ಕಠಿಣ ವ್ರತಗಳು
ಕಠಿಣ ವ್ರತಗಳು : ವೈದಿಕ ಧರ್ಮದ ಆಚರಣೆಯಲ್ಲಿ ಅಧ್ಯಯನ, ತಪಸ್ಸು, ಸಾಧನೆ ಮುಂತಾದುವನ್ನು ನಡೆಸುವಾಗ ತಿಳಿದೋ ತಿಳಿಯದೆಯೋ ನಡೆಯುವ ದೋಷಕ್ಕೆ ಪ್ರಾಯಶ್ಚಿತ್ತರೂಪದಲ್ಲಿ ಕೈಗೊಳ್ಳಬೇಕಾದ ವ್ರತಗಳು. ಹಿಂದು ಧರ್ಮಶಾಸ್ತ್ರ ಇವನ್ನು ಕೃಚ್ಛಗ್ರಳೆಂದು ಕರೆದಿದೆ. ಇವುಗಳ ವಿಚಾರ ಸ್ಮೃತಿ ಮತ್ತು ಪುರಾಣಗಳಲ್ಲಿ ಕಂಡು ಬರುತ್ತದೆ; ಋಗ್ವೇದಾದಿ ಶ್ರುತಿಗಳಲ್ಲೂ ಹೇಳಲ್ಪಟ್ಟಿದೆಯೆಂದು ಹಲವರ ಅಭಿಪ್ರಾಯ, ಶ್ರದ್ದಾಳುವಿನ ಆಧ್ಯಾತ್ಮಿಕ ಅನ್ವೇಷಣೆಯಲ್ಲಾಗಲಿ, ಸಾಮಾನ್ಯ ಲೌಕಿಕನ ನಿತ್ಯಜೀವನದ ನಡೆವಳಿಕೆಯಲ್ಲಾಗಲಿ ಧರ್ಮದ ರೀತಿನೀತಿಗಳು ಉಲ್ಲಂಘನೆಗೊಳ್ಳುವ ಅನೇಕ ಸನ್ನಿವೇಶಗಳು ಒದಗಿಬರುತ್ತವೆ. ಅಂಥ ಧರ್ಮ ವಿರುದ್ಧವಾದ ಮಹಾಪಾತಕ ಮತ್ತು ಉಪಪಾತಕಗಳಿಗೆ ಪ್ರಾಯಶ್ಚಿತ್ತ ರೂಪದಲ್ಲಿ ಹಲವು ಸುಲಭ, ಹಲವು ಕಠಿಣ, ಹಲವು ಆಂತರಿಕ, ಹಲವು ಬಹಿರಂಗ ವ್ರತಗಳನ್ನು ಆಚರಿಸಿ, ಪಾಪ ಪರಿಹಾರವನ್ನು ಮಾಡಿಕೊಳ್ಳಬಹುದೆಂಬ ಆಶ್ವಾಸನ ನೀಡಬೇಕಾದುದು ಧರ್ಮದ ಸ್ಥಿರತೆಗೆ ಹೇಗೆ ಆವಶ್ಯಕವೋ ಧರ್ಮಾನುಯಾಯಿಗಳ ಮಾನಸಿಕ ಕ್ಷೋಭೆಯನ್ನು ನಿವಾರಿಸುವುದಕ್ಕೂ ಅಷ್ಟೇ ಆವಶ್ಯಕ. ನಿರಂತರ ಪಾಪಿಯೆನಿಸಿಕೊಂಡು ಆತ್ಮಹನನ ಮಾಡಿಕೊಳ್ಳುವುದಕ್ಕಿಂತ ಪಾಪನಿವಾರಣೆಯ ಮಾರ್ಗವನ್ನನುಸರಿಸಿ ಪಾಪವಿಮುಕ್ತರಾಗ ಬಹುದೆಂಬ ಅಭಯವನ್ನು ಧರ್ಮವೇ ನೀಡಬೇಕಿಲ್ಲದೆ ಬೇರಾವ ಶಕ್ತಿಯಿಂದಲೂ ಆಗದು.[೧]
ಅಷ್ಟಾದಶ ಪುರಾಣ
ಬದಲಾಯಿಸಿಅಷ್ಟಾದಶ ಪುರಾಣಗಳಲ್ಲಿ ಕಠಿಣವ್ರತಗಳ ಮೂಲಕ ಪ್ರಾಯಶ್ಚಿತ್ತವನ್ನು ಹೇಳಿದ್ದರೂ ವ್ರತಾಚರಣೆಯ ಲಕ್ಷಣ ಅಥವಾ ಕ್ರಮವನ್ನು ಧರ್ಮಶಾಸ್ತ್ರಗಳಿಂದ ತಿಳಿಯಬೇಕು. ವೈದಿಕ ಧರ್ಮ ಹಾಗೂ ಹಿಂದೂ ಸಮಾಜದ ಕಟ್ಟುನಿಟ್ಟುಗಳನ್ನು ಅನೇಕ ಧರ್ಮಸೂತ್ರ ಗ್ರಂಥಗಳು ವಿವರಿಸುತ್ತವೆ. ಅವುಗಳಲ್ಲಿ ಮುಖ್ಯವೆನಿಸಿದ ಹಲವು ಧರ್ಮಶಾಸ್ತ್ರ ಗ್ರಂಥಗಳು ಇವು : ಆಪಸ್ತಂಬಧರ್ಮ ಮತ್ತು ಗೃಹ್ಯಸೂತ್ರಗಳು; ಆಶ್ವಲಾಯನ ಗೃಹ್ಯ ಮತ್ತು ಶ್ರೌತಸೂತ್ರಗಳು, ಕಾತ್ಯಾಯನ ಶ್ರೌತಸೂತ್ರಗಳು, ಕಾತ್ಯಾಯನ ಶ್ರೌತಸೂತ್ರ, ಗೌತಮ ಧರ್ಮಸೂತ್ರ, ಪರಾಶರ ಸ್ಮೃತಿ, ಬೋಧಾಯನ-ಗೃಹ್ಯ-ಧರ್ಮ ಮತ್ತು-ಶ್ರೌತ ಸೂತ್ರಗಳು, ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಶಾಂಖಾಯನ ಶ್ರೌತ ಸೂತ್ರ, ಹಾರಿತ ಸಂಹಿತೆ ಇತ್ಯಾದಿ.ಇವೇ ಮೊದಲಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಸು. 50ಕ್ಕೂ ಹೆಚ್ಚಿನ ಕೃಚ್ಛ್ರಗಳನ್ನು ವಿವರಿಸಿದ್ದಾರೆ. ಅಲ್ಲದೆ ಯಾವ ನಿರ್ದಿಷ್ಟವಾದ ಹೆಸರನ್ನೂ ನೀಡದೆಯೇ ಅನೇಕವಕ್ಕೆ ಆಚರಣಾ ವಿಧಿಗಳನ್ನು ಮಾತ್ರ ಹೇಳಿದ್ದಾರೆ. ಅಲ್ಲಿನ ಹಲವು ನಿರ್ದಿಷ್ಟ ಕೃಚ್ಛ್ರಗಳು ಇವು: ಅಘಮರ್ಷಣ, ಅತಿಕೃಚ್ಛ್ರ, ಅತಿಸಾಂತಪನ, ಅರ್ಧಕೃಚ್ಛ್ರ, ಅಶ್ವಮೇಧ, ಅವಭೃತ ಸ್ನಾನ, ಆಗ್ನೇಯ, ಋಷಿ ಚಾಂದ್ರಾಯಣ, ಏಕಭಕ್ತ, ಕೃಚ್ಛ್ರ, ಕೃಚ್ಛ್ರಾತಿಕೃಚ್ಛ್ರ, ಗೋಮೂತ್ರ, ಗೋವೃತ, ಚಾಂದ್ರಾಯಣ, ಜಲ, ತಪ್ತ, ತುಲಾಪುರುಷ, ದಧಿ, ದೇವ ದಂಡ, ನಿತ್ಯೋಪವಾಸ, ಪಂಚಗವ್ಯ, ಪತ್ರ, ಪರಾತ, ಪರ್ಣಕೂರ್ಚ, ಪರ್ಣಕೃಚ್ಛ್ರ, ಪಾದ, ಪಾದೋನ, ಪುಷ್ಪ, ಪ್ರಶೃತ-ಯಾವಕ, ಪ್ರಾಜಾಪತ್ಯ, ಫಲಕ, ಬಾಲಕೃಚ್ಛ್ರ, ಬೃಹತ್-ಯಾವಕ, ಬ್ರಹ್ಮಕೂರ್ಚ, ಬ್ರಹ್ಮ, ಮಹಾತಪ್ತ, ಮಹಾಸಾಂತಪನ, ಮಹೇಶ್ವರ, ಮೂಲ, ಮೈತ್ರ, ಯಜ್ಞ, ಯತಿಚಾಂದ್ರಾಯಣ, ಯತಿ ಸಾಂತಪನ, ಯಾಮ್ಯ, ಯಾವಕ, ವಜ್ರ, ವಾಯವ್ಯ, ವೃದ್ದ ಅಥವಾ ವೃದ್ಧಿ, ವ್ಶಾಸ, ಶಿಶು, ಶಿಶು ಚಾಂದ್ರಾಯಣ, ಶೀತ, ಶ್ರೀ, ಸಾಂತಪನ, ಸುರ ಚಾಂದ್ರಾಯಣ, ಸುವರ್ಣ, ಸೋಮಾಯನ, ಸೌಮ್ಯ-ಇತ್ಯಾದಿ.
ಪಾತಕ ನಿವಾರಣೆ
ಬದಲಾಯಿಸಿಈ ಮೇಲಿನವು ಹಲವು ಪ್ರಾಯಶ್ಚಿತ್ತ ರೂಪವಾದ ಕಠಿಣ ಅಥವಾ ಸೌಮ್ಯ ವ್ರತಗಳಾಗಿದ್ದು ಅವನ್ನು ಅನೇಕ ಬಗೆಯ ಪಾತಕ ನಿವಾರಣೆಗೆ ವಿಧಿಸಲಾಗಿದೆ. ಪಾತಕಗಳಲ್ಲಿ ನಿತ್ಯ, ನೈಮಿತ್ತಿಕ ಕರ್ಮಲೋಪದ ದೋಷದಿಂದ ಹಿಡಿದು ಬ್ರಹ್ಮಹತ್ಯೆ, ಶಿಶುಹತ್ಯೆ, ಗೋಹತ್ಯೆ, ಗುರುಪತ್ನೀಸಂಭೋಗ, ಸುವರ್ಣಚೌರ್ಯ, ಪ್ರಾಣಿಹತ್ಯೆ, ಸುರಾಪಾನ ಮುಂತಾದ ಅನೇಕ ಬಗೆಗಳಿವೆ. ಅವಕ್ಕೆ ತಕ್ಕಂತೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ. ಧರ್ಮಶಾಸ್ತ್ರಕಾರರು ಮುಖ್ಯವಾಗಿ ಪಾತಕಗಳನ್ನು 8 ಬಗೆಯಾಗಿ ವಿಂಗಡಿಸಿದ್ದಾರೆ: ಅತಿಪಾತಕ, ಮಹಾಪಾತಕ, ಅನುಪಾತಕ, ಉಪಪಾತಕ, ಜಾತಿಭ್ರಂಶಕರ, ಸಂಕರೀಕರಣ, ಅಪ್ರತೀಕರಣ ಮತ್ತು ಮಲಿನೀಕರಣ.[೨]
ಮನುಧರ್ಮಶಾಸ್ತ್ರ
ಬದಲಾಯಿಸಿಮನುಧರ್ಮಶಾಸ್ತ್ರದ ರೀತ್ಯಾ ಬ್ರಹ್ಮಹತ್ಯೆ, ಸುರಾಪಾನ, ಸುವರ್ಣಸ್ತೇಯ, ಗುರುಪತ್ನೀಗಮನ ಮುಂತಾದುವು ಮಹಾಪಾತಕಗಳು. ಗೋಹತ್ಯೆ, ಜಾತಿ ಮತ್ತು ಕರ್ಮದಿಂದ ದುಷ್ಟರಾದವರಿಂದ ಹೋಮ ಮಾಡಿಸುವುದು, ಪರಸ್ತ್ರೀ ಸಂಭೋಗ, ತನ್ನನ್ನೇ ತಾನು ಮಾರಿಕೊಳ್ಳುವುದು, ತಾಯಿ ತಂದೆ ಗುರುಗಳ ಸೇವೆ ಮಾಡದಿರುವುದು, ನಿತ್ಯ ಯಜ್ಞಾದಿಗಳಾದ ಬ್ರಹ್ಮಯಜ್ಞ ಮುಂತಾದವನ್ನು ಮಾಡದಿರುವುದು, ಸ್ಮೃತಿವಿದಿತ ಔಪಾಸನಾಧಿಗಳನ್ನು ಬಿಡುವುದು, ಪುತ್ರನನ್ನು ಬಿಡುವುದು, ಮೈನೆರೆದ ಕನ್ಯೆಯನ್ನು ಸಂಭೋಗದಿಂದಲ್ಲದೆ ಇತರ ರೀತಿಯಿಂದ ಕೆಡಿಸುವುದು, ಬಡ್ಡಿಯಿಂದ ಜೀವಿಸುವುದು, ಬ್ರಹ್ಮಚಾರಿಯಾದವ ತನ್ನ ವ್ರತವನ್ನು ಮರೆತು ಸ್ತ್ರೀಸಂಭೋಗ ಮಾಡುವುದು, ಕೆರೆ, ಹೂದೋಟ, ಪತ್ನೀ-ಪುತ್ರರಾದಿಯಾದವರನ್ನು ಮಾರುವುದು, ಶಾಸ್ತ್ರೋಕ್ತ ಸಮಯದಲ್ಲಿ ಉಪನಯನವಿಲ್ಲದಿರುವುದು, ಹಿರಿಯ ಬಂಧುಗಳ ಮಾತನ್ನು ಕೇಳದಿರುವುದು, ದ್ರವ್ಯವನ್ನು ಪಡೆದು ವಿದ್ಯೆ ಹೇಳುವುದು, ವಿದ್ಯೆ ಕಲಿಯಲು ದ್ರವ್ಯವನ್ನು ನೀಡುವುದು, ಚಿನ್ನದ ಗಣಿಗಳಲ್ಲಿ ಅಧಿಕಾರ ವಹಿಸಿಕೊಳ್ಳುವುದು, ನೀರಿಗೆ ಅಣೆಕಟ್ಟನ್ನು ಹಾಕುವುದು, ಸಸ್ಯಗಳನ್ನು ವಿನಾಕಾರಣದಿಂದ ಕಡಿದುಹಾಕುವುದು, ಹೆಂಡತಿಯನ್ನು ವ್ಯಭಿಚಾರ ವೃತ್ತಿಗಿಳಿಸಿ ಅದರಿಂದ ಸಂಪಾದನೆ ಮಾಡುವುದು, ತಪ್ಪಿಲ್ಲದವರನ್ನು ಕೊಲ್ಲುವುದು, ಮಂತ್ರ, ಔಷಧಿಗಳಿಂದ ಜನರನ್ನು ವಶೀಕರಣ ಮಾಡಿಕೊಳ್ಳುವುದು, ಅಧಿಕಾರವಿದ್ದರೂ ಅಗ್ನಿಹೋತ್ರ ಮಾಡದಿರುವುದು, ದೇವ, ಋಷಿ, ಪಿತೃ ಋಣವನ್ನು ಪರಿಹರಿಸದಿರುವುದು, ವೇದಸ್ಮೃತಿಗಳಿಗೆ ವಿರುದ್ಧವಾದ ಶಾಸ್ತ್ರವನ್ನು ಕಲಿಯುವುದು, ಧಾನ್ಯ, ತಾಮ್ರ, ಕಬ್ಬಿಣ, ಪಶು ಇತ್ಯಾದಿಗಳನ್ನು ಕದಿಯುವುದು, ಸುರಪಾನ ಮಾಡುವ ಸ್ತ್ರೀಯೊಡನೆ ಸಂಭೋಗ ಮಾಡುವುದು, ಸ್ತ್ರೀ, ಶೂದ್ರ, ವೈಶ್ಯ ಮತ್ತು ಕ್ಷತ್ರಿಯರನ್ನು ಕೊಲ್ಲುವುದು, ನಾಸ್ತಿಕಮತದಲ್ಲಿ ಪ್ರವರ್ತಿಸುವುದು-ಇವೇ ಮುಂತಾದವು ಉಪಪಾತಕಗಳು. ಕೋಲಿನಿಂದಾಗಲಿ, ಆಯುಧದಿಂದಾಗಲಿ ಹೊಡೆದು ಬ್ರಾಹ್ಮಣನಿಗೆ ಪೀಡೆ ಕೊಡುವುದು, ಅತ್ಯಂತ ದುರ್ವಾಸನೆಯುಳ್ಳ ಬೆಳ್ಳುಳ್ಳಿ, ಮಲ, ಮುಂತಾದವನ್ನು ಮೂಸುವುದು, ಕುಟಿಲತನ, ಗಂಡಸಿನೊಡನೆ ಗಂಡಸು ಸಂಭೋಗ ಮಾಡುವುದು-ಇವೇ ಮುಂತಾದುವು ಜಾತಿಭ್ರಂಶಕರ ಪಾತಕಗಳು, ಕತ್ತೆ, ಕುದುರೆ, ಒಂಟೆ, ಜಿಂಕೆ, ಆನೆ, ಆಡು, ಕುರಿ, ಮೀನುಹಾವು, ಕೋಣ ಇವನ್ನು ಕೊಲ್ಲುವುದು ಸಂಕರೀಕರಣ ಪಾತಕಗಳು. ಯಾರಿಂದ ಪಡೆಯಬಾರದೋ ಅಂಥ ನೀಚ ಜನರಿಂದ ದ್ರವ್ಯವನ್ನು ಪಡೆಯುವುದು, ಕ್ರಯ ವಿಕ್ರಯ ವ್ಯಾಪಾರ, ಶೂದ್ರನನ್ನು ಸೇವಿಸುವುದು, ಸುಳ್ಳು ಹೇಳುವುದು ಇವೆಲ್ಲ ಅಪಾತ್ರೀಕರಣ ಪಾತಕಗಳು. ಹುಳು, ಕೀಟ, ಹಕ್ಕಿ, ಮುಂತಾದವನ್ನು ಕೊಲ್ಲುವುದು, ಮದ್ಯಪದಾರ್ಥದೊಂದಿಗೆ ತಂದ ಹಣ್ಣುಹಂಪಲನ್ನು ತಿನ್ನುವುದು, ಹಣ್ಣು, ಕಟ್ಟಿಗೆ, ಪುಷ್ಪಗಳನ್ನು ಕದಿಯುವುದು ಮುಂತಾದುವು ಮಲಿನೀಕರಣ ಪಾತಕಗಳು. ಹೀಗೆ ಅನೇಕ ಬಗೆಯ ಪಾತಕಗಳನ್ನು ಇತರ ಧರ್ಮಶಾಸ್ತ್ರಕಾರರೂ ಹೇಳುತ್ತಾರೆ.
ಗ್ರಂಥಕಾರನಾದ ಮಾಂಧಾತೃ
ಬದಲಾಯಿಸಿಇಂಥ ಧರ್ಮ ವಿರುದ್ಧವಾದ ಪಾತಕಗಳನ್ನು ಮಾಡಿದವರು ಜಾತಿ, ಆಯು ಮತ್ತು ಭೋಗ ಎಂಬ ಮೂರು ಬಗೆಯ ಕರ್ಮವಿಪಾಕವನ್ನು ಅನುಭವಿಸುತ್ತಾರೆಂದು ಪಾತಂಜಲಯೋಗ ಸೂತ್ರ ಹೇಳುತ್ತದೆ. ಮಾಡಿದ ಕರ್ಮಕ್ಕೆ ಅನುಗುಣವಾಗಿ ಒಬ್ಬ ಕ್ರಿಮಿ, ಕೀಟ ಮುಂತಾದ ಜಾತಿಯಲ್ಲಿ ಹುಟ್ಟಬಹುದು; ಅಲ್ಪ ಆಯಸ್ಸನ್ನು ಪಡೆಯಬಹುದು; ಅಥವಾ ನರಕದ ಯಾತನೆಯನ್ನು ಅನುಭವಿಸಬೇಕಾಗಬಹುದು. ಪಾತಕಿ ತನ್ನ ಕರ್ಮದ ಪಾಪವನ್ನು ಎರಡು ರೀತಿಯಲ್ಲಿ ನಿವಾರಿಸಕೊಳ್ಳಬಹುದೆಂದು ಮಹಾರ್ಣವ ಕರ್ಮವಿಪಾಕ ಎಂಬ ಗ್ರಂಥಕಾರನಾದ ಮಾಂಧಾತೃ ಹೇಳುತ್ತಾನೆ : ಒಂದು -ಪ್ರಾಯಶ್ಚಿತ್ತ ರೂಪವಾದ ಕೃಚ್ಛ್ರವನ್ನು ಆಚರಿಸುವುದು. ಮತ್ತೊಂದು-ವ್ಯಾಧಿ ವಿಪರ್ಯರೂಪನಾದ, ಆರೋಗ್ಯಕ್ಕೆ ಅಧಿದೇವತೆಯೆನಿಸಿದ ಸೂರ್ಯನ ಉಪಾಸನೆಯನ್ನು ಮಾಡುವುದು.ಪ್ರಾಯಶ್ಚಿತ್ತ ರೂಪವಾದ ಕೃಚ್ಛ್ರಗಳು ಅನೇಕವಿದ್ದರೂ ಅವು ಯಾವ ಲಕ್ಷಣದಿಂದ ಇವೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಹಲವು ಕೃಚ್ಛ್ರಗಳು ವಿಧಾನವನ್ನು ಮಾತ್ರ ಇಲ್ಲಿ ನಿರೂಪಿಸಿದೆ.
ಕೃಚ್ಛ್ರ
ಬದಲಾಯಿಸಿಸಾಮಾನ್ಯವಾಗಿ ಎಲ್ಲ ಪ್ರಾಯಶ್ಚಿತ್ತ ಕರ್ಮಗಳಿಗೂ ಅನ್ವಯಿಸುವ ಹೆಸರಿದು. ಕೃಚ್ಛ್ರದ ಲಕ್ಷಣವನ್ನು ಸಾಮವಿಧಾನ ಬ್ರಾಹ್ಮಣ ಈ ರೀತಿ ಹೇಳುತ್ತದೆ. ಇದು 9 ದಿನಗಳು ನಡೆಯುವ ಕರ್ಮ. ಮೊದಲ ಮೂರು ದಿನಗಳು ಹಗಲಿನಲ್ಲೂ ಮುಂದಿನ ಮೂರು ದಿನಗಳಲ್ಲೂ ರಾತ್ರಿಯಲ್ಲೂ ಊಟ. ಅನಂತರದ ಮೂರು ದಿನಗಳಲ್ಲಿ ಸಂಪುರ್ಣ ಉಪವಾಸ. ವ್ರತಕರ್ಮವನ್ನು ಬೇಗ ಪುರ್ಣಗೊಳಿಸುವ ಆತುರ ಉಳ್ಳವ ಸದಾ ನಿಂತು ಕೊಂಡೇ ಹಗಲನ್ನೂ ಸದಾ ಕುಳಿತು ಕೊಂಡೇ ರಾತ್ರಿಯನ್ನೂ ಕಳೆಯಬೇಕು. ಆಪಸ್ತಂಬ ಧರ್ಮಸೂತ್ರ ಈ ವ್ರತವನ್ನು 12 ದಿನ ವಿಧಿಸಿದೆ. ಗೌತಮ ಧರ್ಮಸೂತ್ರ ಊಟ ಮಾಡುವ ವಿಧಿಗೆ ಪುರಕವಾಗಿ ಇತರ ಹಲವು ವಿಧಿಗಳನ್ನು ಹೇಳಿದೆ. ವ್ರತದ ಕಾಲದಲ್ಲಿ ಸತ್ಯವನ್ನೇ ಹೇಳಬೇಕು. ಅನಾರ್ಯ ಸ್ತ್ರೀಪುರುಷರೊಂದಿಗೆ ಸಂಭಾಷಣೆ ಮಾಡಕೂಡದು. ರೌರವ ಮತ್ತು ಯೌಧಾಜಪ ಸಾಮಗಳನ್ನು ಯಾವಾಗಲೂ ಕೀರ್ತಿಸುತ್ತಿರಬೇಕು. ದಿನಕ್ಕೆ ಒಂಬತ್ತು ಸಲ, ಹೊತ್ತಿಗೆ ಮೂರು ಸಲದಂತೆ, ಬಾವಿಯಲ್ಲಿ ಮುಳುಗಬೇಕು. ಆಪೋಹಿಷ್ಠ ಮೊದಲಾದ, ಋಕ್ಕುಗಳಿಂದ ಪವಿತ್ರವತೀ ಮಂತ್ರಗಳಾದ ಪವಮಾನಃ ಸುವರ್ಜನಃ ಮುಂತಾದವನ್ನು ಹೇಳಬೇಕು. ತರ್ಪಣ ಬಿಡಬೇಕು. ಸೂಯ್ಙೋಪಾಸನೆ ಮಾಡಬೇಕು. ತುಪ್ಪದಿಂದ ಹೋಮ ಮಾಡಬೇಕು. ಅಗ್ನಿ, ಸೋಮ, ಇಂದ್ರಾದಿಗಳಿಗೆ ಹವಿಭಾರ್ಗವನ್ನು ಅರ್ಪಿಸಬೇಕು. 13ನೆಯ ದಿನ ಬ್ರಾಹ್ಮಣ ಸಂತರ್ಪಣೆ ಮಾಡಬೇಕು.ಕೃಚ್ಛ್ರವೆಂಬ ಈ ಪ್ರಾಯಶ್ಚಿತ್ತವನ್ನು ಮನುಸ್ಮೃತಿ ಈ ಕೆಳಗಿನ ಸಂದರ್ಭಗಳಲ್ಲಿ ವಿಧಿಸುತ್ತದೆ: ವ್ರಾತ್ಯರಾಗಿದ್ದವರಿಗೆ ಯಾಗ ಮಾಡಿಸುವುದು, ತಂದೆ ತಾಯಿ ಮೊದಲಾದವರಲ್ಲ ದವರಿಗೆ ಎಂದರೆ ಉತ್ತರಕ್ರಿಯೆ ಮಾಡಿಸಿಕೊಳ್ಳಲು ಅಯೋಗ್ಯರಾದವರಿಗೆ ಉತ್ತರಕ್ರಿಯೆ ಮಾಡುವುದು, ಮಾರಣ ಮಾಡಬಾರದವರಿಗೆ ಮಾರಣಮಾಡುವುದು, ಅಹೀನವೆಂಬ ಯಜ್ಞವನ್ನು ಆಚರಿಸುವುದು ಮುಂತಾದ ಪಾತಕಗಳಿಗೆ ಮೂರು ಸಲ ಕೃಚ್ಛ್ರವನ್ನು ಆಚರಿಸಬೇಕು. ಅಲ್ಲದೆ ಬ್ರಾಹ್ಮಣವನ್ನು ಕೊಲ್ಲುವ ಉದ್ದೇಶದಿಂದ ಆಯುಧವನ್ನು ಎತ್ತಿದ ಮಾತ್ರಕ್ಕೇ ಕೃಚ್ಛ್ರವನ್ನು ಆಚರಿಸಬೇಕು.
ಅತಿಕೃಚ್ಛ್ರ
ಬದಲಾಯಿಸಿಮನುವಿನ ಪ್ರಕಾರ ಈ ಪ್ರಾಯಶ್ಚಿತ್ತ 12 ದಿನಗಳ ವ್ರತ. ಮೊದಲ ಮೂರು ದಿನ ಹಗಲಲ್ಲಿ ಮಾತ್ರ ಊಟ; ಮುಂದಿನ ಮೂರು ದಿನ ರಾತ್ರಿಯ ಕಾಲದಲ್ಲಿ ಮಾತ್ರ. ಅನಂತರದ ಮೂರು ದಿನಗಳಲ್ಲಿ ಬೇರೆಯವರು ಉಪಯೋಗಿಸದ, ಹೆಚ್ಚಿನ ಅನ್ನಭಾಗವನ್ನು ಮಾತ್ರ ಉಣ್ಣಬೇಕು. ಕೊನೆಯ ಮೂರು ದಿನಗಳಲ್ಲಿ ಸಂಪುರ್ಣ ಉಪವಾಸವನ್ನು ಮಾಡಬೇಕು. ಊಟಮಾಡುವ ದಿನಗಳಲ್ಲೂ ನಿಯಮಿತ ಪ್ರಮಾಣವನ್ನೇ ವಿಧಿಸಲಾಗಿದೆ. ಹಗಲು ಭೋಜನದ ದಿನಗಳಲ್ಲಿ ಕೋಳಿಮೊಟ್ಟೆ ಗಾತ್ರದ 26 ಗ್ರಾಸ, ರಾತ್ರಿಯ ಕಾಲದ ಊಟದ ವೇಳೆಯಲ್ಲಿ 32 ಗ್ರಾಸ, ಅನಂತರದ ಮೂರು ದಿನಗಳಲ್ಲಿ 24 ಗ್ರಾಸ. ಯಾಜ್ಞವಲ್ಕ್ಯ ಸ್ಮೃತಿಯಂತೂ ಎಲ್ಲ ಕಾಲದಲ್ಲೂ ಒಂದೇ ಮುಷ್ಠಿ ಮಾತ್ರದ ಪ್ರಮಾಣವನ್ನು ಅನುಮೋದಿಸಿದೆ. ಮನುಸ್ಮೃತಿ ಮತ್ತು ವಿಷ್ಣುಧರ್ಮ ಸೂತ್ರಗಳ ಅಭಿಪ್ರಾಯದಲ್ಲಿ ಅತಿಕೃಚ್ಛ್ರ ಬ್ರಾಹ್ಮಣನನ್ನು ಕೋಲಿನಿಂದ ಅಥವಾ ಖಡ್ಗದಿಂದ ಹೊಡೆದು ಘಾಸಿಮಾಡಿದ ಪಾತಕಕ್ಕೆ ಪ್ರಾಯಶ್ಚಿತ್ತ. ಗೌತಮ ಧರ್ಮಶಾಸ್ತ್ರದ ರೀತ್ಯಾ ಈ ಪ್ರಾಯಶ್ಚಿತ್ತವನ್ನು ಮಹಾಪಾತಕಗಳನ್ನು ಬಿಟ್ಟು ಎಲ್ಲ ಪಾತಕಗಳ ನಿವಾರಣೆಗೂ ವಿಧಿಸಲಾಗಿದೆ.
ಕೃಚ್ಛ್ರಾತಿ ಕೃಚ್ಛ್ರ
ಬದಲಾಯಿಸಿಗೌತಮ ಧರ್ಮಸೂತ್ರ, ಸಾಮವಿಧಾನ ಬ್ರಾಹ್ಮಣ, ವಸಿಷ್ಠ ಧರ್ಮಸೂತ್ರ-ಇವುಗಳ ಆಧಾರದ ಮೇಲೆ ಕೃಚ್ಛ್ರಾತಿಕೃಚ್ಛ್ರ ವ್ರತಕೃಚ್ಛ್ರದಂತೆಯೇ ಆಚರಿಸತಕ್ಕಂಥದು. ಆದರೆ ನಿರಶನ ವ್ರತದ ದಿನಗಳಲ್ಲಿ ನೀರನ್ನೂ ನಿಷೇಧಿಸಿದೆ. ಯಾಜ್ಞಾವಲ್ಕ್ಯ ಸ್ಮೃತಿ, ದೇವಲ ಸ್ಮೃತಿ ಮತ್ತು ಬ್ರಹ್ಮಪುರಾಣಗಳ ಅಭಿಪ್ರಾಯದಲ್ಲಿ ಈ ಪ್ರಾಯಶ್ಚಿತ್ತ ಕರ್ಮದಲ್ಲಿ ಕೇವಲ ನೀರನ್ನೇ ಕುಡಿದು 21 ದಿನ ಕಳೆಯಬೇಕೆಂದೂ ಇತರರ ಪ್ರಕಾರ 24 ದಿನಗಳವರೆಗೂ ಕಳೆಯಬೇಕೆಂದೂ ವಿದಿಸಿದೆ.ಬ್ರಾಹ್ಮಣನನ್ನು ಆಯುಧದಿಂದ ಹೊಡೆದು ರಕ್ತಸ್ರಾವಗೊಳಿಸುವುದರ ಪ್ರಾಯಶ್ಚಿತ್ತವಾಗಿ ಈ ಕೃಚ್ಛ್ರವನ್ನು ಆಚರಿಸಬೇಕೆಂದು ಮನುಧರ್ಮ ಸೂತ್ರ ಹೇಳಿದೆ. ಆದರೆ ಗೌತಮ ಧರ್ಮಸೂತ್ರ ಸಾಮವಿಧಾನ ಬ್ರಾಹ್ಮಣಗಳ ಪ್ರಕಾರ ಸರ್ವಪಾಪಗಳ ಪರಿಹಾರ್ಥವಾಗಿ ಇದನ್ನು ಆಚರಿಸಬಹುದು.
ಚಾಂದ್ರಾಯಣ
ಬದಲಾಯಿಸಿಚಂದ್ರನ ವೃದ್ಧಿ ಮತ್ತು ಕ್ಷಯದ ಕ್ರಮವನ್ನು ಅನುಸರಿಸುವ ಈ ಪ್ರಾಯಶ್ಚಿತ್ತಕರ್ಮಕ್ಕೆ ಚಾಂದ್ರಾಯಣವೆಂದು ಹೆಸರು. ಚಾಂದ್ರಾಯಣ ಎರಡು ವಿಧವೆಂದು ಮನುಸ್ಮೃತಿಯೂ ಬೌಧಾಯನ ಧರ್ಮಸೂತ್ರವೂ ತಿಳಿಸುತ್ತವೆ. ಮೊದಲನೆಯದು ಪಿಪೀಲಿಕ ಮಧ್ಯ ಚಾಂದ್ರಾಯಣ; ಎರಡನೆಯದು ಯಮಮಧ್ಯ ಚಾಂದ್ರಾಯಣ. ಮನುಸ್ಮೃತಿ ಪಿಪೀಲಿಕ ಮಧ್ಯ (ಇರುವೆಯ ಶರೀರದಂತೆ ಕೊನೆಗಳಲ್ಲಿ ಗಾತ್ರ ಹೆಚ್ಚಿದ್ದು ಮಧ್ಯದಲ್ಲಿ ಗಾತ್ರ ಸಣ್ಣ ಇರುವಂತೆ) ಚಾಂದ್ರಾಯಣವನ್ನು ಈ ರೀತಿ ವಿವರಿಸುತ್ತದೆ : ತ್ರಿಕಾಲಗಳಲ್ಲೂ ಸ್ನಾನಮಾಡುತ್ತ ಹುಣ್ಣಿಮೆ ದಿನ 15 ಗ್ರಾಸಗಳನ್ನುಂಡು ಮಾರನೆಯ ಪಾಡ್ಯದಿಂದ ದಿನ ದಿನಕ್ಕೂ ಒಂದೊಂದು ಗ್ರಾಸವನ್ನು ಕಡಿಮೆ ಮಾಡುತ್ತ ಚತುರ್ದಶಿಯ ದಿನ ಒಂದೇ ಗ್ರಾಸವನ್ನುಂಡು ಅಮಾವಸ್ಯೆಯ ದಿನ ಉಪವಾಸವಿದ್ದು, ಮಾರನೆಯ ಪಾಡ್ಯದಿಂದ ಒಂದೊಂದರಂತೆ ಗ್ರಾಸವನ್ನು ಹೆಚ್ಚು ಮಾಡುತ್ತ ಹುಣ್ಣಿಮೆ ದಿನಕ್ಕೆ 15 ಗ್ರಾಸಗಳನ್ನು ಭುಂಜಿಸತಕ್ಕದ್ದು. ಯಮಮಧ್ಯ ಚಾಂದ್ರಾಯಣದಲ್ಲಿ (ಬೀಜ ಕೊನೆಗಳಲ್ಲಿ ಸಣ್ಣ ಮತ್ತು ಮಧ್ಯದಲ್ಲಿ ದಪ್ಪ ಇರುವಂತೆ) ವ್ರತಾರಂಭದಲ್ಲಿ ನಿರಶನವನ್ನು ಪಾಲಿಸಿ ದಿನಕ್ಕೆ ಒಂದೊಂದು ಗ್ರಾಸವನ್ನು ಹೆಚ್ಚಿಸುತ್ತ ಹುಣ್ಣಿಮೆ ಕಳೆದ ಮೇಲೆ ದಿನ ದಿನಕ್ಕೆ ಒಂದೊಂದು ಗ್ರಾಸವನ್ನು ಕಡಿಮೆ ಮಾಡುತ್ತ ಹೋಗುವ ವಿಧಿ.ಚಾಂದ್ರಾಯಣ ವ್ರತದ ಆಚರಣೆಯಿಂದ ಚಂದ್ರಲೋಕ ಪ್ರಾಪ್ತಿಯಾಗುವುದೆಂದು ಮನುವಿನ ಮತ. ಹಾಗೆಯೇ ಈ ವ್ರತವನ್ನು ಯಾರೂ ಯಾವಾಗಲೂ ಆಚರಿಸಬಹುದೆಂದು, ಇದರಿಂದ ಸರ್ವಪಾತಕಗಳೂ ನಾಶವಾಗಿ ಪುಣ್ಯಸಂಚಯವೂ ಆಗುವುದೆಂದು ಯಾಜ್ಞವಲ್ಕ್ಯನ ಅಭಿಪ್ರಾಯ. ಮನು ಈ ವ್ರತವನ್ನು ಗುರುತಲ್ಪಗಮನ ಅಥವಾ ಸಮಾನವಾದ ಇತರ ಪಾತಕಗಳ ಪರಿಹಾರಕ್ಕೂ ವಿಧಿಸುತ್ತಾನೆ. ಗೌತಮ ಧರ್ಮಸೂತ್ರದ ಪ್ರಕಾರ ಚಾಂದ್ರಾಯಣ ಎಲ್ಲ ಪಾತಕ ನಿವಾರಣೆಗೂ ಸಾಧನ.
ಪ್ರಾಜಾಪತ್ಯ
ಬದಲಾಯಿಸಿಈ ಕೃಚ್ಛ್ರವನ್ನು ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ವಿಷ್ಣುಧರ್ಮಸೂತ್ರ, ಅತಿಸ್ಮೃತಿ, ಶಂಖ ಸ್ಮೃತಿ, ಬೌಧಾಯನ ಧರ್ಮಸೂತ್ರವೇ ಮೊದಲಾದ ಅನೇಕ ಧರ್ಮಶಾಸ್ತ್ರ ಗ್ರಂಥಗಳು ವಿಧಿಸುತ್ತವೆ.ಮನು ಮತ್ತು ವಸಿಷ್ಠರ ಪ್ರಕಾರ ಈ ಕೃಚ್ಛ್ರ 12 ದಿನಗಳ ಪರ್ಯಂತ ನಡೆಸತಕ್ಕುದು. ಮೊದಲ ಮೂರು ದಿನ ಹಗಲಿನ ಸಮಯದಲ್ಲೂ ಅನಂತರದ ಮೂರು ದಿನ ಸಾಯಂಕಾಲದ ಮೇಲೂ ಊಟ ಮಾಡತಕ್ಕದ್ದು. ಆಮೇಲೆ ಮೂರು ದಿನಗಳಲ್ಲಿ ಯಾರಿಗೂ ಬೇಡದೆ ಬಿಟ್ಟ ಪದಾರ್ಥಗಳನ್ನು ಊಟ ಮಾಡತಕ್ಕದ್ದು. ಕೊನೆಯ ಮೂರು ದಿನಗಳಲ್ಲಿ ಉಪವಾಸವಿರತಕ್ಕದ್ದು. ಈ ಪ್ರಾಜಾಪತ್ಯದಲ್ಲಿ ಅನುಲೋಮ, ಪ್ರತಿಲೋಮ ಎಂದು ಎರಡು ವಿಧವುಂಟು. ಪ್ರಾಜಾಪತ್ಯವನ್ನು ಮಹಾಪಾತಕವಾದ ಗುರುತಲ್ಪಗಮನಕ್ಕೆ ವಿಧಿಸಿದೆ. ಗುರುಪತ್ನೀಸಂಸರ್ಗ ಮಾಡಿದವ ಖಟ್ವಾಂಗವೆಂಬ ಆಯುಧವನ್ನು ಹೊತ್ತುಕೊಂಡು, ನಾರು ಬಟ್ಟೆಯನ್ನುಟ್ಟು, ಕ್ಷೌರವಿಲ್ಲದೆ ತಲೆ ಗಡ್ಡಗಳನ್ನು ಬೆಳೆಸಿಕೊಂಡು, ಜಿತೇಂದ್ರಿಯನಾಗಿ ನಿರ್ಜನ ಕಾಡಿನಲ್ಲಿ ಒಂದು ವರ್ಷಕಾಲವಿದ್ದು ವ್ರತನಿಷ್ಠನಾಗಿರಬೇಕೆಂದು ಮನುವಿನ ವಿಧಿ. ಹಾಗೆಯೆ ಜಾತಿಭ್ರಂಶಕರ ಪಾತಕಕ್ಕೂ ಸರ್ಪಾದಿಗಳ ಸಂಹರಣ ಪಾತಕಕ್ಕೂ ಬ್ರಹ್ಮಚಾರಿ ತಿಳಿಯದೆಯೇ ಮದ್ಯವನ್ನಾಗಲಿ ಮಾಂಸವನ್ನಾಗಲಿ ಸೇವಿಸಿದುದಕ್ಕೂ ಈ ವ್ರತವನ್ನು ಮನು ವಿಧಿಸಿದ್ದಾನೆ. ಇದನ್ನು ಸ್ತ್ರೀಯರೂ ಆಚರಿಸಬಹುದೆಂದು ಮನುವಿನ ಮತ. ಸ್ತ್ರೀ ಪರಪುರುಷನೊಡನೆ ಸಂಸರ್ಗ ಮಾಡಿದುದರ ಪ್ರಾಯಶ್ಚಿತ್ತಕ್ಕೆ ಈ ವ್ರತವನ್ನು ಆಚರಿಸಬೇಕೆಂದು ಆತ ಹೇಳುತ್ತಾನೆ.
ಸಾಂತಪನ
ಬದಲಾಯಿಸಿಈ ಕೃಚ್ಛ್ರದಲ್ಲಿ ಮಹಾಸಾಂತಪನ ಅತಿಸಾಂತಪನವೆಂದು ಎರಡು ವಿಧ. ಮನುಸ್ಮೃತಿಯ ಪ್ರಕಾರ ಪಂಚಗವ್ಯ (ಗೋಮೂತ್ರ, ಗೋಮಯ, ಹಾಲು, ಮೊಸರು, ತುಪ್ಪ) ಮತ್ತು ದರ್ಭೆಯ ನೀರುಗಳನ್ನು ಮಿಶ್ರ ಮಾಡಿ ಒಂದು ದಿನ ಕುಡಿದು, ಬೇರೆ ಯಾವುದನ್ನೂ ಸೇವಿಸದೆ, ಮರುದಿನ ಉಪವಾಸವನ್ನು ಆಚರಿಸುವ ವ್ರತವೇ ಸಾಂತಪನ. ಯಾಜ್ಞವಲ್ಕ್ಯ ಸ್ಮೃತಿ ಮತ್ತು ಲೌಗಾಕ್ಷಿ ಗೃಹ್ಯ ಸೂತ್ರಗಳ ಪ್ರಕಾರ ಮಹಾಸಾಂತಪನವೆಂದರೆ 7 ದಿನಗಳ ವ್ರತ. ಮೊದಲ ಆರು ದಿನಗಳಲ್ಲಿ ಪ್ರತ್ಯೇಕವಾಗಿ ಪಂಚಗವ್ಯ ಮತ್ತು ದರ್ಭೆಯ ನೀರನ್ನು ಕುಡಿದು, 7ನೆಯ ದಿನ ಉಪವಾಸ ಮಾಡುವುದು. ಈ 7 ದಿನಗಳ ಕೃಚ್ಛೃವನ್ನು ದೇವಲ ಸ್ಮೃತಿ ಮತ್ತು ಅತ್ರಿ ಸ್ಮೃತಿಗಳೂ ಅನುಮೋದಿಸುತ್ತವೆ. ಆದರೆ ಬೌಧಾಯನ ಧರ್ಮಸೂತ್ರ ಮತ್ತು ಶಂಖ ಸ್ಮೃತಿಗಳು 21 ದಿನಗಳ ಪರ್ಯಂತ ಈ ವ್ರತವನ್ನು ಆಚರಿಸಬೇಕೆಂದು ಹೇಳುತ್ತವೆ. ಮನುಸ್ಮೃತಿ ಪಂಚಗವ್ಯವನ್ನು 3 ದಿನ ಆಹಾರವಾಗಿಯೇ ತೆಗೆದುಕೊಳ್ಳಬೇಕೆಂದು ನಿಯಮಿಸಿ, 15 ದಿನಗಳವರೆಗೂ ಮಹಾ ಸಾಂತಪನವನ್ನು ಆಚರಿಸಬೇಕೆಂದು ವಿಧಿಸುತ್ತದೆ.ಈ ಕೃಚ್ಛ್ರವನ್ನು ಜಾತಿಭ್ರಂಶಕರ ಪಾತಕ ನಿವಾರಣೆಗೂ ಹೆಣ್ಣುಕುದುರೆ ಮುಂತಾದ ಪಶುಗಳನ್ನಾಗಲಿ, ಮುಟ್ಟಾದ ಸ್ತ್ರೀಯನ್ನಾಗಲಿ ಸಂಭೋಗ ಮಾಡಿದ ಪಾತಕಕ್ಕೂ ಸ್ತ್ರೀಯೋನಿಯಲ್ಲದೆ ಬೇರೆಲ್ಲಿಯಾದರೂ ರೇತಸ್ಸೇಚನ ಮಾಡಿದ ಪಾತಕಕ್ಕೂ ವಿಧಿಸಿದೆ.
ತಪ್ತ ಕೃಚ್ಛ್ರ
ಬದಲಾಯಿಸಿಮನು ಧರ್ಮಶಾಸ್ತ್ರದಂತೆ ಈ ವ್ರತವನ್ನಾಚರಿಸುವ ಬ್ರಾಹ್ಮಣ ಮೂರು ದಿನ ಬಿಸಿ ನೀರನ್ನೂ ಮೂರು ದಿನ ಬಿಸಿ ಹಾಲನ್ನೂ ಮೂರು ದಿನ ತುಪ್ಪವನ್ನೂ ಮೂರು ದಿನ ಬಿಸಿ ಗಾಳಿಯನ್ನೂ ಸೇವಿಸುತ್ತ ದಿನಕ್ಕೆ ಒಂದು ಸ್ನಾನ ಮಾಡಬೇಕು. ಈ ವಸ್ತುಗಳ ಪ್ರಮಾಣವನ್ನು ಪರಾಶರ ಸ್ಮೃತಿ ವಿಧಿಸುತ್ತದೆ. ಇದನ್ನೇ ಅತ್ರಿ ಸ್ಮೃತಿಯೂ ಬ್ರಹ್ಮಪುರಾಣವೂ ಅನುಮೋದಿಸುತ್ತವೆ. ಈ ವ್ರತವನ್ನು 12 ದಿನಗಳವರೆಗೂ ದೀರ್ಘಗೊಳಿಸದೆ 4 ದಿನಗಳಲ್ಲೇ ಮುಗಿಸಬಹುದೆಂದು ಯಾಜ್ಞವಲ್ಕ್ಯ ಮತ್ತು ದೇವಲ ಸ್ಮೃತಿಗಳ ಅಭಿಪ್ರಾಯ.ಹಸಿಮಾಂಸ ತಿನ್ನುವ ನಾಯಿ, ಕೋಳಿ, ಕಾಗೆ ಮತ್ತು ಕತ್ತೆಗಳ ಮಾಂಸವನ್ನು ತಿನ್ನುವ ಪಾತಕಕ್ಕೆ ತಪ್ತಕೃಚ್ಛ್ರವನ್ನು ಮನು ವಿಧಿಸಿದ್ದಾನೆ. ಪಂಚಗವ್ಯ ವಸ್ತುಗಳಲ್ಲೊಂದನ್ನು ಚೆನ್ನಾಗಿ ಕುದಿಸಿ ತನ್ನ ಪ್ರಾಣ ಹೋಗುವ ತನಕ ಕುಡಿಯಬೇಕೆಂದು ಮದ್ಯಪಾನ ಮಾಡಿದ ಬ್ರಾಹ್ಮಣನಿಗೆ ವಿಧಿಸಿದ್ದಾನೆ, ಮನು.ಈ ರೀತಿಯಲ್ಲಿ ಅನೇಕ ಕೃಚ್ಛ್ರಗಳನ್ನು ಭಾರತೀಯ ಪ್ರಾಚೀನ ಧರ್ಮಶಾಸ್ತ್ರಕಾರರು ವಿಧಿಸಿದ್ದರೂ ಎಲ್ಲವನ್ನೂ ಇಲ್ಲಿ ಪರಿಶೀಲಿಸುವ ಉದ್ದೇಶವಿಲ್ಲ. ಕೃಚ್ಛ್ರಗಳ ಲಕ್ಷಣದ ಸೂಕ್ಷ್ಮ ಪರಿಚಯ ಮಾತ್ರ ಸದ್ಯದ ಗುರಿ. ಅನೇಕ ಬಗೆಯಾದ ಕಠಿಣ ವ್ರತಗಳನ್ನು ಪ್ರತ್ಯೇಕ ಹೆಸರಿನಿಂದಲೇ ಅಲ್ಲದೆ ಹಲವು ಇತರ ಪಾತಕಗಳಿಗೆ ವಿಧಿಸಿರುವುದನ್ನೂ ಧರ್ಮಶಾಸ್ತ್ರಗಳಲ್ಲಿ ಕಾಣಬಹುದು. ಉದಾಹರಣೆಗೆ ಗುರುತಲ್ಪಗಮನದ ಪ್ರಾಯಶ್ಚಿತ್ತಕ್ಕಾಗಿ ವಿಧಿಸಿದ ಈ ವಿಧಿಯನ್ನು ಗಮನಿಸಬಹುದು. ಪಾತಕಿ ತನ್ನ ದುಷ್ಕೃತಿಯನ್ನು ಪ್ರಕಟಿಸಿಕೊಂಡು ಬೆಂಕಿಯಲ್ಲಿ ಕಾಯಿಸಿದ ಕಬ್ಬಿಣದ ಮಂಚದ ಮೇಲೆ ಮಲಗಿ ಅಥವಾ ಬೆಂಕಿಯಲ್ಲಿ ಕಾಯಿಸಿದ ಕಬ್ಬಿಣದ ಸ್ತ್ರೀಪ್ರತಿಮೆಯನ್ನು ತಬ್ಬಿಕೊಂಡು ಸಾಯಬೇಕೆಂದೂ ಅಥವಾ ತಾನೇ ತನ್ನ ಲಿಂಗ, ವೃಷಣಗಳನ್ನು ಕೊಯ್ದುಕೊಂಡು ತನ್ನ ಬೊಗಸೆಯಲ್ಲಿಟ್ಟುಕೊಂಡು ತನ್ನ ದೇಹ ಬೀಳುವ ತನಕ ನೆಟ್ಟಗೆ ನಡೆಯುತ್ತ ನೈಋತ್ಯ ದಿಕ್ಕಿಗೆ ಹೋಗಿ ಸಾಯಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಮಹಾಪಾತಕವೆಂಬ ಬ್ರಹ್ಮಹತ್ಯೆಗೆ ಈ ಪ್ರಾಯಶ್ಚಿತ್ತ ವಿಧಿಸಿದೆ: ಕೊಂದವ ಕಾಡಿನಲ್ಲಿ ವಾಸಿಸುತ್ತ ಕಪಾಲಧಾರಿಯಾಗಿ ಕಾಡಿನ ವಸತಿಗಳಲ್ಲಿಯೇ ಭಿಕ್ಷೆಯನ್ನು ಯಾಚಿಸುತ್ತ ಹನ್ನೆರಡು ವರ್ಷ ವನವಾಸ ಮಾಡಬೇಕು. ಅಥವಾ ಪ್ರಜ್ವಲಿಸುವ ಅಗ್ನಿಯಲ್ಲಿ ತಲೆಯನ್ನು ಬಗ್ಗಿಸಿಕೊಂಡು ಮೂರು ಸಲ ತನ್ನ ದೇಹವನ್ನು ಸಮರ್ಪಿಸಬೇಕು. ಇತ್ಯಾದಿಗಳು ಮನುವಿನಲ್ಲಿವೆ.
ಹೀನಕಾರ್ಯಗಳಿಗೆ ಪ್ರಾಯಶ್ಚಿತ್ತರೂಪವಾದ ಕೆಲವು ಶಿಕ್ಷೆಗಳು
ಬದಲಾಯಿಸಿಧರ್ಮಶಾಸ್ತ್ರಕಾರರು ಈ ಕೃಚ್ಛ್ರಗಳನ್ನು ಯಾವ ಆಧಾರದ ಮೇಲೆ ವಿಧಿಸಿದರು? ಪ್ರಾಯಶ್ಚಿತ್ತರೂಪವೆಂದು ಕೃಚ್ಛ್ರವನ್ನು ಆಚರಿಸಿದ ಮಾತ್ರಕ್ಕೆ ಗಳಿಸಿದ ಪಾಪ ಪರಿಹಾರವಾಗ ಬಲ್ಲುದೆ? ತಿಳಿಯದೆ ಮಾಡಿದ ಪಾಪಕ್ಕೆ ಪರಿಹಾರ ಸಿಗಬಹುದೆಂಬ ಭರವಸೆಯಿಟ್ಟು ಕೊಂಡರೂ ತಿಳಿದು ತಿಳಿದೂ ಮಾಡುವ ಅನೇಕ ದುಷ್ಕರ್ಮಗಳಿಗೆ ಪರಿಹಾರ ಸಿಗುವುದೇ? ಪ್ರಾಯಶ್ಚಿತ್ತ ಕರ್ಮದಲ್ಲಿ ಅಂಥ ಪಾಪನಿವಾರಣಾ ಶಕ್ತಿ ಇದೆಯೇ? ಧರ್ಮಶಾಸ್ತ್ರಕಾರರ ವಚನಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿರುವ ಈ ಆಧುನಿಕ ಕಾಲದಲ್ಲಿ, ಇಂಥ ಸಂಶಯಗಳು ಉದ್ಛವಿಸುವುದು ಸಹಜ. ಈ ಪ್ರಶ್ನೆಗಳಿಗೆ ಧರ್ಮಶಾಸ್ತ್ರಕಾರರೇ ಏನಾದರೂ ಉತ್ತರ ನೀಡುವರೇ?ಕೃಚ್ಛ್ರಗಳೆಂದರೆ ಮಾಡಿದ ಹೀನಕಾರ್ಯಗಳಿಗೆ ಪ್ರಾಯಶ್ಚಿತ್ತರೂಪವಾದ ಕೆಲವು ಶಿಕ್ಷೆಗಳು. ಒಂದು ಕರ್ಮಕ್ಕೆ ತಕ್ಕ ಫಲ ಕಾರಣಕಾರ್ಯ ಸಂಬಂಧದಿಂದ ಸಿದ್ಧವೆನ್ನುವುದು ಒಪ್ಪತಕ್ಕ ಮಾತು. ಇದನ್ನು ಯಾವುದಾದರರೊಂದು ಪ್ರಮಾಣ ಗ್ರಂಥದ ಆಧಾರದ ಮೇಲೆಯೇ ಸಿದ್ಧಮಾಡಬೇಕಾಗಿಲ್ಲ. ಆದರೂ ಧರ್ಮಶಾಸ್ತ್ರಕಾರರು ತಮ್ಮ ವಿಧಿಗಳನ್ನು ಶ್ರುತಿಯಾದ ವೇದದ ಆಧಾರದ ಮೇಲೆ ಹೇಳಿರುವಂತೆ ತೋರುತ್ತದೆ. ಗೌತಮ ಧರ್ಮಸೂತ್ರಗಳು ಅಂಥ ಆಧಾರವನ್ನು ತೋರಿಸಿಕೊಡುತ್ತವೆ. ಇದನ್ನು ವಸಿಷ್ಠ ಧರ್ಮಸೂತ್ರಗಳೂ ಅನುಮೋದಿಸುತ್ತವೆ. ಶ್ರುತಿ ನಿದರ್ಶನವನ್ನು ಮನುವೂ ಹೇಳುತ್ತಾನೆ. ಶ್ರುತ್ಯಾಧಾರ ಹೇಗಾದರೂ ಇರಲಿ, ನಮ್ಮ ಅನುಭವದಲ್ಲಿಯೇ ದುಷ್ಕರ್ಮಗಳಿಂದ ಅಹಿತವಾದುದನ್ನೂ ಸತ್ಕರ್ಮಗಳಿಂದ ಹಿತವಾದುದನ್ನೂ ನಾವೇ ಕಂಡಿರಬಹುದು. ಆದ್ದರಿಂದ ಪಾತಕ ಕರ್ಮಗಳಿಗೆ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳಬಹುದು. ಹೀಗೆ ಒಪ್ಪಿದಲ್ಲಿ ಬಾಳಿನಲ್ಲಿ ಸಂಕೀರ್ಣತೆ ಕಡಿಮೆಯಾಗಿ ಸರಳತೆ ಹೆಚ್ಚುವುದು. ಅಥವಾ ನಮ್ಮಲ್ಲಿ ವಿಮರ್ಶಾಬುದ್ಧಿಯ ಕೈಯೇ ಮೇಲಾದಲ್ಲಿ, ಪ್ರಾಯಶ್ಚಿತ್ತ ಕರ್ಮಗಳಿಗೆ ನಿಜವಾಗಿಯೂ ಪಾಪ ಪರಿಹಾರಕ ಶಕ್ತಿಯಿದೆಯೇ, ಎನ್ನುವ ಸಂಶಯ ನಮ್ಮನ್ನು ಎದುರಿಸಬಹುದು. ಅದಕ್ಕೆ ಧರ್ಮಶಾಸ್ತ್ರಕಾರರು ಇಬ್ಬಗೆಯ ಉತ್ತರವನ್ನು ಕೊಟ್ಟಿದ್ದಾರೆ. ಹಲವು ಧರ್ಮಶಾಸ್ತ್ರಕಾರರಂತೂ ನಿಷ್ಕಾಪಟ್ಯದಿಂದ ನೇರವಾದ ಉತ್ತರವನ್ನೇ ನೀಡಿದ್ದಾರೆ. ಗೌತಮ ಧರ್ಮಸೂತ್ರ, ವಸಿಷ್ಠ ಧರ್ಮಸೂತ್ರ, ಬೌಧಾಯನ ಸ್ಮೃತಿಗಳು ಹೇಳುವಂತೆ ಪ್ರಾಯಶ್ಚಿತ್ತಗಳು ಪಾತಕಗಳಿಗೆ ಪರಿಹಾರ ನೀಡಲಾರವು; ಅವನ್ನು ಅನುಭವಿಸಿಯೇ ತೀರಬೇಕು. ಯಜ್ಞವಲ್ಕ್ಯ ಹೇಳುವಂತೆ ಕಾಮತಃ ಎಂದರೆ ತಿಳಿದು ತಿಳಿದೂ ಮಾಡುವ ಪಾತಕಕ್ಕೆ ಪರಿಹಾರ ಎಂದಿಗೂ ಸಿಗಲಾರದು.
ಧರ್ಮಶಾಸ್ತ್ರಕಾರರ ಉದ್ದೇಶ
ಬದಲಾಯಿಸಿಹಾಗಾದರೆ, ಇಷ್ಟೆಲ್ಲವನ್ನೂ ಬಲ್ಲ ಧರ್ಮಶಾಸ್ತ್ರಕಾರರು ಯಾವ ಅರ್ಥದಲ್ಲಿ ಅಥವಾ ಯಾವ ಉದ್ದೇಶದಿಂದ ಪ್ರಾಯಶ್ಚಿತ್ತ ಕೃಚ್ಛ್ರಗಳನ್ನು ವಿಧಿಸಿದರೆನ್ನುವುದು ಸಹಜವಾದ ಪ್ರಶ್ನೆ. ಈ ಪ್ರಶ್ನೆಗೆ ಮೂರು ತೆರೆನಾದ ಉತ್ತರ ನೀಡಿರುವುದು ಧರ್ಮಶಾಸ್ತ್ರಗಳಲ್ಲಿಯೇ ಕಂಡುಬರುತ್ತದೆ :
- 1 ಸಮಾಜದ ಸುಸ್ಥಿರತೆಗೆ. ಸಮಾಜದ ಸಹಜೀವನದಲ್ಲಿ ಹಲವು ನಿಯಮಗಳು ಅಗತ್ಯ. ಅಂಥ ನಿಯಮಗಳಿಗೆ ಒಳಪಟ್ಟವನಿಗೆ ಮಾತ್ರ ಸಮಾಜಜೀವನದ ಸೌಲಭ್ಯ. ಸೌಭಾಗ್ಯ. ಇದನ್ನು ಅಲ್ಲಗಳೆದವನಿಗೆ ಇವು ಹೇಗೆ ಲಭಿಸಬೇಕು? ಮಕ್ಕಳನ್ನು, ಮನುಷ್ಯರನ್ನು ಕೊಲ್ಲುವವನನ್ನು ಸಮಾಜದಿಂದ ಹೊರಗಿಡಿ-ಎಂದು ಮನು ಹೇಳುತ್ತಾನೆ. ಪ್ರಾಯಶ್ಚಿತ್ತದಿಂದ ಪಾಪವಿಮೋಚನೆ ಸಿಗದೆ ಹೋದರೂ ಸಮಾಜದಲ್ಲಿ ಪ್ರವೇಶ ಸಿಗುವ ಮಾರ್ಗವಿದೆ ಎಂದು ಯಾಜ್ಞವಲ್ಕ್ಯಸ್ಮೃತಿಯ ಟೀಕೆಯಾದ ಮಿತಾಕ್ಷರ ಹೇಳುತ್ತದೆ.
- 2. ಪಾತಕ ಮಾಡಿದವ ಪರಿತಪಿಸುವ ಅಂತಃಕರಣವುಳ್ಳವನಾದಲ್ಲಿ ಆತನ ಅಂತಶ್ಯುದ್ಧಿಗಾದರೂ ಪ್ರಾಯಶ್ಚಿತ್ತವನ್ನು ವಿಧಿಸಿರಬಹುದು. ಯಾಜ್ಞವಲ್ಕ್ಯ ಹೇಳುವಂತೆ ಪ್ರಾಯಶ್ಚಿತ್ತ ಒಬ್ಬನನ್ನು ತೃಪ್ತಿಪಡಿಸೀತು : ಅಥವಾ ಸಮಾಜವನ್ನು ತೃಪ್ತಿಪಡಿಸೀತು. ಅಥವಾ
- 3 ಎಲ್ಲಕ್ಕಿಂತ ಹೆಚ್ಚಾಗಿ ಪಾತಕಿಯ ಮಾನಸಿಕ ದುರ್ಭರತೆಯನ್ನು ಕಡಿಮೆ ಮಾಡುವ ಸಾಧನವಾಗಿ ಪ್ರಾಯಶ್ಚಿತ್ತವನ್ನು ವಿಧಿಸಿರಬಹುದು. ಈ ವಿಷಯದಲ್ಲಿ ಪರಾಶರ ಮಾಧವೀಯ ಎಂಬ ಗ್ರಂಥ ನೀಡುವ ಪ್ರಾಯಶ್ಚಿತ್ತದ ವಿವರಣೆ ಬಹಳ ಸೂಕ್ತವಾಗಿದೆ: ಪರಿತಪಿಸುವ ಪಾತಕಿಗಳ ಚಿತ್ತವನ್ನು ಪ್ರಾಯಶಃ ಹಗುರಗೊಳಿಸಿ ಮಾಸಿಕ ಸ್ವಾಸ್ಥ್ಯವನ್ನು ನೀಡಬಹುದಾದ್ದರಿಂದ ಅಂಥ ಕರ್ಮಕ್ಕೆ ಪ್ರಾಯಶ್ಚಿತ್ತ ಎಂಬ ಹೆಸರಿರಬಹುದು-ಪ್ರಾಯಶಶ್ಚ ಸಮಂ ಚಿತ್ತಂ ಚಾರಯಿತ್ವಾ ಪ್ರದೀಯತೇ. ಈ ವಿವರಣೆಯನ್ನು ನಾವು ಒಪ್ಪಬಹುದೆಂದು ನಮಗೆ ಅನಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ http://www.kanaja.in/%E0%B2%A7%E0%B2%B0%E0%B3%8D%E0%B2%AE%E0%B2%BE%E0%B2%AE%E0%B3%83%E0%B2%A4-%E0%B2%B8%E0%B2%BE%E0%B2%82%E0%B2%B8%E0%B3%8D%E0%B2%95%E0%B3%83%E0%B2%A4%E0%B2%BF%E0%B2%95-%E0%B2%AE%E0%B3%81%E0%B2%96-8/
- ↑ http://kannada.webdunia.com/dasara-article/%E0%B2%A8%E0%B3%8B%E0%B2%A1-%E0%B2%AC%E0%B2%A8%E0%B3%8D%E0%B2%A8%E0%B2%BF-%E0%B2%AE%E0%B3%88%E0%B2%B8%E0%B3%82%E0%B2%B0%E0%B3%81-%E0%B2%A6%E0%B2%B8%E0%B2%B0%E0%B2%BE-110100400081_2.html