ಕಮಂಡಲ ಗಣಪತಿ ದೇವಸ್ಥಾನ



ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲುಕಿನ ಕೆಸವೆ ಗ್ರಾಮದಲ್ಲಿದೆ. ಹಿಂದಿನ ಕಾಲದಲ್ಲಿ "ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು" ಎಂಬ ಮಾತು ಇತ್ತು. ಅಂದರೆ ಇಲ್ಲಿಯ ದಟ್ಟ ಕಾಡಿಗೆ ಜನರು ಹೆದರುತ್ತಿದ್ದರು. ಅಂತಹ ದಟ್ಟ ಕಾನನದಲ್ಲಿ ಇರುವ ಕಮಂಡಲ ಗಣಪತಿ ದೇವಸ್ಥಾನವು ಸುತ್ತ ಮುತ್ತಲಿನ ಜನರಿಗೆ ಆರಾಧ್ಯ ದೈವವಾಗಿದೆ. ಇಲ್ಲಿನ ವಿಶೇಷವೇನೆಂದರೆ ಇಲ್ಲಿ ಗಣಪತಿ ವಿಗ್ರಹದ ಮುಂಭಾಗದಲ್ಲಿ ಇರುವ ಒಂದು ಸಣ್ಣ ಒಳಕಲ್ಲಿನಿಂದ ನೈಸರ್ಗಿಕವಾಗಿ ನೀರು ಹೊರಬರುತ್ತದೆ. ಈ ನೀರು ವರ್ಷದ ಎಲ್ಲಾ ಕಾಲದಲ್ಲೂ ಬರುತ್ತದೆ. ಸ್ಥಳೀಯರ ಪ್ರಕಾರ ಈ ನೀರನ್ನು ಸೇವಿಸಿದರೆ ಹಲವಾರು ರೋಗಗಳು ನಿವಾರಣೆಯಾಗುತ್ತವೆ. ಕೊಪ್ಪದಿಂದ ಮೃಗವಧೆ ಕಡೆಗೆ ಹೋಗುವ ಟಾರು ರಸ್ತೆಯಲ್ಲಿ ಸುಮಾರು ೩ ಕಿ.ಮೀ ಕ್ರಮಿಸಿ, ಬಲಕ್ಕೆ ತಿರುಗಿ ಸುಮಾರು ೧ ಕಿ.ಮೀ ಚಲಿಸಿದರೆ ಈ ದೇವಸ್ಥಾನವನ್ನು ತಲುಪಬಹುದು. ಇಲ್ಲಿಗೆ ಸಮೀಪದಲ್ಲಿರುವ ಇತರೆ ಪ್ರವಾಸಿ ಸ್ಥಳಗಳೆಂದರೆ ಮುಸುರೆ ಹಳ್ಳ, ಕೆಸವೆ ಜಲಪಾತ ಮತ್ತು ಮೃಗವಧೆ. ಸ್ಥಳೀಯರ ಪ್ರಕಾರ ಮುಸುರೆ ಹಳ್ಳದಲ್ಲಿ ಸೀತೆಯು ವನವಾಸದ ಸಮಯದಲ್ಲಿ ಈ ಹಳ್ಳದಲ್ಲಿ ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆದಿದ್ದರಿಂದ ಈ ಹೆಸರು ಬಂದಿದೆ. ಇದು ಕೊಪ್ಪದಿಂದ ಮೃಗವಧೆ ಕಡೆಗೆ ಹೋಗುವಾಗ ೨ ಕಿ.ಮೀ ನಂತರ ಸಿಗುತ್ತದೆ. ಕೆಸವೆ ಜಲಪಾತವು ಸುಮಾರು ೩೦ ಅಡಿಗಳಷ್ಟು ಎತ್ತರವಿದೆ. ಕೆಸವೆ ಗ್ರಾಮದ ಸರಕಾರಿ ಶಾಲೆಯ ನಂತರ ಬರುವ ಚಂದ್ರಶೇಖರ ಅವರ ಮನೆ ಬಲಭಾಗದ ಹಿಂಭಾಗದಲ್ಲಿ ಕಾಡಿನಲ್ಲಿ ಸುಮಾರು ೫ ನಿಮಿಷ ನಡೆದರೆ ಸಿಗುತ್ತದೆ. ಇಲ್ಲಿಗೆ ಹೋಗಲು ಸ್ಥಳೀಯರ ಮಾರ್ಗದರ್ಶನ ಬೇಕು. ಮೃಗವಧೆಯು ಕೊಪ್ಪದಿಂದ ೧೪ ಕಿ.ಮೀ ದೂರದಲ್ಲಿದೆ. ಇತಿಹಾಸದ ಪ್ರಕಾರ ರಾಮನು ಮಾಯ ಜಿಂಕೆಯನ್ನು ಕೊಂದಿದ್ದು ಇಲ್ಲಿಯೆ. ಇಲ್ಲಿಂದ ಮುಂದಕ್ಕೆ ತೀರ್ಥಹಳ್ಳಿಗೆ ಹೋಗಬಹುದು.

ಕಮಂಡಲ ಗಣಪತಿ ದೇವಸ್ಥಾನ