ಕರ್ತನೋಪಕರಣಗಳು
ಕರ್ತನೋಪಕರಣಗಳು: ಕತ್ತರಿಸುವ ಸಾಧನಗಳ ಒಟ್ಟು ಹೆಸರು (ಕಟ್ಲೆರಿ). ಬ್ಲೇಡು, ಚಾಕು, ಚೂರಿ, ಕತ್ತಿ, ಬಾಳು, ಖಡ್ಗ, ಕತ್ತರಿ, ಕುಡುಗೋಲು, ವೈದ್ಯರ ಶಸ್ತ್ರಗಳು. ಇವು ಬಳಕೆಯಲ್ಲಿರುವ ಸಾಮಾನ್ಯ ಪ್ರಭೇದಗಳು. ಕರವಾಲ, ಪೀಚಕತ್ತಿ, ಒಡಿಕತ್ತಿ, ಹೆಗ್ಗತ್ತಿ, ಹೆಗ್ಗತ್ತರಿ ಮುಂತಾದವು ಸಹ ಕರ್ತನೋಪಕರಣಗಳೇ. ಲೋಹವನ್ನು ಮನುಷ್ಯ ಕಂಡು ಕೊಂಡಂದಿನಿಂದ ಇವುಗಳ ತಯಾರಿಕೆ, ಬಳಕೆ ರೂಢಿಗೆ ಬಂದಿವೆ. ಮೊದಲು ಕಬ್ಬಿಣ, ಮುಂದೆ ಉಕ್ಕು ಸಾಮಾನ್ಯವಾಗಿ ಉಪಯೋಗವಾಗುತ್ತಿದ್ದ ಲೋಹಗಳು. ಮಿಶ್ರಲೋಹಗಳಲ್ಲಿ ಸಂಶೋಧನೆ ಮುಂದುವರಿದಂತೆ ಕರ್ತನೋಪಕರಣಗಳ ತಯಾರಿಕೆಯಲ್ಲೂ ಸುಧಾರಣೆಗಳು ಕಾಣಿಸಿಕೊಂಡುವು. ಇಂದು ತುಕ್ಕು ಹಿಡಿಯದ ಉಕ್ಕು (ಸ್ಟೇನ್ಲೆಸ್ ಸ್ಟೀಲ್) ಕರ್ತನೋಪಕರಣಗಳ ತಯಾರಿಕೆಯಲ್ಲಿ ವಿಶೇಷವಾಗಿ ಬಳಕೆಯಾಗುವ ಕಚ್ಚಾಸಾಮಗ್ರಿ.
ರೂಢಿಯ ಅರ್ಥದಲ್ಲಿ ಕಟ್ಲೆರಿ ಪದ ಕೇವಲ ಕರ್ತನೋಪಕರಣಗಳನ್ನು ಮಾತ್ರ ಒಳಗೊಂಡಿಲ್ಲ-ಮುಳ್ಳು ಚಮಚಗಳು (ಫೋಕ್ರ್ಸ್), ನಾನಾವಿಧದ ಚಮಚಗಳು ಚಿಮಟಗಳು, ಇಕ್ಕುಳಗಳು ಮುಂತಾದವೂ ಈ ಪದದ ವ್ಯಾಪ್ತಿಯಲ್ಲಿ ಬರುತ್ತವೆ. ಒಂದು ಕಟ್ಲೆರಿ ಅಂಗಡಿ ಎಂದರೆ ಇವೆಲ್ಲ ಮಾಲುಗಳೂ ಒಂದೆಡೆ ಬಿಕರಿಗೆ ದೊರೆಯುವ ಸ್ಥಳ.
ವಿಧಗಳು: ಕರ್ತನೋಪಕರಣಗಳನ್ನು ಈ ಕೆಳಗಿನ ದರ್ಜೆಗಳಾಗಿ ವರ್ಗೀಕರಿಸಿದೆ; ಆಹಾರ ಸೇವನೆಯ ಕಾಲದಲ್ಲಿ ಬಳಸುವ ಚಾಕುಗಳು (ಟೇಬಲ್ ನೈವ್ಸ್), ತರಕಾರಿ ಹಾಗೂ ಮಾಂಸ ಕತ್ತರಿಸಲು ಉಪಯೋಗಿಸುವ ಕತ್ತಿಗಳು, ಕಿರಿಯ ಚೂರಿಗಳು, ಕತ್ತರಿಗಳು, ಬಾಳು ಕತ್ತಿಗಳು (ರೇಜ಼ರ್ಸ್), ಸೇಫ್ಟಿ ರೇಜ಼ರುಗಳು, ಕಾರ್ಖಾನೆಗಳಲ್ಲೂ ವ್ಯವಹಾರಗಳಲ್ಲೂ ಬೇಕಾಗುವ ಇತರ ವಿಶಿಷ್ಟ ಕರ್ತನೋಪಕರಣಗಳು. ವಿಧ ಯಾವುದೇ ಇರಲಿ, ಅದರ ಕತ್ತಿಯ ಹರಿತವಾದ ಅಲಗು ಆ ವಿಧದ ಉಪಯುಕ್ತತೆಯನ್ನು ನಿರ್ಧರಿಸುವುದು. ಅಲಗಿನ ತೀಕ್ಷ್ಣತೆ ಮತ್ತು ಬಾಳಿಕೆ ಬಳಸಿದ ಲೋಹದ ಅಥವಾ ಮಿಶ್ರಲೋಹದ ಗುಣಗಳನ್ನು ಅವಲಂಬಿಸಿವೆ. ಅಂತಿಮವಾಗಿ ಇದು ಮಾರುಕಟ್ಟೆಯಲ್ಲಿ ಬೇಡಿಕೆ ತಯಾರಿಕೆಯ ವೆಚ್ಚ ಮುಂತಾದುವುಗಳಿಂದ ಪ್ರಭಾವಿತವಾಗುವುದು.
ಆಹಾರಸೇವನೆಯ ಕಾಲದಲ್ಲಿ ಉಪಯೋಗಿಸುವ ಕರ್ತನೋಪಕರಣಗಳ ಅಲಗುಗಳನ್ನು ಐದು ಮುಖ್ಯ ಹಂತಗಳಲ್ಲಿ ತಯಾರಿಸುತ್ತಾರೆ. (ಇತರ ಅಲಗುಗಳಿಗೂ ಇವು ಅನ್ವಯವಾಗುತ್ತವೆ):
- . ಅಪೇಕ್ಷಿತ ಆಕಾರಕ್ಕೆ ಉಕ್ಕನ್ನು ರೂಪಿಸುವುದು;
- . ಗಡಸುಗೊಳಿಸುವಿಕೆ ಮತ್ತು ಹದಗೊಳಿಸುವಿಕೆ (ಹಾರ್ಡನಿಂಗ್ ಅಂಡ್ ಟೆಂಪರಿಂಗ್);
- . ಉಕ್ಕನ್ನು ಕರ್ತನಧಾರೆಯ ರೂಪಕ್ಕೆ ಅರೆಯುವುದು; 4 ಉಕ್ಕಿಗೆ ಮೆರುಗು ಕೊಡುವುದು;
- . ಸಮರ್ಪಕವಾದ ಹಿಡಿಯನ್ನು ತಯಾರಿಸಿ ಉಪಕರಣಕ್ಕೆ ಅದನ್ನು ಜೋಡಿಸುವುದು.