ಕರಿಕಾಲ ಚೋಳಪ್ರ.ಶ.ಪು. 1ನೆಯ ಶತಮಾನದಲ್ಲಿ ಆರಂಭವಾಗಿ 1ನೆಯ ಶತಮಾನದವರೆಗೂ ಅಥವಾ ಅದರ ಅನಂತರ ಸ್ವಲ್ಪಕಾಲದವರೆಗೂ ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡಸುತ್ತಿದ್ದಿರಬಹುದಾದ ಚೋಳ ಮನೆತನದ ಅತ್ಯಂತ ಪ್ರಸಿದ್ಧನಾದ ದೊರೆ. ಸು.100ರಲ್ಲಿ ಈತ ಆಳುತ್ತಿದ್ದನೆಂದು ಹೇಳಲಾಗಿದೆ. ದೀಕ್ಷಿತರ್ ಮೊದಲಾದ ಪಂಡಿತರು ಇವನ ಕಾಲವನ್ನು 2ನೆಯ ಶತಮಾನವೆಂದು ಹೇಳಿದರೆ ಶ್ರೀನಿವಾಸ ಅಯ್ಯಂಗಾರ್ ಮತ್ತಿತರರು ಇವನನ್ನು 4ನೆಯ ಶತಮಾನದ ಕೊನೆಗೆ ಕೊಂಡೊಯ್ಯುತ್ತಾರೆ. ಈತ ಶಿಲಪ್ಪದಿಕಾರಂ ಗ್ರಂಥದ ನಾಯಕನಾದ ಸೆಂಗುಟ್ಟುವನ್ ರಾಜನ ಸಮಕಾಲೀನನಾಗಿದ್ದನೆಂದೂ ಹೇಳಲಾಗಿದೆ. ಈತ ರೋಮನ್ ಚಕ್ರವರ್ತಿ ಜ್ಯೂಲಿಯನನ ಕಾಲದವನೆಂದೂ ಅವನ ಆಸ್ಥಾನಕ್ಕೆ ಈತ ತನ್ನ ರಾಯಭಾರಿಯನ್ನು ಕಳಿಸಿದ್ದಿರಬೇಕೆಂದೂ ಒಂದು ಅಭಿಪ್ರಾಯವುಂಟು.

ಕರಿಕಾಲ ಚೋಳ
Peruvalattan
Tirumavalavan

Bronze statue of Karikāla Cōḻaṉ
ಆಳ್ವಿಕೆ c. 190 CE []
ಪೂರ್ವಾಧಿಕಾರಿ Ilamcetcenni
Queen Alli - Velir princess
ಸಂತಾನ
Nalankilli
Nedunkilli
Mavalattan
ತಂದೆ Ilamcetcenni

ಐತಿಹ್ಯ

ಬದಲಾಯಿಸಿ

ಕರಿಕಾಲ ಚೋಳನ ಹೆಸರಿನ ಸುತ್ತ ಅನೇಕ ಐತಿಹ್ಯಗಳು ಹಬ್ಬಿಕೊಂಡಿವೆ. ಈತ ಚಿಕ್ಕಂದಿನಲ್ಲಿ ತನ್ನ ಕಾಲು ಸುಟ್ಟುಕೊಂಡಿದ್ದರಿಂದ ಇವನಿಗೆ ಕರಿಕಾಲನೆಂಬ ಹೆಸರು ಬಂತೆಂದೂ ಮುಂದೆ ಈತ ಅರಿಗಳನ್ನು ಜಯಸಿದಾಗ ವೈರಿಗಳ ಅಂತಕನೆಂದು ಇದು ಸಾರ್ಥಕವಾಯಿತೆಂದೂ ಹೇಳಲಾಗಿದೆ. ಶತ್ರುಗಳ ಬಂಧನದಿಂದ ತಪ್ಪಿಸಿಕೊಂಡು ಈತ ತಾನೇ ದೊರೆಯೆಂದು ಘೋಷಿಸಿಕೊಂಡದ್ದಲ್ಲದೆ ತಂಜಾವೂರಿಗೆ 24 ಕಿಮೀ ದೂರದಲ್ಲಿರುವ ವೆಣ್ಣಿಯಲ್ಲಿ ನಡೆದ ಕಾಳಗದಲ್ಲಿ ಪಾಂಡ್ಯ ಚೇರ ರಾಜರ ಸಂಯುಕ್ತ ಪಡೆಗಳನ್ನು ಸೋಲಿಸಿ ಅಟ್ಟಿದನಂತೆ. ಅನಂತರ ಅನೇಕ ಸಣ್ಣಪುಟ್ಟ ದೊರೆಗಳನ್ನೂ ಈತ ಮಣಿಸಿ ಇಡೀ ತಮಿಳುನಾಡಿನ ಏಕೈಕ ಅಧಿಪತಿಯಾದ. ಕಾವೇರಿಯ ಮುಖದ ಬಳಿ ಪುಹಾರವೆಂಬ ನಗರವನ್ನು ಕಟ್ಟಿಸಿದ.

ದಂಡಯಾತ್ರೆ

ಬದಲಾಯಿಸಿ
 
Karikala's Territories c.180 CE

ಕರಿಕಾಲ ಸಿಂಹಳ ದೇಶದ ಮೇಲೆ ಕೂಡ ದಂಡೆತ್ತಿ ಹೋಗಿದ್ದನೆಂದು ಹೇಳಲಾಗಿದೆ. ಅಲ್ಲಿಯ ಮಹಾವಂಶದಲ್ಲಿ ಈ ಘಟನೆಯ ಬಗ್ಗೆ ಉಲ್ಲೇಖವಿಲ್ಲವಾದರೂ ಅನಂತರದ ಉದಂತಗಳಲ್ಲಿ ಇದರ ಪ್ರಸ್ತಾಪವಿದೆ. ಒಮ್ಮೆ ಈತ ಅಲ್ಲಿಂದ 12,000 ಮಂದಿ ಸಿಂಹಳೀಯರನ್ನು ಹೊತ್ತು ತಂದು ಅವರನ್ನು ಪುಹಾರದ ಕೋಟೆ ಕಟ್ಟಲು ನೇಮಿಸಿದನಂತೆ. ಕಾವೇರಿಯ ದಂಡೆಯ ಮೇಲೆ 160 ಕಿಮೀಗಳಷ್ಟು ಉದ್ದಕ್ಕೆ ಈ ನಗರ ಹಬ್ಬಿತ್ತೆಂದು ಪ್ರತೀತಿ. ಕರಿಕಾಲ ಚೋಳ ಇಡೀ ಭಾರತವನ್ನೇ ಜಯಿಸಿದನೆಂದು ಅನೇಕ ತಮಿಳು ಕವಿತೆಗಳು ಕೊಂಡಾಡುತ್ತವೆ. ಕಾವೇರಿಯ ಮುಖಜ ಭೂಮಿಯಲ್ಲಿ, ಆ ನದಿ ಕವಲೊಡೆಯುವಲ್ಲೇ, ಕಟ್ಟೆಯೊಂದನ್ನು ಕಟ್ಟಿ ಅಲ್ಲಿಂದ ನದಿಯ ನೀರನ್ನು ಸಾಗುವಳಿಗೆ ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಿದವನು ಇವನೇ ಎಂದು ಹೇಳಲಾಗಿದೆ. ಶ್ರೀರಂಗದ ಬಳಿ ಆಣೆಕಟ್ಟು ನಿರ್ಮಿಸಿ ವೆಣ್ಣಾರ್ ಕಾಲುವೆಯ ಮೂಲಕ ತಂಜಾವೂರ್ ಜಿಲ್ಲೆಯ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಿದಾತ ಕರಿಕಾಲನೇ ಎಂದೂ ನಂಬಲಾಗಿದೆ. ತಂಜಾವೂರು ಜಿಲ್ಲೆಯ ಅನೇಕ ಕಾಲುವೆಗಳು ಚೋಳನ ಕಾಲದಲ್ಲೇ ನಿರ್ಮಿತವಾದುವೆಂಬುದಂತೂ ನಿಜ.

ಕಲಾರಾಧಕ

ಬದಲಾಯಿಸಿ
 
Kallanai built by Karikala Chola on river Kaveri

ಕರಿಕಾಲ ಚೋಳ ಕಲೆಗೆ ಆಶ್ರಯದಾತನಾಗಿದ್ದ. ವ್ಯಾಪಾರ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದ. ಸನಾತನ ಧರ್ಮದಲ್ಲಿ ಇವನಿಗೆ ಅತೀವ ಶ್ರದ್ಧೆ ಇತ್ತು. ಈತ ಯುದ್ಧ ಕುಶಲಿ ಹೇಗೋ ಹಾಗೆ ಶಾಂತಿ ಸಾಧಕನೂ ಅಗಿದ್ದ. ಅನೇಕ ತಮಿಳು ಕಾವ್ಯಗಳು ಕರಿಕಾಲ ಚೋಳನನ್ನು ಕೊಂಡಾಡುತ್ತವೆಯಾದರೂ ಇವನ ವೈಯಕ್ತಿಕ ಜೀವನದ ಬಗ್ಗೆ ಖಚಿತವಾದ ವಿವರಗಳಿಲ್ಲ.ಕಂಚಿಯಲ್ಲಿ ಆಳುತ್ತಿದ್ದ ತೊಂಡೈಮನ್ ಇಳಂದಿರೈಯನ್ ಕರಿಕಾಲನ ಮೊಮ್ಮಗನಾಗಿದ್ದಿರಬೇಕು ಅಥವಾ ಕಂಚಿಯನ್ನಾಳಲು ಕರಿಕಾಲನಿಂದ ನೇಮಕವಾದ ಮಾಂಡಲಿಕನಾಗಿದ್ದಿರಬೇಕು-ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಇಳಂದಿರೈಯೆನ್ ಕಂಚಿ ಮತ್ತು ಅದರ ಸುತ್ತಣ ಪ್ರದೇಶವನ್ನು ಸ್ವತಂತ್ರವಾಗಿ ಆಳುತ್ತಿದ್ದ ದೊರೆಯೆಂದು ಇನ್ನು ಕೆಲವರು ಹೇಳುತ್ತಾರೆ. ಕರಿಕಾಲನಿಗೆ ಆದಿಮಂಡಿ ಎಂಬ ಮಗಳೂ ಇಬ್ಬರ ಗಂಡು ಮಕ್ಕಳೂ ಇದ್ದರೆಂದೂ ಅಟ್ಟನ್ ಅಟ್ಟಿ ಎಂಬ ಪೇರರಾಜಕುಮಾರ ಇವನ ಅಳಿಯನಾಗಿದ್ದನೆಂದೂ ಹೇಳಲಾಗಿದೆ. ಅನಂತರ ಬಂದ ಚೋಳ ರಾಜರು ಕರಿಕಾಲ ಎಂಬುದನ್ನು ತಮ್ಮ ವಂಶದ ಬಿರುದಾಗಿ ಬಳಸುತ್ತಿದ್ದರು.

ಉಲ್ಲೇಖಗಳು

ಬದಲಾಯಿಸಿ
  1. Sastri, p 112


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

[] [] []

  1. http://www.newworldencyclopedia.org/entry/Karikala_Chola
  2. https://www.quora.com/How-did-Tamil-Kingdoms-influence-Angkor-Wat-the-worlds-biggest-religious-structure
  3. https://www.gktoday.in/gk/karikala-chola/