ಕರ್ನಾಟಕದ ಹಕ್ಕಿ ಅಧ್ಯಯನ
ಕರ್ನಾಟಕದಲ್ಲಿ ಹಕ್ಕಿಗಳ ಅಧ್ಯಯನ
ಬದಲಾಯಿಸಿಮುನ್ನುಡಿ
ಬದಲಾಯಿಸಿಕರ್ನಾಟಕದಲ್ಲಿ ಅಗಸ್ಟ್ 2022ರವರೆಗೆ 549 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ[೧]. ಇವುಗಳಲ್ಲಿ ಕೆಲವು ಒಂದೇ ಜಾಗದಲ್ಲಿ ನೆಲಸಿದ್ದರೆ, ಇನ್ನೂ ಕೆಲವು ಆಹಾರವನ್ನರಸಿ ಹತ್ತಾರು ಮೈಲಿ ದೂರ ಹಾರಾಡುತ್ತವೆ, ಕೆರೆಕೊಳ್ಳಗಳು ಬತ್ತಿದರೆ ಮತ್ತೊಂದಕ್ಕೆ ಹಾರುತ್ತವೆ. ಕೆಲವು ಪಶ್ಚಿಮಘಟ್ಟಗಳ ಕಿರು ಸೀಮಿತ ಪ್ರದೇಶವನ್ನು ಬಿಟ್ಟು ಹೊರ ಬರುವುದಿಲ್ಲ. ಇನ್ನು ಕೆಲವು ಸಮುದ್ರ ತೀರವನ್ನಷ್ಟೇ ಅವಲಂಬಿಸಿದ್ದರೆ, ಇನ್ನೂ ಕೆಲವಕ್ಕೆ ತೀರದಿಂದ ದೂರವಿರುವ ವಿಶಾಲ ಸಮುದ್ರವೇ ಬೇಕು. ಕೆಲವು ಬೀಸಿದ ಬಿರುಗಾಳಿಗೋ, ಚಂಡ ಮಾರುತಕ್ಕೋ ಸಿಲುಕಿ ತಮ್ಮ ನಿರ್ದಿಷ್ಟ ಪ್ರದೇಶಗಳಿಂದ ಬೇರೆಡೆ ಬಂದಿರುವ ನಿದರ್ಶನಗಳೂ ಇವೆ. ಮತ್ತೂ ಕೆಲವು ಹಿಮಾಲಯದಿಂದ ಅಥವಾ ಅದನ್ನೂ ದಾಟಿ ಶೀತವಲಯದವರೆಗೆ ಹರಡಿರುವ ಪ್ರದೇಶದಿಂದ ಬರುತ್ತವೆ. ಹೀಗಾಗಿ, ಕೇವಲ ಕರ್ನಾಟಕದ ಹಕ್ಕಿಗಳೆಂದು ಹಣೆಪಟ್ಟಿ ಕಟ್ಟಿ ಸೀಮಿತ ಪ್ರದೇಶ, ದೇಶ, ರಾಜ್ಯವೊಂದಕ್ಕೆ ಅವುಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಭೂಲಕ್ಷಣ, ಹವಾಗುಣಕ್ಕೆ ತಕ್ಕಂತೆ ಬೆಳೆದ ಗಿಡ ಮರಗಳು, ನದಿ -ಹಳ್ಳಕೊಳ್ಳಗಳು, ಮಾನವ ನಿರ್ಮಿತ ಕೆರೆಕಟ್ಟೆ – ಜಲಾಶಯ, ವ್ಯವಸಾಯ ಭೂಪ್ರದೇಶಗಳು ಅನೇಕ ಜೀವಿಗಳಿಗೆ ಆಶ್ರಯ ನೀಡಿವೆ. ಅದರಂತೆ ಹಕ್ಕಿಗಳು ಸಹ ಅಲ್ಲಲ್ಲೇ ಅನುಕೂಲವಾದೆಡೆಯೆಲ್ಲ ಬದುಕಿ ಬಾಳುತ್ತಿವೆ. ಹೀಗಾಗಿ ಪೂರ್ವ ಮತ್ತು ಪಶ್ಚಿಮ ಘಟ್ಟಗಳು, ಕರಾವಳಿ, ಬಯಲು ಪ್ರದೇಶವನ್ನು ಹಂಚಿಕೊಂಡಿರುವ ನಮ್ಮ ನೆರೆಯ ರಾಜ್ಯಗಳಾದ ಗೋವ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಸಹ ಹೆಚ್ಚು ಕಡಿಮೆ ನಮ್ಮಲ್ಲಿ ಕಾಣ ಬರುವ ಗಿಡ, ಮರ, ಕ್ರಿಮಿಕೀಟ, ಹಕ್ಕಿ, ಪ್ರಾಣಿಗಳಿವೆ. ಕರ್ನಾಟಕದಲ್ಲಿ ಕಾಣಬರುವ ಹಕ್ಕಿಗಳು, ಅವುಗಳನ್ನು ಅನಾದಿ ಕಾಲದಿಂದ ಇತ್ತೀಚಿನವರೆಗೆ ಅಭ್ಯಸಿಸಿದ ವಿವರ, ಹಕ್ಕಿಗಳ ವಿವಿಧ ನೆಲೆಗಳು (ಆವಾಸ ಸ್ಥಳ), ಹಕ್ಕಿವೀಕ್ಷಣೆ ಬೆಳೆದ ರೀತಿ, ದಾಖಲಾತಿಯ ವಿವರ, ಕ್ರೋಢೀಕರಿಸಿದ ವಿಧಾನ, ವಿಶಿಷ್ಟತೆ, ಸ್ಥಿತಿಗತಿಗಳ ಅವಲೋಕನೆಯ ಸಂಕ್ಷಿಪ್ತ ಪ್ರಯತ್ನವಿದು.
ಭೂಲಕ್ಷಣ
ಬದಲಾಯಿಸಿರಾಜ್ಯದಲ್ಲಿ ವೈವಿಧ್ಯಮಯ ಜೀವ ಸಮುದಾಯ ನೆಲೆಸಲು ಇಲ್ಲಿನ ಭೂ ಮೇಲ್ಮೈಲಕ್ಷಣ, ವಾತಾವರಣ, ಅದಕ್ಕನುಗುಣವಾಗಿ ಬೆಳೆದ ಸಸ್ಯ ಸಂಪದ ಸಹಾಯಕ. ಪಶ್ಚಿಮ ದಿಕ್ಕಿನಲ್ಲಿ ಅರಬ್ಬಿಸಮುದ್ರಕ್ಕೆ ಹೊಂದಿಕೊಂಡಿರುವ ಕರಾವಳಿಯು 12 - 64 ಕಿ. ಮೀ ಅಗಲವಿದ್ದು, ದಕ್ಷಿಣೋತ್ತರವಾಗಿ 320 ಕಿ. ಮೀ. ಉದ್ದವಿದ್ದು, ಸಮುದ್ರ ಮಟ್ಟಕ್ಕಿಂತ 30 ಮೀಟರ್ ಮೀರದಂತೆ ಹರಡಿದೆ. ಘಟ್ಟದ ಮೇಲಿಂದ ಹರಿದು ಬರುವ ನದಿಗಳು, ಅವುಗಳು ಸಾಗರ ಸೇರುವಲ್ಲಿ ನಿರ್ಮಿಸಿರುವ ಭೂ ಲಕ್ಷಣಗಳು, ಆಳವಿಲ್ಲದ ಲಗೂನ್‌ಗಳು, ವಿಶಾಲ ಸಮುದ್ರ ತೀರ, ತೀರದ ಮರಳದಂಡೆಗಳು, ಕೆಲವೆಡೆ 2 ಕಿ.ಮೀನಷ್ಟು ಅಗಲವಿರುವ ಮರಳು ದಿಬ್ಬಗಳು, ಕಾಂಡ್ಲ ಕಾಡುಗಳು, ಹಿನ್ನೀರು, ಹೆಚ್ಚಾದ ಮಳೆಯಿಂದಾದ ಆರ್ದ್ರತೆ, ಅಧಿಕ ಬಿಸಿಲಿಗೆ ಬೆಳೆದ ಅರೆ ನಿತ್ಯತೇವಭರಿತ ಹರಿದ್ವರ್ಣ, ಶೋಲಾ, ತೇವಭರಿತ ಉದುರೆಲೆ, ಶುಷ್ಕ ಉದುರೆಲೆ ಅರಣ್ಯಗಳು, ವಾಣಿಜ್ಯ ಬೆಳೆಗಳ ತೋಟ, ವ್ಯವಸಾಯ ಪ್ರದೇಶ - ಮುಂತಾದ ವಿಶಿಷ್ಟ ನೆಲೆಗಳಿವೆ.
ಕಡಿದಾದ ಘಟ್ಟಗಳು ಕರಾವಳಿಯ ಪೂರ್ವಕ್ಕೆ ಸಮಾನಂತರವಾಗಿ ಹಬ್ಬಿದ್ದು, 900 – 1900 ಮೀಟರ್ ಗಳ ಎತ್ತರದ ಏರಿಳಿತವಿದೆ. ಮುಳ್ಳಯನಗಿರಿ (1931 ಮೀ), ಕುದುರೆಮುಖ (1892 ಮೀ), ಪುಷ್ಪಗಿರಿ (1688 ಮೀ) ಮತ್ತು ಕೊಡಚಾದ್ರಿ (1341 ಮೀ) ಶಿಖರಗಳು ಪ್ರಮುಖವಾದುವು. ಪ್ರಮುಖ ನದಿಗಳ ಉಗಮ ಸ್ಥಾನ ಮಲೆನಾಡು. ಕಡಿದಾದ ಪ್ರದೇಶಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ರಭಸವಾಗಿದ್ದರೆ, ಕ್ರಮೇಣ ಇಳಿಜಾರಾಗಿರುವ ಪೂರ್ವಕ್ಕೆ ನದಿಗಳು ನಿಧಾನವಾಗಿ ಹರಿಯುತ್ತವೆ. ಈ ಘಟ್ಟಗಳು, ಹರಿಯುವ ಝರಿ-ಹೊಳೆ - ನದಿಗಳ ಪಾತ್ರಗಳು ನಿತ್ಯ, ಅರೆ ನಿತ್ಯ ತೇವಭರಿತ ಹರಿದ್ವರ್ಣ, ಶೋಲಾ, ತೇವಭರಿತ ಉದುರೆಲೆ ಕಾಡು, ಎತ್ತರ ಪ್ರದೇಶದ ಹುಲ್ಲುಗಾವಲು, ವಾಣಿಜ್ಯ ಬೆಳೆಗಳ ತೋಟ, ವ್ಯವಸಾಯ ಪ್ರದೇಶಗಳ ನೆಲೆಯಾಗಿದೆ.
ಮೈದಾನ ಪ್ರದೇಶ (ಪ್ರಸ್ಥಭೂಮಿ) ಘಟ್ಟಗಳ ಪೂರ್ವಕ್ಕೆ ಸಮಾನಾಂತರವಾಗಿ ಹಬ್ಬಿದೆ. ತುಂಗಭದ್ರ ನದಿಯ ಉತ್ತರಕ್ಕಿರುವ ಉತ್ತರದ ಕರ್ನಾಟಕ ಪ್ರಸ್ಥಭೂಮಿ ಸಮುದ್ರಮಟ್ಟಕ್ಕಿಂತ 500 ಮೀಟರ್ ಎತ್ತರವಿದ್ದು, ನದಿಯ ದಕ್ಷಿಣದ ಮೈಸೂರು ಪ್ರಸ್ಥಭೂಮಿ ಹೆಚ್ಚು ಏರಿಳಿತ (850-760 ಮೀಟರ್) ಇದೆ. ಉತ್ತರದಲ್ಲಿ ಕೃಷ್ಣಾ -ತುಂಗಭದ್ರೆ, ದಕ್ಷಿಣದಲ್ಲಿ ಕಾವೇರಿ ನದಿಗಳ ಜಲಾನಯನ ಪ್ರದೇಶವಿದೆ. ಲಕ್ಷಾಂತರ ವರುಷಗಳ ನದಿಗಳ ಕೊರೆತವು ಬಂಡೀಪುರ-ಮುದುಮಲೈ ನಡುವೆ ಮೋಯಾರ್ ನದಿಯಿಂದಾಗಿ, ಮೇಕೆದಾಟು ಮತ್ತು ಶಿವನಸಮುದ್ರದಲ್ಲಿ ಕಾವೇರಿ ನದಿಯಿಂದಾಗಿ, ಸೌಂದತ್ತಿಯಲ್ಲಿ ಮಲಪ್ರಭಾ ನದಿಯಿಂದಾಗಿ, ಮತ್ತು ಸೊಂಡೂರಿನಲ್ಲಿ ನರಿಹಳ್ಳದಿಂದಾಗಿ 300 ಮೀಟರಿನಷ್ಟು ಆಳವಾದ ಪ್ರಪಾತವನ್ನುಂಟು ಮಾಡಿವೆ. ಕೆಲವಡೆ 50 ಕಿ. ಮೀ. ವಿಸ್ತಾರದ ಬೃಹತ್ ಬಂಡೆಗಳ ಬೆಟ್ಟಗಳ ಸಾಲನ್ನು ಕಬ್ಬಾಳ ದುರ್ಗದಿಂದ, ರಾಮನಗರ, ಮಾಗಡಿ, ಶಿವಗಂಗೆ, ದೇವರಾಯನದುರ್ಗ, ಮಧುಗಿರಿ, ಚಿತ್ರದುರ್ಗ, ಹಂಪಿಯ ಮೂಲಕ ರಾಯಚೂರಿನವರೆಗೆ ಹಬ್ಬಿರುವುದನ್ನು ನೋಡಬಹುದು, ಈ ಬಂಡೆಗಳ ಸಾಲು ಸಹ ವಿಶಿಷ್ಟ ಜೀವಿಗಳಿಗೆ ನೆಲೆ ನೀಡಿದೆ. ವಿಶಾಲ ಸಮತಟ್ಟಾದ ಹುಲ್ಲುಗಾವಲು, ಶುಷ್ಕ ಉದುರೆಲೆ, ಕುರುಚಲು ಕಾಡುಗಳು ಇಲ್ಲಿನ ವೈಶಿಷ್ಟ್ಯ.
ನೀರಿನ ಆಸರೆಯು ಇರುವ ನದಿ ಕಾಲುವೆಗಳು, ಕೆರೆಕಟ್ಟೆ, ಅಣೆಕಟ್ಟು ಮತ್ತವುಗಳ ಹಿನ್ನೀರು, ಗದ್ದೆಯಂತಹ ಜೌಗು ಪ್ರದೇಶ, ಪ್ರವಾಹ ಆವರಿಸಿದ ಪ್ರದೇಶ, ಸಮುದ್ರ ತೀರ, ಕೋಡಿ, ಮರಳದಂಡೆ, ದಿಬ್ಬಗಳು ಹಕ್ಕಿಗಳಿಗೆ ಹೇಳಿ ಮಾಡಿಸಿದ ಜಾಗ. ಒಳನಾಡಿನಲ್ಲಿ ನೀರಿನ ಆಸರೆ ಮಳೆ ಆಧಾರಿತ. ಹೀಗಾಗಿ ವರ್ಷದಿಂದ ವರ್ಷಕ್ಕೆ, ಋತುಮಾನಕ್ಕನುಗುಣವಾಗಿ ತರಿ ಪ್ರದೇಶದ ವಿಸ್ತಾರದಲ್ಲಿ ಏರಿಳಿತವಿರುತ್ತದೆ. ಕರ್ನಾಟಕದಲ್ಲಿ ಕಂಡುಬರುವ ಹಕ್ಕಿಗಳಿಗೆ ಪೂರಕ ಆವಾಸ ಒದಗಿಸುವ ಸಂಕ್ಷಿಪ್ತ ಸಂಪನ್ಮೂಲ ಹೀಗಿದೆ: ವಿಶಾಲ ಭೂಪ್ರದೇಶ – 19.18 ದಶಲಕ್ಷ ಹೆಕ್ಟೇರ್; ಕಡಿಮೆ ಇರುವ ಜನಸಂಖ್ಯಾ ಸಾಂದ್ರತೆ – ಪ್ರತಿ ಚ.ಕಿ. ಮೀಗೆ 275; ನಿತ್ಯ, ಅರೆನಿತ್ಯ ತೇವಭರಿತ ಹರಿದ್ವರ್ಣ ಕಾಡು – 5800 ಚ.ಕಿ. ಮೀ; ತೇವಭರಿತ ಉದುರೆಲೆ ಕಾಡು – 5780 ಚ.ಕಿ. ಮೀ; ಶುಷ್ಕ ಉದುರೆಲೆ ಕಾಡು – 15455 ಚ.ಕಿ. ಮೀ; ಕುರುಚಲು ಕಾಡು – 11610 ಚ.ಕಿ. ಮೀ; ನದಿ ಕಾಲುವೆಗಳು – 8813 ಕಿ. ಮೀ; ಮತ್ತು ಕೆರೆಕಟ್ಟೆ ಅಣೆಕಟ್ಟನ್ನೊಳಗೊಂಡ ತರಿ ಪ್ರದೇಶ – 2.7 ದಶಲಕ್ಷ ಹೆಕ್ಟೇರ್.
ಕನ್ನಡದ ಇತಿಹಾಸದಲ್ಲಿ ಹಕ್ಕಿಗಳ ದಾಖಲೆಗಳು
ಬದಲಾಯಿಸಿಮಾನವನು ತನ್ನ ಸುತ್ತ ಮುತ್ತ ಇರುವ ಜೀವಿಗಳ ಚಟುವಟಿಕೆಯನ್ನು ಗಮನಿಸುತ್ತಾ ಮತ್ತವಕ್ಕೆ ಹೆಸರಿಡುತ್ತಾ, ಪ್ರತಿಕೃತಿಗಳನ್ನು ನಿರ್ಮಿಸುತ್ತಾ ಇರುವುದನ್ನು ಜನಪದ ಕಥೆ, ದಂತ ಕಥೆ, ಕಾವ್ಯ, ದೇಗುಲಗಳ ಕೆತ್ತನೆಗಳಲ್ಲಿ ಜೀವಂತವಾಗಿಸಿರುವುದನ್ನು ಕಾಣಬಹುದಾಗಿದೆ. ಉದಾಹರಣೆಗೆ, ಗಂಡಭೇರುಂಡ - ಕಲ್ಪಿತ ಎರಡು ತಲೆಯ ಹಕ್ಕಿ, ಕರ್ನಾಟಕದ ರಾಜ್ಯ ಲಾಂಛನ. ಶಿವಮೊಗ್ಗೆಯ ಶಿರಾಳಕೊಪ್ಪದಲ್ಲಿ ದೊರೆತಿರುವ ಈ ಕಾಲ್ಪನಿಕ ಹಕ್ಕಿಯ ಮೊದಲ ವಿಗ್ರಹದ ಸುಮಾರು 1047 ಇಸವಿಯದ್ದಾದರೆ, ಇಂದಿಗೆ 3600 ವರುಷಗಳ ಹಿಂದೆ ಇರಾನ್‌ನ ಹಕ್ಕನ್ ನಾಗರೀಕತೆಯಲ್ಲೂ ಈ ಕಾಲ್ಪನಿಕ ಹಕ್ಕಿಯ ಪರಿಚಯ ಇತ್ತು. ಕಾಗೆ, ಗುಬ್ಬಚ್ಚಿ, ಪರಪುಟ್ಟ ಕೋಗಿಲೆ, ಪಂಜರದ ಗಿಳಿ, ಅಂಚೆಯಣ್ಣನ ಸಾಕು ಪಾರಿವಾಳ, ಹಕ್ಕಿಗಳ ಅನುಕರಣೆ ಜನಮಾನಸದಲ್ಲಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಆಹಾರಕ್ಕಾಗಿ ವನ್ಯ ಕೋಳಿ, ಬಾತುಗಳನ್ನು, ಮನೋರಂಜನೆಗೆ ಗಿಳಿ, ಪಾರಿವಾಳಗನ್ನು ಸಾಕುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ (ಶಿವಮೊಗ್ಗೆಯ ಸಾಗರದಲ್ಲಿ ಸಹ ನಡೆಯುತ್ತದೆಂದು ವರದಿಯಿದೆ) ವಿಶಿಷ್ಟ ಮನೋರಂಜನೆಗಾಗಿ ವಿಶೇಷವಾಗಿ ಸಾಕಿದ ಹುಂಜಗಳ ನಡುವಿನ ಕಾಳಗ (ಕೋಳಿ ಜಗಳ) ಶತಮಾನಗಳಿಂದ ನಡೆಯುತ್ತಾ ಬಂದಿದೆ.
ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಅಚ್ಚಗನ್ನಡ ಪದಕೋಶದಲ್ಲಿ (2015) 43 ಪುಟಗಳಷ್ಟು ಹಕ್ಕಿಗಳ ವಿವಿಧ ನಾಮಾವಳಿಗಳನ್ನು ಕಾಣಬಹುದು[೨]. ವಿವಿಧ ಕಾಲಘಟ್ಟದಲ್ಲಿ ಉಪಯೋಗಿಸಲ್ಪಟ್ಟ ನಾಮಾವಳಿಗಳನ್ನು, ಕನ್ನಡ ಕಾವ್ಯಗಳು, ಶಾಸ್ತ್ರ ಗ್ರಂಥಗಳು, ಕೋಶಗಳು, ಕಾವ್ಯ ಲಕ್ಷಣ ಗ್ರಂಥಗಳನ್ನು ಪರಾಮರ್ಶಿಸಿ ಕ್ರೋಢೀಕರಿಸಿದ್ದಾರೆ. ಪರಾಮರ್ಶಿಸಿದ ಕೆಲವು ಗ್ರಂಥಗಳೆಂದರೆ- ಅಮರಕೋಶ, ಅಭಿಧಾನ ರತ್ನಮಾಲಾ ಕರ್ಣಾಟಕ ಟೀಕೆ, ಕುಮಾರವ್ಯಾಸ ಭಾರತ, ವಡ್ಡಾರಾಧನೆ, ಕರ್ಣಾಟಕ ಪಂಚತಂತ್ರಂ, ಸಿದ್ಧಲಿಂಗ ಕಾವ್ಯ, ತೊರವೆ ರಾಮಾಯಣ, ಲೋಕೋಪಕಾರಂ, ಯಶೋಧರ ಚರಿತೆ, ಹರಿಶ್ಚಂದ್ರ ಕಾವ್ಯ, ಅಮುಗಿ ದೇವಯ್ಯಗಳ ಸಾಂಗತ್ಯ, ಶಬರಶಂಕರ ವಿಳಾಸಂ, ಕಾವ್ಯಸಾರಂ, ಅಭಿನವಾಭಿಧಾನಂ, ಮಲೆಗಳಲ್ಲಿ ಮದುಮಗಳು, ಮೋಹನ ತರಂಗಿಣಿ, ಸಾಳ್ವ ಭಾರತ ಮತ್ತು ಕಿಟ್ಟಲ್ ನಿಂದ ಸಾಹಿತ್ಯ ಪರಿಷತ್ತಿನ ನಿಘಂಟುಗಳು, ಮುಂತಾದುವುಗಳು. ರೆವರಂಡ್ ಎಫ್. ಕಿಟ್ಟಲ್‌ರ ಕನ್ನಡ-ಇಂಗ್ಲೀಷ್ ನಿಘಂಟಿನಲ್ಲಿ (1894) ಸುಮಾರು 285 ಹಕ್ಕಿಗಳ ವಿವಿಧ ನಾಮಾವಳಿಗಳಿವೆ [೩].
ಸ್ವಾತಂತ್ರ್ಯಾ ಪೂರ್ವದ ಅಧ್ಯಯನಗಳು
ಬದಲಾಯಿಸಿವಿಶ್ವದೆಲ್ಲೆಡೆ ಆಧುನಿಕ ವಿಜ್ಞಾನ ಅರಳುವ ಸಮಯದಲ್ಲಿ ಐರೋಪ್ಯರು ನಮ್ಮನ್ನಾಳುತ್ತಿದ್ದರು. ಇವರು ಅಧಿಕಾರ ನಡೆಸಲು ಹೋದ ಪ್ರದೇಶದ ಕ್ರಿಮಿಕೀಟ, ಜಲಚರ, ಹಕ್ಕಿ, ಪ್ರಾಣಿ, ಸಸ್ಯಾದಿ ಜೀವಿಗಳ ವೈವಿಧ್ಯತೆಯನ್ನು ದಾಖಲಿಸುತ್ತಿದ್ದರು. ಐರೋಪ್ಯರಿಗೆ ಜನ್ಮದತ್ತವಾಗಿ ಬಂದಿರುವ ಸಾಹಸ, ಸಂಶೋಧನೆಯ ಗುಣದಿಂದ ಭಾರತ ಭೂಖಂಡದ ಜೀವ ವೈವಿಧ್ಯತೆ ದಾಖಲಾಯಿತೆಂದೇ ಹೇಳಬಹುದು. ಇವರು ಆಡಳಿತ ನಡೆಸಿದ ಪ್ರಪಂಚದ ಎಲ್ಲೆಡೆ ಇಂತಹ ವಿಶಿಷ್ಟದಕ್ಷತೆಯಿಂದ ತಮ್ಮ ಛಾಪು ಮೂಡಿಸಿದ್ದಾರೆ. ಬಿಡುವಿನ ಸಮಯವನ್ನು ವೈವಿಧ್ಯತೆಯನ್ನು ದಾಖಲಿಸುವ ಹವ್ಯಾಸಗಳಿಗೆ ಸದ್ವಿನಿಯೋಗಿಸಿದ್ದರಿಂದ ಮತ್ತೆ ಕೆಲವರ ವೃತ್ತಿ ಇದೇ ಆದ್ದರಿಂದ, ಅಧ್ಯಯನಗಳಿಂದ ದಾಖಲಿಸಲ್ಪಟ್ಟ ಜೀವಿಗಳ ಮತ್ತು ಅವರುಗಳ ಹೆಸರು ಅಜರಾಮರವಾಗಿದೆ. ಭಾರತದ ಮಟ್ಟಿಗೆ ಕೆಲವು ಪ್ರಮುಖರೆಂದರೆ: ಸಸ್ಯ ಶಾಸ್ತ್ರದಲ್ಲಿ – ಗ್ಯಾಂಬಲ್, ಹೂಕರ್, ಕುಕ್; ಹಕ್ಕಿ ಶಾಸ್ತ್ರದಲ್ಲಿ – ಜರ್ಡಾನ್, ಹ್ಯೂಮ್, ಬೇಕರ್, ಬ್ಲಾಂಫೊರ್ಡ್; ಪ್ರಾಣಿ ಶಾಸ್ತ್ರದಲ್ಲಿ – ರಾಟನ್; ಚಿಟ್ಟೆಗಳ ವಿಷಯದಲ್ಲಿ ಇವಾನ್ಸ್, ವಿಂಟರ್ ಬ್ಲಿತ್, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕನ್ನಡ ಮಾತನಾಡುವ ಐದು ಪ್ರದೇಶಗಳು -ಮದ್ರಾಸು (ದಕ್ಷಿಣ ಕನ್ನಡ, ಬಳ್ಳಾರಿ), ಮುಂಬೈ (ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ), ಮೈಸೂರು (ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಚಿತ್ರದುರ್ಗ), ಕೊಡಗು ಮತ್ತು ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ (ಬೀದರ, ಗುಲ್ಬರ್ಗ ಮತ್ತು ರಾಯಚೂರು) ಏಕೀಕರಣಗೊಂಡು ಮೈಸೂರು ರಾಜ್ಯವಾಗಿ (1956) ನಂತರ ಮರು ನಾಮಕರಣಗೊಂಡು ಕರ್ನಾಟಕವಾಯಿತು (1973); ಅಂದಿನ 19 ಜಿಲ್ಲೆಗಳು, ಇಂದು 31 ಜಿಲ್ಲೆಗಳಾಗಿವೆ.
ಏಕೀಕರಣಗೊಳ್ಳುವ ಹೊತ್ತಿಗಾಗಲೇ ನಾಡಿನ ಅರ್ಧಕ್ಕೂ ಅಧಿಕ ಪ್ರದೇಶದ ಹಕ್ಕಿಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದವು. ನಾಡಿನ ಹಕ್ಕಿಗಳ ಪ್ರಮುಖವಾದ ಅಧ್ಯಯನವನ್ನು ಮಾಡಿದ ಕೆಲ ಮಹಾಶಯರ, ಕಾರ್ಯವ್ಯಾಪ್ತಿ ಪ್ರದೇಶ ಮತ್ತು ಪ್ರಕಟನೆಯ ವರುಷದ ವಿವರ ಹೀಗಿದೆ: ಕ್ಯಾಪ್ಟನ್ ಇ.ಎ. ಬಟ್ಲರ್ (ಬೆಳಗಾವಿ, 1881), ವಿಲಿಯಂ ಆರ್. ಡೇವಿಸನ್, (ಮೈಸೂರು, 1883), ಸಿ.ಜೆ. ಡಬ್ಲೂ. ಟೇಲರ್ (ಹಾಸನ, 1887); ಜೇಮ್ಸ ಡೆವಿಸನ್ (ಉತ್ತರ ಕನ್ನಡ, 1898), ಮೇಜರ್ ಇ.ಜಿ. ಪೈಥಿಯನ್ ಆಡಮ್ಸ್ (ಹಳೇ ಮೈಸೂರಿನ ಕೆಲ ಜಿಲ್ಲೆಗಳಲ್ಲಿ ಹಕ್ಕಿ ಬೇಟೆಯ ವಿವರಗಳು, 1937 -48), ವಾಲ್ಟರ್ ಎನ್. ಕೋಜ್ (ಉತ್ತರ ಕನ್ನಡ - ಬೆಳಗಾವಿ, 1942), ಸಲೀಂ ಆಲಿ (ಹಳೇ ಮೈಸೂರಿನ 9 ಜಿಲ್ಲೆಗಳು, ವಿಸ್ಲರ್ ಜೊತೆಗೂಡಿ ಲೇಖನ 1942-43), ಮತ್ತು ಫ್ರೆಡರಿಕ್. ಎನ್. ಬೆಟ್ಸ್ (ಕೊಡಗು, 1951-52). ಹೈದ್ರಾಬಾದ್ ದೇಶದ ಹಕ್ಕಿಗಳ ಅಧ್ಯಯನವನ್ನು (1931) ಸಲೀಂ ಆಲಿಯವರು ಸಂಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ನಿಜಾಂ ಸರ್ಕಾರ ಆಡಳಿತದಲ್ಲಿದ್ದ ಈಶಾನ್ಯ ಕರ್ನಾಟಕದ ಜಿಲ್ಲೆಗಳಲ್ಲಿನ ಹಕ್ಕಿಗಳ ತಿಳುವಳಿಕೆ ಸಮೃದ್ಧವಾಗಿರುತ್ತಿತ್ತು, ಸಂಪೂರ್ಣ ಕರ್ನಾಟಕದ ಹಕ್ಕಿಗಳ ವಿವರವಾದ ಮಾಹಿತಿ ಲಭ್ಯವಿರುತ್ತಿತ್ತು. ಆರ್ಥಿಕ ತೊಂದರೆಯಿಂದಾಗಿ ನಿಜಾಂ ಸರ್ಕಾರ ಹಣಕಾಸನ್ನು ಒದಗಿಸಲು ಅಸಾಧ್ಯವಾದ್ದರಿಂದ ಅಧ್ಯಯನ ಪೂರ್ಣಗೊಳ್ಳಲಿಲ್ಲ [೪].
ದಕ್ಷಿಣಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ವಿಶಿಷ್ಟ ವೈವಿಧ್ಯಮಯ ಜೀವರಾಶಿಗೆ ಆಶ್ರಯವಾಗಿವೆ. ಸಲೀಂ ಆಲಿಯವರು ಮದ್ರಾಸು, ಹೈದರಾಬಾದ್, ಟ್ರಾವಂಕೂರ್ ಮತ್ತು ಕೊಚ್ಚಿ ಸಂಸ್ಥಾನಗಳ ಅಧ್ಯಯನದ ನಂತರ, ಕೆಲವು ಪ್ರಭೇದದ ಹಕ್ಕಿಗಳ ನಡುವೆ ಕೂದಲೆಳೆಯಷ್ಟು ವ್ಯತ್ಯಾಸವಿರುವುದನ್ನು ಗುರುತಿಸಿದರು. ಈ ವ್ಯತ್ಯಾಸ ಘಟ್ಟಗಳ ನಡುವಿನ ಯಾವ ಪ್ರದೇಶದಿಂದ ಪ್ರತ್ಯೇಕಗೊಳ್ಳುತ್ತದೆ ಎಂಬುದನ್ನು ತೀರ್ಮಾನಿಸಲು, ಈ ಘಟ್ಟಗಳ ನಡುವೆ ಕೊಂಡಿಯಾಗಿರುವ ಹಳೆ ಮೈಸೂರು ಪ್ರಾಂತ್ಯದ ಹಕ್ಕಿಗಳನ್ನು 1939 ನವೆಂಬರ್ ನಿಂದ 1940 ಫೆಬ್ರವರಿಯ ನಡುವೆ ಸಮೀಕ್ಷೆ ಕೈಗೊಳ್ಳುತ್ತಾರೆ[೫].
1941ರಲ್ಲಿ ಸುಮಾರು 200 (ಪರಿಷ್ಕೃತ ಆವೃತ್ತಿಯಲ್ಲಿ 538 ಹಕ್ಕಿಗಳಿವೆ) ಹಕ್ಕಿಗಳ ವರ್ಣಮಯ ಚಿತ್ರಗಳು ಮತ್ತು ವಿವರಣೆ ಯೊಂದಿಗೆ ಗುರುತಿಸಲು ಸಹಾಯವಾಗುವ ಗಾತ್ರ, ಹೊರರೂಪ, ಆವಾಸ, ಧ್ವನಿ, ಗೂಡು, ಮೊಟ್ಟೆ, ಸಂತಾನೋತ್ಪತ್ತಿಯ ವಿವರಗಳನ್ನೊಳಗೊಂಡ ಕೈಪಿಡಿಯೊಂದನ್ನು ಕೈಗೆಟಕುವ ದರದಲ್ಲಿ ಸಲೀಂ ಆಲಿಯವರು ಪ್ರಕಟಿಸಿದರು. ಇದರ ಫಲಿತಾಂಶವೇ, ಇಂದು ಭಾರತದೆಲ್ಲೆಡೆ ಕಂಡು ಬರುವ ವೀಕ್ಷಕರ ಸಂತತಿ.
ಸ್ವಾತಂತ್ರ್ಯಾ ನಂತರದ ಅಧ್ಯಯನಗಳು
ಬದಲಾಯಿಸಿಬೆಂಗಳೂರಿನಲ್ಲಿ ಹಕ್ಕಿಗಳ ಬಗೆಗಿನ ಜ್ಞಾನವನ್ನು ಹಂಚಿಕೊಂಡು, ವಿಸ್ತರಿಸಲು 1960ರಲ್ಲಿ ಝಫರ್ ಫತೆಆಲಿ ಅವರು ಆರಂಭಿಸಿದ ದ್ವೈ ಮಾಸಿಕ ಪತ್ರಿಕೆ ʼ ನ್ಯೂಸ್‌ಲೆಟರ್ ಫಾರ್ ಬರ್ಡ್‌ವಾಚರ್ಸ್ʼ, ಮತ್ತು ಡೆಹರಾಡೂನ್‌ನಿಂದ ಇಲ್ಲಿಗೆ ವಾಸಿಸಲು ಬಂದ ಜಾರ್ಜ್ ಜೋಸೆಫ್ ಅವರಿಂದ 1972ರಿಂದ ಆರಂಭಿಸಲ್ಪಟ್ಟ -ಗುಂಪು ಹಕ್ಕಿ ವೀಕ್ಷಣೆಯ ಕಾರ್ಯಕ್ರಮಗಳಿಂದ, ನಾಡಿನ ಹಕ್ಕಿಗಳ ಇರುವು, ಹರವು, ಚಟುವಟಿಕೆಗಳ ಪರಿಚಯವಾದದ್ದಲ್ಲದೆ, ಅನೇಕ ಹಕ್ಕಿವೀಕ್ಷಕರನ್ನು ಸಿದ್ಧಗೊಳಿಸಿತು[೬].
ಸಲೀಂ ಆಲಿಯವರ ಭಾರತದ ಹಕ್ಕಿಗಳ ಕೈಪಿಡಿಯ ಪರಿಷ್ಕೃತ 8ನೇ ಆವೃತ್ತಿ (1968) ಇದಕ್ಕೆ ಪೂರಕವಾಯಿತು. ಆ ಸಮಯದಲ್ಲಿ ಕುಮಾರ್ ಘೋರ್ಪಡೆ (ಬಳ್ಳಾರಿ, 1974) ಅವರು ಬಳ್ಳಾರಿಯ ಸಂಡೂರು ಪ್ರದೇಶದ ವಿವರವಾದ ಹಕ್ಕಿ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದರು.
ಜಾರ್ಜ್ ಜೋಸೆಫ್ ಅವರು ಸಂಪಾದಿಸಿದ ಬೆಂಗಳೂರು ನಗರದ ಹಕ್ಕಿಗಳ ವಿಸ್ತೃತ ವರದಿಯನ್ನು ಖುದ್ದು ಸಲೀಂ ಆಲಿಯವರು ಅವರ ಹುಟ್ಟುಹಬ್ಬದ ದಿನ 1977ರಲ್ಲಿ ಬಿಡುಗಡೆ ಮಾಡಿದರು. ಬಹುಶಃ ಆ ನಂತರ, ರಾಜ್ಯದೆಲ್ಲೆಡೆ ನಿಧಾನವಾಗಿ ಹಕ್ಕಿ ವೀಕ್ಷಣಾ ಹವ್ಯಾಸ ಹರಡಲಾರಂಭಿಸಿತು ಎನಿಸುತ್ತದೆ. ʼಏಷ್ಯನ್ ವೆಟ್ ಲ್ಯಾಂಡ್ ಬ್ಯೂರೋʼವು ಬಾಂಬೆ ಪ್ರಾಕೃತಿಕ ಇತಿಹಾಸ ಸಂಸ್ಥೆಯ ಜೊತೆಗೂಡಿ 1987 ರಿಂದ 1996 ರ ನಡುವೆ ನಡೆಸಿದ ʼಮಧ್ಯಚಳಿಗಾಲದ ಜಲಸಂಕುಲ ಹಕ್ಕಿಗಳ ಗಣತಿ ಕಾರ್ಯʼವು ಸ್ಥಳೀಯ ಮತ್ತು ವಲಸೆ ಬಂದ ನೀರ್ಹಕ್ಕಿಗಳು, ಮತ್ತವುಗಳ ಸಂಖ್ಯೆ ಅಲ್ಲದೆ ಅವುಗಳ ತಾಣಗಳ -ಕೆರೆ, ಕಟ್ಟೆ, ನದಿ, ಸರೋವರ-ಸಾಗರಗಳ ಹಿನ್ನೀರು ಮುಂತಾದ ಜಲ ಪ್ರದೇಶಗಳ ಸ್ಥಿತಿಗತಿ – ನೀರಿನ ಪ್ರಮಾಣ, ಗುಣಮಟ್ಟ, ವಿಸ್ತಾರ, ಆಳ, ಒಳಹರಿವು, ಉಪಯೋಗ, ಜಲಕಳೆಯ ಪ್ರಮಾಣ, ಮೀನುಗಾರಿಕೆಯ ಪ್ರಮಾಣ, ಹಕ್ಕಿಗಳ ಸುರಕ್ಷತೆಯನ್ನು ಅರಿಯಲು ಸಹಾಯ ಮಾಡಿತು. ಈ ಸಮೀಕ್ಷೆಯಿಂದಾಗಿ ಕರ್ನಾಟಕದ ವಿವಿಧೆಡೆ ಹಕ್ಕಿ ವೀಕ್ಷಕರ ಸಂಖ್ಯೆ ಹೆಚ್ಚಿದಲ್ಲದೆ, ಅಲ್ಲಿನ ಶ್ರೀಮಂತ ತಾಣಗಳ ಹಾಗೂ ಹಕ್ಕಿಗಳ ಬಗೆಗಿನ ಅರಿವು ಅಧಿಕಗೊಂಡಿತು. ಆ ಸಮಯದಲ್ಲಿ ಗುಜರಾತಿನ ನಂತರ ಹೆಚ್ಚಿನ ಹಕ್ಕಿ, ಹಕ್ಕಿವೀಕ್ಷಕರು ಮತ್ತು ಹಕ್ಕಿ ತಾಣಗಳನ್ನು ಹೊಂದಿದ್ದು ಕರ್ನಾಟಕವಾಗಿತ್ತು.
ಹೆಚ್ಚಿನಂಶ ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ, ನಿಸರ್ಗ ಕ್ಲಬ್‌ಗಳ ಮೂಲಕವೋ, ಇಲ್ಲ ವೈಯುಕ್ತಿಕವಾಗಿಯೋ ಹಕ್ಕಿಗಳ, ಅಥವಾ ನಿಸರ್ಗ ಸೌಂದರ್ಯವನ್ನು ತೋರಿಸುವ ಮೂಲಕ, ಅದರ ಬಗ್ಗೆ ಅರಿವಿದ್ದ ಹಲವರು ಪ್ರಕೃತಿಯ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. ಇಲ್ಲಿ YHAI (Youth Hostel Association of India) ಮತ್ತು WWF (World wide Fund) ನ ಸಾರ್ವಜನಿಕರಲ್ಲಿ ಪ್ರಕೃತಿಯ ಅರಿವು ಮೂಡಿಸುವ ಅನೇಕ ಚಟುವಟಿಕೆಗಳು ಸಹಕಾರಿಯಾದವು. ಹೀಗೆಯೇ, ಮೈಸೂರಿನ ಮೃಗಾಲಯ ಆರಂಭಿಸಿದ ʼಯೂಥ್ ಕ್ಲಬ್ʼ ಚಟುವಟಿಕೆ ಅತಿ ಪ್ರಮುಖವಾದುದು. ಯೂಥ್ ಕ್ಲಬ್‌ನ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದ ಕೆ. ಮನು ಮತ್ತು ಪಿ. ಗುರುಪ್ರಸಾದ್ ಅವರು ʼಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ʼ ಸಂಸ್ಥೆಯನ್ನು ಆರಂಭಿಸಿ ಸದಾನಂದ ಕೆ.ಬಿ. ಅವರಂತಹ ಶೈಕ್ಷಣಿಕ ತಜ್ಞರೊಂದಿಗೆ ಹಮ್ಮಿಕೊಂಡ ಪರಿಸರ ನಡಿಗೆ, ತಜ್ಞರಿಂದ ವಿಚಾರ ವಿನಿಮಯ, ತ್ರೈಮಾಸಿಕ ಪತ್ರಿಕೆ, ಪ್ರಕೃತಿ ಶಿಬಿರ, ಚಿಟ್ಟೆ -ಹಕ್ಕಿ- ಸಸ್ಯಗಳ ಅಧ್ಯಯನಗಳ ಮೂಲಕ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಆಸಕ್ತರನ್ನು ಪ್ರಕೃತಿ ಅಧ್ಯಯನದಲ್ಲಿ ತೊಡಗಿಸಲು ಪ್ರೇರೇಪಿಸಿದ್ದು ಜನಪ್ರಿಯ ಕನ್ನಡ, ಇಂಗ್ಲಿಷ್ ದಿನ - ವಾರಪತ್ರಿಕೆ, ಮಾಸಿಕ – ವಾರ್ಷಿಕಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪರಿಸರ ಲೇಖನಗಳಲ್ಲದೆ, ಬಹು ವರ್ಣದಲ್ಲಿ ಚಿತ್ರ ಲೇಖನ ಕೆಲವು ಛಾಯಾ ಚಿತ್ರಕಾರರನ್ನೂ, ಪರಿಸರ ಪ್ರಿಯರನ್ನೂ, ಹಕ್ಕಿ ವೀಕ್ಷಕರನ್ನು ಸೃಷ್ಟಿಸಿದವು. ಪ್ರಮುಖರೆಂದರೆ - ಪೂಚಂತೇ, ಹೆಚ್. ಆರ್. ಕೃಷ್ಣಮೂರ್ತಿ, ಪಿ.ಡಿ. ಸುದರ್ಶನ್, ಜಯಕರ ಭಂಡಾರಿ, ನಿರಂಜನ್ ಸಂತ್, ದಿನೇಶ್ ಹೊಳ್ಳ, ಎಸ್.ವಿ. ಕೃಷ್ಣಮೂರ್ತಿ, ಬಿ.ಸಿ. ಗುರುರಾಜ್, ದಾನಿ, ಅನಂತ ತಟ್ಟೀಸರ, ಹೆಚ್. ಎಸ್. ಅನಂತ, ಪಂಪಯ್ಯ ಮಳೀಮಠ್, ಸಮದ್ ಕೊಟ್ಟೂರು, ಸಂತೋಷ ಮಾರ್ಟಿನ್, ಬಿ.ವಿ. ಗುಂಡಪ್ಪ, ಎಂ. ಮಲ್ಲಿಕಾರ್ಜುನ, ಕೆ. ಎಸ್. ಮುರುಗೇಂದ್ರ, ಟಿ.ಎಂ. ಶ್ರೀಧರ, ಜಿ. ಕೃಷ್ಣಪ್ರಸಾದ್, ಕೆ. ಎಸ್. ರಾಜಶೇಖರ, ಪುಟ್ಟರಾಜು, ಇಂದಿರಾ ಸಂಗಾಪುರ, ಚಂದ್ರಗಂಗಾದಯ, ಹೆಚ್. ವೆಂಕಟೇಶ್ವರ್ ಹಾಗೂ ಮತ್ತಿತರರು.
ಕಳೆದ ಮೂರು ದಶಕಗಳಲ್ಲಿ ನಡೆದ ಅಧ್ಯಯನಗಳು
ಬದಲಾಯಿಸಿ1993ರಲ್ಲಿ ಎಂ.ಬಿ. ಕೃಷ್ಣ ಅವರು ಭಾರತದಲ್ಲೇ ಪ್ರಪ್ರಥಮವಾಗಿ ಹಕ್ಕಿ ವೀಕ್ಷಣೆಯನ್ನು ಡಿಜಿಟಲ್ ಯುಗಕ್ಕೆ ಕರೆದೊಯ್ದರು. ಹಕ್ಕಿ ವಿಷಯ ವಿನಿಮಯಕ್ಕೆ ಹಾಗೂ ಗುಂಪು ಹಕ್ಕಿ ವೀಕ್ಷಣೆಗೆ ಆಹ್ವಾನಿಸಲು, ಪೋಸ್ಟ್ ಕಾರ್ಡ್‌ಗೆ ಪರ್ಯಾಯ ಎಂದು ಶುರು ಮಾಡಿದ ʼಬಿಎನ್‌ಜಿ ಬರ್ಡ್ಸ್ʼ ಮುಂದೆ ವಿಚಾರ ವಿನಿಮಯಕ್ಕೆ ವಿಸ್ತೃತ ವೇದಿಕೆಯಾಯಿತು. ಇತ್ತೀಚೆಗೆ ʼಯಾಹೂ ಗ್ರೂಪ್ʼ ವೇದಿಕೆ ಸ್ಥಗಿತಗೊಂಡಿದ್ದರಿಂದ ಫೇಸ್ ಬುಕ್‌ಗೆ ಸ್ಥಿತ್ಯಂತರಗೊಂಡಿದೆ[೭]. 2003ರಲ್ಲಿ ಎಲ್. ಶ್ಯಾಮಲ್ ಅವರು ಭಾರತದ ವಿವಿಧೆಡೆ ದಾಖಲಿಸಲ್ಪಟ್ಟ, ಜನಸಾಮಾನ್ಯರಿಗೆ ಸುಲಭವಾಗಿ ದೊರೆಯಬಲ್ಲ ದಾಖಲೆಗಳಿಂದ ಆಯ್ದ, ಸಾರ್ವಜನಿಕವಾಗಿ ಪ್ರಶ್ನಿಸಲು ಸಾಧ್ಯತೆ ಇರುವಂತಹ ಸುಮಾರು 55,000 ಹಕ್ಕಿಗಳನ್ನು ಉಪಯೋಗಿಸಿ ಭಾರತದ ಹಕ್ಕಿ ನಕಾಶೆಯನ್ನು ತಯಾರಿಸಿ, ಡಿಜಿಟಲ್ ಯುಗದಲ್ಲಿ ಹಕ್ಕಿ ವಿಜ್ಞಾನ ನಡೆಯಬಹುದಾದ ದಾರಿಯನ್ನು ತೋರಿದರು[೮]. ಅಲ್ಲದೆ, ಝಫರ್ ಫತೆಆಲಿ ಅವರು ಆರಂಭಿಸಿದ್ದ ಹಕ್ಕಿಗಳ ಬಗೆಗಿನ ದ್ವೈಮಾಸಿಕ ಪತ್ರಿಕೆಯ ಸಂಪಾದಕತ್ವವನ್ನು 2003ರಲ್ಲಿ ಎಸ್. ಶ್ರೀಧರ್ ಅವರು ಹೊತ್ತಮೇಲೆ, 2004ರಲ್ಲಿ ಇನ್ನೊಂದು ಮುದ್ರಿತ ಪತ್ರಿಕೆ - ಇಂಡಿಯನ್ ಬರ್ಡ್ಸ್, ಆಶಿಷ್ ಪಿಟ್ಟಿಯವರ ಸಂಪಾದಕತ್ವದಡಿ ಆರಂಭಗೊಂಡು, ವರುಷದೊಳಗೆ ಹೆಸರುವಾಸಿಯಾಯಿತು. ಈ ದ್ವೈಮಾಸಿಕ ಪತ್ರಿಕೆ ಕರ್ನಾಟಕವನ್ನು ಒಳಗೊಂಡಂತೆ ದಕ್ಷಿಣ ಏಷಿಯಾದಲ್ಲಿನ ಹಕ್ಕಿ ಅಧ್ಯಯನದ ನಾನಾ ಮಜಲುಗಳ ದಿಗಂತವನ್ನು ವಿಸ್ತರಿಸಿತು. ಈ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ ಮೂಡಿಬರುತ್ತಿದೆ. ಇದೇ ಸಮಯದಲ್ಲಿ ಹಕ್ಕಿಗಳ ಛಾಯಾಚಿತ್ರಗಳ ಸಂಗ್ರಹಣೆಗಾಗಿಯೇ ಖ್ಯಾತ ಹಕ್ಕಿತಜ್ಞ ಕ್ರಿಸ್ ಶುರುಮಾಡಿದ ʼಓರಿಯಂಟಲ್ ಬರ್ಡ್ ಇಮೇಜ್ಸ್ʼ ವೆಬ್ ಸೈಟ್ ಗುರುತಿಸಲು ಕಷ್ಟಕರವಾದ ಹಕ್ಕಿಗಳನ್ನು ನಿಖಿರವಾಗಿ ಕಂಡುಹಿಡಿಯಲು ಬಹಳಷ್ಟು ನೆರವಾಯಿತು.
1990ರಿಂದ ನೆರೆಯ ಕೇರಳ ರಾಜ್ಯದ ಅರಣ್ಯ ಇಲಾಖೆ ಹವ್ಯಾಸಿ ಹಕ್ಕಿವೀಕ್ಷಕರ ಜೊತೆಗೂಡಿ ರಕ್ಷಿತ ಅರಣ್ಯದಲ್ಲಿ ಹಕ್ಕಿಗಳ ಸಮೀಕ್ಷೆಯನ್ನು ನಡೆಸುತ್ತಾ ಬಂದಿದೆ. ಇದು ವಿಜ್ಞಾನವನ್ನು ಸಮಾಜದಲ್ಲಿ ಪಸರಿಸಲು ಆರಂಭಗೊಂಡ - ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ (1962) ನ ಪರಿಣಾಮ ಎನ್ನುತ್ತಾರೆ. ಇದರಲ್ಲಿ ಭಾಗವಹಿಸಿದ ಇಲ್ಲವೇ ಪ್ರಭಾವಗೊಂಡ ಕರ್ನಾಟಕದ ಹಕ್ಕಿವೀಕ್ಷಕರು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಂಡೀಪುರ, ಮಲೆಮಹದೇಶ್ವರ, ಮತ್ತು ಬಿಳಿಗಿರಿರಂಗ ಮುಂತಾದ ರಕ್ಷಿತಾರಣ್ಯಗಳಲ್ಲಿ ಕೆಲ ಸಮೀಕ್ಷೆಗಳನ್ನು ನಡೆಸುವಲ್ಲಿ ಸಫಲರಾದರೂ, ನಿರಂತರವಾಗಿ ಮುಂದುವರೆಯಲಿಲ್ಲ. ಆದರೆ, ಕರ್ನಾಟಕದ ಅರಣ್ಯ ಇಲಾಖೆಯ ಅಂಗಸಂಸ್ಥೆ ಜಂಗಲ್ ಲಾಡ್ಜ್‌ಸ್ ಹಕ್ಕಿ ವೀಕ್ಷಣೆಯನ್ನು ಪ್ರವಾಸೋದ್ಯಮವಾಗಿ ಮಾರ್ಪಡಿಸುವಲ್ಲಿ ಸಫಲವಾಯಿತು. ಇದೀಗ, ಅರಣ್ಯ ಇಲಾಖೆ ʼಹಕ್ಕಿ ಹಬ್ಬʼಗಳನ್ನು ಆಚರಿಸುತ್ತಿದ್ದು, ನೇರವಾಗಿ ಹಕ್ಕಿ ವೀಕ್ಷಕರನ್ನು ಅಹ್ವಾನಿಸಿ ಹಕ್ಕಿಗಳ ಸಮೀಕ್ಷೆ ನಡೆಸುತ್ತಿರುವುದನ್ನು 2015ರಿಂದ ಕೆಲ ರಕ್ಷಿತಾರಣ್ಯಗಳಲ್ಲಿ ಕಾಣಬಹುದಾಗಿದೆ.
ಕೆಲವು ಕಡಲವಾಸಿ ಹಕ್ಕಿಗಳು ಕಡಲ ಹೊರತು ಬೇರೆಡೆ ಕಾಣ ಸಿಗುವುದು ಅತಿ ಅಪರೂಪ. ದುರ್ಲಭ ಹಕ್ಕಿಗಳನ್ನು ದಿನವಿಡೀ ಕಡಲ ಮೇಲೆ ಪಯಣಿಸುತ್ತಾ ಹುಡುಕುವುದು ಸಾಹಸಮಯ ಸವಾಲು. ಕರಾವಳಿಯಲ್ಲಿ ಮೂರು ತಾಸಿನಲ್ಲಿ 60-70 ಪ್ರಭೇದದ ಹಕ್ಕಿಗಳು ಸುಲಭವಾಗಿ ಕಾಣ ಸಿಗುತ್ತವೆ, ಆದರೆ ಸಾಗರದ ಮೇಲೆ ದಿನವೆಲ್ಲಾ, ಹೆಚ್ಚೆಂದರೆ 20. ಇಂತಹ ವಿಶೇಷ ಹಕ್ಕಿಗಳನ್ನು ದಾಖಲಿಸಲು ಕಾರ್ಕಳದ ಶಿವಶಂಕರ್ ಎಂ. ಅವರು ಜನವರಿ 2011ರಂದು, ಮುಲ್ಕಿ ಬಂದರಿನಿಂದ ಕಡಲವಾಸಿ ಹಕ್ಕಿಗಳ ಸಮೀಕ್ಷೆಯನ್ನು ಪ್ರಪ್ರಥಮವಾಗಿ ಆರಂಭಿಸಿದರು [೯]. ಕಳೆದ ಒಂದು ದಶಕದ ಅವಧಿಯಲ್ಲಿ 23 ಸಮೀಕ್ಷೆಯನ್ನು ನಿರ್ವಹಿಸಿದ್ದಾರೆ. ಇದುವರೆಗೂ 29 ಕಡಲವಾಸಿ ಹಕ್ಕಿಗಳನ್ನು ದಾಖಲಿಸಿದ್ದು, 12 ಸಾಗರ ಸೀಮಿತ ಹಕ್ಕಿಗಳೂ ಮತ್ತು ತೀರದಲ್ಲಿ ಕಂಡು ಬಂದರೂ ಕಡಲಲ್ಲಿ ಬಹಳ ದೂರ ಆಹಾರಕ್ಕಾಗಿ ಪಯಣಿಸುವ 19 ಹಕ್ಕಿಗಳನ್ನು ಒಳಗೊಂಡಿದೆ.
2000ರ ಆಸುಪಾಸಿನಲ್ಲಿ ಸುಲಭವಾಗಿ ಎಟಕುವಂತಾದ -ಡಿಜಿಟಲ್ ಕ್ಯಾಮೆರಾ, ತ್ವರಿತ ಅಂತರಜಾಲ, ಓಡಾಡಲು ಒಳ್ಳೆಯ ರಸ್ತೆ – ವಾಹನ ವ್ಯವಸ್ಥೆ ಛಾಯಾ ಚಿತ್ರಕಾರರಿಗೆ ಹಾಗೂ ಹಕ್ಕಿವೀಕ್ಷಕರಿಗೆ ಅತ್ಯಂತ ಅನುಕೂಲಕರವಾಗಿ ಹಕ್ಕಿಗಳ ಫೋಟೋಗಳು, ಕಂಡು ಕಾಣರಿಯದ ಜಾಗಗಳಲ್ಲಿನ ಹಕ್ಕಿಗಳ ವಿಷಯ ಹಾಗೂ ಪಟ್ಟಿ ನೂರ್ಮಡಿಗೊಳ್ಳತೊಡಗಿತು. ಇದು ಅನೇಕ ಅಧ್ಯಯನಗಳಿಗೆ ದಾರಿಯಾಯಿತು. ಹಿಂದಿನಿಂದಲೂ ಹಕ್ಕಿ ಹಾಗೂ ಪರಿಸರ ವಿಜ್ಞಾನದ ಅಧ್ಯಯನವನ್ನು WII (Wildlife Institute of India), IISc (Indian Institute of Science), BNHS (Bombay Natural History Society) ಸಂಸ್ಥೆಗಳು ನಡೆಸುತ್ತಿವೆ. ಪ್ರಸ್ತುತ ʼಹಳೆ ಬೇರು -ಹೊಸಚಿಗುರಿನ ಸಮ್ಮಿಳಿತ ʼ ನವ ವಿಜ್ಞಾನ ಸಂಸ್ಥೆಗಳಾದ SACON (Salim Ali Centre for Ornithology and Natural History), ATREE (Ashoka Trust for Research in Ecology and Environment), NCBS (National Centre for Biological Sciences), NCF (Nature Conservation Foundation), ಹಾಗೂ Gubbi Labs ಗಳು ಅಧ್ಯಯನಗಳ ಮುಂಚೂಣಿಯಲ್ಲಿವೆ.
ನಂತರದಲ್ಲಿ ಸ್ಥಳೀಯ ಅಧ್ಯಯನದ ಆಧಾರದ ಮೇಲೆ ಜಿಲ್ಲಾವಾರು ಕೈಪಿಡಿ ಮತ್ತು ವರದಿಗಳು ಬರಲಾರಂಭಿಸಿದವು. ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ಎ.ಕೆ. ಚಕ್ರವರ್ತಿ (1992), ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಕೆ. ಗೀತಾ ನಾಯಕ್ ಮತ್ತು ಕೆ. ಪ್ರಭಾಕರ ಆಚಾರ್ಯ (2000), ಕೊಡಗು ಜಿಲ್ಲೆಯಲ್ಲಿ ಎಸ್.ವಿ. ನರಸಿಂಹನ್ (2004), ಇಡೀ ದಕ್ಷಿಣ ಕರಾವಳಿಯಲ್ಲಿ ಕೆ. ಪ್ರಭಾಕರ ಆಚಾರ್ಯ – ಶಿವಶಂಕರ್ ಎಂ (2012), ಬಳ್ಳಾರಿಯಲ್ಲಿ ಸಮದ್ ಕೊಟ್ಟೂರ್ (2014), ಮೈಸೂರ್ ನೇಚರ್ ವೆಬ್ ಸೈಟ್ ನಲ್ಲಿ ಮೈಸೂರು-ಮಂಡ್ಯ-ಚಾಮರಾಜನಗರ (2012) ಹಾಗೂ ಕೊಡಗು (2012).
1999-2004ರ ಅವಧಿಯಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಸಂಸ್ಥೆಗಳು, ಹಕ್ಕಿ ಮತ್ತು ಅವುಗಳ ಸ್ವಾಭಾವಿಕ ನೆಲೆಗಳ ಪ್ರಮಾಣ ಮತ್ತು ಗುಣಮಟ್ಟ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ, ಅವುಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವ ಉದ್ದೇಶದಿಂದ, ಕೆಲವು ಮಾನದಂಡಗಳನ್ನು ಬಳಸಿ ಆದ್ಯತೆ ಮೇರೆಗೆ ಸಂರಕ್ಷಿಸಬೇಕಿರುವ ಭಾರತದ ಪ್ರಮುಖ ಹಕ್ಕಿತಾಣಗಳನ್ನು ಪಟ್ಟಿ ಮಾಡಿದರು. ಮಾನದಂಡಗಳ ವಿಶೇಷತೆಯೆಂದರೆ ಅವಸಾನದ ಅಂಚಿನಲ್ಲಿರುವ ಹಕ್ಕಿಗಳಿಗೆ ನೆಲೆಯಾಗಿರುವ; ಅಧಿಕ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ಆಶ್ರಯ ನೀಡಿರುವ; ಅಪರೂಪದ ಹಕ್ಕಿಗಳಿಗೆ ನೆಲೆಯಾಗಿರುವ ನಿತ್ಯ, ಅರೆ ನಿತ್ಯ, ತೇವಭರಿತ ಹರಿದ್ವರ್ಣ ಕಾಡು; ಹಿಮಾಲಯ ಮುಂತಾದ ವಿಶಿಷ್ಟ ಜೀವ ವ್ಯವಸ್ಥೆ; ನಿರ್ದಿಷ್ಟ ಪ್ರದೇಶಗಳಿಗಷ್ಟೇ ಬದುಕಲು ಸೀಮಿತಗೊಂಡಿರುವ ಹಕ್ಕಿಗಳಿರುವ ಪ್ರದೇಶ ಮುಂತಾದವು. ಭಾರತದಾದ್ಯಂತ ಸಾವಿರಕ್ಕೂ ಅಧಿಕ ಹಕ್ಕಿ ವೀಕ್ಷಕರು, ವಿಷಯ ಪಂಡಿತರು, ಪರಿಸರ ಮತ್ತು ಅರಣ್ಯ ಇಲಾಖೆಗಳು ಭಾಗಿಯಾಗಿ 465 ಪ್ರಮುಖ ಹಕ್ಕಿ ತಾಣಗಳನ್ನು ದಾಖಲಿಸಿದರು[೧೦]. ಇದರಲ್ಲಿ ಕರ್ನಾಟಕದ 37 ತಾಣಗಳು ಒಳಗೊಂಡಿವೆ. ಮುಂದೆ, 2016ರಲ್ಲಿ ಪರಿಷ್ಕರಿಸಲ್ಪಟ್ಟು ಭಾರತದಲ್ಲಿ 544 ಮತ್ತು ಕರ್ನಾಟಕದಲ್ಲಿ 41 ಆಗಿವೆ[೧೧].
ಮೊದಲ ವರದಿ ಸಿದ್ದಪಡಿಸುವ ಸಮಯದಲ್ಲಿ, ನೈಸರ್ಗಿಕವಾಗಿ ಶ್ರೀಮಂತವಾದ ಉತ್ತರಕರ್ನಾಟಕದ ಕೆಲವೇ ಕೆಲವು ಪ್ರಮುಖ ಹಕ್ಕಿ ತಾಣಗಳನ್ನು ಉಲ್ಲೇಖಿಸಲಾಗಿದೆ. ಇಲ್ಲಿನ ಹಕ್ಕಿಗಳನ್ನೂ ಮತ್ತು ತಾಣಗಳನ್ನು ಅಭ್ಯಸಿಸಿ ದಾಖಲಿಸಿ ಹೊರಜಗತ್ತಿಗೆ ಪ್ರಚುರಪಡಿಸಲು ಬೀದರ್, ಗುಲ್ಬರ್ಗ, ವಿಜಾಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ಉತ್ತರಕನ್ನಡ ಜಿಲ್ಲೆಯ (ಈಗ 14 ಜಿಲ್ಲೆಗಳು) ನುರಿತ ಹಾಗೂ ಹಿರಿ ಕಿರಿಯ ಹಕ್ಕಿವೀಕ್ಷಕರೆಲ್ಲರೂ ಜನವರಿ 2001ರಲ್ಲಿ ಗದಗಿನ ಮಾಗಡಿ ಕೆರೆಯಲ್ಲಿ, ʼನಾರ್ತ್ ಕರ್ನಾಟಕ ಬರ್ಡರ್ಸ್ ನೆಟ್‌ವರ್ಕ್ʼ ವೇದಿಕೆಯಡಿ ಒಗ್ಗೂಡಿ ಕಾರ್ಯೋನ್ಮುಖರಾದರು. ನುರಿತ ಹಿರಿಯರಾದ ಜೆ.ಸಿ. ಉತ್ತಂಗಿ, ಪಿ.ಡಿ. ಸುದರ್ಶನ, ಗುರುನಾಥ ದೇಸಾಯಿ, ಶ್ರೀವತ್ಸ, ಅರ್.ಜಿ. ತಿಮ್ಮಾಪುರ, ಅಶೋಕ ಮನ್ಸೂರ ಮತ್ತು ವಿಜಯಮೋಹನ ರಾಜರನ್ನೊಳಗೊಂಡ 33 ಸದಸ್ಯರ ತಂಡದ ಶ್ಲಾಘನೀಯ ಚಟುವಟಿಕೆಯ ಫಲಿತಾಂಶದಿಂದಾಗಿ ಇಂದು ದಕ್ಷಿಣ ಭಾರತದ ಹಕ್ಕಿವೀಕ್ಷಕರೆಲ್ಲಾ ಇಲ್ಲಿ ಕಾಣ ಸಿಗುವ ವಿಶೇಷ ಹಕ್ಕಿಗಳನ್ನೂ ಮತ್ತು ಅವುಗಳಿಗೆ ನೆಲೆ ನೀಡಿರುವ ಉತ್ತಮ ಹಕ್ಕಿತಾಣಗಳನ್ನು ನೋಡಲು ಧಾವಿಸುತ್ತಾರೆ. ಇದುವರೆಗೂ ಮೇಲೆ ಹೇಳಿದ ಜಿಲ್ಲೆಗಳಲ್ಲಿ 476 ಪ್ರಭೇದದ ಹಕ್ಕಿಗಳನ್ನು ದಾಖಲಿಸಲಾಗಿದೆ. ಒಗ್ಗೂಡುವುದಕ್ಕೂ ಮೊದಲು, ಈ ಹಿರಿಯರೆಲ್ಲಾ ತಾವಿದ್ದಲೇ ವೈಯುಕ್ತಿಕವಾಗಿ ಇಲ್ಲವೇ ನಿಸರ್ಗ ಸಂಘಗಳ ಮೂಲಕ ತಮಗಿಷ್ಟವಾದ ಹಕ್ಕಿ ವೀಕ್ಷಣೆಯ ಕಲೆಯನ್ನು ಆಸಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದವರು, ಅದೂ ಕ್ಷಿಪ್ರ ಸಾಮೂಹಿಕ ಸಂವಹನದ ಮಾಧ್ಯಮವಿಲ್ಲದ ಕಾಲದಲ್ಲಿ.
1990ರಲ್ಲೇ ಕಾರ್ಕಳದ ಶ್ರೀಭುವನೇಂದ್ರ ಕಾಲೇಜಿನ ನೇಚರ್ ಕ್ಲಬ್ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಕೆ. ಪ್ರಭಾಕರ ಆಚಾರ್ಯರ ಸಾರಥ್ಯದಲ್ಲಿ ʼಕಾರ್ಕಳದ ಹಕ್ಕಿಗಳುʼ ಪುಸ್ತಕವನ್ನು ಪ್ರಕಟಿಸಿದ್ದಲ್ಲದೆ, ಪಟ್ಟಣದ ಆನೆಕೆರೆಯನ್ನು ಹಕ್ಕಿಗಳಿಗಾಗಿ ಉಳಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ಜೊತೆಯಾದವರು – ಪ್ರಖ್ಯಾತ ಹಕ್ಕಿ ತಜ್ಞ ಎಸ್. ಎ. ಹುಸೇನ್. ಈ ಒಗ್ಗಟ್ಟು ಮುಂದೆ, ಉತ್ತಮ ಹಕ್ಕಿವೀಕ್ಷಕರ ಪರಂಪರೆಯನ್ನು ಸೃಷ್ಟಿಸಿತು. ಕರಾವಳಿ ಮತ್ತು ಘಟ್ಟದ ಪರಿಸರದ ವಿವಿಧ ಮಜಲನ್ನು ಎನ್.ಎ. ಮಧ್ಯಸ್ಥ ಪರಿಚಯಿಸುತ್ತಿದ್ದರೆ, ಅರುಣಾಚಲಂ ಕುಮಾರ್ ಹಕ್ಕಿಗಳ ಬಗೆಗಿನ ಲೇಖನಗಳ ಸರಮಾಲೆ ಹಕ್ಕಿಗಳನ್ನು ನೋಡುವ ಸಂಶ್ಲೇಷಕ ನೋಟವನ್ನು ತೆರೆದಿಡುತ್ತಿತ್ತು. 2009ರಲ್ಲಿ ಮಣಿಪಾಲಕ್ಕೆ ವಿದ್ಯಾರ್ಥಿಯಾಗಿ ಬಂದ ರಮಿತ್ ಸಿಂಗಾಲ್, ನಾಲ್ಕು ವರುಷಗಳಲ್ಲಿ ಮಣಿಪಾಲದ ಹಕ್ಕಿಗಳ ನಕಾಶೆಯುಳ್ಳ ಕೈಪಿಡಿಯನ್ನು ಪ್ರಕಟಿಸಿದ್ದು ವಿಶೇಷ. ಎಸ್. ಎ. ಹುಸೇನ್ ರು SACONನ ಸಹಯೋಗದೊಂದಿಗೆ ಕೆರೆಯೊಂದರ ನೀರಿನ ಗುಣಮಟ್ಟವನ್ನು ಅಲ್ಲಿ ದೊರೆಯುವ ಮೀನಿನ ಸಹಾಯದಿಂದ ತಿಳಿದು, ಇದರಿಂದ ಅದೇ ಕೆರೆಯಲ್ಲಿ ಕಂಡು ಬರುವ ನೀರ್ಹಕ್ಕಿಗಳ ಮೇಲಾಗುವ ಪರಿಣಾಮಗಳನ್ನು ಅರಿಯುವ ಯೋಜನೆಯನ್ನು ಸಿದ್ಧ ಪಡಿಸಿದ್ದರು.
ವೈಲ್ಡ್ ಲೈಫ್ ಇನ್ಸ್ಟಿಟೂಟ್ ಆಫ್ ಇಂಡಿಯಾದ (WII) ರಮಣ್ ಕುಮಾರ್ ಹಾಗೂ ಬೆಂಗಳೂರಿನ ನ್ಯಾಷನಲ್ ಸೆಂಟರ್ ಆಫ್ ಬಯಲಾಜಿಕಲ್ ಸೈನ್ಸಸ್ (NCBS)ನ ಸುಹೇಲ್ ಖಾದರ್ ಮತ್ತವರ ತಂಡ 2007-2012 ಅವಧಿಯಲ್ಲಿ ಕೈಗೊಂಡ ʼಮೈಗ್ರಂಟ್ ವಾಚ್ʼ (Migrantwatch) ವಲಸೆ ಹಕ್ಕಿಗಳ ಅಧ್ಯಯನದ ಫಲಿತಾಂಶದಿಂದ ಕರಾರುವಕ್ಕಾದ ಆಗಮನ, ನಿರ್ಗಮನದ ದಿನಗಳು, ತಂಗುವ ಅವಧಿ, ವಲಸೆ ಬರುವ ದಾರಿ ಮುಂತಾದ ವಿವರಗಳನ್ನು ತಿಳಿಯಲು ಸಾಧ್ಯವಾಯಿತು[೧೨]. ಹಕ್ಕಿಗಳ ವಲಸೆಯ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂದರ್ಶಿಸಿ [೧][೧೩]. ಮುಂದೆ ಇವರ ತಂಡ ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ (NCF) ಮೂಲಕ 2013ರಿಂದ ಜಾಗತಿಕ ʼಇಬರ್ಡ್ʼ (eBird) ವೇದಿಕೆಯನ್ನು ಉಪಯೋಗಿಸಿಕೊಂಡು ಇತರೆ ಸಮಾನ ಮನಸ್ಕ ಹಕ್ಕಿವೀಕ್ಷಣಾ ಮತ್ತು ಅಧ್ಯಯನ ನಡೆಸುವ ಗುಂಪುಗಳೊಡಗೂಡಿ ʼಬರ್ಡ್ ಕೌಂಟ್ ಇಂಡಿಯಾʼ (Bird Count India) ಹೆಸರಿನಡಿ ಭಾರತದ ಯಾವುದೇ ಪ್ರದೇಶದಲ್ಲಿನ ಹಕ್ಕಿಗಳ ಇರುವಿಕೆಯನ್ನು ನೈಜ ಸಮಯದಲ್ಲಿ (Real Time) ದೊರೆಯುವಂತೆ ಮಾಡಿದ್ದಾರೆ[೧೪]. ʼಇಬರ್ಡ್ʼ ವೇದಿಕೆಯ ತಂತ್ರಜ್ಞತೆ ಸ್ಥಳದ ಹಾಗೂ ಹಕ್ಕಿಗಳ ಕರಾರುವಕ್ಕಾದ ದಾಖಲಾತಿಯನ್ನು ಸರಳವಾಗಿಸಿತು.ಸದುಪಯೋಗ ಪಡಿಸಿಕೊಂಡ ಮೈಸೂರು ನೇಚರ್ ಬಳಗದ ಹಕ್ಕಿ ವೀಕ್ಷಕರು ಮೂರು ವರುಷದ ಅವಧಿಯಲ್ಲಿ ದೇಶದ ಪ್ರಥಮ ಹಕ್ಕಿ ನಕ್ಷೆ ʼಮೈಸೂರು ಸಿಟಿ ಬರ್ಡ್ ಅಟ್ಲಾಸ್ʼ (2014-2016) ತಯಾರಿಸಲು ಸಾಧ್ಯವಾಯಿತು[೧೫].
ʼಇಬರ್ಡ್ʼ ಇಂದು ಇಡೀ ದೇಶದ ಮೂಲೆಮೂಲೆಯ ಹಕ್ಕಿಗಳ ಇರುವಿಕೆಯ ಯಥಾವತ್ತಾದ ಚಿತ್ರಣವನ್ನು ಆ ಕ್ಷಣದಲ್ಲಿ ನೀಡುತ್ತಿರುತ್ತದೆ, ಇದು ನುರಿತ ಹಕ್ಕಿ ವೀಕ್ಷಕನ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ. ಉದಾ: 2022, ಫೆಬ್ರವರಿ 18 ರಿಂದ 21ರೊಳಗೆ ಭಾರತದಲ್ಲಿ ನಡೆದ ನಮ್ಮ ಸುತ್ತಮುತ್ತಲಿನ ಹಕ್ಕಿಗಳ ಸಮೀಕ್ಷೆಯಲ್ಲಿ (Great Backyard Bird Count) 3782 ಹಕ್ಕಿ ವೀಕ್ಷಕರು ಭಾಗವಹಿಸಿ ದೇಶದ 1017 ಹಕ್ಕಿಗಳನ್ನು ದಾಖಲಿಸಿದ್ದಾರೆ. ಅಂದರೆ ಭಾರತದಲ್ಲಿನ ಒಟ್ಟು ಹಕ್ಕಿಗಳ ಶೇಕಡ 75ರಷ್ಟನ್ನು ನಾಲ್ಕು ದಿನದಲ್ಲಿ ದಾಖಲಿಸಲಾಗಿದೆ.
ಸಲೀಂ ಆಲಿಯವರು ಹಳೆಯ ಮೈಸೂರು ಸೀಮೆಯ ಹಕ್ಕಿ ಗಣತಿಯನ್ನು ಕೈಗೊಂಡ 78 ವರ್ಷಗಳ ನಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಹಕ್ಕಿ ತಜ್ಞ ಡಾ. ಸುಬ್ರಹ್ಮಣ್ಯ ಎಸ್ ಅವರು ತಮ್ಮ ತಂಡದೊಂದಿಗೆ 2018 – 2019ರ ಅವಧಿಯಲ್ಲಿ ಮತ್ತದೇ ಪ್ರದೇಶಗಳ ಮರು ಸಮೀಕ್ಷೆ ನಡೆಸಿ ಹಕ್ಕಿಗಳು ಮತ್ತು ಅವುಗಳ ಆವಾಸ ಸ್ಥಳಗಳಲ್ಲಾದ ಗಣನೀಯ ಬದಲಾವಣೆಯನ್ನು ದಾಖಲಿಸಿದ್ದಾರೆ.
ರಾಜ್ಯದ ಹಕ್ಕಿಗಳ ಪರಿಶೀಲನಾ ಪಟ್ಟಿ
ಬದಲಾಯಿಸಿತುಮಕೂರಿನ ಅಮೀನ್ ಅಹ್ಮದ್ ಇಡೀ ರಾಜ್ಯದ ಹಕ್ಕಿಗಳ ಮೊದಲ ಪರಿಶೀಲನಾ ಪಟ್ಟಿಯನ್ನು 2000 ರಲ್ಲಿ ಪ್ರಕಟಿಸಿದರು, ನಂತರ ಪರಿಷ್ಕರಿಸಿ ಉದಯವೀರ್ ಸಿಂಗ್ ಅವರೊಂದಿಗೆ 2004 ಮತ್ತು 2007ರಲ್ಲಿ 561 ಹಕ್ಕಿಗಳ ಪಟ್ಟಿಯನ್ನು ಪ್ರಕಟಿಸಿದರು. 2015ರಲ್ಲಿ ಅರಣ್ಯ ಇಲಾಖೆಗೆಂದು ನಾಡಿನ ಹಕ್ಕಿಗಳ ಪಟ್ಟಿಯನ್ನು ಪ್ರವೀಣ್. ಜೆ, ಸುಬ್ರಹ್ಮಣ್ಯ. ಎಸ್, ಮತ್ತು ವಿಜಯಮೋಹನ್ ರಾಜ್ ಪರಿಷ್ಕರಿಸಿದರು. ಕಟ್ಟುನಿಟ್ಟಾದ ಪರಿಶೀಲನೆಗೆ ಒಳಗಾಗದ ಲೇಖನಗಳಲ್ಲಿರುವ ಹಕ್ಕಿಗಳು, ನೋಡಿ ಅಥವಾ ಧ್ವನಿಯನ್ನು ಕೇಳಿ ಹಕ್ಕಿಯನ್ನು ಗುರುತಿಸುವಲ್ಲಿ ಆಗಿರಬಹುದಾದ ನ್ಯೂನತೆ, ಸರಿಯಾದ ವಿವರಣೆ ಇಲ್ಲದೆ ದಾಖಲಾದ ಹಕ್ಕಿಗಳನ್ನು ಹೊರತು ಪಡಿಸಿ ಮಿಕ್ಕವುಗಳನ್ನು ಒಟ್ಟುಮಾಡಿ 524 ಹಕ್ಕಿಗಳ ಪಟ್ಟಿಯನ್ನು ತಯಾರಿಸಿದರು[೧೬]. ಮುಂದಿನ ವರುಷ, 2016ರಲ್ಲಿ ಮರುಪರಿಷ್ಕರಿಸಿ 531 ಹಕ್ಕಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು[೧೭]. ಆರು ವರುಷಗಳ ನಂತರ ಈ ಪಟ್ಟಿ 549 ನ್ನು ಮುಟ್ಟಿದೆ (ಅಗಸ್ಟ್ 2022)[೧೮]. ಕರ್ನಾಟಕದ ಹಕ್ಕಿಗಳ ಪರಿಶೀಲನಾ ಪಟ್ಟಿ. ಈ ಪ್ರಮಾಣೀಕೃತ ಪರಿಶೀಲನಾ ಪಟ್ಟಿಯನ್ನು ತಯಾರಿಸಿದ್ದು ಹೀಗೆ:
- ಮೊದಲೆಲ್ಲಾ ಹಿಡಿದ/ಕೊಂದ ಹಕ್ಕಿಗಳ ಚರ್ಮದ ಮಾದರಿಗಳನ್ನು ಸಂಗ್ರಹಾಲಯಗಳಲ್ಲಿ ಕೂಡಿಸಿಡಬೇಕಿತ್ತು. ಅವುಗಳ ಆಧಾರದ ಮೇಲಷ್ಟೆ ನೋಡಿದ ಹಕ್ಕಿಗಳನ್ನು ದಾಖಲಿಸಬಹುದಿತ್ತು. ಇಂದಿಗೂ ಹಕ್ಕಿಗಳ ಬಗೆಗಿನ ಯಾವುದೇ ವೈಜ್ಞಾನಿಕ ಅನುಮಾನ ಪರಿಹರಿಸಕೊಳ್ಳಬೇಕಾದರೆ ಮ್ಯೂಸಿಯಂ ಮಾದರಿಯನ್ನು ಪರಿಶೀಲಿಸಲೇ ಬೇಕು. ಭಾರತದಲ್ಲಿ ಕರ್ನಾಟಕದ ಕೆಲ ಹಕ್ಕಿಯ ಮಾದರಿಗಳು ಕೇವಲ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯಲ್ಲಷ್ಟೇ ಇವೆ. ಹೆಚ್ಚಿನವು – ಲಂಡನ್, ನ್ಯೂಯಾರ್ಕ್, ಚಿಕಾಗೋ, ಯೇಲ್, ಮತ್ತು ವಾಷಿಂಗ್ಟನ್ ಮ್ಯೂಸಿಯಂಗಳಲ್ಲಿವೆ. ದಕ್ಷಿಣ ಏಷ್ಯಾದ ಹಕ್ಕಿಗಳ ಕೈಪಿಡಿ ರಚಿಸುವಾಗ ರಸ್ಮಸನ್ ಮತ್ತು ಅಂಡರ್ಸನ್ (2012) ಅವರುಗಳು ಇಡೀ ಭಾರತದ ಹಕ್ಕಿಗಳ ಮಾದರಿಗಳನ್ನು ಪುನಃ ಪರಿಶೀಲಿಸಿದ್ದರು. ಆದರೂ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲಾಯಿತು. ಸಲೀಂ ಆಲಿ – ವಿಸ್ಲರ್ (1942-43), ಕೋಜ್ (1942) ಅವರ ಸಮೀಕ್ಷೆಗಳಿಂದ ಸಂಗ್ರಹಿಸಲಾದ ಹಕ್ಕಿಗಳ ಮಾದರಿಯೇ ಅತಿ ಹೆಚ್ಚು 300, ಮಿಕ್ಕವರಿಂದ ಸಂಗ್ರಹಿಸಿದ್ದು ಸುಮಾರು 104, ಒಟ್ಟು 404.
- ಭಾರತದ ವನ್ಯ ಛಾಯಾಚಿತ್ರ ಕಲೆಯ ಇತಿಹಾಸವನ್ನು ಗಮನಿಸಿದರೆ ಘೋರ್ಪಡೆ, ಪೆರುಮಾಳ್, ಹನುಮಂತ ರಾವ್, ಅಲ್ಲಮಪ್ರಭು ಅಂತಹ ಕರ್ನಾಟಕದ ಚಿತ್ರಕಾರರನ್ನು ಆಧುನಿಕ ಪ್ರವರ್ತಕರೆಂದೇ ಪರಿಗಣಿಸುತ್ತಾರೆ. ಈ ಪರಂಪರೆಯನ್ನು ಇಂದಿಗೂ ಕರ್ನಾಟಕದ ಛಾಯಾಚಿತ್ರಕಾರರು ಉಳಿಸಿಕೊಂಡಿದ್ದಾರೆ. ಇವರು ಕ್ಲಿಕ್ಕಿಸಿ ಪ್ರದರ್ಶಿಸಿದ, ವಿವಿಧ ಆನ್‌ಲೈನ್ ಜಾಲತಾಣಗಳಲ್ಲಿ ಇದ್ದ, ಕರ್ನಾಟಕದಲ್ಲಿ ತೆಗೆದ ಖಚಿತ ಚಿತ್ರಗಳನ್ನು ಹುಡುಕಲಾಗಿ, ದೊರೆತದ್ದು ಒಟ್ಟು 499 ಹಕ್ಕಿಗಳು. ಅವುಗಳ ವಿವರ: ಓರಿಯಂಟಲ್ ಬರ್ಡ್ ಇಮೇಜಸ್ (400), ಇ ಬರ್ಡ್ (440), ಇಂಡಿಯನ್ ನೇಚರ್ ವಾಚ್ - ಬಿಎನ್‌ಜಿ ಬರ್ಡ್ಸ್ - ಬರ್ಡ್ಸ್ ಆಫ್ ಕೋಸ್ಟಲ್ ಕರ್ನಾಟಕ – ಶಿವಾಸ್ -ಫ್ಲಿಕರ್ - ಮಲಬಾರ್ ಟ್ರೋಗನ್ ಹಾಗೂ ನೇರ ಛಾಯಾ ಚಿತ್ರಕಾರರಿಂದ (32).
- ಕಣ್ಣಿಂದ ನೋಡಿದ ಇಲ್ಲವೇ ಧ್ವನಿಯನ್ನು ಕೇಳಿ ಗುರುತಿಸಿದ ಹಕ್ಕಿಯನ್ನು ವಿವರಣೆ ನೀಡಿ, ಇಲ್ಲವೇ ಫೋಟೊ ತೆಗೆದಿದ್ದರೆ ಅದನ್ನು ಲಗತ್ತಿಸಿ ʼಇಬರ್ಡ್ʼನ ಆನ್ ಲೈನ್ ವೇದಿಕೆಯಲ್ಲಿ ದಾಖಲಿಸಬಹುದಾಗಿದೆ. ಕಟ್ಟುನಿಟ್ಟಾಗಿ ಪರಾಮರ್ಶಿಸಿದ ನಂತರವಷ್ಟೇ ಇದು ದಾಖಲೆಯಾಗುತ್ತದೆ. ಇಲ್ಲಿನ ದಾಖಲಾತಿಯಲ್ಲಿ ದೊರೆತಿದ್ದು 496 ಹಕ್ಕಿಗಳು.
- ಮೇಲೆ ವಿವರಿಸಿದ ಮೂಲಗಳನ್ನು ಆಧರಿಸಿ, ಕರ್ನಾಟಕ ಕಂಡ 531 ಪ್ರಭೇದದ ಹಕ್ಕಿಗಳ ಪಟ್ಟಿಯನ್ನು ನವೆಂಬರ್ 2016ರಲ್ಲಿ ಇಂಡಿಯನ್ ಬರ್ಡ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಆರು ವರುಷಗಳ ನಂತರ ಈ ಪಟ್ಟಿ 549 ನ್ನು ಮುಟ್ಟಿದೆ (ಅಗಸ್ಟ್ 2022)[೧೮]. ಇವುಗಳನ್ನು ಹೀಗೆ ವರ್ಗೀಕರಿಸಬಹುದು.
- ವರ್ಷಪೂರ್ತಿ ಕಾಣ ಸಿಗುವ ಸ್ಥಳೀಯ ಹಕ್ಕಿಗಳು (ಕೆಲವು ಸಂಖ್ಯೆಯಲ್ಲಿಅತಿ ವಿರಳವಾದರೆ, ಕೆಲವು ಅತಿ ಹೆಚ್ಚು; ಕೆಲವು ಅತಿ ಕಡಿಮೆ ಬಾರಿ ಕಾಣಿಸಿಕೊಂಡಿದ್ದರೆ, ಇನ್ನು ಕೆಲವು ಯಾವಾಗಲೂ ಕಾಣ ಸಿಗುತ್ತವೆ): 313
- ಚಳಿಗಾಲದ ವಲಸೆ ಹಕ್ಕಿಗಳು (ಕೆಲವು ಸಂಖ್ಯೆಯಲ್ಲಿಅತಿ ವಿರಳವಾದರೆ, ಕೆಲವು ಅತಿ ಹೆಚ್ಚು; ಕೆಲವು ಅತಿ ಕಡಿಮೆ ಬಾರಿ ಕಾಣಿಸಿಕೊಂಡಿದ್ದರೆ, ಇನ್ನು ಕೆಲವು ವಲಸೆಯ ಸಮಯದಲ್ಲಿ ತಪ್ಪದೆ ಕಾಣ ಸಿಗುತ್ತವೆ; ಇಲ್ಲಿ ಕಡಲವಾಸಿ ಹಕ್ಕಿಗಳೂ ಸೇರಿವೆ):172
- ಬಿರುಗಾಳಿ - ಚಂಡಮಾರುತದಿಂದಾಗಿಯೋ, ಸುಸ್ತಾಗಿಯೋ ದಾರಿತಪ್ಪಿ ಬರುವ ಅಥವಾ ಹೊಸ ಆವಾಸ ಸ್ಥಳಗಳನ್ನು ಅರಸಿ ಬರುವ ಸಾಹಸಿ/ ಚಂಚಲ (Vagrant) ಹಕ್ಕಿಗಳು: 52
- ಈ ಹಿಂದೆ ಕಂಡಿದ್ದು, ಕಳೆದೆರಡು ದಶಕದಿಂದ ಶತಮಾನದವರೆಗೆ ಕಂಡು ಬರದ ಹಕ್ಕಿಗಳು :12. ಉದಾ: ದೊಡ್ಡ ಸಿಳ್ಳೆಬಾತು (Fulvous Whistling Duck), ಸಣ್ಣಗುಡಗಾಡು ಹಕ್ಕಿ (Small Buttonquail), ಸಣ್ಣ ಜೌಗು ಕೋಳಿ (Little Crake), ಮೂರು ತರಹದ ಉಲ್ಲಂಕಿ (Snipe), ಇತ್ಯಾದಿ. ಈ 12ರಲ್ಲಿ ಒಂದು ಮಾತ್ರ ಸ್ಥಳೀಯ ಹಕ್ಕಿ - ಹಳದಿ ಎದೆಯ ಹರಟೆಮಲ್ಲ (Pin striped Babbler) ಜೌಗು ಪ್ರದೇಶಕ್ಕೆ ಹೊಂದಿಕೊಂಡಂತೆ ಬೆಳೆಯುವ ವಿಸ್ತಾರ ಬಿದಿರಿನ ಮೆಳೆಯ ಆವಾಸಸ್ಥಾನದಲ್ಲಿ ವಾಸಿಸುತ್ತಿದ್ದು , 1939ರಲ್ಲಿ ಸಲೀಂ ಆಲಿಯವರು ದಾಖಲಿಸಿದ ನಂತರ ಯಾರ ಕಣ್ಣಿಗೂ ಬಿದ್ದಿಲ್ಲ. ಅವರು ನೋಡಿದ ಪ್ರದೇಶ -ಅಂತರಸಂತೆಯಲ್ಲಿ (ಹೆಚ್.ಡಿ. ಕೋಟೆ) ಬಿದಿರು ನಿರ್ನಾಮವಾಗಿದೆ. ಆ ಆವಾಸಕ್ಕೆ ಹೊಂದಿಕೊಂಡಂತೆ ವಿಕಸಿಸಿದ ಈ ಜೀವಿ, ಈಗ ಕರ್ನಾಟಕದ ವ್ಯಾಪ್ತಿಯಲ್ಲಿ ನಶಿಸಿಹೋಗಿರುವಂತಿದೆ.
- ಕರ್ನಾಟಕದ ಕರಾವಳಿಯಲ್ಲಿ ದಾಖಲಾದ ಹಕ್ಕಿಗಳು – 469 (ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಸೇರಿ)
- ಘಟ್ಟಗಳಿರುವ ಪ್ರಮುಖ ಜಿಲ್ಲೆಗಳಲ್ಲಿ ದಾಖಲಾದ ಹಕ್ಕಿಗಳು - 420 (ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ)
- ಮೈದಾನ ಪ್ರದೇಶದಲ್ಲಿ ದಾಖಲಾದ ಹಕ್ಕಿಗಳು – 486 (23 ಜಿಲ್ಲೆಗಳಲ್ಲಿ)
- ಉತ್ತರಕರ್ನಾಟಕದಲ್ಲಿ ದಾಖಲಾದ ಹಕ್ಕಿಗಳು – 430 (ಉತ್ತರ ಕನ್ನಡ ಜಿಲ್ಲೆಯನ್ನೂ ಸೇರಿಸಿದರೆ - 474)
- ದಕ್ಷಿಣ ಕರ್ನಾಟಕದಲ್ಲಿ ದಾಖಲಾದ ಹಕ್ಕಿಗಳು – 484 (14 ಜಿಲ್ಲೆಗಳಲ್ಲಿ)
- ಮೇಲೆ ಕಾಣಿಸಿದ ಅಂಕಿ ಅಂಶ, ಇ-ಬರ್ಡ್ ವೆಬ್ ಸೈಟ್ ನಿಂದಾಗಿ ಸಾಧ್ಯವಾಗಿದೆ.
ರಾಜ್ಯದ ಹಕ್ಕಿಗಳ ವಿಶಿಷ್ಟತೆ ಹಾಗೂ ಸ್ಥಿತಿ-ಗತಿ
ಬದಲಾಯಿಸಿ- ಕಡಿಮೆ ಮಳೆಯಾಗುವ ವಿಸ್ತಾರ ಹುಲ್ಲುಗಾವಲನ್ನು ಹೊಂದಿದ್ದ ವಿಶಾಲ ಬಯಲುಸೀಮೆಯ ಎರ್ಲಡ್ಡು (Great Indian Bustard), ನವಿಲಿನ ಗಾತ್ರದ ದೊಡ್ಡ ಹಕ್ಕಿ. ಇವುಗಳ ಸಂಖ್ಯೆ, ಸ್ವಾತಂತ್ರ ಬರುವ ಹೊತ್ತಿಗಾಗಲೇ ವಿರಳವಾಗಿ, ಸಂರಕ್ಷಣೆಯ ಅವಶ್ಯಕತೆ ಇದೆ ಎಂದು ಬ್ರಿಟಿಷ್ ಹಕ್ಕಿವೀಕ್ಷಕರು ವರದಿ ಮಾಡಿದ್ದರು. ಇವುಗಳು ಸಂಖ್ಯೆ ಎಷ್ಟು ಕಡಿಮೆಯಾಗಿದೆ ಎಂದರೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ 2016ರಲ್ಲಿ ಸ್ವಾನ್ ತಂಡದವರು ದಾಖಲಿಸಿದ 3 ಹಕ್ಕಿಗಳ ನಂತರ ಮತ್ತೆ ಕಾಣ ಸಿಕ್ಕಿಲ್ಲ. ಈ ಪ್ರದೇಶವನ್ನು ಹೊರತು ಪಡಿಸಿ ರಾಜ್ಯದ ಬೇರೆಡೆ ಕಂಡು ಬಂದಿಲ್ಲ. 2015ರಲ್ಲಿ ಇವುಗಳ ವಸಹಾತಿನ ವ್ಯಾಪ್ತಿ ಮತ್ತು ಚಟುವಟಿಕೆಯನ್ನು ಅರಿಯಲು ನೆರೆಯ ಸೋಲಾಪುರದ ನಾನ್ನಜ್ ವನ್ಯಧಾಮದಲ್ಲಿ, ಎರಡು ಹಕ್ಕಿಗಳಿಗೆ ಉಪಗ್ರಹ ಆಧಾರಿತ ಟ್ರಾನ್ಸ್ಮಿಟರ್ ಅಳವಡಿಸಿದ್ದರು. ಇವುಗಳಲ್ಲಿ ಒಂದು ಮಳೆಗಾಲ ಆರಂಭವಾಗುತ್ತಿದ್ದಂತೆ ಸುಮಾರು 100 ಕಿ.ಮೀ. ದೂರ ಕ್ರಮಿಸಿ ಕರ್ನಾಟಕದ ಗಡಿಗೆ ಬಂದಿದೆ. ನೇರವಾಗಿ ಪಯಣಿಸದೆ ಅಕ್ಕಲಕೋಟೆ, ಗಂಗೇವಾಡಿ, ವೈರಾಗ್ ಗಳಿಗೆ ಹೋಗಿ ಬಂದು ಮಾಡಿ ನಂತರ ಗಡಿಗೆ ಬಂದಿದೆ. ಮತ್ತೆ ನಾನ್ನಜ್ ಗೆ ಫೆಬ್ರವರಿಯಲ್ಲಿ ವಾಪಸ್ಸು ಬಂದಿದೆ.
- ಸಲೀಮ್ ಆಲಿಯವರು (1940) ಚಿತ್ರದುರ್ಗದಲ್ಲಿ ದಾಖಲಿಸಿದ ಪೊದೆಬುರ್ಲಿ (Rock Bushquail) ಯ ಉಪಪ್ರಭೇದ ವಿಜ್ಞಾನಕ್ಕೆ ಹೊಸದಾಗಿದ್ದು ಅಲ್ಲಿನ ಮಣ್ಣಿನ ವಿಶಿಷ್ಟ ಬಣ್ಣ - ಕೆಂಗಂದು ಮೆರುಗನ್ನು ಹೊಂದಿದ್ದು, ಜಿಲ್ಲೆಯಲ್ಲಿ ವಿರಳವಾಗಿ ಹರಡಿವೆ.
- ಬಿಳುಪಿನ ಕಂಠವಿರುವ ಕೆಂಪು ಹರಟೆಮಲ್ಲ (Tawny bellied Babbler) ನಾಡಿನೆಲ್ಲೆಡೆ ಹೆಚ್ಚು ಪರಿಚಿತ. ಕಂಠದಲ್ಲಿ ಬಿಳುಪಿನ ಬದಲು ಮಣ್ಣುಕೆಂಪಿರುವ ಪ್ರಭೇದ ಕೇವಲ ಬೀದರ ಜಿಲ್ಲೆಯಲ್ಲಿ ಕಂಡು ಬರುತ್ತಿವೆ. ನೆರೆಯ ರಾಜ್ಯ ತೆಲಂಗಾಣದ ನಲ್ಲಮಲ್ಲ ಅರಣ್ಯ ಪ್ರದೇಶದ ಉತ್ತರಭಾಗದಲ್ಲೆಲ್ಲಾ ಎಂದರೆ ಬಳ್ಳಾರಿಯಿಂದ ಬೀದರ್ ವರೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮಣ್ಣುಕೆಂಪಿನ ಕಂಠದ ಹರಟೆಮಲ್ಲರನ್ನು ಕಾಣುತ್ತೇವೆ. ಪ್ರಭೇದದಲ್ಲಿನ ಬಣ್ಣದ ವ್ಯತ್ಯಾಸ ಯಾವ ಪ್ರದೇಶದಲ್ಲಿ ಬದಲಾಗಿದೆ ಎಂಬುಂದನ್ನು ಸಂಶೋಧಿಸಬೇಕಿದೆ.
- ಕಪ್ಪು ಹೊಟ್ಟೆಯ ರೀವ (Black bellied Tern) ಹೇಮಾವತಿ, ಕಾವೇರಿ ನದಿಯ ಪಾತ್ರಗಳ ಮರಳ ದಿಬ್ಬಗಳಲ್ಲಿ ವಂಶಾಭಿವೃದ್ಧಿ ನಡೆಸುತ್ತಿದ್ದ ಶತಮಾನದಷ್ಟು ಹಿಂದಿನ ದಾಖಲೆ ಇದೆ. ಇಂತಲ್ಲಿ ನಾಲ್ಕೈದು ದಶಕಗಳಿಂದ ಮನುಷ್ಯರ ಅತಿಯಾದ ಚಟುವಟಿಕೆ, ಖಾಲಿಯಾಗಿರುವ ಮರಳ ದಿಬ್ಬಗಳು, ಹೆಚ್ಚಿದ ಜಾನುವಾರುಗಳ ಓಡಾಟ ಹಕ್ಕಿಗಳನ್ನು ಸಂಕಷ್ಟಕ್ಕೆ ತಳ್ಳಿದೆ. ತಿಮ್ಮಾಪುರ್ ಅವರ ಪ್ರಕಾರ ಕಪ್ಪು ಹೊಟ್ಟೆಯ ರೀವ ಸಾಮಾನ್ಯವಾಗಿ ಗೂಡನ್ನು ಪ್ರತಿ ಬಾರಿಯೂ ಒಂದೇ ನಿರ್ದಿಷ್ಟ ಸ್ಥಳದಲ್ಲಿಯೇ ನಿರ್ಮಿಸುತ್ತವೆ
- ಗುಬುಟು ಕೊಕ್ಕಿನ ಬಾತು (Knob billed Duck) ಉತ್ತರಕರ್ನಾಟಕದಲ್ಲಿ ತನ್ನ ಸಂತಾನ ಬೆಳೆಸಲು ಸೂಕ್ತ ಸ್ಥಳವೊಂದನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ಸಂಗತಿ.
- ಮಧ್ಯ ಭಾರತದವರೆಗೆ ಅಸ್ತಿತ್ವ ಇರುವ - ಕಂದು ಚಟಕ (Brown Rock Chat), ಕಪ್ಪು ಬಿಳಿ ಕಬ್ಬಕ್ಕಿ (Asian Pied Starling) ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ಕರ್ನಾಟಕದಲ್ಲಿ ವರ್ಷ ಪೂರ್ತಿ ಕಾಣ ಸಿಗುತ್ತಿದ್ದು, ಇವುಗಳ ನೆಲೆ ವಿಸ್ತಾರಗೊಂಡಂತಿದೆ.
- ಭಾರತದ ವ್ಯಾಪ್ತಿಯಲ್ಲಿ ಗುಜರಾತಿನ ಕಚ್ ಪ್ರದೇಶದಲ್ಲಿ ವಂಶಾಭಿವೃದ್ದಿ ನಡೆಸುವ ರಾಜಹಂಸ (Greater Flamingo), ಸಣ್ಣ ರಾಜಹಂಸ (Lesser Flamingo) ಸಮರ್ಪಕ ಮಳೆಯಾಗದಿದ್ದರೆ ಸಂತಾನಾಭಿವೃದ್ಧಿ ಚಟುವಟಿಕೆಯನ್ನು ಮುಂದೂಡುತ್ತವೆ. ಅಂತಹ ವರುಷಗಳ ಮಳೆಗಾಲದಲ್ಲಿ ಇವು ಉತ್ತರಕರ್ನಾಟಕದ ಕೆಲ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಭಾರತದ ಜಲಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಕಾಣಬರುತ್ತವೆ. ರಾಜಹಂಸ (Greater Flamingo) ಇರಾನ್ ಮತ್ತು ಕಜಕಿಸ್ತಾನದಿಂದ ವಲಸೆ ಸಹ ಬರುತ್ತವೆ. ಇರಾನ್‌ನ ಉರ್ಮಿಯಾ ಸರೋವರದಲ್ಲಿ ಅಗಸ್ಟ್ 1974ರಲ್ಲಿ ತೊಡಿಸಿದ್ದ ವಲಸೆ ಉಂಗುರವನ್ನು ಹೊತ್ತ ಹಕ್ಕಿಯೊಂದು ಏಪ್ರಿಲ್ 1975ರಂದು ರಾಯಚೂರಿನಲ್ಲಿ ಕಂಡು ಬಂದಿತ್ತು.
- ಗುಮ್ಮಾಡಲು ಹಕ್ಕಿ (Mountain Imperial Pigeon) ಮಲೆನಾಡಿನ ವಿಶಿಷ್ಟ ಪಾರಿವಾಳ. ಅತಿ ಎತ್ತರದಲ್ಲಿ ಗುಂಪಿನಲ್ಲಿ ಹಾರಾಡುತ್ತ, ಎತ್ತರದ ಮರದ ಹಣ್ಣನ್ನು ಆಹಾರವಾಗಿ ಸೇವಿಸುತ್ತಾ, ನೆಲಕ್ಕೆ ಇಳಿಯದೆ ಜೀವಿಸುವಂತಹುದು. ಆಯ್ದ ಕೆಲವೇ ತುರ್ಚಿ, ದೂಪ, ಉಗುನಿ ಮರದ ಹಣ್ಣುಗಳನ್ನು ತಿನ್ನುತ್ತವೆ. ಇದರ ಜೀರ್ಣಾಂಗ ವ್ಯವಸ್ಥೆ ಈ ಹಣ್ಣುಗಳಿಗೆ ಪೂರಕವಾಗಿ ಮಾರ್ಪಾಟು ಹೊಂದಿದೆ. ಈ ಮರಗಳು ಪ್ಲೈವುಡ್ ಮತ್ತು ಬೆಂಕಿಕಡ್ಡಿಗಳ ತಯಾರಿಕೆಗೆ ಹೇಳಿ ಮಾಡಿಸಿದ್ದು. ದಟ್ಟ ಕಾಡುಗಳಿಂದ ಈ ಮರಗಳನ್ನಷ್ಟೇ ಆಯ್ದು ಕಟಾವು ಮಾಡುತ್ತಿರುವುದರಿಂದ ಇವುಗಳ ಮೇಲೆ ಅವಲಂಬಿತ ಈ ಹಕ್ಕಿಗಳು ಕಡಿಮೆಯಾಗಿರುವುದನ್ನು ಪೂರ್ಣಚಂದ್ರ ತೇಜಸ್ವಿ ಅವರು ಬಹಳ ಹಿಂದೆಯೇ ದಾಖಲಿಸಿದ್ದಾರೆ.
- ಸ್ಥಳೀಯ ಬೂದು ಬಕ (Grey Heron) ಸಾಮಾನ್ಯವಾಗಿ ನಾಡಿನ ಎಲ್ಲೆಡೆ ವರ್ಷವಿಡೀ ನೀರಿನ ನೆಲೆಗಳಲ್ಲಿ ಕಾಣಸಿಗುತ್ತದೆ. ಇವುಗಳಲ್ಲಿ ಕೆಲ ಹಕ್ಕಿಗಳು ವಲಸೆಯಲ್ಲಿ ಪಾಲ್ಗೊಳ್ಳುತ್ತವೆ ಎಂಬುದಕ್ಕೆ ಒಂದು ಸಾಕ್ಷಿ - ಏಪ್ರಿಲ್ 1962ರಲ್ಲಿ ಉಡುಪಿಯ ಸುವರ್ಣ ನದಿಯ ಬಳಿ ಕಂಡು ಬಂದ ಬೂದು ಬಕದ ಕಾಲಿನಲ್ಲಿದ್ದ ವಲಸೆಯ ಉಂಗುರ. ಜೂನ್ 1961ರಲ್ಲಿ ದಕ್ಷಿಣ ಕಜಕಸ್ತಾನದ ತಲಸ್ ನದಿ ಅಂಚಿನಲ್ಲಿ ತೊಡಿಸಿದ್ದ ವಲಸೆಯ ಉಂಗುರವನ್ನು ಹೊತ್ತು ಉಡುಪಿಯವರೆಗೂ ಹಾರಿ ಬಂದಿತ್ತು[೧೯].
- ಸ್ಥಳೀಯ ಬೂದುಮಂಗಟ್ಟೆ (Indian Grey Hornbill) ಹಕ್ಕಿಯ ಸಂತಾನಕ್ಕೆ ಮರದ ಪೊಟರೆ ಅಗತ್ಯ. ಇವುಗಳ ಪ್ರಮುಖ ಆಹಾರ – ಆಲ, ಅರಳಿ, ಅತ್ತಿ, ಬಸರಿ ಮುಂತಾದ ಮರಗಳ ಹಣ್ಣುಗಳು. ಈ ಹಿಂದೆ ಇದೇ ಮರಗಳ ಸ್ವಾಭಾವಿಕ ಪೊಟರೆಗಳಲ್ಲಿ ಇವು ಗೂಡು ಮಾಡುತ್ತಿದ್ದವು. ರೈತಾಪಿ ಜನರು ಹೆಚ್ಚು ಆದಾಯ ಕೊಡದ ಆಲದ ಜಾತಿಯ ಮರಗಳನ್ನು ಬೆಳಸುವುದನ್ನು ನಿಲ್ಲಿಸಿದ್ದಾರೆ. ಪ್ರಸ್ತುತ ಪೊಟರೆ ಮಾಡುವಷ್ಟು ದೊಡ್ಡ ಮರಗಳು ವಿರಳವಾಗುತ್ತಿರುವುದರಿಂದ, ಹಳೆಯ ದೊಡ್ಡ ತೆಂಗಿನ ಮರದ ಪೊಟರೆಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತಿವೆ. ತೆಂಗಿನ ಮರದ ಸುತ್ತ ಯಾವುದೇ ಮರೆಯಿಲ್ಲದಿರುವ ಪ್ರಯುಕ್ತ ಇತರ ಹಿಂಸ್ರ ಹಕ್ಕಿಗಳಿಗೆ ಬಲಿಯಾಗುತ್ತಿವೆ. ಜೊತೆಗೆ ತೆಂಗಿನ ಮರ ಹಾಳಾಗುವುದರಿಂದ ಗೂಡಿಗೂ ಆಸ್ಪದ ಕೊಡುವ ಪ್ರವೃತ್ತಿ ಕಡಿಮೆಯಾಗಿದೆ.
- ಸರಳೆ ಸಿಳ್ಳಾರ (Malabar Whistling Thrush) ಮಲೆನಾಡಿನ ಸುಮಧುರ ಹಾಡುಗಾರ. ಪಶ್ಚಿಮ ಘಟ್ಟ ಮತ್ತು ಸಾತ್ಪುರ ಬೆಟ್ಟಗಳಲ್ಲಿ ಮಾತ್ರ ಇವುಗಳ ನೆಲೆ. ಇವುಗಳು ತಮ್ಮ ಸೀಮಿತ ನೆಲೆಯಿಂದ ದೂರ ಹೋಗುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಜೂನ್ 1972ರಲ್ಲಿ ತೊಡಿಸಿದ್ದ ವಲಸೆ ಉಂಗುರವನ್ನು ಹೊತ್ತು 800 ಕಿ. ಮೀ. ದೂರದ ಕೊಡಗಿನಲ್ಲಿ ಫೆಬ್ರವರಿಯ 1976ರಲ್ಲಿ ಕಾಣಿಸಿ ಕೊಂಡ ಒಂದು ಹಕ್ಕಿ, ಸೀಮಿತ ನೆಲೆಯ ಹಕ್ಕಿಗಳೂ ಸಹ ಬಹು ದೂರ ಹೋಗಬಲ್ಲವು ಎಂಬುದನ್ನು ಸಾಬೀತು ಪಡಿಸಿತು. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಮಳೆಗಾಲದಲ್ಲಿ ಸಣ್ಣ ಸೂರಕ್ಕಿ (Small Sunbird), ಸೂಜಿಬಾಲದ ಬಾನಾಡಿ (White rumped Spinetail) ಹಾಗೂ ಬಿಳಿತಲೆಯ ಕಬ್ಬಕ್ಕಿ (Malabar Starling) ಯಂತಹ 20ಕ್ಕೂ ಅಧಿಕ ಪ್ರಭೇದದ ಹಕ್ಕಿಗಳು ಪಶ್ಚಿಮ-ಪೂರ್ವ ಘಟ್ಟಗಳ ನಡುವೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿವೆ. ಇವುಗಳು ಮೊದಲಿನಿಂದಲೂ ಓಡಾಡುತ್ತಿದ್ದು ಹಕ್ಕಿವೀಕ್ಷಕರು ಗಮನಿಸದೆ ಇರಬಹುದು ಇಲ್ಲವೇ ಇದು ಇತ್ತೀಚಿನ ಬೆಳವಣಿಗೆಯೋ ಎಂಬುದನ್ನು ತಿಳಿಯಬೇಕಿದೆ.
- ಮಲೆ ದಾಸಮಂಗಟ್ಟೆ ಹಕ್ಕಿ (Malabar Pied Hornbill) ದಾವಣಗೆರೆ ಜಿಲ್ಲೆಯಲ್ಲಿ ಇರುವುದನ್ನು ಖಾತರಿ ಪಡಿಸಿಕೊಂಡ ಡಾ. ಶಿಶುಪಾಲರು ಕಳೆದ ಎರಡು ದಶಕದಲ್ಲಿ ಇವುಗಳ ನೆಲೆವಿಸ್ತಾರಗೊಂಡಿರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎನ್ನುತ್ತಾರೆ. ಇದಕ್ಕೆ ಪೂರಕವಾಗಿ ಕಂಡ ಹಕ್ಕಿಗಳ ಆವರ್ತನೆ ಸಹ ಅಧಿಕಗೊಂಡಿದೆ ಎನ್ನುವುದು ಹಕ್ಕಿ ನಕಾಶೆಯಿಂದ ಸ್ಪಷ್ಟ. ಬಹುಶಃ ಹೆಚ್ಚಿದ ಹಕ್ಕಿ ವೀಕ್ಷಕರ ಸಂಖ್ಯೆ ಮತ್ತು ಹಕ್ಕಿಗಳನ್ನು ಅರಸುತ್ತಾ ಮೂಲೆಮೂಲೆಯನ್ನೆಲ್ಲಾ ಜಾಲಾಡುತ್ತಿರುವುದರಿಂದ ಹೆಚ್ಚಿದ ವಿಸ್ತಾರ ಮತ್ತು ಕಂಡ ಆವರ್ತನೆಯ ನಕಾಶೆಯಲ್ಲಿ ಮೂಡಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಮಲೆ ದಾಸಮಂಗಟ್ಟೆಗಳು ಉಡುಪಿ -ಉತ್ತರಕನ್ನಡ – ಶಿವಮೊಗ್ಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
- ಕಪ್ಪುಬಿಳಿ ಚೇಕಡಿ ಹಕ್ಕಿ (White naped Tit) ಮೇಕೆದಾಟು- ಹೊಗೇನಕಲ್ ನಡುವಿನ ಪ್ರದೇಶದಲ್ಲಿ ವರ್ಷಪೂರ್ತಿ ಹಾಗೂ ನಾಯಕನಹಟ್ಟಿಯಲ್ಲಿ ಮಳೆಗಾಲದ ಅವಧಿಯಲ್ಲಿ ಮೂರು ಬಾರಿ ಮಾತ್ರ ಕಾಣ ಸಿಕ್ಕಿವೆ. ಹೊಗೇನಕಲ್‌ಗೆ ಹೊಂದಿಕೊಂಡಿರುವ ತಮಿಳುನಾಡಿನ ಮೆಟ್ಟೂರಿನಲ್ಲಿ ವರ್ಷಪೂರ್ತಿ ದಾಖಲಾಗಿವೆ. ಆಂಧ್ರದಲ್ಲಿ ಹಿಂದೂಪುರ, ಅನಂತಪುರಗಳಲ್ಲಿ, ಗಂಡಿಕೋಟೆಯಲ್ಲಿ ಒಮ್ಮೊಮ್ಮೆ ಕಾಣಿಸಿಕೊಂಡಿವೆ. ಇಲ್ಲಿ ಹೇಳಿದ ದಕ್ಷಿಣ ಒಳನಾಡಿನ ಸೀಮಿತ ಜಾಗಗಳ ಹೊರತು ಇವುಗಳ ಅಸ್ತಿತ್ವವಿರುವುದು ನಾಯಕನಹಟ್ಟಿಯಿಂದ 1100 ಕಿ.ಮೀ ದೂರವಿರುವ ನೈರುತ್ಯ ಗುಜರಾತ್ ಮತ್ತು ಪೂರ್ವ ರಾಜಸ್ತಾನ. ಇಲ್ಲಿ ಇವುಗಳ ಸುಸ್ಥಿರ ವಸಹಾತಿದೆ. ಈ ಪ್ರದೇಶದ ಹೊರತು ಇಡೀ ವಿಶ್ವದಲ್ಲೆಲ್ಲೂ ಇವುಗಳ ಅಸ್ತಿತ್ವವಿಲ್ಲ. ಬಹುಶಃ ಈ ಹಿಂದೆ ವ್ಯಾಪಕವಾಗಿ ಹರಡಿದ್ದು, ಪ್ರತಿಕೂಲ ಪರಿಸ್ಥಿತಿಯಿಂದಾಗಿ ಎಲ್ಲೆಡೆ ಅಳಿದು ಎರಡು ವಿಭಿನ್ನ ವಸಹಾತು ಮಾತ್ರ ಉಳಿದಿದೆ. ಇಂತಹ ಜೀವಿಗಳನ್ನು ಮೂಲಾವಶೇಷ (Relict & Distinct) ಎನ್ನುತ್ತಾರೆ.
- ಬೂದು ಸಿಪಿಲೆ ಹಕ್ಕಿ ಬೇಸಿಗೆಯಲ್ಲಿ ಹಿಮಾಲಯದ ತಪ್ಪಲಿನಲ್ಲಿ ಸಂತಾನ ಮುಗಿಸಿ ನಂತರ ದೇಶದೆಲ್ಲೆಡೆ ಚದುರಿ ಚಳಿಗಾಲ ಕಳೆದು ನಂತರ ವಾಪಸ್ಸು ಹೋಗುವ ವಲಸೆ ಹಕ್ಕಿ. ಇದು ತನ್ನ ಚಳಿಗಾಲದ ನೆಲೆಗೆ ಕರಾರುವಕ್ಕಾದ ಸಮಯಕ್ಕೆ ಆಗಮಿಸುವುದಕ್ಕೆ ಹೆಸರುವಾಸಿ. ಬಿಳಿಗಿರಿರಂಗನ ಬೆಟ್ಟದಲ್ಲಿ ಟಿ.ಎಸ್. ಗಣೇಶ ಅವರು 2007ರಲ್ಲಿ ಒಂದು ಬೂದು ಸಿಪಿಲೆಯ (Grey Wagtail) ಆಗಮನವನ್ನು ಸಪ್ಟೆಂಬರ್‌ನ ಎರಡನೇ ವಾರದಲ್ಲಿ ನೋಡಿದರು. ಆಶ್ಚರ್ಯವೆಂದರೆ ಇದಕ್ಕೆ ಒಂದು ಕಾಲಿರಲಿಲ್ಲ. ಮುಂದಿನ ಎರಡು ವರುಷಗಳ ಕಾಲ ಅದೇ ಪ್ರದೇಶಕ್ಕೆ ಅದೇ ಸಮಯದಲ್ಲಿ ಈ ಒಂಟಿ ಕಾಲಿನ ಹಕ್ಕಿ ಮತ್ತೆ ಬಂದು ತಂಗಿತ್ತು. ಒಂಟಿ ಕಾಲಿನ ಹಕ್ಕಿಯಾದ್ದರಿಂದ ಅದೇ ಹಕ್ಕಿ ಬಂದಿದೆ ಎಂದು ಖಾತ್ರಿಯಾಯಿತು[೨೦].
- ವಲಸೆ ಹಕ್ಕಿ ಕೆಂಪು ಕಾಲಿನ ಚಾಣ (Amur Falcon) ಸೈಬೀರಿಯಾ-ಚೀನಾದಲ್ಲಿ ಸಂತಾನ ಮುಗಿಸಿ ಅಪಾರ ಸಂಖ್ಯೆಯಲ್ಲಿ ನಾಗಾಲ್ಯಾಂಡಿಗೆ ಅಕ್ಟೋಬರ್-ನವೆಂಬರ್‌ನಲ್ಲಿ ಬಂದು ಕೆಲವು ವಾರ ತಂಗುತ್ತವೆ. ದಷ್ಟಪುಷ್ಟವಾಗಿ ದಕ್ಷಿಣಆಫ್ರಿಕಾದತ್ತ ಭಾರತ ಮತ್ತು ಅರಬ್ಬಿಸಮುದ್ರದ ಮೂಲಕ ಪಯಣಿಸುತ್ತವೆ. ಅಲ್ಲಿ ಚಳಿಗಾಲವನ್ನು ಕಳೆದು ಮತ್ತೆ ವಾಪಸ್ಸು ತಮ್ಮ ತವರಿನತ್ತ ತರಳುತ್ತವೆ. ಇದು ಪ್ರತಿ ವರುಷ ನಡೆಯುವ ವಲಸೆ ಚಕ್ರ. ಈ ವಲಸೆ ಸಮಯದಲ್ಲಿ ಕರ್ನಾಟಕದಲ್ಲಿ ಬಹಳಷ್ಟು ಬಾರಿ ಕಾಣಿಸಿಕೊಂಡಿವೆ. ಉಪಗ್ರಹ ಆಧಾರಿತ ಟ್ರಾನ್ಸ್ಮಿಟರ್ ಅಳವಡಿಸಿದ ಕೆಲವು ಹಕ್ಕಿಗಳು ಇಂತಹ ಸಮಯಕ್ಕೆ ಇಂತಲ್ಲಿಗೆ ಬರುತ್ತವೆಂದು, ಇಲ್ಲವೇ ತಂಗಿವೆಯೆಂದು ಖಚಿತವಾಗಿ ಊಹಿಸಿ ಅವುಗಳನ್ನು ನೋಡಬಹುದಾದ ಸಾಧ್ಯತೆ ಹೆಚ್ಚಿದೆ. ಮೇ 2017ರಲ್ಲಿ ವಾಪಸ್ಸು ಪುಣೆಗೆ ಬಂದ ಹಕ್ಕಿಯೊಂದು ವಾಯುಭಾರ ಕುಸಿತದಿಂದಾಗಿ ಕೋಲಾರದ ಕೆಜಿಎಫ್ ನ್ನು ತಲುಪಿತ್ತು. ಇನ್ನೊಂದು 2019ರಲ್ಲಿ ಉತ್ತರ ಕರ್ನಾಟಕದ ಮೂಲಕ ವಲಸೆ ಹೋಗಿರುವುದನ್ನು ಹಾರಾಟದ ನಕಾಶೆಯಲ್ಲಿ ನೋಡಬಹುದು [೨೧].
- ದೊಡ್ಡ ಚಿಟವ (Oriental Pratincole) ಆಲಮಟ್ಟಿ ಹಿನ್ನೀರಿನಲ್ಲಿ ವಂಶೋತ್ಪತ್ತಿಗಾಗಿ ನೈರುತ್ಯ ಆಸ್ಟ್ರೇಲಿಯಾದಿಂದ ಈಸ್ಟ್ ಏಷಿಯನ್ ಆಸ್ಟ್ರೇಲಿಷಿಯನ್ ಫ್ಲೈವೇ ನಲ್ಲಿ (East Asian Australasian Flyway) 6350 ಕಿ. ಮೀ. ಬರುವ ವಿಷಯ 2019ರ ಹೊಸದಾಗಿ ಬೆಳಕಿಗೆ ಬಂದಿದೆ (ಚಿತ್ರ – 6)[೨೨]. ಇದುವರೆಗೂ ವಲಸೆಯ ಹಕ್ಕಿಗಳು ಉತ್ತರಾರ್ಧಗೋಳದಿಂದ ಸೆಂಟ್ರಲ್ ಏಷಿಯನ್ ಫ್ಲೈವೇ ನಲ್ಲಿ (Central Asian Flyway) ಮಾತ್ರ ಆಗಮಿಸುತ್ತವೆಂಬ ನಂಬಿಕೆಯನ್ನು ದೊಡ್ಡ ಚಿಟವ ಸುಳ್ಳು ಮಾಡಿದೆ[೨೩].
- ಕರಿಕೊಕ್ಕಿನ ರೀವ (Common Tern) ಪ್ರತಿವರ್ಷ ಕರಾವಳಿಗೆ ವಲಸೆ ಬರುತ್ತವೆ. ಜೂನ್ 1981ರಲ್ಲಿ ಕಜಕಸ್ತಾನದ ಅಲಕೊಲ್ ಸರೋವರದ ಅಂಚಿನಲ್ಲಿ ವಲಸೆಯ ಉಂಗುರವನ್ನು ತೊಟ್ಟ ಒಂದು ರೀವ ಜನವರಿ 1982ರಲ್ಲಿ ಉಡುಪಿಯಲ್ಲಿ ಕಾಣಿಸಿಕೊಂಡಿತ್ತು.
- ಅಪರೂಪದ ಕಡಲವಾಸಿ ದಕ್ಷಿಣಧ್ರುವದ ಕಡಲಗಿಡುಗ (South Polar Skua) ಅಗಸ್ಟ್ 1964ರಂದು ಉಡುಪಿಯಲ್ಲಿ ಕಾಣಿಸಿಕೊಂಡಿತ್ತು. ಈ ಹಕ್ಕಿಗೆ ವಲಸೆಯ ಉಂಗುರವನ್ನು ದಕ್ಷಿಣಧ್ರುವದಲ್ಲಿ ಮಾರ್ಚ್ 1961ರಲ್ಲಿ ತೊಡಿಸಿದ್ದರು. ಅಲ್ಲಿಂದ ನೇರವಾಗಿ ಹಾರಿ ಬಂದಿದ್ದರೆ 17500 ಕಿ. ಮೀ. ದೂರವನ್ನು ಕ್ರಮಿಸಬೇಕಿತ್ತು, ಅದೂ ಆಫ್ರಿಕಾ ಖಂಡವನ್ನು ದಾಟಿ. ಆದರೆ ಕಡಲವಾಸಿ ಹಕ್ಕಿಗಳು ಭೂಪ್ರದೇಶದ ಮೇಲೆ ಹಾರುವುದಿಲ್ಲ! ಹೀಗಾಗಿ ಅದು ಕ್ರಮಿಸಿದ ದೂರ ಇನ್ನೂ ಅಧಿಕ.
- ಡೇಗೆಗಳು (Osprey) ಚಳಿಗಾಲದಲ್ಲಿ ನಮ್ಮಲ್ಲಿಗೆ ವಲಸೆ ಬರುತ್ತವೆ. ಸಾಮಾನ್ಯವಾಗಿ ಮೂರು ವರುಷದ ವಯಸ್ಕ ಹಕ್ಕಿಯಷ್ಟೇ ಸಂತಾನ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ, ಹಾರಾಡುವ ಮರಿಯಾಗಿ ಬಂದ ಇವು ವಯಸ್ಕರಾಗುವ ತನಕ ತವರಿಗೆ ವಾಪಸ್ಸು ಹೋಗುವುದಿಲ್ಲ. ಇಂತಹ ಅವಯಸ್ಕ ಡೇಗೆಗಳೇ ಕೆಲವೆಡೆ ವರ್ಷವೆಲ್ಲಾ ಕಾಣಿಸಿಕೊಳ್ಳುತ್ತವೆ. 2019ರ ಸೆಪ್ಟೆಂಬರ್‌ನಲ್ಲಿ ರಷ್ಯಾದಲ್ಲಿ ಉಪಗ್ರಹ ಆಧಾರಿತ ಟ್ರಾನ್ಸ್ಮಿಟರ್ ಅಳವಡಿಸಿದ್ದ ಜೋಡಿ ಡೇಗೆಗಳು ಭಾರತಕ್ಕೆ ಬಂದವು. ಹೆಣ್ಣು ರಾಜಾಸ್ತಾನದ ಸರೋವರ ನಗರ ಉದಯಪುರದಲ್ಲಿ ಬೀಡುಬಿಟ್ಟರೆ, ಗಂಡು ಮಧ್ಯಪ್ರದೇಶದ ಮೂಲಕ ನವೆಂಬರ್‌ನಲ್ಲಿ ಬಾಗಲಕೋಟೆಯ ಇಳಕಲ್ಲಿಗೆ ಬಂದು, ಬಹುಶಃ ವಿಂಡ್ ಮಿಲ್ ಅಥವಾ ಎಲೆಕ್ಟ್ರಿಕ್ ತಂತಿಗಳಿಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿತು (ಚಿತ್ರ – 7)[೨೪].
- ಕಳೆದ ಶತಮಾನದ ಆದಿಯಲ್ಲಿ, ಮೈಸೂರು ನಗರದ ಮೇಲೆಲ್ಲಾ, ಮುಸ್ಸಂಜೆ ಮತ್ತು ಬೆಳಗಿನಲ್ಲಿ ಕ್ರೌಂಚ ಹಕ್ಕಿಗಳು (Demoiselle Crane) ದೊಡ್ಡ ಗುಂಪಿನಲ್ಲಿ ಹಾರಾಡುತ್ತಿದ್ದು, ನಂಜನಗೂಡಿನ ಕಪಿಲ ನದಿಯ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಲಿ ವಿಶ್ರಾಂತಿ ಪಡೆಯುತ್ತಿದ್ದ ವರದಿಗಳಿವೆ. ಆ ನಂತರ ಅಲ್ಲೊಮ್ಮೆ ಇಲ್ಲೊಮ್ಮೆ ಕಡಿಮೆ ಸಂಖ್ಯೆಯಲ್ಲಿ ಕಂಡ ವರದಿ ಇದೆ. 2015ರ ನಂತರ ಚಳಿಗಾಲದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ, ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ, ನೂರರ ತನಕ ಪ್ರತಿವರ್ಷ ತಪ್ಪದೆ ವಲಸೆ ಬರುತ್ತಿವೆ. 1987ರಿಂದ ಹಿಡಕಲ್ ಹಿನ್ನೀರಿನಲ್ಲಿ ಇವುಗಳ ಚಲನವಲನೆಗಳನ್ನು ಎರಡು ದಶಕಗಳ ಕಾಲ ಅಭ್ಯಸಿಸಿರುವ ತಿಮ್ಮಾಪುರ ಅವರ ಪ್ರಕಾರ ಇವುಗಳು ಮಾರ್ಚ್ 21 ರೊಳಗೆ ಚಾಚೂ ತಪ್ಪದೆ ಹಿಂತಿರುಗಿ ಹೋಗುತ್ತವೆ.
- ಬೆಂಗಳೂರಿನ ಎಂ. ನಿರಂಜನ್ ಅವರು ಡಿಸೆಂಬರ್ 15, 2007ರಲ್ಲಿ ಬನ್ನೂರಿನ ಬಳಿ ಇರುವ ಕಗ್ಗಲಿಪುರದ ಕೆರೆಯಲ್ಲಿದ್ದ ಪಟ್ಟೆತಲೆಬಾತುಗಳ(Bar headed Goose) ಚಿತ್ರ ತೆಗೆದು, ಮನೆಗೆ ಹೋಗಿ ಕಂಪ್ಯೂಟರ್ ನಲ್ಲಿ ನೋಡಲಾಗಿ ‘E6’ ಎಂದು ಬರೆಯಲಾಗಿದ್ದ ಹಳದಿ ಕೊರಳ ಪಟ್ಟಿಯನ್ನು ಹಕ್ಕಿಯೊಂದು ಧರಿಸಿದ್ದು ಕಂಡು ಬಂದಿತು. ಹಕ್ಕಿಜ್ವರದ ತಪಾಸಣೆ ಮತ್ತು ವಲಸೆಯಿಂದಾಗಿ ಹರಡಬಹುದಾದ ದೇಶಗಳ ವ್ಯಾಪ್ತಿಯನ್ನು ಅರಿಯಲು ಉತ್ತರ ಮಂಗೋಲಿಯಾದಲ್ಲಿ ಹಕ್ಕಿ ವಿಜ್ಞಾನಿ ಮಾರ್ಟಿನ್ ಗಿಲ್ಬರ್ಟ್ 50 ಬಾತುಗಳಿಗೆ ಕೊರಳ ಪಟ್ಟಿಯನ್ನು ಹಿಂದಿನ ವರ್ಷ ತೊಡಿಸಿದ್ದರು. ಪಟ್ಟೆತಲೆ ಬಾತು ಸುಮಾರು 5000 ಕಿ.ಮೀ. ದೂರ ಕ್ರಮಿಸಿದ್ದನ್ನು ಒಂದು ಛಾಯಾಚಿತ್ರ ದಾಖಲಿಸಿ ವಿಶೇಷ ಮಹತ್ವ ಪಡೆಯಿತು. ಹೀಗಾಗಿ ಇಂದಿಗೂ ʼಕೊರಳಪಟ್ಟಿ ಇರುವ ಪಟ್ಟೆ ಬಾತುʼ ಹಕ್ಕಿ ಛಾಯಾ ಚಿತ್ರಕಾರರ ಪ್ರಮುಖ ಗುರಿ. ಅಂದಿನಿಂದ ಇಂದಿನವರೆಗೂ ಹಕ್ಕಿವೀಕ್ಷಕರು ಮತ್ತು ಛಾಯಾಚಿತ್ರಕಾರರು ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಕೊರಳ ಪಟ್ಟಿ ಇರುವ 44 ಬಾತುಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ 2 ಬಾತುಗಳು 3 ಬಾರಿ ಹಾಗೂ 10 ಬಾತುಗಳು 2 ಬಾರಿ ಕಂಡಿವೆ ಅಂದರೆ ಪ್ರತಿ ವರುಷ 10,000 ಕಿ.ಮೀ. ಕ್ರಮಿಸಿ ತವರಿಗೆ ಹೋಗಿ ಬಂದಿವೆ. ಒಟ್ಟಾರೆ ಕರ್ನಾಟಕದ ದಾಖಲೆ ಸಧ್ಯಕ್ಕೆ ಲಭ್ಯವಿಲ್ಲ.
- ಇದಕ್ಕೂ ಬಹಳ ಹಿಂದೆ ಜೂನ್ 1984ರಲ್ಲಿ ಚೀನಾದ ಕ್ವಿಂಘೈ ಪ್ರಾಂತ್ಯದಲ್ಲಿ ತೊಡಿಸಲಾಗಿದ್ದ ಉಂಗುರವನ್ನು ಹೊತ್ತ ಪಟ್ಟೆತಲೆ ಬಾತು, 12 ವರ್ಷಗಳ ಕಾಲ ಯಾರ ಕಣ್ಣಿಗೂ ಬೀಳದೆ ಇದ್ದದ್ದು ನವೆಂಬರ್ 1996ರಲ್ಲಿ ಧಾರವಾಡದಲ್ಲಿ ಕಾಣಿಸಿಕೊಂಡಿತ್ತು.
- ವಿಶ್ವದ ಬೇರೆಡೆ ಕಾಣ ಸಿಗದ, ಪಶ್ಚಿಮಘಟ್ಟಗಳಿಗಷ್ಟೇ ಸೀಮಿತವಾಗಿರುವ 16 ಪ್ರಭೇದದ ಹಕ್ಕಿಗಳು (Endemic) ನಮ್ಮಲ್ಲಿವೆ. ನಗೆ ಮಲ್ಲ (Laughingthrush), ಕಿರುರೆಕ್ಕೆ (Shortwing)ಗಳು ಅತಿ ಅಪರೂಪವೆಂದೇ ಹೇಳಬಹುದು. ಇವಲ್ಲದೆ, ಹೊಂಬಣ್ಣದ ಬೀಸಣಿಗೆ ಬಾಲದ ಉಲಿಯಕ್ಕಿ (Golden headed Cisticola) ಹೆಚ್ಚಿನ ಸಾಂದ್ರತೆ ಪಶ್ಚಿಮಘಟ್ಟಗಳ ಎತ್ತರ ಪ್ರದೇಶದ ಹುಲ್ಲುಗಾವಲಿನಲ್ಲಿ ಕಂಡುಬರುತ್ತವೆ. ಇವು ಉತ್ತರ ಕೇರಳವನ್ನು ಹೊರತು ಪಡಿಸಿದರೆ ಬೇರೆಡೆ ಅಸ್ತಿತ್ವದಲ್ಲಿ ಇಲ್ಲ. ಈ ಹಕ್ಕಿ ನಮ್ಮಲ್ಲಿ ಘಟ್ಟದ ಹುಲ್ಲುಗಾವಲಿನ ಸೀಮಿತ ಪ್ರದೇಶದಲ್ಲಿ ಕಂಡರೆ, ಇದರ ಸಂಬಂಧಿ ಉತ್ತರಭಾರತದ ಹಿಮಾಲಯದ ತಪ್ಪಲಿನ ನದಿಗಳ ಪಾತ್ರದಲ್ಲಿರುವ ಜೌಗು ಹುಲ್ಲುಗಾವಲುಗಳಲ್ಲಿ ಹರಡಿವೆ.
- ಹತ್ತು ಸರ್ಕಾರಿ ಮತ್ತು ಸರ್ಕಾರೇತರ ಭಾರತೀಯ ವಿಜ್ಞಾನ ಸಂಸ್ಥೆಗಳು, 1990 ರಿಂದ 2020ರವರೆಗಿನ ಲಭ್ಯವಿರುವ ಅಂಕಿಅಂಶಗಳನ್ನು, ಅದರಲ್ಲೂ ತುಲನೆ ಮಾಡಲು ಸಾಧ್ಯತೆ ಇರುವಂತಹ 867 ಭಾರತದ ಹಕ್ಕಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಪರಾಮರ್ಶಿಸಿ ಪ್ರಥಮ ವರದಿಯನ್ನು 2020ರಲ್ಲಿ ಪ್ರಕಟಿಸಿದೆ[೨೫] . ಕಂಡ ಹಕ್ಕಿಗಳ ಸಂಖ್ಯೆ, ಆವರ್ತನ, ಆವಾಸ ಸ್ಥಳ ಮತ್ತು ಆಹಾರದಲ್ಲಿನ ವೈವಿಧ್ಯತೆ, ಹಕ್ಕಿ ಎದುರಿಸುತ್ತಿರುವ ಅಪಾಯದ ಮಟ್ಟ - ಇವುಗಳ ಆಧಾರದ ಮೇಲೆ ದೀರ್ಘಕಾಲೀನ (ಕಳೆದ 25 ವರುಷಗಳು), ಪ್ರಸ್ತುತ ವಾರ್ಷಿಕ (ಇತ್ತೀಚಿನ 5 ವರುಷಗಳು), ಹಾಗೂ ನೆಲೆಸಿರುವ ಪ್ರದೇಶದ ವಿಸ್ತರಣೆಯ ಸ್ಥಿತಿಯನ್ನು ವಿಶ್ಲೇಷಿಸಿಲು ಸಾಧ್ಯವಾಗಿದೆ. ಫಲಿತಾಂಶ ಕರ್ನಾಟಕಕ್ಕೂ ಅನ್ವಯಿಸುತ್ತದೆ.
- ಬೆಂಗಳೂರನ್ನು ಒಳಗೊಂಡಂತೆ, ಆರು ಬೃಹತ್ ನಗರಗಳಲ್ಲಿ ಗುಬ್ಬಿಗಳ ಸಂಖ್ಯೆ ಶೇಕಡ 40ರಷ್ಟು ಕಡಿಮೆಯಾಗಿದ್ದರೂ, ಇತರೆಡೆ – ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಂದ್ರತೆ ಹಾಗೂ ವಾಸಿಸುವ ಪ್ರದೇಶಗಳು ಬಹಳಷ್ಟಿದ್ದು, ಅವುಗಳು ಕ್ಷೀಣಿಸಿಲ್ಲ, ಉಪಸ್ಥಿತಿ ಸಾಕಷ್ಟು ಸ್ಥಿರವಾಗಿದೆ. ಪ್ರಮುಖ ನಗರಗಳಲ್ಲಿ ಸಂತಾನದ ಸಮಯದಲ್ಲಿ ಮರಿಗಳಿಗೆ ಉಣಿಸಲು ಬೇಕಾದ ಮೃದು ಹುಳುಗಳು ಸಿಗದ ಕಾರಣ, ಮೈಗೆ ಅಂಟಿರುವ ಕೀಟಗಳನ್ನು ಕೆಡವಲು ಧೂಳು ಸ್ನಾನದ ಅವಶ್ಯಕತೆಯಿದ್ದು ಅದಕ್ಕೆ ಬೇಕಾದ ಧೂಳು ಇಲ್ಲದಿರುವುದರಿಂದ ಗುಬ್ಬಿಗಳು ನಗರಗಳಿಂದ ಕ್ಷೀಣಿಸಿವೆ. ಗುಬ್ಬಿಯ ಸಂಖ್ಯೆ ಎಲ್ಲೆಡೆ ಕಡಿಮೆಯಾಗಿದೆ ಎಂಬ ಊಹಾಪೋಹಕ್ಕೆ ಈ ವರದಿ ತೆರೆ ಎಳೆದಿದೆ. ಗುಬ್ಬಿಗಳಂತೆ, ಸಾಂದ್ರತೆ ಕೆಳಗಿಳಿಯದೆ, ಮೇಲೂ ಏರದೆ ಸ್ಥಿರವಾದ ಸ್ಥಿತಿಯನ್ನು ಕಾಪಾಡಿಕೊಂಡು ಬಂದಿರುವ ಇತರ ಹಕ್ಕಿಗಳೆಂದರೆ -ವಲಸೆ ಬರುವ ಜೌಗು ಸೆಳೆವ (Western Marsh Harrier) ಹಾಗೂ ಸ್ಥಳೀಯ ತುರಾಯಿ ಪನ್ನಗಾರಿ (Crested Serpent Eagle), ರಾಮದಾಸ ಹದ್ದು (Black winged Kite), ಹರಳುಚೋರೆ (Emerald Dove), ಮತ್ತು ಬಿಳಿಕತ್ತಿನ ರಾಟವಾಳ (Silverbill)
- ಮೂರು ದಶಕಗಳ ಹಿಂದೆ ನವಿಲುಗಳು ಎಲ್ಲೋ ಒಂದೊಂದು ಕಾಣ ಸಿಗುತ್ತಿದ್ದವು. ಇಂದು ಕರಾವಳಿಯಿಂದ ಮೊದಲುಗೊಂಡು ಮಳೆಕಾಡಿನ ಘಟ್ಟ ಪ್ರದೇಶ, ಬಯಲುಸೀಮೆ ಎಲ್ಲೆಡೆ ತನ್ನ ನೆಲೆಯನ್ನು ವಿಸ್ತಾರಗೊಳಿಸಿದೆ. ಜೊತೆಗೆ ಬಹುಶ: ಬೇಟೆಯ ನಿಯಂತ್ರಣ- ಧಾರ್ಮಿಕ ಮನೋಭಾವದಿಂದಾಗಿ ನವಿಲಿನ ಸಂಖ್ಯೆ ಅತಿ ಹೆಚ್ಚಿರುವುದನ್ನು ವರದಿ ತಿಳಿಸಿದೆ. ಎಷ್ಟರ ಮಟ್ಟಿಗೆ ಇವುಗಳ ಸಂಖ್ಯೆ ವೃದ್ಧಿಸಿದೆ ಎಂದರೆ ವ್ಯವಸಾಯ ಬೆಳೆಗಳಿಗೆ ಮಾರಕವಾಗಿರುವುದನ್ನು ಕಾಣುತ್ತಿದ್ದೇವೆ. ಸಂಖ್ಯೆ ವೃದ್ಧಿಯಾಗಿರುವ ಇತರೆ ಹಕ್ಕಿಗಳು- ವಲಸೆ ಬರುವಂತಹವು: (Glossy Ibis) ಗುಲಾಬಿ ಕಬ್ಬಕ್ಕಿ (Rosy Starling) ಮತ್ತು ಬೂದು ಉಲಿಯಕ್ಕಿ (Blyth’s Reed Warbler); ಸ್ಥಳೀಯವು ಹೆಚ್ಚಿನಂಶ ನಮ್ಮ ಸುತ್ತ ಮುತ್ತ ವಾಸಿಸಲು ಹೊಂದಿಕೊಂಡಿರುವ - ಸಾಕು ಪಾರಿವಾಳ (Feral Pigeon), ಟುವ್ವಿ ಹಕ್ಕಿ (Ashy Prinia), ಕೋಗಿಲೆ (Asian Koel), ಗುಲಾಬಿ ಕೊರಳಿನ ಗಿಳಿ (Rose-ringed Parakeet)
- ಕೆಲವೇ ಕೆಲವು ಹಕ್ಕಿಗಳನ್ನು ಹೊರತು ಪಡಿಸಿ ಮಿಕ್ಕೆಲ್ಲವೂ - ವಿವಿಧ ಹಿಂಸ್ರ ಹಕ್ಕಿಗಳು (Raptors), ರಣಹದ್ದುಗಳು (Vultures), ಬಾತುಕೋಳಿಗಳು (Ducks) , ಕಡಲಕ್ಕಿ (Gull) ಮತ್ತು ರೀವಗಳು (Tern), ನೀರ್ನಡಿಗೆ ಹಕ್ಕಿಗಳು (Waders), ಘಟ್ಟಗಳ ಸೀಮಿತ ನೆಲೆಯ ಸ್ಥಳೀಯ ಹಕ್ಕಿಗಳು (Endemic), ಅರಣ್ಯ ಮತ್ತು ಹುಲ್ಲುಗಾವಲಿನ ವಿಶಿಷ್ಟ ಹಕ್ಕಿಗಳು ಸಂಖ್ಯಾದೃಷ್ಟಿಯಿಂದ ಅತಿಯಾಗಿ ಕ್ಷೀಣಿಸಿವೆ ಹಾಗೂ ವಾಸಿಸುವ ನೆಲೆಯ ಆರೋಗ್ಯ ಮಟ್ಟ ತಳ ಮುಟ್ಟಿರುವ ಮುನ್ಸೂಚನೆಯನ್ನು ನೀಡಿದೆ.
- ಅಂತರರಾಷ್ಟ್ರೀಯ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ (IUCN) ಅಪಾಯದ ಅಂಚಿನಲ್ಲಿರುವ ಸಸ್ಯ, ಪ್ರಾಣಿ, ಹಕ್ಕಿ, ಕೀಟ ಮುಂತಾದ ಜೀವಿಗಳ ʼಕೆಂಪು ಪಟ್ಟಿʼಯನ್ನು ಕಾಲಕಾಲಕ್ಕೆ ಪುನವಿರ್ಮರ್ಶಿಸಿ ಬಿಡುಗಡೆ ಮಾಡುತ್ತಿರುತ್ತದೆ ಅಪಾಯ ಅಂಚಿನಲ್ಲಿರುವ ʼIUCN ಕೆಂಪು ಪಟ್ಟಿʼಯಲ್ಲಿ ಹೆಸರಿಸಲಾದ ಕರ್ನಾಟಕದ ಹಕ್ಕಿಗಳು. ಇದರಲ್ಲಿ ಸೇರಿಸಲ್ಪಟ್ಟ ಜೀವಿಗಳ ಪ್ರದೇಶವಾರು ಹಂಚಿಕೆ, ಸಾಂದ್ರತೆ, ಆವಾಸ ಸ್ಥಾನ, ಸಂರಕ್ಷಣಾ ವಿಧಾನಗಳನ್ನು ವಿಸ್ತೃತವಾಗಿ ವಿವರಿಸಲ್ಪಟ್ಟಿರುತ್ತದೆ. ಇದನ್ನು ಅನುಸರಿಸಿ ಆಯಾ ದೇಶಗಳು ತಮ್ಮಲ್ಲಿರುವ ಅಪಾಯಕ್ಕೊಳಗಾದ ಜೀವಿಗಳ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆದರೆ ಅವನ್ನು ಕಾರ್ಯ ರೂಪಕ್ಕೆ ಇಳಿಸುವ ಕಠಿಣ ಕ್ರಮ ಏನೇನೂ ಸಾಲದಾಗಿದೆ. ಕರ್ನಾಟಕದ 58 ಪ್ರಭೇದದ ಹಕ್ಕಿಗಳು ಈ ಕೆಂಪು ಪಟ್ಟಿಯಲ್ಲಿವೆ. ಇವುಗಳಲ್ಲಿ ಸ್ಥಳೀಯ ಹಕ್ಕಿಗಳು 31 ಹಾಗೂ ವಲಸೆ ಹಕ್ಕಿಗಳು 27[೨೬].
- ಸೀಮಿತ ನೆಲೆಯಲ್ಲಷ್ಟೇ (Endemic) ಬದುಕಿರುವ ಹಕ್ಕಿಗಳು ಕೆಲವು, ಆ ಪ್ರದೇಶದ ಹೊರತು ಇವುಗಳು ವಿಶ್ವದ ಬೇರೆಡೆ ಕಾಣಸಿಗುವುದಿಲ್ಲ. ಇಂತಹವು ದಕ್ಷಿಣ ಏಷಿಯದಲ್ಲಿ 190 ಇವೆ, ಇವುಗಳಲ್ಲಿ ಭಾರತದ 78 ಹಕ್ಕಿಗಳೂ ಸೇರಿವೆ. ಭಾರತದ 78 ಎಂಡೆಮಿಕ್ ಗಳಲ್ಲಿ ಕರ್ನಾಟಕ 37 ಹಕ್ಕಿಗಳೂ ಸೇರಿವೆ[೨೭]. ಇವುಗಳಲ್ಲಿ 16 ಕರ್ನಾಟಕದ ಪಶ್ಚಿಮಘಟ್ಟ ವಾಸಿಗಳು ಅತ್ಯಂತ ಕಡಿಮೆ ಪ್ರದೇಶದಲ್ಲಿ (ಕೆಲವೇ ಎಕರೆ ಪ್ರದೇಶದಲ್ಲಿ) ಬದುಕುಳಿದಿವೆಕರ್ನಾಟಕದ ಸೀಮಿತ ನೆಲೆಯ ಹಕ್ಕಿಗಳು.
ಕನ್ನಡದಲ್ಲಿರುವ ಹಕ್ಕಿಗಳನ್ನು ಕುರಿತ ಕೆಲ ಪುಸ್ತಕಗಳು
ಬದಲಾಯಿಸಿ- ಪಕ್ಷಿಗಳು – ಜಿ.ವಿ.ಬಿ. ನಾಯ್ದು ಮತ್ತು ಚಂದ್ರಾ ಬಿ. ನಾಯ್ದು (1970)
- ಹಿರಿಯ ಕಿರಿಯ ಹಕ್ಕಿಗಳು – ಕೆ. ಶಿವರಾಮ ಕಾರಂತ (1970)
- ನಮ್ಮ ಹಕ್ಕಿಗಳು – ಹೆಚ್. ಆರ್. ಕೃಷ್ಣಮೂರ್ತಿ (1983)
- ಪಶು-ಪಕ್ಷಿ ಪ್ರಪಂಚ – ಕೃಷ್ಣಾನಂದ ಕಾಮತ್ (1990)
- ಕನ್ನಡನಾಡಿನ ಹಕ್ಕಿಗಳು ಭಾಗ 1 ಮತ್ತು 2 – ಕೆ.ಪಿ. ಪೂರ್ಣಚಂದ್ರ ತೇಜಸ್ವಿ (1996)
- ಹಕ್ಕಿ ಪುಕ್ಕ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ (1997)
- ಕೊಡಗಿನ ಖಗರತ್ನಗಳು (ಕೊಡವ, ಕನ್ನಡ, ಇಂಗ್ಲೀಷ್) – ಎಸ್.ವಿ. ನರಸಿಂಹನ್ (2004)
- ಪಕ್ಷಿ ಪ್ರಪಂಚ – ಹರೀಶ್ ಆರ್. ಭಟ್, ಪ್ರಮೋದ್ ಸುಬ್ಬರಾವ್ (2005)
- ದಕ್ಷಿಣ ಕರಾವಳಿಯ ಹಕ್ಕಿಗಳು (ಕನ್ನಡ, ಇಂಗ್ಲೀಷ್) – ಕೆ. ಪ್ರಭಾಕರ ಆಚಾರ್ಯ, ಶಿವಶಂಕರ್ ನಾಯಕ್ (2012)
- ಪಕ್ಷಿಗಳ ಹಾರಾಟ -ಜಿ. ಶ್ರೀನಿವಾಸಮೂರ್ತಿ (2014)
- ಅಂಬರದೊಳಾಡುವ ಕೀಚುಗನ ಗುಟ್ಟು – ಎ.ಪಿ.ಸಿ.ಅಭಿಜಿತ್ (2015)
ಇಂಗ್ಲೀಷ್ ನಲ್ಲಿ ದೊರಕುವ ಕರ್ನಾಟಕದ ಹಕ್ಕಿಗಳನ್ನು ಕುರಿತಾದ ಕೆಲ ಪುಸ್ತಕಗಳು
ಬದಲಾಯಿಸಿ- A Birder’s Handbook to Manipal – Ramit Singal (2013)
- Birds of Hampi – Samad Kottur (2014)
- Birds of Nitte University Campus – Arunachalam Kumar, Shivashankar M (2014)
ಕರ್ನಾಟಕದ ಹಕ್ಕಿಗಳನ್ನು ಕುರಿತಾದ ಕೆಲ ಅಂತರಜಾಲಗಳು
ಬದಲಾಯಿಸಿಪೂರಕ ಮಾಹಿತಿ ಹಾಗೂ ತಿದ್ದುಪಡಿ ನೆರವು
ಬದಲಾಯಿಸಿಮಾನ್ಯರಾದ - ಗುರುಪ್ರಸಾದ್ ಪಿ, ಗುರುಪ್ರಸಾದ್ ತುಂಬುಸೋಗೆ, ಡಾ. ಶಿಶುಪಾಲ್ ಎಸ್, ತಿಮ್ಮಾಪುರ ಆರ್ ಜಿ, ಪವನ್ ರಾಮಚಂದ್ರ, ಮನು ಕೆ, ಮೋಹನ್ ಕುಮಾರ್ ಎಂ, ರಾಜು (ಅರಣ್ಯ ಇಲಾಖೆ, ಅಂಕಸಮುದ್ರ), ವಿಜಯಲಕ್ಷ್ಮಿ ರಾವ್, ಶಿವಶಂಕರ್ ಎಂ, ಮತ್ತು ಶೇಷಗಿರಿ ಬಿ ಆರ್ .
ಉಲ್ಲೇಖಗಳು
ಬದಲಾಯಿಸಿ- ↑ Praveen, J, Subramanya, S., Raj, V. M., 2022. A checklist of the birds of Karnataka, India (v4.0). Website: http://www.indianbirds.in/indian-states/
- ↑ ವೆಂಕಟಾಚಲ ಶಾಸ್ತ್ರಿ ಟಿ.ವಿ. 2015. ಅಚ್ಚಗನ್ನಡ ಪ್ರಾಣಿ ಪದಕೋಶ, ಸಪ್ನ ಬುಕ್ ಹೌಸ್, ಪುಟ 84-127
- ↑ https://archive.org/details/KittelKannadaEnglishDictionary
- ↑ Ali, S. 1985.Fall of the Sparrow. Oxford University Press, Bombay,265pp
- ↑ Ali, S. & H. Whistler. 1942-43. The birds of Mysore. J. Bombay Nat. Hist. Soc. Vol.43:130-147, 318-341, 573-595; Vol. 44: 9-26, 208-220
- ↑ https://bengaluru.citizenmatters.in/2911-history-of-bird-watching-in-bengaluru-2911
- ↑ https://www.facebook.com/groups/bngbirds
- ↑ https://indianbirds.in/pdfs/IB3.4_Shyamal_IndianOrnithology.pdf
- ↑ https://indianbirds.in/pdfs/IB.7.3_ShivashankarEtAl_MulkiCoast.pdf
- ↑ Islam, M.Z. & A.R. Rahmani. 2004. Important Bird Areas in India: Priority sites for conservation. Mumbai: Indian Bird Conservation Network: Bombay Natural History Society and BirdLife International (UK)
- ↑ Rahmani, Asad & Islam, Zafar-ul & Kasambe, Raju. 2016. Important Bird and Biodiversity Areas in India Priority sites for conservation
- ↑ https://www.ncf-india.org/education-and-public-engagement/migrantwatch
- ↑ https://drive.google.com/file/d/1e3XESejpil7e47aF70TciQF5VIs5XDL6/view
- ↑ https://ebird.org/
- ↑ https://indianbirds.in/pdfs/IB_15_3_ShivaprakashETAL_MysuruCityBirdAtlas.pdf
- ↑ https://indianbirds.in/pdfs/IB_12_4_5_PraveenETAL_KarnatakaChecklist.pdf
- ↑ https://indianbirds.in/pdfs/IB_14_4_PraveenETAL_KarnatakaChecklistCorrections.pdf
- ↑ ೧೮.೦ ೧೮.೧ Praveen, J, Subramanya, S., Raj, V. M., 2022. A checklist of the birds of Karnataka, India (v4.0). Website: http://www.indianbirds.in/indian-states/ [Date of publication: 20 August 2022]
- ↑ Balachandran, S, Tuhina Katti & Ranjith Manakadan. 2018. Indian Bird Migration Atlas. Bombay Natural History Society
- ↑ https://www.migrantwatch.in/blog/tag/grey-wagtail/
- ↑ https://www.deccanherald.com/science-and-environment/satellite-tagged-amur-falcons-fly-back-to-manipur-village-after-29000-km-migratory-route-908651.html
- ↑ https://www.argos-system.org/oriental-pratincoles/
- ↑ "ಆರ್ಕೈವ್ ನಕಲು". Archived from the original on 2022-09-14. Retrieved 2022-09-14.
- ↑ https://www.downtoearth.org.in/news/wildlife-biodiversity/are-siberian-migratory-birds-increasingly-falling-prey-to-india-s-power-lines--67844
- ↑ SoIB 2020. State of India’s Birds, 2020: Range, trends and conservation status. The SoIB Partnership. Pp 50
- ↑ IUCN 2022. The IUCN Red List of Threatened Species. Version 2022-1. Accessed from Praveen, J. & Jayapal, R. Threatened birds of India (v6.0). Website: http://www.indianbirds.in/india/ [Date of publication: 05 August 2022]
- ↑ http://www.wiienvis.nic.in/KidsCentre/ebi_8385.aspx