ಒತ್ತಡ ಸಂವೇದಿ ಪೇಂಟ್‍ಗಳು
ಒತ್ತಡ ಸಂವೇದಿ ಪೇಂಟ್‍ಗಳು: ರಂಗುರಂಗಿನ ಹೂವುಗಳು, ನೀಲಿ ಬಣ್ಣದ ಆಗಸ, ಹಚ್ಚಹಸುರಿನ ಎಲೆಗಳು, ಸುಂದರವಾದ ಕಾಮನಬಿಲ್ಲು, ಕೆಂಪು ಬಣ್ಣದ ಕಾರ್ಮೋಡಗಳು - ಇವೆಲ್ಲಾ ನಮ್ಮ ಕಣ್ಣುಗಳಿಗೆ ಹಬ್ಬವನ್ನು ಉಂಟುಮಾಡುವ ಪ್ರಕೃತಿಯ ವರ್ಣ ವೈವಿಧ್ಯ ಕೊಡುಗೆಗಳು. ಬಣ್ಣಗಳು ನಮ್ಮ ಜೀವನದಲ್ಲಿ ಎಷ್ಟು ಹೊಂದಿಕೊಂಡಿವೆ ಎಂದರೆ ಬಣ್ಣಗಳಿಲ್ಲದ ವಾತಾವರಣವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹೀಗೆ ಕಣ್ಣಿಗೆ ಇಂಪು, ಮನಸ್ಸಿಗೆ ಆಹ್ಲಾದ ನೀಡುವ ವರ್ಣ ಪ್ರಪಂಚದ ವೈಜ್ಞಾನಿಕ ರಹಸ್ಯ ಎಂದೋ ಬಯಲಾಗಿದೆ. ಅಂತೆಯೇ ಹಿಂದೆಂದಿಗಿಂತಲೂ ಇಂದು ವೈವಿಧ್ಯಮಯ ಬಣ್ಣಗಳು ಅಭಿವೃದ್ಧಿಗೊಂಡು ಬಳಕೆಯಾಗುತ್ತಿವೆ; ವರ್ಣಚಿತ್ರಕಾರರ, ವರ್ಣಕರ್ಮಿಗಳ ಕಲ್ಪನೆ, ಕೌಶಲ್ಯಗಳೆಲ್ಲಾ ಸಾಕಾರಗೊಳ್ಳುತ್ತಿವೆ. ಹೀಗೆ, ಬೇಕಾದ ಬಣ್ಣಗಳನ್ನು ನೀಡಬಲ್ಲ ವಿಧವಿಧವಾದ ಪೇಂಟ್ಗಳು (ವರ್ಣದ್ರವ್ಯಗಳು) ತಯಾರಾಗುತ್ತಿವೆ.
ವೈಜ್ಞಾನಿಕ ಕ್ಷೇತ್ರದಲ್ಲಿ
ಬದಲಾಯಿಸಿವೈಜ್ಞಾನಿಕ ಕ್ಷೇತ್ರಗಳಲ್ಲೂ ಪೇಂಟ್ಗಳ ಬಳಕೆ ಬಹಳವಾಗಿದೆ. ಇಲ್ಲೆಲ್ಲಾ ಉತ್ಕೃಷ್ಟ ಗುಣಮಟ್ಟದ, ಬಹುಕಾಲ ಬಾಳಿಕೆಯ ಪೇಂಟ್‍ಗಳು ಬೇಕಾಗುತ್ತವೆ. ಈ ಎಲ್ಲಾ ಸಂದರ್ಭಗಳಲ್ಲೂ ಬಣ್ಣಗಳ ಉಪಯುಕ್ತತೆ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇತ್ತೀಚೆಗೆ ವಿದ್ಯುನ್ಮಾನ ಹಾಗೂ ಗಣಕ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಂದಾಗಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಬಣ್ಣಗಳ ಬಳಕೆಯ ಹೊಸ ಆಯಾಮವೇ ಸೃಷ್ಟಿಯಾಗಿದೆ. ವೈಮಾನಿಕೀಯ ಹಾಗೂ ಅಂತರಿಕ್ಷ ವಸ್ತುಗಳ ಮೇಲ್ಮೈಗಳಿಗೆ ಪೇಂಟ್ ಮಾಡುವ ಉದ್ದೇಶ ಅವುಗಳ ರಕ್ಷಣೆಗಾಗಿ ಮಾತ್ರವೇ ಎಂಬುದು ಈಗ ನಿಜವಲ್ಲ್ಲ. ಆಗಸದಲ್ಲಿ ವಿಮಾನದ ಹಾರಾಟವನ್ನು ಸೂಕ್ತವಾಗಿ ನಿಯಂತ್ರಿಸುತ್ತಾ ಅದನ್ನು ಸುರಕ್ಷಿತವಾಗಿ ಚಾಲಿಸಲು ಜವಾಬ್ದಾರನಾದ ವಿಮಾನ ಚಾಲಕನಿಗೆ ಪ್ರತಿಕ್ಷಣವೂ ಹಲವಾರು ಬಗೆಯ ಮಾಹಿತಿಗಳ ಅಗತ್ಯವಿರುತ್ತದೆ. ಇಂತಹ ಮಾಹಿತಿಗಳನ್ನು ನೀಡುತ್ತಿರುವ ವಿದ್ಯುನ್ಮಾನ / ಯಾಂತ್ರಿಕ ಉಪಕರಣಗಳಿಗೆ ಬದಲಾಗಿ ಪೇಂಟ್‍ಗಳು ಕೆಲಸಮಾಡುವ ಹಂತಕ್ಕೆ ತಲುಪುತ್ತಿವೆ ಎಂದರೆ ಅಚ್ಚರಿ ಆಗಬಹುದಲ್ಲವೆ! ಇದನ್ನು ಕೆಳಕಂಡಂತೆ ತಿಳಿದುಕೊಳ್ಳಬಹುದು. ಸತತವಾಗಿ ಗಾಳಿಯನ್ನು ಎದುರಿಸುವ ಅಂತರಿಕ್ಷ ವಾಹನಗಳ ಮೇಲೇರುವಿಕೆ, ಹಾರಾಟ ನಿಯಂತ್ರಣ - ಹೀಗೆ ಎಲ್ಲವೂ ವಾಹನಗಳ ದೇಹ, ರೆಕ್ಕೆ, ಪುಕ್ಕ ಮುಂತಾದ ವಿವಿಧ ಭಾಗಗಳ ಮೇಲೆ ಗಾಳಿಯಿಂದ ಉಂಟಾಗುವ ಒತ್ತಡಗಳ ಪ್ರಮಾಣವನ್ನು ಅವಲಂಬಿಸಿರುತ್ತವೆ. ವಿಮಾನದ ಎರಡೂ ಬದಿಯ ರೆಕ್ಕೆಗಳ ಮೇಲ್ಭಾಗದಲ್ಲಿನ ಗಾಳಿಯ ಒತ್ತಡ ಕಡಮೆಯಾಗಿದ್ದು ಕೆಳಭಾಗದ ಒತ್ತಡ ಜಾಸ್ತಿಯಾಗಿರುವುದರಿಂದಲೇ ಅದು ಮೇಲೇರಲು ಸಾಧ್ಯ. ವಿಮಾನವು ಚಲಿಸುವಾಗ ಎದುರಿನಿಂದ ಹರಿಯುವ ಗಾಳಿಯ ಒತ್ತಡಗಳಲ್ಲಿ ಈ ರೀತಿಯ ವ್ಯತ್ಯಾಸಗಳುಂಟಾಗುವಂತೆ ರೆಕ್ಕೆಗಳನ್ನು ವಿನ್ಯಾಸ ಮಾಡಿರುತ್ತಾರೆ. ವಿಮಾನ ನಿಲ್ದಾಣದ ಓಡುದಾರಿಯ ಮೇಲೆ ಚಲನೆಯನ್ನು ಆರಂಭಿಸಿದಾಗ ಭೂಮಿಗೆ ಸಮಾನಾಂತರವಾಗಿರುವ ವಿಮಾನವು ಕ್ರಮೇಣ ಕೆಲವು ಡಿಗ್ರಿ ಕೋನದಲ್ಲಿ ತಲೆ ಎತ್ತಿ ಮೇಲೇರುವುದನ್ನು ನಾವು ನೋಡಿದ್ದೇವೆ. ಅಂತೆಯೇ ಹಾರಾಟದಲ್ಲಿರುವಾಗ ಹಾರಾಟದ ದಿಕ್ಕಿಗೆ ಎಡ ಅಥವಾ ಬಲ ಪಕ್ಕಗಳಿಗೆ ತಿರುಗುವ ಕೋನಗಳೂ ವಿವಿಧ ಚಲನೆಗಳಿಗೆ ಅಗತ್ಯವಾಗುತ್ತವೆ. ವಿಮಾನದ ಹಾರಾಟ ವೇಗ, ಈ ಕೋನಗಳು, ಇಂತಹ ಹಲವಾರು ಅಂಕಿ ಅಂಶಗಳು ಅತಿ ಪ್ರಮುಖವಾಗಿದ್ದು ಇವೇ ವಿಮಾನ ನಿಯಂತ್ರಣಕ್ಕೆ ಅತಿ ಅಗತ್ಯವಾದ ಮಾಹಿತಿಗಳಾಗುತ್ತವೆ. ಹಾಗಾಗಿ, ಪ್ರತಿಕ್ಷಣದಲ್ಲೂ ಈ ಮಾಹಿತಿಗಳನ್ನು ಪಡೆಯುವುದು ಹೇಗೆ? ಇದಕ್ಕಾಗಿಯೇ ಅನೇಕ ಅತ್ಯಾಧುನಿಕ, ಸಂಕೀರ್ಣ, ವಿದ್ಯುನ್ಮಾನ ಮಾಪಕಗಳನ್ನು ಅಭಿವೃದ್ಧಿಪಡಿಸಿ ವಿಮಾನದಲ್ಲಿ ಅಳವಡಿಸಿರುತ್ತಾರೆ. ವಿಮಾನದ ವೇಗ, ಹಾರುತ್ತಿರುವ ವಿವಿಧ ಕೋನಗಳು ಮುಂತಾದ ಅತಿ ಅಗತ್ಯವಾದ ಮಾಹಿತಿಗಳನ್ನು ಸತತವಾಗಿ ಲೆಕ್ಕಾಚಾರ ಮಾಡಲು ಅವುಗಳಲ್ಲಿ ಇರುವ ಆಧಾರ ಅಂಶಗಳೇನು? ಅದೇ ವಿಮಾನದ ವಿವಿಧ ಭಾಗಗಳ ಮೇಲೆ ಉಂಟಾಗುತ್ತಿರುವ ಒತ್ತಡ, ಒತ್ತಡ ವ್ಯತ್ಯಾಸಗಳು. ಈ ಒತ್ತಡ ಪ್ರಮಾಣಗಳನ್ನು ಅಳೆದು ಅವುಗಳಿಂದ ವಿಮಾನದ ವೇಗ, ವಿವಿಧ ಕೋನಗಳು ಮುಂತಾದವನ್ನು ಲೆಕ್ಕಿಸಲಾಗುತ್ತದೆ. ಅಂದರೆ ವಿಮಾನವು ಹಾರುವಾಗ ಅದರ ವಿವಿಧ ಭಾಗಗಳ ವಿವಿಧ ಬಿಂದುಗಳ ಮೇಲೆ ಉಂಟಾಗುವ ಒತ್ತಡಗಳ ಪ್ರಮಾಣವನ್ನು ಅಳೆದು ತಿಳಿದುಕೊಳ್ಳುವುದು ಬಹುಮುಖ್ಯ ಕ್ರಿಯೆಯಾಗಿರುತ್ತದೆ. ಈ ಒತ್ತಡಗಳ ಗ್ರಹಿಕೆಗಾಗಿ ವಿಮಾನದ ದೇಹದ ಮೇಲೆ, ಹಲವಾರು ಕಡೆಗಳಲ್ಲಿ ಒತ್ತಡವನ್ನು ಅಳೆಯುವ ಅನೇಕ ಪರಿಚೋದಕ (trigger) ಉಪಕರಣಗಳಿರುತ್ತವೆ. ವಿಮಾನ ಹಾಗೂ ಗಾಳಿಯ ಪರಸ್ಪರ ವಿರುದ್ಧ ದಿಕ್ಕಿನ ಚಲನೆಗಳ ಪರಿಣಾಮವಾದ ಒತ್ತಡಗಳ ಪ್ರಮಾಣಗಳನ್ನು ಈ ಪರಿಚೋದಕಗಳು ವಿದ್ಯುನ್ಮಾನ ಸಂಕೇತಗಳನ್ನಾಗಿ (Electronic signals) ಪರಿವರ್ತಿಸಿ ಅಳತೆಯ ಉಪಕರಣಗಳಿಗೆ ರವಾನಿಸುತ್ತವೆ. ಈ ಸಂಕೇತಗಳನ್ನು ಸಂಸ್ಕರಿಸಿ ಅಗತ್ಯ ಮಾಹಿತಿಗಳನ್ನು ಪಡೆಯಲಾಗುತ್ತದೆ. ಈಗ ವಿಮಾನದ ಮೇಲ್ಮೈನಲ್ಲಿ ಯಾಂತ್ರಿಕ / ವಿದ್ಯುನ್ಮಾನ ಉಪಕರಣಗಳಾದ ಪರಿಚೋದಕಗಳೇ ಇಲ್ಲದಂತಹ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಆಗ ವಿಮಾನದ ಮೇಲ್ಮೈ ಮೇಲೆ ಹರಿದು ಬರುವ ಗಾಳಿಗೆ ಯಾವ ಅಡೆತಡೆಗಳೂ ಇರುವುದಿಲ್ಲ. ಅಡೆತಡೆಗಳಿಲ್ಲದ ಚಲನೆಯಿಂದ ತೊಂದರೆ ನೀಡುವ ಗಾಳಿಯ ಸುಳಿಗಳಾಗುವುದಿಲ್ಲ. ಇದರ ಪರಿಣಾಮವಾಗಿ ಇಂಧನದ ಉಳಿತಾಯ, ವಿಮಾನದ ಸರಾಗವಾದ ಚಲನೆ ಮುಂತಾದ ಲಾಭಗಳಿವೆ. ಹಾಗಾದರೆ ಮೇಲ್ಮೈನ ವಿವಿಧ ಭಾಗಗಳಲ್ಲಿ ಉಂಟಾಗುವ ಒತ್ತಡಗಳ ಅಳತೆ ಹೇಗೆ? ಈ ರೀತಿಯಾಗಿ ವೇಗ, ಏರುಕೋನ, ತಿರುಗುಕೋನ ಮುಂತಾದವುಗಳು ವ್ಯತ್ಯಾಸಗೊಂಡಾಗ ಗಾಳಿಯ ಒತ್ತಡದಲ್ಲಾಗುವ ವ್ಯತ್ಯಾಸಗಳಿಗೆ ಯಾವುದು ಸ್ಪಂದಿಸುತ್ತದೆ ಎಂದು ಪ್ರಶ್ನಿಸಿದರೆ ವಿಮಾನದ ಮೇಲ್ಮೈಗೆ ಹಚ್ಚಿದ ಪೇಂಟ್ ಎಂದು ಉತ್ತರಿಸುವ ಮಟ್ಟವನ್ನು ನಾವು ಮುಟ್ಟಿದ್ದೇವೆ. ಅಂದರೆ ವಿಮಾನದ ಮೇಲ್ಮೈಗೆ ಹಚ್ಚಿದ ಪೇಂಟು ತನ್ನ ಮೇಲೆ ಉಂಟಾಗುವ ಒತ್ತಡದ ಬದಲಾವಣೆಗಳನ್ನು ಗ್ರಹಿಸಬಲ್ಲುದು ಎಂದರೆ ಅಚ್ಚರಿಯಾಗಬಹುದಲ್ಲವೆ? ಪರಿಣಾಮವಾಗಿ, ಯಾಂತ್ರಿಕ ಅಥವಾ ವಿದ್ಯುನ್ಮಾನ ಉಪಕರಣಗಳ ಬದಲು ಮೇಲ್ಮೈ ಮೇಲೆ ಇರುವ ಪೇಂಟ್, ಒತ್ತಡದ ಅಳತೆಯ ಮಾಹಿತಿಗಳನ್ನು ನೀಡುವಂತಾಗುತ್ತದೆ. ಇದೊಂದು ನಿಜವಾಗಿಯೂ ಅದ್ಭುತ ತಾಂತ್ರಿಕ ಕುಶಲತೆಯಲ್ಲವೆ? ವಿಜ್ಞಾನಿಗಳು ಈ ಸಾಧನೆಯ ಹಾದಿಯಲ್ಲಿ ದಾಪುಗಾಲಿಡುತ್ತಿದ್ದಾರೆ. ಈಗಾಗಲೇ ತಿಳಿಸಿದಂತೆ ವಿದ್ಯುನ್ಮಾನ ಮತ್ತು ಗಣಕ ಕ್ಷೇತ್ರದಲ್ಲಿನ ಅಗಾಧವಾದ ಬೆಳೆವಣಿಗೆಗಳಿಂದ ಇಂತಹ ಸಾಧನೆಗಳು ಸಾಧ್ಯವಾಗಿವೆ. ಪೇಂಟ್ಗಳು ಒತ್ತಡವನ್ನು ಅಳತೆ ಮಾಡುವುದು ಹೇಗೆ? ಇಂತಹ ಪೇಂಟ್‍ಗ ಬಹಳ ದುಬಾರಿ. ಇವುಗಳನ್ನು ವಿಶೇಷವಾಗಿ ತಯಾರಿಸುತ್ತಾರೆ. ಇವನ್ನು ‘ಒತ್ತಡ ಸಂವೇದಿ ಪೇಂಟ್ಗಳು (PSP -Pressure Sensitive Paints)’ ಎಂದು ಕರೆಯುತ್ತಾರೆ. ಈ ಪೇಂಟ್ಗಳನ್ನು ವಿಮಾನದ ಮಾದರಿಗಳಿಗೆ ಲೇಪಿಸಿ ವಾಯುಸುರಂಗಗಳಲ್ಲಿ ಒತ್ತಡಗಳ ಪರೀಕ್ಷೆಯ ಪ್ರಯೋಗಗಳು ಈಗ ಆಗುತ್ತಿವೆ. ವಿಮಾನ, ವಿಮಾನ ಭಾಗಗಳ ಅಥವಾ ಇನ್ನಾವುದೇ ಅಂತರಿಕ್ಷ ವಾಹನಗಳ ವಿವಿಧ ವಿನ್ಯಾಸಗಳನ್ನು ಸಿದ್ಧಪಡಿಸಿ ಅವುಗಳನ್ನು ಆಗಸದಲ್ಲಿ ಹಾರಿಸಿ ಪರೀಕ್ಷಿಸಲು ಅಸಾಧ್ಯವಾದ್ದರಿಂದ ಇವುಗಳ ಪುಟ್ಟ ಮಾದರಿಗಳನ್ನು ತಯಾರಿಸಿ, ವಾಯುಸುರಂಗದಲ್ಲಿಟ್ಟು ಗಾಳಿಯನ್ನು ಅತಿ ರಭಸದಿಂದ ಹಾಯಿಸುತ್ತಾರೆ. ಆಗ ಆಗಸದಲ್ಲಿ ವಿಮಾನವು ಹಾರಿದಾಗ ಉಂಟಾಗುವ ಒತ್ತಡ, ಬಲಗಳು ಮುಂತಾದ ಪರಿಣಾಮಗಳೇ ಅದೇ ಪ್ರಮಾಣಗಳಲ್ಲಿ ವಾಯು ಸುರಂಗದಲ್ಲಿಟ್ಟ ಪುಟ್ಟ ಮಾದರಿಗಳ ಮೇಲೆ ಉಂಟಾಗುತ್ತವೆ. ಈ ಪ್ರಯೋಗಗಳ ಪರಿಣಾಮಗಳನ್ನು ವಿಶ್ಲೇಷಿಸಿದಾಗ ಮಾತ್ರ ವಿಮಾನ, ವಿಮಾನ ಭಾಗಗಳ ವಿನ್ಯಾಸಗಳನ್ನು ಅಂತಿಮಗೊಳಿಸಲು ಸಾಧ್ಯ. ಹೀಗೆ ಪರೀಕ್ಷೆಗಳನ್ನು ಮಾಡುವಾಗ ಮಾದರಿಯ ಮೇಲೆಲ್ಲಾ ಪುಟ್ಟ ಪುಟ್ಟ ಪರಿಚೋದಕಗಳನ್ನು ಅಳವಡಿಸಬೇಕು. ಗಾಳಿಯ ಹರಿವಿದ್ದಾಗ ಪರಿಚೋದಕಗಳು ವಿಮಾನ ಮಾದರಿಯ ವಿವಿಧ ಭಾಗಗಳ ಮೇಲಿನ ಒತ್ತಡಗಳ ಪ್ರಮಾಣಗಳಿಗೆ ಸ್ಪಂದಿಸಿ ಅವುಗಳಿಗೆ ಅನುಗುಣವಾದ ಒತ್ತಡಗಳ ದತ್ತಾಂಶಗಳನ್ನು ನೀಡುತ್ತವೆ. ಆದರೆ ಈ ಪರೀಕ್ಷಾ ಸಂದರ್ಭಗಳಲ್ಲಿ ಮಾದರಿಯ ಮೇಲೆ ಅಳವಡಿಸಬಹುದಾದ ಒತ್ತಡ ಮಾಪಕಗಳ ಸಂಖ್ಯೆಗೆ ಮಿತಿ ಇದ್ದೇ ಇರುತ್ತದೆ. ಈ ಮಿತಿಯಿಂದಾಗಿ ಮಾದರಿಯ ಕೆಲವು ಭಾಗಗಳ ಮೇಲೆ ಉಂಟಾಗುವ ಒತ್ತಡಗಳನ್ನು ಅಳೆಯಲು ಸಾಧ್ಯವಾಗದಿರಬಹುದು. ಇಂತಹ ಒತ್ತಡಮಾಪಕಗಳ ಬದಲು ಒತ್ತಡ ಸಂವೇದಿ ಪೇಂಟ್‍ಗಳನ್ನು ಅವಲಂಬಿಸಿದರೆ ಹಲವಾರು ಮಿತಿಗಳಿಂದ ಹೊರಬರಬಹುದು. ಪೇಂಟಿನ ಮೇಲೆ ಗಾಳಿಯು ರಭಸದಿಂದ ಹಾಯ್ದಾಗ ಮೇಲ್ಮೈಯ ವಿವಿಧ ಜಾಗಗಳಲ್ಲಿ ಉಂಟಾಗುವ ವಿವಿಧ ಪ್ರಮಾಣದ ಒತ್ತಡಗಳ ಪರಿಣಾಮವಾಗಿ ಈ ವಿಶೇಷ ಪೇಂಟ್ಗಳಲ್ಲಿ ಉಬ್ಬು, ತಗ್ಗುಗಳುಂಟಾಗುತ್ತವೆ; ಬಿರುಕುಗಳಾಗುತ್ತವೆ; ಪೇಂಟಿನ ಮೇಲ್ಪದರಗಳಲ್ಲಿ ವರ್ಣವ್ಯತ್ಯಾಸಗಳುಂಟಾಗುತ್ತವೆ. ಇವೆಲ್ಲ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮ. ಆದರೆ ಆಧುನಿಕ ಉಪಕರಣಗಳಿಗೆ ಇದಾವ ಲೆಕ್ಕ. ಅಂತೆಯೇ ಶಕ್ತಿಯುತ ಆಂಕಿಕ (ಡಿಜಿಟಲ್) ಕ್ಯಾಮೆರಾಗಳ ಮೂಲಕ ಈ ವ್ಯತ್ಯಾಸಗಳ ಚಿತ್ರಣ ಮಾಡಿ ಗಣಕಕ್ಕೆ ರವಾನಿಸಬಹುದು. ಆಮ್ಲಜನಕದ ಅಣುಗಳ ಸಂಪರ್ಕ ಬಂದಾಗ ಕೆಲವು ಸಂಯುಕ್ತವಸ್ತುಗಳು ಬೆಳಕನ್ನು ಸೂಸುವ ಸಾಮಾನ್ಯ ಗುಣವು ಸುಪರಿಚಿತವಾಗಿದೆ. 1980 ನೇ ಇಸವಿಯವರೆಗೆ ವಾಯುಚಲನಾ ಪರೀಕ್ಷೆಗಳಲ್ಲಿ ಈ ವಸ್ತು ವಿಶೇಷ ಗುಣವನ್ನು ಬಳಸುವ ಪ್ರಯತ್ನಗಳಾಗಿರಲಿಲ್ಲ. ಅದೇ ವರ್ಷ ಪೀಟರ್ಸನ್ ಮತ್ತು ಫಿóಟ್ಜಿರಾಲ್ಡ್ ಎಂಬ ವಿಜ್ಞಾನಿಗಳು ಸಂಯುಕ್ತವಸ್ತುಗಳ ಈ ಗುಣವನ್ನು ಮೇಲ್ಮೈ ಪ್ರವಾಹ ವೀಕ್ಷಣೆಗೆ ಬಳಸಿಕೊಳ್ಳಲು ಉದ್ದೇಶಿಸಿ ವಸ್ತುವೊಂದರ ಮೇಲ್ಮೈಗೆ ಇದಕ್ಕಾಗಿಯೇ ತಯಾರಿಸಲಾಗಿದ್ದ ಪೇಂಟನ್ನು ಲೇಪಿಸಿದರು. ಇದರ ಮೇಲೆ ನೈಟ್ರೊಜನ್ ಅನಿಲವನ್ನು ಹರಿಸಿದಾಗ ಹರಿವಿನ ದಿಕ್ಕಿನಲ್ಲಿ ಮಿಂಚು ಹೊಡೆದಂತೆ ಬೆಳಕಿನ ಅಲೆಗಳು ಹರಿದುದನ್ನು ಗುರುತಿಸಿದರು. ನೈಟ್ರೊಜನ್ ಬದಲು ಆಮ್ಲಜನಕವನ್ನು ಹರಿಸಿದಾಗ ಕಪ್ಪು ಬಣ್ಣದ ಕಿರಣಗಳನ್ನು ಹರಿಸಿದಂತೆ ಕಂಡುಬಂತು. ಈ ಪ್ರಯೋಗಗಳಿಂದ ಉತ್ತೇಜಿತರಾಗಿ ವಾಯು ಸುರಂಗದಲ್ಲಿ ಪೇಂಟ್ ಮಾಡಿದ ಮಾದರಿಗಳ ಮೇಲೆ ಪ್ರವಾಹವನ್ನುಂಟುಮಾಡಿ ಮಾದರಿಯ ವಿವಿಧ ಭಾಗಗಳ ಮೇಲೆ ಉಂಟಾದ ಒತ್ತಡದ ಪರಿಣಾಮಗಳನ್ನು ತಿಳಿಯುವ ಪ್ರಥಮ ಪ್ರಯತ್ನವನ್ನು 1982ರಲ್ಲಿ ಕೈಗೊಳ್ಳಲಾಯಿತು. ಮುಂದೆ, ಜೈವಿಕ-ವೈದ್ಯಕೀಯ ಕ್ಷೇತ್ರದಲ್ಲಿನ ಅನ್ವಯವಾಗಿ ರಕ್ತದೊಳಗಿನ ಆಮ್ಲಜನಕದ ಸಾಂದ್ರತೆಯನ್ನು ಅಳೆಯಲು ವರ್ಣಪ್ರಭೆಯನ್ನು ಉಂಟುಮಾಡುವ ತಂತ್ರ್ರವನ್ನು ಬಳಸಲಾಯಿತು. ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಇದೊಂದು ಮಹತ್ತ್ವದ ಮೈಲಿಗಲ್ಲಾಯಿತು. ರಕ್ತದೊಳಗೆ ತೂರಿಸಲಾದ ದ್ಯುತಿ ತಂತುವಿನ ಮೂಲಕ ವರ್ಣಪ್ರಭೆಯನ್ನುಂಟುಮಾಡುವ ವರ್ಣಪ್ರಭೆಯ ತೀಕ್ಷ್ಣತಾ ವ್ಯತ್ಯಾಸಗಳನ್ನು ಗಮನಿಸಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಹೀಗೆ, ವಸ್ತುವಿನ ಮೇಲ್ಮೈಯಲ್ಲಿ ಉಂಟಾಗುವ ವಾಯು ಚಲನ ಅಂಶಗಳ ಅಳತೆಯ ಉಪಕರಣವಾಗಿ ಪೇಂಟ್ ಅನ್ನು ಬಳಸುವ ವಿಧಾನವು ಭದ್ರವಾಗಿ ತಳಊರಲು ಪೇಂಟ್ ರಸಾಯನವಿಜ್ಞಾನ ಮತ್ತು ದ್ಯುತಿ ಸಂವೇದನಾ ವಿಧಾನಗಳಲ್ಲಿ ನಡೆದ ಸಂಶೋಧನೆ, ಅಭಿವೃದ್ಧಿ ತರಬೇತಿ ಮುಂತಾದ ಕಾರ್ಯಕ್ರಮಗಳು ಕಾರಣವಾದವು.
ಒತ್ತಡ ಸಂವೇದಿ ಪೇಂಟ್ಗಳಿಂದ ಒತ್ತಡ ಮಾಪನ ವಿಧಾನವು ಅನೇಕ ಅನುಕೂಲತೆಗಳನ್ನು ಒದಗಿಸುತ್ತದೆ.
- ಇದೊಂದು ವಿಶಿಷ್ಟ ಒತ್ತಡ ಸಂವೇದನಾ ವ್ಯವಸ್ಥೆ. ಸಾಂಪ್ರದಾಯಕ ಒತ್ತಡ ಮಾಪಕಗಳಿಂದ ವಸ್ತುವೊಂದರ ಮೇಲ್ಮೈಯಲ್ಲಿರುವ ಕೆಲವೊಂದು ಬಿಂದುಗಳಲ್ಲಿ ಉಂಟಾಗುವ ಒತ್ತಡಗಳನ್ನು ಮಾತ್ರ ಕಂಡುಹಿಡಿಯಬಹುದಾಗಿದೆ. ಆದರೆ ಈ ವಿಧಾನವು ಕ್ಷೇತ್ರ ಮಾಪನವಾಗಿದ್ದು, ಮೇಲ್ಮೈನ ಎಲ್ಲ ಭಾಗದ ಎಲ್ಲ ಬಿಂದುಗಳಲ್ಲೂ ಉಂಟಾಗುತ್ತಿರುವ ಒತ್ತಡದ ಪ್ರಮಾಣವನ್ನು ತಿಳಿಯಬಹುದಾಗಿದೆ.
- ಮೇಲ್ಮೈನ ಯಾವುದೇ ಬಿಂದುವಿನಲ್ಲಿನ ಒತ್ತಡದ ಆಂಕಿಕ ಮಾಹಿತಿಗಳು ದೊರಕುವುದಲ್ಲದೆ ವಿಮಾನದ ಹೊರಮೈ ಮೇಲಿನ ಪ್ರವಾಹದ ಹರಿವಿನ ಪುರ್ಣ ಚಿತ್ರಣ ದೊರೆಯುತ್ತದೆ.
- ಅತ್ಯಂತ ಸಂಕೀರ್ಣವಾದ ಒತ್ತಡದ ಪರಿಪುರ್ಣ ಮಾದರಿಗಳನ್ನು ಪೇಂಟ್ ಸಂವೇದನೆ ಯಿಂದ ಪಡೆಯಬಹುದಾಗಿದೆ. ಇದರಿಂದಾಗಿ ವಾಹನದ/ವಾಹನದ ಹಲವಾರು ಮಾದರಿಗಳನ್ನು ತಯಾರಿಸಿ ಪ್ರಯೋಗಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಆದ್ದರಿಂದ ನಿರೀಕ್ಷಣೆಗೆ ತಕ್ಕ ಕಾರ್ಯ ನಿರ್ವಹಿ ಸುವ ಮಾದರಿಯನ್ನು ಅಂತಿಮಗೊಳಿಸುವ ಕ್ರಿಯೆಗಳನ್ನು ತ್ವರಿತಗೊಳಿಸಬಹುದು.
- ವಿಮಾನದ ಮಾದರಿಗಳ ಮೇಲೆ ಒತ್ತಡ ಮಾಪಕಗಳು ಇಲ್ಲದಿರುವುದರಿಂದ ವಾಯುಸುರಂಗ ಪರೀಕ್ಷಾ ಕಾಲದಲ್ಲಿ ಮಾದರಿಯನ್ನು ಹೆಚ್ಚಿನ ಗಾಳಿಯ ಒತ್ತಡಕ್ಕೆ ಒಳಪಡಿಸಿ ಹೆಚ್ಚು ಉಪಯುಕ್ತ ಮಾಹಿತಿಗಳನ್ನು ಪಡೆಯಬಹುದು.
ಇತ್ತೀಚಿನ ಬೆಳವಣಿಗೆಗಳು
ಬದಲಾಯಿಸಿಒತ್ತಡ ಸಂವೇದಿ ಪೇಂಟ್ಗಳ ಬಳಕೆಯ ಹಾದಿಯಲ್ಲಿ ವಿಶ್ವಾದ್ಯಂತ ಹತ್ತು ಹನ್ನೆರಡು ಸಂಶೋಧನಾ ಸಂಸ್ಥೆಗಳಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ನೂತನ ತಾಂತ್ರಿಕತೆಯು ಉಪಯುಕ್ತವೆಂದು ಸಿದ್ಧವಾಗಿರುವುದರಿಂದ ವಾಯುಸುರಂಗ ಪರೀಕ್ಷೆಗಳಿಗಾಗಿ ಇದನ್ನು ಉಪಕರಣವಾಗಿ ಬಳಸುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ಆರಂಭದ ಫಲಿತಾಂಶಗಳು ಅತ್ಯಂತ ಮಹತ್ವಪುರ್ಣವಾಗಿ ಕಂಡುಬಂದುದರಿಂದ ಸಂಶೋಧನಾ ವಿಧಾನ, ಫಲಿತಾಂಶಗಳನ್ನು ಪ್ರಕಟಿಸದೆ ಎಲ್ಲವೂ ಗುಟ್ಟಾಗಿ ಆಗುತ್ತಿತ್ತು. ಈ ಪ್ರವೃತ್ತಿಯು ಇತರ ಆಸಕ್ತ ಸಂಶೋಧಕರಿಗೆ ಒಂದು ಸವಾಲಾಗಿ ಪರಿಣಮಿಸಿತು. ಇದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಬಳಸಲು ಮೀಸಲಾದ ಅತಿಸೂಕ್ಷ್ಮ ಪದಾರ್ಥಗಳ ಚಿತ್ರಣಸಾಧ್ಯ ಕ್ಯಾಮರಾಗಳ, ಆಂಕಿಕ ಕ್ಯಾಮೆರಾಗಳ, ಅತಿವೇಗಕ್ರಿಯಾಶೀಲವೂ ಅತಿ ಹೆಚ್ಚಿನ ನೆನಪಿನ ಕೋಶಗಳನ್ನೂ ಹೊಂದಿರುವ ಗಣಕಗಳ ಹಾಗೂ ಚಿತ್ರಗಳ ಅತ್ಯುತ್ತಮ ಸಂಸ್ಕರಣೆಯ ಕ್ರಾಂತಿಕಾರಿ ವಿಧಾನಗಳು ವಿವಿಧೆಡೆಗಳಲ್ಲಿ ಅಭಿವೃದ್ಧಿಯಾಗತೊಡಗಿದವು. ಇದರ ಪರಿಣಾಮವಾಗಿ ವಸ್ತುವಿನ ಮೇಲ್ಮೈನ ಲಕ್ಷಾಂತರ ಬಿಂದುಗಳಲ್ಲಿ ನಿಖರವಾದ ಒತ್ತಡಮಾಪನಕ್ಕೆ ಪೇಂಟುಗಳನ್ನು ಬಳಸುವ ದಾರಿ ಸುಗಮವಾಯಿತು. ವೈಮಾಂತರಿಕ್ಷ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅತಿ ಉಷ್ಣತಾ ವ್ಯತ್ಯಾಸಗಳ ನಡುವೆಯೂ ವಿಮಾನಗಳ ಮತ್ತು ಆಕಾಶಕಾಯಗಳ ವಿವಿಧ ಭಾಗಗಳ ಮೇಲೆ ಉಂಟಾಗುವ ಒತ್ತಡದ ಅತಿ ಕನಿಷ್ಠ ಹಾಗೂ ಅತಿ ಹೆಚ್ಚಿನ ಒತ್ತಡ ಪರಿಮಾಣಗಳನ್ನು ಕರಾರುವಾಕ್ಕಾಗಿ ತಿಳಿದುಕೊಳ್ಳಬೇಕಾಗುತ್ತದೆ. ಆದ್ದರಿಂದಲೇ ಯಾವುದೇ ಉಷ್ಣತೆಯಲ್ಲೂ ತನ್ನ ಗುಣಗಳನ್ನು ಕಳೆದುಕೊಳ್ಳದೆ ಅತಿಸೂಕ್ಷ್ಮ ಬದಲಾವಣೆಗಳನ್ನೂ ಗುರುತಿಸಿ ಅಳತೆಮಾಡಬಲ್ಲ ಸಂವೇದಕ ಗಳಂತೆಯೇ ಒತ್ತಡ ಸಂವೇದಿ ಪೇಂಟ್ಗಳೂ ಕಾರ್ಯನಿರ್ವಹಣಾ ಸಾಮಥರ್ಯ್‌ವನ್ನು ಹೊಂದಿರಬೇಕಾಗುತ್ತದೆ. ಈ ಅವಶ್ಯಕತೆಗಳನ್ನು ಗುರುತಿಸಿ ಒತ್ತಡ ಮತ್ತು ಉಷ್ಣಾಂಶಗಳ ವ್ಯಾಪಕತೆ ಅತಿ ಹೆಚ್ಚಾಗಿರುವಾಗಲೂ ತನ್ನ ಗುಣಗಳನ್ನು ಕಳೆದುಕೊಳ್ಳದ ಪೇಂಟುಗಳ ಅನ್ವೇಷಣೆ ಹಾಗೂ ಅಭಿವೃದ್ಧಿಯತ್ತ ವಿe್ಞÁನಿಗಳ ಗಮನ ಕೇಂದ್ರೀಕೃತವಾಯಿತು.
1990ರ ದಶಕದಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅನೇಕ ಪೇಂಟ್ ಸಂಯುಕ್ತಗಳನ್ನು ಅಭಿವೃದ್ಧಿಗೊಳಿಸಲಾಯಿತು. ಹಲವಾರು ವಸ್ತುಗಳ ಮೇಲ್ಮೈಗೆ ಈ ಪೇಂಟ್ಗಳನ್ನು ಲೇಪಿಸಿ ವಾಯುಸುರಂಗಗಳಲ್ಲಿ ವಿವಿಧ ಒತ್ತಡ, ಉಷ್ಣತೆಗಳಿಗೆ ಒಳಪಡಿಸಿ, ಪೇಂಟ್ಗಳು ನಾಶವಾಗದಂತಹ ಆದರೆ ಈ ಬದಲಾವಣೆಗಳಿಗೆ ಸ್ಪಂದಿಸುವಂತಹ ಗುಣಗಳನ್ನು ಹೊಂದಿರುವ ಬಗ್ಗೆ ಪ್ರಯೋಗಗಳನ್ನು ನಡೆಸಲಾಯಿತು. ವಸ್ತುಗಳ ಸಮತಟ್ಟಾದ ಭಾಗಗಳಲ್ಲಿ ಒತ್ತಡಗಳ ಅಳತೆ ಸಮರ್ಪಕವಾಗಿದ್ದರೂ ಅದರ ಬಾಗು ಪ್ರದೇಶಗಳಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದವು. ಈ ರೀತಿಯ ಅಭಿವೃದ್ಧಿ ಮತ್ತು ಪರೀಕ್ಷಾ ಕ್ರಿಯೆಗಳು ಸತತವಾಗಿ ನಡೆದು ಬಂದು ಅತ್ಯಲ್ಪ ಒತ್ತಡಗಳಿಗೂ ಶೀಘ್ರವಾಗಿ ಸ್ಪಂದಿಸಬಲ್ಲ ಆದರೆ ತೀವ್ರತರ ಉಷ್ಣತೆಯ ಬದಲಾವಣೆಗಳನ್ನು ತಡೆದುಕೊಳ್ಳಬಲ್ಲ ಪೇಂಟ್ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಪೇಂಟನ್ನು ಲೇಪಿಸಿದ ಅನಂತರವೂ ವಸ್ತುವಿನ ಮೇಲ್ಮೈ ನುಣುಪಾಗಿ ರುವುದೂ ಅತಿಮುಖ್ಯ. ಇದೇ ವಾಯುಚಲನ ಸಹವರ್ತ ನಾಂಕಗಳ ಬೆಲೆಗಳನ್ನು ನಿರ್ಧರಿಸುತ್ತದೆ. ಅತಿ ಹೆಚ್ಚು ಎತ್ತರದಲ್ಲಿ ಅತಿಹೆಚ್ಚುವೇಗ ಅಂದರೆ ಶಬ್ದಾತೀತ ವೇಗದಲ್ಲಿ ಚಲಿಸುವ ಕದನ ವಿಮಾನಗಳ ಮೇಲೆ ಲೇಪಿಸಿದ ಪೇಂಟ್ಗಳು ದೃಢವಾಗಿದ್ದು ಸರಿಯಾದ ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಪೇಂಟ್ ಲೇಪಿತ ಪರೀಕ್ಷಾ ಮಾದರಿಯ ಮೇಲೆ ಪ್ರವಾಹವಿರುವಾಗ ಅದರ ಬಿಂದುವೊಂದರ ಮೇಲೆ ಲೇಸರ್ ಕಿರಣವನ್ನು ಹಾಯಿಸಿದಾಗ ಆ ಸ್ಥಳದಲ್ಲಿನ ಪೇಂಟ್ನಲ್ಲಿ ವರ್ಣವ್ಯತ್ಯಾಸಗಳಾಗುತ್ತವೆ ಎಂದು ಈಗಾಗಲೇ ಅರಿತಿದ್ದೇವೆ. ಇದನ್ನು ಗ್ರಹಿಸಲು ಗಣಕ ನಿಯಂತ್ರಿತ ಮಸೂರವನ್ನು ಮೇಲ್ಮೈ ಮೇಲೆ ಸತತವಾಗಿ ಪರಿಶ್ಚಲಿಸಲಾಗುತ್ತದೆ. ಹೀಗೆ ದಾಖಲಾಗುವ ಸಾದೃಶ್ಯ ಸಂಕೇತಗಳನ್ನು ಪರಿವರ್ತಕಗಳ ಮೂಲಕ ಆಂಕಿಕ ಸಂಕೇತಗಳನ್ನಾಗಿಸಲಾಗುವುದು.
ಪೇಂಟ್‍ಗಳೇ ‘ಒತ್ತಡ ಸಂವೇದಿ ಪೇಂಟ್ ವ್ಯವಸ್ಥೆ’ಯ ಕೇಂದ್ರಬಿಂದುಗಳು. ಒತ್ತಡಗಳಿಗೆ ಸ್ಪಂದಿಸಿದಾಗ ಪೇಂಟ್‍ನ ವರ್ಣ ಬದಲಾವಣೆಯಾಗುವುದರಿಂದ ಇದಕ್ಕೆ ಅಗತ್ಯವಾದ ರಾಸಾಯನಿಕ ವಸ್ತುಗಳ ಆಯ್ಕೆ, ಅವುಗಳ ಬೆರಕೆಯ ಪ್ರಮಾಣ ಮುಂತಾದವುಗಳು ಬಹುಮುಖ್ಯ ನಿರ್ಧಾರಕ ಅಂಶಗಳಾಗುತ್ತವೆ. ಗಾಳಿಯ ಹರಿವಿನ ಪರಿಣಾಮವಾಗಿ ಪೇಂಟ್ ಹೊರಸೂಸುವ ವರ್ಣದ್ರವ್ಯಗಳ ವಿವಿಧ ಸಾಂದ್ರತೆಗಳನ್ನು ವೀಡಿಯೋ ಕ್ಯಾಮೆರಗಳ ಮೂಲಕ ಗ್ರಹಿಸಿ ಸೂಕ್ತವಾಗಿ ಶೋಧಿಸಬೇಕು; ಸಂವೇದಕ ಮುಂತಾದ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳು ಸೂಕ್ಷ್ಮ ಪರಿಸರಕ್ಕೆ ಸ್ಪಂದಿಸಬೇಕು. ಸಾದೃಶ್ಯ ಸಂಕೇತಗಳನ್ನು ಆಂಕಿಕ ಸಂಕೇತಗಳನ್ನಾಗಿ ಪರಿವರ್ತಿಸಬಲ್ಲ ಪರಿವರ್ತಕಗಳು ಹೆಚ್ಚು ನಿಖರತೆಯನ್ನು ಹೊಂದಿರಬೇಕು. ಆರಂಭದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು, ಪೇಂಟ್ಗಳು ಹೆಚ್ಚಿನ ಉಷ್ಣತಾ ವ್ಯತ್ಯಾಸಗಳ ನಡುವೆಯೂ ದೃಢವಾಗಿರುವಂತೆÀ ಮತ್ತು ಒತ್ತಡಗಳಿಗೆ ಗರಿಷ್ಠ ಸಂವೇದನಾಶೀಲವಾಗಿರುವಂತೆ ಅವುಗಳ ಗುಣಗಳನ್ನು ಹೆಚ್ಚಿಸುವತ್ತ ದೃಷ್ಟಿಯನ್ನು ಹರಿಸಿದ್ದವು. ಆನಂತರದಲ್ಲಿ, ಆಂಕಿಕ ಕ್ಯಾಮೆರಗಳ ಅಭಿವೃದ್ಧಿ, ಅಳತೆಯ ನಿಖರತೆ, ವಿವಿಧ ಆಕಾರದ ಮಾದರಿಗಳ ಮೇಲೆ ನಡೆಸುವ ಪ್ರಯೋಗಗಳಿಂದ ಬರುವ ಮಾಹಿತಿಗಳನ್ನು ಸರಿಯಾಗಿ ಆಂಕಿಕಗೊಳಿಸುವುದು, ಅವುಗಳನ್ನು ಗಣಕಗಳಲ್ಲಿ ಸೂಕ್ತವಾಗಿ ಸಂಸ್ಕರಿಸುವುದು, ಈ ಕ್ರಿಯೆಗಳಿಗೆ ಅಗತ್ಯವಾದ ಗಣಕ ಕಾರ್ಯವಿಧಿಗಳ ಅಭಿವೃದ್ಧಿ ಮುಂತಾದ ಅಂಶಗಳತ್ತ ತೀವ್ರವಾದ ಗಮನವನ್ನು ಹರಿಸಲಾಗುತ್ತಿದೆ.
ಈ ಒತ್ತಡ ಸಂವೇದಿ ವಿಧಾನದಲ್ಲಿ, ಒತ್ತಡದ ಬೆಲೆಯು ಪೇಂಟ್‍ನ ಅಣುಗಳಿಗಿರುವ ಆಮ್ಲಜನಕ ಸಂವೇದನಾ ಶೀಲತೆ ಎಷ್ಟು ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಪೇಂಟ್ಗಳು ತಮ್ಮ ಮೇಲೆ ಹಾದುಬರುವ ಗಾಳಿಯಲ್ಲಿನ ಆಮ್ಲಜನಕದೊಡನೆ ವರ್ತಿಸಿದಾಗ ಹೊರಸೂಸುವ ವರ್ಣಪ್ರಭೆಯ ವ್ಯತ್ಯಾಸದ ಅಂಶಗಳನ್ನು ಸಂಗ್ರಹಿಸಿ, ಗಣಕಕ್ಕೆ ಊಡಿಸಿ ಅಂತಿಮವಾಗಿ ಒತ್ತಡದ ಪ್ರಮಾಣವನ್ನು ಲೆಕ್ಕಿಸಲಾಗುವುದು. ಅಲ್ಲದೆ ಗಣಕದಲ್ಲಿ ಚಿತ್ರದ ಪ್ರತಿಯೊಂದು ಅತ್ಯಲ್ಪ ಭಾಗವನ್ನೂ ಸಹಸ್ರಾಂಶಗಳಷ್ಟು ವಿಭಾಗಿಸಿ ವ್ಯತ್ಯಾಸಗಳನ್ನು ವಿವಿಧ ಬಣ್ಣಗಳಿಂದ ಗುರುತಿಸಿ ತೆರೆಯ ಮೇಲೆ ಮೂಡಿಸಲಾಗುವುದು. ಗಣಕಯಂತ್ರಗಳು ತಮ್ಮಲ್ಲಿರುವ ಚಿತ್ರ ಸಂಸ್ಕರಣೆಯ ವಿಧಾನಗಳಿಂದ, ವಿವಿಧ ಸಾಂದ್ರತೆಯ ಮತ್ತು ವಿವಿಧ ಬಣ್ಣಗಳ ಚಿತ್ರಗಳ ಮೂಲಕ ಒತ್ತಡ ವ್ಯತ್ಯಾಸಗಳ ನಿಖರ ಚಿತ್ರಣವನ್ನು ನೀಡುತ್ತವೆ. ಇವುಗಳನ್ನು ಸಂಖ್ಯೆಗಳಿಂದ ಗುರುತಿಸಲು ಸಾಧ್ಯವಾಗುವುದರಿಂದ ಒತ್ತಡಗಳ ಮಾಹಿತಿಗಳೂ ಕೂಡಲೇ ಸಿದ್ಧವಾಗುತ್ತವೆ. ಈ ರೀತಿ ಹಲವು ಮಾರ್ಗಗಳಿಂದ ಸಿದ್ಧವಾಗುವ ಸಂಖ್ಯಾ ಮಾಹಿತಿಗಳಿಂದ ವಿಮಾನ ವಿನ್ಯಾಸ, ಚಲನೆ, ನಿಯಂತ್ರಣಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಹುದು.
ಭಾರತದಲ್ಲಿ
ಬದಲಾಯಿಸಿವಾಯುಸುರಂಗದ ಪರೀಕ್ಷೆಗೆ ಒಳಪಟ್ಟ ವಿಮಾನ ಹಾಗೂ ವಿಮಾನದ ಅಥವಾ ಇನ್ನಾವುದೇ ವಸ್ತುವಿನ ವಿವಿಧ ಭಾಗಗಳ ಮೇಲಿನ ಒತ್ತಡದ ಸಮಗ್ರ ಚಿತ್ರಣ ಈ ವಿಧಾನದ ಬಹು ಮುಖ್ಯ ಅಂಶ; ವಸ್ತುವಿನ ಯಾವುದೇ ಎಲೆಕ್ಟ್ರಾನಿಕ್ ಉಪಕರಣವನ್ನು ಅಳವಡಿಸುವ ಅಗತ್ಯವಿಲ್ಲದಿರುವುದೂ ಒತ್ತಡ ಸಂವೇದಿ ಪೇಂಟ್ಗಳ ಬಳಕೆಯ ಗಮನಾರ್ಹ ಸಂಗತಿ. ಈ ರೀತಿಯ ಒತ್ತಡ ಸಂವೇದಿ ಪೇಂಟುಗಳ ಬಳಕೆ ವೈಮಾಂತರಿಕ್ಷ ಕ್ಷೇತ್ರದಲ್ಲಂತೂ ಗುಣಾತ್ಮಕ ಸುಧಾರಣೆಗಳನ್ನು ಉಂಟುಮಾಡುತ್ತದೆ. ಆದರೆ ಇದರ ಪರಿಪುರ್ಣ ಬಳಕೆಗೆ ಇನ್ನೂ ಕೆಲವು ವರ್ಷಗಳ ಕಾಲ ಕಾಯಬೇಕು. ಈಗ ಜರ್ಮನಿ, ಅಮೆರಿಕಾಗಳಲ್ಲಿ ಹಲವಾರು ಹಂತಗಳಲ್ಲಿ ಕೆಲಸ ನಡೆಯುತ್ತಿದೆ. ಇದರಿಂದ ಉತ್ತೇಜನಕರ ಫಲಿತಾಂಶಗಳು ಕಂಡುಬಂದಿವೆ. ಭಾರತದಲ್ಲಿ ಪ್ರಪ್ರಥಮವಾಗಿ ಬೆಂಗಳೂರಿನ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದಿರುವ ಸಂಶೋಧನಾ ಕಾರ್ಯಗಳಿಂದಾಗಿ ಪೇಂಟ್ಗಳ ತಯಾರಿಕೆಯ ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆಯನ್ನು ಗಳಿಸಲಾಗಿದೆ. ಇಲ್ಲಿ ತಯಾರಿಸಲಾದ ಪೇಂಟ್ಗಳನ್ನು ವಿಮಾನದ ವಿವಿಧ ಭಾಗಗಳ ಮಾದರಿಗಳ ಮೇಲೆ ಲೇಪಿಸಿ ಇಲ್ಲಿಯದೇ ಆದ ವಾಯುಸುರಂಗಗಳಲ್ಲಿ ಯಶಸ್ವೀ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ಪ್ರಯೋಗಗಳಿಗೆ ಅಗತ್ಯವಾದ ಅನೇಕ ವ್ಯವಸ್ಥೆಗಳನ್ನು ಇಲ್ಲಿ ಅನುಸ್ಥಾಪಿಸಲಾಗಿದೆ.