ಒಗಟು

(ಒಗಟುಗಳು ಇಂದ ಪುನರ್ನಿರ್ದೇಶಿತ)

ಒಗಟು ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್‌). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ  ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿರುತ್ತಾನೆ. ಉಪಮಾನದ ಆಧಾರದಿಂದ ಉಪಮೇಯವನ್ನು ಪತ್ತೆಮಾಡಬೇಕಾಗುತ್ತದೆ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.

ಮಾನವಕುಲದ ಬಾಲ್ಯದಲ್ಲೆ ಒಗಟು ಹುಟ್ಟಿತೆಂದು ಹೇಳಬಹುದು. ಮಾತಿನ ಸಂಪ್ರದಾಯದಲ್ಲಿ ಒಗಟೆಯೇ ಎಲ್ಲಕಿಂತ ಮೊದಲಿನದೆಂಬ ಅಭಿಪ್ರಾಯವೂ ಉಂಟು. ಆದಿಮಾನವ ಪ್ರಕೃತಿಯ ವಸ್ತುಗಳಲ್ಲಿ ಗುರುತಿಸಿದ ಸಾದೃಶ್ಯವೆ ಒಗಟುಗಳ ನಿರ್ಮಾಣಕ್ಕೆ ತಳಹದಿ. ಅವನು ಸಾದೃಶ್ಯಜ್ಞಾನದಿಂದುಂಟಾದ ವಿಸ್ಮಯದಲ್ಲೆ ನಿಲ್ಲದೆ, ಅದನ್ನು ಹಾಸ್ಯ ಮತ್ತು ಮನೋರಂಜನೆಗಾಗಿ ಬಳಸಿಕೊಳ್ಳಲು ಮಾಡಿದ ಪ್ರಯತ್ನವೆ ಒಗಟಿನ ರೂಪ ತಳೆಯಿತು. ಈಗ ನಮಗೆ ಗೊತ್ತಿರುವ ಹಾಸ್ಯದ ಪ್ರಕಾರಗಳಲ್ಲಿ ಒಗಟೇ ಅತ್ಯಂತ ಪ್ರಾಚೀನವೆಂದೂ ಸಾದೃಶ್ಯಪ್ರಜ್ಞೆಯೆ ಇದಕ್ಕೆ ಮೂಲಕಾರಣವೆಂದೂ ವಿದ್ವಾಂಸರ ಅಭಿಪ್ರಾಯ. ಒಗಟುಗಳು ಬಹುಮಟ್ಟಿಗೆ ಬುದ್ಧಿಪುರ್ವಕವಾದವು; ಬುದ್ಧಿಯ ವಿಕಾಸಕ್ಕೆ ನೆರವಾಗುತ್ತವಾದರೂ ಕೇವಲ ಸಂತೋಷವೆ ಅವುಗಳ ಮುಖ್ಯವಾದ ಗುರಿ. ಒಗಟುಗಳಲ್ಲಿ ಎರಡು ವಸ್ತುಗಳ ತರ್ಕಬದ್ಧ ಸಮೀಕರಣವಿರುತ್ತದೆ. 

ಆದ್ದರಿಂದ ಒಗಟುಗಳೆಂದರೆ ರೂಪಕಗಳು ಅಥವಾ ಪ್ರತಿಮೆಗಳು ಎನ್ನಬಹುದು. ಇವುಗಳಲ್ಲಿ ಕೆಲವಂತೂ ಸುಂದರವಾದ ಕಾವ್ಯಗಳೇ. ಲೋಕಾನುಭವ, ಸೂಕ್ಷ್ಮ ಸಂವೇದನೆ, ಕಲ್ಪನಾಶಕ್ತಿಗಳು ಉತ್ತಮವಾದ ಒಗಟುಗಳಲ್ಲಿ ಕಂಡುಬರುತ್ತವೆ. ವಸ್ತುಗಳ ಯಥಾರ್ಥ ಚಿತ್ರಗಳನ್ನು ಸಂಕ್ಷಿಪ್ತವಾಗಿ ಕೊರೆದು ನಿಲ್ಲಿಸುವ ಶಕ್ತಿ ಒಗಟುಗಳಲ್ಲುಂಟು. ಇವುಗಳಿಗೆ ವಿಷಯವಾಗದ ಪದಾರ್ಥವೇ ಜಗತ್ತಿನಲ್ಲಿಲ್ಲ. 

ಎಷ್ಟೋ ವೇಳೆ, ಒಗಟುಗಳ ಅಂತರಾರ್ಥ ಸುಲಭವಾಗಿ ಹೊಳೆಯದಿದ್ದರೂ ಅವುಗಳ ಬಾಹ್ಯರೂಪ ಮಾತ್ರ ಆಕರ್ಷಕವಾಗಿ ಕುತೂಹಲ ಕೆರಳಿಸುವಂತಿರುತ್ತದೆ. ಒಗಟುಗಳಲ್ಲಿ ಹಲವು ಬಗೆಗಳಿವೆ. ಕೆಲವು ಪದ್ಯರೂಪದಲ್ಲಿದ್ದರೆ ಮತ್ತೆ ಕೆಲವು ಲಯಬದ್ಧ ಗದ್ಯದಲ್ಲಿರುತ್ತವೆ.

ಒಗಟುಗಳ ಇತಿಹಾಸ

ಬದಲಾಯಿಸಿ

ಒಗಟುಗಳ ಇತಿಹಾಸ ಜಾಗತಿಕವಾದುದು. ಪ್ರಪಂಚದ ಅತ್ಯಂತ ಪ್ರಾಚೀನ ಜನಾಂಗಗಳಲ್ಲೆಲ್ಲ ಅವು ಬಳಕೆಯಲ್ಲಿದ್ದುವು. ಭರತಖಂಡದಲ್ಲಿ ಮಾತ್ರವಲ್ಲದೆ ಗ್ರೀಕ್, ರೋಮನ್, ಈಜಿಪ್ಷಿಯನ್ ಜನಾಂಗಗಳಲ್ಲಿ ಕೂಡ ಒಗಟುಗಳ ಸಾಹಿತ್ಯ ವಿಪುಲವಾಗಿತ್ತು. ಭಾರತದಲ್ಲಿ ವೈದಿಕ ವಾಙ್ಮಯದಲ್ಲೆ ಒಗಟುಗಳು ಸುಳಿಯುತ್ತವೆ. ಕುರಾನ್, ಬೈಬಲ್ಗಳಲ್ಲೂ ಅವು ಬಂದಿವೆಯೆಂದು ಹೇಳುತ್ತಾರೆ.

ಒಗಟುಗಳು ಜನಸಾಮಾನ್ಯರಲ್ಲಿ ಮನರಂಜನೆಗಾಗಿ ಬಳಕೆಗೊಳ್ಳುತ್ತಿದ್ದುವಾದರೂ ರಾಜಾಸ್ಥಾನಗಳಲ್ಲಿ ಪಂಡಿತಕವಿಗಳ ಕ್ಯೆಯಲ್ಲಿ ಅವು ವಿದ್ವತ್ತಿನ ಸ್ಪರ್ಧೆಯ ಉದ್ದೇಶಕ್ಕೂ ಒದಗುತ್ತಿದ್ದುವು. ಪಾಂಡಿತ್ಯಪ್ರದರ್ಶನ, ಕೀರ್ತಿಸಂಪಾದನೆ, ಧನಲಾಭ, ಪ್ರಣಯಸಾಫಲ್ಯ ಮುಂತಾದ ಪ್ರಯೋಜನಗಳೂ ಇವುಗಳಿಂದ ಸಿದ್ಧಿಸುತ್ತಿದ್ದಂತೆ ತೋರುತ್ತದೆ. ಒಗಟುಗಳ ಮೇಲೆ ಪಣ ಕಟ್ಟಿ ಜೂಜಾಡುವ ಪದ್ಧತಿಯೂ ಕೆಲವೆಡೆ ಇದ್ದಂತೆ ತಿಳಿದುಬರುತ್ತದೆ. ಒಗಟಿಗೆ ಸಂಬಂಧಿಸಿದ ದ್ಯೂತ ಸ್ಪರ್ಧೆ, ಮೇಳ, ಸಮಾರಂಭಗಳು ಗ್ರೀಕರಲ್ಲಿ ವಿಪರೀತವಾಗಿದ್ದುವು. ಅನೇಕ ಗ್ರೀಕ್ ರುದ್ರನಾಟಕಗಳಲ್ಲಿ ಒಗಟುಗಳೆ ಕ್ರಿಯೆಗೆ ಚಾಲಕಶಕ್ತಿಯಾಗಿ ಕೆಲಸ ಮಾಡಿರುವುದುಂಟು. ಸ್ಫಿಂಕ್ಸ್‌ಭೂತ ಈಡಿಪಸನಿಗೆ ಒಡ್ಡಿದ ಸಮಸ್ಯೆ ಬಹಳ ವಿಖ್ಯಾತವಾದದ್ದು; ಅದು ಜಗತ್ತಿನ ಪುರಾತನ ಒಗಟುಗಳಲ್ಲೊಂದು, ಅದು ಹೀಗಿದೆ; ಬೆಳಗ್ಗೆ ನಾಲ್ಕು ಕಾಲು, ಮಧ್ಯಾಹ್ನ ಎರಡು ಕಾಲು, ಸಂಜೆ ಮೂರು ಕಾಲುಗಳಲ್ಲಿ ನಡೆಯುವ ಪ್ರಾಣಿ ಯಾವುದು? ಉತ್ತರ-ಮನುಷ್ಯ! (ನೋಡಿ- ಈಡಿಪಸ್)

ಒಗಟುಗಳು ಪ್ರಾಚೀನಕಾಲದಿಂದಲೂ ಧಾರ್ಮಿಕ ವಿಧಿ ಉತ್ಸವಗಳಿಗೆ ಸಂಬಂಧಿಸಿದಂತೆ, ಅಲೌಕಿಕ ಉದ್ದೇಶಗಳಿಗೆ ಮಾಧ್ಯಮವಾಗಿ ಬಳಕೆಯಾಗುತ್ತ ಬಂದಿರುವುದು ಆಶ್ಚರ್ಯದ ಸಂಗತಿ. ಅವು ಆಧ್ಯಾತ್ಮಿಕ ಸತ್ಯಗಳಿಗೆ, ವೇದಾಂತ ರಹಸ್ಯಗಳಿಗೆ ಅಭಿವ್ಯಕ್ತಿ ನೀಡಿವೆ. ಗ್ರೀಕರಲ್ಲಿ ಡೆಲ್ಫಿಯ ಭವಿಷ್ಯವಾಣಿ ಪುರೋಹಿತರ ಮೂಲಕ ಒಗಟುಗಳ ರೂಪದಲ್ಲೆ ಹೊರಹೊಮ್ಮುತ್ತಿತ್ತು. ಭರತಖಂಡದ ವೈದಿಕ ಯಜ್ಞಯಾಗಾದಿಗಳಲ್ಲಿ ಒಗಟುಗಳ ಸಂಪ್ರದಾಯವಿದ್ದುದು ತಿಳಿದುಬರುತ್ತದೆ. ಕನ್ನಡದಲ್ಲಿ ಅಲ್ಲಮಪ್ರಭುವಿನ ಎಷ್ಟೋ ವಚನಗಳು ಬಹಳ ಗಹನವಾಗಿದ್ದು

ಬೆಡಗಿನ ವಚನಗಳೆನಿಸಿಕೊಂಡು, ಅನುಭಾವಗಳಿಗೆ ಪ್ರತೀಕಗಳಾಗಿವೆ; ಇವೂ ಒಗಟುಗಳೇ.

ಕನ್ನಡ ಜನಪದದಲ್ಲಿ ಪ್ರಚಲಿತವಾಗಿರುವ ಕೆಲವು ಒಗಟುಗಳನ್ನಿಲ್ಲಿ ಉದಾಹರಿಸಲಾಗಿದೆ; ಅಂಗೈ ಅಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ (ದೀಪ); ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ (ಹಲಸಿನ ತೊಳೆ); ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ (ಮಲ್ಲಿಗೆ ಹೂ); ಗಿಡ್ಡಿ ಗುದ್ದಿದರೆ ಮನೆಯೆಲ್ಲ ಮಕ್ಕಳು (ಬೆಳ್ಳುಳ್ಳಿ); ಹಗ್ಗ ಹಾಸಿದೆ, ಕೋಣ ಮಲಗಿದೆ (ಕುಂಬಳಕಾಯಿ); ಸುತ್ತ ನೋಡಿದರೆ ಸುಣ್ಣದ ಗೋಡೆ, ಎತ್ತ ನೋಡಿದ್ರೂ ಬಾಗಿಲೇ ಇಲ್ಲ (ಕೋಳಿಮೊಟ್ಟೆ); ಕೆರೆಯೆಲ್ಲ ಕುರಿಹೆಜ್ಜೆ (ನಕ್ಷತ್ರ).

ಒಗಟು ಕೇಳುಗರನ್ನು ಕುತೂಹಲಕ್ಕೆ ತಳ್ಳಿ, ಆಸಕ್ತಿಯನ್ನು ಅರಳಿಸಿ, ಅವರ ಬುದ್ಧಿಯನ್ನು ಕೆಣಕುತ್ತದೆ. ಕಂಬದ ಮೇಲೆ ನಿಂಬೆಹಣ್ಣು-ಎಂದಾಗ ಲವಂಗವೆಂಬ ಅರ್ಥ ಹೊಳೆಯುವುದು ಕಷ್ಟವಾಗಬಹುದು. ಹಾಗೆಯೇ ಮುದ್ದು ಮಗುವಿನ ಕೆನ್ನೆಯನ್ನು ತಿನ್ನಬಾರದ ಹಣ್ಣು ಬಲುರುಚಿ, ಬಲುರುಚಿ ಎಂದು ಬಣ್ಣಿಸಿ ಚಪ್ಪರಿಸುವುದೂ ಒಗಟಿನ ರೀತಿ, ಒಂದು ಪದಗಳ ಗುಂಪು, ಒಂದು ವಾಕ್ಯ ಅಥವಾ ಒಂದು ಇಡೀ ಪದ್ಯವೇ ಒಗಟಾಗಿರಬಹುದು. ಕೆಲವು ಕವಿಗಳಂತೂ ತಮ್ಮ ಕೃತಿಗಳಲ್ಲಿ ಇಂಥ ಚಾತುರ್ಯದ ಉಕ್ತಿಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ.

ಲಕ್ಷ್ಮೀಶನ ಈ ಸಾಲುಗಳನ್ನು ನೋಡಿ; ಹರಿಯೆನ್ನ ಭಾವ; ವಿಧಿಯೆನಗೆ ಅಳಿಯ; ಜಲಧಿಯೆನಗೆ ಮಾತೆ; ಲಕ್ಷ್ಮಿಯೆನಗೆ ಸೋದರಿ; ಸುಧಾಕರ ನನಗೆ ಹಿರಿಯಣ್ಣ-ಈ ಐವರಿದ್ದೂ ನಾನೀ ತಿರುಕನ ಕೈಗೆ ಸಿಕ್ಕಿ ನರಳುವಂತಾಯ್ತೆ ಎಂಬಲ್ಲಿ ಹುದುಗಿದ ಹೂರಣದ ರುಚಿ ಎರಡು ವಿಧ.

ಚತುರತೆಯ ಮಾತಿನ ಹಿಂದಿನ ಅರ್ಥಗ್ರಹಿಸಿದ ಆನಂದ ಒಂದು ಕಡೆ; ಅದರ ಹಿಂದಿರುವ ನೀತಿಯ ಸೂಚನೆ ಮತ್ತೊಂದು ಕಡೆ. ಎರಡರಿಂದಲೂ ಸಂತೋಷ ಉಕ್ಕುತ್ತದೆ. ವಿಷ್ಣು ನನಗೆ ಭಾವ. ಬ್ರಹ್ಮ ಅಳಿಯ, ಸಮುದ್ರವೇ ತಾಯಿ, ಲಕ್ಷ್ಮಿ ಸೋದರಿ, ಚಂದ್ರನು ಅಣ್ಣ-ಇಂಥ ದೊಡ್ಡ ದೊಡ್ಡ ನಂಟರಿದ್ದರೂ ನನ್ನ ಹಣೆಯಬರೆಹ-ತಿರುಕನ ಕೈಯಲ್ಲಿ ಸಿಕ್ಕಿಕೊಂಡು ಅವನ ಬಾಯ ಉಸಿರಿಗೆ ಪಕ್ಕಾಗಿ ನರಳಬೇಕಾಯಿತಲ್ಲ ಎಂದು ಶಂಖ ತನ್ನ ಗೋಳನ್ನು ತೋಡಿಕೊಳ್ಳುವ ಈ ಭಾಗ ತುಂಬ ರಸವತ್ತಾಗಿದೆ, ನೀತಿಯುತವಾಗಿದೆ. ಹೀಗೆಯೇ ಎಷ್ಟೋ ಒಗಟುಗಳು ನಾಣ್ಣುಡಿಗಳಾಗಿವೆ. ಮಾತಿನ ಚಕಮಕಿಯಿಂದಲೂ ಒಗಟುಗಳು ಸೃಷ್ಟಿಯಾಗುತ್ತವೆ. ಪುರಸೀ, ಹೊರಸೀ, ಒಳಸೀ ಎಂಬ ಮೂರು ವಸ್ತುಗಳನ್ನು ತನ್ನಿರೆಂದು ಗುರು ಹೇಳಿದಾಗ ಶಿಷ್ಯರು ಒದ್ದಾಡಿದರಂತೆ, ಜಾಣನಾದ ಶಿಷ್ಯ ಮಾತ್ರ ಕಲ್ಲುಸಕ್ಕರೆ, ಖರ್ಜೂರ, ಬಾದಾಮಿಗಳನ್ನು ತಂದನಂತೆ. ಕಲ್ಲು ಸಕ್ಕರೆ ಪುರ ಸಿಹಿ, ಖರ್ಜೂರ ಹೊರಗೆ ಮಾತ್ರ ಸಿಹಿ, ಬಾದಾಮಿ ಒಳಗೆ ಮಾತ್ರ ಸಿಹಿ. ಇಂಥ ಒಗಟಿನ ಅನೇಕ ಕಥೆಗಳು ಪ್ರಚಾರದಲ್ಲಿವೆ. ಇಡೀ ಪದ್ಯದಲ್ಲಿ ಈ ರೀತಿಯ ಒಗಟನ್ನು ತುಂಬಿರುವ ಒಂದು ಉದಾಹರಣೆಯಾಗಿ ಕನಕದಾಸರ

ಕೀರ್ತನೆಯ ಒಂದು ಭಾಗವನ್ನು ನೋಡಬಹುದು:

* ಅಂಧಕನನುಜನ ಕಂದನ ತಂದೆಯ, ಕೊಂದನ ಶಿರದಲ್ಲಿ ನಿಂದವನ | ಚಂದದಿ ಪಡೆದನ ನಂದನೆಯಳ ನಲ | ವಿಂದ ಧರಿಸಿದ ಮುಕುಂದನಿಗೆ ||

ಧೃತರಾಷ್ಟ್ರನ ತಮ್ಮನಾದ ಪಾಂಡುವಿನ ಮಗ ಧರ್ಮರಾಯನ ತಂದೆಯಾದ ಯಮ ಧರ್ಮರಾಯನನ್ನು ನಿಗ್ರಹಿಸಿದ (ಮಾರ್ಕಂಡೇಯನ ಕಥೆಯಲ್ಲಿ) ಈಶ್ವರನ ತಲೆಯ ಮೇಲೆ ನಿಂದ ಚಂದ್ರನನ್ನು ಪಡೆದ ತಂದೆಯಾದ ಸಮುದ್ರರಾಜನ ಮಗಳಾದ ಲಕ್ಷ್ಮಿಯನ್ನು ಆನಂದದಿಂದ ಹೃದಯದಲ್ಲಿ ಧರಿಸಿದ ಮುಕುಂದನಿಗೆ ಮಂಗಳಂ-ಎಂದು ಕನಕದಾಸರು ಇಲ್ಲಿ ಒಗಟುಗಂಟನ್ನೇ ಸೃಜಿಸಿದ್ದಾರೆ, ಈಗಲೂ ಒಗಟುಗಳೆಂದರೆ ಮಕ್ಕಳಿಗೆ ಪ್ರಾಣ, ದೊಡ್ಡವರಿಗೆ ಆಸಕ್ತಿ, ಸಂಸ್ಕೃತ ಸಾಹಿತ್ಯದಲ್ಲಿನ ವಿಚಿತ್ರ ಪದಬಂಧಗಳು, ಸಮಸ್ಯಾಪುರ್ಣ, ತೆಲುಗರಲ್ಲಿ ಹೆಚ್ಚು ಪ್ರಚಾರವಿರುವ ದಶಾವಧಾನ, ಶತಾವಧಾನ-ಇವುಗಳೆಲ್ಲ ಒಗಟಿನ ಬೃಹದ್ರೂಪಗಳು, ಮಹಾಕವಿಗಳು ಕೂಡ ಒಗಟುಗಳಿಂದ ಆಕರ್ಷಿತರಾಗಿರುವರು. ಭಾಸನ ನಾಟಕಗಳ ಮೊದಲ ಶ್ಲೋಕದಲ್ಲಿ ಶ್ಲೇಷೆಯ ಬಳಕೆಯಿಂದ ಒಗಟು ಸೃಷ್ಟಿಯಾಗಿದೆ. ಕಾಳಿದಾಸನಲ್ಲಿಯೂ ಇದನ್ನು ಕಾಣುತ್ತೇವೆ. ಪಂಪ, ಕುಮಾರವ್ಯಾಸ ಮುಂತಾದವರಲ್ಲಿಯೂ ಒಗಟುಗಳ ಬಳಕೆ ಸ್ಪಷ್ಟವಾಗಿದೆ. ಮಾತಿನ ಚಾಣಕ್ಯತನ ಇದ್ದಲ್ಲಿ ಯಕ್ಷಪ್ರಶ್ನೆಯಾಗಿ ಒಗಟು ಆವಿರ್ಭವಿಸುತ್ತದೆನ್ನಬಹುದು.

ವಿದೇಶಗಳಲ್ಲಿ

ಬದಲಾಯಿಸಿ

ಪ್ರಾಚೀನ ಗ್ರೀಕರಿಗೆ ಒಗಟು ನೀತಿಯ ನೆಲೆಗಟ್ಟಾಗಿತ್ತು. ಅನಂತರ ಗ್ರೀಕ್ ಮತ್ತು ರೋಮನ್ನರ ಭೋಜನ ಕೂಟಗಳಲ್ಲಿ ತಮಾಷೆ ಮಾಡಲೆಂದು ಒಗಟುಗಳನ್ನು ಬಿಡಿಸುವ ಪಂದ್ಯಗಳನ್ನಿಟ್ಟುಕೊಳ್ಳುತ್ತಿದ್ದರು. ಸಾಲೋಮನ್ ರಾಜನ ನಾಣ್ಣುಡಿಗಳು ನಿಜವಾಗಿ ಒಗಟುಗಳೇ.

ಷೀಬದ ರಾಣಿ ಮುಂದೊಡ್ಡುವ ಸಮಸ್ಯೆಗಳು ಒಗಟಿನ ದೊಡ್ಡ ರೂಪದಲ್ಲಿವೆ. ಈಜಿಪ್ಟಿನ ದೈವವಾಣಿಗಳಂತೂ ಒಗಟಿನ ರೂಪದಲ್ಲಿಯೇ ಇವೆ. ಅಪುಲ್ಸಿಯಸ್ ಎಂಬಾತ ಒಗಟುಗಳ ಗ್ರಂಥವೊಂದನ್ನೇ ಬರೆದನೆಂದು ಪ್ರತೀತಿಯಿದೆ. ಆದರೆ ಈ ಗ್ರಂಥ ದೊರಕಿಲ್ಲ. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ ಮುಂತಾದೆಡೆಗಳಲ್ಲಿ ಒಗಟು ತುಂಬ ಪ್ರಚಾರದಲ್ಲಿದೆ. 16ನೆಯ ಶತಮಾನದವರೆಗೆ ಬಹಳ ಉಚ್ಚ್ರಾಯ ಸ್ಥಿತಿಯಲಿದ್ದು ಒಂದು ಶತಮಾನ ಮರೆಯಾಗಿದ್ದ ಒಗಟು 17ನೆಯ ಶತಮಾನದ ಅನಂತರ ಮತ್ತೆ ಜನಪ್ರಿಯ ಮನರಂಜನೆಯಾಯಿತು. ಅಬ್ಬೆ ಕೋಟಿನ್ ಎಂಬ ಪಾದ್ರಿ ಹತ್ತು ಸಾವಿರಕ್ಕೂ ಹೆಚ್ಚು ಒಗಟುಗಳನ್ನು ಹೊಸೆದಿದ್ದನೆಂದು ಹೆಸರಾಗಿದ್ದಾನೆ. ಫ್ರಾನ್ಸಿನಲ್ಲಿ ಕವಿಗಳೆಲ್ಲರೂ ಒಗಟುಗಳನ್ನು ಬೆಳೆಸಿದರು. ಜರ್ಮನಿಯಲ್ಲಿ ಷಿಲ್ಲರ್ ಕವಿ ಇದಕ್ಕೆ ವಿಸ್ತಾರವಾದ ಹರಹು, ಗಾಂಭೀರ್ಯಗಳನ್ನು ಕೊಟ್ಟು ಗೌರವಸ್ಥಾನ ಕಲ್ಪಿಸಿದನೆನ್ನಲಾಗಿದೆ.

ಚೆರೇಡ್ ಎಂಬುದು ಇಂಗ್ಲೆಂಡಿನಲ್ಲಿ ಒಗಟು ಬೆಳೆದಿರುವ ಒಂದು ವಿಶಿಷ್ಟ ರೀತಿ. ಭೋಜನಕೂಟ ನಡೆಯುವಾಗ ಅಲ್ಲಿಯೇ ಒಂದು ತಂಡದವರು ಉಳಿದವರಿಗೆ ಒಗಟನ್ನು ನಾಟಕದ ದೃಶ್ಯಗಳ ರೂಪದಲ್ಲಿ ಒಡ್ಡುತ್ತಾರೆ. ಒಂದೊಂದು ದೃಶ್ಯಕ್ಕೆ ಒಂದೊಂದು ಪದ ಕೇಂದ್ರಬಿಂದುವಾಗಿರುತ್ತದೆ. ಉದಾಹರಣೆಗೆ, ಮಕ್ಕಳು ಎಂಬ ಪದಕ್ಕಾಗಿಯೇ ಒಂದು ದೃಶ್ಯದಲ್ಲಿ ಮಕ್ಕಳ ಮನೋಧರ್ಮ, ಮಕ್ಕಳ ಆಟ, ಮಕ್ಕಳ ಮಾತು ಮುಂತಾದುವನ್ನೇ ಒತ್ತಿ ಒತ್ತಿ ಹೇಳುವುದು. ನೋಟಕರು ದೃಶ್ಯದಿಂದ ಆ ಪದವನ್ನು ಊಹಿಸಬೇಕು. ಹಲವಾರು ದೃಶ್ಯಗಳ ಪದವನ್ನು ಗ್ರಹಿಸಿದಾಗ ಒಂದು ಪುರ್ಣ ವಾಕ್ಯ ಸಿಗುತ್ತದೆ. ಅದೇ ಒಗಟು, ಇದು 18-19ನೆಯ ಶತಮಾನದಲ್ಲಿ ಬಹಳ ಜನಪ್ರಿಯವಾಗಿತ್ತು. ಯಾವುದು ಸುಲಭವಾಗಿ ಅರ್ಥವಾಗುವುದಿಲ್ಲವೋ ಅದು ಒಗಟು ಎಂಬ ಅರ್ಥದಲ್ಲಿಯೂ ಈ ಪದ ಎಲ್ಲ ದೇಶಗಳಲ್ಲಿಯೂ ಬಳಕೆಯಾಗುತ್ತಿರುವುದು ಅದರ ಗಟ್ಟಿತನವನ್ನು, ಬುದ್ಧಿಗೆ ಅದು ಎಸೆಯುವ ಸವಾಲನ್ನು ಒತ್ತಿ ತೋರಿಸುತ್ತದೆ.

ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ

ಬದಲಾಯಿಸಿ

ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ ಒಗಟುಗಳ ಪಾತ್ರ ದೊಡ್ಡದು. ಪ್ರಾಕ್ತನರ ಮತಗಳಲ್ಲೂ ನಾಗರಿಕ ಮತಗಳಲ್ಲೂ ಅವನ್ನು ಕಾಣಬಹುದು. ತತ್ತ್ವಕ್ಕೆ ಸಂಬಂಧಪಟ್ಟ ಒಗಟುಗಳು ಇರುತ್ತವೆಯಾದರೂ ಅವು ವಿಶೇಷವಾಗಿ ಕಾಣಿಸಿಕೊಳ್ಳುವುದು ಮತದ ಸಂಪ್ರದಾಯಗಳಲ್ಲಿ ಮತ್ತು ಸಂಸ್ಕಾರಗಳಲ್ಲಿ. ಪ್ರಾಕ್ತನರು ಒಂದು ಶವದ ಮುಂದೆ ಅಥವಾ ಕಣದ ರಾಶಿಗಳ ಮುಂದೆ ಗೂಢ ಪ್ರಶ್ನೆಗಳನ್ನು ಒಡ್ಡುವುದುಂಟು. ಆರು ದ್ವೀಪಸ್ತೋಮದಲ್ಲಿ ಶವವನ್ನು ಶವದ ಪೆಟ್ಟಿಗೆಯೊಳಗೆ ಇಡುವುದಕ್ಕೆ ಮುನ್ನ ಶವವನ್ನು ಕಾಯುವವರಲ್ಲಿ ಒಬ್ಬ ಇನ್ನೊಬ್ಬನಿಗೆ ಗೂಢಪ್ರಶ್ನೆಯನ್ನು ಹಾಕುತ್ತಾನೆ. ಹೀಗೆ ಗೂಢ ಪ್ರಶ್ನೆ ಕೇಳುವುದು ಆ ಶವದ ಪ್ರೇತಕ್ಕೆ ದಿಗ್ಭ್ರಮೆ ಹುಟ್ಟಿಸುವ ಸಲುವಾಗಿ, ಇಂಥ ಪದ್ಧತಿಯನ್ನು ಬ್ರಿಟನಿನಲ್ಲಿ ಈಗಲೂ ಕಾಣಬಹುದು. ಪುರ್ವ ಆಫ್ರಿಕದ ಅಕಂಬ ಗುಂಪಿನ ಹುಡುಗ ಹುಡುಗಿಯರು ಪರಿವರ್ತನ ಕಾಲದಲ್ಲಿ ಗೂಢ ಸಮಸ್ಯೆಗಳನ್ನು ಒಡ್ಡುವುದು ವಾಡಿಕೆ. ಫಸಲನ್ನು ಬೆಳೆಸುವ ಕಾಲದಲ್ಲಿ ಮಧ್ಯ ಸಿಲಬಸಿನ ಪ್ರಾಕ್ತನರು ಒಗಟುಗಳನ್ನು ಮಂಡಿಸುತ್ತಾರೆ. ಬೇಳೆ ಚೆನ್ನಾಗಿ ಆಗುವುದಕ್ಕೆ ಅಥವಾ ಕೆಟ್ಟು ಹೋಗುವುದಕ್ಕೆ ಒಗಟುಗಳನ್ನು ಬಿಡಿಸುವುದರಲ್ಲಿ ಗೆಲ್ಲುವುದು ಅಥವಾ ಸೋಲುವುದುಕಾರಣವಾಗುತ್ತದೆಂದು ಅವರ ನಂಬಿಕೆ. ಡೆಲ್ಫಿಯಲ್ಲಿ ಕಣಿ ಹೇಳುವವರು ಒಗಟುಗಳ ಮೂಲಕ ಭವಿಷ್ಯ ನುಡಿಯುತ್ತಿದ್ದರು. ಡಯೋನೀಸಿಯಸ್ ದೇವರಿಗೆ ಪ್ರಿಯವಾದ ಅಗ್ರಿಯೋನಿಯ ಜಾತ್ರೆಯ ಕಾಲದಲ್ಲಿ ಜನರು ಸಾಮೂಹಿಕವಾಗಿ ಸಾಲುಸಾಲಾಗಿ ಕುಳಿತು ಊಟ ಮಾಡುವಾಗ ಒಂದು ಸಾಲಿನವರು ತಮ್ಮ ಎದುರು ಸಾಲಿನವರಿಗೆ ಗೂಢಪ್ರಶ್ನೆಗಳನ್ನೂ ಹಾಕುತ್ತಿದ್ದರು. ಎದುರು ಸಾಲಿನವರು ಉತ್ತರ ಹೇಳುತ್ತಿದ್ದರು. ಭಾರತದಲ್ಲೂ ಮತ ಸಂಸ್ಕಾರಗಳಿಗೆ ಸಂಬಂಧಪಟ್ಟಂತೆ ಒಗಟುಗಳು ಪ್ರಚಾರದಲ್ಲಿದ್ದುವು. ಶ್ರಾದ್ಧ ಸಂದರ್ಭದ ಊಟದ ಕಾಲದಲ್ಲಿ ಊಟ ಮಾಡುವ ಬ್ರಾಹ್ಮಣರಿಗೆ ಗೂಢ ಪ್ರಶ್ನೆಗಳನ್ನು ಹಾಕಬೇಕೆಂದು ಮನು ವಿಧಾಯಕ ಮಾಡಿರುತ್ತಾನೆ. ಏಕೆಂದರೆ ಹಾಗೆ ವೇದೋಕ್ತವಾದ ಗೂಢಪ್ರಶ್ನೆಗಳನ್ನು ಕೇಳುವುದು ಪಿತೃಗಳಿಗೆ ಇಷ್ಟಕರವಾದದ್ದು.

ವೇದಮಂತ್ರಗಳಲ್ಲಿ ಕಾಣಬರುವ ಒಗಟುಗಳಿಗೆ ಬ್ರಹ್ಮೋದ್ಯ ಅಥವಾ ಬ್ರಹ್ಮವದ್ಯ ಎಂದು ಹೆಸರು. ಒಂದು ಮಂತ್ರದಲ್ಲಿ ಅಗ್ನಿಯ ವರ್ಣನೆ ಒಂದು ಒಗಟಿನ ರೂಪದಲ್ಲಿ ಹೀಗೆ ಬಂದಿದೆ: ನಿಮ್ಮಲ್ಲಿ ಯಾರು ಆ ಗೂಢದೇವತೆಯನ್ನು ತಿಳಿದಿರುತ್ತೀರಿ? ಆ ಕರು ತನ್ನ ತಾಯಿಯರನ್ನು ಈದಿದೆ. ತಾಯಿಯರಿಗೆ ಕಾರಣವಾದ ಗರ್ಭಾಣು ಎಲ್ಲವನ್ನು ನೋಡುವ ಆ ಮಹಿಮನು ಯಾರು? ತನ್ನ ಸ್ವಶಕ್ತಿಯಿಂದಲೇ ಚಲಿಸುವ ಅವನು, ಚೇತನಯುತವಾದ ಅಣುಗಳಿಂದ ಮೇಲಕ್ಕೆ ಏಳುತ್ತಾನೆ. (ಇಲ್ಲಿ ಕರು ಅಗ್ನಿ, ತಾಯಂದಿರು ಆಪಗಳು), ದೀರ್ಘತಮಸ್ಸೆಂಬ ಋಷಿಯ ಒಂದು ಮಂತ್ರ ತತ್ತ್ವಕ್ಕೆ ಸಂಬಂಧಪಟ್ಟ ಒಗಟುಗಳಿಂದ ತುಂಬಿದೆ. ಆ ಮಂತ್ರ ಅಶ್ವಮೇಧ ಯಜ್ಞದ ಕಾಲದಲ್ಲಿ ಉಪಯೋಗಿಸುವಂಥದು. ಅದು ಪ್ರಶ್ನೋತ್ತರ ರೂಪದಲ್ಲಿದೆ. ಯಾಜಕರಲ್ಲಿ ಹೋತೃ ಪ್ರಶ್ನೆ ಕೇಳುತ್ತಾನೆ; ಅಧ್ವರ್ಯು ಉತ್ತರ ಹೇಳುತ್ತಾನೆ.

ಹೋತೃ ಈ ಪ್ರಶ್ನೆ ಕೇಳುತ್ತಾನೆ; ಏಕಾಕಿಯಾಗಿ ಸಂಚರಿಸುವವನು ಯಾವನು? ಯಾವನು ಮರಳಿ ಹುಟ್ಟುತ್ತಾನೆ? ನೆಗಡಿಗೆ ಸಿದ್ಧೌಷದ ಯಾವುದು? ಮಹಾರಾಶಿ ಯಾವುದು?

ಅಧ್ವರ್ಯು ಹೀಗೆ ಉತ್ತರ ಕೊಡುತ್ತಾನೆ; ಏಕಾಕಿಯಾಗಿ ಸಂಚರಿಸುವವನು ಸೂರ್ಯ, ಪುನಃ ಪುನಃ ಹುಟ್ಟುವವನು ಚಂದ್ರ, ನೆಗಡಿಗೆ ಬೆಂಕಿ ಔಷಧ. ದೊಡ್ಡ ರಾಶಿ ಭೂಮಿ.

ಹೋತೃ ಕೇಳುವ ಇನ್ನೊಂದು ಪ್ರಶ್ನೆ : ಸೂರ್ಯನಿಗೆ ಸದೃಶವಾದ ಬೆಳಕು ಯಾವುದು? ಸಾಗರಕ್ಕೆ ಸದೃಶವಾದ ಸಾಗರ ಯಾವುದು? ಪೃಥ್ವಿಗಿಂತ ಮಹತ್ತರವಾದುದು ಯಾವುದು? ಯಾವುದರ ಬೆಲೆ ಅಳತೆಗೆ ಮೀರಿದ್ದು? ಅದಕ್ಕೆ ಉತ್ತರ ಇದು : ಸೂರ್ಯನಿಗೆ ಸದೃಶವಾದ ಬೆಳಕು ಬ್ರಹ್ಮ, ಸಾಗರಕ್ಕೆ ಸದೃಶವಾದ್ದು ಸ್ವರ್ಗ. ಇಂದ್ರ ಪೃಥ್ವಿಗಿಂತ ದೊಡ್ಡವನು. ಕಾಮಧೇನುವಿನ ಪ್ರಭಾವ ಅಳತೆಗೆ ಮೀರಿದ್ದು. ಇನ್ನೊಂದು ಪ್ರಶ್ನೆ: ಪ್ರಥ್ವಿಯ ತುತ್ತತುದಿ ಯಾವುದು? ವಿಶ್ವದ ಗುಂಬ ಯಾವುದು? ವೀರ್ಯವತ್ತಾದ ಆ ಅಶ್ವದ ಬೀಜ ಯಾವುದು? ವಾಕ್ಕಿನ ಮಹತ್ತರ ಸ್ವರ್ಗ ಯಾವುದು? ಅದಕ್ಕೆ ಉತ್ತರ: ಬಲಿಪೀಠ ಪೃಥ್ವಿಯ ತುತ್ತತುದಿ. ಯಜ್ಞ ವಿಶ್ವದ ಗುಂಬ, ಸೋಮ ಆ ವೀರ್ಯವತ್ತಾದ ಅಶ್ವದ (ಇಂದ್ರ) ಬೀಜ. ಬ್ರಹ್ಮ ವಾಕ್ಕಿನ ಮಹತ್ತರ ಸ್ವರ್ಗ. ದೀರ್ಘತಮಸ್ ಋಷಿಯ ಸೂಕ್ತದಲ್ಲಿ ತತ್ತ್ವಕ್ಕೆ ಸಂಬಂಧಪಟ್ಟ ಒಗಟು ಇದು: ಸಹಚಾರಿಗಳಾದ, ಪರಸ್ಪರ ಸ್ನೇಹಿತರಾದ ಎರಡು ಹಕ್ಕಿಗಳು ಒಂದೇ ಮರದ ಮೇಲೆ ವಾಸಿಸುತ್ತವೆ. ಅವುಗಳಲ್ಲಿ ಒಂದು ಸಿಹಿಯಾದ ಅಂಜೂರದ ಹಣ್ಣನ್ನು ತಿನ್ನುತ್ತದೆ. ಇನ್ನೊಂದು ತಿನ್ನದೆ ಸುಮ್ಮನೆ ನೋಡುತ್ತದೆ. ಇಲ್ಲಿ ತಿನ್ನುವ ಹಕ್ಕಿ ಸಂಸಾರದಲ್ಲಿ ತೊಡಗಿರುವ ಜೀವ. ತಿನ್ನದ ಹಕ್ಕಿ ಪರಮಾತ್ಮ. ಇದೇ ಒಗಟು ಉಪನಿಷತ್ತುಗಳಲ್ಲೂ ಸಾಂಖ್ಯಕಾರಿಕದಲ್ಲೂ ಪುನರುಕ್ತವಾಗಿದೆ.

ಕೆಲವು ಉದಾಹರಣೆಗಳು

ಬದಲಾಯಿಸಿ
  • ಊರೆಲ್ಲ ತಿರುಗ್ತತಿ ಮನೆ ಮೂಲ್ಯಾಗ್ ಬಿದ್ದಿರ್ತತಿ - - : ಚಪ್ಪಲಿ ಅಥವಾ ಎಕ್ಕಡ
  • ಮುಳುಗ್ತತಿ, ತೇಲ್ತತಿ, ಕರ್ಗತತಿ – : ಅಡಿಕೆ ,ಎಲೆ, ಸುಣ್ಣ.
  • ಅಂಗಣ್ಣ ,ಮಂಗಣ್ಣ ,ಅಂಗಿ ಬಿಚ್ಕೊಂಡು ನುಂಗಣ್ಣ . - : ಬಾಳೆಹಣ್ಣು.
  • ಉದ್ದುದ್ದವನೆ ,ಉರಿ ಮುಖದವನೆ ,ಸುದ್ದಿ ಹೇಳೋ ಸೂ..ಮಗನೇ . - : ಮೆಣಸಿನಕಾಯಿ.
  • ಅಂಕ ಡೊಂಕ ’’; ಅದರ ತಮ್ಮ ’ಸಾ’; ಕರಿಯದೊಂದು ’ಮೆ’; ನಾಲ್ಕು ಚೌಕ ’ಬೆ’. - :ಅಡಿಕೆ ,ಸಾಸಿವೆ ,ಮೆಣಸು , ಬೆಲ್ಲ.

ಹೋಲಿಕೆಗಳ ಮೂಲಕ ರಚಿತವಾದ ಒಗಟುಗಳು

ಬದಲಾಯಿಸಿ

ದಿನನಿತ್ಯದ ಬದುಕಿನಿಂದಲೇ ಎತ್ತಿಕೊಂಡ ಸಂಗತಿಗಳನ್ನು ಉಪಮಾನ-ಉಪಮೇಯಗಳ ಮೂಲಕ ಬಣ್ಣಬಣ್ಣವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.ಉದಾಹರಣೆಗೆ :-

  • ಅಮ್ಮನ ಸೀರೆ ಮಡಿಸೋಕಾಗಲ್ಲ ; ಅಪ್ಪನ ದುಡ್ಡು ಎಣಿಸೋಕಾಗಲ್ಲ -- : ಆಕಾಶ, ನಕ್ಷತ್ರ
  • ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ -- : ಹಣೆ, ಕುಂಕುಮ
  • ಚಿಕ್ಕ ಮನೆ ತುಂಬಾ ಚಕ್ಕೆ ತುಂಬಿದೆ-- : ಬಾಯಿ, ಹಲ್ಲು
  • ಅಟ್ಟದ ಮೇಲಿರೋ ಗಿಡ್ಡ ಗೋಪಾಲ, ನಿನಗ್ಯಾರಿಟ್ಟರೋ ಸಾದಿನ ಬೊಟ್ಟು? -- : ಗುಲಗಂಜಿ
  • ಬಾವೀಲಿ ಬೆಳ್ಳಿ ಬಟ್ಟಲು ಬಿದ್ದಿದೆ. - : ಚಂದ್ರ
  • ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ. - : ಮಲ್ಲಿಗೆ ಹೂ.
  • ಅಂಕು ಡೊಂಕಾದ ಬಾವಿ ,ಬಗ್ಗಿ ನೋಡಿದರೆ ಗುಬ್ಬಿ ಕುಡಿಯುವಷ್ಟು ನೀರಿಲ್ಲ. - : ಕಿವಿ.
  • ಬರೆಯುವುದಕ್ಕಾಗದೆ ಇರೊ ನುಡಿ ಯಾವುದು ? -- "ಮುನ್ನುಡಿ"

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಒಗಟು&oldid=1247076" ಇಂದ ಪಡೆಯಲ್ಪಟ್ಟಿದೆ