸಿದ ಅಪೂರ್ವ ಕಲಾವಸ್ತುಗಳ ಸಂಗ್ರಹಗಳೇ ಮೂಲಾಧಾರ. ಅದರಲ್ಲಿ ಜೇಡುಶಿಲೆಯಿಂದ ತಯಾರಿಸಿದ ಕಲಾಕೃತಿಗಳ ಅದ್ಭುತ ಮಾದರಿಗಳೂ ದಖನಿ ಚಿತ್ರಕಲೆಯನ್ನು ಪ್ರತಿನಿಧಿಸುವ ಚಿತ್ರಸಮೂಹಗಳೂ ಇವೆ. ತಿರುವನಂತಪುರದ ವಸ್ತುಸಂಗ್ರಹಾಲಯದಲ್ಲಿ ಶಿಲ್ಪ ಮತ್ತು ಮರದ ಕೆತ್ತನೆ ವಸ್ತುಗಳ ವಿಭಾಗಗಳಲ್ಲದೆ ಕೇರಳದ ದಾರುಶಿಲ್ಪದ ಕೆಲವು ಆಯ್ದ ಮಾದರಿಗಳ ಒಂದು ವಿಭಾಗವೂ ಇದೆ. ಇದೇ ನಗರದಲ್ಲಿ ಒಂದು ಚಿತ್ರಾಲಯ ಸಹ ಇದೆ.
ಸುಂದರ ಮೈಸೂರು ನಗರದಲ್ಲಿ ಕಿರಿದಾದರೂ ಚಿತ್ತಾಕರ್ಷಕವಾದ ಜಗನ್ಮೋಹನ ಅರಮನೆಯ ಕಲಾಮಂದಿರದಲ್ಲಿ ಸಂಗ್ರಹವಾಗಿರುವ ವಸ್ತುಗಳಲ್ಲಿ ಸೊಗಸಾದ ದಂತದ ಕೆಲಸದಿಂದ ಕೂಡಿದ ಪಲ್ಲಕ್ಕಿಗಳೂ ಸೂಕ್ಷ್ಮವಾಗಿ ಕೊರೆದ ಗಂಧದ ಕೆತ್ತನೆಯ ಸಂಪುಟಗಳೂ ತಿರುವಾಂಕೂರು ರಾಜಮನೆತನದ ಸುಪ್ರಸಿದ್ಧ ಕಲಾವಿದ ರಾಜಾರವಿವರ್ಮನ ಕೆಲವು ಮೂಲ ತೈಲಚಿತ್ರಗಳೂ ಬಹಳ ಮುಖ್ಯವಾದುವು. ಶ್ರೀಲಂಕ : ಶ್ರೀಲಂಕ, ಮಯನ್ಮಾರ್, ಇಂಡೊನೇಷ್ಯ, ಮಲೇಷ್ಯ, ಥೈಲೆಂಡ್ ಮೊದಲಾದ ದೇಶಗಳಲ್ಲಿ ಸಹ ರಾಷ್ಟ್ರೀಯ ಮತ್ತು ಪ್ರಾಂತೀಯ ಕಲಾಮಂದಿರಗಳಿವೆ. ಶ್ರೀಲಂಕಾದ ಕೊಲೊಂಬೊ ಪಟ್ಟಣದಲ್ಲಿರುವ ಕೊಲೊಂಬೊ ವಸ್ತುಸಂಗ್ರಹಾಲಯದ ಕಲಾವಿಭಾಗದಲ್ಲಿ ಕ್ರಿಸ್ತಶಕೆಯ ಪ್ರಾರಂಭದ ಶತಮಾನಗಳ ಶಿಲಾವಿಗ್ರಹಗಳು, ಚೋಳರ ಪ್ರಾರಂಭಿಕ ಶೈಲಿಯ ಅತ್ಯುತ್ತಮ ಕಂಚಿನ ವಿಗ್ರಹಗಳು ಸಂಗ್ರಹವಾಗಿವೆ.
ಬ್ರಿಟನ್
ಬದಲಾಯಿಸಿಬ್ರಿಟನ್ ಭಾರತದಂಥ ಪ್ರಾಚೀನ ರಾಜ್ಯಗಳ ಮೇಲೆ ಪ್ರಭುತ್ವ ಹೊಂದಿದ್ದು ಅವುಗಳ ಉತ್ಕೃಷ್ಟ ಕಲಾಕೃತಿಗಳನ್ನು ಸಂಗ್ರಹಿಸಿದೆ. ಹೀಗೆ ಸಂಗ್ರಹವಾದ ಕಲಾವಸ್ತುಗಳು ಈ ದೇಶದ ವಿವಿಧ ವಸ್ತುಸಂಗ್ರಹಾಲಯಗಳಲ್ಲಿಯೂ ಕಲಾಮಂದಿರಗಳಲ್ಲಿಯೂ ಇವೆ. ಲಂಡನ್ ನಗರದ ಬ್ರಿಟಷ್ ಮ್ಯೂಸಿಯಂ ಕಲಾವಿಭಾಗದಲ್ಲಿ ಚೀನೀ ಚಿತ್ರಕಲೆಯ ಉತ್ತಮ ಮಾದರಿಗಳೂ ಅರ್ಲ್ ಆಫ್ ಎಲ್ಗಿನ್ ಸಂಗ್ರಹಿಸಿದ ಅಥೆನ್ಸ್ ನಗರದ ಪಾರ್ಥೆನಾನ್ ದೇವಾಲಯದ ಖ್ಯಾತಿವೆತ್ತ ಶಿಲಾವಿಗ್ರಹಗಳೂ ಈಜಿಪ್ಟ್ ಮತ್ತು ಮೆಸಪೊಟೇಮಿಯ ದೇಶಗಳ ಕಲೆಯ ಶ್ರೇಷ್ಠ ಮಾದರಿಗಳೂ ಇವೆ. ವಿಕ್ಟೋರಿಯ ಮತ್ತು ಆಲ್ಬರ್ಟ್ ವಸ್ತುಸಂಗ್ರಹಭವನ ಸಹ ಪ್ರಾಚ್ಯ ದೇಶಗಳ ಮತ್ತು ಮಧ್ಯ ಪ್ರಾಚ್ಯ ದೇಶಗಳ ಕಲಾಕೃತಿಗಳನ್ನು ಹೊಂದಿದೆ.
ಇಲ್ಲಿನ ಮತ್ತೊಂದು ಕಲಾಮಂದಿರವಾದ ರಾಷ್ಟ್ರೀಯ ಕಲಾಮಂದಿರದಲ್ಲಿರುವ ಯುರೋಪಿನ ತೈಲಚಿತ್ರಗಳ ಸಂಗ್ರಹ ಹೆಸರುವಾಸಿಯಾಗಿದೆ. ಈ ಚಿತ್ರಸಂಗ್ರಹದಲ್ಲಿ ಡಚ್, ಇಟಾಲಿಯನ್, ಫ್ಲೆಮಿಷ್ (ಬೆಲ್ಜಿಯಂ) ಮತ್ತು ಇತರ ಚಿತ್ರಕಲಾ ಸಂಪ್ರದಾಯಗಳಿಗೆ ಸೇರಿದ ಶ್ರೇಷ್ಠ ಕಲಾಕೃತಿಗಳಿವೆ. ಅವುಗಳಲ್ಲಿ ಕೆಲವು ಲಿಯೊನಾರ್ಡೊ-ಡ-ವಿಂಚಿ, ಮೈಕಲೇಂಜಲೋ, ರ್ಯಾಫೆಲ್, ರೆಂಬ್ರ್ಯಾಂಟ್, ರೇನಾಲ್ಡ್ಸ್ ಮತ್ತು ಟರ್ನರ್ ಮೊದಲಾದ ಪ್ರಖ್ಯಾತ ಚಿತ್ರಕಾರರ ತೈಲಚಿತ್ರಗಳಿವೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಷ್ಮೋಲಿಯಂ ಮತ್ತು ಕೇಂಬ್ರಿಜ್ಜಿನ ಫಿಟ್ಜ್ ವಿಲಿಯಂ ವಸ್ತುಸಂಗ್ರಹಾಲಯಗಳಲ್ಲಿ ಸಹ ಕಲಾವಸ್ತುಗಳ ಪ್ರದರ್ಶನಕ್ಕಾಗಿ ಪ್ರತ್ಯೇಕ ವಿಭಾಗಗಳಿವೆ. ಕಿರಿಯ ಪ್ರಮಾಣದ ಕಲಾಮಂದಿರಗಳು ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ರಾಜ್ಯಗಳಲ್ಲೂ ಇವೆ.
ಫ್ರಾನ್ಸ್
ಬದಲಾಯಿಸಿಪ್ಯಾರಿಸ್ ನಗರ ಇಡೀ ಫ್ರಾನ್ಸ್ ದೇಶದ ಪ್ರಮುಖ ಕಲಾಕೇಂದ್ರವಾಗಿದೆ. ಅಲ್ಲಿರುವ ಅನೇಕ ಕಲಾಮಂದಿರಗಳಲ್ಲಿ ಕೆಲವು ವಿಶ್ವವಿಖ್ಯಾತವಾಗಿವೆ. ಲೂವರ್ ಕಲಾಮಂದಿರ ಪ್ರಪಂಚದ ಅಮೂಲ್ಯ ಕಲಾಭಂಡಾರಗಳಲ್ಲಿ ಒಂದಾಗಿದೆ. ಅಲ್ಲಿರುವ ಚಿತ್ರಗಳಲ್ಲಿ ೧ ನೆಯ ಫ್ರಾನ್ಸಿಸ್, ೧೪ನೆಯ ಲೂಯಿ ಮತ್ತು ನೆಪೋಲಿಯನ್ ಸಂಗ್ರಹಿಸಿದ್ದ ಚಿತ್ರಗಳಿವೆ. ಕ್ಲೂನಿ ವಸ್ತುಸಂಗ್ರಹಾಲಯದಲ್ಲಿ ಲೂವರ್ ಕಲಾಮಂದಿರದ ಚಿತ್ರಗಳಿಗೆ ಪುರವಣಿಯಾಗಿ ಚಿತ್ರಗಳು ಶೇಖರಣೆಯಾಗಿವೆ.
ಇಟಲಿ
ಬದಲಾಯಿಸಿಇಟಲಿಯ ಎಲ್ಲ ಪ್ರಮುಖ ನಗರಗಳಲ್ಲೂ ಒಂದೆರೆಡು ಕಲಾಮಂದಿರಗಳಿವೆ. ಉತ್ತಮ ಪ್ರದರ್ಶನ ವ್ಯವಸ್ಥೆ ಅವುಗಳ ವೈಶಿಷ್ಟ್ಯ. ಇಟಲಿಯ ಎಲ್ಲ ನಗರಗಳಿಗಿಂತಲೂ ನೇಪಲ್ಸ್ ನಲ್ಲಿ ರೋಮನ್ ಕಲಾಪರಂಪರೆಯ ಅತ್ಯುತ್ತಮ ಕಲಾಕೃತಿಗಳನ್ನು ಸಂಗ್ರಹಿಸಿ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ (ಮ್ಯುಸಿಯೊ ನ್ಯಾಷನಲ್) ಇಡಲಾಗಿದೆ. ಫ್ಲಾರೆನ್ಸ್ ನಗರ ಇಟಲಿಯ ಕಲಾರಾಜಧಾನಿ. ಇಲ್ಲಿಯ ಉಫಿಟ್ಜಿ ಕಲಾಮಂದಿರದಲ್ಲಿ ೧೪ನೆಯ ಶತಮಾನದಿಂದ ಹಿಡಿದು ೧೬ನೆಯ ಶತಮಾನದ ವರೆಗಿನ ಇಟಲಿಯ ವಿವಿಧ ಕಲಾ ಸಂಪ್ರದಾಯಗಳ ಚಿತ್ರಕಲೆಯನ್ನು ಪ್ರತಿನಿಧಿಸುವ ಅತ್ಯಂತ ಹೆಚ್ಚು ಪ್ರಮಾಣದ, ಜಾಗರೂಕವಾಗಿ ಆಯ್ಕೆಯಾದ ಚಿತ್ರಗಳಿವೆ. ಈ ನಗರದಲ್ಲಿ ಲೋಕ ಪ್ರಸಿದ್ಧವಾದ ಬರ್ಗಿಲ್ಲೊ ಎಂಬ ಶಿಲ್ಪ ಸಂಗ್ರಹಾಲಯವಿದೆ. ಇಟಲಿಯ ರಾಜಧಾನಿ ರೋಂ ಪಟ್ಟಣದಲ್ಲಿ ಹಲವು ಕಲಾಮಂದಿರಗಳಿವೆ. ಅವುಗಳಲ್ಲಿ ಮುಖ್ಯವಾದವು ಪೋಪ್ ಧರ್ಮ ಗುರುವಿನ ವ್ಯಾಟಿಕನ್ ನಗರಕ್ಕೆ ಸೇರಿವೆ.
ಜರ್ಮನಿ
ಬದಲಾಯಿಸಿಜರ್ಮನಿಯ ಕಲಾಮಂದಿರಗಳ ಪೈಕಿ ಮ್ಯುನಿಚ್ ನಗರದಲ್ಲಿರುವ ಬವೇರಿಯನ್ ಸ್ಟೇಟ್ ಆರ್ಟ್ ಗ್ಯಾಲರಿ ಮತ್ತು ಕೊಲೋನ್, ಡಸ್ಸೆಲ್ ಡ್ರಾರ್ಫ್ ಮತ್ತು ಬಾನ್ ನಗರಗಳ ಕಲಾಮಂದಿರಗಳು ಪ್ರಸಿದ್ಧವಾದವು.
ಸ್ಪೇನ್
ಬದಲಾಯಿಸಿಈ ದೇಶದಲ್ಲಿ ಕಲೆಗೆ ಮೀಸಲಾದ ಪ್ರಮುಖ ರಾಷ್ಟ್ರೀಯ ಸಂಸ್ಥೆ ಮ್ಯಾಡ್ರಿಡ್ ನಗರದಲ್ಲಿರುವ ಮ್ಯೂಸಿಯೊ ಡೆಲ್ ಪ್ರಾಡೊ ವಸ್ತುಸಂಗ್ರಹಾಲಯ. ಅಲ್ಲಿ ಯುರೋಪಿನ ಪ್ರಖ್ಯಾತ ಕಲೆಗಾರರ ಅಮೂಲ್ಯ ಚಿತ್ರಗಳು ಸಂಗ್ರಹವಾಗಿವೆ.
ಗ್ರೀಸ್
ಬದಲಾಯಿಸಿಗ್ರೀಸ್ ದೇಶದಲ್ಲಿ ಸ್ವಾಭಾವಿಕವಾಗಿಯೆ ಅಥೆನ್ಸ್ ಪಟ್ಟಣ ಎಲ್ಲ ಕಲೆಗಳ ಬೀಡಾಗಿದೆ. ಅಲ್ಲಿ ಪ್ರಾಚೀನ ಗ್ರೀಕ್ ಕಲೆಗೆ ಮೀಸಲಾದ ಕೆಲವು ಕಲಾಮಂದಿರಗಳಿವೆ.
ಬೆಲ್ಜಿಯಂ
ಬದಲಾಯಿಸಿಬೆಲ್ಜಿಯಂ ದೇಶದಲ್ಲಿ ಕಲೆಯ ಬಹುಮುಖ್ಯವಾದ ಕೇಂದ್ರಗಳು ಬ್ರಸ್ಸೆಲ್ಸ್, ಘೆಂಟ್ ಮತ್ತು ಆಂಟ್ವರ್ಪ್. ಆಂಟ್ವರ್ಪ್ ಪಟ್ಟಣದ ಎರಡು ಕಲಾಮಂದಿರಗಳ ಪೈಕಿ ಒಂದು ಪ್ರಾಚೀನ ಕಲಾಪ್ರದರ್ಶನಕ್ಕೂ ಮತ್ತೊಂದು ೧೯ನೆಯ ಶತಮಾನದಿಂದ ಇತ್ತೀಚಿನ ಕಲಾಕೃತಿಗಳ ಪ್ರದರ್ಶನಕ್ಕೂ ಮೀಸಲಾಗಿವೆ.
ಹಾಲೆಂಡ್
ಬದಲಾಯಿಸಿಆಮ್ಸ್ಟರ್ಡ್ಯಾಮ್ ನಗರದ ರೈಕ್ಸ್ ಮ್ಯೂಸಿಯಮಿನಲ್ಲಿ ಡಚ್ ಕಲಾಸಂಪ್ರದಾಯದ ಖ್ಯಾತಿವೆತ್ತ ಕಲೆಗಾರರ ಮನೋಹರವಾದ ಮೂಲಚಿತ್ರಗಳು ಪ್ರದರ್ಶಿತವಾಗಿ ಡಚ್ ಕಲೆಯ ಪೂರ್ಣ ಇತಿಹಾಸವನ್ನು ತಿಳಿಯಲು ಸಹಾಯಕವಾಗಿವೆ.
ಡೆನ್ಮಾರ್ಕ್
ಬದಲಾಯಿಸಿಕೋಪನ್ ಹೇಗನ್ ನಗರದ ರಾಷ್ಟ್ರೀಯ ವಸ್ತುಸಂಗ್ರಹಾಲಯ ವಿಶ್ವದ ಪ್ರಸಿದ್ಧ ಕಲಾಮಂದಿರಗಳಲ್ಲೊಂದು. ಅಲ್ಲಿಯ ಚಿತ್ರಸಂಗ್ರಹ ೧೮ನೆಯ ಶತಮಾನದಿಂದ ಪ್ರಾರಂಭವಾದಂತೆ ಡೇನಿಷ್ ಕಲಾಸಂಪ್ರದಾಯದ ಪೂರ್ಣ ದಾಖಲೆಗಳನ್ನು ಹೊಂದಿದೆ.
ಯುರೋಪಿನ ಇತರ ರಾಜ್ಯಗಳಲ್ಲಿ
ಬದಲಾಯಿಸಿನಾರ್ವೆ, ಸ್ವೀಡನ್, ಆಸ್ಟ್ರಿಯ, ಹಂಗರಿ, ಯೂಗೊಸ್ಲಾವಿಯ, ಪೋಲೆಂಡ್ ಮತ್ತು ಚೆಕೊಸ್ಲೊವಾಕಿಯ ರಾಜ್ಯಗಳಂಥ ಯುರೋಪಿನ ಇತರ ರಾಜ್ಯಗಳಲ್ಲಿ ಸಹ ಅವುಗಳದೇ ಆದ ವಿಶಿಷ್ಟ ಕಲಾಮಂದಿರಗಳಿವೆ.
ರಷ್ಯ
ಬದಲಾಯಿಸಿಲೆನಿನ್ ಗ್ರಾಡ್ ನಗರದ ಹರ್ಮಿಟೇಜ್ ಎಂಬ ಪ್ರಸಿದ್ಧ ಕಲಾಮಂದಿರದಲ್ಲಿ ಪ್ರಾಚೀನ ಚಿತ್ರಕಲೆಯ ಅದ್ಭುತ ಸಂಗ್ರಹಗಳಿವೆ. ಮಾಸ್ಕೊ ನಗರದಲ್ಲಿ ಸ್ಟೇಟ್ ಟ್ರೆಟ್ಯಾಕೋವಾ ಕಲಾಮಂದಿರವಿದೆ. ರಷ್ಯ ದೇಶದ ಕಲೆಯ ವಿವಿಧ ಸಂಪ್ರದಾಯಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಅಲ್ಲಿ ಸಂಗ್ರಹವಾಗಿವೆ. ಸ್ಟೇಟ್ ಪುಷ್ಕಿನ್ ಮ್ಯೂಸಿಯಂ ಆಫ್ ಆರ್ಟ್ಸ್ ಎಂಬ ಮತ್ತೊಂದು ಕಲಾಮಂದಿರದಲ್ಲಿ ವಾನ್ ಗೋ, ಜ್ಜೆನ್ನೆ, ಮ್ಯಾಟೀಸ್ ಮೊದಲಾದ ಖ್ಯಾತ ಕಲಾವಿದರ ಅಮೂಲ್ಯ ಚಿತ್ರಗಳಿವೆ.
ಈಜಿಪ್ಟ್
ಬದಲಾಯಿಸಿಈಜಿಪ್ಟಿನ ರಾಜಧಾನಿ ಕೈರೊ ನಗರದ ವಸ್ತುಸಂಗ್ರಹಾಲಯಗಳಲ್ಲಿ ಹಾಗೂ ಕಲಾಮಂದಿರಗಳಲ್ಲಿ ಈಜಿಪ್ಟ್, ತುರ್ಕಿ ಮತ್ತು ಕಾಪ್ಟಿಕ್ ಶ್ರೀಮಂತರ ಕಲೆಯನ್ನು ಪ್ರತಿನಿಧಿಸುವ ಕಲಾಕೃತಿಗಳಿವೆ.
ಇರಾನ್, ಇರಾಕ್, ತುರ್ಕಿ ಮೊದಲಾದ ಮಧ್ಯಪ್ರಾಚ್ಯದ ದೇಶಗಳಲ್ಲಿ
ಬದಲಾಯಿಸಿಸಹ ಅವುಗಳ ಕಲಾಸಂಪ್ರದಾಯಗಳಿಗೆ ಸಂಬಂಧಪಟ್ಟಂತೆ ಕಲಾಮಂದಿರಗಳು ಏರ್ಪಟ್ಟಿವೆ.
ಅಮೆರಿಕ ಸಂಯುಕ್ತ ಸಂಸ್ಥಾನಗಳು
ಬದಲಾಯಿಸಿನ್ಯೂಯಾರ್ಕ್ ಮಹಾನಗರದಲ್ಲಿ ಹಲವಾರು ಅಮೋಘವಾದ ಕಲಾಮಂದಿರಗಳೂ ಕಲಾವಸ್ತುಸಂಗ್ರಹಾಲಯಗಳೂ ಇವೆ. ಅವುಗಳಲ್ಲಿ ಒಂದಾದ ಮೆಟ್ರೊಪೋಲಿಟನ್ ಮ್ಯೂಸಿಯಂ ಆಫ್ ಆರ್ಟ್ ಕಲಾಮಂದಿರದಲ್ಲಿ ಈಜಿಪ್ಷಿಯನ್, ಗ್ರೀಕ್, ಲ್ಯಾಟಿನ್ ಸಂಪ್ರದಾಯದ ಅಭಿಜಾತ ಶೈಲಿಯ ಪ್ರಾಚೀನ ಕಲಾವಶೇಷಗಳು, ಚಿತ್ರಕಲೆ ಮತ್ತು ಶಿಲ್ಪವಸ್ತುಗಳೂ ಸೇರಿದ ಹಾಗೆ ಅಪಾರ ವಸ್ತುಗಳು ಸಂಗ್ರಹವಾಗಿವೆ. ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಎಂಬ ಮತ್ತೊಂದು ಸುಂದರವಾದ ಕಲಾಮಂದಿರದಲ್ಲಿ ಪಿಕಾಸೊ, ವಾನ್ ಗೋ ಮತ್ತು ಇತರ ಶೇಷ್ಠ ಕಲಾವಿದರ ಅತ್ಯುತ್ತಮ ಕಲಾಕೃತಿಗಳಿವೆ. ರೋಡಿನ್ ವಸ್ತುಸಂಗ್ರಹಾಲಯದಲ್ಲಿ ಫೆಂಚ್ ಶಿಲ್ಪ ಅಗಸ್ಟ ರೋಡಿನ್ ಎಂಬಾತನ ಶಿಲ್ಪಕಲೆಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ.
ಖಾಸಗಿ ಕೊಡುಗೆಯಿಂದಲೇ ಸ್ಥಾಪಿತವಾಗಿ ಖಾಸಗಿ ದತ್ತಿಗಳಿಂದಲೇ ನಡೆದುಕೊಂಡು ಬರುತ್ತಿರುವುದು ಬಾಸ್ಟನ್ ನಗರದ ಲಲಿತಕಲಾ ಮಂದಿರದ ವೈಶಿಷ್ಟ್ಯ. ಅದರ ಕೃತಿಶೇಖರಣೆಯಲ್ಲಿ ಈಜಿಪ್ಟ್, ಗ್ರೀಸ್, ರೋಂ, ಪ್ರಾಚ್ಯ ದೇಶಗಳು, ಆಧುನಿಕ ಯುರೋಪ್ ಮತ್ತು ಅಮೆರಿಕದ ಕಲಾಮಾದರಿಗಳಿವೆ. ಚೀನಿ, ಜಪಾನಿ, ಈಸ್ಟ್ ಇಂಡಿಯನ್, ಈಜಿಪ್ಷಿಯನ್ ಕಲಾಕೃತಿಗಳ ಮಾದರಿಗಳು ಅಲ್ಲಿನ ಪ್ರಮುಖ ಶೇಖರಣೆಯೆನಿಸಿವೆ. ಈ ಸಂಸ್ಥೆಯಲ್ಲಿ ಸಂಗ್ರಹವಾಗಿರುವ ಅಚ್ಚುಕಲೆಯ ವಸ್ತುಗಳು ಅಮೆರಿಕದಲ್ಲೆಲ್ಲ ಪ್ರಥಮ ಸ್ಥಾನಗಳಿಸಿವೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಸಿದ್ಧ ಫಾಗ್ ಆರ್ಟ್ ವಸ್ತುಸಂಗ್ರಹಾಲಯದಲ್ಲಿ ಗಮನಾರ್ಹವಾದ ಅಚ್ಚು ಕಲೆಗಾರಿಕೆಯ ವಸ್ತುಗಳು, ಹೆಸರಾಂತ ಚಿತ್ರಕಾರರ ಚಿತ್ರಗಳು, ರೇಖಾಚಿತ್ರಗಳು ಮತ್ತು ಇಟಲಿ ಕಲಾಸಂಪ್ರದಾಯದ ಚಿತ್ರಗಳು ಇವೆ.
ವಾಷಿಂಗ್ಟನ್ (ಡಿ.ಸಿ.) ಮಹಾನಗರದಲ್ಲಿ ಕೆಲವು ಮುಖ್ಯ ಕಲಾಮಂದಿರಗಳಿವೆ. ಅವುಗಳಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ಕಲಾಮಂದಿರವೂ ಒಂದು. ಈ ಕಲಾ ಶಾಲೆಯಲ್ಲಿ ಅಮೆರಿಕದ ಪ್ರಸಿದ್ಧ ಬ್ಯಾಂಕ್ ಮಾಲಿಕನೂ ಪ್ರಜಾಹಿತೈಷಿಯೂ ಆದ ಮೆಲನ್ ಸಂಗ್ರಹಿಸಿದ್ದ ಚಿತ್ರಗಳಿವೆ. ಈ ಚಿತ್ರಗಳಲ್ಲಿ ಮುಖ್ಯವಾಗಿ ಇಟಾಲಿಯನ್ ಪ್ಲೆಮಿಷ್, ಡಚ್, ಇಂಗ್ಲಿಷ್ ಮತ್ತು ಅಮೆರಿಕನ್ ಕಲಾಶೈಲಿಯ ಚಿತ್ರಗಳೇ ಹೆಚ್ಚು. ವಾಷಿಂಗ್ಟನ್ನಿನ ಮತ್ತೊಂದು ಪ್ರಮುಖ ಕಲಾಮಂದಿರ ಫ್ರೀರ್ ಗ್ಯಾಲರಿ ಆಫ್ ಆರ್ಟ್. ಇದು ಸ್ಮಿತ್ ಸನ್ ಎಂಬ ಆಂಗ್ಲನ ಅಂತಿಮ ಇಷ್ಟಪತ್ರದಂತೆ ಸ್ಥಾಪಿತವಾದ ಸ್ಮಿತ್ ಸೋನಿಯನ್ ಸಂಸ್ಥೆಯ ಅಂಗವಾಗಿದೆ. ಇದರಲ್ಲಿ ಮುಖ್ಯವಾಗಿ ಏಷ್ಯಖಂಡದ ಅತ್ಯುತ್ತಮ ಕಲಾವಸ್ತುಗಳಿವೆ. ಪಾರಸಿ, ಮಹಮದೀಯ ಮತ್ತು ಬಿeóÁಂಟಿನ್ ಕಲೆಯನ್ನು ಪ್ರತಿನಿಧಿಸುವ ಕೃತಿಗಳೇ ಅಲ್ಲಿ ಹೆಚ್ಚು. ಫಿಲಡೆಲ್ಫಿಯ ನಗರದ ಪೆನ್ಸಿಲ್ವೇನಿಯ ಮ್ಯೂಸಿಯಂ ಕಲಾಭವನದಲ್ಲಿ ಇಡೀ ಯುರೋಪ್, ಅಮೆರಿಕ ಮತ್ತು ಪ್ರಾಚ್ಯ ದೇಶಗಳ ಕಲಾವಸ್ತುಗಳಿವೆ.
ಕ್ಲೀವ್ಲೆಂಡ್ ನಗರದ ಕ್ಲೀವ್ಲೆಂಡ್ ಮ್ಯೂಸಿಯಂ ಆಫ್ ಆರ್ಟ್ ಕಲಾಮಂದಿರ ಅಮೆರಿಕದಲ್ಲೆಲ್ಲ ಪ್ರಸಿದ್ಧವಾದ ಕಲಾವಸ್ತು ಸಂಗ್ರಹ ಸಂಸ್ಥೆಯಾಗಿದೆ. ಅದರ ಸ್ಥಿರ ಸಂಗ್ರಹದಲ್ಲಿ ಈಜಿಪ್ಟಿನ ಕಲೆಗೂ ಪಾಶ್ಚಾತ್ಯ ದೇಶಗಳ, ಗ್ರೀಕ್ ಮತ್ತು ಲ್ಯಾಟಿನ್ ಸಂಪ್ರದಾಯದ, ಮಧ್ಯಯುಗದ ಶೈಲಿ ಮತ್ತು ಆಧುನಿಕ ಶೈಲಿಯ ಕಲೆಗೂ ಸಂಬಂಧ ಪಟ್ಟ ಕಲಾಕೃತಿಗಳಿವೆ.
ಶಿಕಾಗೊ ನಗರದ ಆರ್ಟ್ ಇನ್ಸ್ಟಿಟ್ಯೂಟ್ ಕಲಾಮಂದಿರ ಲೋಕಪ್ರಸಿದ್ಧವಾದುದು. ಅದರಲ್ಲಿ ಸಂಗ್ರಹವಾಗಿರುವ ಕಲಾವಸ್ತುಗಳಲ್ಲಿ ಜಪಾನಿ ಅಚ್ಚುಕಲೆಯ ವಸ್ತುಗಳು, ಪ್ರಾಚ್ಯ, ಗ್ರೀಕ್ ಮತ್ತು ಲ್ಯಾಟಿನ್ ಸಂಪ್ರದಾಯದ ಕಲಾಕೃತಿಗಳು ಸೇರಿವೆ.
ಕೆನಡ
ಬದಲಾಯಿಸಿಒಟ್ಟಾವ ನಗರದ ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ ಕಲಾಮಂದಿರ ಅಲ್ಲಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸೇರಿದೆ. ಅಲ್ಲಿ ಸಂಗ್ರಹವಾಗಿರುವ ಕಲಾಕೃತಿಗಳಲ್ಲಿ ಐರೋಪ್ಯ ಕಲೆಯ ಎಲ್ಲ ಕಾಲಗಳಿಗೂ ಸಂಬಂಧಿಸಿದ ಶಿಲ್ಪರಚನೆಗಳೂ, ಚಿತ್ರಗಳು ಹಾಗೂ ರೇಖಾಚಿತ್ರಗಳಿರುವುವಲ್ಲದೆ ಕೆನಡ ರಾಷ್ಟ್ರದ ಸಮಕಾಲೀನ ಪ್ರಸಿದ್ಧ ಕಲೆಗಾರರ ಕಲಾಕೃತಿಗಳ ಮಾದರಿಗಳೂ ಇವೆ.
ಜಪಾನ್
ಬದಲಾಯಿಸಿಟೋಕಿಯೊ ನಗರದಲ್ಲಿ ಸಾರ್ವಭೌಮರ ಅರಮನೆಗೆ ಸೇರಿದ್ದ ಹಿಂದಿನ ವಸ್ತುಸಂಗ್ರಹಾಲಯಕ್ಕೆ ಬದಲಾಗಿ ಈಗ ಟೋಕಿಯೊ ರಾಷ್ಟ್ರೀಯ ವಸ್ತುಸಂಗ್ರಹಾಲಯವಿದೆ. ಅದರಲ್ಲಿ ಚಿತ್ರಕಲೆ, ಶಿಲ್ಪ, ಅರಗಿನ ಮೆರುಗು ಕೆಲಸ ಮೊದಲಾದ ಕಲೆಗಳೂ ಸೇರಿದ ಹಾಗೆ ಜಪಾನಿನ ಕಲೆಯನ್ನು ಪ್ರತಿನಿಧಿಸುವ ಅತ್ಯುತ್ತಮ ವಸ್ತುಗಳಿವೆ.
ಕ್ಸೋಟೊ ನಗರಾಡಳಿತ ಸಂಸ್ಥೆಯ ವಸ್ತುಸಂಗ್ರಹಶಾಲೆಯಲ್ಲಿ ಜಪಾನಿನ ಪ್ರಾಚೀನ ಕಲೆಗೆ ಸಂಬಂಧಿಸಿದ ವಸ್ತುಗಳಿವೆ.
ನಾರಾ ನಗರದ ರಾಷ್ಟ್ರೀಯ ವಸ್ತುಸಂಗ್ರಹಮಂದಿರದಲ್ಲಿ ಜಪಾನಿನ ಪ್ರಾಚೀನ ಕಲೆಗೆ ಸಂಬಂಧಪಟ್ಟ ಅತ್ಯಮೂಲ್ಯ ವಸ್ತುಗಳಿವೆ. ಈ ನಗರದ ಹೊರ್ಯೂಜಿ ದೇವಾಲಯ ಅದರ ಮನೋಹರವಾದ ಕಲಾಕೃತಿಗಳಿಗೆ, ಅದರಲ್ಲೂ ಚಿತ್ರಕಲೆಗೆ ಪ್ರಸಿದ್ಧವಾಗಿದೆ. ಷೋಸೋಇನ್ ಐಶ್ವರ್ಯದ ಗಣಿ ಎಂಬ ಕಲಾಮಂದಿರದಲ್ಲಿ ಜಪಾನಿನ ಪ್ರಾಚೀನ ಕಲೆಗೆ ಸಂಬಂಧಿಸಿದ ಕಲಾವಸ್ತುಗಳಿವೆ.
ಮೇಲ್ಕಂಡ ರಾಷ್ಟ್ರಗಳಲ್ಲದೆ ಚೀನ, ಆಸ್ಟ್ರೇಲಿಯ, ನ್ಯೂಜಿûಲೆಂಡ್, ದಕ್ಷಿಣ ಆಫ್ರಿಕ ಹಾಗೂ ದಕ್ಷಿಣ ಅಮೆರಿಕದ ಬ್ರೆಜಿûಲ್ ಮತ್ತು ಅರ್ಜೆಂಟೈನ ರಾಜ್ಯಗಳು ಸಹ ತಮ್ಮದೇ ಆದ ಕಲಾಮಂದಿರಗಳನ್ನು ಹೊಂದಿವೆ.
ಕಲಾಮಂದಿರಗಳ ಆಡಳಿತ
ಬದಲಾಯಿಸಿಕಲಾಮಂದಿರಗಳನ್ನು ಒಬ್ಬ ಮೇಲ್ವಿಚಾರಕ ನೋಡಿಕೊಳ್ಳುತ್ತಾನೆ. ಸಾಮಾನ್ಯವಾಗಿ ಆತ ಕಲಾಮಂದಿರಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ತಜ್ಞನಾಗಿರುತ್ತಾನೆ. ಅವನಿಗೆ ನೆರವಾಗಿ ಆವಶ್ಯಕವಾದಷ್ಟು ಮಂದಿ ತಂತ್ರಜ್ಞರು ಹಾಗೂ ಕಾರಕೂನರು ಇರುತ್ತಾರೆ. ವಿಶ್ವದ ಅನೇಕ ಕಲಾಮಂದಿರಗಳನ್ನು ಆಯಾ ದೇಶದ ಸರ್ಕಾರಗಳೇ ನಡೆಸಿಕೊಂಡು ಬರುತ್ತಿವೆ. ಕೆಲವು ಕಲಾಮಂದಿರಗಳು ಖಾಸಗಿ ಸಂಸ್ಥೆಗಳ ಮೇಲ್ವಿಚಾರಣೆಗೆ ಒಳಪಟ್ಟಿರುತ್ತವೆ ಇಲ್ಲವೆ ನ್ಯಾಸಮಂಡಲಿಗಳ ಆಡಳಿತದಲ್ಲಿ ನಡೆಯುತ್ತವೆ. ಉದಾ: ಕೋಲ್ಕತದ ಇಂಡಿಯನ್ ಮ್ಯೂಸಿಯಂ, ಹಾಗೂ ಬಾಸ್ಟನ್ ಮ್ಯೂಸಿಯಂ ಆಫ್ ಫೈನ್ ಆಟ್ರ್ಸ್. ದೊರಕುವ ಕಲಾವಸ್ತುಗಳನ್ನು ಶೇಖರಿಸಿಕೊಳ್ಳುವುದೇ ಕಲಾಮಂದಿರಗಳ ಪ್ರಮುಖ ಚಟುವಟಿಕೆ. ಕೆಲವು ಕಲಾಮಂದಿರಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ದೇಶಗಳ ಕಲಾಮಂದಿರಗಳಲ್ಲಿ ಖಾಸಗಿ ಜನರ ಕೊಡುಗೆ ವಸ್ತುಸಂಗ್ರಹವನ್ನು ಹೆಚ್ಚಿಸಿದೆ. ಕೆಲವು ಸಂದರ್ಭಗಳಲ್ಲಿ ವಿಶೇಷವಾಗಿ ಸರ್ಕಾರದ ನಿಯಂತ್ರಣಕ್ಕೊಳಪಟ್ಟು ಸರ್ಕಾರದಿಂದ ಧನಸಹಾಯ ಪಡೆವ ಕಲಾಮಂದಿರಗಳಲ್ಲಿ, ಕಲಾತ್ಮಕ ವಸ್ತುಗಳನ್ನು ನಿಯತ ಕಾಲಗಳಲ್ಲಿ ಜಾಹೀರಾತಿನ ಮೂಲಕ ಇಲ್ಲವೆ ಕಲಾಸಂಘಗಳ ಮೂಲಕ ಆಹ್ವಾನಿಸಿ, ಪರೀಕ್ಷಿಸಿ ಅರಿಸಿಕೊಳ್ಳಲು ಸಮಿತಿಗಳು ನೇಮಕವಾಗಿವೆ. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಕಲಾಕೃತಿಗಳನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರದಲ್ಲಿ ಕಲಾವಸ್ತುಗಳನ್ನು ಕೊಳ್ಳುವ ರಾಷ್ಟೀಯ ಸಮಿತಿಯೊಂದು ಏರ್ಪಟ್ಟಿದೆ. ಇದೇ ರೀತಿ ಚೆನ್ನೈನಲ್ಲಿರುವ ನ್ಯಾಷನಲ್ ಆರ್ಟ್ ಗ್ಯಾಲರಿ ಕಲಾಮಂದಿರಕ್ಕೆ ಕಲಾಕೃತಿಗಳನ್ನು ಪಡೆದುಕೊಳ್ಳಲು ಮದ್ರಾಸಿನಲ್ಲಿ ಕಲಾಮಂದಿರದ ಸಮಿತಿಯೊಂದಿದೆ. ಕಲಾಮಂದಿರಗಳ ನಿಧಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ವೀಕ್ಷಕರ ಭೇಟಿಯನ್ನು ಕ್ರಮಗೊಳಿಸಲು ಅನೇಕ ರಾಷ್ಟ್ರಗಳಲ್ಲಿ, ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ, ಪ್ರವೇಶಧನವನ್ನು ವಿಧಿಸುವ ಪದ್ಧತಿ ಇದೆ. (ಪಿ.ಆರ್.ಎಸ್.)