ಕರ್ಮಯೋಗಿ
ಕರ್ಮಯೋಗಿ ಸಿದ್ಧರಾಮ ಕೃತಿ ಬಗ್ಗೆ ಜಿ.ಎಸ್.ಎಸ್ ಅವರ ಮೊದಲ ಮಾತು
ಬದಲಾಯಿಸಿಇದು ನನ್ನ ಮೊದಲ ಗದ್ಯಕೃತಿ. ಇದರಲ್ಲಿ ಚಿತ್ರಿತವಾಗಿರುವುದು ಸುಮಾರು ೮೦೦ವರ್ಷಗಳ ಹಳೆಯ ಕಥಾವಸ್ತು. ನಾನು ಕವಿ ರಾಘವಾಂಕನ " ಸಿದ್ಧರಾಮ ಚರಿತ" ಓದಿದಾಗ ರಾಘವಾಂಕ ದರ್ಶಿಸಿರುವ, ಚಿತ್ರಿಸಿರುವ "ಕರ್ಮಯೋಗಿ ಸಿದ್ಧರಾಮನ" ಚಿತ್ರ ನನ್ನ ಮನವನ್ನು ಸೂರೆಗೊಂಡಿತು. ಮಹಾವ್ಯಕ್ತಿಯ ಚಿತ್ರಣಕ್ಕೆ ಅಂದಿನ ಸಂಪ್ರದಾಯಕ್ಕೆ, ಪೌರಾಣಿಕತೆಯ ತೊಡವುಗಳನ್ನು ಕಳಚಿ, ಅಲ್ಲಿ ಇಲ್ಲಿ ಕೊಂಚ ಮಾರ್ಪಾಡು ಮಾಡಿ ಇದನ್ನು ರಚಿಸಿದೆ. ೧೨ನೇ ಶತಮಾನದಲ್ಲಿ ಶಿವಶರಣರು ಶ್ರಮದಾನ, ಸ್ವಯಂಸೇವೆಯನ್ನು ಕಾರ್ಯರೂಪಕ್ಕೆ ತಂದಿದ್ದರು. ಆ ಕಾಲಘಟ್ಟದ 'ಕಾಯಕ ಪ್ರತಿನಿಧಿ'ಯಾಗಿ ಸಿದ್ಧರಾಮ ನಿಲ್ಲತ್ತಾನೆ. ಹಲವು ಹೊಸ ಸನ್ನಿವೇಶ ಸೃಷ್ಟಿಯಲ್ಲಿ ಇದೊಂದು ವಿಶಿಷ್ಟ ವಿನೂತನ ಕೃತಿ.
ಸಿದ್ಧರಾಮನ ಇತಿವೃತ್ತ
ಬದಲಾಯಿಸಿ- ಸಿದ್ಧರಾಮನ ತಾಯಿ ಸುಗ್ಗವ್ವೆ ಮಗು ಹುಟ್ಟುವ ಮೊದಲೇ ಒಂದು ಸುಂದರ ಕನಸನ್ನು ಕಾಣುತ್ತಾಳೆ. ಅದರಲ್ಲಿ- ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮೀ, ಸರಸ್ವತಿ, ಪಾರ್ವತಿಯರು ದೇವಕನ್ನಿಕೆಯರೊಡಗೂಡಿ ಸುಗ್ಗವ್ವೆ ಮನೆಗೆ ಬಂದು ಆಕೆಯ ಬಳಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮಂಜುಳರಾಗದಲ್ಲಿ ಜೋಗುಳ ಹಾಡಿ, ಮಗುವಿಗೆ "ಸಿದ್ಧರಾಮ" ಎಂದು ಹೆಸರಿಡುತ್ತಾರೆ.
- ಆ ಸಂದರ್ಭದಲ್ಲಿ ಗುರು ರೇವಣಾಚಾರ್ಯರು ಸುಗ್ಗವ್ವೆ ಬಳಿಗೆ ಬಂದು ಅವಳಿಗೆ ನಮಸ್ಕರಿಸಿ- 'ನಿನ್ನದು ಪವಿತ್ರ ಗರ್ಭ. ಸುಖ-ದುಃಖ, ಶೀತ-ಉಷ್ಣ, ಹಗೆ-ಕೆಳೆ, ಹರುಷ-ವಿಷಾದ, ನಿಂದೆ-ಸ್ತುತಿ, ಹಗಲು-ಇರುಳು, ಮೃದು-ಕಠಿಣ ಎಂಬ ಯಾವ ದ್ವಂದ್ವವೂ ಇಲ್ಲದ ಸಮದರ್ಶಿತ್ವದ ಅಪ್ರತಿಮ ಶಿವಯೋಗಯುತನೊಬ್ಬ ನಿನ್ನ ಬಸಿರಿನಿಂದ ಜನಿಸುತ್ತಾನೆಂದು ಹೇಳಿರುತ್ತಾರೆ.
ಸಿದ್ಧರಾಮನ ಹುಟ್ಟು/ಬಾಲ್ಯ
ಬದಲಾಯಿಸಿ- ಮುದ್ಧಗೌಡ ಮತ್ತು ಸುಗ್ಗವ್ವೆಗೆ ಸುಮಾರು ೫೦ವರ್ಷಗಳಾದ ಮೇಲೆ ತೇಜಸ್ವಿಯಾದ ಗಂಡು ಮಗುವೊಂದು ಜನಿಸುತ್ತದೆ. ಸಿದ್ಧರಾಮ ಮುದ್ಧಗೌಡ ಮತ್ತು ಸುಗ್ಗವ್ವೆಯರಲ್ಲಿ ತಾರುಣ್ಯದ ರಾಗ-ದ್ವೇಷ, ಕಾಮ-ಕ್ರೋಧಗಳು ವಿಜೃಂಭಿಸುವಾಗ ಹುಟ್ಟದೆ, ಅರಿಷಡ್ವರ್ಗಗಳೆಲ್ಲ ಶರೀರದಲ್ಲಿ ಆರುತ್ತಾ, ಪ್ರೇಮದಿಂದ ಪಕ್ವಗೊಂಡ ಅಪರ ವಯಸ್ಸಿನ ದೇಹದಲ್ಲಿ ಹುಟ್ಟುತ್ತಾನೆ.
- ಮಗುವಿಗೆ ತಾಯಿ ಸಿದ್ಧರಾಮನೆಂಬ ಹೆಸರಿಡಬೇಕೆಂದರೆ, ತಂದೆ ಮಗನಿಗೆ 'ಧೂಳಿಮಾಕಾಳ'ನೆಂದು ಹೆಸರಿಡಲು ಆಲೊಚಿಸುತ್ತಾನೆ. ಸಿದ್ಧರಾಮ ಬಾಲ್ಯದಲ್ಲಿ ಮೌನದ ಅಪರಾವತಾರವೇ ಆಗಿದ್ದ. ಅವನೊಳಗಿನ ತೇಜಸ್ಸು 'ತಿಲದೊಳಗಿನ ತೈಲದಂತೆ, ಹಾಲಿನ ಮರೆಯ ತುಪ್ಪದಂತೆ' ಅಂತರಂಗದಲ್ಲಿ ಸುಪ್ತವಾಗಿದ್ದು, ಮೆಲ್ಲ ಮೆಲ್ಲನೆ ಮಾವಿನ ಮರದಡಿಯಲ್ಲಿ ಪಶುಪತಿಯ ಆರಾಧನೆಯೊಂದಿಗೆ ವಿಕಾಸಗೊಳ್ಳುತ್ತಾ ಸಾಗುತ್ತದೆ.
ಮಲ್ಲಯ್ಯನ ದರ್ಶನ
ಬದಲಾಯಿಸಿ- 'ಶ್ರೀಶೈಲ'ವೆಂಬ ಹೆಸರು ಸಿದ್ಧರಾಮನ ಮೈಯಲ್ಲಿ ಪುಳಕವನ್ನು ಉಂಟುಮಾಡುತ್ತದೆ. ಒಮ್ಮೆ ಸಿದ್ಧರಾಮ ಗೆಳೆಯರೊಂದಿಗೆ ಹಸುಗಳನ್ನು ಮೇಯಿಸುವಾಗ ಮಲ್ಲಯ್ಯನೆಂಬ ವ್ಯಕ್ತಿ ಅವನ ಬಳಿಗೆ ಬಂದು, ನೀನು ನಿನ್ನ ತಾಯಿಯಿಂದ ಬುತ್ತಿ ಕಟ್ಟಿಸಿಕೊಂಡು ಬಾ ನಿನ್ನನ್ನು ಶ್ರೀಶೈಲಕ್ಕೆ ಕರೆದೊಯ್ಯುತ್ತೇನೆಂದು ಭರವಸೆ ಕೊಟ್ಟಾಗ ,ಸಿದ್ಧರಾಮನಿಗೆ ಮಲ್ಲಯ್ಯ ಜನ್ಮಾಂತರದ ಬಂಧು ಎನ್ನಿಸಿ ಏನೊಂದು ಯೋಚಿಸದೆ ಅವನೊಡನೆ ಶ್ರೀಶೈಲಕ್ಕೆ ಹೋಗಲು ತಾನೇ ನಿರ್ಧರಿಸುತ್ತಾನೆ.
- ಆಗ ಅವನ ವಯಸ್ಸು ಕೇವಲ ೧೬ವರ್ಷ. ತಾಯಿಯ ಅಕ್ಕರೆ, ಮಮತೆ, ಮಮಕಾರ ತಹತಹಿಕೆ ಸಿದ್ಧರಾಮನಿಗೆ ಅರ್ಥವಾದರೂ ಅವನು ಗಟ್ಟಿ ಮನಸ್ಸು ಮಾಡಿ, ಆಕೆಯಿಂದ ಬುತ್ತಿ ಕಟ್ಟಿಸಿಕೊಂಡು ಬಂದು ಮಲ್ಲಯ್ಯನನ್ನು ಹುಡುಕುತ್ತಾನೆ. ಮಲ್ಲಯ್ಯ ಅವನ ಕಣ್ಣಿಗೆ ಬೀಳುವುದಿಲ್ಲ. ತಾಯಿಯ ಕಾಣದೆ ಕಂಗೆಟ್ಟ ಶಿಶುವಿನಂತಾದ ಸಿದ್ಧರಾಮ ಮಲ್ಲಯ್ಯನನ್ನು ಅರಸುತ್ತಾ ಹೊರಡುತ್ತಾನೆ.
ಶ್ರೀಶೈಲ ಗಿರಿಯತ್ತ ಪಯಣ
ಬದಲಾಯಿಸಿ- ಮಲ್ಲಯ್ಯನನ್ನು ಹುಡುಕುತ್ತಾ ಸಿದ್ಧರಾಮ ಶ್ರೀಶೈಲದ ಹಾದಿ ಗೊತ್ತಿಲ್ಲದಿದ್ದರೂ ಕಾಡು-ಮೇಡು ಅಲೆಯುವಾಗ, ಯಾತ್ರಿಕರ ತಂಡವೊಂದು ಸಿದ್ಧರಾಮನನ್ನು ಶ್ರೀಶೈಲಕ್ಕೆ ಕರೆದೊಯ್ಯುತ್ತದೆ. ಶ್ರೀಶೈಲ ಪರ್ವತವನ್ನು ನೋಡಿದೊಡನೆ ಸಿದ್ಧರಾಮನ ಕಂಗಳಲ್ಲಿ ಆನಂದಬಾಷ್ಪ ಹರಿಯುತ್ತದೆ. ತನ್ನ ಆದರ್ಶದ ಕನಸು ನನಸಾಗಿ, ಗಿರಿಯಾಗಿ, ತಾಯಿಯ ಮಡಿಲಾಗಿ 'ನನಗಾಗಿ ಬಂದೆಯಾ ಮಗು' ಎಂದು ಕರೆದಂತಾಗುತ್ತದೆ.
- ಶ್ರೀಶೈಲ ಪರ್ವತದ ವರ್ಣನೆ ವಿಶೇಷವಾಗಿದೆ.ಸಿದ್ಧರಾಮನ ದೃಷ್ಟಿಯಲ್ಲಿ ಶ್ರೀಶೈಲದ ಸುತ್ತಮುತ್ತಲಿನ ಮರಗಳು ವಾಸ್ತವ ಲೋಕದಿಂದ ಕಲಾಜಗತ್ತಿಗೆ ಏರಿದಂತಹ ತೈಲಚಿತ್ರಗಳಾದರೆ, ಮಂಜು ಮುಸುಕಿದಬೆಟ್ಟ ಆಗ ತಾನೇ ಮಜ್ಜನ ಮಾಡಿದಂತೆ ನೂರ್ಮಡಿ ಚೆಲುವಿನಿಂದ ತುಂಬಿತ್ತು. ಸಿದ್ಧರಾಮ ಮಲ್ಲಿಕಾರ್ಜುನನನ್ನು ವಿಗ್ರಹ ರೂಪದಲ್ಲಿ ಕಂಡು ಭ್ರಮನಿರಸನಗೊಳ್ಳುತ್ತಾನೆ.
- ತಾನು ಕಂಡ ಮಲ್ಲಯ್ಯ ಇವನಲ್ಲವೆಂದು ಅಳತೊಡಗುತ್ತಾನೆ. ಯಾತ್ರಿಕರು ಅವನನ್ನು ಎಷ್ಟೇಲ್ಲಾ ಸಮಾಧಾನ ಪಡಿಸಿದರೂ ಅವನ ಮನಸ್ಸಿಗೆ ಸಮಾಧಾನವಾಗುವುದಿಲ್ಲ. ಕಾಡಿನ ದಾರಿಯಲ್ಲಿ ಮಲ್ಲಯ್ಯನನ್ನು ಕೂಗಿ ಕರೆದು ಬಸವಳಿಯುತ್ತಾನೆ. ಸೃಷ್ಟಿಯಲ್ಲಿ ಯಾವುದು ಮಲ್ಲಯ್ಯನನ್ನು ಅರಿತಂತೆ ಕಾಣುವುದಿಲ್ಲ. ಅವನ ಮನ ಶೂನ್ಯವಾಗುತ್ತದೆ.
ಮಲ್ಲಿಕಾರ್ಜುನ ಕೃಪೆ
ಬದಲಾಯಿಸಿ- ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನು ಕಾಣಲು ತವಕಿಸಿದಂತೆ ಸಿದ್ಧರಾಮ ಪ್ರಕೃತಿಯನ್ನೇಲ್ಲಾ ಮಲ್ಲಯ್ಯನನ್ನು ಕಂಡಿರಾ?, ನೀವು ಕಂಡಿರಾ? ಎಂದು ಮತ್ತೆ ಮತ್ತೆ ಪ್ರಶ್ನಿಸುತ್ತಾನೆ. ಮಲ್ಲಯ್ಯನ ದರ್ಶನವಾಗದೇ ಹೋದಾಗ ಹತಾಶನಾಗಿ - ಯಾರನ್ನು ಹುಡುಕಿಕೊಂಡು ನಾನಿತ್ತ ಬಂದೆನೊ ಆ ಮೂರ್ತಿ ದೊರೆಯದಿದ್ದಾಗ ಈ ಜೀವವಿದ್ದು ಏನು ಪ್ರಯೋಜನ?
- ಮಲ್ಲಯ್ಯನನ್ನು ಕಾಣಬೇಕು ಇಲ್ಲವೇ ಆ ಪ್ರಯತ್ನದಲ್ಲಿ ನನ್ನ ಬಾಳು ಮುಗಿಯಬೇಕೆಂದು ಆಲೋಚಿಸುತ್ತಾ ಸಿದ್ಧರಾಮ ಶ್ರೀಶೈಲದ ರುದ್ರಕಮರಿಯ ತುಟ್ಟತುದಿಗೆ ಬಂದು ನಿಲ್ಲುತ್ತಾನೆ. ಇನ್ನೇನು ಸಿದ್ಧರಾಮ ಅದರಲ್ಲಿ ಬೀಳಬೇಕೆನ್ನುವಾಗ ಶ್ರೀಶೈಲದ ಮಲ್ಲಿಕಾರ್ಜುನ ಮಲ್ಲಯ್ಯನ ರೂಪದಲ್ಲಿ ಬಂದು ಸಿದ್ಧರಾಮನಿಗೆ ದರ್ಶನವಿತ್ತು, ಕಲ್ಯಾಣಕ್ಕೆ ಹೋಗಿ 'ಚನ್ನಬಸವಣ್ಣ'ನವರಿಂದ ದೀಕ್ಷೆ ತೆಗೆದುಕೊಳ್ಳುವಂತೆ ಆಗ್ರಹಿಸಿ, ಕರ್ಮಯೋಗದ ಅನನ್ಯತೆಯನ್ನು ಪರಿಚಯ ಮಾಡಿಕೊಡುತ್ತಾನೆ.
ಕರ್ಮಯೋಗ
ಬದಲಾಯಿಸಿ- ಇಡೀ ಜಗತ್ತು ಕರ್ಮ ಮಾಡದೆ ಒಂದು ಕ್ಷಣವಾದರೂ ಬದುಕಿದೆಯೇ! ಸೂರ್ಯ-ಚಂದ್ರರ ಉದಯ, ಋತುಗಳ ಪರಿವರ್ತನೆ, ಗಾಳಿಯ ಬೀಸುವಿಕೆ, ನೀರಿನ ಹರಿಯುವಿಕೆ ಹೀಗೆ ಇಡೀ ಲೋಕವೇ ಅಖಂಡ ಚಲನೆಯಿಂದ ಕೂಡಿದೆ. ಕರ್ಮವೇ ಯೋಗ; ಯೋಗವೇ ಕರ್ಮ. ಏನೂ ಮಾಡಿದರೂ ಅದೆಲ್ಲ ಕರ್ಮ. ಕರ್ಮವೆಂದರೆ ಸಾಮಾನ್ಯ ಅರ್ಥದಲ್ಲಿ ಕೆಲಸ ಅಥವಾ ಕಾಯಕ. ಪ್ರತಿ ಕಾಯಕವೂ ಪೂಜೆಯಂತೆ.
- ಪೂಜೆ, ಪ್ರಾರ್ಥನೆ, ಭಕ್ತಿಗಳು ಮನುಷ್ಯನ ಬಾಳಿನ ಶ್ರದ್ಧೆಯನ್ನು, ಬದ್ಧತೆಯನ್ನು ಕಾಯ್ದುಕೊಳ್ಳಲು ಇರುವ ಒಂದು ವಿಧಾನ. ಯಾವಾಗ ಒಳಗಿನ ಸೆಳೆತ ಶಕ್ತಿಪೂರ್ಣವಾಗುತ್ತದೆಯೋ, ಆಗ ಹೊರಗಿನ ಸೆಳೆತಕ್ಕೆ ಮನಸ್ಸು ಸಿಕ್ಕುವುದಿಲ್ಲ. ಅನಂತವಾದ ಸುಖದ ಕನಸು ಮನಸ್ಸನ್ನು ತುಂಬಿದಾಗ, ಬಾಹ್ಯಲೋಕದ ಸುಖ ಅತ್ಯಲ್ಪವಾಗುತ್ತದೆ. ನಮ್ಮದು ಭೋಗಭೂಮಿಯಲ್ಲ ಕರ್ಮಭೂಮಿ.
- ಭೋಗಭೂಮಿಯಲ್ಲಿ ಆಗದ ಸಿದ್ಧಿ ಕರ್ಮಯೋಗದಲ್ಲಿ ಆಗುತ್ತದೆ. ಮನುಷ್ಯರು ನಾವೇ ಮಾಡುತ್ತಿದ್ದೇವೆ, ಇದು ನಮ್ಮ ಕೈಯಿಂದಲೇ ಆಗುತ್ತದೆ ಎಂಬ ಅಹಂಕಾರದಿಂದ ಹೊರಟರೆ ಏನೂ ಸಿದ್ಧಿಸುವುದಿಲ್ಲ. ಕರ್ಮ ಮಾಡಿಸುವನೊಬ್ಬ ಪ್ರತಿಯೊಬ್ಬರ ಅಂತರಂಗದಲ್ಲಿ ಸದಾ ಇರುತ್ತಾನೆ. ಭೋಗದಾಸೆ ಹಿಂಗದವನು ವಿರಕ್ತಿಯ ಹಾದಿಗೆ ಬಂದು ಇಡೀ ಜೀವನವನ್ನೇಲ್ಲ, ಬರೀ ಭೋಗಾಭಿಲಾಷೆಯ ವಿರುದ್ಧ ಹೋರಾಡುವ ತಳಮಳದಲ್ಲೇ ಕಳೆಯುವುದಕ್ಕಿಂತ ಸಂಸಾರಿಯಾಗಿ ಶಿವಯೋಗವನ್ನು ಸಾಧಿಸುವುದು ಉತ್ತಮ.
ತಾಯಿಯ ಭೇಟಿ
ಬದಲಾಯಿಸಿ- ಸಿದ್ಧರಾಮ ಕಲ್ಯಾಣಕ್ಕೆ ಹೋಗಿ 'ಚನ್ನಬಸವಣ್ಣ'ನವರಿಂದ ದೀಕ್ಷೆ ತೆಗೆದುಕೊಂಡು ಮರಳಿ ತನ್ನ ಊರಾದ ಸೊನ್ನಲಿಗೆಗೆ ಬಂದಾಗ ಸಿದ್ಧರಾಮನ ತಾಯಿ ಸುಗ್ಗವ್ವೆ ಹಿರಿಹಿರಿ ಹಿಗ್ಗುತ್ತಾಳೆ. ಕಳೆದು ಹೋಗಿದ್ಧ ಮಗ ಜೀವಸಹಿತ ಊರಿಗೆ ಬಂದು ದೇಗುಲವೊಂದರಲ್ಲಿ ವಾಸ್ತವ್ಯ ಹೂಡಿರುವನೆಂಬುದನ್ನು ತಿಳಿದಾಗ ಆಕೆ ಮಗನನ್ನು ಕಾಣಲು ಬರುತ್ತಾಳೆ.
- ಸಿದ್ಧರಾಮ ತಾಯಿಯ ಪಾದಕ್ಕೆ ನಮಸ್ಕರಿಸಿ "ಅವ್ವ ನಾನೀಗ ಶ್ರೀಶೈಲದ ಮಲ್ಲಿಕಾರ್ಜುನನ ಮಗ. ಅವನಿಗಾಗಿ ದುಡಿಯಬೇಕೆಂದು ಅಪ್ಪಣೆಯಾಗಿದೆ. ನೀವು ಅನುಮತಿ ಕೊಡಬೇಕೆಂದಾಗ" ಆ ತಾಯಿ ದಿಗ್ಮೂಢಳಾಗುತ್ತಾಳೆ. ತನ್ನ ಇಳಿ ವಯಸ್ಸಿನಲ್ಲಿ ಮಗನೊಂದಿಗೆ ಇರಬೇಕೆನ್ನುವ ಅವಳ ಆಸೆಗೆ ತಣ್ಣೀರಚಿದಂತಾಗುತ್ತದೆ. ಮಗನ ಕಾರ್ಯಕ್ಕೆ ಒಲ್ಲದ ಮನಸ್ಸಿನಿಂದ ಮೌನವಾಗಿ ಸಮ್ಮತಿಸುವಳು.
ಸೊಲ್ಲಾಪುರ/ಸೊನ್ನಲಿಗೆಯಲ್ಲಿ ದೇಗುಲ ನಿರ್ಮಾಣ
ಬದಲಾಯಿಸಿ- ದೇಹವೇ ದೇವಾಲಯ ಎಂದು ಅರಿತ ಶರಣರು, ದೇಗುಲಗಳಿಗೆ ಹೋಗುವ ಅಗತ್ಯವಿಲ್ಲ. ಗುಡಿಗಳಿರುವುದು ಸಾಮಾನ್ಯ ಜನತೆಯ ಉದ್ದಾರಕ್ಕಾಗಿ ಎಂದು ತಿಳಿದಿದ್ದ ಸಿದ್ಧರಾಮನ ಸೊನ್ನಲಿಗೆಯಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗುತ್ತಾನೆ. ದೇವಾಲಯ ಕಟ್ಟಲು ನಿಧಿ ಸಿಗುತ್ತದೆ. ಶ್ರದ್ಧೆಯಿಂದ ಕಾಯಕ ಮಾಡಿದರೆ ಅದರ ಆಗು-ಹೋಗುಗಳನ್ನು ಮಲ್ಲಯ್ಯನೇ ನೋಡಿಕೊಳ್ಳುತ್ತಾನೆ ಎಂಬುದು ಸಿದ್ಧರಾಮನ ನಂಬಿಕೆ. ದೇಗುಲದೊಂದಿಗೆ ಕೆರೆ ತೋಡಿಸುವ ಕೆಲಸ ೪೦೦೦ ಶಿಷ್ಯರಿಂದ ಆರಂಭವಾಗುತ್ತದೆ.
- ಸಿದ್ಧರಾಮ ಮಲ್ಲಯ್ಯನ ಗುಡಿ ಕಟ್ಟಲು ಶಿಷ್ಯರೊಂದಿಗೆ ಸಹಕರಿಸುತ್ತಾನೆ. ಕೆರೆ ಕಟ್ಟಿದ ನಂತರ ಜಲದೇವತೆಗಳು ಸಿದ್ಧರಾಮನ ಕನಸಿನಲ್ಲಿ ಬಂದು ನೀವು ಕಟ್ಟಿಸಿರುವ ಕೆರೆಯಲ್ಲಿ ವಾಸಿಸಲು ನಮಗೆ ಅಪ್ಪಣೆ ಕೊಡಿರೆಂದು ಕೇಳಿದಾಗ ಸಿದ್ಧರಾಮ ಪುಳಕಿತನಾಗುತ್ತಾನೆ. ದೊಡ್ಡದೊಂದು ದೇಗುಲ ಅಲ್ಲಿ ನಿರ್ಮಾಣವಾಗುತ್ತದೆ. ಮಲ್ಲಿಕಾರ್ಜುನ ದೇಗುಲ ನಿರ್ಮಾಣದಿಂದ ಸೊನ್ನಲಿಗೆಯು ಶ್ರೀಶೈಲಕ್ಕೂ ಒಂದು ಕೈ ಮಿಗಿಲಾಯಿತು. ಸಿದ್ಧರಾಮನ ಮಹಿಮೆಯಿಂದ ಅದು ಪುಣ್ಯದ ಪುಂಜವಾಗಿ, ಲಿಂಗದ ಬೀಡಾಗಿ, ಮುಕ್ತಿ ಕ್ಷೇತ್ರವಾಗಿ ಪರಿಣಮಿಸಿತು.
ಸಿದ್ಧರಾಮನ ಸತ್ವಪರೀಕ್ಷೆ/ಪವಾಡ
ಬದಲಾಯಿಸಿ- ಸೊನ್ನಲಿಗೆಯ ಜನ ಸಿದ್ಧರಾಮ ಪವಾಡ ಪುರುಷನೆಂದು ನಂಬುವುದರಲ್ಲೇ ಹೆಚ್ಚು ಖುಷಿ ಪಡುತ್ತಾರೆ.ಅವರ ದೃಷ್ಟಿಯಲ್ಲಿ ಸಿದ್ಧರಾಮ ದಿನಾ ರಾತ್ರಿ ಕೈಲಾಸಕ್ಕೆ ಹೋಗಿ, ಬೆಳಿಗ್ಗೆ ಅಲ್ಲಿಂದಲೇ ಬರೋದು.
- ಸಿದ್ಧರ ಸಿದ್ಧ ಕುಟಿಲ ವಿದ್ಯಾಸಾಗರ ಸಿದ್ಧರಾಮನ ಪವಾಡವನ್ನು ಕೇಳಿ ಬಂದು ಅವನನ್ನು ನೇರವಾಗಿ ಪರೀಕ್ಷಿಸುತ್ತಾನೆ. ಕುಟಿಲ ವಿದ್ಯಾಸಾಗರನ ಶಿಷ್ಯರು ಸಿದ್ಧರಾಮನ ಶಿಷ್ಯರನ್ನು ಸಾಯಿಸಲು ಗುಗ್ಗರಿಯಲ್ಲಿ ಭಯಂಕರ ವಿಷ ಬೆರೆಸಿಟ್ಟುರುವುದು ಸಿದ್ಧರಾಮನಿಗೆ ಗೊತ್ತಾಗುತ್ತದೆ. ಭಯಂಕರ ವಿಷ ಮಿಶ್ರಿತ ಆಹಾರವನ್ನು ಮಲ್ಲಿಕಾರ್ಜುನನ ಕೃಪೆಯಿಂದ ಸಿದ್ಧರಾಮ ಅಮೃತವನ್ನಾಗಿಸಿ ತನ್ನ ಶಿಷ್ಯರಿಗೆ ಅದನ್ನು ಹಂಚುತ್ತಾನೆ.
- ಮತ್ತೊಮ್ಮೆ ಸಿದ್ಧರಾಮ ಕೆಂಪಗೆ ಕಾದ ಪಂಚಲೋಹದ ಗುಂಡನ್ನು ಬರಿಗೈನಲ್ಲಿ ಹಿಡಿದು ತನ್ನ ಶಿಷ್ಯರಿಗೆ ತೋರಿಸುತ್ತಾನೆ.
ಅಲ್ಲಮಪ್ರಭುವಿನ ಆಗಮನ
ಬದಲಾಯಿಸಿಸೊನ್ನಲಿಗೆಗೆ ಅಲ್ಲಮಪ್ರಭು ಬಂದು ಸಿದ್ಧರಾಮನನ್ನು 'ವಡ್ಡರಾಮ'ನೆಂದು ಕರೆದು ಅವನ ಶಿಷ್ಯರ ಕೋಪಕ್ಕೆ ತುತ್ತಾಗುತ್ತಾನೆ. ಅಲ್ಲಮಪ್ರಭುವನ್ನು ಕಂಡೊಡನೆ ಸಿದ್ಧರಾಮನಿಗೆ ಅವನು ಮಾಯ, ಕೋಲಾಹಲಮೂರ್ತಿಯಾಗಿ, ಪರಮ ವೈರಾಗ್ಯ ನಿಧಿಯಾಗಿ, ಅನುಭಾವ ಮಂಟಪದ ಅಧ್ಯಕ್ಷನಾಗಿ, ರಜತಾಚಲದ ಬೆಳದಿಂಗಳ ಶಿಖರದಲ್ಲಿ, ಹಿಂದೆ ತನಗೆ ಕರ್ಮಯೋಗದ ನಿರ್ದೇಶನವನ್ನು ಕೊಟ್ಟ ಗುರುಮೂರ್ತಿಯ ನೆನಪಾಗುತ್ತದೆ. ಅಲ್ಲಮಪ್ರಭು ಸಿದ್ಧರಾಮನ ಸಂಭಾಷಣೆ ವಚನಸಾಹಿತ್ಯವಲಯದಲ್ಲಿ ಬಹಳ ಪ್ರಸಿದ್ಧವಾಗಿದೆ.
- ಅಲ್ಲಮಪ್ರಭು :ಸಿದ್ಧರಾಮ ನೆರೆಯವರಿಗಾಗಿ ಅತ್ತು ಕಣ್ಣು ಕಳೆದುಕೊಂಡಂತಿದೆ ನಿನ್ನಪರಿ! ಲೋಕವನ್ನು ನಾನು-ನೀನು ನೆಲೆಯಾಗಿ ನಿಂತು ತಿದ್ಧಿ ಸರಿಪಡಿಸುತ್ತೇವೆನ್ನುವ ಭ್ರಾಂತಿ ಏಕೆ? ನಮಗೆ ಚಳಿಯಾದರೆ ಹಚ್ಚಡ ಹೊದಿಸಬಹುದಲ್ಲದೆ; ಬೆಟ್ಟಕ್ಕೆ ಚಳಿಯಾದರೆ ಏನನ್ನು ಹೊದಿಸುತ್ತೀರಿ?
- ಸಿದ್ಧರಾಮ :ಗಾಳಿಯನ್ನು ಹುಡಿ ಹಿಡಿಯುವುದೇ ! ಪ್ರಭುವೇ? ನಾಲಗೆ ಹಲ್ಲುಗಳ ನಡುವೆ ಇದ್ದರೂ, ಅದು ಉಳಿದ ಪದಾರ್ಥಗಳಂತೆ ಕಡಿತಕ್ಕೆ ಸಿಗುವುದೇ? ಈ ಜಗತ್ತಿನಲ್ಲಿ ಶಿವಯೋಗಿ ಬಾಳಿದರೂ, ಆತ ನೀರ ನಡುವೆ ಅಂಟಿಯೂ ಅಂಟದ ಕಮಲಪತ್ರದ ಹಾಗೆ ಇರುತ್ತಾನೆ.
- ಅಲ್ಲಮಪ್ರಭು : ಎಲ್ಲರಿಗೂ ನೂರಾರು ಲೌಕಿಕ ತಾಪತ್ರಯದ ಚಿಂತೆ-ಕಂತೆಗಳು. ಎಷ್ಟು ಗುಡಿಸಿದರೂ ಕಸ ಬೀಳುತ್ತಲೇ ಇರುವ ಅರಮನೆಯ ಹಾಗೆ ಈ ಜಗತ್ತು ಇದನ್ನು ಬದಲಾಯಿಸಲು ನಿನ್ನಿಂದ ಸಾಧ್ಯವೇ ?
- ಸಿದ್ಧರಾಮ : ಕರೆ ಬರುವವರೆಗೂ ಕಾಯಕ ಮಾಡುತ್ತಲೇ ಕಾಯಬೇಕು. ಈ ಕರ್ಮ ಅನಂತ. ಯಾವ ಯಾವ ಜೀವ ಎಲ್ಲೆಲ್ಲಿ ಶ್ರದ್ಧೆಯಿಂದ ಕಾಯಕದಲ್ಲಿ ತೊಡಗುತ್ತದೊ ಅಲ್ಲಿ ಮಲ್ಲಿಕಾರ್ಜುನನಿರುತ್ತಾನೆ.
ಗುರುದೇವರ ಅನುಜ್ಞೆಯಂತೆ ಸಿದ್ಧರಾಮ ಜೀವಂತವಾಗಿ ಸಮಾಧಿಯಾಗಲು ಇಚ್ಚಿಸಿ ದೇಗುಲದ ಬಳಿಯ ಸ್ಥಳವನ್ನು ಅಯ್ಕೆ ಮಾಡಿಕೊಂಡು ಸಮಾಧಿಯಾಗುತ್ತಾನೆ.
-
Shri.Siddheshwar Temple,Solapur.
-
Shri.Siddheshwar at Siddheshwar Temple,Solapur
ಪೂರಕ ಮಾಹಿತಿ
ಬದಲಾಯಿಸಿ- ಕರ್ಮಯೋಗಿ - ಡಾ.ಜಿ.ಎಸ್.ಶಿವರುದ್ರಪ್ಪ
ಉಲ್ಲೇಖಗಳು
ಬದಲಾಯಿಸಿ
ಬಾಹ್ಯಕೊಂಡಿಗಳು
ಬದಲಾಯಿಸಿ- ↑ ಸಿದ್ಧರಾಮೇಶ್ವರರ ಆದರ್ಶ ಸಾರ್ವಕಾಲಿಕ
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-18.
- ↑ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವ
- ↑ http://www.prajavani.net/article/%E0%B2%95%E0%B3%86%E0%B2%B0%E0%B3%86%E0%B2%97%E0%B3%86-%E0%B2%A8%E0%B3%80%E0%B2%B0%E0%B3%81-%E0%B2%AA%E0%B2%BE%E0%B2%9F%E0%B3%80%E0%B2%B2
- ↑ ಶರಣರು ಜಾತಿಗೆ ಸೀಮಿತ: ಬುಳ್ಳಾ ಬೇಸರ
- ↑ "ಆರ್ಕೈವ್ ನಕಲು". Archived from the original on 2013-01-19. Retrieved 2015-06-18.
- ↑ ಸಿದ್ಧರಾಮೇಶ್ವರ ಕಾಯಕ ಪುರುಷ
- ↑ http://www.prajavani.net/article/%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%B0%E0%B2%BE%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%95%E0%B2%BE%E0%B2%AF%E0%B2%95-%E0%B2%AA%E0%B3%81%E0%B2%B0%E0%B3%81%E0%B2%B7
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-06-18.