ಕರ್ನಾಟಕ ಚಿತ್ರಕಲಾ ಪರಿಷತ್ತು

ಕರ್ನಾಟಕ ಚಿತ್ರಕಲಾ ಪರಿಷತ್ತು : ಬೆಂಗಳೂರಿನ ಪ್ರತಿಷ್ಠಿತ ಕಲಾ ಶಾಲೆ. ಚಿತ್ರಕಲಾ ಪ್ರದರ್ಶನ, ಪ್ರಚಾರ, ಶಿಕ್ಷಣ, ಕಲಾವಿದರ ಸಂಘಟನೆಯಲ್ಲಿ ತೊಡಗಿರುವ ಈ ಸಂಸ್ಥೆ 1964ರಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಪೂರ್ಣಪ್ರಮಾಣದಲ್ಲಿ ಆರಂಭವಾಯಿತು. ಇದರ ಫಲವಾಗಿ ಎಂ.ಎಸ್. ನಂಜುಂಡರಾವ್ ಅವರು ಕರ್ನಾಟಕದ ಕಲಾವಿದರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಒಂದು ಸಂಘಟನೆಯ ಆವಶ್ಯಕತೆಯನ್ನು ಅರಿತು ಮಾಜಿ ಮುಖ್ಯಮಂತ್ರಿ ಕೆ. ಹನುಮಂತಯ್ಯ ಅವರ ಪ್ರೇರಣೆ ಪ್ರೋತ್ಸಾಹದಿಂದ ಎಂ.ಆರ್ಯಮೂರ್ತಿ, ಎಸ್.ಎಸ್.ಕುಕ್ಕೆ ಯವರೊಂದಿಗೆ ಸೇರಿ 1960ರಲ್ಲಿ ಮೈಸೂರು ಪ್ರದೇಶ ಚಿತ್ರಕಲಾ ಪರಿಷತ್ತು ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿ ಆರ್ಯಮೂರ್ತಿಯವರೂ ಕಾರ್ಯದರ್ಶಿಯಾಗಿ ನಂಜುಂಡರಾವ್ ಅವರೂ ಖಚಾಂಚಿಯಾಗಿ ಇನಾಮತಿಯವರೂ ಆಯ್ಕೆಯಾಗಿದ್ದರು. ಕುಕ್ಕೆಯವರು ಉಪಾಧ್ಯಕ್ಷರಾಗಿದ್ದರು.

ಉದ್ದೇಶಗಳು ಬದಲಾಯಿಸಿ

ಈ ಸಂಸ್ಥೆಯ ಪ್ರಮುಖ ಉದ್ದೇಶಗಳು ಇಂತಿವೆ:

  1. ಭಾರತೀಯ ಚಿತ್ರಕಲೆಯ ರಕ್ಷಣೆ, ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ಅವಕಾಶಗಳನ್ನು ಕಲ್ಪಿಸುವುದು
  2. ಭಾರತೀಯ ಚಿತ್ರಕಲೆಯ ರಕ್ಷಣೆಗಾಗಿ ಕಲಾಸಂಸ್ಥೆಗಳು, ಕಲಾಕೃತಿ ಸಂಗ್ರಹಾಲಯ, ಸಾಂಸ್ಕೃತಿಕ, ಸಾಮಾಜಿಕ ಸಂಸ್ಥೆಗಳ ಸಹಕಾರದಿಂದ ಭಾರತ ಮತ್ತು ವಿದೇಶಗಳಲ್ಲಿ ಉಪನ್ಯಾಸ, ಪ್ರಾತ್ಯಕ್ಷಿಕೆ, ವಿಚಾರಸಂಕಿರಣ, ಸಮೂಹಚರ್ಚೆ ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು, ಕಲಾಕ್ಷೇತ್ರದ ನಾಮಾಂಕಿತ ಹಿರಿಯರನ್ನು ಗೌರವಿಸುವುದು.
  3. ಕಲೆಗೆ ಸಂಬಂಧಿಸಿದಂತೆ ಶಾಲೆ, ಕಾಲೇಜುಗಳನ್ನು ಬೆಂಗಳೂರು ಮತ್ತು ಕರ್ನಾಟಕದ ಇತರೆಡೆಗಳಲ್ಲಿ ತೆರೆಯುವುದು. 4 ಪುಸ್ತಕ, ನಿಯತಕಾಲಿಕೆ, ಪತ್ರಿಕೆ, ವಿಶ್ವಕೋಶ, ಡೈರೆಕ್ಟರಿ ಮುಂತಾದವುಗಳ ಪ್ರಕಟಣೆ.
  4. ಬೆಂಗಳೂರು ಮತ್ತು ಕರ್ನಾಟಕದ ಇತರ ಸ್ಥಳಗಳಲ್ಲಿ ಇಂದಿನ ಮತ್ತು ಹಿಂದಿನ ಹೆಸರಾಂತ ಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ಶಾಶ್ವತ ಕಲಾಗ್ಯಾಲರಿಗಳನ್ನು ತೆರೆಯಲು ಪ್ರೋತ್ಸಾಹಿಸುವುದು.
  5. ಕರ್ನಾಟಕದಲ್ಲಿರುವ ಕಲಾವಿದರು ಮತ್ತು ಕಲಾವಿದರ ಗುಂಪುಗಳನ್ನು ಪ್ರೋತ್ಸಾಹಿಸುವುದು. ಕಲಾವಿದರ ಕಾಲೋನಿ ನಿರ್ಮಿಸಲು, ಮನೆ ಕಟ್ಟಲು ಸರ್ಕಾರ ಮತ್ತು ಗೃಹಮಂಡಳಿಯವರು ನೀಡುವ ಸವಲತ್ತುಗಳನ್ನೂ ಸಹಾಯವನ್ನೂ ಉಪಯೋಗಿಸಿಕೊಳ್ಳುವುದು.

ಆರಂಭಿಕ ವರ್ಷಗಳು ಬದಲಾಯಿಸಿ

ಹೀಗೆ ಕಲಾವಿದರ ಸರ್ವಾಂಗೀಣ ಉನ್ನತಿಗೆ ಕಾರಣವಾಗುವ ಉದ್ದೇಶ ಇಟ್ಟುಕೊಂಡ ಈ ಸಂಸ್ಥೆಯ ಕರ್ಣಧಾರತ್ವವನ್ನು ಎಂ.ಎಸ್. ನಂಜುಂಡರಾವ್ ವಹಿಸಿದ್ದರು. ಮೊಟ್ಟ ಮೊದಲಾಗಿ ಕರ್ನಾಟಕ ಕಲಾವಿದರ ಸಮ್ಮೇಳನ ವಿಧಾನಸೌಧದ ಔತಣ ಸಭಾಂಗಣದಲ್ಲಿ ಏರ್ಪಾಡಾಯಿತು. ಈ ಸಂಸ್ಥೆ 1962ರಿಂದ ಪ್ರತಿವರ್ಷವೂ ಒಂದರಂತೆ ಸಮ್ಮೇಳನಗಳನ್ನೂ ಕಲಾಪ್ರದರ್ಶನಗಳನ್ನೂ ಏರ್ಪಡಿಸಿ ಕರ್ನಾಟಕದ ಕಲೆ ಹಾಗೂ ಕಲಾವಿದರ ಪ್ರಮುಖ ಕೇಂದ್ರವಾಗಿ ಬೆಳೆಯಿತು. ಕರ್ನಾಟಕದ, ಭಾರತದ ಮತ್ತು ವಿದೇಶೀಯ ಕಲಾವಿದರನ್ನು ಸಂಪರ್ಕಿಸಿ ಅವರ ಕಲಾಪ್ರದರ್ಶನ, ಪ್ರಾತ್ಯಕ್ಷಿಕೆ, ಚರ್ಚಾಗೋಷ್ಠಿ, ಉಪನ್ಯಾಸಗಳಿಗೆ ಅವಕಾಶ ದೊರಕಿತು.

ಸೌಲಭ್ಯಗಳು ಬದಲಾಯಿಸಿ

  • ಈ ಕಲಾಶಾಲೆಯಲ್ಲಿ ಈಗ ಪ್ರತಿವರ್ಷ ನೂರು ಕಲಾವಿದರು ರೂಪುಗೊಳ್ಳುತ್ತಾರೆ. ಇಲ್ಲಿ ಸ್ನಾತಕೋತ್ತರ ಮಟ್ಟದ ಶಿಕ್ಷಣ ಸೌಲಭ್ಯವೂ ಇದೆ. ಕಲಾವಿದ್ವಾಂಸರು ಸಂಶೋಧನೆ ಕೈಗೊಳ್ಳಲು, ಸಂಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆಯಲು ಅವಕಾಶವಿದೆ. ಹೆಸರಾಂತ ಕಲಾವಿದರೂ ಶಿಕ್ಷಕರೂ ಸಮರ್ಥ ಮಾರ್ಗದರ್ಶನ ನೀಡುತ್ತಿದ್ದಾರೆ. ಇದುವರೆಗೆ ಈ ಸಂಸ್ಥೆಯಿಂದ 1200 ಕ್ಕೂ ಹೆಚ್ಚು ಪದವೀಧರರು ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಕಲಾ ಸೇವೆಯಲ್ಲಿದ್ದಾರೆ.
  • ಶಿಲ್ಪಕಲೆ ಮತ್ತು ನಿಸರ್ಗ ಅಧ್ಯಯನಕ್ಕಾಗಿ ಬೆಂಗಳೂರಿನಿಂದ ಅಜಂತಾವರೆಗೆ 50 ಕಲಾವಿದರ ತಂಡದ ಅಧ್ಯಯನ ಪ್ರವಾಸ (1967), ದಕ್ಷಿಣ ಭಾರತದ ಜನಪದ ಕಲೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಮಲ್ಲೇಶ್ವರದ ಮೈದಾನದಲ್ಲಿ ಒಂದು ತಿಂಗಳ ಕಾಲ ನಡೆದ ಜನಪದ ವಸ್ತು - ಕಲಾಪ್ರದರ್ಶನ (1971), ಅಖಿಲಭಾರತ ಮಟ್ಟದ ಜನಪದ ಕಲಾವಿದರನ್ನು ಆಹ್ವಾನಿಸಿ ಜನಪದ ಕಲೆಯ ವಿವಿಧ ಮುಖಗಳ ಅಧ್ಯಯನಕ್ಕೆ ಅವಕಾಶ (1971) ಇವು ಈ ಸಂಸ್ಥೆಯ ಕೆಲವು ಸಾಧನೆಗಳು. ಸಂಸ್ಥೆಯ ಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಗೆ ಸಂಬಂಧಿಸಿದ ವಿವಿಧ ವಿಭಾಗಗಳ ಅಧ್ಯಯನಕ್ಕೆ ಅವಕಾಶವಿದೆ. ಶಿಲ್ಪಕಲೆಯ ಅಧ್ಯಯನಕ್ಕೂ ಸೌಲಭ್ಯಗಳಿವೆ.
  • ವಿದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ್ದ ಪ್ರಸಿದ್ಧ ಕಲಾವಿದ ಸ್ವೆತಾಸ್ಲಾವ್ ರೋರಿಕ್ ಅವರ 117 ಚಿತ್ರಕಲಾ ಕೃತಿಗಳನ್ನು ಪರಿಷತ್ತಿನಲ್ಲಿ ಶಾಶ್ವತವಾಗಿ ಪ್ರದರ್ಶಿಸಲಾಗಿದೆ. ಈ ಅಪರೂಪದ ಕೃತಿಗಳು ಕಲೆಯ ಅಧ್ಯಯನಕ್ಕೆ ಅಪಾರ ಅವಕಾಶ ಒದಗಿಸುತ್ತಿವೆ. ರೋರಿಕ್ ಗ್ಯಾಲರಿಯಲ್ಲಿ ಹಿಮಾಲಯದ ವೈವಿಧ್ಯಮಯ ಚಿತ್ರಗಳಿವೆ. ರೋರಿಕ್ ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಸಂಸ್ಥೆಯಲ್ಲಿ (ರೋರಿಕ್ ಇನ್ಸ್ಟಿಟ್ಯೂಟ್ ಆಫ್ ಫೈನ್ ಆಟ್ರ್ಸ್‌) ಚಿತ್ರಕಲೆಯ ಮೂಲಭೂತ ಅಧ್ಯಯನದ ಸೌಲಭ್ಯವೂ ಉಂಟು.

ಪ್ರದರ್ಶನಗಳು ಬದಲಾಯಿಸಿ

  • ಎಚ್.ಕೆ. ಕೆಜ್ರಿವಾಲಾ ಎಂಬುವರು ತಮ್ಮ ತಂದೆ ಸಂಗ್ರಹಿಸಿದ ಅಮೂಲ್ಯ ಕಲಾಕೃತಿಗಳೊಂದಿಗೆ ತಾವು ಸಂಗ್ರಹಿಸಿದ ಕಲಾಕೃತಿಗಳನ್ನು ಪರಿಷತ್ತಿನ ಎಚ್.ಕೆ. ಕೆಜ್ರಿವಾಲಾ ಶಾಶ್ವತ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದರಲ್ಲಿ 350 ಕಲಾಕೃತಿಗಳಿವೆ. ಕವಿ ರವೀಂದ್ರನಾಥ ಠಾಕೂರರ ಚಿತ್ರಗಳಿಂದ ಇತ್ತೀಚಿನ ಭಾರತೀಯ ಕಲಾವಿದರವರೆಗಿನ ಹಲವಾರು ಅಮೂಲ್ಯ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕಲಾಸಾಧನೆಯಲ್ಲಿ ತೊಡಗಿದ ವಿದ್ಯಾರ್ಥಿಗಳಿಗೆ 1998 ರಿಂದ ಎಚ್.ಕೆ. ಕೆಜ್ರಿವಾಲಾ ಪ್ರಶಸ್ತಿ ನೀಡಲಾಗುತ್ತಿದೆ.
  • ಇದಲ್ಲದೆ ಅಂತಾರಾಷ್ಟ್ರೀಯ ಗ್ರಾಫಿಕ್ ಕಲಾವಿದ ಕೃಷ್ಣಾರೆಡ್ಡಿ (ನೂಯಾರ್ಕ್) ಅವರ ಗ್ರಾಫಿಕ್ ಚಿತ್ರಗಳೂ ಎಸ್.ಎನ್.ಕುಕ್ಕೆಯವರ ಕಲಾಕೃತಿಗಳೂ ಇಲ್ಲಿ ಪ್ರದರ್ಶಿತವಾಗಿವೆ. ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಯ ಕೃತಿಗಳನ್ನು ವೈ.ಸುಬ್ರಹ್ಮಣ್ಯರಾಜು ಅವರ ಮಾರ್ಗದರ್ಶನದಲ್ಲಿ ಪುನರುಜ್ಜೀವನಗೊಳಿಸಿ ಪ್ರದರ್ಶನಕ್ಕಿಡಲಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಹಿಂದೆ ಪ್ರಚಲಿತವಿದ್ದ ತೊಗಲುಗೊಂಬೆಗಳನ್ನು ಸಂಗ್ರಹಿಸಿ, ರಕ್ಷಿಸಿ ಪ್ರದರ್ಶಿಸಲಾಗುತ್ತಿದೆ.
  • ಸಮಕಾಲೀನ ಶಿಲ್ಪಕಲೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೂರು ಗ್ಯಾಲರಿಗಳಲ್ಲಿ ಖಾಯಂ ಶಿಲ್ಪಕಲಾ ಪ್ರದರ್ಶನ ಏರ್ಪಡಿಸಿದೆ. ಕರ್ನಾಟಕ, ಭಾರತೀಯ, ವಿದೇಶೀಯ ಕಲಾವಿದರ ಚಿತ್ರಗಳನ್ನು ಪ್ರದರ್ಶಿಸಲು ನಿರ್ದಿಷ್ಟ ಕಾಲಾವಧಿಯ ಪ್ರದರ್ಶನಕ್ಕೂ ಗ್ಯಾಲರಿಗಳ ಸೌಲಭ್ಯವಿದೆ. ಇಲ್ಲಿ ಪ್ರತಿನಿತ್ಯ ಬೇರೆ ಬೇರೆ ಕಲಾವಿದರ ಕಲಾ ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ.
  • ಇಲ್ಲಿ ಚಿತ್ರಕಲೆ-ಶಿಲ್ಪ-ಇತಿಹಾಸಗಳಿಗೆ ಸಂಬಂಧಿಸಿದ ಹತ್ತುಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳ ಸಂಗ್ರಹವುಂಟು. ಭಾರತದ ಮತ್ತು ವಿದೇಶದ ತಜ್ಞರು ಬರೆದ ಅಮೂಲ್ಯ ಗ್ರಂಥ ಭಂಡಾರ ವಿದ್ಯಾರ್ಥಿಗಳ ಸಂಶೋಧನೆ, ಅಧ್ಯಯನಗಳಿಗೆ ಉಪಯುಕ್ತವೆನಿಸಿದೆ. ಚಿತ್ರಕಲಾ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ವಿಭಾಗ ಲಘು ಅವಧಿ ಹಾಗೂ ದೀರ್ಘ ಅವಧಿಗಳ ಸಂಶೋಧನ ಪರಿಯೋಜನೆಗಳನ್ನು ಆರಂಭಿಸಿ ಉಪನ್ಯಾಸ, ಚರ್ಚಾಗೋಷ್ಠಿ, ಕಾರ್ಯಾಗಾರ, ವಿಚಾರಸಂಕಿರಣಗಳ ಮೂಲಕ ಹೊಸ ಹೊಸ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತಿದೆ.
  • ತುಂಬ ಹಳೆಯ, ಮಾಸಿ ಹೋದ, ಬಣ್ಣಗೆಟ್ಟ ಕಲಾಕೃತಿಗಳನ್ನು ಪುನರುಜ್ಜೀವನಗೊಳಿಸುವ ವಿಭಾಗವೂ ಇಲ್ಲುಂಟು. ತರುಣ ಕಲಾವಿದರಿಂದ ಹಿರಿಯ ಕಲಾವಿದರವರೆಗೆ ಎಲ್ಲರನ್ನೂ ಪ್ರೋತ್ಸಾಹಿಸಲು, ಅವರ ಕಲಾಪ್ರದರ್ಶನಕ್ಕೆ ಅನುವು ಮಾಡಿಕೊಡಲು ಇಲ್ಲಿ ಐದು ಗ್ಯಾಲರಿಗಳನ್ನು ಕಾದಿರಿ ಸಲಾಗಿದೆ. ಪರಿಷತ್ತಿನ ಖಾಯಂ ಪ್ರದರ್ಶನ ಗ್ಯಾಲರಿಯಲ್ಲಿ ಪ್ರಸಿದ್ಧ ಚಿತ್ರಕಾರರಾದ ಜೆಮಿನಿ ರಾಯ್, ಅವನೀಂದ್ರನಾಥ ಟಾಗೋರ್, ಗಣನೇಂದ್ರ ಠಾಕೂರ್, ನಂದಲಾಲಬೋಸ್, ರಾಯ್ ಚೌಧರಿ, ಅಬ್ದುಲ್ ರೆಹಮಾನ್, ಕೆ.ಕೆ.ಹೆಬ್ಬಾರ್, ಚುಗತ್ತಾಯ, ಅಮೃತಾ ಶೇರ್ಗಿಲ್, ಜಿ.ಎಸ್.ಶೆಣೈ, ಜೆ.ಎಸ್.ಖಂಡೇರಾವ್, ರಮೇಶ್ರಾವ್, ಎಂ.ಎಸ್. ಚಂದ್ರಶೇಖರ್, ಸುಬ್ರಹ್ಮಣ್ಯರಾಜು, ಕೇಶವಯ್ಯ, ಎಸ್.ಎನ್.ಸ್ವಾಮಿ, ಪಿ.ಆರ್.ತಿಪ್ಪೇಸ್ವಾಮಿ ಮೊದಲಾದವರ ಚಿತ್ರಗಳಿವೆ.

ಮುಂದಿನ ಯೋಜನೆಗಳು ಬದಲಾಯಿಸಿ

  • ಮುಂದಿನ ಯೋಜನೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಚಿತ್ರಪ್ರದರ್ಶನದ ಗ್ಯಾಲರಿಗಳನ್ನೂ ಕರ್ನಾಟಕದವರದೇ ಒಂದು ಗ್ಯಾಲರಿಯನ್ನೂ ನಿರ್ಮಿಸುವ ವಿಚಾರವಿದೆ. ಅದಕ್ಕಾಗಿ ಚಿತ್ರಗಳ ಸಂಗ್ರಹಕಾರ್ಯ ನಡೆದಿದೆ. ಪರಿಷತ್ತಿನ ಕಟ್ಟಡ 1988ರಲ್ಲಿ ಕಟ್ಟಿ ಮುಗಿದ ಅನಂತರ ಅದರ ಎರಡನೆಯ ಹಂತದ ಕಟ್ಟಡ ವಿಸ್ತರಣೆಯ ಕಾರ್ಯ ಮುಗಿದು ಮೂರನೆಯ ಹಂತದ ಕಾರ್ಯ ಮುಂದುವರಿದಿದೆ. ಯಲಹಂಕದಲ್ಲಿ ಇಪ್ಪತ್ತು ಎಕರೆ ಸ್ಥಳದಲ್ಲಿ ಲಲಿತಕಲೆಗಳ ಕಾಲೇಜನ್ನೂ ವಿದ್ಯಾರ್ಥಿನಿಲಯವನ್ನೂ ಅಧ್ಯಾಪಕರಿಗಾಗಿ ವಸತಿಗೃಹಗಳನ್ನೂ ನಿರ್ಮಿಸುವ ಯೋಜನೆಯಿದೆ. ಪರಿಷತ್ತಿನಲ್ಲಿ ಕಂಪ್ಯೂಟರ್ಗಳನ್ನು ಅಳವಡಿಸಲಾಗಿದೆ. ಇವುಗಳ ನೆರವಿನಿಂದ ಗ್ರಾಫಿಕ್ ವಿಭಾಗ ಬೆಳೆಸಬೇಕೆಂಬ ಉದ್ದೇಶವಿದೆ.
  • ಪ್ರಸಿದ್ಧ ಕಲಾವಿದರಾದ ಕೆ.ಕೆ.ಹೆಬ್ಬಾರ್, ರೋರಿಕ್, ಶಂಭು ಚೌಧರಿ, ಬಿ.ಸಿ.ಸನ್ಯಾಲ, ಕೃಷ್ಣಾರೆಡ್ಡಿ, ರುಮಾಲೆ ಚನ್ನಬಸಪ್ಪ, ಎಸ್.ಎಸ್.ಸ್ವಾಮಿ, ಎಂ.ವೀರಪ್ಪ, ನಾರಾಯಣ ಸಂಗಮ, ಎಂ.ಎ.ಚೆಟ್ಟಿ, ಟಿ.ಪಿ.ಅಕ್ಕಿ, ಶಂಕರರಾವ್ ಆಳಂದಕರ್, ಕೆ.ಸಿ.ಎನ್. ಪಣಿಕ್ಕರ್, ಎಸ್.ಧನಪಾಲ, ಕೊರಂಚಿ, ಕುಟ್ಟಿ, ನಾಡಕರ್ಣಿ (ಮುಂಬಯಿ), ಆರ್.ಸಂತೋಷ್ (ಜಮ್ಮು), ಬಿಕಾಶ ಭಟ್ಟಾಚಾರ್ಯ (ಕೋಲ್ಕತ), ಪಿ.ಟಿ.ರೆಡ್ಡಿ (ಆಂಧ್ರಪ್ರದೇಶ) ಮೊದಲಾದವರು ಈ ಸಂಸ್ಥೆಯ ಬೆಳೆವಣಿಗೆಗೆ ಸಹಕಾರ ನೀಡಿದ್ದಾರೆ. 1975ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಟ್ರಸ್ಟ್‌ ಆರಂಭವಾಯಿತು. ಇದು ಪರಿಷತ್ತಿಗೆ ಸಂಬಂಧಿಸಿದ ಆಸ್ತಿ ಪಾಸ್ತಿಗಳ ರಕ್ಷಣೆ ಹಾಗೂ ಬೆಳೆವಣಿಗೆಯ ಕಾರ್ಯವನ್ನು ನೋಡಿಕೊಳ್ಳುತ್ತಿದೆ.