ತೆರಿಗೆ

ರಾಜ್ಯ ಬೊಕ್ಕಸಕ್ಕೆ ಕಡ್ಡಾಯ ಕೊಡುಗೆ
(ಕಂದಾಯ ಇಂದ ಪುನರ್ನಿರ್ದೇಶಿತ)

ತೆರಿಗೆ(tax) ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಕಂದಾಯವು ಸ್ಥೂಲವಾಗಿ ತೆರಿಗೆ ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ (visible) ಮತ್ತು ಅದೃಶ್ಯರೂಪ (Invisible but felt)ದ್ದಾದರೂ ಆಗಿರಬಹುದು. ಸ್ಥಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ ಸುಂಕ ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ತೆರಿಗೆಯ ವಿಧಗಳು

ಬದಲಾಯಿಸಿ

ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.

ಇದಲ್ಲದೇ ಇನ್ನೂ ಅನೇಕ ರೀತಿಯ ತೆರಿಗೆಗಳನ್ನು ಗಮನಿಸಬಹುದಾಗಿದೆ.


ಭೂಕಂದಾಯ

ಬದಲಾಯಿಸಿ

ಇದು ಅತ್ಯಂತ ಪ್ರಾಚೀನ ತೆರಿಗೆ ಎಂಬುದು ಕೆಲವರ ಅಭಿಮತ. ಆದರೆ ತಲೆಗಂದಾಯ ಮತ್ತು ಗುಡಿಸಲು ತೆರಿಗೆ ಭೂಕಂದಾಯಕ್ಕಿಂತ ಪ್ರಾಚೀನವಾದುದು ಎಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಇವುಗಳಲ್ಲಿ ಯಾವುದು ಮೊದಲು ರೂಢಿಗೆ ಬಂತೆಂದು ಹೇಳುವುದು ಕಷ್ಟವಾದರೂ ಇವೆರಡೂ ಪ್ರಾಚೀನ ತೆರಿಗೆಗಳೆಂಬುದರಲ್ಲಿ ಸಂಶಯವಿಲ್ಲ.

ಪ್ರಾಚೀನ ಕಾಲದಿಂದಲೂ ಎಲ್ಲ ರಾಷ್ಟ್ರಗಳಲ್ಲೂ ಭೂಕಂದಾಯ ರಾಜಸ್ವದ ಒಂದು ಮುಖ್ಯ ಮೂಲವಾಗಿದೆ. ಈಗಿನ ದಿನಗಳಲ್ಲಿ ಬೇರೆ ತೆರಿಗೆಗಳಿಂದ ದೊರಕುವ ಆದಾಯ ಹೆಚ್ಚಾಗಿರುವುದರಿಂದ ಭೂಕಂದಾಯದಿಂದ ದೊರಕುವ ಆದಾಯ ಇತರ ತೆರಿಗೆಗಳಿಂದ ದೊರಕುವ ಆದಾಯಕ್ಕೆ ಹೋಲಿಸಿದಾಗ ಕಡಿಮೆಯಾಗಿ ಕಾಣುತ್ತದೆ. ಆದರೂ ಇದರ ಮೂಲಕ ಸರ್ಕಾರ ಆದಾಯ ಪಡೆಯುವುದು ತಪ್ಪಿಲ್ಲ. ಭೂಕಂದಾಯವನ್ನು ಸರ್ಕಾರ ಯಾವ ಆಧಾರದ ಮೇಲೆ ವಿಧಿಸುತ್ತದೆಂಬುದನ್ನು ಅರಿಯುವುದು ಆವಶ್ಯಕ. ಈ ಬಗ್ಗೆ ಎಲ್ಲ ರಾಷ್ಟ್ರಗಳಲ್ಲೂ ಒಂದೇ ಪದ್ಧತಿ ಜಾರಿಯಲ್ಲಿಲ್ಲ: ಭಾರತದಲ್ಲೇ ಎಲ್ಲ ಭಾಗಗಳಲ್ಲೂ ಒಂದೇ ಪದ್ಧತಿ ರೂಢಿಯಲ್ಲಿಲ್ಲ. ಕಂದಾಯವನ್ನು ನಿರ್ಧರಿಸಲು ಅನುಸರಿಸುವ ಆಧಾರ ಕಾಲದಿಂದ ಕಾಲಕ್ಕೆ ಬದಲಾವಣೆಯಾಗಿದೆ. ವಸೂಲಿ ಮಾಡುವ ವಿಧಾನದಲ್ಲೂ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗಿದೆ. ಪ್ರಾರಂಭದಲ್ಲಿ ಭೂವಿಸ್ತೀರ್ಣ ಭೂಕಂದಾಯದ ದರವನ್ನು ನಿರ್ಧರಿಸಲು ಆಧಾರವಾಗಿತ್ತು. ರೋಮಿನಲ್ಲಿ ಒಂದುನೂರು ಎಕರೆಗೆ ಇಂತಿಷ್ಟು ಕಂದಾಯ ಎಂದು ನಿರ್ಧರಿಸಲಾಗುತ್ತಿತ್ತು. ೧೯೧೬ ಕ್ಕೆ ಮೊದಲು ಫ್ರಾನ್ಸಿನಲ್ಲಿ ಭೂಮಿಯ ಮೌಲ್ಯಕ್ಕೆ ಅನುಗುಣವಾಗಿ ಭೂಕಂದಾಯವನ್ನು ನಿರ್ಧರಿಸಲಾಗುತ್ತಿತ್ತು. ಉತ್ಪನ್ನದ ಆಧಾರದ ಮೇಲೆ ಭೂಕಂದಾಯವನ್ನು ವಿಧಿಸುವುದೂ ಇತರ ಪದ್ಧತಿಗಳಂತೆಯೇ ಪ್ರಾಚೀನವಾದುದೆಂದು ಹೇಳಲಾಗಿದೆ. ಭೂಮಿಯ ಸಾರಗುಣ, ನೀರಾವರಿ ಸೌಲಭ್ಯ, ಮಾರುಕಟ್ಟೆಯ ಸಾಮೀಪ್ಯ ಮುಂತಾದ ಅಂಶಗಳನ್ನು ಆಧಾರವಾಗಿ ಪರಿಗಣಿಸುವುದು ಕಾಲಕ್ರಮದಲ್ಲಿ ಜಾರಿಗೆ ಬಂತು. ಭೂಕಂದಾಯವನ್ನು ಪಡೆಯುವ ರೀತಿಯಲ್ಲೂ ಪ್ರಮುಖ ಬದಲಾವಣೆಯುಂಟಾಗಿದೆ. ಪ್ರಾರಂಭದಲ್ಲಿ ಭೂಮಿಯಿಂದ ಪಡೆಯುವ ಧಾನ್ಯದ ರೂಪದಲ್ಲಿ ಕಂದಾಯ ಕೊಡಬೇಕಾಗಿತ್ತು. ಅನಂತರ ಹಣದ ರೂಪದಲ್ಲಿ ಕಂದಾಯ ಕೊಡುವುದು ರೂಢಿಗೆ ಬಂತು.

ಭಾರತದಲ್ಲೂ ಭೂ ಉತ್ಪಾದನೆಯ ಸ್ವಲ್ಪ ಭಾಗವನ್ನು ಕಂದಾಯ ರೂಪದಲ್ಲಿ ಪಡೆಯುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಮನುವಿನ ಪ್ರಕಾರ ಒಟ್ಟು ಭೂ ಉತ್ಪನ್ನದ ಆರನೆಯ ಒಂದು ಭಾಗವನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗಿತ್ತು. ಯುದ್ಧಕಾಲದಲ್ಲಿ ಇದನ್ನು ನಾಲ್ಕನೆಯ ಒಂದು ಭಾಗಕ್ಕೆ ಹೆಚ್ಚಿಸಲಾಗುತ್ತಿತ್ತು. ಒಂದೊಂದು ಹಳ್ಳಿಯೂ ಇಂತಿಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸಲಾಗುತ್ತಿತ್ತು. ಹಳ್ಳಿಯ ಪ್ರತಿ ಭೂಮಾಲೀಕನೂ ಎಷ್ಟು ಕಂದಾಯ ಕೊಡಬೇಕೆಂಬುದನ್ನು ನಿರ್ಧರಿಸಿ ಇಡೀ ಹಳ್ಳಿಯ ಕಂದಾಯವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಒಪ್ಪಿಸುವುದು ಆಗ ಹಳ್ಳಿಯ ಮುಖ್ಯಸ್ಥನ ಕರ್ತವ್ಯ. ಉತ್ಪಾದನೆಯ ಒಂದು ನಿರ್ದಿಷ್ಟ ಭಾಗವನ್ನು ಕೊಡಬೇಕಾಗಿದ್ದುದರಿಂದ ಪ್ರತಿಯೊಬ್ಬನೂ ಕೊಡಬೇಕಾದ ಕಂದಾಯವನ್ನು ನಿರ್ಧರಿಸುವುದು ಸುಲಭ. ರಾಜನಿಂದ ನೇಮಿತನಾದ ಅಧಿಕಾರಿಯ ಸಮ್ಮುಖದಲ್ಲಿ ಕಟಾವಾದ ಬೆಳೆಯನ್ನು ಹರಡಿ ನಿರ್ದಿಷ್ಟವಾದ ಪಾಲನ್ನು ಸರ್ಕಾರಕ್ಕೆ ಒಪ್ಪಿಸಲಾಗುತ್ತಿತ್ತು. ಬೆಳೆ ಕೆಟ್ಟುಹೋದಾಗ ಕಂದಾಯ ಇಲ್ಲವಾಗುತ್ತಿದ್ದುದು ಸ್ವಯಂ ವೇದ್ಯ. ಆದರೆ ಕ್ರಮೇಣ ವ್ಯವಸಾಯ ಅಭಿವೃದ್ಧಿಯಾದಂತೆ ಮತ್ತು ಹೆಚ್ಚು ಹೆಚ್ಚು ಭೂಮಿಯನ್ನು ವ್ಯವಸಾಯಕ್ಕೆ ಉಪಯೋಗಿಸುವುದು ಆರಂಭವಾದ ಮೇಲೆ ಸರಳವಾದ ಹಿಂದಿನ ಪದ್ಧತಿಯನ್ನು ಅನುಸರಿಸುವುದು ಕಷ್ಟವಾಯಿತು. ಕಂದಾಯ ಕೊಡುವುದನ್ನು ತಪ್ಪಿಸಿಕೊಳ್ಳುವುದು ಪ್ರಾರಂಭವಾಯಿತು. ಅಧಿಕಾರಿಗಳೂ ಸರ್ಕಾರಕ್ಕೆ ವಂಚನೆ ಮಾಡಲಾರಂಭಿಸಿದರು. ಆದ್ದರಿಂದ ಬೆಳೆಯ ಆಧಾರದ ಮೇಲೆ ಇಂತಿಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸುವ ಮತ್ತು ಹಣದ ರೂಪದಲ್ಲಿ ಕಂದಾಯ ಪಡೆಯುವ ಪದ್ಧತಿಗಳು ಆಚರಣೆಗೆ ಬಂದುವು. ಅಕ್ಬರನ ಕಾಲದಲ್ಲಿ ಎಲ್ಲ ನೆಲವನ್ನೂ ಅದರ ಸಾರಗುಣದ ಆಧಾರದ ಮೇಲೆ ನಾಲ್ಕು ಗುಂಪಾಗಿ ವಿಂಗಡಿಸಿ ಹಿಂದಿನ ಹತ್ತು ವರ್ಷಗಳ ಉತ್ಪನ್ನದ ಸರಾಸರಿಯನ್ನು ಲೆಕ್ಕ ಹಾಕಿ ಅದರ ಆಧಾರದ ಮೇಲೆ ಕಂದಾಯ ವಿಧಿಸುವುದಕ್ಕಾಗಿ ಉತ್ಪನ್ನವನ್ನು ನಿರ್ಧರಿಸಲಾಗುತ್ತಿದ್ದಿತು. ಈ ಉತ್ಪನ್ನದ ಬೆಲೆಯನ್ನು ನಿರ್ಧರಿಸಲು ಹಿಂದಿನ ಹತ್ತೊಂಬತ್ತು ವರ್ಷಗಳ ಬೆಲೆಯ ಸರಾಸರಿಯನ್ನು ಆಧಾರವಾಗಿಟ್ಟುಕೊಳ್ಳಲಾಗಿತ್ತು. ಮೊಗಲರ ಕಾಲದಲ್ಲಿ ಆದ ಈ ಬದಲಾವಣೆ ಬಹಳ ಕಾಲದವರೆಗೆ ಭೂ ಕಂದಾಯನೀತಿಗೆ ಆಧಾರವಾಗಿತ್ತು. ಈಸ್ಟ್‌ ಇಂಡಿಯ ಕಂಪನಿಯ ಆಳ್ವಿಕೆಯ ಕಾಲದಲ್ಲಿ ಪುನಃ ಭೂ ಕಂದಾಯದ ನೀತಿಯಲ್ಲಿ ಪ್ರಮುಖ ಬದಲಾವಣೆಯಾಯಿತು. ಬಂಗಾಲ, ಬಿಹಾರ ಮತ್ತು ಒರಿಸ್ಸ ಪ್ರದೇಶಗಳಲ್ಲಿ ಖಾಯಂ ತೆರ ಪದ್ಧತಿ ಜಾರಿಗೆ ಬಂತು. ಜಮೀನ್ದಾರರು ಸರ್ಕಾರಕ್ಕೆ ಒಪ್ಪಿಸಬೇಕಾದ ಕಂದಾಯವನ್ನು ಒಂದು ಬಾರಿ ನಿಗದಿ ಮಾಡಿದ ಮೇಲೆ ಎಂದೆಂದಿಗೂ ಅದನ್ನು ಬದಲಾಯಿಸದಿರುವುದು ಈ ಪದ್ಧತಿಯ ಉದ್ದೇಶ. ಮುಂದೆ ಭೂ ಅಭಿವೃದ್ಧಿಯಿಂದ ಲಭಿಸಿದ ಆದಾಯ ಮತ್ತು ಮೌಲ್ಯಗಳ ಹೆಚ್ಚಳದಲ್ಲಿ ಅವರು ಸರ್ಕಾರಕ್ಕೆ ಏನನ್ನೂ ಕೊಡಬೇಕಾಗುತ್ತಿರಲಿಲ್ಲ. ಅವರು ರೈತರಿಂದ ಪಡೆಯುವ ಗುತ್ತಿಗೆಯ ಹನ್ನೊಂದನೆಯ ಹತ್ತು ಭಾಗವನ್ನು ಕಂದಾಯವಾಗಿ ಸರ್ಕಾರಕ್ಕೆ ಒಪ್ಪಿಸಬೇಕಾಗಿದ್ದಿತು. ಈ ದರದ ಕಂದಾಯದ ಹೊರೆ ಅತಿಯೇ ಎನ್ನಬೇಕು. ನಿಗದಿಯಾದ ಅವಧಿಯಲ್ಲಿ ಪಾವತಿ ಮಾಡದಿದ್ದರೆ ಬಾಕಿಗಾಗಿ ಜಮೀನನ್ನು ಸರ್ಕಾರ ಮಾರಾಟ ಮಾಡಬಹುದಾಗಿತ್ತು. ಅತಿಯಾದ ಹೊರೆಯನ್ನು ತಾಳಲಾರದೆ ಅನೇಕರು ಭೂಮಿಯನ್ನು ಕಳೆದುಕೊಂಡರು. ಖಾಯಂ ತೆರ ಪದ್ಧತಿಯನ್ನು ಕ್ರಮೇಣ ಬನಾರಸ್ (ವಾರಾಣಸಿ), ಚೆನ್ನೈ, ಅಸ್ಸಾಂ ಮುಂತಾದ ಪ್ರದೇಶಗಳಿಗೂ ವಿಸ್ತರಿಸಲಾಯಿತು. ಹಲವಾರು ವರ್ಷಗಳ ಅನಂತರ ಕಂಪನಿಯ ಆಡಳಿತ ಸುಭದ್ರಗೊಂಡ ಮೇಲೆ ಖಾಯಂ ಆಗಿ ಕಂದಾಯವನ್ನು ನಿರ್ಧರಿಸುವ ಬದಲಾಗಿ ಕಾಲಕಾಲಕ್ಕೆ ಬದಲಾವಣೆ ಮಾಡುವುದು ಅನುಕೂಲವೆಂದು ಮನಗಾಣಲಾಯಿತು ಮತ್ತು ಮಹಲ್ವಾರಿ ಮತ್ತು ರೈತವಾರಿ ಪದ್ಧತಿಗಳು ಜಾರಿಗೆ ಬಂದುವು. ಒಂದು ಇಡೀ ಹಳ್ಳಿ ಅಥವಾ ಮಹಲ್ ಎಷ್ಟು ಕಂದಾಯ ಕೊಡಬೇಕೆಂದು ನಿರ್ಧರಿಸಲಾಗುತ್ತಿತ್ತು. ಹಳ್ಳಿಯವರೆಲ್ಲರೂ ಒಟ್ಟಾಗಿ ಕಂದಾಯ ಕೊಡಲು ಬದ್ಧರು. ಇದೇ ಮಹಲ್ವಾರಿ ಪದ್ಧತಿ. ರೈತವಾರಿ ಪದ್ಧತಿಯಲ್ಲಿ ಪ್ರತಿ ರೈತನೂ ಎಷ್ಟು ಕಂದಾಯ ಕೊಡಬೇಕೆಂಬುದನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗುತ್ತಿತ್ತು. ಈ ಎರಡು ಪದ್ಧತಿಗಳಲ್ಲೂ ನಿರ್ದಿಷ್ಟ ಅವಧಿಗೆ ಅನ್ವಯಿಸುವಂತೆ ಕಂದಾಯವನ್ನು ನಿರ್ಧರಿಸಿ, ಅವಧಿಯ ಅನಂತರ ಅದನ್ನು ಬದಲಾಯಿಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ವ್ಯಾಪಕವಾದ ಭೂ ಸುಧಾರಣೆಯ ಕ್ರಮಗಳನ್ನು ಕೈಗೊಂಡ ಮೇಲೆ ರೈತರಿಗೂ ಸರ್ಕಾರಕ್ಕೂ ನಡುವೆ ಇದ್ದ ಮಧ್ಯವರ್ತಿಗಳೆಲ್ಲ ಹೋಗಿ ರೈತರೇ ನೇರವಾಗಿ ಸರ್ಕಾರಕ್ಕೆ ಕಂದಾಯ ಕೊಡುವ ಪದ್ಧತಿ ಜಾರಿಗೆ ಬಂದಿದೆ. ಭೂ ಕಂದಾಯವನ್ನು ನಿರ್ಧರಿಸಲು ಭಾರತದ ಎಲ್ಲ ಭಾಗಗಳಲ್ಲೂ ಒಂದೇ ಅಂಶವನ್ನು ಆಧಾರವಾಗಿಟ್ಟುಕೊಂಡಿಲ್ಲ. ಭೂಮಿಯ ಒಟ್ಟು ಉತ್ಪನ್ನ, ನಿವ್ವಳ ಉತ್ಪನ್ನ, ಅದರ ಮೌಲ್ಯ, ಅದರಿಂದ ದೊರಕಬಹುದಾದ ಗೇಣಿ, ನೀರಾವರಿ ಸೌಲಭ್ಯ, ಹವಾಗುಣ, ಮಾರುಕಟ್ಟೆಯ ಸಾಮೀಪ್ಯ, ಸಾರಿಗೆ ಸಂಪರ್ಕ ವ್ಯವಸ್ಥೆ-ಇವೇ ಮುಂತಾದ ಅಂಶಗಳನ್ನು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಂಡು ಒಂದು ಎಕರೆ ಭೂಮಿಗೆ ಕೊಡಬೇಕಾದ ಕಂದಾಯವನ್ನು ನಿರ್ಧರಿಸಲಾಗುತ್ತದೆ. ಒಂದು ಬಾರಿ ನಿರ್ಧರಿಸಿದ ದರವನ್ನು ಒಂದು ನಿಶ್ಚಿತ ಅವಧಿಯವರೆಗೆ ಜಾರಿಗೆ ಕೊಡಲಾಗಿರುತ್ತದೆ. ಮರುತೀರ್ಮಾನ ಮಾಡುವ ಅವಧಿ ಸಾಮಾನ್ಯವಾಗಿ ೩೦ ವರ್ಷ.

ಆರೋಹಿ ತೆರಿಗೆಯ ಲಕ್ಷಣವನ್ನು ಪಡೆದಿಲ್ಲದಿರುವುದು ಭೂ ಕಂದಾಯದ ಒಂದು ಮುಖ್ಯ ದೋಷ. ಅದರ ಹೊರೆ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಆದ್ದರಿಂದ ಭೂಕಂದಾಯವನ್ನು ಕಡಿಮೆ ದರದಲ್ಲಿ ನಿರ್ಣಯಿಸಿ ವ್ಯವಸಾಯೋತ್ಪನ್ನಗಳಿಂದ ಪಡೆಯುವ ಆದಾಯದ ಮೇಲೆ ತೆರಿಗೆ ವಿಧಿಸಬೇಕೆಂಬ ಅಭಿಪ್ರಾಯವಿದೆ. ಭೂಕಂದಾಯವನ್ನು ತೆಗೆದು ಹಾಕಿ ಆರೋಹಿಲಕ್ಷಣವುಳ್ಳ ವ್ಯಾವಸಾಯಿಕ ವರಮಾನ ಮೇಲಿನ ತೆರಿಗೆಯೊಂದನ್ನೇ ವಿಧಿಸಬಹುದೆಂಬ ಅಭಿಪ್ರಾಯವೂ ಇದೆ.

ತಲೆಗಂದಾಯ

ಬದಲಾಯಿಸಿ

ಪ್ರಾಚೀನ ತೆರಿಗೆಗಳಲ್ಲಿ ಒಂದಾದ ತಲೆಗಂದಾಯ ಈಗ ಕೇವಲ ಚಾರಿತ್ರಿಕ ಅಂಶವಾಗಿದೆ. ರೋಮನರು ಬ್ರಿಟಿಷರ ಮೇಲೆ ಈ ತೆರಿಗೆಯನ್ನು ವಿಧಿಸುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಯುದ್ಧದಲ್ಲಿ ಸೋತು ರಾಷ್ಟ್ರದ ಮೇಲೆ ಗೆದ್ದ ರಾಷ್ಟ್ರದ ಸರ್ಕಾರ ಈ ಕಂದಾಯವನ್ನು ವಿಧಿಸುವುದು ರೂಢಿಯಲ್ಲಿತ್ತು. ಗ್ರೀಸಿನಲ್ಲಿ ಈ ಕಂದಾಯವನ್ನು ಕೊಡುವುದು ಗುಲಾಮಗಿರಿಯ ಚಿಹ್ನೆ ಎಂಬ ಭಾವನೆಯಿತ್ತು. ಫ್ರೆಂಚ್ ಮಾದರಿಯನ್ನನುಸರಿಸಿ ಇಂಗ್ಲೆಂಡಿನಲ್ಲಿ ೧೩೭೭ ರಲ್ಲಿ ವಿಧಿಸಲಾದ ತಲೆಗಂದಾಯದ ಬಗ್ಗೆ ಇಂಗ್ಲಿಷರ ಇತಿಹಾಸದಲ್ಲಿ ಮೊದಲ ವಿವರಣೆ ದೊರಕುತ್ತದೆ. ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಹೆಂಗಸರು ಮತ್ತು ಗಂಡಸರೆಲ್ಲರೂ ತಲಾ ನಾಲ್ಕು ಪೆನ್ನಿಯಂತೆ ಈ ಕಂದಾಯವನ್ನು ಕೊಡಬೇಕಾಗಿತ್ತು. ನಿಜವಾದ ಭಿಕ್ಷುಕರಿಗೆ ವಿನಾಯಿತಿಯಿತ್ತು. ಅಮೆರಿಕದಲ್ಲೂ ತಲೆಗಂದಾಯ ಹಿಂದಿನಕಾಲದಲ್ಲಿದ್ದುದಷ್ಟೇ ಅಲ್ಲದೆ ಅಲ್ಲಿಯ ಹಲವು ರಾಜ್ಯಸರ್ಕಾರಗಳು ಈಗಲೂ ಇದನ್ನು ವಿಧಿಸುತ್ತವೆ. ಆ ದೇಶದ ಸಂವಿಧಾನದ ಪ್ರಕಾರ ಹದಿಮೂರು ರಾಜ್ಯಗಳು ತಲೆಗಂದಾಯ ವಿಧಿಸುವ ಅಧಿಕಾರ ಹೊಂದಿವೆ. ಇವುಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳು ಈ ಕಂದಾಯ ವಿಧಿಸುತ್ತವೆ. ಭಾರತದಲ್ಲಿ ಮೊಗಲರ ಕಾಲದಲ್ಲಿ ಈ ಕಂದಾಯ ವಿಧಿಸಲಾಗಿತ್ತು. ಹಿಂದೂಗಳು ಮಾತ್ರ ಕೊಡಬೇಕಾಗಿದ್ದ ಜಿಸಿóಯಾ ತಲೆಗಂದಾಯ ಭಾರತದ ಇತಿಹಾಸದಲ್ಲಿ ಕುಖ್ಯಾತಿ ಗಳಿಸಿದೆ. ತಲೆಗಂದಾಯದಿಂದ ದೊರಕಿದ ಆದಾಯವನ್ನು ರಸ್ತೆಗಳ ನಿರ್ಮಾಣ ಮತ್ತು ಪಾಠಶಾಲೆಗಳ ವ್ಯವಸ್ಥೆಗಳಿಗೆ ಉಪಯೋಗಿಸುವುದು ಸಾಮಾನ್ಯವಾಗಿತ್ತು. ಕೆಲಸ ಮಾಡುವ ಶಕ್ತಿಯಿದ್ದ ವಯಸ್ಕರ ಮೇಲೆ ಮಾತ್ರ ಈ ಕಂದಾಯ ವಿಧಿಸುತ್ತಿದ್ದುದು ಈ ಕಾರಣದಿಂದಲೇ. ಒಂದು ವೇಳೆ ಕಂದಾಯ ಕೊಡಲಾಗದಿದ್ದರೆ ರಸ್ತೆಯ ಕೆಲಸದಲ್ಲಿ ಶ್ರಮದಾನ ಮಾಡುವುದರ ಮೂಲಕ ಕಂದಾಯ ತೀರಿಸಬಹುದಾಗಿತ್ತು. ತಲೆಗಂದಾಯದ ಕೆಲವು ವಿಶೇಷ ಲಕ್ಷಣಗಳಿವು : ಮೊದಲನೆಯದಾಗಿ, ಪ್ರತಿಯೊಬ್ಬ ನಾಗರಿಕನೂ ಆತನ ಆದಾಯ ಮತ್ತು ಆಸ್ತಿಯ ಮಟ್ಟ ಏನೇ ಇದ್ದರೂ ಇದನ್ನು ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ವಿನಾಯಿತಿ ದೊರಕುವುದೇನಿದ್ದರೂ ವಯಸ್ಸಿನ ಆಧಾರದ ಮೇಲೆ. ಯಾವ ಆಸ್ತಿಯಿಂದಲೂ ದುಡಿಮೆಯಿಂದಲೂ ಆದಾಯವಿಲ್ಲದೆ, ಭಿಕ್ಷದಿಂದ ಜೀವನ ನಡೆಸುವವರಿಗೂ ವಿನಾಯಿತಿ ಇರುತ್ತಿತ್ತು. ಎರಡನೆಯದಾಗಿ, ಈ ಕಂದಾಯವನ್ನು ಯಾರ ಮೇಲೆ ವಿಧಿಸಲಾಗುತ್ತದೊ ಸಾಮಾನ್ಯವಾಗಿ ಅವರ ಮೇಲೆಯೇ ಇದರ ಹೊರೆ ಅಂತಿಮವಾಗಿ ಬೀಳುತ್ತದೆ. ಇದು ಸಾಮಾನ್ಯವಾಗಿ ಅಲ್ಪದರದಲ್ಲಿ ವಿಧಿಸಲ್ಪಡುವುದರಿಂದ ಹೊರೆಯನ್ನು ವರ್ಗಾಯಿಸುವ ಪ್ರಯತ್ನವಿರುವುದಿಲ್ಲ. ಆದರೆ ಹೆಚ್ಚಿನ ದರದಲ್ಲಿ ವಿಧಿಸಿದಾಗ ಕೂಲಿಯನ್ನು ಹೆಚ್ಚಿಸುವಂತೆ ಮಾಡಿ ಉದ್ಯೋಗದಾತರಿಗೆ ಹೊರೆಯನ್ನು ಕೆಲಸಗಾರರು ವರ್ಗಾಯಿಸಬಹುದು. ಮತ್ತು ಉದ್ಯೋಗದಾತರು ಬೆಲೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸಬಹುದು ಮೂರನೆಯದಾಗಿ, ಪ್ರಾರಂಭದಲ್ಲಿ ಸಮವಾದ ದರದಲ್ಲಿ ಎಲ್ಲರ ಮೇಲೆ ತಲೆಗಂದಾಯ ಬೀಳುತ್ತಿತ್ತು. ಕ್ರಮೇಣ ಕಂದಾಯದ ದರವನ್ನು ವರ್ಗಾನುಗುಣವಾಗಿ ವಿಂಗಡಿಸುವ ಪದ್ಧತಿ ಕೆಲವು ದೇಶಗಳಲ್ಲಿ ಜಾರಿಗೆ ಬಂತು. ಫ್ರಾನ್ಸಿನಲ್ಲಿ ೧೭೦೧ ರಲ್ಲಿ ತಲೆಗಂದಾಯ ವಿಧಿಸುವುದಕ್ಕಾಗಿ ಜನರನ್ನು ಇಪ್ಪತ್ತೆರಡು ಗುಂಪುಗಳಾಗಿ ವಿಂಗಡಿಸಿ ಒಂದೊಂದು ಗುಂಪಿಗೆ ಒಂದೊಂದು ದರದ ಕಂದಾಯ ಹಾಕುವುದು ರೂಢಿಗೆ ಬಂತು. ರಷ್ಯದಲ್ಲಿ ಪೀಟರ್ ದೊರೆ ೧೭೧೮ ರಲ್ಲಿ ತೆರಿಗೆದಾರರನ್ನು ಮೂರು ಗುಂಪುಗಳಾಗಿ ವಿಂಗಡಿಸಿದ. ೧೮೧೧ ರಲ್ಲಿ ಪ್ರಷ್ಯದಲ್ಲಿ ತೆರಿಗೆದಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು. ನಾಲ್ಕನೆಯದಾಗಿ, ಈ ಕಂದಾಯಕ್ಕೂ ರಾಜಕೀಯ ಹಕ್ಕುಬಾಧ್ಯತೆಗಳಿಗೂ ಒಂದು ರೀತಿಯ ಸಂಬಂಧವಿದೆ. ಅಮೆರಿಕದಲ್ಲಿ ಈ ಕಂದಾಯವನ್ನು ಪಾವತಿ ಮಾಡದೆ ತಪ್ಪಿಸಿಕೊಂಡವರಿಗೆ ಚುನಾವಣೆಗಳಲ್ಲಿ ಮತ ನೀಡುವ ಹಕ್ಕು ಇಲ್ಲದಂತಾಗುತ್ತಿತ್ತು. ಮತ ನೀಡುವ ಹಕ್ಕನ್ನು ಈ ರೀತಿ ಮೊಟಕು ಮಾಡುವುದು ಸರಿಯಲ್ಲವೆಂಬುದು ವೇದ್ಯವಾಗಿ ೧೯೬೪ ರ ಸಂವಿಧಾನದ ಇಪ್ಪತ್ನಾಲ್ಕನೆಯ ತಿದ್ದುಪಡಿಯಲ್ಲಿ ಈ ನಿರ್ಬಂಧವನ್ನು ತೆಗೆದುಹಾಕಲಾಯಿತು.

ತೆರಿಗೆಯ ತತ್ತ್ವಗಳ ದೃಷ್ಟಿಯಿಂದ ತಲೆಗಂದಾಯಕ್ಕೆ ಯಾವ ಸಮರ್ಥನೆಯೂ ಇಲ್ಲ. ಸಾಮಾನ್ಯವಾಗಿ ಈ ಕಂದಾಯ ಎಲ್ಲರ ಮೇಲೂ ಒಂದೇ ದರದಲ್ಲಿ ಬೀಳುವುದರಿಂದ ಅವರೋಹಿಲಕ್ಷಣ ಪಡೆದಿದೆ. ವ್ಯಕ್ತಿಯ ಆದಾಯವಾಗಲಿ ಆಸ್ತಿಯಾಗಲಿ ಯಾವುದೂ ಆಧಾರವಾಗಿರದೆ, ಕೇವಲ ವ್ಯಕ್ತಿಯೇ ಆಧಾರವಾಗಿರುವುದು ಈ ಕಂದಾಯದ ವಿಶೇಷ ನ್ಯೂನತೆ. ಅಷ್ಟೇ ಅಲ್ಲದೆ ರಾಜ್ಯಾದಾಯದ ದೃಷ್ಟಿಯಿಂದಲೂ ಇದರ ಪ್ರಯೋಜನ ಅಷ್ಟೇನೂ ಇಲ್ಲ. ಅಮೆರಿಕದ ಕೆಲವು ರಾಜ್ಯಗಳ ಹೊರತು ಬೇರೆಲ್ಲೂ ತಲೆಗಂದಾಯಕ್ಕೆ ಈಗ ಮಾನ್ಯತೆಯಿಲ್ಲ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ತೆರಿಗೆ&oldid=1187435" ಇಂದ ಪಡೆಯಲ್ಪಟ್ಟಿದೆ