ಏಕೀಕರಣ, ಸಾಂಸ್ಕೃತಿಕ

ಸಂಕೇತಗಳು ಸಂಸ್ಕೃತಿಯ ಲಕ್ಷಣಗಳು. ಈ ಲಕ್ಷಣಗಳ ಪರಸ್ಪರ ಸಂಬಂಧವೇ ಸಾಂಸ್ಕøತಿಕ ಏಕೀಕರಣ. ಸಂಸ್ಕೃತಿಯ ಹುರುಳಿನ ಅರಿವು, ಸಾಂಸ್ಕøತಿಕ ಏಕೀಕರಣದ ವರ್ಗೀಕರಣ ಮತ್ತು ಸಂಕೇತಗಳ ನಡುವಣ ಸಂಬಂಧ ಅಥವಾ ಸಾಂಸ್ಕøತಿಕ ಏಕೀಕರಣದ ರೂಪ-ಈ ಪ್ರಶ್ನೆಗಳು ವಿದ್ವಾಂಸರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಗಳು.[೧]

ವಿವಿಧ ಸಂಸ್ಕೃತಿಗಳ ಸಾಮ್ಯತೆ ಬದಲಾಯಿಸಿ

ಸಂಸ್ಕೃತಿಯ ವಿವಿಧ ಅಂಗಗಳು ಪರಸ್ಪರ ಸಮ್ಮಿಲನಗೊಳ್ಳಬಲ್ಲವು ಎಂಬ ಭಾವನೆ ಹಲವಾರು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿದೆ. ವಿವಿಧ ಸಂಸ್ಕೃತಿಗಳ ಸಾಮ್ಯತೆಗಳನ್ನು ಆದರ್ಶಭಾವನಾಪ್ರಧಾನವಾಗಿ ವರ್ಣಿಸುವಾಗ, ಒಂದು ಸಂಸ್ಕೃತಿಯ ವಿಶಿಷ್ಟಗುಣಗಳನ್ನು ಬೇರೆ ಸಂಸ್ಕೃತಿಯ ಜನ ಸ್ವೀಕರಿಸುವಾಗ, ಅಧಿಕಾರವರ್ಗದವರು ವಿವಿಧ ಸಂಸ್ಕೃತಿಗಳಿಗೆ ಸೇರಿದ ಜನರಿಂದ ಸ್ವೀಕೃತವಾಗಬಹುದಾದ ಸುಧಾರಣೆಗಳನ್ನು ಆಚರಣೆಗೆ ತರುವಾಗ, ಹಲವಾರು ಸಾಮಾಜಿಕ ನ್ಯೂನತೆಗಳನ್ನು ತಡೆಹಿಡಿಯಬೇಕಾದಾಗ ಅಥವಾ ವಿವಿಧ ಸಂಸ್ಕೃತಿಗಳ ತುಲನಾತ್ಮಕ ವಿಮರ್ಶೆಮಾಡುವಾಗ ಈ ರೀತಿಯ ಸಾಂಸ್ಕøತಿಕ ಸಮ್ಮಿಲನ ಸಾಧ್ಯವೆಂಬ ನಂಬಿಕೆ ಉಪಯೋಗಕ್ಕೆ ಬರುತ್ತದೆ. ಆಧುನಿಕ ಸಮಾಜದಲ್ಲಿನ ಆಗುಹೋಗುಗಳು ಈ ಭಾವನೆಯ ಉಪಯುಕ್ತತೆಯನ್ನು ಎತ್ತಿ ತೋರಿಸಿವೆ. ಪ್ರೌಢಶಿಕ್ಷಣ, ರೇಡಿಯೋ, ಟೆಲಿವಿಷನ್, ಚಲನಚಿತ್ರ ಮುಂತಾದ ಬಹುಮುಖ ಸಂಪರ್ಕಮಾಧ್ಯಮ, ವಿರೋಧಾತ್ಮಕ ಸಂಸ್ಕೃತಿಗಳಲ್ಲಿ ಏರ್ಪಡುವ ಸಂಪರ್ಕ ಇವೇ ಮುಂತಾದ ಕಾರಣಗಳಿಂದ ಸಾಂಸ್ಕøತಿಕ ಏಕೀಕರಣಭಾವನೆಗೆ ಹೆಚ್ಚು ಪ್ರಾಶಸ್ತ್ಯ ದೊರಕುತ್ತಿದೆ. ವಿಶ್ವದಾದ್ಯಂತ ನಡೆಯುತ್ತಿರುವ ಸಾಂಪ್ರದಾಯಿಕ ಮತ್ತು ಆಧುನಿಕ ಸಮಾಜಗಳ ಏಕೀಕರಣಕ್ಕೆ ತಳಹದಿಯಾಗಬೇಕೆಂಬ ಆಶಯಕ್ಕೆ ಇದು ಪೂರಕವಾಗಬೇಕಾಗಿದೆ.[೨]

ಸಂಸ್ಕೃತಿಶಾಸ್ರ್ತಜ್ಞರ ಮುಖ್ಯ ಸಮಸ್ಯೆ ಬದಲಾಯಿಸಿ

ಸಾಂಸ್ಕøತಿಕ ವಿಧಾನಗಳ ಸಮೂಹದಲ್ಲಿರಬೇಕಾದ ಆಂತರಿಕ ಹೊಂದಾಣಿಕೆಯೆ ಸಂಸ್ಕೃತಿಶಾಸ್ರ್ತಜ್ಞರ ಮುಖ್ಯ ಸಮಸ್ಯೆಯೆಂದು ಹಲವು ವಿದ್ವಾಂಸರು ವಾದಿಸಿದ್ದಾರೆ. ವಿವಿಧ ಸಂಸ್ಕೃತಿ ಸಮಾಜಗಳ ವಿಭಿನ್ನ ಲಕ್ಷಣಗಳ ವಿಶದೀಕರಣ ಮತ್ತು ಅವುಗಳ ಸಮನ್ವಯಕ್ಕೆ ಆಧುನಿಕ ವಿದ್ವಾಂಸರು ಮಾಡುತ್ತಿರುವ ಪ್ರಯತ್ನಗಳಿಗೆ ಈ ಸಮಸ್ಯೆ ಸಂಬಂಧಿಸಿದೆ. ಕೆಲವು ಹಳೆಯ ವಿದ್ವಾಂಸರು ಏಕೀಕರಣವೆಂಬ ಪದವನ್ನು ಶಿಥಿಲ ಮತ್ತು ಹೆಚ್ಚು ವಿಸ್ತರಿಸಿದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ವೃತ್ತಿಸಂಬಂಧ ಮತ್ತು ತಾರ್ಕಿಕ ಅಥವಾ ಅರ್ಥವತ್ತಾದ ಏಕೀಕರಣವೆಂಬ ಎರಡು ವಿಧವಾದ ಏಕೀಕರಣವನ್ನು ಸೊರೊಕಿನ್ ವಿವೇಚಿಸಿದ್ದಾನೆ. ಈ ರೀತಿಯಲ್ಲಿ ನಿಖರವಾದ ಅರ್ಥ ವ್ಯಾಪ್ತಿಯನ್ನು ಕೊಡುವಾಗ ಸಾಂಸ್ಕøತಿಕ ಏಕೀಕರಣದ ಆಧಾರ, ರೂಪ, ವ್ಯಾಪ್ತಿ ಮತ್ತು ಫಲಿತಾಂಶಗಳ ವಿಷಯವಾಗಿ ಸಾಕಷ್ಟು ಚರ್ಚೆ ನಡೆದಿದ್ದು, ಇದು ಏಕೀಕರಣದ ಭಾವನೆಗೆ ಭದ್ರವಾದ ಬುನಾದಿಯನ್ನೊದಗಿಸಿರುವುದಲ್ಲದೆ, ಅದಕ್ಕೊಂದು ನಿರ್ದಿಷ್ಟರೂಪವನ್ನೂ ಕೊಟ್ಟಿದೆ. ಈ ಪ್ರಯತ್ನಗಳ ಫಲವಾಗಿ ಸಾಮಾಜಿಕ ಸಾಂಸ್ಕøತಿಕ ಪದ್ಧತಿಗಳಲ್ಲಿ ಆಂತರಿಕ ಸಮನ್ವಯ ಮತ್ತು ಐಕ್ಯಗಳನ್ನು ಕಾಣಬಹುದೆಂದು ವಿದ್ವಾಂಸರು ಒಪ್ಪಿಕೊಳ್ಳುವಂತಾಯಿತು.

ಸಂಸ್ಕೃತಿಗಳು ಪೂರ್ಣ ಸಮ್ಮಿಲನ ಬದಲಾಯಿಸಿ

ಸಂಸ್ಕೃತಿಗಳು ಪೂರ್ಣ ಸಮ್ಮಿಲನಗೊಂಡ ಸಂಸ್ಥೆಗಳೆಂಬ ವಾದವನ್ನು ಇತ್ತೀಚೆಗೆ ನಡೆದ ಮಾನವಿಕವಿಜ್ಞಾನದ ಶೋಧನೆಗಳು ಒಪ್ಪುವುದಿಲ್ಲ. ಸಾಂಸ್ಕøತಿಕ ಏಕೀಕರಣ ಕೇವಲ ಪ್ರಗತಿಯ ಲಕ್ಷಣ; ಸಹಜವಾದ ಉಪಾಧಿಯಲ್ಲ; ಬಲುಮಟ್ಟಿಗೆ ಆಂತರಿಕವಾಗಿ ಹೊಂದಾಣಿಕೆಯಿರುವ ಪ್ರಗತಿಪರವಾದ ನಡೆಯ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಈ ವಾದದ ಆಧಾರದ ಮೇಲೆ ವಿವಿಧ ಸಂಸ್ಕೃತಿಗಳು ಎಷ್ಟರಮಟ್ಟಿಗೆ ಸಮ್ಮಿಲನ ಹೊಂದಿವೆಯೆಂಬ ಅಂಶವನ್ನು ವಿದ್ವಾಂಸರು ವಿವೇಚಿಸಲಾರಂಭಿಸಿದ್ದಾರೆ. ಕೆಲವು ಸಂಸ್ಕೃತಿಗಳು ಪೂರ್ಣ ಸಮ್ಮಿಲನ ಹೊಂದಿವೆಯೆಂದು ಈಚಿನವರೆಗೂ ರೂಢಿಯಲ್ಲಿದ್ದ ವಾದವನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಕಾರಣಾಂತರಗಳಿಂದ ಪ್ರತಿಯೊಂದು ಸಮಾಜದಲ್ಲೂ ಬದಲಾವಣೆಗಳು ಉಂಟಾಗುತ್ತಿರುವುದರಿಂದ ಅಂಥ ಸಂಸ್ಕೃತಿಗಳು ಪೂರ್ಣವಾಗಿ ಸಮ್ಮಿಲನ ಹೊಂದಿರಲು ಸಾಧ್ಯವಿಲ್ಲ. ಒಂದು ಸಂಸ್ಕೃತಿಯ ವಿವಿಧ ಆಚಾರ ಪದ್ದತಿಗಳನ್ನು ಒಟ್ಟುಗೂಡಿಸಿದ ಮಾತ್ರಕ್ಕೆ ಆ ಸಂಸ್ಕೃತಿಯ ಪೂರ್ಣರೂಪವಾಗುವುದಿಲ್ಲ. ಯಾವುದೇ ಒಂದು ಅಂಶವನ್ನು ಇತರ ಅಂಶಗಳಿಂದ ಪೂರ್ಣವಾಗಿ ಬೇರ್ಪಡಿಸಲೂ ಸಾಧ್ಯವಿಲ್ಲ. ಈ ಮೇಲಿನ ವಾದದಿಂದ ಸಾಂಸ್ಕøತಿಕ ಏಕೀಕರಣ ಪೂರ್ಣವಲ್ಲವೆಂಬ ಮತ್ತು ಎಲ್ಲ ಹಂತಗಳಲ್ಲೂ ನಡೆಯುತ್ತಿರುವ ಒಂದು ಗುಣವೆಂಬ ಅಂಶ ವ್ಯಕ್ತವಾಗುತ್ತದೆ. ಇತ್ತೀಚೆಗೆ ಈ ಏಕೀಕರಣ ಸಮಸ್ಯೆಯನ್ನು ಆದರ್ಶದ ಮಟ್ಟಕ್ಕೆತ್ತಲಾಗಿದೆ. ಹಿಂದಿನ ಸಮಾಜಗಳಲ್ಲಿ ನೆಲಸಿದ್ದ ಪೂರ್ಣ ಸಮನ್ವಯವೇ ಆ ಸಂಸ್ಕೃತಿಗಳ ಮುಖ್ಯ ಲಕ್ಷಣವೆಂದು ಮತ್ತು ಆಧುನಿಕ ಸಮಾಜದ ಕುಂದುಕೊರತೆಗಳಿಗೆ ಆ ಸಮಾಜದಲ್ಲಿ ಕಂಡುಬರುವ ವಿಚ್ಛಿದ್ರಕಾರಕ ಶಕ್ತಿಗಳೇ ಕಾರಣವೆಂದು ವಾದಿಸಲಾಗಿದೆ. ಇತ್ತೀಚೆಗೆ ಸಮಾಜಶಾಸ್ತ್ರರಂಗದಲ್ಲಿ ನಡೆದಿರುವ ಪ್ರಗತಿಪರ ಶೋಧನೆಗಳು ಸಾಂಸ್ಕøತಿಕ ಏಕೀಕರಣ ಸ್ವಾಭಾವಿಕವೇ ಅಲ್ಲವೇ ಎಂಬಂಶವನ್ನು ಕಡೆಗಣಿಸಿ ಯಾವ ರೀತಿಯ ಪ್ರಯೋಜನಗಳು ಉಂಟಾಗುತ್ತವೆ ಎಂಬ ಅಂಶಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿವೆ.

ಸಾಂಸ್ಕøತಿಕ ಏಕೀಕರಣ ಬದಲಾಯಿಸಿ

ಸಾಂಸ್ಕøತಿಕ ಏಕೀಕರಣ ಮಾನಸಿಕ ಭಾವನೆ ಅಥವಾ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳನ್ನು ತರ್ಕಸಮ್ಮತವಾಗಿ ಕೈಗೂಡಿಸುವ ಒಂದು ಸಾಧನವೆಂಬ ಹಳೆಯ ವಾದಗಳು ತಿರಸ್ಕøತವಾಗಿ ಪ್ರಗತಿಪರ ಸಂಸ್ಕೃತಿಗಳ ಮುಖ್ಯ ಲಕ್ಷಣಗಳೇ ಏಕೀಕರಣದ ಬುನಾದಿಯೆಂಬ ಭಾವನೆಗೆ ಆಧುನಿಕ ವಿದ್ವಾಂಸರಲ್ಲಿ ಪ್ರಾಶಸ್ತ್ಯ ದೊರಕುತ್ತಿದೆ.

ಉಲ್ಲೇಖಗಳು ಬದಲಾಯಿಸಿ