ಬಡಗು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ
ತೆಂಕು ತಿಟ್ಟು ಯಕ್ಷಗಾನ ವೇಷದ ಒಂದು ಮಾದರಿ

ಪೀಠಿಕೆಸಂಪಾದಿಸಿ

ಕನ್ನಡ ಜಾನಪದ:-
 • ಪಾಶ್ಚಾತ್ಯ ದೇಶಗಳಲ್ಲಿ ಜಾನಪದ ಸಂಗ್ರಹ ಹಾಗೂ ಅಧ್ಯಯನಗಳ ಬಗ್ಗೆ 19ನೆಯ ಶತಮಾನದಲ್ಲಿ ವಿಶೇಷವಾದ ಆಸಕ್ತಿ ಮೂಡಿ ಆ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಅಲ್ಲಿಯ ವಿದ್ವಾಂಸರು ಮೆರೆದರು. ಜಾನಪದ ಸಂಬಂಧವಾದ ವಿಷಯಗಳಿಗೆ ಪ್ರಚಲಿತವಾಗಿದ್ದ ಪಾಪ್ಯುಲರ್ ಆಂಟಿಕ್ವಿಟೀಸ್ ಎಂಬ ಹೆಸರಿಗೆ ಬದಲಾಗಿ ಈಗ ಅತ್ಯಂತ ಜನಪ್ರಿಯತೆಯನ್ನು ಸಾಧಿಸಿಕೊಂಡಿರುವ ಫೋಕ್ಲೋರ್ (ಜಾನಪದ) ಎಂಬ ಪದವನ್ನು 1846ರಲ್ಲಿ ಡಬ್ಲ್ಯೂ. ಜೆ. ಥಾಮ್ಸ್‌ ಬಳಕೆಗೆ ತಂದ ಎರಡು ದಶಕಗಳಲ್ಲೇ ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಫೋಕ್ಲೋರ್ ಸೊಸೈಟಿ ಸ್ಥಾಪಿತವಾಗಿ ವಿಶ್ವದಾದ್ಯಂತ ಜಾನಪದ ಅಧ್ಯಯನಕ್ಕೆ ಒಂದು ಹೊಸ ತಿರುವನ್ನು ಕೊಟ್ಟಿತು. ಅನೇಕ ಪ್ರಸಿದ್ಧ ವಿದ್ವಾಂಸರು ಆ ಕ್ಷೇತ್ರವನ್ನು ಪ್ರವೇಶಿಸಿ ಶಾಸ್ತ್ರೀಯ ತಳಹದಿಯ ಮೇಲೆ ಜಾನಪದ ಸಂಶೋಧನೆಯನ್ನು ರೂಪಿಸಿದರು. ವಿಶ್ವದ ನಾನಾ ಕಡೆಗಳಲ್ಲಿ ಸಂಗ್ರಹಕಾರ್ಯ ವ್ಯವಸ್ಥಿತವಾಗಿ ನಡೆಯತೊಡಗಿ ಅಪಾರ ಸಾಹಿತ್ಯರಾಶಿ 19ನೆಯ ಶತಮಾನದ ಅಂತ್ಯದ ವೇಳೆಗೇ ವಿದ್ವಾಂಸರಿಗೆ ಲಭ್ಯವಾಯಿತು.
 • ಭಾರತದಲ್ಲಿಯೂ ಜಾನಪದ ಸಂಗ್ರಹಕಾರ್ಯ ಕಳೆದ ಶತಮಾನದಲ್ಲಿಯೇ ಆರಂಭವಾಯಿತು. ಪಾಶ್ಚಾತ್ಯ ವಿದ್ವಾಂಸರೂ ಅಧಿಕಾರಿಗಳೂ ಭಾರತೀಯ ವಿದ್ವಾಂಸರೂ ಭಾರತದ ನಾನಾ ಕಡೆಗಳಲ್ಲಿ ಜನಪದ ಕಥೆಗಳನ್ನೂ ಗಾದೆಗಳನ್ನೂ ಲಾವಣಿಗಳನ್ನೂ ಸಂಪ್ರದಾಯ, ನಂಬಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯವನ್ನೂ ಅಲ್ಲಲ್ಲಿ ಸಂಗ್ರ್ರಹಿಸಿದರು. ಈ ಎಲ್ಲ ಸಾಹಿತ್ಯವೂ ಇಂಗ್ಲಿಷಿಗೆ ಅನುವಾದಿತವಾಗಿ ಪ್ರಕಟವಾದುದರಿಂದ ವಿಶ್ವಮಟ್ಟದಲ್ಲಿ ಭಾರತೀಯ ಜಾನಪದದ ಕಡೆ ಪ್ರಸಿದ್ಧ ವಿದ್ವಾಂಸರ ದೃಷ್ಟಿ ಹರಿಯಲು ಕಾರಣವಾಯಿತು.
 • ಕಳೆದ ಶತಮಾನದಲ್ಲಿ ನಡೆದ ಸಂಗ್ರಹಕಾರ್ಯ ಬಹುಮಟ್ಟಿಗೆ ಉತ್ತರ ಭಾರತಕ್ಕೆ ಸೀಮಿತವಾಯಿತು. ದಕ್ಷಿಣ ಭಾರತದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳ ಭಾಷೆಗಳಿಗೆ ಸಂಬಂಧಿಸಿದಂತೆ ವ್ಯಾಪಕವಾದ ಸಂಗ್ರಹಕಾರ್ಯ ನಡೆಯಲಿಲ್ಲ. ಗಾದೆಗಳು, ಕಥೆಗಳು ಮತ್ತು ಲಾವಣಿಗಳಿಗೆ ಸಂಬಂಧಿಸಿದಂತೆ ಅಷ್ಟಿಷ್ಟು ಸಂಗ್ರಹ ಕಾರ್ಯ ನಡೆಯದಿದ್ದರೂ ಅದು ಅಸಮಗ್ರವಾದುದು. ಕನ್ನಡದಲ್ಲಿಯೂ ಇದೇ ಸ್ಥಿತಿಯಾಯಿತು. ಇತರ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಕೆಲವು ಪಾಶ್ಚಾತ್ಯ ವಿದ್ವಾಂಸರು ಜಾನಪದ ಸಂಗ್ರಹ ಕಾರ್ಯವನ್ನು ಸ್ವಲ್ಪಮಟ್ಟಿಗೆ ನಡೆಸಿದ್ದರೂ ಅಷ್ಟೇನೂ ಗಣನೀಯ ಪ್ರಮಾಣದಲ್ಲಿ ಆ ಕಾರ್ಯ ನಡೆಯಲಿಲ್ಲ ಎಂದೇ ಹೇಳಬೇಕು.

ಜಾನಪದ ಸಂಗ್ರಹದ ಪ್ರಥಮ ಪ್ರಯತ್ನಸಂಪಾದಿಸಿ

 • ಕನ್ನಡದಲ್ಲಿ ಜಾನಪದ ಸಂಗ್ರಹದ ಪ್ರಥಮ ಪ್ರಯತ್ನವನ್ನು 1816ರ ವೇಳೆಗೇ ಗುರುತಿಸಬಹುದು. ಈ ಅವಧಿಯಲ್ಲಿ ಪ್ರಕಟವಾದ ಅಬೈಡುಬ್ಯೊಸನ ಹಿಂದೂ ಮ್ಯಾನರ್ಸ್‌, ಕಸ್ಟಮ್ಸ್‌ ಅಂಡ್ ಸೆರೆಮೊನೀಸ್ ಎಂಬ ಗ್ರಂಥದಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳನ್ನು (ವೇರಿಯಂಟ್ಸ್‌) ಕಾಣಬಹುದು. ಮತಪ್ರಚಾರಕನಾಗಿ ಕನ್ನಡನಾಡಿನ ಕೆಲವು ಭಾಗಗಳಲ್ಲಿ ಸಂಚಾರ ಮಾಡಿದ ಈ ಫ್ರಂಚ್ ಮಹಾಶಯ ಅನೇಕ ಜಾನಪದ ಸಂಪ್ರದಾಯಗಳನ್ನು ತನ್ನ ಗ್ರಂಥದಲ್ಲಿ ಗುರುತಿಸಿದ್ದಾನೆ. ದೊಡ್ಡ ಸ್ವಾಮಿ ಎಂದು ಜನಪ್ರಿಯನಾಗಿದ್ದ ಈತ ಜನಜೀವನದೊಡನೆ ಅತ್ಯಂತ ಹತ್ತಿರದ ಸಂಬಂಧವನ್ನು ಇಟ್ಟುಕೊಂಡು ಸ್ವಾರಸ್ಯವಾದ ರೀತಿಯಲ್ಲಿ ಅನೇಕ ವಿಷಯಗಳನ್ನು ನಿರೂಪಿಸಿದ್ದಾನೆ.

ಚಾರಲ್ಸ್‌ ಇ. ಗೋವರ್ಸಂಪಾದಿಸಿ

 • ಕನ್ನಡ ಜಾನಪದ ಸಂಗ್ರಹದ ಇತಿಹಾಸದಲ್ಲಿ ಚಾರಲ್ಸ್‌ ಇ. ಗೋವರನ ಹೆಸರು ಅತ್ಯಂತ ಗಮನಾರ್ಹವಾnkmnbhದುದು. ಕಳೆದ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾದ "ಪೋಕ್ ಸಾಂಗ್ಸ್‌ ಆಫ್ ಸದರನ್ ಇಂಡಿಯ" ಎಂಬ ತನ್ನ ಗ್ರಂಥದಲ್ಲಿ ಈತ ಭಾರತದ ಪ್ರಮುಖ ಭಾಷೆಗಳ ಜನಪದಗೀತೆಗಳನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿದ್ದಾನೆ. ಈತನ ಕೃತಿಯಲ್ಲಿ ಕನ್ನಡ ಜನಪದ ಗೀತೆಗಳಿಗೇ ಆದ್ಯತೆ ಇದ್ದು 28 ಹಾಡುಗಳು ಪ್ರಥಮಭಾಗದಲ್ಲಿ ಪ್ರಕಟವಾಗಿದ್ದರೂ ಅವುಗಳಲ್ಲಿ ಬಹುಪಾಲು ದಾಸರ ಕೀರ್ತನೆಗಳ ಅನುವಾದಗಳಾಗಿವೆ. ದಾಸಪರಂಪರೆಯ ಹಾಡುಗಾರರಿಂದ ಇವನ್ನು ಸಂಗ್ರಹಿಸಿದ ಇಬ್ಬರು ಮಿಷನರಿಗಳು (ಎ. ಜೆ. ಲೈಲೆ ಹಾಗೂ ಎಸ್. ಡಾಲ್ಜೆಲ್) ದಾಸರ ಪದಗಳು ಎಂಬ ಶೀರ್ಷಿಕೆಯಲ್ಲಿ ಅವನ್ನು ಗೋವರನಿಗೆ ನೀಡಿದ್ದಾರೆ. ಅವರೇ ಅನುವಾದಿಸಿ ಕೊಟ್ಟ ಈ ಕೀರ್ತನೆಗಳನ್ನು ಗೋವರ್ ಕನ್ನಡ ಹಾಡುಗಳು ಎಂದು ಕರೆದು ಅವುಗಳ ಬಗ್ಗೆ ವಿವರವಾದ ವಾಖ್ಯೆ ಮಾಡಿದ್ದಾನೆ. ಆದರೆ ಶುದ್ಧ ಜನಪದ ಗೀತೆಗಳಾವು ಗೋವರನ ಗಮನಕ್ಕೆ ಬಂದಂತೆ ತೋರುವುದಿಲ್ಲ. ಗೋವರನಿಗೂ ಮೊದಲೇ 24 ಹಾಡುಗಳನ್ನು ಪ್ರಕಟಿಸಿದ್ದ ಮೊಗ್ಲಿಂಗ್ನ ಕೃತಿಯನ್ನೂ ಈ ದೃಷ್ಟಿಯಿಂದಲೇ ಪರಿಶೀಲಿಸಬೇಕಾಗಿದೆ.
 • ಗೋವರನ ಸಂಕಲನದಲ್ಲಿ ಕೆಲವು ಬಡಗ ಜನಪದಗೀತೆಗಳು ಹಾಗೂ ಕೊಡಗಿನ ಜನಪದಗೀತೆಗಳು ಲಭ್ಯವಾಗುತ್ತವೆ. ಕೊಡಗಿನ ಹುತ್ತರಿಹಾಡು, ಮದುವೆಯ ಹಾಡುಗಳು, ಸಂಸ್ಕಾರ ಗೀತೆಗಳು, ಶಿಶುಪ್ರಾಸಗಳು ಇಲ್ಲಿ ಗಮನಾರ್ಹವಾಗಿವೆ.
 • ಗೋವರನ ಅನಂತರ ಪ್ರಸಿದ್ಧ ಪ್ರಾಕ್ತನ ಸಂಶೋಧಕನಾದ ಜೆ. ಎಫ್. ಫ್ಲೀಟ್ ಜಾನಪದ ಸಂಬಂಧವಾದ ಆಂಟಿಕ್ವೆರಿಯ ಸಂಪುಟಗಳಲ್ಲಿ 1885ರ ವೇಳೆಗೆ ಈತ ಪ್ರಕಟಿಸಿದ ಲಾವಣಿಗಳು ಈತನ ಸಂಗ್ರಹಾಸಕ್ತಿಗೂ ಸಂಶೋಧನ ನಿಷ್ಠೆಗೂ ಸಂಪಾದನೆ ವೈಶಿಷ್ಟ್ಯಕ್ಕೂ ಉತ್ತಮ ನಿದರ್ಶನವಾಗಿವೆ. ಕಿತ್ತೂರಿನ ಈರವ್ವ, ಸಂಗೊಳ್ಳಿ ರಾಯಣ್ಣ, ಬಾದಾಮಿಯ ರಾಣಮಂಡಲ ಕೋಟೆಯ ಮುತ್ತಿಗೆ, ನರಗುಂದದ ವಿಜಯ, ಆದಾಯ ತೆರಿಗೆಯ ಜಾರಿ, ಹಲಗಲಿಯ ಬೇಡರು, ಹಳ್ಳಿಯ ಜಮೀನ್ದಾರ, ಆಂಗ್ಲರಾಷ್ಟ್ರ ವೈಭವದ ಹಾಡು-ಮುಂತಾದವನ್ನು ಗಮನಿಸಿದಾಗ ಫ್ಲೀಟನ ದೃಷ್ಟಿ ವಿಶೇಷವಾಗಿ ಜಾನಪದದ ಒಂದು ಸೀಮಿತ ಹಿನ್ನಲೆಗೆ ಮಾತ್ರ ಮೀಸಲಾಗಿತ್ತು.-ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಆತ ಸಂಗ್ರಹಿಸಿದ ಲಾವಣಿಗಳು ಆಂಗ್ಲ ಪ್ರಭುತ್ವ ಹಾಗೂ ಅದರ ಬಗ್ಗೆ ಜನಸಾಮಾನ್ಯರ ಪ್ರತಿಕ್ರಿಯೆಗಳನ್ನು ಮಾತ್ರ ಪ್ರತಿಬಿಂಬಿಸುತ್ತವೆ. ಕಿತ್ತೂರಿನ ಪತನವಾದ ಮೇಲೆ ಹುಟ್ಟಿಕೊಂಡ ಲಾವಣಿಗಳಾದುದರಿಂದ ಕನ್ನಡಿಗರು ಆಂಗ್ಲರ ದಾಳಿ ಹಾಗೂ ದಬ್ಬಾಳಿಕೆಗಳನ್ನು ಹೇಗೆ ಕಂಡಿದ್ದಾರು ಎಂಬುದಕ್ಕವು ಸಾಕ್ಷಿಗಳಾಗಿವೆ. ಸಾಹಿತ್ಯಕ ದೃಷ್ಟಿಯಿಂದಲೂ ಐತಿಹಾಸಿಕ ದೃಷ್ಟಿಯಿಂದಲೂ ಈ ಲಾವಣಿಗಳು ಅತ್ಯಂತ ಮಹತ್ತ್ವದ ಕಾಣಿಕೆಗಳಾಗಿವೆ. ಆದರೆ ಫ್ಲೀಟನಂಥ ವಿದ್ವಾಂಸನ ದೃಷ್ಟಿ ಜಾನಪದ ಕ್ಷೇತ್ರಕ್ಕೆ ಹೊರಳಿಯೂ ಮಿಕ್ಕ ಅದರ ಅನಂತ ಪ್ರಕಾರಗಳನ್ನು ಗುರುತಿಸದೆ ಹೋದುದು ಆಶ್ಚರ್ಯಕರವಾಗಿದೆ. ಉತ್ತರ ಕರ್ಣಾಟಕದ ಈ ಲಾವಣಿಗಳಿಗೆ ಕನ್ನಡ ಮೂಲ, ಇಂಗ್ಲಿಷ್ ಅನುವಾದ, ಅದಕ್ಕೆ ಸಂಬಂಧಿಸಿದ ಟಿಪ್ಪಣಿಗಳು ಮುಂತಾದವನ್ನು ಫ್ಲೀಟ್ ಅತ್ಯಂತ ಪಾಂಕ್ತವಾಗಿ ಒದಗಿಸಿ ಉಪಕರಿಸಿದ್ದಾನೆ. ಇಷ್ಟು ಸರ್ವಸಮರ್ಪಕ ಸಂಪಾದನಾ ದೃಷ್ಟಿಯಿಂದ ಕೂಡಿದ ಕನ್ನಡ ಜಾನಪದ ಸಂಕಲನಗಳು ವಿರಳವೆಂದೇ ಹೇಳಬೇಕು. Wrote by Veena.M subscribe my channel even in youTube

ರೆ. ಎಫ್. ಕಿಟ್ಟೆಲನ ಕೊಡುಗೆಸಂಪಾದಿಸಿ

 • ಕನ್ನಡ ವಿದ್ವತ್ತಿನ ಬೆಳೆವಣಿಗೆಗೆ ರೆ. ಎಫ್. ಕಿಟ್ಟೆಲನ ಕೊಡುಗೆ ಶ್ರೇಷ್ಠ ಮಟ್ಟದ್ದಾಗಿದೆ. ಜರ್ಮನಿಯ ಈ ವಿದ್ವಾಂಸ ಕ್ರೈಸ್ತಮತ ಪ್ರಚಾರಕ್ಕಾಗಿ ಭಾರತಕ್ಕೆ ಬಂದು ಮಂಗಳೂರಿನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿಕೊಂಡ. ಮತಪ್ರಸಾರಕ್ಕಿಂತಲೂ ಕನ್ನಡದ ಉದ್ಧಾರಕ್ಕಾಗಿ ಕಿಟ್ಟೆಲ್ ಕೈಗೊಂಡ ಕಾರ್ಯಗಳು ದೊಡ್ಡ ಐತಿಹಾಸಿಕ ದಾಖಲೆಗಳಾಗಿ ಉಳಿದಿವೆ. ಆತನ ಕನ್ನಡ ಶಬ್ದಕೋಶ ಇಂದಿಗೂ ಒಂದು ಅಮೂಲ್ಯ ಅರ್ಥಕೋಶವಾಗಿಯೇ ಉಳಿದಿದೆ. ತನ್ನ ಶಬ್ದಕೋಶದಲ್ಲಿ ಆತ ನಾಡಿನ ನಾನಾಕಡೆಯ ಜನಪ್ರಿಯ ಗಾದೆಗಳನ್ನು ಸಂಗ್ರಹಿಸಿ ನೀಡಿರುವುದು ಜಾನಪದ ಕ್ಷೇತ್ರಕ್ಕೆ ಆತ ಸಲ್ಲಿಸಿದ ದೊಡ್ಡ ಸೇವೆಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳು 1894ರಲ್ಲಿ ಪ್ರಕಟವಾದ ಈ ಶಬ್ದಕೋಶದಲ್ಲಿ ಸೇರಿವೆ. ಇಷ್ಟು ಅಪಾರ ಸಂಖ್ಯೆಯಲ್ಲಿ ಕಳೆದ ಶತಮಾನದಲ್ಲಿಯೇ ಕನ್ನಡ ಗಾದೆಗಳು ಸಂಕಲಿತವಾಗಿ ಪ್ರಸಿದ್ಧ ಅರ್ಥಕೋಶವೊಂದರಲ್ಲಿ ಸಂರಕ್ಷಿತವಾಗಿರುವುದು ಕಿಟ್ಟೆಲನ ಸಾಹಸಕ್ಕೆ ದ್ಯೋತಕವಾಗಿದೆ. ಕಂಠಸ್ಥ ಸಂಪ್ರದಾಯದ ಈ ಗಾದೆಗಳ ಜೊತೆಗೆ ಆಡುಮಾತಿನ ಸೊಗಡನ್ನೂ ಸವಿಯನ್ನೂ ಕನ್ನಡಿಗರ ಪರವಾಗಿ ಜೀವಾನುಭವದ ಶ್ರೀಮಂತಿಕೆಯನ್ನು ವೈವಿಧ್ಯವನ್ನು ಪರಿಚಯ ಮಾಡಿಕೊಡಲು ಸಮರ್ಥವಾಗಲಿಲ್ಲ. 20ನೆಯ ಶತಮಾನದ ಆದಿಭಾಗದಲ್ಲಿಯೂ ಈ ಕೆಲಸ ಸಮರ್ಪಕವಾಗಿ ನಡೆಯಲಿಲ್ಲ. 1912ರ ಸುಮಾರಿಗೆ ಪ್ರಕಟವಾದ ಬಾಸೆಲ್ ಮಿಷನ್ ಪ್ರೆಸ್ಸಿನವರ ಗಾದೆಗಳ ಸಂಕಲನಗಳನ್ನು ಬಿಟ್ಟರೆ ಮತ್ತಾವ ಜಾನಪದ ಪ್ರಕಾರದಲ್ಲೂ ಸಂಕಲನಗಳು ಹೊರಬರಲಿಲ್ಲ. 1930ರವರೆಗೆ ಕನ್ನಡ ಜಾನಪದ ಕ್ಷೇತ್ರ ಅಜ್ಞಾತವಾಗಿಯೇ ಉಳಿದು ಹೋಯಿತು. ಕಳೆದ ನಾಲ್ಕು ದಶಕಗಳ ಸಂಗ್ರಹ ಹಾಗೂ ಅಧ್ಯಯನಗಳು ಕನ್ನಡ ಜಾನಪದ ಭಂಡಾರವನ್ನು ತಕ್ಕಮಟ್ಟಿಗಾದರೂ ತುಂಬಿವೆ. ಸು. ಎಂಟುನೂರಕ್ಕೂ ಹೆಚ್ಚು ಜಾನಪದ ಕೃತಿಗಳು ಪ್ರಕಟವಾಗಿವೆ. ಉತ್ತಮ ಸಂಗ್ರಾಹಕರೂ ವಿದ್ವಾಂಸರೂ ಆ ಕ್ಷೇತ್ರದಲ್ಲಿ ದುಡಿದು ಜಾನಪದ ವಿದ್ವತ್ತನ್ನು ಬೆಳೆಸುತ್ತಿದ್ದಾರೆ. ಜಾನಪದ ಸಂಗ್ರಹ ಹಾಗೂ ಅಧ್ಯಯನದ ಕೆಲವು ಮೈಲಿಗಲ್ಲುಗಳನ್ನು ಇಲ್ಲಿ ಪರಿಶೀಲಿಸಬಹುದು.

ಮಾಸ್ತಿಯವರ "ಕನ್ನಡ ಲಾವಣಿ ಸಾಂಗತ್ಯ"ಸಂಪಾದಿಸಿ

 • ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನವೋದಯ ಕ್ರಾಂತಿಯ ಜೊತೆಯಲ್ಲಿಯೇ ಜಾನಪದ ನವೋದಯವೂ ಆಯಿತು. ಎನ್ನಬಹುದು. 1925ಕ್ಕೂ ಮುಂಚೆಯೇ ಪ್ರಕಟವಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಲೇಖನ "ಕನ್ನಡ ಲಾವಣಿ ಸಾಂಗತ್ಯ"-ಎಂಬುದು ಕನ್ನಡ ಜನಪದ ಸಾಹಿತ್ಯದ ನಾನಾ ಮುಖಗಳನ್ನು ಪರಿಚಯ ಮಾಡಿಕೊಟ್ಟು, ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಂಗ್ರಹ ಕಾರ್ಯಕ್ಕೆ ಒಂದು ರೀತಿಯ ಪ್ರೇರಣೆಯನ್ನು ನೀಡಿತು. ಮಾಸ್ತಿ ಆ ಲೇಖನದಲ್ಲಿ ಕನ್ನಡ ಜನಪದಗೀತೆಗಳ ಅನೇಕ ಪ್ರಮುಖ ಸಂಪ್ರದಾಯಗಳನ್ನು ಪರಿಚಯ ಮಾಡಿಕೊಟ್ಟು, ತಮ್ಮ ಅಧಿಕಾರಾವಧಿಯ ಪ್ರವಾಸ ಕಾಲದಲ್ಲಿ ಟಿಪ್ಪಣಿ ಮಾಡಿಕೊಂಡ ವಿಷಯಗಳನ್ನು ಗೀತಭಾಗಗಳನ್ನೂ ಉಲ್ಲೇಖಿಸಿ ಅವುಗಳ ಸ್ವಾರಸ್ಯವನ್ನು ಕುರಿತು ಚರ್ಚೆ ಮಾಡಿದ್ದಾರೆ. ಸರ್ಜಪ್ಪ ನಾಯಕನ ಲಾವಣಿ, ಅರ್ಜುನ ಜೋಗಿ ಹಾಡು ಮುಂತಾದ ಪ್ರಸಿದ್ಧ ಜನಪದ ರಚನೆಗಳ ಕಡೆ ನಾಡಿನ ವಿದ್ವಾಂಸರ ದೃಷ್ಟಿಯನ್ನು ಸೆಳೆದಿದ್ದಾರೆ. ಮರೆತು ಹೋಗುತ್ತಿರುವ ಅನೇಕ ಹಾಡುಗಳ ಪ್ರಸ್ತಾಪ ಮಾಡಿ ಜಾನಪದ ಸಂಗ್ರಹ ಕಾರ್ಯದ ಬಗ್ಗೆ ಗಮನಾರ್ಹವಾದ ಅನೇಕ ಸೂಚನೆಗಳನ್ನು ಕೊಟ್ಟಿದ್ದಾರೆ.
 • ಮಾಸ್ತಿಯವರ ಈ ಪ್ರಮುಖ ಲೇಖನದ ಅನಂತರ ಜಯಕರ್ನಾಟಕ, ಪ್ರಬುದ್ದ ಕರ್ಣಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಸಂಗ್ರಹಗಳು ಮತ್ತು ಲೇಖನಗಳನ್ನು ಅನಂತರ ಕನ್ನಡದಲ್ಲಿ ಪ್ರಕಟಗೊಂಡ ಜಾನಪದ ಸಂಕಲನಗಳು ಮತ್ತು ವಿಮರ್ಶಾಗ್ರಂಥಗಳನ್ನು ಐದು ಪ್ರಮುಖ ಅಂಗಗಳಲ್ಲಿ ವಿಭಜಿಸಿಕೊಳ್ಳಬಹುದು.
 • 1 ಜನಪದ ಗೀತೆ, ಲಾವಣಿಗಳು
 • 2 ಜನಪದ ಗದ್ಯ ಕಥನಗಳು
 • 3 ಜನಪದ ಗಾದೆ, ಒಗಟುಗಳು
 • 4 ಜನಪದ ಕಲೆಗಳು
 • 5 ಜಾನಪದ ವಿಚಾರ ವಿಮರ್ಶೆ

ನವೋದಯ ಕಾವ್ಯದ ಪ್ರಭಾವಸಂಪಾದಿಸಿ

 • ಜಾನಪದದ ಸಮಗ್ರ ಕಲ್ಪನೆ ಕನ್ನಡದಲ್ಲಿ ಬಂದದ್ದು ತೀರ ಇತ್ತೀಚೆಗೆ, ಸಾಹಿತ್ಯಕ ಬಗೆ, ಭಾಷಿಕ ಬಗೆ, ಕ್ರಿಯಾತ್ಮಕ ಬಗೆ, ವೈಜ್ಞಾನಿಕ ಬಗೆಗಳಲ್ಲಿ ಅನೇಕ ವಿಷಯಗಳು ಒಳಪಡುತ್ತವೆ. ಪರಂಪರಾನುಗತವಾಗಿ ಕಂಠಸ್ಥ ಸಂಪ್ರದಾಯ ಹಾಗೂ ಅನುಕರಣೆಯ ಮೂಲಕ ಸಾಗಿಬರುವ ಎಲ್ಲ ಬಗೆಯ ಜ್ಞಾನವೂ ಜಾನಪದ. ಗ್ರಂಥಸ್ಥ ಮೂಲವನ್ನು ಅವಲಂಬಿಸದೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಒಯ್ಯಲ್ಪಡುವ ಜಾನಪದದಲ್ಲಿ ಕಥೆ, ಗೀತೆ, ಲಾವಣಿ, ಗಾದೆ, ಒಗಟು, ಮಾತು, ನೃತ್ಯ, ನಾಟಕ, ಚಿತ್ರ, ಶಿಲ್ಪ, ಆಚಾರ, ನಂಬಿಕೆ, ಸಂಪ್ರದಾಯ, ಅಡುಗೆ, ವೈದ್ಯ, ಕ್ರೀಡೆ, ಮಾಟ ಮಂತ್ರ, ಸಂಜ್ಞೆ, ಹೀಗೆ ಹತ್ತಾರು ಪ್ರಕಾರಗಳನ್ನು ಗುರುತಿಸಲಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲ ಶಾಖೆಗಳಿಗೂ ಸಂಬಂಧಪಟ್ಟಂತೆ ಅತ್ಯುತ್ತಮ ಸಂಗ್ರಹಕಾರ್ಯ ನಡೆದಿದೆ. ಕನ್ನಡದಲ್ಲಿ ಮೂರು ನಾಲ್ಕು ಪ್ರಕಾರಗಳನ್ನೂ ಗುರುತಿಸುವಷ್ಟು ಸಂಗ್ರಹಕಾರ್ಯ ನಡೆದಿದ್ದರೂ ಅವುಗಳಲ್ಲಿಯೂ ಸಮಗ್ರತೆ, ಶಾಸ್ತ್ರೀಯತೆ ಕಂಡು ಬರದೆ ಇನ್ನೂ ವೈಜ್ಞಾನಿಕ ಸಂಗ್ರಹಕಾರ್ಯ ನಡೆಯಬೇಕಾದ ಅಗತ್ಯ ಇದೆ.

ಗೀತೆ, ಲಾವಣಿಸಂಪಾದಿಸಿ

 • ಕನ್ನಡದಲ್ಲಿ ಜಾನಪದ ಆಸಕ್ತಿ ಮೂಡಿದುದು ಸಾಹಿತ್ಯಕ ದೃಷ್ಟಿಯಿಂದಲೇ ಎನ್ನಬೇಕು. ಈ ಕ್ಷೇತ್ರವನ್ನು ಪ್ರವೇಶಿಸಿದವರು ಬಹುಮಟ್ಟಿಗೆ ಸಾಹಿತಿಗಳು. ನವೋದಯ ಕಾವ್ಯದ ಪ್ರಭಾವದಿಂದ ಭಾವಗೀತೆಯ ಪ್ರಕಾರವನ್ನು ಜಾನಪದ ಮೂಲ ದಲ್ಲಿಯೂ ಕಾಣುವ ದೃಷ್ಟಿ ಪ್ರಖರವಾಗಿ, ಆ ನಿಟ್ಟಿನಲ್ಲಿ ಸಂಗ್ರಹಕಾರ್ಯ ಆರಂಭವಾಯಿತು. ಕನ್ನಡದ ಮೊಟ್ಟ ಮೊದಲ ಜನಪದ ಭಾವಗೀತೆಗಳ ಸಂಕಲನವನ್ನು ಹೊರತಂದವರು ಹಲಸಂಗಿ ಸೋದರರಾದ ಕಾಪಸೆ ರೇವಪ್ಪ, ಮಧುರಚೆನ್ನ, ಸಿಂಪಿ ಲಿಂಗಣ್ಣ ಈ ಮೂವರು. ಬಿಜಾಪುರ ಜಿಲ್ಲೆಯ ತದ್ದೆವಾಡ ನಾಡಿನ ಎಂಟನೂರು ತ್ರಿಪದಿಗಳು ಈ ಸಂಕಲನದಲ್ಲಿ ಸೇರಿವೆ. ಕನ್ನಡ ಗರತಿಹಾಡಿನ ಉನ್ನತ ಕಾವ್ಯ ಮೌಲ್ಯವನ್ನು ಈ ತ್ರ್ರಿಪದಿಗಳಲ್ಲಿ ಕಾಣಬಹುದು. ಸಂಪಾದಕರು ಶ್ರಮವಹಿಸಿ ಕಾವ್ಯದೃಷ್ಟಿಯಿಂದ ಅತ್ಯಮೂಲ್ಯವಾದ ಪದ್ಯಗಳನ್ನೇ ಇಲ್ಲಿ ಆಯ್ಕೆ ಮಾಡಿದ್ದಾರೆ.
 • ಜನಪದ ಗೀತೆಗಳ ಬಹುಸತ್ತ್ವಯುತವಾದ ಭಾಗ ಈ ಸಂಕಲನದ ಮೂಲಕ ಲಭ್ಯವಾಗುವಂತೆ ಸಂಪಾದಕರು ಶ್ರಮಿಸಿದ್ದಾರೆ. ಬೀಸುವ ಪದಗಳು, ದೈವಸ್ತುತಿ ಪ್ರಧಾನಗೀತೆಗಳು, ತೌರ ಪದಗಳು, ಲಾಲಿಯ ಪದಗಳು-ಹೀಗೆ ಪ್ರಮುಖವಾದ ವಿಭಾಗಗಳಲ್ಲಿ ಗರತಿಯ ಹಾಡಿನಲ್ಲಿ ದೊರೆಯುವ ತ್ರಿಪದಿಗಳು ಕನ್ನಡ ಜನಪದ ಕಾವ್ಯದ ಶ್ರೇಷ್ಠ ಮಾದರಿಗಳು. ಗರತಿಯ ಹಾಡು ಕನ್ನಡನಾಡಿನ ಸ್ತ್ರೀಜೀವನದ ಒಳಗನ್ನಡಿ ; ಅದು ಇಲ್ಲಿಯ ಹೆಣ್ಣುಮಕ್ಕಳ ಹೃದಯದ ಪಡಿಗನ್ನಡಿ. ಅದರಲ್ಲಿ ಮಮತೆಯ ಮಾಧುರ್ಯ ಮೈವೆತ್ತಿದೆ. ಪ್ರೇಮದ ಸತ್ಯ ಅಳವಟ್ಟಿದೆ-ಎಂದು ಸಂಪಾದಕರಲ್ಲೊಬ್ಬರಾದ ಸಿಂಪಿ ಲಿಂಗಣ್ಣನವರು ಹೇಳಿರುವ ಮಾತು ಎಲ್ಲ ದೃಷ್ಟಿಯಿಂದಲೂ ಗರತಿಯ ಹಾಡಿಗೆ ಒಪ್ಪುತ್ತದೆ. ಕಾಲದ ದೃಷ್ಟಿಯಿಂದಲೂ ಸಾಹಿತ್ಯಕ ಮೌಲ್ಯದೃಷ್ಟಿಯಿಂದಲೂ ಗರತಿಯ ಹಾಡಿಗೆ ಆದ್ಯಸ್ಥಾನ ಲಭ್ಯವಾಗುತ್ತದೆ. ಪ್ರಕೃತ ಸಂಕಲನಕ್ಕೆ ಬಿ.ಎಂ.ಶ್ರೀ. ಬೇಂದ್ರೆ, ಮಾಸ್ತಿ, ಮೊದಲಾದ ಸಾಹಿತ್ಯಶಿಲ್ಪಗಳ ಮಾರ್ಗದರ್ಶನವೂ ದೊರೆತಿರುವುದು ಆ ಕೃತಿಯ ಶ್ರೇಷ್ಠತೆಗೆ ಕಳಶವಿಟ್ಟಿದೆ.
 • ಗೆಳೆಯರ ಗುಂಪಿನ ರೇವಪ್ಪನವರು ಸಂಗ್ರಹಿಸಿದ ಮಲ್ಲಿಗೆ ದಂಡೆ (1935) ಜಾನಪದ ಸಂಕಲನಗಳ ಸಾಲಿನಲ್ಲಿ ಉತ್ತಮ ಕೃತಿ. ವಿವಿಧ ಧಾಟಿಗಳ, ವಿವಿಧ ಛಂದಸ್ಸುಗಳ ವೈವಿಧ್ಯಮಯ ಗೀತೆಗಳನ್ನು ಈ ಸಂಕಲನದಲ್ಲಿ ಕಾಣಬಹುದು. ದೇವರ ಸ್ತುತಿ, ಪ್ರಣಯ, ಭಾವಗೀತೆ, ಕಥನಗೀತೆ, ಮುದುವೆ ಹಾಡು, ಸೋಬಾನದ ಹಾಡುಗಳು, ಹಾಸ್ಯಗೀತೆಗಳು-ಹೀಗೆ ಜನಪದಗೀತೆಗಳ ಎಲ್ಲ ಸೋಬಾನದ ಪರಿಚಯ ಮಾಡಿಕೊಡುವ ಅದ್ವಿತೀಯ ಮಾದರಿಗಳು ಇಲ್ಲಿವೆ.
 • ಹಲಸಂಗಿ ಸೋದರರಲ್ಲೊಬ್ಬರಾದ ಸಿಂಪಿ ಲಿಂಗಣ್ಣನವರು ಧೂಲಾಸಾಹೇಬರೊಡನೆ ಕಲೆತು ಹೊರತಂದ ಜೀವನಸಂಗೀತ ಕನ್ನಡ ಜನಪದ ಸಾಹಿತ್ಯದ ಒಂದು ಶ್ರೇಷ್ಠ ಪರಂಪರೆಯನ್ನು ಪರಿಚಯ ಮಾಡಿಕೊಡುತ್ತದೆ. ಅಲ್ಲದೆ ಅತ್ಯುತ್ತಮ ಲಾವಣಿಗಳನ್ನು ಪ್ರಥಮ ಬಾರಿಗೆ ಇಲ್ಲಿ ಕಾಣಬಹುದಾಗಿದೆ. ಕಲ್ಕಿ-ತುರಾಯಿ ಅಥವಾ ಹರಿದೇಶಿ-ನಾಗೇಶಿ ಸಂಪ್ರದಾಯದ ಈ ಲಾವಣಿಗಳು ಉತ್ತರ ಕರ್ಣಾಟಕದಲ್ಲಿ ಪ್ರಚಲಿತವಾಗಿರುವ ಲಾವಣಿಗಳ ಶಕ್ತಿವತ್ತಾದ ಶೈಲಿ, ನಿರೂಪಣಾ ಕೌಶಲ ಮತ್ತು ಅದ್ಭುತ ಕಲ್ಪನೆಗಳಿಗೆ ಉತ್ತಮ ಮಾದರಿಯಾಗಿವೆ. ಹಳೆಯ ಪರಂಪರೆಯ ಲಾವಣಿಗಳು ಮರೆತುಹೋಗುತ್ತಿರುವುದರ ಜೊತೆಯಲ್ಲೇ, ಸತ್ತ್ವಹೀನವಾದ ಹೊಸ ಲಾವಣಿಗಳು ಕಾಣಿಸಿಕೊಳ್ಳುತ್ತಿರುವುದನ್ನು ಸಂಪಾದಕರು ಗುರುತಿಸಿದ್ದಾರೆ.
 • ಉತ್ತರ ಕರ್ನಾಟಕದ ಪ್ರಾತಿನಿಧಿಕ ಸಂಕಲನಗಳಾಗಿ ಹೊರಬಂದ ಈ ಮೂರು ಗ್ರಂಥಗಳು ನಾಡಿನಾದ್ಯಂತ ಜನಪದ ಸಾಹಿತ್ಯದ ಬಗ್ಗೆ ವಿಶೇಷವಾದ ಗೌರವ, ಆದರಗಳು ಮೂಡಲು ಪ್ರೇರಕವಾದುವು. ಇಂಥ ಗೀತೆಗಳ ಸತ್ತ್ವವನ್ನು ಹೀರಿ ಬೆಳೆದ ಬೇಂದ್ರೆಯವರಂಥ ಕವಿಗಳೇ ಈ ಗೀತೆಗಳ ದೊಡ್ಡ ಪ್ರಸಾರಕರಾಗಿ ತಮ್ಮ ಕವಿತೆಗಳಿಗೂ ಜಾನಪದ ಚೈತನ್ಯವನ್ನೇ ತುಂಬಿ ಕನ್ನಡ ಕಾವ್ಯಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಎಸಗಿದರು.

ತೊರ್ಕೆಯವರ ಹಳ್ಳಿಯ ಹಾಡುಗಳುಸಂಪಾದಿಸಿ

 • 1933ರ ಅವಧಿಯಲ್ಲೇ ಪ್ರಕಟವಾದ ವಿಠೋಬ ವೆಂಕಟನಾಯಕ ತೊರ್ಕೆಯವರ ಹಳ್ಳಿಯ ಹಾಡುಗಳು ಕಿರುಹೊತ್ತಗೆ ಕಾಲದೃಷ್ಟಿಯಿಂದ ಹಾಗೂ ಪ್ರಾದೇಶಿಕ ದೃಷ್ಟಿಯಿಂದ ಗಮನಾರ್ಹವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನೂರೈವತ್ತು ತ್ರಿಪದಿಗಳನ್ನು ಈ ಸಂಕಲನ ದೊರಕಿಸಿ ಕೊಡುತ್ತದೆ.
 • ಉತ್ತರ ಕರ್ನಾಟಕದಲ್ಲಿ ಹಲಸಂಗಿ ಸೋದರರು ಜನಪದಗೀತೆ, ಲಾವಣಿಗಳ ಶ್ರೇಷ್ಠ ಮಟ್ಟದ ಸಂಕಲನಗಳನ್ನು ಹೊತರುತ್ತಿರುವಾಗ ಹಳೆಯ ಮೈಸೂರು ಭಾಗದಲ್ಲಿಯೂ ಈ ಯಾವ ಪ್ರಭಾವಕ್ಕೂ ಒಳಗಾಗದೆ ಜಾನಪದ ಸಂಗ್ರಹಕಾರ್ಯ ನಡೆಯುತ್ತಿತ್ತು. 1933ರಲ್ಲೇ ಪ್ರಕಟವಾದ ಅರ್ಚಕ ಬಿ. ರಂಗಸ್ವಾಮಿಯವರ "ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು "ಅನೇಕ ದೃಷ್ಟಿಗಳಿಂದ ಕನ್ನಡದ ಇತರ ಸಂಕಲನಗಳಿಗಿಂತ ಮೇಲಾದ ಕೃತಿಯೆನಿಸುತ್ತದೆ. ಜಾನಪದದ ಯಾವ ಸ್ಪಷ್ಟ ಕಲ್ಪನೆಯೂ ಇಲ್ಲದೆ, ಆದರೂ ತಮ್ಮ ಹುಟ್ಟೂರಿನ ಜೀವಂತ ಸಂಸ್ಕೃತಿಗೆ ಮಾರುಹೋಗಿ, ವಿಶ್ವಕರ್ಣಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರಿಂದ ಪ್ರಭಾವಿತರಾಗಿ ಅರ್ಚಕ ರಂಗಸ್ವಾಮಿಯವರು ಹುಟ್ಟಿದ ಹಳ್ಳಿಯ ಸಮಸ್ತ ವಿವರಗಳನ್ನೂ ತಮ್ಮ ಕೃತಿಯಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಜಾನಪದದ ಎಲ್ಲ ಅಂಗಗಳೂ ಈ ಕೃತಿಯಲ್ಲಿ ಅಳವಟ್ಟಿವೆ. ಊರಿನ ವಿವರ, ಜನ ಜೀವನ ಅಲ್ಲಿಯ ಐತಿಹ್ಯಗಳು, ಪುರಾಣಗಳು, ಕಥೆಗಳು, ಗೀತೆಗಳು, ಲಾವಣಿಗಳು, ಮಾತಿನ ರೀತಿ, ಗಾದೆಗಳ ವೈಖರಿ, ಸಂಪ್ರದಾಯ, ಆಚಾರ, ನಡೆ, ನುಡಿ, ನಾಟಕ, ನೃತ್ಯ ಹೀಗೆ ಯಾವ ವಿವರವನ್ನೂ ಬಿಡದೆ ಒಂದು ಊರಿನ ಆತ್ಮಕಥೆಯನ್ನೇ ಈ ಕೃತಿಯಲ್ಲಿ ನೀಡಿದ್ದಾರೆ. ಅತ್ಯುನ್ನತ ಸಾಂಸ್ಕೃತಿಕ ಆವರಣದಲ್ಲಿ ಆದರ್ಶಜೀವನವನ್ನು ನಡೆಸುತ್ತ ನ್ಯಾಯ, ನಿಷ್ಠೆ, ಸತ್ಯ, ಧರ್ಮಗಳ ತಳಹದಿಯ ಮೇಲೆ ಗ್ರಾಮಾಂತರ ಜೀವನ ಎಂಥ ನೆಮ್ಮದಿ, ಎಂಥ ಸಂತೃಪ್ತಿಯನ್ನು ಕಂಡಿತ್ತು ಎಂಬುದರ ಹೃದಯಂಗಮ ಚಿತ್ರಣವನ್ನು ರಂಗಸ್ವಾಮಿಯವರು ತಮ್ಮ ಕೃತಿಯಲ್ಲಿ ನೀಡಿದ್ದಾರೆ. ಅಪಾರ ಸಂಖ್ಯೆಯ ದೇವರ ಪದಗಳೂ ಕೋಲಾಟದ ಪದಗಳೂ ಲಾವಣಿಗಳೂ ಗಾದೆಗಳೂ ಈ ಕೃತಿಯಲ್ಲಿ ಸಂಕಲಿತವಾಗಿವೆ. ಇಷ್ಟಿದ್ದರೂ ಈ ಕೃತಿ ಹಲವು ಕಾರಣಗಳಿಂದ ಸಾಕಷ್ಟು ಪ್ರಚಾರವನ್ನು ಪಡೆಯದೆ ಅಜ್ಞಾತ ವಾಗಿ ಉಳಿದುಹೋಯಿತು. ಇದರ ಮಾದರಿಯನ್ನನುಸರಿಸಿ ಮುಂದಿನ ಸಂಗ್ರಾಹಕರು ತಮ್ಮ ಸಂಗ್ರಹಗಳ ವ್ಯಾಪಕತೆಯನ್ನು ಹೆಚ್ಚಿಸಿಕೊಂಡು ಇನ್ನೂ ಸಾರ್ಥಕ ಕೃತಿಗಳನ್ನು ಹೊರತರುವ ಸಾಧ್ಯತೆ ತಪ್ಪಿಹೋಯಿತು.

ಇತರ ಸಂಗ್ರಹಗಳುಸಂಪಾದಿಸಿ

 • 1930-40ರ ಅವಧಿಯಲ್ಲಿ ಜನಪದ ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ಕೆಲಸಮಾಡಿದ ಗೊರೂರು ರಾಮಸ್ವಾಮಿ ಅಯ್ಯಂಗಾರ್ರೂ ಬಿ. ಎನ್. ರಂಗಸ್ವಾಮಿಯವರೂ ಒಂದೊಂದು ಉತ್ತಮ ಸಂಕಲನಗಳನ್ನೂ ಹೊರತಂದಿದ್ದಾರೆ. ಗೋರೂರರ ಹಳ್ಳಿ ಹಾಡುಗಳು (1938), ರಂಗಸ್ವಾಮಿಯವರ ಹಳ್ಳಿಯ ಪದಗಳು (1940) ಗರತಿಯ ಮಾಡಿನ ಮಾದರಿಯಲ್ಲೇ ಹೊರಬಂದ ಕೃತಿಗಳು. ಹಳ್ಳಿಯ ಹಾಡುಗಳು ಹೆಚ್ಚು ವಿಸ್ತಾರವಾದ, ವೈವಿಧ್ಯಪುರ್ಣವಾದ ಕೃತಿ. ಹಾಸನ, ಮೈಸೂರು, ಮಂಡ್ಯ ಹಾಗೂ ಕೋಲಾರ ಜಿಲ್ಲೆಗಳ ಸಾಹಿತ್ಯ ಈ ಕೃತಿಗಳಲ್ಲಿ ಲಭ್ಯವಾಗುತ್ತದೆ.
 • ಮಾನವಮಿ ಸಂಪ್ರದಾಯಕ್ಕೆ ಸೇರಿದ ಚೌಪದಗಳ ಸಂಕಲವೊಂದನ್ನು ಇಲ್ಲಿ ಹೆಸರಿಸಬಹುದು. ಹರಕೆ ಪದಗಳನ್ನು ಹೇಳಿಕೊಂಡು ಶಾಲೆಯ ಮಕ್ಕಳು ತಮ್ಮ ಅಯ್ಯಗಳ ಜೊತೆ ಮಾನವಮಿಯ ಕಾಲದಲ್ಲಿ ಊರಾಡಲು ಹೋಗುತ್ತಿದ್ದ ಸಂಪ್ರದಾಯ ಕನ್ನಡ ನಾಡಿನಲ್ಲೆಲ್ಲ ಪ್ರಚಾರದಲ್ಲಿತ್ತು. ಆ ಸಂಪ್ರದಾಯಕ್ಕೆ ಸೇರಿದ ಹಾಡುಗಳು ಹೆಚ್ಚಾಗಿ ಕಂಠಸ್ಥ ಸಂಪ್ರದಾಯದಲ್ಲೆ ಲಭ್ಯವಾಗುತ್ತವೆ. ಯಾರೋ ಪ್ರೌಢಕವಿಯೊಬ್ಬ ಈ ಹಾಡುಗಳನ್ನು ಕಲೆಹಾಕಿ, ಸಂಸ್ಕರಿಸಿ, ವಿಸ್ತರಿಸಿ ರಚಿಸಿದ ಗ್ರಂಥವೊಂದನ್ನು ಎನ್. ಅನಂತರಂಗಾಚಾರ್ಯರು ಮಾನವಮಿಯ ಚೌಪದ (1940) ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ.
 • ಸ್ವಾತಂತ್ರ್ಯ ಪುರ್ವ ಜಾನಪದ ಸಂಗ್ರಹಗಳಲ್ಲಿ ಮತಿಘಟ್ಟ ಸೋದರರ" ನಾಡಪದಗಳು "ಎಂಬ ಸಂಕಲನಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಗಾತ್ರದ ದೃಷ್ಟಿಯಿಂದಲೂ ವೈವಿಧ್ಯದ ದೃಷ್ಟಿಯಿಂದಲೂ ಸಂಪಾದನೆಯ ದೃಷ್ಟಿಯಿಂದಲೂ ಈ ಸಂಕಲನ ಇತರ ಸಂಗ್ರಹಗಳಿಗಿಂತ ಮೇಲೆ ನಿಲ್ಲುತ್ತದೆ. ಬಯಲುನಾಡಿನ, ಮಲೆನಾಡು ಸೆರಗಿನ ಗೀತೆಗಳನ್ನು ಇಲ್ಲಿ ಕ್ರಮಬದ್ಧವಾಗಿ ಅಳವಡಿಸಲಾಗಿದೆ. ಜನಪದಗೀತೆ ಸಂಪ್ರದಾಯಗಳನ್ನೆಲ್ಲ ಗುರುತಿಸಿ, ಆ ಹಿನ್ನಲೆಯಲ್ಲಿ ಸಂಗ್ರಹಿಸಿದ ಹಾಡುಗಳನ್ನು ಸೂಕ್ತವಾಗಿ ವಿಭಜಿಸಿ, ಸಾಕಷ್ಟು ವಿವರವಾಗಿ ಟಿಪ್ಪಣಿಗಳನ್ನೂ ಒದಗಿಸಲಾಗಿದೆ. ಜನಪದ ಗೀತೆಗಳ ಮೂಲಮಟ್ಟುಗಳನ್ನು ಕಾಪಾಡಿಕೊಳ್ಳುವ ವೈಜ್ಞಾನಿಕ ದೃಷ್ಟಿಯನ್ನು ಈ ಸಂಕಲನದಲ್ಲಿ ಮಾತ್ರ ಕಾಣಬಹುದು. ಕೋಲಾಟದ ಪದಗಳು, ಉತ್ತರದೇವಿ ಹಾಗೂ ಇತರ ಕಥೆಗಳು, ತಿಂಗಳ ಮಾನವ ಪದಗಳು ಈ ಸಂಕಲನದ ಕೆಲವು ಉತ್ಕೃಷ್ಟ ಗೀತೆಗಳು. ಬ್ರಾಹ್ಮಣ ಸಮಾಜದ ಕಂಠಸ್ಥ ಸಂಪ್ರದಾಯದ ಹಾಡುಗಳನ್ನು ಈ ಕೃತಿಯಲ್ಲಿ ಸೇರಿಸಿರುವುದು ಗಮನಾರ್ಹವಾಗಿದೆ. ಇಲ್ಲಿ ಬರುವ ಹಾಡುಗಳಲ್ಲಿ ಶಿಷ್ಟ ಹಾಗೂ ಜನಪದ ಕಾವ್ಯಸಂಪ್ರದಾಯಗಳ ಸೊಗಸಾದ ಸಾಮರಸ್ಯವನ್ನು ವಿಶೇಷವಾಗಿ ಗುರುತಿಸಬಹುದು. ಈ ಎರಡು ಕಾವ್ಯಸಂಪ್ರದಾಯಗಳ ನಡುವೆ, ಎರಡೂ ಕಡೆಯ ಉತ್ತಮ ಅಂಶಗಳನ್ನೂ ಸ್ವೀಕರಿಸಿ ಸಂಪ್ರದಾಯದ ಹಾಡುಗಳು ರೂಪುಗೊಂಡಿವೆ. ಇಂಥ ಹಾಡುಗಳ ಸಂಗ್ರಹದ ಕಡೆಗೆ ಈ ಕೃತಿ ಬೆಳಕು ಚೆಲ್ಲುತ್ತದೆ.
 • ನಾಡಪದಗಳು ಪ್ರಕಟಣೆಯೊಡನೆ ಕನ್ನಡ ಜನಪದ ಗೀತೆಗಳ ಸಂಗ್ರಹ ಒಂದು ಘಟ್ಟವನ್ನು ಮುಟ್ಟಿ ಅತ್ಯುತ್ತಮ ಗೀತಸಾಹಿತ್ಯ ಸ್ವಾತಂತ್ರ್ಯ ಪುರ್ವ ಸಂಕಲನಗಳಲ್ಲಿ ಲಭ್ಯವಾಗುವಂತಾದುದರ ಜೊತೆಗೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಗಳ ಜನಪದಗೀತೆಗಳ ಸಾಮಾನ್ಯ ಸ್ವರೂಪದ ಪರಿಚಯವೂ ಅಭ್ಯಾಸಿಗಳ ಪಾಲಿಗೆ ಒದಗುವಂತಾಯಿತು. ಸ್ತ್ರೀಯರ ಹಾಡುಗಳೇ ಈ ಸಂಕಲನಗಳಲ್ಲಿ ಹೆಚ್ಚಾಗಿ ಕಂಡರೂ ಕೋಲಾಟ ಹಾಗೂ ಲಾವಣಿಸಂಪ್ರದಾಯ ಮುಂತಾದ ಕಡೆಗಳಲ್ಲಿ ಪುರುಷರ ಸಾಹಿತ್ಯವನ್ನೂ ಗುರುತಿಸಬಹುದು. ಉತ್ತಮ ವಿದ್ವಾಂಸರೂ ಪ್ರತಿಭಾವಂತ ಸಾಹಿತಿಗಳೂ ಸಂಪಾದನ ಕಾರ್ಯದಲ್ಲಿ ಆಸಕ್ತಿಯನ್ನು ತೋರಿದುದರಿಂದ ಬಹುಮಟ್ಟಿಗೆ ಎಲ್ಲ ಸಂಕಲನಗಳೂ ಉತ್ತಮವಾಗಿಯೇ ಪ್ರಕಟವಾಗಿವೆ.

ಸ್ವಾತಂತ್ರ್ಯೋತ್ತರ ಸಂಗ್ರಹಕಾರರುಸಂಪಾದಿಸಿ

 • ಸ್ವಾತಂತ್ರ್ಯ ಪುರ್ವದಲ್ಲಿ ಮತಿಘಟ್ಟ ಕೃಷ್ಟಮೂರ್ತಿಗಳನ್ನು ಹೊರತು ಉಳಿದವರಾರೂ ಸಂಪುರ್ಣವಾಗಿ ಜಾನಪದ ಕ್ಷೇತ್ರಕ್ಕೆ ತಮ್ಮ ಪುರ್ಣ ಕಾಲವನ್ನು ವಿನಿಯೋಗಿಸಿದವರಲ್ಲ. ಹೀಗಾಗಿ ಒಬ್ಬೊಬ್ಬರು ಒಂದೊಂದೇ ಸಂಕಲನವನ್ನು ಪ್ರಕಟಿಸಿ ಹಿಂದೆ ಸರಿದರು. ಆದರೆ ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಜನಪದ ಸಾಹಿತ್ಯ ಸಂಗ್ರಹ, ಅಧ್ಯಯನಗಳಿಗೆ ತಮ್ಮ ಸಮಗ್ರ ಬದುಕನ್ನೇ ಮೀಸಲಿಟ್ಟು ಶ್ರಮಿಸುವ ನಿಷ್ಠೆಯನ್ನು ಮೆರೆದ ಕೆಲವರನ್ನಾದರೂ ಗುರುತಿಸಬಹುದು. ಗದ್ಗೀಮಠ ಅವರು ಇಂಥವರಲ್ಲಿ ಅಗ್ರಗಣ್ಯರು.
 • 1950ರ ಈಚೆಗೆ ಗದ್ಗೀಮಠರ ಸಾಹಸದ ಫಲವಾಗಿ ಉತ್ತರ ಕರ್ನಾಟಕದ ಹೊಸ ಹೊಸ ಜನಪದ ಗೀತಸಂಪ್ರದಾಯಗಳು ಪರಿಚಯವಾಗತೊಡಗಿದವು. ಕ್ಷೇತ್ರಕಾರ್ಯದಲ್ಲಿ ಅಪಾರ ಉತ್ಸಾಹವನ್ನು ತೋರಿದ ಶ್ರೀಯುತರು ಹತ್ತಾರು ವರ್ಷಗಳ ತಮ್ಮ ಸಂಗ್ರಹಯಾತ್ರೆಯ ಫಲವಾಗಿ ಅಪಾರ ಸಾಹಿತ್ಯ ರಾಶಿಯನ್ನು ಕಲೆಹಾಕಿದರು. ಜನಪದ ಸಂಪ್ರದಾಯಗಳ ಹತ್ತಿರದ ಪರಿಚಯ ಪಡೆದುಕೊಂಡರು. ಜನಪದ ಗೀತೆಗಳನ್ನು ಹಾಡುವುದರಲ್ಲಿ ಹೆಸರಾದ ಮನೆತನದಲ್ಲೇ ಬಂದವರಾದ್ದರಿಂದ ಅವರು ಸಹಜವಾಗಿ ಜನಪದ ಸಾಹಿತ್ಯದ ಪ್ರಾದೇಶಿಕ ಹಿನ್ನೆಲೆಯನ್ನು ಸಮರ್ಥವಾಗಿ ಪರಿಚಯ ಮಾಡಿಕೊಡಲು ಶಕ್ತರಾದರು. ಅವರ ಪ್ರೌಢಪ್ರಬಂಧ ಕನ್ನಡ ಜಾನಪದ ಗೀತೆಗಳು ಉತ್ತರ ಕರ್ನಾಟಕದ ಎಷ್ಟೋ ಅಜ್ಞಾತ ಗೀತಸಂಪ್ರದಾಯಗಳ ಮೇಲೆ ಬೆಳಕು ಚೆಲ್ಲುತ್ತದೆ. ತಮ್ಮ ಪ್ರಬಂಧದ ಉದ್ದಕ್ಕೂ ಅವರು ಉಲ್ಲೇಖಿಸಿರುವ ಅಪಾರ ಸಾಹಿತ್ಯದ ಪರಿಶೀಲನೆಯಿಂದ ಶ್ರೀಯುತರ ಸಂಗ್ರಹ ಕಾರ್ಯದ ವ್ಯಾಪಕತೆಯನ್ನು ಅರಿಯಬಹುದಾಗಿದೆ. ಅತ್ಯಂತ ವಿಸ್ತಾರವಾದ ಲಾವಣಿಗಳನ್ನು ಸಂಗ್ರಹಿಸಿದವರಲ್ಲಿ ಗದ್ಗೀಮಠ ಅವರು ಮೊದಲಿಗರು. ಶಿವಶರಣರಿಗೆ ಸಂಬಂಧಿಸಿದ ಕಥೆಗಳೂ ಅರ್ಜುನ ಜೋಗಿಯ ಹಾಡಗಬ್ಬ ಮುಂತಾದವೂ ಕನ್ನಡ ಜನಪದ ಖಂಡಕಾವ್ಯಗಳ ಶ್ರೇಷ್ಠ ಪರಂಪರೆಯ ಕಡೆ ನಮ್ಮ ಆಸಕ್ತಿಯನ್ನು ಸೆಳೆಯುತ್ತವೆ.
 • 1952ರಲ್ಲಿ ಪ್ರಕಟವಾದ ಗದ್ಗೀಮಠ ಅವರ ನಾಲ್ಕು ನಾಡಪದಗಳು ಉತ್ತರ ಕರ್ನಾಟಕದ ಹಂತಿಯ ಪದಗಳ ಒಂದು ಶ್ರೇಷ್ಠ ಸಂಕಲನ. ಜಿಜ್ಜಮಹಾದೇವಿ. ಬೇಡರ ಕನ್ನಯ್ಯ, ಕೋಳೂರು ಕೊಡಗೂಸು, ಗೊಲ್ಲಾಳ ಮುಂತಾದವರ ಕಥೆಗಳನ್ನು ನಿರೂಪಿಸುವ ಈ ಜನಪದ ಖಂಡಕಾವ್ಯಗಳು ಜನಪದ ಸಂಪ್ರದಾಯದಲ್ಲಿ ಶಿವಶರಣರ ಕಥೆಗಳ ಒಂದು ಉನ್ನತ ಪರಂಪರೆಯ ಕಡೆ ಬೆರಳುಮಾಡಿ ತೋರುತ್ತವೆ. ಶಿಷ್ಟಸಂಪ್ರದಾಯದ ಹಾಗೂ ಜನಪದ ಸಂಪ್ರದಾಯದ ಇಂಥ ಕಥಾಸಾಹಿತ್ಯದ ತೌಲನಿಕ ಅಧ್ಯಯನಕ್ಕೆ ಗದ್ಗೀಮಠರ ಸಂಗ್ರಹಗಳು ಉತ್ತಮ ಸಾಮಗ್ರಿಯನ್ನು ದೊರಕಿಸಿ ಕೊಡುತ್ತವೆ.
 • ಕಂಛಿಯ ಪದಗಳು ಗದ್ಗೀಮಠ ಅವರ ಜನಪದ ಭಕ್ತಿಗೀತೆಗಳ ಸಾಲಿನಲ್ಲಿ ಗುರುತಿಸಿದ ಹೊಸ ಸಂಪ್ರದಾಯವನ್ನೂ ಆ ಸಂಬಂಧವಾದ ಗೀತೆಗಳನ್ನೂ ಒಳಗೊಂಡಿದೆ. ಜನತಾಗೀತೆಗಳು ಸ್ವಾತಂತ್ರ್ಯ ಪುರ್ವ ಜನಪದ ಗೀತೆಸಂಕಲನಗಳ ನೆನಪನ್ನು ತರುವ ಒಂದು ಉತ್ತಮ ಬಿಡಿಹಾಡುಗಳ ಸಂಕಲನ. ಇದರಲ್ಲಿಯೂ ಗದ್ಗೀಮಠ ಹಾಡುವ ಸಂಪ್ರದಾಯದ ಹಿನ್ನಲೆಯಲ್ಲಿಯೇ ಅವನ್ನು ನೀಡಿದ್ದಾರೆ.
 • "ಲೋಕಗೀತೆಗಳು" ಗದ್ಗೀಮಠ ಸಂಕಲನಗಳಲ್ಲಿ ಅತ್ಯಂತ ಗಮನಾರ್ಹ ಸಂಕಲನ. ಕೋಲಾಟ ಹಾಗೂ ವಿವಾಹಸಂಬಂಧ ಗೀತೆಗಳನ್ನು ಈ ದೊಡ್ಡ ಸಂಕಲನದಲ್ಲಿ ನೀಡಿರುವ ಶ್ರೀಯುತರು ಆ ಸಂಪ್ರದಾಯಗಳ ಉತ್ತಮ ಪರಿಚಯವನ್ನು ಒದಗಿಸಿದ್ದಾರೆ. ಕುಮಾರರಾಮನ ದುಂದುಮೆ ಐತಿಹಾಸಿಕ ವಸ್ತುವನ್ನೊಳಗೊಂಡ ಒಂದು ಉತ್ತಮ ಜನಪದ ಖಂಡಕಾವ್ಯ.
 • ಗದ್ಗೀಮಠ ಅನಿರೀಕ್ಷಿತ ಮರಣದಿಂದಾಗಿ ಕನ್ನಡ ಜಾನಪದ ಕ್ಷೇತ್ರ ತುಂಬ ನಷ್ಟವನ್ನನುಭವಿಸಿತು. ಅವರಲ್ಲಿದ್ದ ಅಪಾರ ಅಪ್ರಕಟಿತ ಸಾಹಿತ್ಯ ಬೆಳಕು ಕಾಣದೆಯೇ ಉಳಿದುಹೋಯಿತು. ಆ ಸಾಹಿತ್ಯ ಪ್ರಕಟವಾಗುವ ಅವಕಾಶ ಬಂದರೂ ಅದನ್ನು ಉತ್ತಮ ರೀತಿಯಲ್ಲಿ ಸಂಪಾದಿಸುವ ಸಾಮಥರ್ಯ್‌ ಅನೇಕ ವರ್ಷಗಳ ಕ್ಷೇತ್ರ ಕಾರ್ಯದ ಅನುಭವದಿಂದ ದಕ್ಕಬೇಕಾದುದು.

ಗರತಿಯರ ಮನೆಯಿಂದ- ಕವನ ಸಂಗ್ರಹಸಂಪಾದಿಸಿ

 • 1955ರಲ್ಲಿ ಉತ್ತರ ಕರ್ನಾಟಕದ ಮತ್ತೊಂದು ಪ್ರಾತಿನಿಧಿಕ ಕೃತಿ ಗರತಿಯರ ಮನೆಯಿಂದ-ಎಂಬುದು ಪ್ರಕಟವಾಯಿತು. ಇದರ ಸಂಪಾದಕರಾದ ಈಶ್ವರಚಂದ್ರ ಚಿಂತಾಮಣಿ ಬಿಜಾಪುರ ಜಿಲ್ಲೆಯ ಗರತಿಯರ ಪದಗಳನ್ನೂ ಶಿಶುಪ್ರಾಸಗಳನ್ನೂ ಒಗಟುಗಳನ್ನೂ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ. ಪ್ರಥಮ ಬಾರಿಗೆ ಶಿಶುಪ್ರಾಸಗಳನ್ನು ಇಲ್ಲಿ ಕಾಣಬಹುದು. 1953ರಲ್ಲಿ ಪ್ರಕಟವಾದ ಕರ್ನಾಟಕ ಜಾನಪದ ಗೀತೆಗಳು ಆರ್. ಎಸ್. ಪಂಚಮುಖಿಯವರ ಸಂಪಾದಕತ್ವದಲ್ಲಿ ಹೊರಬಂದ ಮತ್ತೊಂದು ಶ್ರೇಷ್ಠ ಸಂಕಲನ. ಉತ್ತರ ಕರ್ನಾಟಕ ಹಾಗೂ ಕಾರವಾರ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಗ್ರಹಿಸಿದ ಹಾಡುಗಳು ಇಲ್ಲಿ ಸಂಕಲಿತವಾಗಿವೆ. ಜನಪದ ಗೀತೆಗಳ ಪ್ರಕಟಣೆಯಲ್ಲಿ ಯಾವ ಆಯ್ಕೆಯನ್ನೂ ಮಾಡದೆ, ಬೇರೆ ಬೇರೆ ಅಭ್ಯಾಸ ದೃಷ್ಟಿಗೆ ಪುರಕವಾಗುವಂತೆ ಈ ಸಂಕಲನದಲ್ಲಿ ಹಾಡುಗಳನ್ನು ನೀಡಿರುವ ಕ್ರಮ ಅಭಿನಂದನೀಯ. ಜಾನಪದ ಸಂಶೋಧಕರಿಗೆ ಇಂಥ ಸಂಕಲನಗಳಲ್ಲಿ ಲಭ್ಯವಾಗುವ ಸಾಹಿತ್ಯ ಹೆಚ್ಚು ಅಧಿಕೃತವಾದುದು ಎಂಬ ವಿಶ್ವಾಸ ಮೂಡುತ್ತದೆ. ಸ್ತುತಿಪದಗಳು, ಡೊಳ್ಳಿನ ಪದಗಳು, ಹಂತಿಯ ಪದಗಳು, ಬೀಸುವ ಪದಗಳು ಮುಂತಾದ ಶೀರ್ಷಿಕೆಯ ಕೆಳಗೆ ಲಭ್ಯವಾಗುವ ಹಾಡುಗಳ ಜೊತೆಗೆ ಅನೇಕ ಲಾವಣಿಗಳು ಕೂಡಿಕೊಂಡು ಬರುತ್ತವೆ. ಆಯಾ ಪ್ರ್ರಾದೇಶಿಕ ಹಿನ್ನೆಲೆಯಲ್ಲಿ ಹಾಡುಗಳನ್ನು ನೀಡಿರುವ ಕ್ರಮವೂ ಉಚಿತವಾಗಿ ತೋರುತ್ತದೆ. ಮೊದಲ ಬಾರಿಗೆ ಹಲವು ಮಂದಿ ಸಂಶೋಧಕರು ಕೈಗೊಂಡ ಸಂಗ್ರಹದ ಒಂದು ವಿಶಿಷ್ಟ ಸಂಕಲನವನ್ನು ಇಲ್ಲಿ ಕಾಣಬಹುದಾಗಿದೆ.
 • ಉತ್ತರ ಕರ್ನಾಟಕದ ಸಂಕಲನಗಳಲ್ಲಿ ವಿಶೇಷ ಮನ್ನಣೆಗೆ ಪಾತ್ರವಾದ ಮತ್ತೊಂದು ಕೃತಿ ದೊಡ್ಡ ಭಾವೆಪ್ಪ ಮೂಗಿಯವರ ಕಿತ್ತೂರು ಕಾಳಗ, ಕಿತ್ತೂರಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಉತ್ತಮ ಸಾಧನೆಯನ್ನು ತೋರಿರುವ ಮೂಗಿಯವರು ಆ ಸಂಬಂಧವಾದ ಲಾವಣಿಗಳನ್ನೂ ಒಂದೆಡೆ ಕಲೆಹಾಕಿರುವುದು ಅವರ ಜಾನಪದ ಪ್ರೇಮಕ್ಕೆ ದ್ಯೋತಕವಾಗಿದೆ. ಐತಿಹಾಸಿಕ ಸಂಶೋಧನೆಯ ಸಮಗ್ರತೆಗೆ ಇಂಥ ಲಾವಣಿಗಳೂ ಪುರಕವಾಗಬಲ್ಲವು ಎಂಬ ಅವರ ವಿವೇಚನಾಪರತೆಯೂ ಗಮನಾರ್ಹವಾದುದೇ. ಕನ್ನಡ ಐತಿಹಾಸಿಕ ಲಾವಣಿಗಳ ಸಾಲಿನಲ್ಲಿ ಮೂಗಿಯವರ ಈ ಸಂಕಲನಕ್ಕೆ ಒಂದು ವಿಶೇಷವಾದ ಸ್ಥಾನವಿದೆ. ಫ್ಲೀಟರ ಅನಂತರ ಇಂಥ ವಿಶಿಷ್ಟ ಲಾವಣಿಗಳನ್ನು ಕಲೆಹಾಕಿದವರು ಇವರೊಬ್ಬರೇ ಎನ್ನಬಹುದು.

ಹಳೆಯ ಮೈಸೂರು ಭಾಗದ ಸಂಕಲನಗಳುಸಂಪಾದಿಸಿ

 • ಹಳೆಯ ಮೈಸೂರು ಭಾಗವನ್ನು ದಕ್ಷಿಣ ಕರ್ನಾಟಕವೆಂದು ಜಾನಪದ ದೃಷ್ಟಿಯಿಂದ ವಿಭಜನೆ ಮಾಡಿಕೊಂಡು ಈ ಪ್ರದೇಶದ ಸಂಕಲನಗಳನ್ನು ಪರಿಶೀಲಿಸಬಹುದು. 1950-60ರ ಅವಧಿಯಲ್ಲಿ ಮತಿಘಟ್ಟ ಕೃಷ್ಣಮೂರ್ತಿಯವರ ಅನಂತರ ಈ ಕ್ಷೇತ್ರದಲ್ಲಿ ಕರಾಕೃ. ಗೊ.ರು. ಚೆನ್ನಬಸಪ್ಪ, ಕರೀಂಖಾನ್, ಸ. ಚ. ಮಹಾದೇವ ನಾಯಕ, ಕೆ.ವಿ. ಲಿಂಗಪ್ಪ, ಚಂದ್ರಶೇಖರನಾಥ್, ಕೆ.ವಿ.ಸುಬ್ಬಣ್ಣ, ಶೇಷಭಟ್ಟ ಹಾಗೂ ಸುಂದರೇಶ್ವರ ಮುಂತಾದ ಹೆಸರುಗಳು ಮುಖ್ಯವಾದುವು. ಇವರಲ್ಲಿ ಹತ್ತಾರು ಸಂಕಲನಗಳನ್ನು ಹೊರತಂದವರೂ ಒಂದೊಂದೇ ಸಂಕಲನವನ್ನು ಪ್ರಕಟಿಸಿದವರೂ ಇದ್ದಾರೆ. ಪ್ರಾದೇಶಿಕ ಹಿನ್ನೆಲೆಯ ದೃಷ್ಟಿಯಿಂದ ಈ ಎಲ್ಲ ಸಂಕಲನಗಳನ್ನೂ ಮುಖ್ಯವೆನಿಸುತ್ತವೆ.
 • ಕೆ.ವಿ.ಲಿಂಗಪ್ಪನವರು ಮಲೆನಾಡಿನ ಜನಪದಗೀತೆಗಳನ್ನು ಸಂಗ್ರಹಿಸಿ ಎರಡು ಸಣ್ಣ ಸಂಕಲಗಳನ್ನು ಪ್ರಕಟಿಸಿದ್ದಾರೆ. ಅವರ ಸಂಕಲನದ ಉತ್ತರದೇವಿ ಈವರೆಗೆ ದೊರೆತ ಪಾಠಗಳಲ್ಲೆಲ್ಲ ಶ್ರೇಷ್ಟವಾಗಿರುವುದಲ್ಲದೆ ವಸ್ತುದೃಷ್ಟಿಯಿಂದ ಮೂಲಕಥೆಯ ಕಡೆ ಬೆರಳು ತೋರುವಂತಿದೆ. ಗೊ.ರು. ಚೆನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ಬಯಲು ಪ್ರದೇಶದ ಹಾಡುಗಳನ್ನು ಸಂಕಲಿಸಿ ಮೂರು ಕೃತಿಗಳನ್ನು ಹೊರ ತಂದಿದ್ದಾರೆ. ಮೈದುನ ರಾಮಯ್ಯನ ಕಂಠಸ್ಥಸಂಪ್ರದಾಯದ ವಿಸ್ತಾರ ಖಂಡ ಕಾವ್ಯವನ್ನು ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ಇವರದು. ಕ.ಮ.ಶಿ. ಚಂದ್ರಶೇಖರಯ್ಯನವರು ಚೆನ್ನಗಿರಿಯ ಸುತ್ತಿನಲ್ಲಿ ಸಂಗ್ರಹಕಾರ್ಯವನ್ನು ನಡೆಸಿ ಹೊಸ ಪ್ರದೇಶವೊಂದರ ಹಾಡುಗಳನ್ನು ದೊರಕಿಸಿದ್ದಾರೆ. ಕರೀಂಖಾನರು ಹಾಸನ, ಕೊಡಗು, ತುಮಕೂರು ಜಿಲ್ಲೆಗಳ ಸಾಹಿತ್ಯವನ್ನು ಸಂಗ್ರಹಿಸಿ ಉತ್ತಮ ಸಂಕಲನಗಳನ್ನು ಹೊರತಂದಿದ್ದಾರೆ. ಜನಪದ ಗೀತೆಗಳ ಜನಪ್ರಿಯತೆಗೆ ದುಡಿದವರಲ್ಲಿ ಅವರು ಅಲ್ಲಲ್ಲಿ ಪ್ರಸಾರಕಾರ್ಯ ಕೈಗೊಂಡು ಗೀತೆಗಳನ್ನು ಮನಮುಟ್ಟುವಂತೆ ಹಾಡಿದ್ದಾರೆ ; ವ್ಯಾಖ್ಯಾನಿಸಿದ್ದಾರೆ. ಕೆ.ಆರ್. ಲಿಂಗಪ್ಪನವರ ಹೆಸರೂ ಕನ್ನಡ ನಾಡಿನ ಜನಪದ ಸಾಹಿತ್ಯ ಪ್ರಸಾರಕರ ಸಾಲಿನಲ್ಲಿ ಉಲ್ಲೇಖಾರ್ಹವಾದುದು. ಉತ್ತಮ ವಾಗ್ಮಿಗಳಾದ ಅವರು ಆಕರ್ಷಕ ರೀತಿಯಲ್ಲಿ ಜನಪದ ತ್ರಿಪದಿಗಳ ಅರ್ಥ ವೈಶಾಲ್ಯವನ್ನು, ಭಾವೋನ್ನತಿಯನ್ನು ನಿರೂಪಿಸಿ ಅಷ್ಟೇ ಮಧುರವಾಗಿ ಹಾಡಿತೋರಿಸುವ ಚಮತ್ಕಾರವನ್ನೂ ಪಡೆದವರು. ಅವರ ಮಾನವಮಿ ಪದಗಳು, ಕಂಠಸ್ಥಸಂಪ್ರದಾಯದ ಕೃತಿಯಾದುದರಿಂದ ಗಮನಾರ್ಹವಾಗಿದೆ.
 • ಕೆ.ವಿ.ಸುಬ್ಬಣ್ಣನವರ ಅವರು ನೀಡಿದ ದೀಪ-ಎಂಬ ಪುಸ್ತಕ ಜನಪದ ಗೀತೆಗಳನ್ನು ಲಾವಣಿಗಳನ್ನು ಕಾವ್ಯಾತ್ಮಕ ಗದ್ಯಚಿತ್ರಗಳ ಮೂಲಕ ಎಷ್ಟು ಸಮರ್ಥವಾಗಿ ಜನಪ್ರಿಯ ಗೊಳಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಅಲ್ಲದೆ ಮಲೆನಾಡಿನ ಅಂಟಿಕೆ ಪಂಟಿಕೆ ಸಂಪ್ರದಾಯದ ವಿಶೇಷ ಪರಿಚಯವನ್ನು ಈ ಕೃತಿ ಒದಗಿಸುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ ಸುಂದರ ಕಥನಗೀತೆಗಳನ್ನೂ ಬಿಡಿಹಾಡುಗಳನ್ನೂ ಶ್ರೀಯುತರು ಈ ಕೃತಿಗಳಲ್ಲಿ ಅಳವಡಿಸಿ ಸಂಕಲನ ದೃಷ್ಟಿಯಿಂದಲೂ ವಿಶೇಷ ಮನ್ನಣೆಗೆ ಪಾತ್ರರಾಗಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿಯವರ ಶ್ರೀ ಆದಿ ಚುಂಚನಗಿರಿ ಜನಪದ ಗೀತೆಗಳು ಕನ್ನಡದ ಕೆಲವೇ ಶ್ರೇಷ್ಠ ಸಂಕಲನಗಳಲ್ಲಿ ಒಂದಾಗಿದೆ. ಒಂದು ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಭ್ಯವಾಗಬಹುದಾದ ಸಾಹಿತ್ಯವನ್ನೆಲ್ಲ ಕಲೆಹಾಕಿ, ಉತ್ತಮ ರೀತಿಯಲ್ಲಿ ವಿಭಜಿಸಿ, ಇಲ್ಲಿ ಹೊರತರಲಾಗಿದೆ. ಕನ್ನಡ ಜನಪದ ಗೀತೆಗಳಲ್ಲಿ ಭಕ್ತಿಗೀತೆಗಳು ಅತ್ಯುತ್ಕೃಷ್ಟ ಭಾವಗೀತೆಗಳಾಗಿ ಹೇಗೆ ಸತ್ತ್ವಯುತವಾಗಿವೆ ಎಂಬುದನ್ನು ಈ ಗ್ರಂಥ ಸಮರ್ಥವಾಗಿ ಪರಿಚಯಿಸುತ್ತದೆ.
 • ಸ. ಚ. ಮಹಾದೇವ ನಾಯಕರು ಮೈಸೂರು ಜಿಲ್ಲೆಯ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಸಂಗ್ರಹ ಕಾರ್ಯವನ್ನು ಕೈಗೊಂಡು ಹಳ್ಳಿಯ ಹಾಡುಗಳು, ಜಾನಪದ ರಸಗಂಗೆ, ಸಂಪಿಗೆ ಅರಳಾವೆ-ಎಂಬ ಮೂರು ಕೃತಿಗಳನ್ನು ಹೊರತಂದಿದ್ದಾರೆ. ಕನ್ನಡನಾಡಿನ ದಕ್ಷಿಣ ಗಡಿಯ ವಿಶಿಷ್ಟ ಸಾಹಿತ್ಯದ ಸೊಗಸಾದ ಮಾದರಿಗಳನ್ನು ಈ ಕೃತಿಗಳಲ್ಲಿ ಕಾಣಬಹುದು. ಕೆಲವು ಹಾಡುಗಳು ಅಪುರ್ಣವಾಗಿದ್ದರೂ ಸಂಪಾದನೆಯ ದೃಷ್ಟಿಯಿಂದ ಕೆಲವು ನ್ಯೂನತೆಗಳು ಕಂಡುಬಂದರೂ ಜಿಲ್ಲೆಯ ಅನೇಕ ಗೀತ ಸಂಪ್ರದಾಯಗಳ ಪ್ರಥಮ ಪರಿಚಯವನ್ನು ಒದಗಿಸುವುದರ ಮೂಲಕ ಮುಂದಿನ ಸಂಗ್ರಾಹಕರಿಗೆ ಈ ಕೃತಿಯ ಒಳ್ಳೆಯ ಮಾರ್ಗದರ್ಶನ ನೀಡುತ್ತವೆ.
 • ದಕ್ಷಿಣ ಕರ್ನಾಟಕದ ಜನಪದ ಗೀತೆಗಳ ಲಾವಣಿಗಳ ಪ್ರಮುಖ ಸಂಗ್ರಾಹಕರಲ್ಲಿ ಕರಾಕೃ ಅವರೂ ಒಬ್ಬರು. ಮಂಡ್ಯ, ಬೆಂಗಳೂರು, ಮೈಸೂರು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇವರು ಸಂಗ್ರಹಕಾರ್ಯವನ್ನು ನಡೆಸಿದ್ದರೂ ಚಿತ್ರದುರ್ಗ ಜಿಲ್ಲೆಯ ಸಂಗ್ರಹ ಗಣನೀಯವಾಗಿದೆ. ಇವರೂ ಪಿ.ಆರ್. ತಿಪ್ಪೇಸ್ವಾಮಿಯವರೂ ಜಿಲ್ಲೆಯಲ್ಲಿ ಅನೇಕ ಬಾರಿ ಪ್ರವಾಸ ಮಾಡಿ ಉತ್ತಮ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ. ಸಂಗ್ರಹಕಾರ್ಯದಲ್ಲಿ, ಸಂಪಾದನಾ ಸಾಮಥರ್ಯ್‌ದಲ್ಲಿ ಅ ಶಾಸ್ತ್ರೀಯತೆ ಪ್ರಧಾನವಾಗಿ ಕಂಡುಬಂದರೂ ಜನಪದ ಸಾಹಿತ್ಯ ಅಕಾಡೆಮಿಯ ಸಂಕಲನಗಳು ಬಾಹುಳ್ಯ ಮತ್ತು ವೈವಿಧ್ಯದ ದೃಷ್ಟಿಯಿಂದ ಕನ್ನಡ ಜಾನಪದ ಕ್ಷೇತ್ರದಲ್ಲಿ ಒಂದು ದಾಖಲೆಯಾಗಿ ಉಳಿಯುತ್ತವೆ. ಈ ಅಕಾಡೆಮಿಯ ಇಪ್ಪತ್ತೈದು ಸಂಕಲನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದರೆ ಕೃತಿಯಿಂದ ಕೃತಿಗೆ ಆವೃತ್ತಿಯಿಂದ ಆವೃತ್ತಿಗೆ ಅನೇಕ ದೋಷಗಳು ತಲೆಹಾಕಿರುವುದು ಕಾಣಬರುತ್ತದೆ. ಬೇರೆಯವರ ಹಿಂದಿನ ಸಂಕಲನಗಳಲ್ಲಿ ಪ್ರಕಟವಾದ ಗೀತೆಗಳು ಯಥಾವತ್ತಾಗಿ ಇಲ್ಲಿ ಕಾಣಿಸಿಕೊಳ್ಳುವುದು, ಒಂದು ಸಂಕಲನದ ಹಾಡುಗಳು ಮತ್ತೊಂದು ಸಂಕಲನದಲ್ಲೂ ನುಸುಳಿಕೊಳ್ಳುವುದು, ಮೊದಲ ಆವೃತ್ತಿಗೂ ಎರಡನೆಯ ಆವೃತ್ತಿಗೂ ಶೀರ್ಷಿಕೆಯನ್ನುಳಿದು ಯಾವ ಸಂಬಂಧವೂ ಇಲ್ಲದಂತಾಗುವುದು. ಇಂಥ ಕೆಲವು ಪ್ರಮುಖ ದೋಷಗಳು ಆರಂಭದ ಸಂಕಲನಗಳಲ್ಲಿ ಕಾಣಿಸಿಕೊಂಡರೂ ಮುಂದಿನ ಸಂಕಲನಗಳು ಸಾಕಷ್ಟು ಉತ್ತಮಗೊಳ್ಳುತ್ತ ಹೋಗಿರುವುದನ್ನು ನೋಡಬಹುದು. ಜನಪದಸಾಹಿತ್ಯ ಅಕಾಡೆಮಿಯ ಸಂಕಲನಗಳನ್ನು ಐದು ಪ್ರಮುಖ ವಿಭಾಗಗಳಲ್ಲಿ ಹೆಸರಿಸಬಹುದು : 1 ಲಾವಣಿಗಳು, 2 ಸ್ಥಳಗೀತೆಗಳು, 3 ಕೋಲುಪದಗಳು, 4 ಮದುವೆಯ ಪದಗಳು, 5. ಇತರ ಹಾಡುಗಳು.

ಲಾವಣಿಗಳುಸಂಪಾದಿಸಿ

 • ಲಾವಣಿಗಳ ಸಂಕಲನಗಳಲ್ಲಿ ಜಾನಪದ ಕಥನಗೀತೆಗಳು ಎಂಬುದು ಗಣನೀಯ ಕೃತಿಯಾಗಿದೆ. ಮೂವತ್ತಕ್ಕೂ ಹೆಚ್ಚು ಲಾವಣಿಗಳನ್ನು ಒಳಗೊಂಡ ಈ ಕೃತಿ ಲಾವಣಿಗಳಿಗಾಗಿಯೇ ಮೀಸಲಾದ ಈ ಬಗೆಯ ಕೃತಿಗಳಲ್ಲಿ ವಿಸ್ತಾರವಾದದು. ಅನೇಕ ಕಡೆಯ ಹಾಡುಗಾರರಿಂದ ಸಂಗ್ರಹಿಸಿದ ಉತ್ತಮ ರಚನೆಗಳು ಇಲ್ಲಿ ಲಭ್ಯವಾಗುತ್ತವೆ. ಮಳೆರಾಯ ಮಾರ್ಹೆಣ್ಣು, ಹೊಂಗೇಲಿ ಈರಣ್ಣ ಮಡಿದ್ಹೋದ, ಬಾಲನಾಗಮ್ಮ, ಕೃಷ್ಣಕೊರವಂಜಿ-ಮುಂತಾದವು ಕೆಲವು ಶ್ರೇಷ್ಠ ಮಾದರಿಗಳು, ಕಾಳಿಂಗರಾಯ, ಹಾಡಿನಲ್ಲಿ ನಾಡಕಥೆಗಳು, ಮೈಲಾರಲಿಂಗ ಈರಬಡಪ್ಪ-ಮುಂತಾದ ಕೃತಿಗಳಲ್ಲಿಯೂ ಕೆಲವು ಉತ್ತಮ ಲಾವಣಿಗಳು ಕಾಣಸಿಗುತ್ತವೆ.
 • ಚೆನ್ನಿಗ ಚೆಲುವಯ್ಯ, ಶ್ರೀ ಆದಿಚುಂಚನಗಿರಿ ಎಂಬ ಎರಡು ಕೃತಿಗಳು ಸ್ಥಳಗೀತೆಗಳ ಸಂಕಲನಗಳಾಗಿವೆ. ಕೋಲುಮಲ್ಲಿಗೆ ಕೋಲೆ, ಹೆಣ್ಣು ಕೊಟ್ಟೇವು-ಈ ಎರಡು ಸಂಕಲನಗಳು ಪ್ರತ್ಯೇಕವಾಗಿ ಒಂದೊಂದು ವರ್ಗದ ಸಾಹಿತ್ಯವನ್ನೊಳಗೊಂಡ ಸುಂದರ ಸಂಕಲನಗಳು. ಒಂದೊಂದು ಸಂಪ್ರದಾಯದ ಸಮಗ್ರ ಗೀತೆಗಳನ್ನು ಒಂದೆಡೆ ಸಂಕಲ್ಪಿಸಿಕೊಡುವ ಉತ್ತಮ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಮಲ್ಲಿಗೆ ನಗುತಾವೆ, ಸಂಪಿಗೆ ಅರಳ್ಯಾವೆ-ಮುಂತಾದ ಇನ್ನೂ ಕೆಲವು ಉತ್ತಮ ಸಂಕಲನಗಳು ಈ ಮಾಲೆಯಲ್ಲಿ ಹೊರಬಂದಿವೆ.
 • ಜನಪದ ಸಾಹಿತ್ಯ ಅಕಾಡೆಮಿಯ ಸಂಕಲನಗಳು ಕನ್ನಡ ಜನಪದಗೀತೆಗಳ ವಿಸ್ತಾರವಾದ ಪ್ರಪಂಚವನ್ನು ಪರಿಚಯ ಮಾಡಿಕೊಡುವಂತಿದ್ದರೂ ಹಿನ್ನಲೆಯ ಸಂಪ್ರದಾಯಗಳ ವಿವೇಚನೆ ಹಾಗೂ ಟಿಪ್ಪಣಿಗಳಲ್ಲಿ, ಪಾಠ್ಯಾಂತರಗಳ ಆಯ್ಕೆಯಲ್ಲಿ ಶಾಸ್ತ್ರೀಯ ದೃಷ್ಟಿಯಿಲ್ಲದ್ದರಿಂದ ಅವುಗಳ ಪ್ರಯೋಜನ ಅಷ್ಟೂ ಅಷ್ಟು ಕಡಿಮೆಯಾಗಿದೆ. ಹಲಸಂಗಿ ಸೋದರರು, ಗೊರೂರರು, ಮತಘಟ್ಟ ಸೋದರರು ಗದ್ಗೀಮಠ-ಮುಂತಾದವರ ಕೃತಿಗಳ ಸಾಲಿನಲ್ಲಿ ಈ ಕೃತಿಗಳನ್ನು ಪರಿಶೀಲಿಸಿದಾಗ ಜಾನಪದದ ಸ್ಪಷ್ಟ ಕಲ್ಪನೆಯಿಲ್ಲದೆ, ಜನಪದ ಜೀವನದ ನಿಖರವಾದ ಅನುಭವ ವಿಸ್ತಾರವಿಲ್ಲದೆ, ಸಾಕಷ್ಟು ಪಾಂಡಿತ್ಯವಿಲ್ಲದೆ ಸಂಪಾದಿಸಿ, ಹೊರತಂದ ಯಾವ ಕೃತಿಯೂ ಉತ್ತಮ ಕಾಣಿಕೆಯಾಗಲಾರದು ಎಂಬ ಆಂಶ ಸ್ಪಷ್ಟವಾಗುತ್ತದೆ. ಆದರೂ ಇಲ್ಲಿರುವ ಅಪಾರ ಸಾಮಗ್ರಿ ಕೃತಿರೂಪದಲ್ಲಿ ದೊರೆಯುವಂತಾದುದರಿಂದ ಮುಂದಿನ ಸಂಪಾದನೆ ಹಾಗೂ ಸಂಶೋಧನೆಗಳಿಗೆ ತಕ್ಕಮಟ್ಟಿಗಾದರೂ ನೆರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
 • ಅವರ ನೆನೆದೇವು (1960), ಜನಪದ ಖಂಡಕಾವ್ಯಗಳು (1967)-ಇವು ಜೀಶಂಪ ಅವರ ಗೀತ ಹಾಗೂ ಲಾವಣಿಗಳ ಎರಡು ಸಂಕಲನಗಳು. ಅವರ ನೆನೆದೇವು ಎಂಬುದು ಜನಪದ ಭಕ್ತಿಗೀತೆಗಳನ್ನೊಳಗೊಂಡ ಕೃತಿ. ತಿರುಪತಿ ತಿಮ್ಮಪ್ಪ ಮೇಲುಕೋಟೆ ಚೆಲುವರಾಯ, ಚುಂಚನಗಿರಿ ಭೈರವ ಮುಂತಾದ ಪ್ರಸಿದ್ಧ ದೈವಗಳ ಬಗೆಗೂ ಅನೇಕ ಗ್ರಾಮದೇವತೆಗಳ ಬಗೆಗೂ ಉತ್ತಮ ಗೀತೆಗಳು ಈ ಕೃತಿಯಲ್ಲಿ ಸಂಕಲಿತವಾಗಿವೆ. ಜನಪದ ಖಂಡಕಾವ್ಯಗಳು ಎಂಬುದು ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಸಂಗ್ರಹಿಸಿದ ಹಾಡ್ಗತೆಗಳ ಸಂಗ್ರಹ, ಹುಳಿಯಾರು ಕೆಂಚಮ್ಮ, ಈರೋಬಿ ಹಿರಿದಿಮ್ಮಿ-ಮುಂತಾದ ಉತ್ತಮ ಕಥನಗೀತೆಗಳು ಈ ಸಂಕಲನದಲ್ಲಿವೆ. ಇದರ ಜೊತೆಗೆ ಕರ್ಣಾಟಕದ ಲಾವಣಿಕಾರರ ಹಾಡುಗಾರಿಕೆಯ ಸಂಪ್ರದಾಯಗಳನ್ನೆಲ್ಲ ಗುರುತಿಸಿ ಆಯಾ ಸಂಪ್ರದಾಯದ ಸಾಹಿತ್ಯವನ್ನೆಲ್ಲ ಇವರು ಸಂಗ್ರಹಿಸಿದ್ದಾರೆ.

1960-70ರ ಸಂಕಲನಗಳುಸಂಪಾದಿಸಿ

 • 1960-70ರ ಅವಧಿಯಲ್ಲಿ ಅಪಾರ ಸಂಖ್ಯೆಯ ಜನಪದ ಗೀತ ಸಂಕಲನಗಳು ಪ್ರಕಟವಾಗಿವೆ. ಅನೇಕ ಉತ್ಸಾಹಿ ತರುಣ ಸಂಗ್ರಾಹಕರು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 • ಜ್ಯೋತಿ ಹೊಸೂರ ಅವರ ಬೆರಸಿ ಇಟ್ಟೀನಬೆಲ್ಲ ನೆನಗಡಲಿ, ಕೆ. ನಾರಾಯಣ ಲಕ್ಷ್ಮೀ ನಾರಾಯಣ ಅವರ ತುಂಬೆ ಹೂವಿಟ್ಟು ಶರಣೆನ್ನಿ, ಚಂದ್ರಶೇಖರ ಐತಾಳರ ಕೈಲಿಯ ಕರೆದ ನೊರೆಹಾಲು, ಕೆ. ವಿರೂಪಾಕ್ಷಗೌಡ, ಕಲ್ಲೇಶ ಹಾಲೇಶ ಇಟಗಿ, ಪಿ. ಕರಿ ವೀರನಗೌಡರ ಹೊಲಮನಿ ಪದಗಳು, ಕೆ. ವಿರೂಪಾಕ್ಷಗೌಡ ಮತ್ತು ಮುದೇನೂರು ಸಂಗಣ್ಣನವರ ಹಳ್ಳಿಯ ಪದಗಳು, ಜಿ. ಎಸ್. ಭಟ್ಟ ಉಬರದ್ಕ ಅವರ ಸಿರಿಗಂಧ ಸೂಸ್ಯಾವೆ, ಮುದೇನೂರು ಸಂಗಣ್ಣನವರ ನವಿಲು ಕುಣಿದಾವ. ಎಂ. ಸಿ. ವಸಂತ ಕುಮಾರ ಅವರ ಮಳಲಿ ಗಿಡ್ಡಮ್ಮ, ಕೋಲುಪದಗಳು, ಎಲ್. ಆರ್. ಹೆಗಡೆ ಅವರ ತಿಮ್ಮಕ್ಕನ ಪದಗಳು, ಡಿ. ಲಿಂಗಯ್ಯನವರ ಕೊಂತಿಪುಜೆ, ಚಂದ್ರಶೇಖರ ಕಂಬಾರರ ಬಣ್ಣೀಸಿ ಹಾಡವ್ವ ನನ್ನ ಬಳಗ, ಕ್ಯಾತನಹಳ್ಳಿ ರಾಮಣ್ಣ ಅವರ ಐದು ಜನಪದ ಕಥನಗೀತೆಗಳು-ಇವು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಕಟವಾಗಿರುವ ಕೆಲವು ಗಮನಾರ್ಹ ಸಂಕಲನಗಳಾಗಿವೆ.
 • ಬೆಳಗಾಂವಿ ಜಿಲ್ಲೆಯ ರಾಯಭಾಗ ಪ್ರದೇಶದ ಸಾಹಿತ್ಯವನ್ನು ಜ್ಯೋತಿ ಹೊಸೂರೂ ಬೆಳಗಾವಿ ಜಿಲ್ಲೆಯ ಅಕ್ಕತಂಗಿಯರಹಾಳ, ಘೋಡಗೇರಿ, ಗೋಕಾಕ ಮೊದಲಾದ ಕಡೆಗಳಲ್ಲಿ ಪ್ರಚಲಿತವಿರುವ ಕೆಲವು ಸುಂದರ ತ್ರಿಪದಿಗಳನ್ನು ಕಂಬಾರರೂ ಸಂಕಲಸಿ ಪ್ರಕಟಿಸಿದ್ದಾರೆ.
 • ಎಂ.ಸಿ. ವಸಂತಕುಮಾರ್ ಅವರು ಹಾಸನ ಸುತ್ತಿನಲ್ಲಿ ಸಂಗ್ರಹಕಾರ್ಯವನ್ನು (ನಡೆಸುತ್ತಿದ್ದಾರೆ) ನಡೆಸಿದ್ದಾರೆ. ಅವರ ಮಳಲಿ ಗಿಡ್ಡಮ್ಮ ಎಂಬುದು ಗ್ರಾಮದೇವತೆಯೊಂದಕ್ಕೆ ಸಂಬಂಧಿಸಿದ ಗೀತೆಗಳನ್ನೊಳಗೊಂಡ ಒಂದು ಉತ್ತಮ ಸಂಕಲನ. ಅವರ ಕೋಲು ಪದಗಳು ಎಂಬುದರಲ್ಲಿ ಅಪುರ್ವವಾದ ಕೋಲಾಟದ ಪದಗಳಿವೆ. ಜಿ. ಎಸ್. ಭಟ್ಟರ ಸಿರಿ ಗಂಥಸೂಸ್ಯಾವೆ ಎಂಬುದು ಕಿಕ್ಕೇರಿ ಕಡೆಯ ಗೀತೆಗಳ ಒಂದು ಒಳ್ಳೆಯ ಸಂಕಲನ. ಸಕಲೇಶಪುರದ ಕಾಫಿಯ ತೋಟದ ಕೂಲಿಯಾಳುಗಳಿಂದ ಈ ಹಾಡುಗಳನ್ನು ಸಂಗ್ರಹಿಸಲಾಗಿದೆ. ಬಳ್ಳಾರಿ ಕಡೆಯ ಹಾಡುಗಳು ವಿರೂಪಾಕ್ಷಗೌಡ ಹಾಗೂ ಮುದೇನೂರು ಸಂಗಣ್ಣನವರ ಸಂಕಲನಗಳಲ್ಲಿ ಬೆಳಕು ಕಂಡಿವೆ. ಎಲ್. ಆರ್. ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪಾರ ಸಂಗ್ರಹಕಾರ್ಯ ನಡೆಸುತ್ತಿದ್ದಾರೆ. ಅವರ ತಿಮ್ಮಕ್ಕನ ಪದಗಳು ಕನ್ನಡ ಲಾವಣಿ ಸಾಹಿತ್ಯ ಕೃತಿಗಳ ಸಾಲಿನಲ್ಲಿ ಒಂದು ಮೈಲಿಗಲ್ಲು. ಹಾಲಕ್ಕಿ ಗೌಡತಿ ತಿಮ್ಮಕ್ಕ ಮೂವತ್ತಕ್ಕೂ ಹೆಚ್ಚು ಕಥನಗೀತೆಗಳನ್ನು ತಾನೊಬ್ಬಳೇ ಇಲ್ಲಿ ಹಾಡಿದ್ದಾಳೆ.
 • ಕ್ಯಾತನಹಳ್ಳಿ ರಾಮಣ್ಣ ಅವರ ಐದು ಜನಪದ ಕಥನಗೀತೆಗಳು ಪಾಂಡವಪುರದ ಸಮೀಪದ ಕ್ಯಾತನಹಳ್ಳಿಯ ಒಬ್ಬ ಹಾಡುಗಾರ್ತಿಯಿಂದ ಸಂಗ್ರಹಿಸಿದುವು. ರಾಮಣ್ಣನವರು ಇನ್ನೂ ಅನೇಕ ಕಥನಗೀತೆಗಳನ್ನು ಇತರ ಹಾಡುಗಳನ್ನೂ ಸಂಗ್ರಹಿಸಿದ್ದಾರೆ.
 • ಕೇವಲ ಗೀತಪ್ರಕಾರದಿಂದ ಆರಂಭವಾದ ಕನ್ನಡ ಜಾನಪದ ಸಂಗ್ರಹಕಾರ್ಯ ಈಗ ಸಮಗ್ರ ಜನಪದದತ್ತ ಎಲ್ಲ ಶಾಖೆಗಳ ಮೇಲೂ ಸಂಗ್ರಾಹಕರ ದೃಷ್ಟಿ ಹರಿಯುತ್ತಿರುವುದು ಅಭಿನಂದನೀಯವಾಗಿದೆ. ನಾಡಿನ ಎಲ್ಲ ಕಡೆಗಳಲ್ಲೂ ತುಂಬಿ ತುಳುಕುತ್ತಿರುವ ಜಾನಪದ ಸುಂಬಂಧವಾದ ಉತ್ಸಾಹ, ಹುಮ್ಮಸ್ಸುಗಳೇ ಮುಂದಿನ ಉತ್ತಮ ಸಾಧನೆಯ ಹೆಜ್ಜೆಗುರುತುಗಳಾಗಿವೆ.
 • ಜನಪದ ಗದ್ಯಕಥನಗಳಲ್ಲಿ ಪುರಾಣ (ಮಿತ್), ಐತಿಹ್ಯ (ಲೆಜೆಂಡ್) ಹಾಗೂ ಕಟ್ಟು ಕಥೆ (ಮೆರ್ಖನ್)-ಇವು ಮುಖ್ಯವಾದುವು. ಈ ಮೂರರಲ್ಲಿ ಕಟ್ಟು ಕಥೆಗಳ ಅತ್ಯುತ್ತಮ ಸಂಗ್ರಹಗಳು ಇತ್ತೀಚೆಗೆ ಪ್ರಕಟವಾಗಿವೆ.[೧]

ಜನಪದ ಕಥೆಗಳುಸಂಪಾದಿಸಿ

 • ಕನ್ನಡದಲ್ಲಿ ಜನಪದ ಕಥೆಗಳನ್ನು ಶಾಸ್ತ್ರೀಯವಾಗಿ ಸಂಪಾದಿಸಿ ವರ್ಗೀಕರಿಸಿ ಕೃತಿಗಳನ್ನು ಹೊರತಂದಿರವ ಪ್ರಯತ್ನಗಳನ್ನು ಕಾಣಬಹುದು. ಜೀಶಂಪ ಅವರ ಕನ್ನಡ ಜನಪದ ಕಥೆಗಳು. ಅವರೇ ಸಂಪಾದಿಸಿರುವ ಬೇರೆ ಬೇರೆ ಸಂಗ್ರಾಹಕರ ಆಯ್ದ ಜನಪದ ಕಥೆಗಳು, ರಾಗೌ ಅವರ ಕರ್ನಾಟಕ ಜನಪದ ಕಥೆಗಳು-ಮುಂತಾದುವು ಗಾತ್ರದ ದೃಷ್ಟಿಯಿಂದಲೂ ವೈವಿಧ್ಯದ ದೃಷ್ಟಿಯಿಂದಲೂ ಪ್ರಾದೇಶಿಕತೆಯ ದೃಷ್ಟಿಯಿಂದಲೂ ಉತ್ತಮ ಸಂಪಾದನೆಯ ದೃಷ್ಟಿಯಿಂದಲೂ ಪ್ರಮುಖವೆನಿಸಿವೆ. ಆಧುನಿಕ ವೈಜ್ಞಾನಿಕ ಸೂತ್ರಗಳನ್ನುನುಸರಿಸಿ ಆಶಯಗಳನ್ನೂ (ಮೋಟಿವ್ಸ್‌), ವರ್ಗಗಳನ್ನೂ (ಟೈಪ್ಸ್‌) ಭಿನ್ನರೂಪಗಳನ್ನೂ (ವೇರಿಯಂಟ್ಸ್‌) ಗುರುತಿಸುವ ಪ್ರಯತ್ನಗಳು ಇತ್ತೀಚಿನ ಸಂಕಲನಗಳಲ್ಲಿ ಕಂಡುಬಂದಿದೆ. ಈ ಕೃತಿಗಳ ಪ್ರಕಟನೆಯ ಮೂಲಕ ಕನ್ನಡದ ಜಾನಪದ ಸಂಗ್ರಹ ಒಂದು ಹೊಸ ತಿರುವನ್ನು ಪಡೆದಿದೆ. ಇವುಗಳಲ್ಲಿನ ವಿಸ್ತಾರವಾದ ಪ್ರಸ್ತಾವನೆಗಳು ಜನಪದ ಕಥಾಭ್ಯಾಸಿಗಳಿಗೆ ಉಪಯುಕ್ತವಾಗಿವೆ.
 • ಈ ದಶಕಗಳಲ್ಲಿ ಪ್ರಕಟವಾದ ಕಥಾಸಂಕಲನಗಳಲ್ಲಿ ಮತಿಘಟ್ಟ ಕೃಷ್ಣಮೂರ್ತಿಗಳ ಸರಹದ ಹಕ್ಕಿ ಮತ್ತು ಇತರ ಜನಪದ ಕಥೆಗಳು, ಡಿ. ಲಿಂಗಯ್ಯನವರ ಮಣ್ಣಿನ ಮಿಡಿತ, ಧವಳಶ್ರೀಯವರ ಜಾನಪದ ಕಥಾಮೃತ, ಜಿ.ವಿ. ದಾಸೇಗೌಡರ ಹಾವಾಗಿ ಹರಿದ ಅಣ್ಣಯ್ಯ- ಮುಂತಾದುವು ಮುಖ್ಯವಾದುವು. ಮತಿಘಟ್ಟ ಕೃಷ್ಣಮೂರ್ತಿಗಳ ಸಂಕಲನದಲ್ಲಿ ಶುದ್ದ ಜನಪದ ಕಥೆಗಳ ಆಯ್ಕೆಗೆ ಅವಕಾಶವಿತ್ತಾದರೂ ಕಥನಗೀತೆಗಳನ್ನೂ ಕ್ಷೇತ್ರಮಾಹಾತ್ಮ್ಯಗಳನ್ನೂ ಐತಿಹ್ಯಗಳನ್ನೂ ಕಥೆಗಳ ಸಾಲಿನಲ್ಲಿಯೇ ಸೇರಿಸುವುದು ಅಷ್ಟು ಉಚಿತವಲ್ಲ. ಜಾನಪದ ಜಾಯಮಾನಕ್ಕೆ ಒಗ್ಗದ ಶಿಷ್ಟ ಸಂಪ್ರದಾಯದ ಕೆಲವು ಕಥೆಗಳೂ ಇಲ್ಲಿವೆ. ಭಲ್ಲೂಕಪುರದ ಅಪ್ಪಾಜಿಭಟ್ಟ ಜನಪದ ಕಥೆಯೆನಿಸುವುದಿಲ್ಲ. ಅದೊಂದು ಐತಿಹಾಸಿಕ ಕಥೆಯಾಗಬಹುದು. ಇಲ್ಲಿ ನಾಲ್ಕಾರು ಒಳ್ಳೆಯ ಜನಪದ ಕಥೆಗಳು ಇವೆ.
 • ಡಿ. ಲಿಂಗಯ್ಯನವರ ಮಣ್ಣಿನ ಮಿಡಿತ ಇಪ್ಪತ್ತೆರಡು ಕಥೆಗಳನ್ನೊಳಗೊಂಡಿದೆ. ಇಲ್ಲಿನ ಧಾಟಿಯನ್ನು ಗಮನಿಸಿದರೆ ಮೂಲ ಕಥೆಗಾರನ ಶೈಲಿ ಯಥವತ್ತಾಗಿ ಮೂಡಿ ಬಂದಿಲ್ಲವೆನಿಸುತ್ತದೆ.
 • ಜನಪದ ಕಥೆಗಳ ಎರಡು ಒಳ್ಳೆಯ ಸಂಕಲನಗಳನ್ನು ಧವಳಶ್ರೀಯವರು ಪ್ರಕಟಿಸಿದ್ದಾರೆ. ಮೂಲನಿರೂಪಣೆಯನ್ನು ಕಾಯ್ದುಕೊಳ್ಳುವಲ್ಲಿ ಇವರಲ್ಲಿಯೂ ಕೆಲವು ಅತಿರೇಕಗಳು ಕಾಣಬರುತ್ತವೆ. ಆದರೆ ಕೆಲವು ವಿಶಿಷ್ಟ ಜನಪದ ನುಡಿಕಟ್ಟುಗಳನ್ನು ಉಳಿಸಿಕೊಳ್ಳುವುದರಲ್ಲಿ ಸಂಗ್ರಾಹಕರು ಯಶಸ್ವಿಯಾಗಿದ್ದಾರೆ. ಜಿ. ವಿ. ದಾಸೇಗೌಡರ ಹಾವಾಗಿ ಹರಿದ ಅಣ್ಣಯ್ಯ ಎಂಬುದು ಮಂಡ್ಯದ ಸುತ್ತಿನ ಕಥೆಗಳನ್ನು ಒಳಗೊಂಡಿದೆ. ಜನಪದ ಕಥೆಗಾರನ ಮೂಲಶೈಲಿಯನ್ನು ದಾಸೇಗೌಡರು ಬಳಸಿಕೊಳ್ಳಲು ಮಾಡಿರುವ ಪ್ರಯತ್ನ ಅನುಕರಣಿಯವಾದುದು.

ಗಾದೆಗಳ ಸಂಗ್ರಹಸಂಪಾದಿಸಿ

 • ಗಾದೆಗಳ ಸಂಗ್ರಹದಲ್ಲಿ ಅಚ್ಚಪ್ಪ, ವೆಂಕಟರಮಣಯ್ಯ, ಜೀಶಂಪ, ರಾಗೌ, ಸುಧಾಕರ-ಇವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಬಹುದು. ರಾಗೌ ಅವರ ನಮ್ಮ ಗಾದೆಗಳ ಕ್ಷೇತ್ರದಲ್ಲಿ ಒಂದು ಪ್ರಮುಖ ಕೃತಿಯಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಗಾದೆಗಳನ್ನು ಅವರು ಈ ಸಂಕಲನದಲ್ಲಿ ಒದಗಿಸಿರುವುದು ಗಣನೀಯ ಅಂಶವಾಗಿದೆ. ಅತ್ಯಂತ ವಿಸ್ತಾರವಾದ ಇಲ್ಲಿನ ಪ್ರಸ್ತಾವನೆ ಗಾದೆಗಳ ವಿವರವಾದ ಅಭ್ಯಾಸಕ್ಕೆ ಸಹಾಯಕವಾಗಿದೆ. ತೀರ ಅಶ್ಲೀಲ ಎಂದು ತೋರುವ ಯಾವ ಗಾದೆಯನ್ನು ಕೈಬಿಡದೆ ಅವರು ಈ ಸಂಕಲನದಲ್ಲಿ ಹೊರತಂದಿದ್ದಾರೆ. ಜಾನಪದವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವವರಿಗೆ ಇಂಥ ಕೃತಿಗಳು ಹೆಚ್ಚು ಉಪಯುಕ್ತವಾಗುತ್ತವೆ. ರಾಗೌ ಅವರ ಕಿಟ್ಟೆಲ್ ಕೋಶದ ಗಾದೆಗಳು ಎಂಬುದು ಕಿಟ್ಟೆಲರ ಅರ್ಥಕೋಶದಲ್ಲಿ ಅಳವಡಿಸಿದ ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳನ್ನು ಒಂದೆಡೆ ಸಂಕಲಿಸಿಕೊಡುವ ಒಳ್ಳೆಯ ಪ್ರಯತ್ನವಾಗಿದೆ.

ಒಗಟುಗಳುಸಂಪಾದಿಸಿ

 • ಜಾನಪದ ಭಾಷಿಕ ಬಗೆಗಳಲ್ಲಿ ಗಾದೆಗಳಷ್ಟೇ ಪ್ರಮುಖವಾದುವು ಒಗಟುಗಳು. ಕನ್ನಡದಲ್ಲಿ ಒಗಟುಗಳ ಸಂಗ್ರಹ 1946ರ ಸುಮಾರಿಗೆ ಆರಂಭವಾಯಿತು. ಶಂ. ಬಾ. ಜೋಶಿಯವರ ಮಕ್ಕಳ ಉಡುಪುಗಳು ಕನ್ನಡದ ಒಗಟುಗಳ ಸಂಗ್ರಹದಲ್ಲಿ ಮೊದಲನೆಯದು. ಅನೇಕ ಅತ್ಯುತ್ತಮ ಒಗಟುಗಳನ್ನು ಈ ಸಂಕಲನದಲ್ಲಿ ಕಾಣಬಹುದು. ಈಶ್ವರಚಂದ್ರ ಚಿಂತಾಮಣಿಯವರ ಗರತಿಯರ ಮನೆಯಿಂದ ಎಂಬ ಸಂಕಲನದಲ್ಲಿಯೂ ಕೆಲವು ಒಳ್ಳೆಯ ಒಗಟುಗಳಿವೆ. ಕಳೆದ ಮೂರು ವರ್ಷಗಳಲ್ಲಿ ಒಗಟುಗಳಿಗೆ ಸಂಬಂಧಿಸಿದಂತೆಯೇ ಉತ್ತಮ ಸಂಗ್ರಹಕಾರ್ಯ ನಡೆದು ಶ್ರೇಷ್ಠ ಸಂಕಲನಗಳು ಹೊರಬಂದಿವೆ. ಜೀಶಂಪ ಅವರ ಕನ್ನಡ ಒಗಟುಗಳು ಈ ಅಭ್ಯಾಸದ ಕಡೆ ಜಾನಪದ ವಿದ್ವಾಂಸರ ದೃಷ್ಟಿಯನ್ನು ಸೆಳೆದ ಕೃತಿ. ಇದಾದ ಮೇಲೆ ಸಂಕಲನಗಳನ್ನು ಪ್ರಕಟಿಸಿದ ಕೀರ್ತಿ ಚಕ್ಕಲೂರು ಚನ್ನಪ್ಪ, ಸುಧಾಕರ ಹಾಗೂ ರಾಗೌ ಅವರಿಗೆ ಸಲ್ಲಬೇಕು.
 • ಸುಧಾಕರ ಅವರ ಜನಪದ ಬೆಡಗಿನ ವಚನಗಳು ಒಂದು ಪ್ರಶಂಸನೀಯ ಕೃತಿ. ಐನೂರಕ್ಕೂ ಹೆಚ್ಚು ಒಗಟುಗಳನ್ನು ಬೆಂಗಳೂರು ಮೈಸೂರು ಜಿಲ್ಲೆಗಳಿಂದ ಆಯ್ದ ಈ ಸಂಕಲನದಲ್ಲಿ ಸೇರಿಸಲಾಗಿದೆ. ವಿದ್ವತ್ಪೂರ್ಣವಾದ ಅವರ ಪ್ರಸ್ತಾವನೆ ಒಗಟುಗಳ ವಿವೇಚನೆಯ ಹೊಸ ದೃಷ್ಟಿಯನ್ನು ಮೂಡಿಸುತ್ತದೆ. ಪ್ರಕೃತ ಸಂಕಲನದಲ್ಲಿ ಜನಪದ ಒಗಟುಗಳನ್ನೂ ಪರಸ್ಪರ ಪರಿಣಾಮವನ್ನೂ ಚರ್ಚಿಸಿರುವುದು ವಿದ್ವಾಂಸರ ಆಸಕ್ತಿಯನ್ನು ಕೆರಳಿಸುತ್ತದೆ.
 • ರಾಗೌ ಅವರ ನಮ್ಮ ಒಗಟುಗಳು ಮತ್ತೊಂದು ಉತ್ತಮ ಸಂಕಲನ. ಐನೂರಕ್ಕೂ ಹೆಚ್ಚು ಸಂಖ್ಯೆಯ ಒಗಟುಗಳು ಸಂಕಲನದಲ್ಲಿವೆ. ಇಲ್ಲಿನ ವಿಸ್ತಾರವಾದ ಪ್ರಸ್ತಾವನೆ ಅತ್ಯಂತ ಉಪಯುಕ್ತವಾದುದಾಗಿದೆ.

ಇತರ ಜಾನಪದ ಸಂಗ್ರಹಸಂಪಾದಿಸಿ

 • ವೆಂಕಟರಮಣಯ್ಯನವರ ಕನ್ನಡ ಗಾದೆಗಳ ಕೋಶ, ಪಡೆನುಡಿಗಳ ಕೋಶ, ಅಚ್ಚಪ್ಪನವರ ಗ್ರಂಥಸ್ಥ ಗಾದೆಗಳು-ಇವೂ ಗಮನಾರ್ಹ ಸಂಕಲನಗಳು. ಪಡೆ ನುಡಿಗಳ ಕೋಶ ಜಾನಪದ ಒಂದು ಹೊಸ ಪ್ರಕಾರದ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ. ಜನಪದ ಭಾಷೆಯ ಸತ್ತ್ವಸೌಂದರ್ಯಗಳನ್ನು ಅರಿಯಲು ಕನ್ನಡ ನುಡಿಗಟ್ಟುಗಳ ಈ ಸಂಗ್ರಹ ಸಹಾಯಕವಾಗುತ್ತದೆ. ಪ್ರಚಲಿತ ಗಾದೆಗಳ ಐತಿಹಾಸಿಕ ರೂಪಗಳನ್ನು ಪ್ರಾಚೀನ ಕಾವ್ಯಗಳಲ್ಲಿ ಗುರುತಿಸಿ ಅವನ್ನೆಲ್ಲ ಒಂದೆಡೆ ಕಲೆಹಾಕಿ ಗ್ರಂಥಸ್ಥಗಾದೆಗಳು ಎಂಬ ಬೃಹತ್ಸಂಕಲನವನ್ನು ಅಚ್ಚಪ್ಪನವರು ಹೊರತಂದಿದ್ದಾರೆ. ಕೆಲವು ನ್ಯೂನತೆಗಳಿದ್ದರೂ ಈ ದಶಕದ ಜಾನಪದ ಕ್ಷೇತ್ರದ ದೊಡ್ಡ ಸಾಧನೆಗಳಲ್ಲಿ ಒಂದಾಗಿ ಅಚ್ಚಪ್ಪನವರ ಕೃತಿ ನಿಲ್ಲುತ್ತದೆ.
 • ಕನ್ನಡದಲ್ಲಿ ಪ್ರಕಟವಾಗಿರುವ ಜಾನಪದ ಸಂಗ್ರಹಗಳ ಜೊತೆಯಲ್ಲಿಯೇ ಅಂಥ ಸಾಹಿತ್ಯವನ್ನು ಕುರಿತ ವಿಶ್ಲೇಷಣೆ, ವಿವೇಚನೆಯೂ ತಕ್ಕಮಟ್ಟಿಗೆ ನಡೆಯುತ್ತ ಬಂದಿದೆ. ನಾಲ್ಕು ಭಾಗವಾಗಿ ಇಂಥ ಬರಹವನ್ನು ವಿಂಗಡಿಸಿಕೊಳ್ಳಬಹುದು : 1 ಜಾನಪದದ ನಾನಾ ಮುಖಗಳನ್ನು ಕುರಿತ ಕೃತಿಗಳು, 2 ಜಾನಪದದ ಹಲವು ವಿಷಯಗಳನ್ನು ಆಧರಿಸಿದ ಬಿಡಿಲೇಖನಗಳು, 3 ಗ್ರಂಥಗಳ ಪ್ರಸ್ತಾವನೆ ಹಾಗೂ ಮುನ್ನುಡಿಗಳು, 4 ಜಾನಪದ ಕೃತಿಗಳ ಉತ್ತಮ ವಿಮರ್ಶೆಗಳು.

ವಿಮರ್ಶಾಗ್ರಂಥಗಳುಸಂಪಾದಿಸಿ

 • ಜಾನಪದವನ್ನು ಕುರಿತ ವಿಮರ್ಶಾಗ್ರಂಥಗಳ ಸಾಲಿನಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳ ಕರ್ಣಾಟಕ ಸಂಸ್ಕೃತಿ 1946ರ ವೇಳೆಗೇ ಪ್ರಕಟವಾದ ಒಂದು ಅತ್ಯುತ್ತಮ ಕೃತಿಯಾಗಿದೆ. ಕನ್ನಡದಲ್ಲಿ ಸಮಗ್ರ ಜಾನಪದದ ಪ್ರಸ್ತಾಪ ಮೊಟ್ಟಮೊದಲ ಬಾರಿಗೆ ದೇವುಡು ಅವರ ಕೃತಿಯಲ್ಲಿ ಕಾಣಿಸಿಕೊಂಡಿದೆ. ಜಾನಪದವನ್ನು ಜನತೆಯ ಸಂಸ್ಕೃತಿ ಎಂದು ಕರೆದು ಆ ಕುರಿತಾದ ಪ್ರಸಿದ್ಧ ವಿವರಣೆಗಳನ್ನೆಲ್ಲ ದೇವುಡು ಅವರು ವಿವೇಚಿಸಿ, ನಾಡಿನ ಸಂಸ್ಕೃತಿಯನ್ನು ಅರಿಯಲು ಜಾನಪದದ ನಾನಾ ಶಾಖೆಗಳನ್ನು ಅವಲಂಬಿಸಿ ಅವರು ಮಾಡಿರುವ ಪ್ರಯತ್ನ ಸ್ತುತ್ಯವಾದುದು. ಜಾನಪದದ ಒಂದು ಶಾಸ್ತ್ರೀಯವಾದ ಅಧ್ಯಯನದ ಮೊದಲ ಹೆಜ್ಜೆಯನ್ನು ನಾವು ಇಲ್ಲಿ ಕಾಣಬಹುದು. ಗಂಡಸರ ಹಾಡು, ಹೆಂಗಸರ ಹಾಡು, ಗಾದೆ, ಒಗಟು, ಕಥೆ, ಲಾವಣಿ, ನಡೆನುಡಿ ಮುಂತಾದ ಅನೇಕ ಶಾಖೆಗಳ ಆಧಾರದ ಮೇಲೆ ಜನತೆಯ ಸಂಸ್ಕೃತಿಯ ನಿರ್ಧಾರಕ್ಕೆ ತೊಡಗಿ ಜಾನಪದವನ್ನು ಎಷ್ಟು ಸಾರ್ಥಕ ರೀತಿಯಲ್ಲಿ ಸಂಶೋಧನೆಗೆ ಬಳಸಿಕೊಳ್ಳಬಹುದು ಎಂಬುದನ್ನು ದೇವುಡು ತಮ್ಮ ಕೃತಿಯ ಮೂಲಕ ತೋರಿದ್ದಾರೆ.
 • ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರ ಹಳ್ಳಿಯ ಬಾಳು ಜನಪದ ಸಾಹಿತ್ಯದ ಮೂಲಕ ಗ್ರಾಮಾಂತರ ಜೀವನವನ್ನು ವ್ಯಾಖ್ಯಾನಿಸಲು ಮಾಡಿದ ಒಂದು ಉತ್ತಮ ಪ್ರಯತ್ನ. ಜನಪದಸಾಹಿತ್ಯ, ರೈತನೊಡನೆ ಅದರ ನಿಕಟಸಂಬಂಧ, ಆ ಸಾಹಿತ್ಯದ ಹಿರಿಮೆ ಮುಂತಾದುವನ್ನು ಕುರಿತು ಗೊರೂರರು ತಮ್ಮ ಕೃತಿಯಲ್ಲಿ ಹೃದಯಂಗಮವಾಗಿ ಚರ್ಚಿಸಿದ್ದಾರೆ. ತಮ್ಮ ಈ ಚರ್ಚೆಗೆ ಅವರು ಅಪಾರ ಜನಪದಸಾಹಿತ್ಯವನ್ನು ಬಳಸಿಕೊಂಡು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.
 • 1954ರಲ್ಲಿ ಸಿಂಪಿ ಲಿಂಗಣ್ಣನವರ ಗರತಿಯ ಬಾಳು-ಪ್ರಕಟವಾಯಿತು. ಗರತಿಯ ಸಾಹಿತ್ಯದ ಸೊಗಸು, ಜೀವನ ಸಂದೇಶ, ಸ್ತ್ರೀ ಜೀವನದ ದಿವ್ಯ ಸಂಸ್ಕೃತಿ ಮುಂತಾದವನ್ನು ಕುರಿತ ಸುಂದರ ವಿವೇಚನೆಯನ್ನು ಈ ಕೃತಿಯಲ್ಲಿ ಕಾಣಬಹುದು. 1960ರಲ್ಲಿ ಪ್ರಕಟವಾದ ಇದೇ ಲೇಖಕರ ಜನಾಂಗದ ಜೀವಾಳವೆಂಬುದು ಜಾನಪದದ ವಿವಿಧ ಮುಖಗಳ ಮೇಲೆ ಬೆಳಕು ಚೆಲ್ಲುವ ಪ್ರಬಂಧಗಳನ್ನೊಳಗೊಂಡಿದೆ. ಜನಪದ ಗೀತೆಗಳ ಅನೇಕ ಹೊಸ ಪ್ರಕಾರಗಳನ್ನು ಕುರಿತು ಸಿಂಪಿಯವರು ವಿವರವಾಗಿ ಚರ್ಚೆ ನಡೆಸಿದ್ದಾರೆ. ಬಯಲಾಟದ ಪದಗಳು, ಲಾವಣಿ ಹಾಡುಗಳು, ಜನಪದ ಸಾಹಿತ್ಯದಲ್ಲಿ ಅದ್ಭುತ ಕಥೆಗಳ ಪ್ರಾಶಸ್ತ್ಯ, ಮಕ್ಕಳನ್ನು ಆಡಿಸುವ ಹಾಡು, ಮದುವೆಯ ಹಾಡು-ಹೀಗೆ ಅನೇಕ ಆಸಕ್ತಿದಾಯಕ ವಿಷಯಗಳ ಮೇಲೆ ಅವರು ಸಂಶೋಧಕರ ದೃಷ್ಟಿಯನ್ನು ಸೆಳೆದಿದ್ದಾರೆ.
 • ಮಾಸ್ತಿಯವರ ಕರ್ನಾಟಕದ ಜನಪದ ಸಾಹಿತ್ಯ ಕನ್ನಡ ಜನಪದ ಸಾಹಿತ್ಯದ ಸೌಂದರ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತ ಮತ್ತೊಂದು ಗಮನಾರ್ಹ ಕೃತಿ. ಇದು ಪ್ರಕಟವಾದುದು 1950ರಲ್ಲಿ.
 • ಗದ್ಗೀಮಠರ ಮಹಾಪ್ರಬಂಧ ಕನ್ನಡ ಜಾನಪದ ಗೀತೆಗಳು, 1963ರಲ್ಲಿ ಪ್ರಕಟವಾಯಿತು. ಉತ್ತರ ಕರ್ನಾಟಕದ ಎಲ್ಲ ಬಗೆಯ ಜನಪದ ಗೀತ ಸಂಪ್ರದಾಯಗಳನ್ನು ವಿಸ್ತಾರವಾಗಿ ಪರಿಚಯ ಮಾಡಿಕೊಡುವ ಈ ಕೃತಿ ಕನ್ನಡ ಜನಪದ ಗೀತೆಗಳ ವಿಶ್ಲೇಷಣೆಯನ್ನು ಕುರಿತ ಒಂದು ಶ್ರೇಷ್ಠ ಗ್ರಂಥ. ಸ್ತುತಿಪದಗಳು, ಹಳ್ಳಿಯ ಪದಗಳು, ಹಳ್ಳಿಯ ಕುಣಿತಗಳು, ಮಕ್ಕಳ ಆಟದ ಹಾಡುಗಳು, ಹಾಸ್ಯದ ಹಾಡುಗಳು, ಸುಗ್ಗಿಯ ಸಂಪ್ರದಾಯ, ಹಳ್ಳಿಯ ಹಬ್ಬಗಳು, ಹಂತಿಯ ಹಾಡುಗಳು-ಹೀಗೆ ಅತ್ಯಂತ ವ್ಯಾಪಕವಾಗಿ ಈ ಕೃತಿಯಲ್ಲಿ ಜನಪದ ಗೀತೆಗಳ ಒಂದು ದೊಡ್ಡ ವಿಶ್ವವನ್ನೇ ಗದ್ಗೀಮಠರು ತೆರೆದು ತೋರಿಸಿದ್ದಾರೆ.
 • ಈ ಕೃತಿಗಳ ಸಾಲಿನಲ್ಲಿ ಮತ್ತೊಂದು ಗಮನಾರ್ಹ ವಿಮರ್ಶಾಗ್ರಂಥ ಶಿವರಾಮ ಕಾರಂತರ ಜಾನಪದ ಗೀತೆಗಳು. 1966ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ ಕಾರಂತರು ಜನಪದ ಗೀತೆಗಳ ವಸ್ತುಪ್ರಕಾರಗಳನ್ನು ಕುರಿತು ಸೊಗಸಾದ ವಿವೇಚನೆಯನ್ನು ನಡೆಸಿದ್ದಾರಲ್ಲದೆ ಪಾಡ್ಡನಗಳು, ಕೊಡಗಿನ ಜನಪದ ಗೀತೆಗಳು, ಅನೇಕ ಕನ್ನಡ ತ್ರಿಪದಿ ಹಾಗೂ ಲಾವಣಿಗಳನ್ನು ಉಲ್ಲೇಖಿಸಿ ಅವುಗಳ ವಿಶ್ಲೇಷಣೆ ಮಾಡಿದ್ದಾರೆ.
 • ಜೀಶಂಪ ಅವರ ಜನಪದ ಸಾಹಿತ್ಯ ಸಮೀಕ್ಷೆ ಅನೇಕ ಸಂಶೋಧನಾತ್ಮಕ ಹಾಗೂ ಪರಿಚಯಾತ್ಮಕ ಪ್ರಬಂಧಗಳನ್ನೊಳಗೊಂಡ ಕೃತಿ. ಕರಪಾಲ ಮೇಳ, ಕಂಸಾಳೆ ಸಾಹಿತ್ಯ, ಐತಿಹ್ಯಗಳು, ಗಾದೆಗಳು, ಹಬ್ಬಹರಿದಿನಗಳು-ಮುಂತಾದ ಅನೇಕ ವಿಷಯಗಳ ಮೇಲೆ ಇಲ್ಲಿನ ಪ್ರಬಂಧಗಳು ವೈವಿಧ್ಯವನ್ನು ಸಾಧಿಸಿಕೊಂಡಿರುವುದರ ಜೊತೆಗೆ ಕನ್ನಡ ಜಾನಪದ ಕ್ಷೇತ್ರದಲ್ಲಿ ನಿರ್ಲಕ್ಷಿತವಾಗಿರುವ ಇತರ ಕ್ಷೇತ್ರಗಳ ಕಡೆಯೂ ವಿದ್ವಾಂಸರ ದೃಷ್ಟಿಯನ್ನು ಸೆಳೆಯಲು ಸಹಾಯಕವಾಗಿವೆ.
 • ಸಿ.ಪಿ. ಕೃಷ್ಣಕುಮಾರರು ಜನಪದಸಾಹಿತ್ಯದ ರಸವಿಮರ್ಶೆಗೆ ಹೆಸರಾದವರು. ಪ್ರೌಢಸಾಹಿತ್ಯದಂತೆಯೇ ಜನಪದ ಸಾಹಿತ್ಯದಲ್ಲಿಯೂ ಉತ್ತಮ ಜೀವನದರ್ಶನ, ಅನುಭವದ ಎತ್ತರಗಳನ್ನು ಗುರುತಿಸಲು ಸಾಧ್ಯ ಎಂಬುದನ್ನು ತಮ್ಮ ಅನೇಕ ಪ್ರಬಂಧಗಳಲ್ಲಿ ಅವರು ತೋರಿದ್ದಾರೆ. ಜನಪದ ಗೀತೆಗಳ ಕಾವ್ಯವಿಮರ್ಶೆಯ ಸೂತ್ರಗಳಲ್ಲಿ ಶಾಸ್ತ್ರೀಯ ವಿಮೋಚನೆಗೆ ಒಳಪಡಿಸಿ ವಿಶ್ಲೇಷಿಸಿ ಪ್ರತಿಭಾಪುರ್ಣ ಪ್ರಯತ್ನಗಳನ್ನು ಸಿ.ಪಿ.ಕೆ. ಅವರ ಪ್ರಬಂಧಗಳಲ್ಲಿ ಕಾಣಬಹುದು. ಅವರ ಜಾನಪದ ಪ್ರತಿಭೆ ಈ ದೃಷ್ಟಿಯಿಂದ ಅತ್ಯಂತ ಉತ್ಕೃಷ್ಟ ಕೃತಿಯಾಗಿದೆ.
 • ಇತ್ತೀಚೆಗೆ ಪ್ರಕಟವಾದ ನಂ. ತಪಸ್ವೀಕುಮಾರರ ಜನಪದ ಸಂಸ್ಕೃತಿ, ಡಿ.ಕೆ. ರಾಜೇಂದ್ರರ ಜಾನಪದ ಸಮೀಕ್ಷೆಗಳು ಜಾನಪದ ವಿಶ್ಲೇಷಣೆಯಲ್ಲಿ ಹೊಸ ದೃಷ್ಟಿಯನ್ನು ಬೀರಿರುವ ಕೃತಿಗಳು. ರಾಜೇಂದ್ರರು ಕನ್ನಡದಲ್ಲಿ ನಡೆದ ಜಾನಪದ ಸಂಶೋಧನೆ, ಕನ್ನಡದಲ್ಲಿ ಜಾನಪದ ಕಲ್ಪನೆ, ಯಕ್ಷಗಾನ, ಮೂಡಲಪಾಯ ಸಂಪ್ರದಾಯ ಮುಂತಾದುವನ್ನು ಕುರಿತು ವಿವೇಚಿಸುವಲ್ಲಿ ಉತ್ತಮ ಸಂಶೋಧನ ದೃಷ್ಟಿಯನ್ನು ಮೆರೆದಿದ್ದಾರೆ. ತಪಸ್ವೀಕುಮಾರರ ಕೃತಿ ಜಾನಪದದ ಕೆಲವು ಹೊಸ ಪ್ರಕಾರಗಳಲ್ಲಿನ ಅಧ್ಯಯನವನ್ನು ಒಳಗೊಂಡು ವಿಚಾರಾತ್ಮಕವಾಗಿದೆ. ತೊಗಲು ಗೊಂಬೆಯವರ ಸಂಪ್ರದಾಯ, ಗಾದೆಗಳ ವಿಶ್ಲೇಷಣೆ, ಬೈಗುಳಗಳ ಬನಿ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಮುಂತಾದವಲ್ಲಿ ಶ್ರೀಯುತರು ತೋರಿರುವ ಹೊಸ ಮೌಲ್ಯ ಕುತೂಹಲಕಾರಿಯಾಗಿದೆ.

ವಿಚಾರಗೋಷ್ಠಿಗಳು ಸಮ್ಮೇಳನಗಳುಸಂಪಾದಿಸಿ

 • ಜನಪದ ಸಾಹಿತ್ಯ ಸಂಬಂಧವಾದ ಅನೇಕ ವಿಚಾರಗೋಷ್ಠಿಗಳೂ ಸಮ್ಮೇಳನಗಳೂ ಆಗಾಗ ನಡೆದು ನಾಡಿನ ವಿದ್ವಾಂಸರು ಅನೇಕ ಉತ್ತಮ ಪತ್ರಿಕೆಗಳನ್ನು ಮಂಡಿಸಿರುವುದು ವಿಚಾರಾರ್ಹ ವಿಷಯವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ 1966ರಲ್ಲಿ ನಡೆದ ಲೇಖಕರ ಗೋಷ್ಠಿಯಲ್ಲಿ ನಡೆದ ಜನಪದ ಸಾಹಿತ್ಯಗೋಷ್ಠಿ. ಕನ್ನಡ ಜಾನಪದ ಅಧ್ಯಯನದ ಇತಿಹಾಸದಲ್ಲಿ ಅತ್ಯಂತ ಮಹತ್ತ್ವದ ಅಂಶವಾಗಿದೆ. ಇದಕ್ಕೆ ಮುಖ್ಯ ಕಾರಣ, ಜಾನಪದವನ್ನೇ ಕುರಿತ ಒಂದು ಪುರ್ಣಸ್ವರೂಪದ ಗೋಷ್ಠಿ ಏರ್ಪಟ್ಟಿದ್ದು ಹಾಗೂ ಹಾ. ಮಾ. ನಾಯಕರು ಮಂಡಿಸಿದ ಜನಪದಸಾಹಿತ್ಯ ಮತ್ತು ಅದರ ಸ್ವರೂಪ ಎಂಬ ಹೊಸ ಬೆಳಕನ್ನು ಚೆಲ್ಲಿದ ಅತ್ಯುತ್ತಮ ಪ್ರಬಂಧ. ಕನ್ನಡದಲ್ಲಿ ಜಾನಪದದ ಪುರ್ಣ ಕಲ್ಪನೆಯೇ ಇಲ್ಲದೆ ಸಂಗ್ರಹ, ಅಧ್ಯಯನಗಳು ಕೇವಲ ಗೀತಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿ ಉಳಿದ ಶಾಖೆಗಳು ಒಳಗಾಗಿದ್ದು, ಅಲ್ಲಿ ಕ್ರಾಂತಿಕಾರಕವಾದ ಬದಲಾವಣೆಯೊಂದು ಆಗಬೇಕಾಗಿದ್ದುದು ಅಗತ್ಯವಾಗಿತ್ತು. ಪಾಶ್ಚಾತ್ಯ ರಾಷ್ಟ್ರಗಳ ವ್ಯಾಪಕವಾದ ಜಾನಪದ ಕಲ್ಪನೆ ಕಳೆದ ಶತಮಾನದಿಂದಲೂ ಉನ್ನತ ಸಾಧನೆಯನ್ನು ಈ ಕ್ಷೇತ್ರದಲ್ಲಿ ತೋರಿದ್ದರೂ ಕರ್ನಾಟಕದಲ್ಲಿ ಆ ಬಗ್ಗೆ ಯಾರ ಲಕ್ಷ್ಯವೂ ಹರಿಯದೆ ಜಾನಪದ ಕ್ಷೇತ್ರ ತುಂಬ ನಷ್ಟವನ್ನು ಅನುಭವಿಸಿದ್ದ ಸಂದರ್ಭದಲ್ಲಿ, ಜಾನಪದ ಎಂದರೇನು, ಕಲಾದೃಷ್ಟಿ ಹಾಗೂ ವೈಜ್ಞಾನಿಕ ದೃಷ್ಟಿಗಳ ಹಿನ್ನೆಲೆಯಲ್ಲಿ ಅದರ ವ್ಯಾಪಕತೆಯೆಷ್ಟು, ನಮ್ಮ ಜಾನಪದ ಕಲ್ಪನೆಯ ದಿಗಂತ ಹೇಗೆ ವಿಸ್ತಾರಗೊಳ್ಳಬೇಕು, ಯಾವ ವೈಜ್ಞಾನಿಕ ತಳಹದಿಯ ಮೇಲೆ ಮುಂದಿನ ಅಧ್ಯಯನ ರೂಪುಗೊಳ್ಳಬೇಕು ಎಂಬ ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ, ಮುಂದಿನ ಸಂಶೋಧನೆಗೆ ಒಂದು ಹೊಸ ತಿರುವನ್ನು ಕೊಟ್ಟರು. ಪೋಕ್ಲೋರ್ ಪದಕ್ಕೆ ಕನ್ನಡದಲ್ಲಿ ಜಾನಪದ ಎಂಬ ಹೆಸರು ಸೂಚಿಸಿದವರೂ ಅವರೇ. ಜಾನಪದದ ಇತರ ಪ್ರಕಾರಗಳಿಗೂ ಉತ್ತಮ ಹೆಸರುಗಳನ್ನು ನೀಡಿ ಆಯಾ ವಿಷಯಗಳ ವ್ಯಾಪ್ತಿಯನ್ನು ಪ್ರಕೃತ ಲೇಖನದಲ್ಲಿ ಸವಿವರವಾಗಿ ಅವರು ಪರಿಚಯ ಮಾಡಿಕೊಟ್ಟಿದ್ದಾರೆ.
 • ಈ ಗೋಷ್ಠಿಯ ಅಂಗವಾಗಿ ಪ್ರಕಟವಾದ ಸುವರ್ಣಸಂಚಯ, ಜಾನಪದದ ಮೇಲೆ ಇನ್ನೂ ಕೆಲವು ವಿದ್ವಾಂಸರ ಉತ್ತಮ ಪ್ರಬಂಧಗಳನ್ನೊಳಗೊಂಡಿದೆ.
 • 1967ರಲ್ಲಿ ತರೀಕರೆಯಲ್ಲಿ ನಡೆದ ಪ್ರಥಮ ಜಾನಪದ ಸಮ್ಮೇಳನ ನಾಡಿನಾದ್ಯಂತ ಜಾನಪದದ ಬಗ್ಗೆ ವಿಶೇಷ ಸ್ಪೂರ್ತಿಯನ್ನು ತುಂಬಿತು. ಸಮ್ಮೇಳನದ ಅಂಗವಾಗಿ ಪ್ರಕಟವಾದ ಹೊನ್ನಬಿತೇವು ಹೊಲಕೆಲ್ಲ ಎಂಬುದು ಕನ್ನಡ ಜಾನಪದದ ಒಂದು ವಿಶ್ವಕೋಶ ವೆಂದರಾಗುತ್ತದೆ. ಸಮಗ್ರ ಕನ್ನಡನಾಡಿನ ಜಾನಪದದ ಕ್ರಮಬದ್ಧವಾದ ಪರಿವೀಕ್ಷಣೆ ಜಾನಪದ ಪ್ರಕಾರಗಳನ್ನು ಕುರಿತ ಲೇಖನಗಳು ವಿಮರ್ಶೆಗಳು ಈ ಮಹಾಗ್ರಂಥದಲ್ಲಿ ಬೆಳಕು ಕಂಡು ಕನ್ನಡದಲ್ಲಿ ಆವರೆಗೆ ನಡೆದ ಜಾನಪದ ಕಾರ್ಯಚಟುವಟಿಕೆಗಳ ಒಂದು ಒಳ್ಳೆಯ ಸಮೀಕ್ಷೆ ಒಂದೆಡೆ ಲಭ್ಯವಾಗುವಂಥ ಒಂದು ವ್ಯವಸ್ಥಿತ ಯೋಜನೆಯ ಹಿನ್ನೆಲೆಯಲ್ಲಿ ಇದು ಸಂಪಾದನೆಗೊಂಡಿದೆ. ಜಾನಪದದ ಬಗೆಗೆ ನಾಡಿನ ಗಣ್ಯ ವಿದ್ವಾಂಸರೆಲ್ಲರೂ ಬರೆದ ಪ್ರಬಂಧಗಳಲ್ಲಿವೆ.
 • ಜಾನಪದ ಸಂಶೋಧನೆ, ವಿಮರ್ಶೆ, ವಿವೇಚನೆಗಳಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಕೃತಿಗಳಷ್ಟೇ ಮಹತ್ತ್ವವನ್ನು ಕೆಲವು ಜಾನಪದ ಗ್ರಂಥಗಳಲ್ಲಿ ಪ್ರಕಟವಾಗಿರುವ ಪ್ರಸ್ತಾವನೆಗಳಿಗೂ ಮುನ್ನುಡಿಗಳಿಗೂ ನೀಡಬೇಕಾಗುತ್ತದೆ. ದೇಜಗೌ ಅವರ ಜನಪದ ಸಾಹಿತ್ಯದ ಸಮೀಕ್ಷೆಯ ಮುನ್ನುಡಿ, ಸಿ. ಪಿ. ಕೆ. ಅವರ ನಮ್ಮ ಒಗಟುಗಳು, ಸಂಕಲನದ ಹಿನ್ನುಡಿ, ಎಚ್. ಎಲ್. ನಾಗೇಗೌಡರ ನಮ್ಮ ಜನಪದಸಾಹಿತ್ಯದ ಹಿನ್ನುಡಿ, ರಾಗೌ ಅವರ ನಮ್ಮ ಗಾದೆಗಳು, ಕರ್ನಾಟಕ ಜನಪದ ಕತೆಗಳು, ನಮ್ಮ ಒಗಟುಗಳು ಮುಂತಾದ ಕೃತಿಗಳ ಪ್ರಸ್ತಾವನೆ, ಜೀಶಂಪ ಅವರ ಕನ್ನಡ ಜನಪದ ಕಥೆಗಳು, ಆಯ್ದ ಕಥೆಗಳು ಸಂಕಲನಗಳ ಪ್ರಸ್ತಾವನೆಗಳು, ಸುಧಾಕರ ಅವರ ಬೆಡಗಿನ ವಚನಗಳು ಸಂಕಲನದ ಪ್ರಸ್ತಾವನೆ-ಮುಂತಾದುವು ಮಾನ ಪರಿವೃಷ್ಟಿಯಿಂದಲೂ ಉತ್ತಮ ಸಂಶೋಧನ ದೃಷ್ಟಿಯಿಂದಲೂ ಜಾನಪದದ ವೈಜ್ಞಾನಿಕ ಹಿನ್ನೆಲೆಯಿಂದಲೂ ಜಾನಪದದ ವಿವಿಧ ಪ್ರಕಾರಗಳ ಮೇಲೆ ಹೆಚ್ಚಾಗಿ ಬೆಳಕು ಚೆಲ್ಲುವಂಥ ಅತ್ಯಂತ ಉಪಯುಕ್ತ ಲೇಖನಗಳಾಗಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಿದವರು ಪ್ರಾಧ್ಯಾಪಕ ದೇಜಗೌ ಅವರು ಜಾನಪದ ತನ್ನ ಎಲ್ಲ ಅಂಗಗಳಲ್ಲೂ ಉನ್ನತ ಸ್ಥಾನವನ್ನು ಪಡೆದುಕೊಳ್ಳುವಂತೆ ಜನಪದ ವಸ್ತುಸಂಗ್ರಹಾಲಯದ ಕನಸನ್ನು ನನಸುಮಾಡಿದವರೂ ಅವರೇ. ಬಹು ಚಿಕ್ಕದಾಗಿ ಪ್ರಾರಂಭವಾದ ಈ ವಸ್ತುಸಂಗ್ರಹಾಲಯ ಈಗ ಬೃಹತ್ಪ್ರ್ರಮಾಣದಲ್ಲಿ ಬೆಳೆದಿದ್ದು ಕಣ್ಣಿಗೊಂದು ಹಬ್ಬವೆನಿಸಿದೆ. ಸಂಶೋಧನೆಗೊಂದು ಮೂಲವಸ್ತುವಾಗಿ ಪರಿಣಮಿಸಿದೆ. ಜಾನಪದದ ಬಗ್ಗೆ ಅವರಿಗಿರುವ ಆಳವಾದ ನಿಷ್ಠೆ, ಅಪಾರ ಅನುಭವ, ವಿದ್ವತ್ತುಗಳು ಅವರು ಜನಪದ ಸಾಹಿತ್ಯ ಸಮೀಕ್ಷೆಗೆ ಬರೆದ ಮುನ್ನುಡಿಯಲ್ಲಿ ವ್ಯಕ್ತವಾಗಿವೆ.

ಯಕ್ಷಗಾನ ಬಯಲಾಟಸಂಪಾದಿಸಿ

 • ಕನ್ನಡದ ಜನಪ್ರಿಯ ಜನಪದ ಕಲೆ ಯಕ್ಷಗಾನ ಬಯಲಾಟವನ್ನು ಕುರಿತು ಅನೇಕ ಸಂಶೋಧನಾತ್ಮಕ ಗ್ರಂಥಗಳು ಪ್ರಕಟವಾಗಿ ವಿಶೇಷವಾಗಿ ಎಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಸಿದ್ದ ಸಂಪ್ರದಾಯಗಳಿಗೆ ಸಂಬಂಧಪಡುತ್ತವೆ. ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ನಮ್ಮ ಯಕ್ಷಗಾನ ಕಲೆಯ ಬಗ್ಗೆ ಒಂದು ಉತ್ತಮ ಸಂಶೋಧನ ಗ್ರಂಥ. ಸಮಗ್ರ ಕನ್ನಡ ನಾಡಿನ ಯಕ್ಷಗಾನ ಬಗೆಗಳನ್ನು ಏಕೆ, ದಕ್ಷಿಣ ಕನ್ನಡ ಜಿಲ್ಲೆಯ ತೆಂಕತಿಟ್ಟಿನ ಕೆಲವು ವೈಶಿಷ್ಟ್ಯಗಳನ್ನು ಕುರಿತು ಕಾರಂತರು ಹೆಚ್ಚಾಗಿ ವಿಚಾರ ಮಾಡದಿದ್ದರೂ ಯಕ್ಷಗಾನದ ಸಾಮಾನ್ಯ ಸ್ವರೂಪದ ಬಗ್ಗೆ ಅಪಾರ ಸಾಮಗ್ರಿಯನ್ನು ಕಲೆಹಾಕಿ ಪ್ರೌಢರೀತಿಯ ವಿವೇಚನೆ ನಡೆಸಿದ್ದಾರೆ. ಕರ್ನಾಟಕದ ಸೂತ್ರದ ಬೊಂಬೆಯಾಟ, ತೊಗಲುಬೊಂಬೆಯಾಟಗಳ ಬಗೆಗೂ, ಮೂಡಲ-ಪಾಯ, ದೊಡ್ಡಾಟಗಳ ಬಗೆಗೂ ಇನ್ನೂ ಸಾಕಷ್ಟು ವಿವೇಚನೆ ನಡೆಯಬೇಕಾಗಿದೆ.
 • ಕನ್ನಡ ಜಾನಪದದ ಬಗ್ಗೆ ಶಾಸ್ತ್ರೀಯವಾದ ಸಂಶೋಧನೆ, ಸಮರ್ಪಕವಾದ ಕೃತಿ ಸಂಗ್ರಹ-ಇವು ಈಚೆಗೆ ವಿಶೇಷ ಆಸಕ್ತಿಯಿಂದ ಜರುಗುತ್ತಿವೆ. ಎಚ್.ಎಲ್. ನಾಗೇಗೌಡರು, ರಾಮಾರಾಧ್ಯರು ಮುಂತಾದವರು ಸಂಗ್ರಹ ಕಾರ್ಯದಲ್ಲಿ ನಿರತರಾಗಿ ಗಣನೀಯ ಕಾರ್ಯ ಮಾಡಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಅಂಗಪತ್ರಿಕೆಯಾದ ಜಾನಪದ ಉತ್ತಮ ವಿಷಯಗಳನ್ನು ಹೊರತರುತ್ತಿದೆ. ಕಾಲಿಕವಾಗಿ ನಡೆಯುವ ಜಾನಪದ ಉತ್ಸವಗಳು, ಮೇಳಗಳು, ಗೋಷ್ಠಿಗಳು, ಸಮ್ಮೇಳನಗಳು, ಪ್ರದರ್ಶನಗಳು ಜನತೆಯಲ್ಲಿ ಆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಕುದುರಿಸುತ್ತಿವೆ.[೨]

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೋಲಾಟ
 2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಜಾನಪದ