ಓಇಎಂ ಕಂಪನಿಗಳು
ಓಇಎಂ - ಸ್ವಂತ ಸಲಕರಣೆಗಳ ಉತ್ಪಾದಕರು
ಓಇಎಂ ಅಥವಾ ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ ಎಂದರೆ ಬೇರೆ ಕಂಪನಿಗಳಿಗಾಗಿ ಸಲಕರಣೆಗಳನ್ನು ಉತ್ಪಾದಿಸುವವರು ಎಂಬ ಅರ್ಥವಿದೆ. ಓಇಎಂ ಪದಕ್ಕೆ ಹತ್ತಿರವಾದ ಇನ್ನೊಂದು ಪದವೆಂದರೆ ಓಡಿಎಂ ಅಥವಾ ಒರಿಜಿನಲ್ ಡಿಸೈನ್ ಮ್ಯಾನುಫ್ಯಾಕ್ಚರರ್. ಓಇಎಂ ಎಂಬುದು ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಚರಿಂಗ್ ಎಂಬುದರ ಒಂದು ಬಗೆ. ಓಇಎಂ ಎಂಬುದಕ್ಕೆ ಒಂದು ಉದಾಹರಣೆ ಫಾಕ್ಸ್ ಕಾನ್ ಎಂಬ ಕಂಪನಿ. ಆಪಲ್ ಕಂಪನಿಯ ಐಫೋನ್ ಗಳ ರಚನೆಯು ಆಪಲ್ ಕಂಪನಿಯ ಸ್ವತ್ತು. ಆದರೆ ಅದನ್ನು ಉತ್ಪಾದಿಸುವುದು ಫಾಕ್ಸ್ ಕಾನ್ ಕಂಪನಿ. [೧]
ಓಡಿಎಂ ಕಂಪನಿಗಳಿಗೆ ಹೋಲಿಸಿದರೆ ಓಇಎಂ ಕಂಪನಿಗಳು ಸಂಖ್ಯೆಯಲ್ಲಿ ಹೆಚ್ಚು. ಏಕೆಂದರೆ ಓಇಎಂ ಕಂಪನಿಗಳಿಗೆ ಸಲಕರಣೆಗಳನ್ನು ರಚಿಸುವ (ಡಿಸೈನ್ ಮಾಡುವ) ಕೆಲಸವಿರುವುದಿಲ್ಲ. ಯಾವ ಕಂಪನಿಗಾಗಿ ಸಲಕರಣೆಗಳನ್ನು ತಯಾರಿಸಬೇಕೋ ಆ ಕಂಪನಿಯು ಸಲಕರಣೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಬಿಲ್ ಆಫ್ ಮಟೀರಿಯಲ್ಸ್ (BOM ಅಥವಾ ಸಲಕರಣೆಯನ್ನು ತಯಾರಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳ ಪಟ್ಟಿ) ಸಿದ್ಧ ಪಡಿಸುವ ಹೊಣೆಗಾರಿಕೆಯನ್ನೂ ಓಇಎಂ ಹೊರಬೇಕಾಗಿಲ್ಲ. ಓಇಎಂ ಮೂಲಕ ಸಲಕರಣೆಗಳನ್ನು ಉತ್ಪಾದಿಸುವ ಕಂಪನಿಗೆ ಅನೇಕ ಲಾಭಗಳಿವೆ.
- ಸಲಕರಣೆಯ ರಚನೆಯ ಸಂಪೂರ್ಣ ಹತೋಟಿ ಸಾಧಿಸುವುದು ಸಾಧ್ಯ.
- ತಾನೇ ಉತ್ಪಾದನೆಗಾಗಿ ಫ್ಯಾಕ್ಟರಿ ಹೂಡಬೇಕಾಗಿಲ್ಲ.
- ಗ್ಲೋಬಲೀಕರಣದ ಯುಗದಲ್ಲಿ ಬೇರೆ ದೇಶದ ಓಇಎಂಗಳನ್ನು ಬಳಸಿಕೊಳ್ಳಬಹುದು. ಚೈನಾ, ಭಾರತ, ವಿಯೆಟ್ನಾಯಂ ಮುಂತಾದ ದೇಶಗಳಲ್ಲಿ ಫ್ಯಾಕ್ಟರಿ ಕಾರ್ಮಿಕರಿಗೆ ಕೊಡಬೇಕಾದ ಕೂಲಿ ಕಡಿಮೆಯಾದ್ದರಿಂದ ಸಾಕಷ್ಟು ಉಳಿತಾಯ ಸಾಧ್ಯ. ಹಿಂದೊಮ್ಮೆ ಪಿ.ಸಿ. ಅಥವಾ ಖಾಸಗಿ ಗಣಕಯಂತ್ರಗಳು ಸಂಪೂರ್ಣವಾಗಿ ಅಮೆರಿಕಾ/ಯೂರೋಪ್ ದೇಶಗಳಲ್ಲಿ ತಯಾರಾಗಿ ಇತರ ದೇಶಗಳಿಗೆ ರಫ್ತಾಗುತ್ತಿದ್ದವು. ಇದರಿಂದ ಅವುಗಳ ಬೆಲೆ ಬಹಳ ಹೆಚ್ಚಿತ್ತು. ಮುಂದೆ ಸಿಂಗಪೂರ್ ಮುಂತಾದ ಕಡೆಗಳಲ್ಲಿ ಪಿ.ಸಿ.ಗಳನ್ನು ಜೋಡಿಸುವ ಅಥವಾ ಅಸೆಂಬ್ಲಿ ಪ್ರಾರಂಭವಾದಾಗ ಸ್ವಲ್ಪ ಮಟ್ಟಿಗೆ ಬೆಲೆಗಳು ಇಳಿದವು. ಮುಂದೆ ಅಸೆಂಬ್ಲಿ ಮಾಡುವ ಫ್ಯಾಕ್ಟರಿಗಳು ಬಹುಮಟ್ಟಿಗೆ ಎಲ್ಲಾ ದೇಶಗಳಲ್ಲೂ ಹಬ್ಬಿದವು. ಇದರಿಂದ ಬೆಲೆಗಳು ಜನರ ಕೈಗೆ ಎಟುಕುವಂತಾಯಿತು.
ಓಇಎಂ ಅನಾನುಕೂಲತೆಗಳು
- ಉತ್ಪನ್ನಗಳು ಮಾರುಕಟ್ಟೆಗೆ ಬರಲು ಸಾಕಷ್ಟು ಸಮಯವಾಗುತ್ತದೆ. ಏಕೆಂದರೆ ಬೇರೊಂದು ಕಂಪನಿಯ ರಚನೆಯನ್ನು ಉತ್ಪಾದನೆ ಮಾಡುವುದು ಸುಲಭವಲ್ಲ. ಎರಡೂ ಕಂಪನಿಯ ಇಂಜಿನಿಯರುಗಳು ಅನೇಕ ಕಟ್ಟುಪಾಡುಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಉತ್ಪಾದನೆಗೆ ಅನೇಕ ತಿಂಗಳುಗಳು ಅಥವಾ ವರ್ಷವೇ ಆಗಬಹುದು. ಇದಕ್ಕೆ ಹೋಲಿಸಿದರೆ ಓಡಿಎಂ ಕಂಪನಿಯು ಕೆಲವೇ ವಾರಗಳಲ್ಲಿ ಉತ್ಪನ್ನಗಳನ್ನು ತಯಾರಿಸಿ ನೀಡಬಲ್ಲದು.
- ಡಿಸೈನ್ ಮತ್ತು ಉತ್ಪನ್ನ ಇವುಗಳನ್ನು ಬೇರ್ಪಡಿಸುವುದು ಅಷ್ಟು ಸುಲಭವಲ್ಲ. ಉತ್ಪನ್ನದಲ್ಲಿ ಅನಿರೀಕ್ಷಿತ ತೊಂದರೆಗಳು ಕಾಣಿಸಿಕೊಂಡಾಗ ಅದು ಏಕೆಂದು ಕಂಡುಹಿಡಿಯುವುದು ಕಷ್ಟ. ಉತ್ಪನ್ನವು ವಿಫಲವಾಗಲು ಅದರ ರಚನೆಯಲ್ಲಿರುವ ದೋಷವೇ ಎಂದು ಸಿದ್ಧವಾದರೆ ಬಹಳ ದೊಡ್ಡ ಹಿನ್ನಡೆಯಾಗುತ್ತದೆ.
ಸಪ್ಲೈ ಪಿರಮಿಡ್
ಓಇಎಂ ಕಂಪನಿಯು ಒಂದು ಉಪಕರಣವನ್ನು ಸಿದ್ಧಪಡಿಸಬೇಕೆಂದರೆ ಕನಿಷ್ಠ ಮೂರು ಬಗೆಯ ಕಂಪನಿಗಳನ್ನು ಅವಲಂಬಿಸಬೇಕಾಗುತ್ತದೆ.
- ಬಿಡಿ ಭಾಗಗಳನ್ನು ಸರಬರಾಜು ಮಾಡುವ ಕಂಪನಿ (ಉದಾ: ನಟ್ / ಬೋಲ್ಟ್ / ಎಲೆಕ್ಟ್ರಾನಿಕ್ ಐಸಿಗಳು/ ರೆಸಿಸ್ಟರ್ ಕೆಪಾಸಿಟರ್ ಇತ್ಯಾದಿ ಭಾಗಗಳು )
- ಸಲಕರಣೆಯ ವಿಭಾಗಗಳನ್ನು ಸರಬರಾಜು ಮಾಡುವ ಕಂಪನಿಗಳು (ಉದಾ : ಮೆಮೊರಿ ಕಾರ್ಡ್, ಡಿಸ್ಕ್ ಡ್ರೈವ್, ಸೆನ್ಸರ್ ಕಾರ್ಡ್, ಇತ್ಯಾದಿ).
- ತಂತ್ರಾಂಶಗಳನ್ನು ಸರಬರಾಜು ಮಾಡುವ ಕಂಪನಿಗಳು (ಉದಾ : ಆಪರೇಟಿಂಗ್ ಸಿಸ್ಟಮ್, ಕಂಪೈಲರ್, ವಿವಿಧ ಆಪ್ ಗಳು )
ಇದನ್ನು ಒಂದು ಗೋಪುರದಂತೆ ಕಲ್ಪಿಸಿಕೊಳ್ಳಬಹುದು. ಬಿಡಿ ಭಾಗಗಳನ್ನು ಸರಬರಾಜು ಮಾಡುವ ಕಂಪನಿಗಳು ಗೋಪುರದ ತಳಭಾಗದಲ್ಲಿವೆ. ಅದರ ಮೇಲೆ ಸಲಕರಣೆಯ ವಿಭಾಗಗಳನ್ನು ಸರಬರಾಜು ಮಾಡುವ ಕಂಪನಿಗಳು; ಇವು ಬಿಡಿ ಭಾಗಗಳನ್ನು ಕೊಂಡು ಸಲಕರಣೆಯ ವಿಭಾಗಗಳನ್ನು ಸೃಷ್ಟಿಸುತ್ತವೆ. ಈ ಸ್ತರದ ಮೇಲೆ ತಂತ್ರಾಂಶಗಳನ್ನು ಸಿದ್ಧಪಡಿಸುವ ಕಂಪನಿಗಳಿವೆ. ಇವುಗಳು ಕೆಲಸ ಪ್ರಾರಂಭಿಸಲು ಈ ವಿಭಾಗಗಳು ತಯಾರಾಗಿರಬೇಕು. ಎಲ್ಲಕ್ಕಿಂತ ಮೇಲೆ ಓಇಎಂ ಕಂಪನಿಯು ಗೋಪುರದ ತುದಿಯಲ್ಲಿದೆ. ಬೇಕಾದಾಗ ಬಿಡಿಭಾಗಗಳನ್ನೂ, ಸಲಕರಣೆಯ ವಿಭಾಗಗಳನ್ನೂ ಮತ್ತು ತಂತ್ರಾಂಶಗಳನ್ನೂ ಖರೀದಿಸಿ ಅವುಗಳನ್ನು ಜೋಡಿಸುವ ಕೆಲಸ ಓಇಎಂ ಕಂಪನಿಯ ಜವಾಬ್ದಾರಿ.
ಫೋರ್ಡ್ ಕಂಪನಿಯ ಉದಾಹರಣೆಯನ್ನು ನೋಡಬಹುದು. ಇದು ಆಟೋಲೈಟ್ ಕಂಪನಿಯ ಸ್ಪಾರ್ಕ್ ಪ್ಲಗ್ ಸಾಧನಗಳನ್ನು ಬಳಸುತ್ತದೆ (ಬಿಡಿಭಾಗ) . ಎಕ್ಸೈಡ್ ಕಂಪನಿಯ ಬ್ಯಾಟರಿ ಬಳಸುತ್ತದೆ (ವಿಭಾಗ). ಬಾಷ್ ಕಂಪನಿಯ ಫ್ಯೂಯೆಲ್ ಇಂಜೆಕ್ಟರ್ ಬಳಸುತ್ತದೆ (ವಿಭಾಗ). ಕಾರುಗಳಿಗೆ ಬೇಕಾದ ಇಂಜಿನ್ ಇತ್ಯಾದಿಗಳನ್ನು ಫೋರ್ಡ್ ತಾನೇ ಉತ್ಪಾದಿಸುತ್ತದೆ.
ತಂತ್ರಾಂಶಗಳನ್ನು ಓಇಎಂ ಕಂಪನಿಗಳಿಗೆ ಸರಬರಾಜು ಮಾಡುವ ಉದಾಹರಣೆಗಾಗಿ ಮೈಕ್ರೋಸಾಫ್ಟ್ ಕಂಪನಿಯನ್ನು ನೋಡಬಹುದು. ಇದು ವಿಂಡೋಸ್ ತಂತ್ರಾಂಶವನ್ನು ಡೆಲ್, ಎಚ್ ಪಿ, ಏಸರ್ ಮುಂತಾದ ಅನೇಕ ಓಇಎಂಗಳಿಗೆ ನೀಡುತ್ತದೆ. ಮೈಕ್ರೋಸಾಫ್ಟ್ ತಂತ್ರಾಂಶಗಳನ್ನು ಲ್ಯಾಪ್ ಟಾಪ್ ಗಳಲ್ಲಿ ಮೊದಲೇ ಸ್ಥಾಪಿಸಿ ಈ ಕಂಪನಿಗಳು ಮಾರಾಟ ಮಾಡುತ್ತವೆ. ಹೀಗಾಗಿ ಬಳಕೆದಾರರಿಗೆ ಎಲ್ಲಾ ತಂತ್ರಾಂಶಗಳನ್ನೂ ಸ್ವತಃ ಸ್ಥಾಪಿಸುವ ರೇಜಿಗೆ ಇರುವುದಿಲ್ಲ.
ಉಲ್ಲೇಖಗಳು
ಬದಲಾಯಿಸಿ