ಕರುಳುಗಂಟು: ಬೀಜವೊಡೆದ ಎತ್ತಿನಲ್ಲಿ, ಶ್ರೋಣಿಕುಹರದ (ಪೆಲ್ವಿಕ್ ಇನ್ಲೆಟ್) ಅಂಚಿನಲ್ಲಿ ರೇತುವಿನ ಸಾಗುನಾಳದ (ಸ್ಟರ್ಮಾಟಿಕ್ ಕಾರ್ಡ್) ಹೊರತುದಿಯಿಂದಾದ ಕುಣಿಕೆಯಲ್ಲಿ ಸಣ್ಣ ಕರುಳಿನ ಒಂದು ತುಂಡು ಸಿಕ್ಕಿಹಾಕಿ ಕೊಂಡಿರುವುದಕ್ಕೆ ಈ ಹೆಸರಿದೆ (ಗಟ್ ಟೈ). ಸಿಕ್ಕಿಕೊಂಡ ಕರುಳಿನಲ್ಲಿ ಸೆಗಣಿ ತುಂಬಿದ ಹಾಗೆಲ್ಲ ಒಳ ಒತ್ತಡ ಹೆಚ್ಚಿ ರಕ್ತದ ಹರಿವು ಕಡಿಮೆಯಾಗುತ್ತ ಆ ಭಾಗದ ಕರುಳನ್ನು ಸಾಯಿಸಿದಂತಾಗುವುದು. ಮಲೆನಾಡುಗಳಲ್ಲಿ, ಕೆಲವೇಳೆ ಬೀಜವೊಡೆದ ಎಳೆಯ ಹೋರಿಗರುಗಳಲ್ಲಿ, ಬಲಗಡೆ ಪಕ್ಕದಲ್ಲಿ ಹೀಗಾಗುತ್ತದೆ. ಜಠರದ ದೊಡ್ಡ ಮೆಲುಕುಚೀಲ (ರೂಮೆನ್) ಕರುಳನ್ನೆಲ್ಲ ಬಲಕ್ಕೆ ತಳ್ಳಿರುವುದರಿಂದ ಕರುಳುಗಂಟು ಎಡಗಡೆ ಆಗದು. ಗೂಳಿಗಳಿಗೆ ತೆರೆದ ವಿಧಾನದಲ್ಲಿ ಬೇಹುಷಾರಾಗಿ ಬೀಜವೊಡೆದರೆ, ರೇತುಸಾಗುನಾಳದ ಮೇಲ್ಭಾಗ ಮೇಲಕ್ಕೆ ಸೇದಿಕೊಂಡು, ಅದರ ಕತ್ತರಿಸಿದ ತುದಿ ಗಜ್ಜಲಿನ ಸಾಗಾಲುವೆಗೋ (ಇಂಗ್ವೈನಲ್ ಕೆನಾಲ್), ಶ್ರೋಣಿಕುಹರದ ಬಳಿ ಹೊಟ್ಟೆಗೋಡೆಗೋ ಅಂಟಿಕೊಂಡು ಕುಣಿಕೆಯಾಗುತ್ತದೆ. ಈ ಕುಣಿಕೆಯೊಳಕ್ಕೋ ರೇತುಸಾಗುನಾಳದ ನಡುಪೊರೆಯೊಳಗೆ ಆಗಿರುವ ತೂತಿನೊಳಕ್ಕೋ ಕರುಳಿನ ಒಂದು ತುಂಡು ತೂರಿ ಸಿಕ್ಕಿಹಾಕಿಕೊಳ್ಳುವುದು. ಹೀಗಾದಾಗ, ದನ ಮೇವು ಮುಟ್ಟದು. ಹೊಟ್ಟೆನೋವಿನಿಂದ ಬೆನ್ನನ್ನು ಕಮಾನಾಗಿ ಬಾಗಿಸುವುದು. ನೋವಿರುವ ಎಡಕಿಬ್ಬದಿಯನ್ನೇ ನೋಡಿಕೊಳ್ಳುತ್ತಿರುವುದು. ನಿಲ್ಲಲೂ ಕೂರಲೂ ಆಗದೆ ಚಡಪಡಿಸುತ್ತ ಸೆಗಣಿ ಹಾಕಲು ಆಗಾಗ್ಗೆ ಯತ್ನಿಸುತ್ತಿರುವುದು. ಗುದನಾಳದ (ರೆಕ್ಟಂ) ಪರೀಕ್ಷೆಯಿಂದ, ಅದು ಬರಿದಾಗಿರುವುದೂ ರಕ್ತಕಲೆ, ಲೋಳೆ ಮಾತ್ರ ಇರುವುದೂ ಗೊತ್ತಾಗುವುದು. ಮೊದಮೊದಲು ಕೊಂಚ ಜ್ವರ ಬಂದ ಹಾಗಿದ್ದರೂ ಬರುಬರುತ್ತ ಆರೋಗ್ಯ ಕೆಟ್ಟಂತೆಲ್ಲ ಮೈ ತಣ್ಣಗಾಗುವುದು. ಕರುಳಿನ ರಕ್ತನಾಳಗಳಲ್ಲಿನ ಹರಿವಿಗೆ ಆತಂಕವಾದ ದನ 4-5 ದಿವಸಗಳಲ್ಲಿ ಸಾಯುತ್ತದೆ, ಶಸ್ತ್ರಕ್ರಿಯೆಯೇ ಇದರ ಚಿಕಿತ್ಸೆ. ಸಿಕ್ಕಿಬಿದ್ದಿರುವ ಆ ಭಾಗದ ಕರುಳು ಬಹಳವಾಗಿ ಕೊಳೆವ ಮೊದಲೇ ಚಿಕಿತ್ಸೆಯನ್ನು ಕೈಗೊಳ್ಳಬೇಕು. ಹೊಟ್ಟೆಯನ್ನು ಕೊಯ್ದು, ಕುಣಿಕೆ ಹಾಕಿಕೊಂಡಿರುವ ರೇತುಸಾಗುನಾಳವನ್ನು ಕತ್ತರಿಸಿ ಬಿಡಿಸಿ, ಸಿಕ್ಕಿಕೊಂಡಿರುವ ಕರುಳಿನ ಕೊಳೆತಷ್ಟು ಭಾಗವನ್ನು ತೆಗೆದುಹಾಕಿ ಹೊಲೆದು ಸರಿಪಡಿಸಬೇಕು. (ಕೆ.ವಿ.ಎಂ.)