ಕಂದು ಒಂದು ಮಿಶ್ರ ವರ್ಣವಾಗಿದೆ. ಮುದ್ರಣ ಮತ್ತು ಚಿತ್ರಕಲೆಯಲ್ಲಿ ಬಳಸಲಾದ ಸಿಎಮ್‍ವೈಕೆ ಬಣ್ಣ ಮಾದರಿಯಲ್ಲಿ, ಕೆಂಪು, ಕಪ್ಪು, ಮತ್ತು ಹಳದಿಯನ್ನು ಸೇರಿಸಿ ಅಥವಾ ಕೆಂಪು, ಹಳದಿ, ಮತ್ತು ನೀಲಿಯನ್ನು ಸೇರಿಸಿ ಕಂದು ಬಣ್ಣವನ್ನು ಸೃಷ್ಟಿಸಲಾಗುತ್ತದೆ. ಟಿವಿ ಪರದೆಗಳು ಮತ್ತು ಕಂಪ್ಯೂಟರ್ ಪ್ರದರ್ಶಕ ಘಟಕಗಳ ಮೇಲೆ ಬಣ್ಣಗಳನ್ನು ಪ್ರಕ್ಷೇಪಿಸಲು ಬಳಸಲಾದ ಆರ್‌ಜಿಬಿ ಬಣ್ಣ ಮಾದರಿಯಲ್ಲಿ, ಕೆಂಪು ಮತ್ತು ಹಸಿರು ಬಣ್ಣಗಳನ್ನು ನಿರ್ದಿಷ್ಟ ಪ್ರಮಾಣಗಳಲ್ಲಿ ಸೇರಿಸಿ ಕಂದು ಬಣ್ಣವನ್ನು ಸೃಷ್ಟಿಸಲಾಗುತ್ತದೆ. ಕಂದು ಬಣ್ಣವು ಪ್ರಕೃತಿಯಲ್ಲಿ ವ್ಯಾಪಕವಾಗಿ ಕಾಣುತ್ತದೆ, ದಾರು, ಮಣ್ಣು, ಮಾನವ ಕೂದಲಿನ ಬಣ್ಣ, ಕಣ್ಣಿನ ಬಣ್ಣ ಮತ್ತು ಚರ್ಮದ ವರ್ಣದ್ರವ್ಯದಲ್ಲಿ. ಕಂದು ಗಾಢ ಬಣ್ಣದ ಕಟ್ಟಿಗೆ ಅಥವಾ ಫಲವತ್ತಾದ ಮಣ್ಣಿನ ಬಣ್ಣವಾಗಿದೆ. ಯೂರೋಪ್ ಮತ್ತು ಅಮೇರಿಕದಲ್ಲಿನ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆಗಳ ಪ್ರಕಾರ, ಕಂದು ಬಣ್ಣವು ಸಾರ್ವಜನಿಕರ ಅತ್ಯಂತ ಕಡಿಮೆ ಇಷ್ಟದ ಬಣ್ಣವಾಗಿದೆ; ಈ ಬಣ್ಣವನ್ನು ಹಲವುವೇಳೆ ಸರಳತೆ, ಗ್ರಾಮ್ಯ ಮತ್ತು ಬಡತನದೊಂದಿಗೆ ಸಂಬಂಧಿಸಲಾಗುತ್ತದೆ.[]

ಕಾಫಿ ಬೀಜದ ಬಣ್ಣ ಕಂದು

ಇತಿಹಾಸಪೂರ್ವ ಕಾಲದಿಂದ ಕಂದು ಬಣ್ಣವನ್ನು ಕಲೆಯಲ್ಲಿ ಬಳಸಲಾಗಿದೆ. ಕಬ್ಬಿಣದ ಆಕ್ಸೈಡ್ ಮತ್ತು ಮ್ಯಾಂಗನೀಸ್ ಆಕ್ಸೈಡ್‍ನಿಂದ ಸಂಯೋಜನೆಗೊಂಡ ಒಂದು ನೈಸರ್ಗಿಕ ಜೇಡಿಮಣ್ಣಿನ ವರ್ಣದ್ರವ್ಯವಾದ ಅಂಬರ್ ಅನ್ನು ಬಳಸುತ್ತಿದ್ದ ವರ್ಣಚಿತ್ರಗಳು ಕ್ರಿ.ಪೂ. ೪೦,೦೦೦ ದಷ್ಟು ಹಿಂದಿನ ಕಾಲಮಾನದ್ದೆಂದು ನಿರ್ಧರಿಸಲಾಗಿದೆ. ಕಂದು ಬಣ್ಣದ ಕುದುರೆಗಳು ಮತ್ತು ಇತರ ಪ್ರಾಣಿಗಳ ವರ್ಣಚಿತ್ರಗಳನ್ನು ೧೭,೩೦೦ ವರ್ಷಗಳಷ್ಟು ಹಿಂದಿನ ಕಾಲಮಾನದ್ದೆಂದು ನಿರ್ಧರಿಸಲಾದ ಲಾಸ್ಕಾ ಗುಹೆಯ ಗೋಡೆಗಳ ಮೇಲೆ ಪತ್ತೆಹಚ್ಚಲಾಗಿದೆ. ಪ್ರಾಚೀನ ಈಜಿಪ್ಶಿಯನ್ ಸಮಾಧಿ ವರ್ಣಚಿತ್ರಗಳಲ್ಲಿನ ಹೆಣ್ಣು ಆಕೃತಿಗಳು ಕಂದು ಚರ್ಮವನ್ನು ಹೊಂದಿವೆ, ಮತ್ತು ಇವನ್ನು ಅಂಬರ್ ಬಣ್ಣದಿಂದ ಬಿಡಿಸಲಾಗಿದೆ. ಬಣ್ಣಲೇಪಿತ ಗ್ರೀಕ್ ಆ್ಯಂಫ಼ರಾಗಳು ಮತ್ತು ಹೂದಾನಿಗಳ ಮೇಲೆ ಕಪ್ಪು ಆಕೃತಿಗಳಿಗೆ ಹಿನ್ನೆಲೆ ಬಣ್ಣವಾಗಿ, ಅಥವಾ ವಿಲೋಮವಾಗಿ ತಿಳಿ ಕಂದು ಬಣ್ಣವನ್ನು ಹಲವುವೇಳೆ ಬಳಸಲಾಗಿತ್ತು.

ಕಪ್ಪು ಬಣ್ಣದ ನಂತರ ಕಂದು ಬಣ್ಣವು ಮಾನವ ಕೂದಲಿನ ಎರಡನೇ ಅತಿ ಸಾಮಾನ್ಯ ಬಣ್ಣವಾಗಿದೆ. ನೈಸರ್ಗಿಕ ಗಾಢ ವರ್ಣದ್ರವ್ಯವಾದ ಯೂಮೆಲನಿನ್‍ನ ಹೆಚ್ಚಿನ ಪ್ರಮಾಣದಿಂದ, ಮತ್ತು ತಿಳಿ ವರ್ಣದ್ರವ್ಯವಾದ ಫ಼ಿಯೋಮೆಲನಿನ್‍ನ ಕಡಿಮೆ ಪ್ರಮಾಣದಿಂದ ಇದು ಉಂಟಾಗುತ್ತದೆ. ಕಂದು ಯೂಮೆಲನಿನ್ ಐರೋಪ್ಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಮತ್ತು ಕಪ್ಪು ಯೂಮೆಲನಿನ್ ಐರೋಪ್ಯೇತರರ ಕೂದಲಿನಲ್ಲಿ ಅತಿ ಹೆಚ್ಚು ವೇಳೆ ಕಂಡುಬರುತ್ತದೆ. ಇತರ ವರ್ಣದ್ರವ್ಯಗಳ ಅನುಪಸ್ಥಿತಿಯಲ್ಲಿ, ಸ್ವಲ್ಪ ಪ್ರಮಾಣದ ಕಪ್ಪು ಯೂಮೆಲನಿನ್ ಬೂದು ಬಣ್ಣದ ಕೂದಲನ್ನು ಉಂಟುಮಾಡುತ್ತದೆ. ಇತರ ವರ್ಣದ್ರವ್ಯಗಳ ಅನುಪಸ್ಥಿತಿಯಲ್ಲಿ ಸ್ವಲ್ಪ ಪ್ರಮಾಣದ ಕಂದು ಯೂಮೆಲನಿನ್ ಹೊಂಬಣ್ಣದ ಕೂದಲನ್ನು ಉಂಟುಮಾಡುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Heller, Eva, Psychologie de la couleur' -effets et symboliiques, (2009), p. 212-223.