ಕಜ್ಜಿಉಣ್ಣಿ
ಕಜ್ಜಿಉಣ್ಣಿ(ಸಾರ್ಕಾಪ್ಟೀಸ್ ಸ್ಕೇಬಿಯೈ) | |
---|---|
![]() | |
Egg fossil classification | |
Kingdom: | Animalia
|
Phylum: | |
Class: | |
Subclass: | |
Order: | |
Family: | |
Genus: | |
Species: | S. scabiei
|
Binomial nomenclature | |
Sarcoptes scabiei De Geer, 1778
|
ಕಜ್ಜಿ ಉಣ್ಣಿ : ಅರ್ಯಾಕ್ನಿಡ ವರ್ಗದ ಆಕರೈನ ಗಣಕ್ಕೆ ಸೇರಿದ ಸಂಧಿಪದಿಗಳು, ಇವನ್ನು ಸಾರ್ಕಾಪ್ಟಿಡೀ ಕುಟುಂಬಕ್ಕೆ ಸೇರಿಸಲಾಗಿದೆ. ಪಕ್ಷಿಗಳು, ಸ್ತನಿಗಳು ಮುಂತಾದ ಪ್ರಾಣಿಗಳ ಶರೀರದ ಮೇಲೆ ಇವು ಪರತಂತ್ರ ಜೀವಿಗಳಾಗಿ ವಾಸಿಸುತ್ತವೆ. ಸಾರ್ಕಾಪ್ಟೀಸ್ ಸ್ಕೇಬಿಯೈ ಎಂಬ ಪ್ರಭೇದ ಮನುಷ್ಯ, ಸಾಕುಪ್ರಾಣಿಗಳು ಮತ್ತು ಕಾಡುಮೃಗಗಳಲ್ಲಿ ಕಜ್ಜಿರೋಗವನ್ನು ತರುತ್ತದೆ. ಈ ಪ್ರಭೇದದಲ್ಲಿ ಅನೇಕ ಬುಡಕಟ್ಟುಗಳುಂಟು. ಇವು ನಿರ್ದಿಷ್ಟವಾದ ಪ್ರಾಣಿ ಪ್ರಭೇದಗಳಲ್ಲಿ ಪರತಂತ್ರ ಜೀವನವನ್ನು ನಡೆಸುತ್ತವೆ. ಕಜ್ಜಿ ಉಣ್ಣಿಗಳು ಸಾಮಾನ್ಯವಾಗಿ ಚರ್ಮದ ಹೊರಪದರದಲ್ಲಿ ಹುದುಗಿಕೊಂಡು ವಾಸಿಸುತ್ತವೆ. ಇವುಗಳ ಬಣ್ಣ ಬಿಳುಪು.
ಲಕ್ಷಣಗಳುಸಂಪಾದಿಸಿ
ಸ್ಥೂಲವಾಗಿ ಉಣ್ಣಿಯ ದೇಹ ಆಮೆಯಾಕಾರದಲ್ಲಿದ್ದು ಉದರಭಾಗ ಚಪ್ಪಟೆ ಯಾಗಿಯೂ ಬೆನ್ನುಭಾಗ ಉಬ್ಬಿ ಕೊಂಡೂ ಇವೆ. ಬೆನ್ನುಭಾಗದ ಮೇಲೆಲ್ಲ ಸೂಕ್ಷ್ಮವಾದ ಸುಕ್ಕುಗಳಿವೆ. ಅಲ್ಲದೆ ಮೈಮೇಲೆ ಮುಳ್ಳುಗಳೂ ಬಿರುಗೂದಲುಗಳೂ ಇವೆ. ಇವುಗಳ ಸಂಖ್ಯೆ ಮತ್ತು ದೇಹದ ಮೇಲೆ ಇವು ಹರಡಿರುವ ರೀತಿಯ ಆಧಾರದ ಮೇಲೆ ಕಜ್ಜಿ ಉಣ್ಣಿಯನ್ನು ವಿವಿಧ ಬುಡಕಟ್ಟುಗಳಾಗಿ ವಿಂಗಡಿಸುತ್ತಾರೆ. ಚರ್ಮಕ್ಕೆ ಅಂಟಿಕೊಳ್ಳಲು ಉಣ್ಣಿಗೆ ಮುಳ್ಳುಗಳು ಸಹಾಯಕವಾಗಿವೆ. ಬಲು ಪುಟ್ಟದಾದ ಇದರ ದೇಹದ ಮುಂತುದಿಯಲ್ಲಿ ತುಂಬ ಚಿಕ್ಕ ತಲೆ ಇದೆ. ತಲೆಯ ತುದಿಯಲ್ಲಿ ಒಂದು ಜೊತೆ ಇಕ್ಕಳಕೊಂಡಿಗಳೂ (ಕಿಲಿಸರಿ) ಒಂದು ಜೊತೆ ಮೋಟಾದ ಸ್ಪರ್ಶಾಂಗಗಳೂ ಇವೆ. ಇವಕ್ಕೆ ಕಣ್ಣುಗಳೇ ಇಲ್ಲ. ದೇಹದ ಮುಂಭಾಗದಲ್ಲಿ ಎರಡು ಜೊತೆ ಮತ್ತು ಹಿಂಭಾಗದಲ್ಲಿ ಎರಡು ಜೊತೆ ಹೀಗೆ ಒಟ್ಟು ನಾಲ್ಕು ಜೊತೆ ಕಾಲುಗಳಿವೆ. ಹೆಣ್ಣು ಉಣ್ಣಿಯಲ್ಲಿ ಹಿಂಭಾಗದ ಎರಡು ಜೊತೆ ಕಾಲುಗಳಲ್ಲಿ ಬಿರುಗೂದಲುಗಳಿವೆ. ಗಂಡಿನಲ್ಲಿ ಹಿಂಭಾಗದ ಒಂದು ಜೊತೆ ಕಾಲುಗಳಲ್ಲಿ ಮಾತ್ರ ಬಿರುಗೂದಲುಗಳಿವೆ. ಉಳಿದೆಲ್ಲ ಕಾಲುಗಳಲ್ಲಿಯೂ ಹೀರುಬಟ್ಟಲುಗಳಿವೆ (ಸಕರ್ಸ್).
ಸಂತಾನೋತ್ಪತ್ತಿಸಂಪಾದಿಸಿ
ಕಜ್ಜಿ ಉಣ್ಣಿಯಲ್ಲಿ ಲಿಂಗಭೇದವಿದೆ, ಹೆಣ್ಣು ಗಂಡಿಗಿಂತ ಗಾತ್ರದಲ್ಲಿ ದೊಡ್ಡದು. ಸಂಭೋಗಕ್ರಿಯೆಯ ಅನಂತರ ಹೆಣ್ಣು ಮನುಷ್ಯನ ಚರ್ಮದಲ್ಲಿ ಚಿಕ್ಕ ಗುಂಡಿ ತೋಡಿ, ಅದರಲ್ಲಿ 10-25 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು 3-4 ದಿನಗಳಲ್ಲಿ ಒಡೆಯುತ್ತವೆ. ಇವುಗಳಿಂದ ಹೊರಬಂದ ಡಿಂಭಗಳು ವಯಸ್ಕ ಪ್ರಾಣಿಯನ್ನೇ ಹೋಲಿದರೂ ಮೂರು ಜೊತೆ ಕಾಲುಗಳನ್ನು ಮಾತ್ರ ಹೊಂದಿವೆ. ಮುಂದಿನ ಎರಡು ಜೊತೆ ಕಾಲುಗಳಲ್ಲಿ ಹೀರುಬಟ್ಟಲುಗಳಿವೆ. 2-3 ದಿನಗಳ ಅನಂತರ ಡಿಂಭ ಪೊರೆಬಿಟ್ಟು, ಹೊಸಚರ್ಮ ಬೆಳೆಸಿಕೊಂಡು, ಎಂಟು ಕಾಲುಗಳುಳ್ಳ ಅರ್ಭಕ (ನಿಂಫ್) ಆಗುತ್ತದೆ. ಇದು ಎರಡು-ಮೂರು ಸಾರಿ ಪೊರೆ ಕಳಚಿಕೊಂಡು ವಯಸ್ಕ ಪ್ರಾಣಿಯಾಗಿ ಮಾರ್ಪಾಟಾಗುತ್ತದೆ.
ರೋಗಗಳುಸಂಪಾದಿಸಿ
ಈ ಉಣ್ಣಿಗಳಿಂದ ಮನುಷ್ಯನಿಗೆ ಬರುವ ಕಜ್ಜಿ ಹಿಂದಿನ ಕಾಲದಿಂದಲೂ ಜನರಿಗೆ ಗೊತ್ತಿದೆ. ಇದರ ಕಷ್ಟ ಅನುಭವಿಸಿದವಗೇ ಗೊತ್ತು. ಕಜ್ಜಿಯಿಂದ ಪೀಡಿತನಾದ ರೋಗಿಯ ಸಂಪರ್ಕದಿಂದ ಅಥವಾ ಆತನ ಉಡಿಗೆಗಳನ್ನು ಮುಟ್ಟುವುದರಿಂದ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ರೋಗದ ಮುಖ್ಯ ಲಕ್ಷಣ-ತುರಿಕೆ, ಕಡಿತ ಮತ್ತು ದೇಹದ ಮೇಲ್ಭಾಗದಲ್ಲಿ ತೋರುವ ಹುಣ್ಣು ಅಥವಾ ವ್ರಣ. ಅಲ್ಲದೆ ಕಜ್ಜಿಉಣ್ಣಿಗಳು ತೋಡಿದ ಗುಂಡಿಗಳಲ್ಲಿ ಸ್ಟ್ರೆಪ್ಟೊಕಾಕೈಗಳೆಂಬ ಬ್ಯಾಕ್ಟೀರಿಯ ಸೇರಿಕೊಂಡು ಬೇರೆ ಬೇರೆ ಬಗೆಯ ರೋಗಗಳು ಬರುವ ಸಾಧ್ಯತೆಯೂ ಉಂಟು. ಕ್ರಮವಾಗಿ ಸ್ನಾನ ಮಾಡುವುದರಿಂದ ಕಜ್ಜಿಯ ರೋಗವನ್ನು ಬಹುಮಟ್ಟಿಗೆ ತಡೆಗಟ್ಟಬಹುದು. ಗಂಧಕದ ಮುಲಾಮು, ಮಾರ್ಕುಸ್ಸೆನ್ ಮುಲಾಮು, ಬೆಂಜೈóಲ್ ಬೆಂಜೊóಯೇಟ್ ಡೈಮೀಥೈಲ್-ಡೈಫೆನಿಲಿನ್ ಡೈಸಲ್ಪೈಡ್ ಮುಂತಾದುವು ಕಜ್ಜಿಗೆ ಗೊತ್ತಾಗಿರುವ ಮದ್ದುಗಳಲ್ಲಿ ಕೆಲವು.