ಕನ್ನಡದಲ್ಲಿ ಕ್ರೈಸ್ತ ಗೀತೆಗಳು
ವ್ಯಾಟಿಕನ್ ಸುಧಾರಣೆಗಳು ಘೋಷಣೆಯಾಗುವ ಮುನ್ನ ಚರ್ಚ್ ವಲಯದಲ್ಲಿ "ಕೀರ್ತನೆ ಪುಸ್ತಕ" ತುಂಬಾ ಜನಪ್ರಿಯವೆನಿಸಿತ್ತು. ಅದರಲ್ಲಿ ಮೂರು ಭಾಗಗಳಿದ್ದು ಫ್ರೆಂಚ್ ಧಾಟಿಯ ಹಾಡುಗಳ ಕನ್ನಡ ರೂಪಾಂತರವೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಗೀತೆಗಳೂ, ಕೊನೆಯಲ್ಲಿ ಲಾತಿನ್ ಗೀತೆಗಳೂ ಮುದ್ರಿತವಾಗಿದ್ದವು.
ಉದಾಹರಣೆಗಾಗಿ ನೋಡಿ:
ದೇವರತಾಯಿಯ ಮಾಸವನ್ನು ಕುರಿತು (On the month of Mary, Tune: C'est le mois de Marie)
ಪಲ್ಲವಿ: ದೇವ ತಾಯಿಯ ಮಾಸವು ಕ್ರೀಸ್ತುವರೇ, ನೋಡಿ ಆಕೆಯ ಕರುಣವು ಎಲ್ಲರೂ ಕೊಂಡಾಡಿ ಆಕೆಯ ಪೀಠವನ್ನು ಅಲಂಕರಿಸೋಣ; ಉತ್ತಮ ಪುಣ್ಯವನ್ನು ಮಾತೆಗೊಪ್ಪಿಸೋಣ.
ನಾನಾ ಬುದ್ಧಿಮತಿಗಳು Various counsels (ರಾಗ : ಜಂಜೂಟಿ - ರೂಪಕತಾಳ)
ವಂದನೆಗೈಯುತ ಗುರು ಜೇಸುವ ಸೇವಿಸಿರೈ ಮಂದಮತಿಯ ಬಹು ಚಂದದಿ ನೀಗಿಪ : ಪಲ್ಲವಿ ಜೇಸುವೆ ರಕ್ಷಕ ದಾಸರ ಪೋಷಕ ಬೇಸರಗೊಳ್ಳದೆ ಆಶ್ರಯ ಹೊಂದಿಕೋ : ಅನುಪಲ್ಲವಿ ೧: ಕಾಲವು ಬೇಗನೇ ಕೇಳದೆ ಪೋಪುದು ಬಾಲನೆ ಕೂಡಲೆ ತಾಮಸ ಮಾಡದೆ ೨ ಕಾಯದ ಬಲ್ಮೆಯು ಮಾಯವು ಕೇಳಿರಿ ಪ್ರಾಯವ ನಂಬದೆ ನ್ಯಾಯವ ಮೀರದೆ
ತಾಂತುಮ್ ಏರ್ಗೊ (Tantum Ergo)
ತಾಂತುಮ್ ಏರ್ಗೊ ಸಾಕ್ರಾಮೇಂತುಮ್ ವೆನೆರೇಮುರ್ ಚೇರ್ನುಯಿ ಎತ್ ಅಂತೀಕ್ವುಮ್ ದೊಕುಮೇಂತುಮ್ ನೊವೊ ಚೇದಾತ್ ರೀತುಯಿ ಪ್ರೇಸ್ತೆತ್ ಫೀದೆಸ್ ಸುಪ್ಲೆಮೇಂತುಮ್ ಸೇನ್ಸುವುಮ್ ದೇಫೇಕ್ತುಯಿ.
೧೯೬೨ರ ವ್ಯಾಟಿಕನ್ ಸಮಾವೇಶದ ಸುಧಾರಣೆಯ ನಂತರ ಚರ್ಚು ಲ್ಯಾಟಿನ್ ಭಾಷೆಯನ್ನು ತೊರೆದು ಜನರ ಆಡುಭಾಷೆಯತ್ತ ಮುಖಮಾಡಿದಾಗ ಹಾಡುಗಳಲ್ಲಿ ಸ್ವಕಪೋಲಕಲ್ಪಿತ ಸಾಹಿತ್ಯಕ್ಕಿಂತ ಪವಿತ್ರಗ್ರಂಥದ ಪಠ್ಯಗಳೇ ಕನ್ನಡಕ್ಕೆ ತರ್ಜುಮೆಗೊಂಡು ಚಲಾವಣೆಗೆ ಬಂದವು. ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಟಗುರುಗಳೂ ಜೊತೆಗೆ ಸಂಗೀತವಿದ್ವಾಂಸರೂ ಆದ ಡಾ.ಎನ್ ಎಸ್ ಮರಿಜೋಸೆಫ್ ಅವರು ಅತ್ಯುತ್ಸಾಹದಿಂದ ಬೈಬಲ್ ಆಧಾರಿತ ಶ್ಲೋಕಗಳನ್ನೂ ಕೀರ್ತನೆಗಳನ್ನೂ ಕನ್ನಡಕ್ಕೆ ಭಾಷಾಂತರಿಸಿ ಕರ್ನಾಟಕ ಸಂಗೀತದ ಸ್ವರಪ್ರಸ್ತಾರವನ್ನು ಸಂಯೋಜಿಸಿ ನಮ್ಮ ಚರ್ಚುಗಳಲ್ಲಿ ಕನ್ನಡದ ಹಾಡುಗಳ ಮಾಧುರ್ಯವನ್ನು ತೇಲಿಬಿಟ್ಟರು. ಅವರ ಹಾದಿಯಲ್ಲೇ ಸಾಗಿದ ಸ್ವಾಮಿ ಜಾರ್ಜ್ ಡಿಸೋಜ, ಸ್ವಾಮಿ ಪಾಸ್ಕಲ್ ಮರಿಯಪ್ಪ, ಸ್ವಾಮಿ ಅಮಲಾನಂದ, ಸ್ವಾಮಿ ಜಯನಾಥನ್ ಮುಂತಾದವರು ಕನ್ನಡ ಕ್ರೈಸ್ತ ಹಾಡುಗಳ ಗುಣಮಟ್ಟವನ್ನು ಕಾಯ್ದುಕೊಂಡು ಬಂದರು. ಇವರುಗಳು ಬರೆದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಜನಪ್ರಿಯಗೊಳಿಸಿದವರು ಸ್ವಾಮಿ ಫೆಲಿಕ್ಸ್ ನರೋನರವರು. ಆ ಹಾಡುಗಳನ್ನು ಮೊದಲು ಪುಸ್ತಕ ರೂಪಕ್ಕೆ ತಂದು ಗಾಯನ ವೃಂದದ ಕೈಗಿಟ್ಟಿದ್ದು ಸ್ವಾಮಿ ಜೋ ಮೇರಿ ಲೋಬೊರವರು. ಗುರುವರ್ಗವನ್ನು ಬಿಟ್ಟರೆ ಮೈಕೆಲ್ ಜಾನ್, ಎ ಜಾನ್ ಮುಂತಾದವರ ಸಂಗೀತ ಸಂಯೋಜನೆಯೂ ಸ್ಮರಣೀಯ.
ಕರ್ತರ ಕರುಣೆ ಶಾಶ್ವತ ಅವರ ಪಾದ ಸೇರಿರಿ ಕರ್ತರೆಮಗೆ ಆಶ್ರಯ ದೀನ ಮನವಿ ಮಾಡಿರಿ
ಇಸ್ರಯೇಲ್ ಜನರೇ ಹಾಡಿರಿ ಕರ್ತರ ಕರುಣೆ ಶಾಶ್ವತ ಸಕಲ ಜನರೇ ಘೋಷಿಸಿ ಕರ್ತರ ಕರುಣೆ ಶಾಶ್ವತ
ಕರ್ತರೇ ಎಮಗೆ ಸರ್ವಸ್ವ ಅವರನರಸುತಿರುವೆವು ನಂಬಿರೆ ಲೋಕ ನಶ್ವರ ನಾಶವೆಮಗೆ ತಪ್ಪದು
ಈ ಗೀತೆ ಪವಿತ್ರಬೈಬಲ್ ನ ಹಳೆ ಒಡಂಬಡಿಕೆಯನ್ನು ಆಧರಿಸಿದೆ. ಅದೇ ಹಾದಿಯಲ್ಲಿ ಎರಡು ದಶಕಗಳ ನಂತರ ಬಂದ ಈ ಗೀತೆ ಯೇಸುಕ್ರಿಸ್ತನ ನುಡಿಗಳೇ ಆಗಿವೆ.
ಆಜ್ಞೆ ಎನ್ನ ನಿಮಗೆ ನೀಡ್ವೆ ಪ್ರೀತಿ ನಿಮ್ಮಲ್ಲಿ ಬೆಳಗಲಿ ದೇವರನ್ನು ಸರ್ವರನ್ನು ನನ್ನ ಪರಿಯೆ ಪ್ರೀತಿಸಿ
ಸ್ನೇಹಕ್ಕಾಗಿ ಪ್ರಾಣವ ತೆರವ ತ್ಯಾಗ ಶ್ರೇಷ್ಠವು ನನ್ನ ಆಜ್ಞೆ ಪಾಲಿಸಿ ನೀವು ನನ್ನ ಗೆಳೆಯರಾಗಿರಿ
ದಾಸರೆಂದು ಕರೆಯೆನು ಪಿತನ ವಾಕ್ಯ ಪೇಳಿಹೆ ಎನಗೆ ನೀವು ಮಿತ್ರರು ಸತ್ಯ ನಾನೇ ಪೇಳ್ವೆನು
ನೀವು ಎನ್ನನಾಯ್ದಿರೋ? ನಾನೇ ನಿಮ್ಮ ಕರೆದೆನು ಸ್ನೇಹ ಸೇವೆ ಮಾಡಿ ನೀವು ನನ್ನ ಶಿಷ್ಯರೆನಿಸಿರಿ
ದೇವಾಲಯದಲ್ಲಿ ಹಾಡುವ ಹಾಡುಗಳು ಇಂದು ಹೇಗಿರುತ್ತವೆಂದರೆ ಅವುಗಳ ಸಾಹಿತ್ಯಿಕ ಮೌಲ್ಯ, ಸಂಗೀತ ಸಂಯೋಜನೆ ತುಂಬಾ ಎತ್ತರದಲ್ಲೂ ಇರದೆ ತೀರಾ ಲಘುವಾಗಿಯೂ ಇರದೆ ಸಮಾಜದ ಎಲ್ಲ ಸ್ತರಗಳ ಜನರ ಬಾಯಲ್ಲಿ ಸುಲಲಿತವಾಗಿ ಆಡುವಂತಿರುತ್ತದೆ. ಪೂಜಾರ್ಪಣೆಗೆ ಯಾಜಕರನ್ನು ಸ್ವಾಗತಿಸುವ ಹಾಡು ಇಂದು ಬದಲಾಗಿ ಭಕ್ತಾದಿಗಳನ್ನೇ ಪೂಜೆಗೆ ಬನ್ನಿ ಎಂದು ಕೈಬೀಸಿ ಕರೆಯುವಂತಿದೆ.
ದೇವರ ಆಲಯ ನಿಮ್ಮ ಕರೆದು ಕ್ರಿಸ್ತನ ಪ್ರೀತಿಯ ತೋರಿಸಿದೆ ನೂತನ ಬಾಳನು ಅನುಗೊಳಿಸಿ ಪರಸ್ಪರ ಪ್ರೀತಿಸ ಹೇಳುತಿದೆ
ಸುಸ್ವಾಗತ ನಿಮಗೆ ಹಸಿರಿನ ಬನದಲ್ಲಿ ಹೂವರಳಿ ಸುಂದರ ಪರಿಮಳ ಸೂಸುತಿದೆ ಅರಳಿದ ಹೂಗಳು ಗುಡಿ ಸೇರಿ ಸೃಷ್ಟಿಯ ಒಡೆಯನ ಸೇರುತಿದೆ ಬನ್ನಿರಿ ಹೋಗುವ ಆಲಯಕೆ ದೇವನ ಸನ್ನಿಧಿಗೆ
ಅಲ್ಲೊಂದು ಇಲ್ಲೊಂದು ಅನುಪಮ ಸಾಹಿತ್ಯದ ತುಣುಕುಗಳು ಕಂಡುಬರುತ್ತವೆ. ದೇವರಿಗೆ ನಮ್ಮನ್ನೇ ಅರ್ಪಿಸುವ ಈ ಪರಿ ನೋಡಿ: ಗುರುವಿನ ಕರಗಳಲಿ ರೊಟ್ಟಿಯ ನೀಡಿಹೆನು ಗುರುವಿನ ಕರಗಳಲಿ ರಸವನು ನೀಡಿಹೆನು ಸ್ವೀಕರಿಸು ನೀ ಹರಸು ಎಂದು ಬೇಡುವೆನು ದೇವಾ ಸ್ವೀಕರಿಸು ಎನ್ನನು ನೀ ಹರಸು
ಬಾಳಿನ ಹಾದಿಯೊಳು ಸುಖವೇ ತುಂಬಿರಲು ನಿನಗೆ ಅರ್ಪಿಪೆನು ಮನವೆಂಬ ಮಂದಿರದಿ ನಗುವೇ ಚೆಲ್ಲಿರಲು ನಿನಗೇ ನೀಡುವೆನು ದೇವ ಸ್ವೀಕರಿಸು ಎನ್ನನು ನೀ ಹರಸು
ಬಾಳಿನ ಪುಟಗಳಲ್ಲಿ ಕಂಬನಿ ತುಂಬಿರಲು ನಿನಗೇ ಅರ್ಪಿಪೆನು ಬಾಳಿನ ಅನುಕ್ಷಣವೂ ಕಷ್ಟವೇ ಬರುತಿರಲು ನಿನಗೇ ಒಪ್ಪಿಸುವೆ ದೇವಾ ಸ್ವೀಕರಿಸು ನನ್ನನು ಸಂತೈಸು