ಓಷಿಯಾನಿಯ ಕಲೆ: ಪೆಸಿಫಿಕ್ ಅಥವಾ ಶಾಂತಸಾಗರ, ಅದರ ಸುತ್ತಮುತ್ತಲಿನ ದ್ವೀಪ ಪ್ರಾಂತ್ಯಗಳ ಅಂದರೆ, ಪಾಲಿನೇಷ್ಯ, ಮೆಲನೇಷ್ಯ, ಪಾಪುವಗಳ ಕಲೆಗಳು ಅತಿ ಪ್ರಾಚೀನವಾದುವು. ಪಾಲಿನೇಷ್ಯದ ಆದಿಪುರುಷರು ಮಲಯ ದ್ವೀಪಗಳು ಸಮೂಹವನ್ನು ದಾಟಿ ಭಾರತದಿಂದ ಬಂದರೆಂದೂ ಮೆಲನೇಷ್ಯದವರು ಏಷ್ಯ ಖಂಡದ ಆಗ್ನೇಯ ಭಾಗದಿಂದ ಬಂದರೆಂದೂ ಮೈಕ್ರೊನೇಷ್ಯದವರು ಪಾಲಿನೇಷ್ಯ ಮೆಲನೇಷ್ಯದವರ ಸಂಕೀರ್ಣ ಜಾತೀಯರೆಂದೂ ನ್ಯೂ ಗಿನಿಯ (ಪಾಪುವ) ಪ್ರದೇಶಕ್ಕೆ ಸೇರಿದವರ ಪೈಕಿ ಆಗ್ನೇಯ ಭಾಗದಲ್ಲಿರುವವರು ಮೆಲನೇಷ್ಯರೆಂದೂ ವಿದ್ವಾಂಸರ ಅಭಿಪ್ರಾಯ.[೧]

ನಾರ್ವೆಯಲ್ಲಿ ಸರಿಸುಮಾರು 1900ರ ವೇಳೆಯಲ್ಲಿದ್ದ ಒಂದು ಸ್ಯಾಮಿ ಕುಟುಂಬ.

ಪಾಲಿನೇಷ್ಯದವರ ತೊಗಟೆ ಬಟ್ಟೆ ಬದಲಾಯಿಸಿ

ಪಾಲಿನೇಷ್ಯದವರ ತೊಗಟೆ ಬಟ್ಟೆಗಳ ಮೇಲೆ ಛಾಪಿಸಿದ ಕ್ಷೇತ್ರಗಣಿತ ನಕ್ಷೆಗಳ ನಮೂನೆಗಳು ಸುಂದರವಾಗಿಯೂ ಅವರ ಉಪಕರಣಗಳ ನಿರೂಪಣೆ, ಕಾವಾಗಳು ಬಟ್ಟಲುಗಳು ಮೇಲಿನ ಸುರುಳಿಗಳು ಗಂಭೀರವಾಗಿವೆ. ಫಿಜಿ, ಸಾಮೂವ (ಹವಾಯಿ) ದ್ವೀಪಗಳ ಕಲಾಕೃತಿಗಳಂತೆ ಒಕ್ಕಲಿಗರ ಸರಳತೆಯನ್ನು ಪಡೆದಿರದೆ, ಅವು ಕುಲೀನ ಮಾದರಿಯಾಗಿವೆ. ಪಾಲಿನೇಷ್ಯ ಕಲಾಕೃತಿಗಳಲ್ಲಿ ಅತಿ ಸುಂದರವಾದುವು ಟೀಕೀ ಹೆಸರಿನ ತಿಮಿಂಗಿಲ ದಂತದಿಂದ ಕೊರೆದ ಕಂಠಾಭರಣದ ಪದಕಗಳು. ಮಯೋರೀಯರ ಹೀಟಕೀ ಪದಕಗಳು, ಗರ್ಭಪಿಂಡದ ರೂಪವನ್ನು ತಾಳಿದ್ದು, ಅವುಗಳ ಮೇಲೆ ಧರಿಸುವವರ ಹೆಸರುಗಳನ್ನು ಕೆತ್ತಲಾಗಿವೆ. ಮಯೋರೀಯರ ಮತ್ತೊಂದು ಕೆತ್ತನೆ, ಪಕ್ಷಿಮುಖವನ್ನು ತಾಳಿದ ಪಶುಮುಂಡದ ಮನಾಯಿಯಗಳು. ಅವರ ಪುರಾತನರ ಪ್ರತಿಮೆಗಳಿಗೆ ಎರಡು ಪಾಶರ್ವ್‌ದಲ್ಲಿಯೂ ಮನೆಯ ಮೇಲ್ಭಾಗಕ್ಕೂ ಇವನ್ನು ಅಂಟಿಸಲಾಗಿದೆ. ಗರಿ ಪೆಟ್ಟಗಳ ಮೇಲಿನ ಸುರಳಿ ಕೆತ್ತನೆ ಉತ್ಕೃಷ್ಟವಾಗಿವೆ. ಹರ್ವೇ ದ್ವೀಪಗಳ ದೋಣಿ ನಡೆಸುವ ಕೋಲುಗಳ ಅಲಂಕಾರದಲ್ಲಿ ಕ್ಷೇತ್ರಗಣಿತದ ನಕ್ಷೆಗಳನ್ನು ವಿಧ ವಿಧ ರೂಪದಲ್ಲಿ ಕೋಮಲವಾಗಿ ಕೆತ್ತಲಾಗಿದೆ. ಆದರೆ ಹವಾಯಿ ದ್ವೀಪದ ಶಿಲ್ಪಾಕೃತಿಗಳು ವಿಕಟವಾಗಿಯೂ ಬಿರುಸಾಗಿಯೂ ಕಾಣುತ್ತವೆ. ಈಸ್ಟರ್ ದ್ವೀಪಗಳ ಮಾನವ ಶಿಲ್ಪಾಕೃತಿಗೆ ದೊಡ್ಡ ತಲೆಯೂ ಸಮುದ್ರಪಕ್ಷಿಯ ಮುಖವೂ ಇವೆ. ಓಷಿಯಾನಿಯ ಕಲೆಯಲ್ಲಿ ಸಮುದ್ರಪಕ್ಷಿ ಜೀವಾತ್ಮನ ಸಂಕೇತ. ಕೊರೊಮೊರೊ ದಾರುವಿನಿಂದ ರಚಿಸಿದ ಪ್ರತಿಮೆಗಳು ಸುಂದರವಾಗಿವೆ.[೨]

ಮೈಕ್ರೊನೇಷ್ಯದವರ ಕಲೆ ಬದಲಾಯಿಸಿ

ಮೈಕ್ರೊನೇಷ್ಯದವರ ಕಲೆಯಲ್ಲಿ ಅತಿ ಮುಖ್ಯವಾದುವು ಮರದಲ್ಲಿ ಕೆತ್ತಿದ ಪಶುಪ್ರಾಣಿಗಳ ಪ್ರತಿಮೆಗಳು ಆದರೆ ನುಕುವಾರೊ ಮತ್ತು ಉತ್ತರದ ಫಿಲಿಪೀನ್ಸ್‌ ಪ್ರದೇಶಗಳಿಗೆ ಸೇರಿದ ಪ್ರತಿಮೆಗಳಲ್ಲಿ ಕೃತಕತೆ ಕಾಣುತ್ತದೆ. ಅವಕ್ಕೆ ರೂಪದ ಸ್ಪಷ್ಟತೆ ಇಲ್ಲ. ತಲೆಗಳು ಅಂಡಾಕಾರದಲ್ಲಿಯೂ ಕಾಲು ಕೈಗಳು, ಅವುಗಳ ಬೆರಳುಗಳು ಅಸ್ಪಷ್ಟವಾಗಿಯೂ ಇದ್ದು ಕೇವಲ ಅಮೂರ್ತ ಕಲಾಶೈಲಿಯನ್ನು ಪ್ರದರ್ಶಿಸುತ್ತವೆ. ಪಿಲ್ಯೂ ದ್ವೀಪಗಳ ಅಲಂಕಾರದಲ್ಲಿ ಎರಡು ತರಹವಿದ್ದು, ಮೊದಲನೆಯ ಜಾತಿಗೆ ನಾನಾವಿಧ ಬಣ್ಣಗಳಿಂದ ಕೂಡಿದ ಪುರಾಣೋಕ್ತ ಕೆತ್ತನೆ ಮತ್ತು ಮದುವೆಯಾಗದ ಪುರುಷರ ಮನೆಯ ಇಪ್ಪಾರುಗಳ ವಿನ್ಯಾಸ ಸೇರುತ್ತವೆ. ಎರಡನೆಯ ಜಾತಿಗೆ, ಇಂದಿನ ಶೈಲಿಯಲ್ಲಿ ಕೊರೆದ, ಕೆಮ್ಮಣ್ಣು ಬಳಿದ ಬಟ್ಟಲುಗಳು ಸೇರುತ್ತವೆ. ಈ ಬಟ್ಟಲುಗಳಿಗೆ ಸಸ್ಯದ್ರಾವಕದಿಂದ ಬಣ್ಣ ಕಟ್ಟಿದ್ದು ಅಲ್ಲಲ್ಲಿ ಕಪ್ಪೆ ಚಿಪ್ಪಿನ ಚೂರುಗಳ ಕುಂದಣ ಮಾಡಲಾಗಿದೆ.

ಮೆಲನೇಷ್ಯದ ದಕ್ಷಿಣ ಭಾಗ ಬದಲಾಯಿಸಿ

ಮೆಲನೇಷ್ಯದ ದಕ್ಷಿಣ ಭಾಗಕ್ಕೆ ಸೇರಿದ ತೊಂಬಾರ ಪ್ರಾಂತ್ಯದಲ್ಲಿ ಕೀಳುಮಟ್ಟದ, ನ್ಯೂ ಐರ್ಲೆಂಡಿನ ಮಧ್ಯಭಾಗದಲ್ಲಿ ಮಧ್ಯಮ ಮಟ್ಟದ, ನ್ಯೂ ಐರ್ಲೆಂಡಿನ ಉತ್ತರದಲ್ಲಿ ಉನ್ನತ ಮಟ್ಟದ, ಕಲೆಗಳನ್ನು ಕಾಣಬಹುದು. ಮೆಲನೇಷ್ಯದ ದಕ್ಷಿಣ ಭಾಗದಲ್ಲಿ ಸೀಮೆಸುಣ್ಣದಲ್ಲಿ ಬಿಡಿಸಿದ ಪಿತೃಗಳ ಶಿಲ್ಪ ಮಧ್ಯಮ ಭಾಗದಲ್ಲಿ ಸ್ಮಾರಕ ಪ್ರತಿಮೆಗಳು, ಉತ್ತರದಲ್ಲಿ ಬಟ್ಟಲುಗಳು ಮತ್ತು ವಾಸಮಾಡುವ ಗುಡಿಸಲುಗಳ ಬಾಗಿಲಿನ ಪಕ್ಕಗಳಲ್ಲಿ ಇಡುವ ಮೇಲಿನ ಆಕೃತಿಗಳು ಸಂಪ್ರದಾಯಬದ್ಧ ಶೈಲಿಯಲ್ಲಿವೆ. ಮನುಷ್ಯ, ಮತ್ಸ್ಯ, ಪಕ್ಷಿಗಳ ರೂಪಾಂತರಗಳನ್ನಿಲ್ಲಿ ಕಾಣಬಹುದು. ಆರಾಧನೆಗೆ ಯೋಗ್ಯವಾದ, ಅಲ್ಲಿನ ಪದ್ಧತಿಗಳಿಗೆ ಅನುಗುಣವಾದ ಶೈಲಿ ಇಲ್ಲಿ ಎದ್ದು ತೋರುತ್ತದೆ. ಬಿರಾರಾ (ನ್ಯೂ ಬ್ರಿಟನ್) ಶಿಲಾಕೃತಿಗಳು ಮೃದುವಾದ ಬೂದಿಬಣ್ಣದ ಕಲ್ಲಿನಿಂದ ಕೊರದವಾಗಿದ್ದು ಮಾಟ ಮಂತ್ರಗಳಿಗಾಗಿ ಬಳಕೆಯಾಗುವಂಥವಾಗಿವೆ. ಆದರೆ ಸಾಲೊಮನ್ ದ್ವೀಪಗಳ ದಾರುಶಿಲ್ಪ ಪ್ರತ್ಯೇಕ ಶೈಲಿಯಲ್ಲಿದ್ದು ನಾನಾ ವಿಧದ ರೇಖಾವಿಲಾಸಗಳನ್ನು ಪ್ರದರ್ಶಿಸುತ್ತದೆ. ಚಿಕ್ಕಪುಟ್ಟ ಪ್ರತಿಮೆಗಳನ್ನು ದೊಣ್ಣೆ, ಕಟ್ಟಿಗೆಗಳಿಂದ ಮಾಡಲಾಗಿದೆ. ಅವುಗಳಿಗೆ ಬಿಳಿ ಮತ್ತು ಕಪ್ಪು ಬಣ್ಣಗಳನ್ನು ಹಾಕಿದ್ದಾರೆ. ದಕ್ಷಿಣ ವಲಯದ ದ್ವೀಪಗಳಲ್ಲಿ, ಅವಕ್ಕೆ ಕಪ್ಪು ಬಣ್ಣ ಮಾತ್ರ ಹಾಕಿ, ಅವುಗಳ ಮೇಲೆ ಮುಕ್ಕೋಣದ ಮುತ್ತಿನ ಚಿಪ್ಪಿನ ಚೂರುಗಳನ್ನು ಅನೇಕ ಆಕಾರಗಳಲ್ಲಿ ಅಂಟಿಸಿದ್ದಾರೆ. ದೋಣಿಗಳ ಮುಂಭಾಗಗಳಲ್ಲಿ ಮತ್ತು ಮಾನವ ಪ್ರತಿಮೆಗಳಲ್ಲಿ ಇದೇ ರೀತಿಯ ಕೆತ್ತನೆ ಮತ್ತು ಅಲಂಕರಣಗಳನ್ನು ಕಾಣಬಹುದು. ಮಾನವಾಕೃತಿಗಳಿಗೆ ಸುಂದರವಾದ ಮುತ್ತಿನ ಚಿಪ್ಪಿನ ಕಣ್ಣುಗಳಿವೆ. ಇವು ಭಾವಚಿತ್ರಗಳೆಂದು ನಿಸ್ಸಂಶಯವಾಗಿ ಹೇಳಬಹುದು. ಪ್ರಾಚೀನ ಕೋಲುಶಿಲ್ಪದ ಮಾನವಾಕೃತಿಗಳಲ್ಲಿ ಮುಂಡ, ಕೈ, ಕಾಲುಗಳು ಪ್ರತ್ಯೇಕವಾಗಿರದೆ ಅಖಂಡವಾಗಿವೆ. ಇಲ್ಲಿನ ಕೋಲುಪ್ರತಿಮೆಗಳಲ್ಲಿ ಕಾಲು, ಕೈಗಳು ಪ್ರತ್ಯೇಕವಾಗಿದ್ದು ಮುಂಡಕ್ಕೆ ಅಂಟಿದಂತಿದೆ. ಆಕಾರದ ಶಿಲ್ಪ ಅತ್ಯುತ್ತಮವಾಗಿದ್ದು ಪ್ರತಿಮೆಗಳ ವೈಶಿಷ್ಟ್ಯ, ಕೋಮಲತ್ವ ಪ್ರಶಂಸನೀಯವಾಗಿವೆ.

ಪಾಪುವ ಪ್ರಾಂತ್ಯದ ಕಲಾವೈಶಿಷ್ಟ್ಯ ಬದಲಾಯಿಸಿ

ಪಾಪುವ ಪ್ರಾಂತ್ಯದ ಕಲಾವೈಶಿಷ್ಟ್ಯ ನೀಗ್ರೊ ಆಫ್ರಿಕ ಮತ್ತು ಅಮೆರಿಕ ವಾಯವ್ಯ ಭಾಗದ ಕಲಾವೈಶಿಷ್ಟ್ಯವನ್ನು ಮೀರಿಸುವಂತಿದೆ. ಗುಂಡಾದ ಶಿಲ್ಪ ಅಪರೂಪ ಸಾಧಾರಣ ಉಪಕರಣಗಳು ಕೂಡ ಅಲಂಕಾರಮಯವಾಗಿವೆ. ರೇಖೆಗಳಲ್ಲಿ ಬಣ್ಣಗಳು ತುಂಬಿವೆ. ಯಂತ್ರನಕ್ಷೆಗಳಿಂದೊಡಗೂಡಿರುವ ಈ ಅಲಂಕಾರ ಪುರಾಣೋಕ್ತವಾಗಿ, ಧಾರ್ಮಿಕವಾಗಿದ್ದು ಪುರ್ವಿಕರ ಆರಾಧನೆಗೆ ಅನುಕೂಲತೆಯನ್ನು ಕಲ್ಪಿಸಿಕೊಡುತ್ತದೆ. ಡಚ್ಚರ ನ್ಯೂ ಗಿನಿಯ ಕಲಾಕೃತಿಗಳು ಇಂಡೋನೇಷ್ಯದ ಪ್ರತ್ಯೇಕವಾದ ಸುರುಳಿ ಸಂಪತ್ತನ್ನು ಹೊಂದಿವೆ. ಈ ಅಲಂಕಾರದಲ್ಲಿ ತೀಕ್ಷ್ಣವಾದ ಆಡಂಬರದ ವೈಖರಿ, ಅಂದರೆ ಕ್ಷೇತ್ರಗಣಿತ ನಕ್ಷೆಗಳು ಬೆರೆತು ಲತಾಸುರುಳಿಗಳು, ಪಶುಪ್ರಾಣಿಗಳ ರೂಪಗಳು ಕಂಡುಬರುತ್ತವೆ. ಇವುಗಳಲ್ಲಿ ಪಿತೃಗಳ ಕಪಾಲಗಳನ್ನು ಜೋಪಾನ ಮಾಡುವುದಕ್ಕೆ ಉಪಯುಕ್ತವಾದ ಕೋರ್ವಾರ್ ಹೆಸರಿನ ಮರದ ಸಂಪುಟಗಳು ಗಣನೀಯವಾದುವು. ಪಿತೃಗಳ ಆತ್ಮಗಳು ಇವುಗಳಲ್ಲಿ ವಾಸಿಸುತ್ತವೆನ್ನುವ ಭಾವನೆ ಪ್ರಚಲಿತವಿದೆ.

ಸೆಫಿಕ್ ಮತ್ತು ರಾಮು ಕಣಿವೆ ಬದಲಾಯಿಸಿ

ಸೆಫಿಕ್ ಮತ್ತು ರಾಮು ಕಣಿವೆಗಳಲ್ಲಿನ ಗುಂಡು ಪ್ರತಿಮೆಗಳ ಕೌಶಲ್ಯ ಹೆಚ್ಚಿನ ಮನ್ನಣೆ ಪಡೆದಿವೆ. ಇಲ್ಲಿನ ಜನರ ಮರದ ಬಟ್ಟಲುಗಳು ಅತಿ ಸುಂದರವಾಗಿವೆ. ಇವುಗಳ ಮೇಲೂ ಮಾನವ, ಪಶುರೂಪಾಲಂಕಾರ ಹೇರಳವಾಗಿದೆ. ಮುಖವಾಡಗಳು, ಕಟ್ಟಿಗೆಯ ಕಾಲುಮಣೆಗಳು ಮುಂತಾದುವು ಇತರ ಗಮನಾರ್ಹ ವಸ್ತುಗಳು, ರಾಮು ಕಣಿವೆಗೆ ಸೇರಿದ ವಾಟುಟ್ ಬುಲಾಲೊ ಪ್ರಾಂತ್ಯಗಳ ಕಲ್ಲಿನ ವಿಗ್ರಹಗಳು ನೋಡತಕ್ಕವು. ಮಾಸಿಂ ಮತ್ತು ಟೋಬ್ರಿಯನ್ಡ್‌ ದ್ವೀಪಗಳ ಕೈಪಿಡಿಗಳಿಗೆ ಮತ್ತು ದೋಣಿಯ ಮುಂಭಾಗಗಳಿಗೆ ಪ್ರತ್ಯೇಕವಾದ ಸುರುಳಿ ಅಲಂಕರಣದ ಸೊಬಗಿದೆ. ಇದನ್ನು ಹೆಣಿಗೆಗೊಂಡ ಪ್ರಶ್ನಾರ್ಥಕ ಚಿಹ್ನೆ ಸರಣಿ (ಇಂಟರ್ಲಾಕಿಂಗ್ ಕ್ವಶ್ಜನ್ ಮಾರ್ಕ್) ಎಂದು ಕರೆಯುತ್ತಾರೆ. ಈ ಅಲಂಕಾರ ಪುರಾಣೋಕ್ತವಾಗಿ ಆಗಲೀ ಯಾಂತ್ರಿಕವಾಗಿಯಾಗಲೀ ಇಲ್ಲ. ಸಾಂಕೇತಿಕ ಭೂಪ್ರದೇಶ ಚಿತ್ರಗಳ ಕೆತ್ತನೆ. ಬಿದುರು ವಸ್ತುಗಳ ಮೇಲೆ ರಮ್ಯವಾಗಿ ಮೂಡಿ ನಿಂತಿದೆ. ಆಳವಾದ ನೀರು, ಗಾಳಿಯಿಂದ ಪಲ್ಲಟವಾದ ಸಮುದ್ರದ ಮೇಲೆ ಸುರಿಯುವ ಮಳೆ. ಸಮುದ್ರದ ಅಲೆಗಳಿಂದ ಹೊಡೆತ ತಿನ್ನುವ ಗುಡ್ಡಗಳು-ಮುಂತಾದುವು ತುಂಬ ಮನೋಹರವಾಗಿ ಕೊರೆಯಲ್ಪಟ್ಟಿದೆ. ದೋಣಿಗಳ ಮತ್ತು ನಾಟ್ಯದಲ್ಲಿ ಉಪಯೋಗಿಸುವ ಗುರಾಣಿಗಳ ಅಲಂಕಾರ ಸಹ ಸುಂದರವಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಓಷಿಯಾನಿಯ ಕಲೆಯಲ್ಲಿ ಭಾರತದ ಸಂಸ್ಕೃತಿ ಮಧುರವಾಗಿ ಮುದ್ರಿತವಾಗಿದೆ.

ಉಲ್ಲೇಖಗಳು ಬದಲಾಯಿಸಿ