ಒಡಲಾಳ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ. ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ. |
ಒಡಲಾಳ ದೇವನೂರು ಮಹದೇವ ಅವರ ಮಹತ್ವದ ಕಿರುಕಾದಂಬರಿ. ೧೯೭೮ರಲ್ಲಿ ಬರೆದ ಒಡಲಾಳ ಆಕೃತಿಯಲ್ಲಿ ಕಿರಿದಾದರೂ ಕಲೆ ಹಾಗೂ ಸಾಮಾಜಿಕ ಪ್ರಸ್ತುತತೆ - ಈ ಎರಡು ದೃಷ್ಟಿಗಳಿಂದಲೂ ಬಹಳ ಮಹತ್ವದ ಕೃತಿ. ಈ ಕೃತಿಯು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ, ೧೯೮೭ರಲ್ಲಿ ಭಾರತೀಯ ಭಾಷಾ ಪರಿಷತ್‍ನ ಪ್ರಶಸ್ತಿಯನ್ನು ಪಡೆಯಿತು.
ಕಥೆಯ ಸ್ಥೂಲ ರೂಪ
ಬದಲಾಯಿಸಿ- ಸಾಕವ್ವ ಆ ಹಟ್ಟಿಯ ಯಜಮಾನಿ. ತನ್ನ ದುಡಿಮೆಯಿಂದ ನಾಲ್ಕು ಕಂಬಗಳ ಆ ತೊಟ್ಟಿ ಹಟ್ಟಿಯನ್ನು ಕಟ್ಟಿದ್ದೇನೆ ಎಂಬ ಹೆಮ್ಮೆ ಅವಳದು. ಐದು ಮಕ್ಕಳ ತಾಯಿ-ಮೂರು ಗಂಡು, ಎರಡು ಹೆಣ್ಣು. ನಾಲ್ಕು ಎಕರೆ ಜಮೀನಿದ್ದರೂ, ಮಳೆಯನ್ನು ನಂಬಿದ್ದ ಭೂಮಿಯಾದ ಕಾರಣ ಅವಳ ಸಂಸಾರ ಬಹುಮಟ್ಟಿಗೆ ಕೂಲಿನಾಲಿಯಲ್ಲೇ ಸಾಗುತ್ತಿದೆ. ಆ ತೊಟ್ಟಿ ಮನೆಯ ಒಂದು ಭಾಗದಲ್ಲಿ ಅವಳ ಹಿರಿಯ ಮಗ ಕಾಳಣ್ಣ, ಅವನ ಹೆಂಡತಿ ಪ್ರತ್ಯೇಕ ಒಲೆ ಹೂಡಿದ್ದಾರೆ. ಅವರಿಗೆ ಮಕ್ಕಳಿಲ್ಲ.
- ಇನ್ನೊಂದು ಭಾಗದಲ್ಲಿ ಎರಡನೆಯ ಮಗ ಸಣ್ಣಯ್ಯ, ಅವನ ಹೆಂಡತಿ ಚೆಲುವಮ್ಮ, ಒಂದು ಕೈಗೂಸು ಸೇರಿದಂತೆ ನಾಲ್ಕು ಪುಟ್ಟ ಮಕ್ಕಳು ಪ್ರತ್ಯೇಕವಾಗಿದ್ದಾರೆ. ಮೂರನೆಯವ ಗುರುಸಿದ್ದು. ನಡುಭಾಗ ಅವನದು. ಆದರೆ ಅವನು ಮದುವೆಯಾಗಿಲ್ಲ. ಗಾರೆ ಕೆಲಸ, ರೇಷ್ಮೆ ಗೂಡು ವ್ಯಾಪಾರ, ಚಿಲ್ಲರೆ ಅಂಗಡಿ, ದನಗಳ ದಳ್ಳಾಳಿ ವ್ಯವಹಾರ ಎಲ್ಲ ಹಿಡಿದು ಈಗ ಗಾರೆ ಕೆಲಸಕ್ಕೆ ಅಂಟಿಕೊಂಡಿದ್ದಾನೆ. ನಾಟಕದಲ್ಲಿ ಪಾರ್ಟು ಮಾಡುವ ಖಯಾಲಿ. ಸಾಮಾನ್ಯವಾಗಿ ಮಾರಿಗುಡಿಯಲ್ಲಿರುತ್ತಾನೆ.
- ಇವನು ಹೊರ ಜಗತ್ತಿನ ಪರಿಚಯ ಉಳ್ಳವನು. ಸಾಕವ್ವನ ಹಿರೀ ಮಗಳು ಗೌರಮ್ಮನ ಗಂಡ ಊರೂರು ಅಲೆಯುವವನು. ಅದರಿಂದ ಅವಳು ತನ್ನ ಎರಡು ಗಂಡು ಮಕ್ಕಳೊಂದಿಗೆ ಆ ಹಟ್ಟಿಯಲ್ಲೇ ಇದ್ದಾಳೆ. ಹಿರಿಯ ಮಗ ಸದಾ ಮಲಗಿರುವ ರೋಗಿ; ಕಿರಿಯವ ಶಿವು ಶಾಲೆಗೆ ಹೋಗುವ ಹುಡುಗ. ಸಾಕವ್ವನ ಕಿರಿ ಮಗಳು ಪುಟ್ಟಗೌರಿ. ಸಾಕವ್ವ ತನ್ನ ಒಂದು ಹುಂಜವನ್ನು ದೇವರಿಗೆ ಬಿಟ್ಟಿದ್ದಾಳೆ. ಅದು ಹಿಂದಿನ ದಿನ ಮನೆಗೆ ಬಂದಿಲ್ಲ.
- ರಾತ್ರಿ ಆದಾಗ ಅವಳು ಅದನ್ನು ಹುಡುಕಿ ಅಲೆದಿದ್ದಳಾದರೂ ಅದು ದೊರೆತಿರಲಿಲ್ಲ. ಇವತ್ತು ಬೆಳಿಗ್ಗೆಗೆ ಏಳುವಾಗಲೇ ಅವಳಿಗೆ ಅದರದೇ ಚಿಂತೆ. ಅದನ್ನು ಹುಡುಕಿಕೊಂಡು ಊರು ತಿಪ್ಪೆಗಳಲ್ಲೆಲ್ಲಾ ತಿರುಗಿ, ಸುಸ್ತಾಗಿ ಮನೆಗೆ ಬಂದು ಕಂಡವರ ಮೇಲೆಲ್ಲಾ ಹಾರಾಡುತ್ತಿದ್ದಾಳೆ. ಅಂಥ ಸಮಯದಲ್ಲಿ ಮಗಳು ಗೌರಮ್ಮ ನೀರು ತಂದುಕೊಟ್ಟಿದ್ದಕ್ಕೆ ಖುಷಿಗೊಂಡು ಅವಳ ಎರಡನೆಯ ಮಗ ಶಿವುವಿಗೆ ತನ್ನ ಆಸ್ತಿ ಬರೆಯುವುದಾಗಿ ಸಾಕವ್ವ ಹೇಳಿ ದುಃಖದ ರಾಗ ಹಾಡತೊಡಗಿದಳು,.
- ಎಂದಿನ ಸೌಹಾರ್ದತೆ ಮೂಡುತ್ತದೆ. ಮಧ್ಯಾಹ್ನದಲ್ಲಿ ಶಿವು ಇಸ್ಕೂಲು ಮುಗಿಸಿ ಸ್ಕೂಲುಪ್ಪಿಟ್ಟು ಹಿಡಿದು ಬಂದ. ಬಿಸಿಲಿನ ಧಗೆಗೆ ಎಲ್ಲರೂ ಅಲ್ಲಲ್ಲಿ ಬಿದ್ದುಕೊಂಡಿದ್ದರು. ಪುಟ್ಟಗೌರಿಯ ಮಾತಿನಂತೆ ರೋಗಿ ಅಣ್ಣನಿಗೂ ಒಂದು ಪಾಲು ನೀಡಿ ಶಿವು ಉಪ್ಪಿಟ್ಟು ತಿಂದ. ಆ ನಡುವೆ ಪುಟ್ಟಗೌರಿ ಈಚಲ ಕಡ್ಡಿಗೆ ನೀಲಿ ಹಚ್ಚಿಕೊಂಡು ಕಾಲಿನಿಂದ ಆರಂಭಿಸಿ ಸುಂದರವಾದ ನವಿಲಿನ ಚಿತ್ರ ಬರೆದಳು. ಶಿವು ಅಜ್ಜಿಗೆ ಪುಟ್ಟಗೌರಿ ನವಿಲು ಬರೆದುದನ್ನು ಹೇಳಿದಾಗ ಸಾಕವ್ವ ಏನೋ ಅಡ್ಡ ಮಾತಾಡಿದಳು.
- ಪುಟ್ಟಗೌರಿ ಆ ನವಿಲಿನ ಜೋಡಿಗೆ ಅದರ ಎದುರು ಭಾಗದಲ್ಲಿ ಇನ್ನೊಂದು ಅಂತಹದೇ ನವಿಲು ಬಿಡಿಸಿದಳು. ಸಂಜೆ ವೇಳೆಗೆ ಸಾಕವ್ವ ಶಿವುವನ್ನು ಪುಸಲಾಯಿಸಿ ಹುಂಜ ಹುಡುಕಲು ಹೊರಟಳು. ಹೋಗುವಾಗ ಒಂದು ಲೋಟವನ್ನೂ ಒಯ್ದು, ಇಡೀ ಕೇರಿಯನ್ನು ತಿರುಗಿ ದೂರದ ನೆಂಟರೊಬ್ಬರ ಮನೆಯಿಂದ, ಅದರ ತುಂಬ ಸಾರು ತಂದಳು. ಹುಂಜ ಸಿಕ್ಕಲಿಲ್ಲ. ಕತ್ತಲಾದ ಮೇಲೆ ಕಾಳಣ್ಣ ಬೆನ್ನ ಮೇಲೆ ಒಂದು ಮೂಟೆ ಹೊತ್ತು ತಂದ. ಅವನ ಹೆಂಡತಿ ಉರಿ ಮಾಡಿದಳು.
- ಮನೆಯವರೆಲ್ಲರೂ ಸೇರಿಕೊಂಡು ಅವನು ತಂದಿದ್ದ ಕಳ್ಳೇಕಾಯನ್ನು ಬಿಡಿಸಿ ತಿನ್ನಲಾರಂಭಿಸಿದರು. ಸಿಪ್ಪೆ ಉರಿಗೆ ಹೋಯಿತು. ಶಿವು ಮತ್ತು ಪುಟ್ಟಗೌರಿ ಹೊರಕ್ಕೆ ಹೋಗಿ ಮಾರಿಗುಡಿಯಿಂದ ಗುರುಸಿದ್ದುವನ್ನೂ ಕರೆತಂದರು. ಬೆಳಗಿನ ಜಗಳವನ್ನೆಲ್ಲ ಮರೆತು ಸಕಲರೂ ಆ ಕಳ್ಳೇಕಾಯಿ ಯಜ್ಞದಲ್ಲಿ ಪಾಲ್ಗೊಂಡರು. ಕೊನೆಗೆ ಹಾಲಿಲ್ಲದ ಬೆಲ್ಲದ ಟೀ ಕಾಯಿಸಿ ಕುಡಿದು ಮಲಗಿದರು. ಗುರುಸಿದ್ದು ಹೊರಟುಹೋದ.
- ಆ ಹೊತ್ತಿಗೆ ಪೊಲೀಸ್ ಕಾನಸ್ಟೆಬಲ್ ರೇವಣ್ಣ ಹೊರಗಿನಿಂದ ಆ ಮನೆಗೆ ಚಿಲುಕ ಹಾಕಿದ.ಹಲವು ತಿಂಗಳುಗಳಿಂದ ಸಾಹುಕಾರ್ ಎತ್ತಪ್ಪನವರು ಮಿಲ್ಲಿನ ಕಡಲೆಕಾಯಿ ಲಾಟಿನಲ್ಲಿ ಆಗಾಗ ಒಂದು ಮೂಟೆ ಕಳುವಾಗುತ್ತಿದೆ ಎಂದು ಪೊಲೀಸ್ ಇನಸ್ಪೆಕ್ಟರಗೆ ಹೇಳುತ್ತಿದ್ದರು. ಈಗ ಅದರ ಪತ್ತೆಗೆ ಪೀಸಿ ರೇವಣ್ಣ ನೇಮಕನಾಗಿದ್ದ. ಅವನು ಕಂಬಳಿ ಹೊದ್ದು ಕೂತು ನೋಡುತ್ತಿರುವಾಗ ದಪ್ಪಕ್ಕೆ, ಎತ್ತರಕ್ಕೆ ಇದ್ದ ಒಬ್ಬ ಚೀಲಕ್ಕೆ ಕಡಲೆಕಾಯಿ ತುಂಬಿಕೊಂಡು ಹೊರಟ. ರೇವಣ್ಣ ಹಿಂಬಾಲಿಸಿದ.
- ಅವನು ಬಂದು ಸಾಕವ್ವನ ಹಟ್ಟಿಗೆ ನುಗ್ಗಿದ. ಇಡೀ ಕಳ್ಳರ ಜಾಲವನ್ನೇ ಪತ್ತೆ ಮಾಡೋಣ ಎಂಬ ತಾಳ್ಮೆಯಿಂದ ರೇವಣ್ಣ ಆ ಮನೆಗೆ ಬಂದು ಹೋಗುವವರನ್ನು ನಿಗಾ ಮಡಗಿ ನೋಡುತ್ತಾ ಇದ್ದ. ಪೀಚಲ ಸಣ್ಷ್ಟುಣಯ್ಯ ಬಂದದ್ದು, ನೆರೆಮನೆ ಕಾಳಕ್ಕ ಬಂದು ಬಂದು ಸೇರಷ್ಟು ಏನನ್ನೋ ಪಡೆದುಕೊಂಡುದು, ಒಂದು ಹುಡುಗ-ಹುಡುಗಿ ಎಲ್ಲಿಗೋ ಹೋಗಿದ್ದು, ಇನ್ನೊಬ್ಬನ ಕರೆದುಕೊಂಡು ಬಂದದ್ದು, ಅವನು ಮತ್ತೆ ಹೊರಟು ಮಾರಿಗುಡಿ ಕಡೆಗೆ ಹೋಗಿದ್ದು - ಎಲ್ಲಾ ಅವನ ಗಮನಕ್ಕೆ ಬಂತು.
- ಊರೆಲ್ಲ ಗೊರಕೆ ಹೊಡೆಯಲು ಆರಂಭಿಸಿದಾಗ ಅವನಿಗೂ ನಿದ್ದೆ ಕಾಡಿತು. ಆಗ ಎದುರಿನ ಸಾಕವ್ವನ ಹಟ್ಟಿಗೆ ಹೊರಗಿನಿಂದ ಚಿಲುಕ ಹಾಕಿ ಬಂದು ಕೂತ. ಮೊದಲ ಬೆಳಕು ಮೂಡಿದಾಗಲೇ ಅವನು ಎದ್ದು ಸಾಹುಕಾರರ ಆಳನ್ನು ಎಬ್ಬಿಸಿ ಸುದ್ದಿ ತಿಳಿಸಿ ಬರಲು ಸ್ಟೇಷನ್ನಿಗೆ ಓಡಿಸಿದ. ಬೆಳಕು ಹರಿಯೊ ಹೊತ್ತಿಗೆ ಜೇಲಿನಲ್ಲಿ ಪೊಲೀಸರು, ದಫೇದಾರ, ಇನ್ಸ್ ಪೆಕ್ಟರ್ ಬಂದರು. ರೇವಣ್ಣ ವರದಿ ಒಪ್ಪಿಸಿದ. ಮನೆ ಕದ ತೆರೆಸಿ ಒಳಕ್ಕೆ ನುಗ್ಗಿದ ಪೊಲೀಸಿನವರು ಮೂಲೆ ಮೂಲೇನೂ ಸೀಸಿದರು.
- ಕಾಳಣ್ಣನನ್ನು, ಮನೆ ಜನವನ್ನು , ಸಾಕವ್ವನನ್ನು, ಪುಟ್ಟಗೌರಿ, ಗುರುಸಿದ್ದು-ಎಲ್ಲರನ್ನೂ ಹೆದರಿಸಿದರು. ಅದರೇನು? ಕಳ್ಳತನಕ್ಕೆ ರುಜುಮಾತಾಗಿ ಒಂದೇ ಒಂದು ಬೊಗಸೆ ಕಡಲೆಕಾಯಾಗಲಿ, ಸಿಪ್ಪೆಯಾಗಲಿ ಪತ್ತೆ ಆಗಲಿಲ್ಲ. ಎತ್ತಪ್ಪನವರೂ ಅಲ್ಲಿಗೆ ಬಂದರು. ಸಾಕವ್ವನ ಹಟ್ಟಿಯ ಬಡತನ ಮಾತ್ರ ಬಯಲಾಯಿತು. ದೇವ್ರ ಮನೆಗೂ ನುಗ್ಗಿದರು. ಬೂಟುಗಾಲಲ್ಲಿ. ಗುರುಸಿದ್ದು ಮಾರಿಗುಡಿಯಿಂದ ಮನೆಗೆ ಬಂದಾಗ ಹಿಡಿದು ತನಿಖೆ ಮಾಡಿದರು. ಆದರೂ ಏನೂ ಏನೇನೂ ಪತ್ತೆ ಆಗಲಿಲ್ಲ.
- ರೇವಣ್ಣ ಪೆಚ್ಚಾದ. ಇದನ್ನೆಲ್ಲ ನೋಡಿದ ಎತ್ತಪ್ಪ ಸಾಹುಕಾರರಿಗೇನೋ "ಹೊಟ್ಟೆ ಒಳಗೆ ಬೆಂಕಿ ಇಟ್ಕೊಂಡ ಈ ರಾಕ್ಷಸ ಜನ ತಿಂದಿರಲೂ ಬಹುದು" ಎಂದುಕೊಂಡರು. ಪೊಲೀಸರೆಲ್ಲ ಹೊರಟಾಗ ಸಾಕವ್ವ ಸುಮ್ಮನಿರಲಾರದೆ ತನ್ನ ಹುಂಜ ಕಳುವಾದ ಮಾತನ್ನು ಇನ್ಸ್ ಪೆಕ್ಟರಿಗೆ ಹೇಳಿಕೊಂಡಳು. ಅವರು "ಹುಂಜ ಯಾವ ರೀತಿ ಇತ್ತು" ಎಂದು ಕೇಳಿದಾಗ, ಅದರ ಜೋಡಿ ಆಗಿದ್ದ ಒಂದು ದಪ್ಪ ಹುಂಜವನ್ನು ತೋರಿಸಿದಳು.
- ಇನ್ಸ್ಪೆಕ್ಟರ್ "ಭೇಷ್ ಚೆನ್ನಾಗಿದೆ ಮುದ್ಕಿ. ಈ ಹುಂಜ್ನ ಹಿಡ್ಕೊಂಡು... ಇದನ್ನು ಅದ ಹುಡ್ಕೊಂಡು ಬರಾಕೆ ಕಳಿಸ್ತೀನಿ" ಅಂದರು. ಅವಳು ಏನೋ ಹೇಳ ಹೊರಟಾಗ, ಕೂಡಿದ್ದ ಜನ ಎಲ್ಲ ನಕ್ಕರು. ಆಗ ಅವಳಿಗೆ ನಿಜ ಅರಿವಾಯ್ತು. ಕೊನೆಗೆ ಹುಂಜದ ಕಾಲಿಗೆ ಹಗ್ಗ ಬಿತ್ತು. ಅದೂ ಪೊಲೀಸಿನೋರ ಜೊತೆ ಜೀಪಿನಲ್ಲಿ ಹೋಯಿತು. ಸಪ್ಪೆಯಾಗಿ ಕಾಣಿಸುವ ಈ ಸಾರಾಂಶವು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತದೆ.
ಒಡಲಾಳದಲ್ಲಿ ಮಿಂಚುವ ಹಾಸ್ಯಪ್ರಜ್ಞೆ
ಬದಲಾಯಿಸಿ- ಒಡಲಾಳದುದ್ದಕ್ಕೂ ದೇವನೂರರ ಹಾಸ್ಯ ಪ್ರಜ್ಞೆ ಮಿಂಚಿ ಕಥೆಗೆ ಚುರುಕು ನೀಡಿದೆ. ಒಂದೇ ಒಂದು ಜಾಗದಲ್ಲೂ ಓದುಗನ ಹೃದಯ ಭಾರವಾಗುವುದಿಲ್ಲ. ಗಂಭೀರವಾದ ವಸ್ತುವುಳ್ಳ ಈ ಕಥೆಯಲ್ಲಿ ಇದನ್ನು ಒಂದು ವಿಶಿಷ್ಟ ಗುಣ ಎಂದು ಪರಿಗಣಿಸ ಬಹುದು. ಆರಂಭದಲ್ಲಿಯೇ ಸಾಕವ್ವ ಮತ್ತು ಅವಳ ಹಟ್ಟಿಯನ್ನು ನಮ್ಮ ಕಣ್ಣು ಮುಂದೆ ಚಿತ್ರಿಸುವಾಗಲೇ ಬರುವ ವಿವರಣೆ ಹಾಗೂ ಬಳಸಿರುವ ಭಾಷೆ - ಎರಡೂ ಇದನ್ನು ತೋರಿಸುತ್ತವೆ.
- ಇನ್ನು ತಾಯಿ, ಮಕ್ಕಳು, ಸೊಸೆಯ ನಡುವೆ ನಡೆಯುವ ಜಗಳದಲ್ಲಿ ಆಡುವ ಮಾತುಗಳು ಎಷ್ಟೇ ಬಿರುಸಾಗಿ ಕಂಡುಬರಲಿ, ಆ ಇಡೀ ಪ್ರಸಂಗ ಒಂದು 'ಫಾರ್ಸ್' ಅಥವಾ ಪ್ರಹಸನವಾಗಿ ಕಂಡುಬರುತ್ತದೆ. ಗೌರವ್ವನ ಹಿರಿಯ ಮಗನ ನಿರಂತರ ರೋಗವನ್ನು ಆ ಕುಟುಂಬ ಹೇಗೆ ಸ್ವೀಕರಿಸಿದೆ ನೋಡಿ: ಅದಕ್ಕೆ ಇದ್ದಂಥ ಕಾಯಿಲೆ ಯಾವ ಕಾಲಕ್ಕೂ ವಾಸಿಯಾಗವುದಿಲ್ಲ ಎಂದು ಅದ ನೋಡಿದವರು ಅದರೊಡನೆ ಅದರ ಅವ್ವನೂ ಅಂದುಕೊಂಡಿದ್ದಳು. ಅದೂನೂ ಅಂತಲೆ ಅಂದುಕೊಂಡಿತ್ತು.
- ಅದು ಯಾವಾಗಲೂ ಒಂದು ಬಿಳಿ ದುಪ್ಪಟಿಯ ತಲೆ ಮುಚ್ಚುವಂತೆ ಹೊದ್ದುಕೊಂಡಿರುತ್ತಿದ್ದು ಅದನ್ನು ಒಂದು ಚಣವೂ ಬಿಟ್ಟಿರುತ್ತಿರಲಿಲ್ಲ. ಅದಕ್ಕೆ ಅದರ ಚಿಕ್ಕ ಮಾವ ಗುರುಸಿದ್ದು ಆ ಹೈದನಿಗೆ ದುಪ್ಟಿ ಕಮೀಷನರು ಎಂದು ಕರೆಯುತ್ತಿದ್ದು ಈಗ ಅದೇ ಹೆಸರು ನಿಂತಿತ್ತು. ಅದರ ಹುಟ್ಟ ಹೆಸರು ಆ ಹೈದಗೂ ನೆನಪ್ಪಿದ್ದಂತೆ ಕಾಣದು. ಆ ಹೈದ ಈ ಲೋಕದಿಂದ ಎಂದೋ ಚುಕ್ತವಾದದ್ದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಅದರಷ್ಟೇ ಅದು ಕೂತಿರುತ್ತಿತ್ತು.
- ಉಳಿದ ಯಾಪಾರಗಳು ಅವರಷ್ಟಕ್ಕೆ ಅವು ನಡೆಯುತ ಹೋಗುತ್ತಿದ್ದುವು. ಇಲ್ಲಿ ಮಿಂಚಿರುವ ಹಾಸ್ಯಪ್ರಜ್ಞೆಯು ಬಂದುದನ್ನು ಬಂದಂತೆ ಸ್ವೀಕರಿಸಿ, ಅದಕ್ಕಾಗಿ ದುಃಖ ಪಡದಿರುವ ಮನೋಭಾವವನ್ನು ತೋರಿಸುತ್ತದೆ. ಆ ಹುಡುಗನಿಗೆ ಚಿಕಿತ್ಸೆ ಮಾಡಿಸುವ ಸಾಮರ್ಥ್ಯ ಅವರಿಗಿಲ್ಲ. ಅದರಿಂದ ಅವರು ಅದನ್ನು ನಕ್ಕು ತಮ್ಮದಾಗಿಸಿಕೊಂಡು ನಿಶ್ಚಿಂತರಾಗಿದ್ದಾರೆ.
- ಪ್ರಸಿದ್ಧ ರಷ್ಯನ್ ಸಾಹಿತಿ ಮ್ಯಾಕ್ಸಿಂ ಗಾರ್ಕಿ ಒಂದೆಡೆ "ಬಡವರು ತಮ್ಮ ಕೋಟಲೆಗಳನ್ನು ಮರೆಯಲು ಜಗಳವಾಡುತ್ತಾರೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಹುಶಃ ಈ ಕುಟುಂಬ ಮತ್ತು ಇಂತಹ ಸಹಸ್ರಾರು ಕುಟುಂಬಗಳು ತಮಗೆ ಒದಗುವ ದುರಂತಗಳನ್ನು ಸಮಾಧಾನಚಿತ್ತರಾಗಿ ಸ್ವೀಕರಿಸುವುದು ಸಹ ಬಡತನದ ಒಂದು ಲಕ್ಷಣವಾಗಿರಬೇಕು.
- 'ವಿಧಿವಾದ' ಬಡತನದ ಒಂದು ಗುಣವೋ? ಶಿವುನಿಗೆ ಸಾಕವ್ವ ಹೇಳುವ ಕಥೆ, ಕಡಲೆಕಾಯಿ ತಿನ್ನುವಾಗ ನಡೆಯುವ ಸಂಭಾಷಣೆಗಳು ಮತ್ತು ಅವಕ್ಕಿಂತ ಮಿಗಿಲಾಗಿ ಮಾರಿ ಗುಡಿಯಲ್ಲಿನ ನಾಟಕ ಕಲಿಕೆ - ಇವೆಲ್ಲವೂ ಸರಸವನ್ನು ಸೂಸುತ್ತವೆ. "ಹೋಗು ಹೋಗೆಲೊ ಶಿಕಂಡೀ" ಎಂಬಲ್ಲಿಗೆ ಹಾಡು ನಿಲ್ಲಿಸಿದಾಗ, ಚಿನ್ನಸ್ವಾಮಿಯ ಅಭಿನಯವಂತೂ ಬಹಳ ಸೊಗಸಾಗಿದೆ. ಪೀಸಿ ರೇವಣ್ಣನಂತೂ ನಗಿಸಲೆಂದೇ ಮಾಡಿರುವವನಂತಿದ್ದಾನೆ.
- ಈ ಕಥೆಯೇನಾದರೂ ಚಿತ್ರವಾದರೆ ಅತ್ಯುತ್ತಮ ದರ್ಜೆಯ ಹಾಸ್ಯನಟರು ನಿರ್ವಹಿಸಬೇಕಾಗಿ ಬರುವಂತಹ ಪಾತ್ರ ಇದು. ಪೊಲೀಸ್ ಇನ್ಸ್ ಪೆಕ್ಟರು ಸಂದರ್ಭಕ್ಕೆ ಮೀರಿದ ದಪ೯ ಪ್ರದಶನದಿಂದಲೇ ತಿರಸ್ಕಾರ ಪೂಣ೯ ನಗೆಯೊಂದನ್ನು ಮೂಡಿಸುತ್ತಾನೆ. ಆ ಹಟ್ಟಿಯಲ್ಲಿ ಕಡಲೇಕಾಯಿ ಇಲ್ಲ, ಅದು ಅಲ್ಲಿನ ಜನರ ಹೊಟ್ಟೆಗೆ ಸೇರಿದೆ ಎಂಬುದನ್ನು ಈಗಾಗಲೇ ಅರಿತ ಓದುಗನಿಗೆ ಆ ಜಪ್ತಿಯು ಸಹ ಒಂದು ಅಣುಕು ನಾಟಕವಾಗಿಯೇ ಭಾಸವಾಗುತ್ತದೆ. ಒಡಲಾಳವು, ಓದುಗರ ಮನವನ್ನು ಮೆಚ್ಚಿಸಿರುವುದರಲ್ಲಿ ದೇವನೂರರ ಈ ಹಾಸ್ಯ ಪ್ರಜ್ಞೆ ಬಹು ಮುಖ್ಯ ಪಾತ್ರವಹಿಸಿದೆ ಎಂದು ನಾನು ಭಾವಿಸಿದ್ದೇನೆ
ಹೊಸ ತಲೆಮಾರಿನ ಚಿತ್ರಣ
ಬದಲಾಯಿಸಿ- ಸಾಕವ್ವನ ಕುಟುಂಬ ಸದಸ್ಯರನ್ನು ನಾವು ಮೂರು ಗುಂಪುಗಳಾಗಿ ವರ್ಗೀಕರಿಸಬಹುದು. ಪೂರಾ ಹಳೆ ತಲೆಮಾರಿನ ಸಾಕವ್ವ, ಈಗ ಸಂಸಾರಸ್ಥರಾಗಿರುವ ಕಾಳಣ್ಣ-ಅವನ ಹೆಂಡತಿ, ಸಣ್ಣಯ್ಯ , ಚಲುವಮ್ಮ, ಅವರ ಪುಟ್ಟ ಮಕ್ಕಳು, ಮಗಳು ಗೌರಮ್ಮ ಮತ್ತು ಅವಳ ಹಿರೀ ಹೈದ ದುಪಟಿ ಕಮೀಷನರು - ಇವರು ಇನ್ನೊಂದು ಗುಂಪು. ಹೊಸ ಬದುಕನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿರುವ ಗುರುಸಿದ್ದು. ಪುಟ್ಟಗೌರಿ ಮತ್ತು ಚುರುಕು ಹುಡುಗ ಶಿವು - ಇವರು ಮೂರನೆಯ ಗುಂಪು.
- ಈ ಮೂರನೆಯ ಗುಂಪನ್ನು ನಾವು ಹೊಸ ತಲೆಮಾರು ಎಂದು ವ್ಯಾಖ್ಯಾನಿಸಬಹುದು. ಕಡಲೇಕಾಯಿ ಪ್ರಸಂಗದಲ್ಲಿನ ಸಂಭಾಷಣೆಗಳಲ್ಲಿ ಕಾಳಣ್ಣ, ಸಣ್ಣಯ್ಯ ಮುಂತಾದವರ ಮಾತುಗಳು ಮತ್ತು ಗುರುಸಿದ್ದುವಿನ ಮಾತುಗಳ ನಡುವಣ ವಸ್ತು ಹಾಗೂ ಧ್ವನಿಗಳಲ್ಲಿ ಎದ್ದು ಕಾಣುವ ವ್ಯತ್ಯಾಸಗಳನ್ನು ಗಮನಿಸಿ. ಕಾಳಣ್ಣ ಮುಂತಾದವರಿಗೆ ಎತ್ತಪ್ಪನ ಕೊಟ್ಟಿಗೆ, ದನ, ಅವನ ಮಗಳ ಮದುವೆಯ ವೈಭವ ವಸ್ತುವಾದರೆ, ಗುರುಸಿದ್ದುವಿಗೆ ತಗಡೂರಿನ ಮೇಲ್ಜಾತಿಯ ಹೋಟಲೊಂದಕ್ಕೆ ತಮ್ಮವರು ಹೊಕ್ಕು ಎಲ್ಲರಂತೆ ಕಾಫಿ ತಿಂಡಿ ಕೊಲ್ಲುವ ವಿಷಯ ಮಹತ್ವದ್ದು. ಯಾರದೋ ವೈಭವಕ್ಕೆ ಮರಳಾಗುವವರು ಒಂದು ಕಡೆ, ಸಮಾನತೆಗಾಗಿ ಹೋರಾಡಲು ಸಿದ್ಧರಾಗಿರುವವನು ಇನ್ನೊಂದು ಕಡೆ.
- ಇನ್ಸಪೆಕ್ಟರ್ ರೂಲು ಗೋಲು ಪುಟ್ಟ ಗೌರಿಯ ಗಲ್ಲವನ್ನು ನೇವರಿಸುವಾಗ ಅವನನ್ನು ಕೆರಳಿಸುವುದು ಗುರುಸಿದ್ದುವಿನ ಬಿರುನೋಟವೇ ಹೊರತು ಬೇರಯವರದ್ದಲ್ಲ. ಅನ್ಯಾಯದೆದುರು ಪ್ರತಿಭಟನೆಯ ನೋಟವನ್ನಾದರೂ ಬೀರುವ ಶಕ್ತಿ ಹಾಗೂ ಮನೋಭಾವ ಅವನಲ್ಲಿದೆ. ಇದೇ ಗುಂಪಿನ ಪುಟ್ಟ ಗೌರಿಯನ್ನು ಗಮನಿಸಿ. ನವಿಲು ಬರೆದಾಗ ತಾಯಿ ಸಾಕವ್ವ ಆಡುವ ಕೊಂಕು ಮಾತುಗಳಿಂದ ಅವಳು ಕೆರಳುವುದಿಲ್ಲ. ಜಗಳಕ್ಕೆ ನಿಲ್ಲುವುದಿಲ್ಲ.
- ಪ್ರತಿಯಾಗಿ ಮೊದಲು ಬರೆದ ನವಿಲಿಗೆ ಜೋಡಿಯಾಗಿ ಇನ್ನೊಂದು ನವಿಲನ್ನು ಚಿತ್ರಿಸುತ್ತಾಳೆ. ಮಾರಿಗುಡಿಯಲ್ಲಿ ನಾಟಕದ ತಂಡವನ್ನು ಕಂಡಾಗ ಅವಳ ಕಣ್ಣು ನಿಲ್ಲುವುದು ಹಾಡು ಹೇಳುತ್ತಿದ್ದ ಚಿನ್ನಸ್ವಾಮಿಯ ಮೇಲೆ. ಅವಳು ಎತ್ತಪ್ಪನ ಮನೆಯ ವೈಭವಕ್ಕೆ ಯಾವ ಪ್ರತಿಕ್ರಿಯೆಯನ್ನೂ ತೋರಿಸಿಲ್ಲ ಎಂಬುದು ಸಹ ಗಮನಾರ್ಹವಾದ ಸಂಗತಿ. ಚಿತ್ರ ಬಿಡಿಸಬಲ್ಲ ತರುಣಿ. ಭಾವುಕವಾಗಿ ಹಾಡಬಲ್ಲ ತರುಣನಲ್ಲಿ ಮನಹರಿಸುವುದು ಸಹಜವಾದದ್ದು. ಶಿವು ಓದಿನಲ್ಲಿ ಆಸಕ್ತಿ ತಲೆದಿರುವ ಹುಡುಗ.
- ತಾನೂ ನವಿಲು ಬರೆಯುವ ಕೆಲಸ ಹಿಡಿಯುವುದರಲ್ಲಿ ಅವನ ಕಲಿಕೆಯ ಆಸಕ್ತಿ ಪ್ರದರ್ಶಿತವಾಗಿದೆ. ನವಿಲಿನ ಚಿತ್ರವನ್ನು ಮೆಚ್ಚಬಲ್ಲ, ಅಜ್ಜಿ ಹೇಳುವ ಕಥೆಯಲ್ಲಿ ತಲ್ಲೀನನಾಗಿ ಯಕ್ಷಲೋಕವೊಂದನ್ನು ಅವನು ಕಲ್ಪಿಸಿಕೊಳ್ಳಬಲ್ಲ. ಈ ಮೂರು ಪಾತ್ರಗಳಲ್ಲಿ ಸಾಕವ್ವನ ಕುಟುಂಬದ ಭವಿಷ್ಯವಿದೆ. ಇವರು ಹೊಸತನವನ್ನು ತರ ಬಲ್ಲವರು ಎಂಬ ಭರವಸೆ ಓದುಗರಲ್ಲಿ ಮೂಡುತ್ತದೆ.
- ಸಾಕವ್ವನ ಕುಟುಂಬದ ಆವರಣದಿಂದ ಪಾತ್ರಗಳನ್ನು ಎತ್ತಿ, ದಲಿತ ಸಮುದಾಯಗಳ ವಿಶಾಲ ಆವರಣಕ್ಕೆ ತಂದಿರಿಸಿ ನೋಡಿದರೆ, ಇಂದು ನಮ್ಮ ಸುತ್ತಿನಲ್ಲಿ ನಾವು ಕಾಣುತ್ತಿರುವ ನೂರಾರು ಸಂಖ್ಯೆಯ ದಲಿತ ಕವಿಗಳು, ಲೇಖಕರು, ಕಲಾವಿದರು ಅವರಾಗಿರಬಹುದು! ಯಾವುದೇ ಕೀಳರಿಮೆಯ ಪ್ರಜ್ಞೆಯಿಲ್ಲದ ಎಲ್ಲ ಸಮುದಾಯಗಳವರೊಂದಿಗೆ 'ನಾವು ನಿಮ್ಮ ಸಮಾನರು' ಎಂಬ ಆತ್ಮವಿಶ್ವಾಸದಿಂದ ಬೆರೆಯ ಬಲ್ಲ ದಲಿತ ತರುಣ ವರ್ಗ ಆವರಿರಬಹುದು.
ಕೃತಿ ವಿಮರ್ಶೆ
ಬದಲಾಯಿಸಿ- ದೇ.ಮ. ಅವರು ಅಸಾಧಾರಣವಾಗಿರುವ ಒಂದು ಘಟನೆಯ ಹಿನ್ನಲೆಯಾಗಿ, ಬಡ ದಲಿತ ಕುಟುಂಬವೊಂದರ ಸೂಕ್ಷ್ಮವಾದ ಪರಿಸ್ಥಿತಿಯನ್ನು ಬಳಸಿಕೊಂಡು ರೂಪಿಸಿರುವ ಈ ಕಥಾನಕವು ವಿಮರ್ಶಕರಿಂದ "ಆಧ್ಯಾತ್ಮಿಕ ಜಯ" (ಯು.ಆರ್. ಅನಂತ ಮೂರ್ತಿ) "ಸಿದ್ದಿ ಪಡೆದವನು ಮಾಡಿದ ಪವಾಡ" (ಸವಿತಾ ನಾಗಭೂಷಣ) ಮುಂತಾದ ಮೆಚ್ಚುಗೆಯ ಮಾತುಗಳನ್ನು ಗಳಿಸಿದೆ.
- ಪ್ರಕಟವಾಗಿ ಇಪ್ಪತ್ತೆರಡು ವರ್ಷಗಳು ಆನಂತರವೂ ವಿಮರ್ಶಕರಿಂದಲೂ, ಸಹೃದಯಿ ಓದುಗರಿಂದಲೂ ಪುನಃ ಪುನಃ ಮೌಲ್ಯಮಾಪನಗೊಳ್ಳುತ್ತಿದೆ. ಅಂದಿಗೂ, ಇಂದಿಗೂ ಕಥಾ ರೂಪವಾಗಿ, ಪ್ರಶಂಸೆಗೆ ಪಾತ್ರವಾಗುತ್ತಿದೆ. ಈ ಕಿರು ಕಾದಂಬರಿ ನಮ್ಮ ಹೃದಯಗಳನ್ನು ಈ ರೀತಿ ಸ್ಪಂದಿಸುತ್ತಿರುವುದಕ್ಕೆ ಹಲವಾರು ಕಾರಣಗಳಿರುವುದು ಸಾಧ್ಯ.