ಏಕಾಣುಜೀವಿಕ, ಸೋಂಕಿನ ರೋಗಗಳು

ಏಕಾಣುಜೀವಿಕ, ಸೋಂಕಿನ ರೋಗಗಳು: ಒಂದು ಜೀವಿಯಿಂದ ಇನ್ನೊಂದು ಜೀವಿಗೆ ಹರಡುವ ರೋಗಗಳೇ ಸೋಂಕಿನ ರೋಗಗಳು (ಇನ್ಫೆಕ್ಸಿಯಸ್ ಡಿಸೀಸಸ್). ಇನ್ನೂ ನಿಖರವಾಗಿ ಹೀಗೆ ಹೇಳಬಹುದು. ಆತಿಥೇಯ ಜೀವಿಯನ್ನು (ಹೋಸ್ಟ್‌) ಆಕ್ರಮಿಸಿ ಅದರ ಊತಕಗಳನ್ನು ಪ್ರವೇಶಿಸಿ ಅಲ್ಲಿ ವಿಪರೀತವಾಗಿ ವೃದ್ಧಿಗೊಳ್ಳುವ ಸೂಕ್ಷ್ಮಜೀವಿಗಳಿಂದ ಜನಿಸುವ ರೋಗಗಳು. ಆತಿಥೇಯ ಜೀವಿ ಮನುಷ್ಯ, ಪ್ರಾಣಿ, ಸಸ್ಯ, ಕೀಟ ಅಥವಾ ಬೇರೆ ಒಂದು ಸೂಕ್ಷ್ಮಜೀವಿಯೇ ಆಗಬಹುದು. ಉದಾಹರಣೆಗೆ ಏಕಾಣುಜೀವಿಗಳಲ್ಲೇ (ಬ್ಯಾಕ್ಟೀರಿಯ) ರೋಗಗಳನ್ನು ಉಂಟುಮಾಡಬಲ್ಲ ವೈರಸ್ ಸೂಕ್ಷ್ಮ ಜೀವಿಗಳಿವೆ. ಇವುಗಳ ಹೆಸರು ಏಕಾಣುಜೀವಿಗಳು (ಬ್ಯಾಕೀರಿಯೋಫೇಜಸ್). ಮುಖ್ಯ ವಿಷಯವಿಷ್ಟೆ-ಸೂಕ್ಷ್ಮಜೀವಿ ಊತಕದಲ್ಲಿ ನೆಲೆಸಬೇಕು. ವೃದ್ಧಿಗೊಳ್ಳಬೇಕು ಮತ್ತು ಊತಕವನ್ನು ಘಾಸಿಗೊಳಿಸಬೇಕು. ಈ ಕೊನೆಯ ಅಂಶ ನೆರವೇರದಿದ್ದರೆ ಅಂಥ ಸೂಕ್ಷ್ಮ ಜೀವಿಗಳು ರೋಗವನ್ನು ಉಂಟು ಮಾಡುವುದಿಲ್ಲ-ಅವು ಆತಿಥೇಯ ಜೀವಿಯನ್ನು ಅವಲಂಬಿಸಿರುವ ಪರಪಿಂಡಿ ಜೀವಿಗಳಷ್ಟೇ (ನೋಡಿ- ಪರಪಿಂಡಿ-ಶಾಸ್ತ್ರ)

EscherichiaColi NIAID

ಸೋಂಕು ರೋಗದ ಹುಟ್ಟು

ಬದಲಾಯಿಸಿ

ಜೀವಿವಿಕಾಸದಲ್ಲಿ ಸೊಂಕು ಹೇಗೆ ಎಲ್ಲಿ ಹುಟ್ಟಿತೆಂದು ಇನ್ನೂ ಖಚಿತವಾಗಿ ತಿಳಿದಿಲ್ಲ. ಮೊಟ್ಟಮೊದಲಲ್ಲಿ ಜೀವವಿಲ್ಲದ ವಸ್ತುಗಳನ್ನು ಆಹಾರವಾಗಿ ಬಳಸಿ ಕೊಳೆತಿನಿ ಜೀವಿಗಳಾಗಿ (ಸ್ಯಾಪ್ರೊಫೈಟ್ಸ್‌) ಏಕಾಣುಜೀವಿಗಳು ವಿಕಾಸಗೊಂಡವು ಎನ್ನಬಹುದು. ಮಣ್ಣಲ್ಲೂ ಕೊಳೆಯುತ್ತಿರುವ ಸೊಪ್ಪುಸದೆಗಳಲ್ಲೂ ಬಿದ್ದಿದ್ದ ಇವುಗಳಲ್ಲಿ ಕೆಲವು ಪ್ರಾಣಿಗಳ ಗಾಯಗಳ ಮೂಲಕ ಆಗಾಗ್ಗೆ ಒಳಹೊಕ್ಕಿರಬೇಕು. ಆದರೆ ಆತಿಥೇಯದ ರಸಗಳ ಹೆಚ್ಚಿನ ಬಲದಿಂದಲೋ ಅವುಗಳಿಂದ ಸಾಕಷ್ಟು ಪೋಷಣೆ ದಕ್ಕದೆಯೋ ಇವುಗಳಲ್ಲಿ ಬಹುಪಾಲು ಸತ್ತರೂ ಕೆಲವಾದರೂ ಜಗ್ಗದೆ ನೆಲೆಯೂರಿರ ಬೇಕು. ಆಗಿನ ಹೊಸ ಪರಿಸರ ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಂಡಂಥ ಏಕಾಣುಜೀವಿಗಳು ಮಾತ್ರ ಉಳಿದಿರಬೇಕು. ಈ ಪ್ರಯತ್ನದಲ್ಲಿ ರೋಗಾಣುಗಳು ಹೊರಬಿಟ್ಟ ವಿಷ ಆತಿಥೇಯ ಜೀವಿಯನ್ನು ಬಲಿತೆಗೆದುಕೊಂಡಿರಲೂಬಹುದು. ಇಂಥ ಪರಿಸ್ಥಿತಿಯಿಂದ ರೋಗಾಣುಗಳಿಗೂ ಕೇಡು ತಪ್ಪಿದ್ದಲ್ಲ. ಆಗ ಬೇರೊಂದು ಪ್ರಾಣಿಯಲ್ಲಿ ಅವು ಸೇರಿಕೊಂಡು ಹೊಸ ನೆಲೆಯಲ್ಲಿ ಮತ್ತೆ ಪರಪಿಂಡಿಯಾಗಿ ಬಾಳಬೇಕಾಗುತ್ತದೆ. ವಿಕಾಸದಲ್ಲಿ ಇಂಥ ಸರಣಿಗಳು ಲೆಕ್ಕವಿಲ್ಲದಷ್ಟು ನಡೆದುಹೋಗಿವೆ. ಪರಿಸರಕ್ಕೆ ಹೊಂದಿಕೊಂಡ ರೋಗಾಣುಗಳು ಬದಲಾದುವು, ಉಳಿದುಕೊಂಡವು. ಹೊಂದಲಾಗದವು ನಿರ್ನಾಮವಾಗಿ ಹೋದುವು.

ಪ್ರಪಂಚದಲ್ಲಿರುವ ರೋಗಾಣುಗಳಿಗೆ ಲೆಕ್ಕವೇ ಇಲ್ಲ. ಒಂದೊಂದು ಬಗೆಯದು ಗೊತ್ತಾದ ಒಂದೊಂದು ರೋಗ ಹುಟ್ಟಿಸಬಹುದು. ಆದರೆ ರೋಗಾಣುಗಳ ದಾಳಿಯನ್ನು ಎದುರಿಸುವುದರಲ್ಲಿ ದೇಹ ಎದುರಿಸುವ ಬಗೆಗಳು ಮಾತ್ರ ಕೆಲವೇ ಆಗಿರುವುದರಿಂದ ಬಹುಪಾಲು ರೋಗಗಳನ್ನು ಖಚಿತವಾಗಿ ಗುರುತಿಸಬೇಕಾದರೆ ಪ್ರಯೋಗಾಲಯದ ಪರೀಕ್ಷೆಗಳಾಗಬೇಕು. ಇದರಿಂದಲೇ ಈಗ ಬೇರೆ ಬೇರೆ ಎಂದು ಗುರುತಿಸಿರುವ ಎಷ್ಟೋ ರೋಗಗಳು ಮೊದಲು ಹಾಗೆ ತಿಳಿದಿರಲಿಲ್ಲ. ಉರಿಶೀತ (ಇನ್ಫ್ಲುಯೆಂಜ) ಹಿಂದೆ ಬೇರೆ ಕಾಯಿಲೆಗಳ ಲೆಕ್ಕಕ್ಕೆ ಸೇರುತ್ತಿತ್ತು. ಕುಷ್ಠರೋಗಕ್ಕೂ ಬಿಳಿಯ ತೊನ್ನಿಗೂ ಚರ್ಮದ ಇನ್ನೂ ಹಲವಾರು ಬೇರೂರಿದ ರೋಗಗಳಿಗೂ ವ್ಯತ್ಯಾಸಗಳನ್ನೇ ಹಿಂದಿನ ಕಾಲದಲ್ಲಿ ಕಾಣದೆ ಎಲ್ಲವನ್ನೂ ಕುಷ್ಠ ಎನ್ನುತ್ತಿದ್ದರು. ಹಾಗೇ ವಿಪರೀತ ವಾಂತಿ, ಭೇದಿ ಆಯಿತೆಂದರೆ ಸಾಕು, ಕಾಲರ ಎನ್ನುವ ಕಾಲ ಈಗಲೂ ಇದೆ. ಹಿಂದೆ ಮಹಾಮಾರಿ ಎಂದು ಹೆಸರಾಗಿದ್ದ ಪ್ಲೇಗಿನಲ್ಲಿ ಇನ್ನೂ ಬೇರೆ ರೋಗಗಳೂ ಸೇರಿಕೊಳ್ಳುತ್ತಿದ್ದುವು. ಪುರಾತನ ರೋಗಗಳಾದ ಸಿಡುಬೂ ಫುಪ್ಪುಸದ್ದಲ್ಲದ ಕ್ಷಯವೂ ಈಜಿಪ್ಟಿನ ಮಮ್ಮಿಗಳಲ್ಲೂ ಇದ್ದುದರ ಗುರುತುಗಳು ಕಂಡುಬಂದಿವೆ. ಗ್ರೀಕರ, ಅದಕ್ಕೂ ಹಿಂದಿನ ನಾಗರಿಕ ಸಮಾಜಗಳಲ್ಲಿ ಗಂಟಲಮಾರಿ (ಡಿಫ್ತೀರಿಯ), ಫುಪ್ಫುಸುರಿತ (ನ್ಯುಮೋನಿಯ), ಕಾಲರ ರೋಗಗಳಿದ್ದ ಕುರುಹುಗಳು ದೊರೆತಿವೆ.

 
Malaria-:Malaria is caused by a parasite (Plasmodium) transmitted to people and animals by mosquitoes of the genus Anopheles. The sporozoite life-stage of the parasite develops inside oocysts and are released in large numbers into the hemocoel of mosquitoes. This false-colored electron micrograph shows a sporozoite of Plasmodium bergei migrating through the cytoplasm of midgut epithelia of an Anopheles stephensi mosquito.ಮಲೇರಿಯಾ-: ಅನಾಫಿಲಿಸ್ನ ಸೊಳ್ಳೆಗಳ ಮೂಲಕ ಜನರು ಮತ್ತು ಪ್ರಾಣಿಗಳಿಗೆ ಹರಡುವ ಪರಾವಲಂಬಿ (ಪ್ಲಾಸ್ಮೋಡಿಯಮ್) ಮೂಲಕ ಮಲೇರಿಯಾ ಉಂಟಾಗುತ್ತದೆ. ಪರಾವಲಂಬಿಗಳ ಸ್ಪೋರೊಜೊವಾಯಿಟ್ ಜೀವಿತಾವಧಿಯು ಊಸಿಯಸ್ನೊಳಗೆ ಬೆಳೆಯುತ್ತದೆ ಮತ್ತು ಸೊಳ್ಳೆಗಳ ಹೆಮೋಸಿಯಲ್ ಆಗಿ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗುತ್ತದೆ. ಈ ಆರೋಪಿತ-ಬಣ್ಣದ ಎಲೆಕ್ಟ್ರಾನ್ ಮೈಕ್ರೊಗ್ರಾಫ್ ಪ್ಲಾಸ್ಮೋಡಿಯಂ ಬರ್ಗೆ ಯ ಸ್ಪೋರೊಜೊವಾಯಿಟ್ನ್ನು ಅನೋಫಿಲ್ಸ್ ಸ್ಟೆಫೆನ್ಸಿ ಸೊಳ್ಳೆಯ ಮಿಡ್ಗಟ್ ಎಪಿಥೀಲಿಯಾದ ಸೈಟೋಪ್ಲಾಸಂ ಮೂಲಕ ವಲಸೆ ಹೋಗುತ್ತದೆ.

ಚರಿತ್ರೆ

ಬದಲಾಯಿಸಿ

ಸೋಂಕಿನ ರೋಗಗಳ ಗುಣ, ಕಾರಣಗಳ ವಿಷಯದಲ್ಲಿ ಪುರ್ವ ಕಾಲದಿಂದಲೂ ಬಲು ವಿಚಿತ್ರ ನಂಬಿಕೆಗಳಿದ್ದುವು. ಇಂಥ ರೋಗಗಳು ಯಾವುದೋ ಕಾಣದ ಶಕ್ತಿಯ ಕಾಟವೆಂದೇ ಜನ ನಂಬಿದ್ದರು. ಆಮೇಲಿನ ಶೋಧಕರಿಗೆ ನಿಜದಕತೆ ಕಂಡುಕೊಳ್ಳುವುದರಲ್ಲಿ ಇವು ಯಾವುವೂ ನೆರವಾಗಲೇ ಇಲ್ಲ. ಆದರೆ ಉಪದಂಶದ (ಸಿಫಿಲಿಸ್) ವಿಷಯವಾಗಿ ಫ್ರಾಕಸ್ಟೋರಿಯಸನಂಥವರು ಹೇಳಿದ್ದು ನಿಜವಿಚಾರಕ್ಕೆ ಹತ್ತಿರ ಬಂದಿದ್ದರೂ ಆಗ ಅದನ್ನು ಖಚಿತಪಡಿಸುವ ಪರಿಕರ, ಮುಟ್ಟುಗಳೂ ವಿಧಾನಗಳೂ ಇಲ್ಲದ್ದರಿಂದ ದೃಢಗೊಳಿಸಲಾಗಲಿಲ್ಲ. 17ನೆಯ ಶತಮಾನದಲ್ಲಿ ಆಂಟನಿ ವಾನ್ ಲೀವನ್ಹಾಕ್ ಕೋಶದ ಸೂಕ್ಷ್ಮದರ್ಶಕವನ್ನು ತಯಾರಿಸುವತನಕ ಒಂಟಿ ಕೋಶದ ಜೀವಿಗಳನ್ನು ಯಾರಿಗೂ ನೋಡುವುದು ಸಾಧ್ಯವಾಗಿರಲಿಲ್ಲ. ಅಷ್ಟಾದರೂ ಬೇಕಾದ ಇತರ ವಿಧಾನಗಳೂ ಆಗಿನ್ನೂ ಗೊತ್ತಿರದಿದ್ದುದರಿಂದ ರೋಗಕಾರಣಗಳನ್ನು ಕಂಡು ಹಿಡಿಯುವುದರಲ್ಲಿ ಯಾವ ಮುನ್ನಡೆಯೂ ಆಗಲಿಲ್ಲ.

ಸೂಕ್ಷ್ಮಜೀವಿವಿಜ್ಞಾನ (ಮೈಕ್ರೊಬಯಾಲಜಿ) ನಿಜವಾಗಿ ಹುಟ್ಟಿದ್ದು ಲೂಯಿಪ್ಯಾಶ್ಚರ್ ನಿಂದ, (ನೋಡಿ- ಪಾಸ್ತರ್,-ಲೂಯಿ) ಕೆಲವು ಜೈವಿಕ ಸಂಯುಕ್ತಗಳು ಒಡೆಯುವುದಕ್ಕೂ ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬರುವ, ಬದುಕಿರುವ ಜೀವಾಣುಗಳು ಇರುವುದಕ್ಕೂ ನಿಕಟಸಂಬಂಧ ಇರುವುದನ್ನು ಈತ ಚುರುಕಾಗಿ ಗುರುತಿಸಿದ. ಒಂದೊಂದು ಜೀವಾಣುವಿನಿಂದಲೂ ಬೇರೆ ಬೇರೆ ತೆರನಾಗಿ ಹುದುಗೇಳುವುದನ್ನು (ಫರ್ಮೆಂಟೇಷನ್) ಕಂಡುಕೊಂಡ. ಇನ್ನೂ ಹೆಚ್ಚಿನದಾಗಿ ಜೀವಿಗಳು ಇದ್ದಕ್ಕಿದ್ದ ಹಾಗೆ ಹುಟ್ಟಿಕೊಳ್ಳುತ್ತವೆಂಬ ಅಂದಿನ ನಂಬಿಕೆಯನ್ನೂ ಎದುರಿಸಿ, ಚಾಲೂಕಿನ ಪ್ರಯೋಗ ಸಾಲುಗಳಿಂದ, ಮೊದಲೇ ಇರುವ ಜೀವಾಣುಗಳೇ ವೃದ್ಧಿಗೊಂಡು ಅದೇ ತೆರನ ಜೀವಾಣುಗಳು ಹುಟ್ಟಿಕೊಳ್ಳುತ್ತವೆಂದು ಅನುಮಾನವಿಲ್ಲದಂತೆ ತೋರಿಸಿ ಕೊಟ್ಟ. ಪರಿಸರ, ಸ್ಥಿತಿಗಳು ಅನುಕೂಲವಾಗಿದ್ದರೆ, ಜೀವಾಣುಗಳ ತಳಿ ಸಾಲುಗಳನ್ನೇ ದ್ರವಮಾಧ್ಯಮಗಳಲ್ಲಿ (ಮೀಡಿಯ) ಬೆಳೆಸಬಹುದೆಂದೂ ಅವುಗಳಲ್ಲಿರುವ ಜೀವಿಗಳನ್ನೆಲ್ಲ ಕುದಿಸಿ ಕೊಂದುಬಿಟ್ಟಮೇಲೆ ಬದುಕಿರುವ ಜೀವಿಗಳು ಒಳಹೋಗದಂತೆ ಎಚ್ಚರದಿಂದಿದ್ದರೆ ಯಾವ ಜೀವಿಯೂ ಬೆಳೆಯಲಾರದೆಂದೂ ಕೆಲವು ಹೊಸ ಜೀವಿಗಳನ್ನು ಒಳಬಿಟ್ಟರೆ ಅದರ ಗೊತ್ತಾದ ತೆರನ ಹುದುಗೇಳುವುದನ್ನೂ ಅನುಮಾನವಿಲ್ಲದಂತೆ ತೋರಿಸಿದ. ಇನ್ನಿತರ ಚಟುವಟಿಕೆಗಳಿಂದ ರೋಗಕಾರಣಗಳನ್ನು ಹುಡುಕಲು ತೊಡಗಿ ಕೊನೆಗೆ ಅನೇಕ ರೋಗಗಳಲ್ಲಿ ಊತಕಗಳಲ್ಲಿ ಗೊತ್ತಾದ ಸೂಕ್ಷ್ಮಜೀವಿಗಳು ಬೆಳೆಯುತ್ತಿರುವುದನ್ನು ರುಜುವಾತುಪಡಿಸಿ ಅಂದಿನ ವೈದ್ಯಕುಲದ ಮೂಢನಂಬಿಕೆ ಎದುರು ಹೋರಾಡಿ, ರೋಗಗಳು ಹರಡುವ ಇಡೀ ಕಲ್ಪನೆಯಲ್ಲಿಯೇ ಕ್ರಾಂತಿ ಎಬ್ಬಿಸಿದ.

ಬೇರೆ ಬೇರೆ ಸೂಕ್ಷ್ಮಜೀವಾಣುಗಳ ಅಚ್ಚ ತಳಿಗಳನ್ನು ಬೆಳೆಸುವ ತಾಂತ್ರಿಕ ವಿಧಾನಗಳನ್ನು ಜರ್ಮನಿಯ ಏಕಾಣುಜೀವಿವಿಜ್ಞಾನಿ ರಾಬರ್ಟ್ ಕಾಕ್ (ನೋಡಿ- ಕಾಕ್, ರಾಬರ್ಟ್) ಜಾರಿಗೆ ತಂದು ಕ್ಷಯ, ಕಾಲರ ರೋಗಗಳ ಕಾರಣಗಳಾದ ಜೀವಾಣುಗಳನ್ನು ವಿವರಿಸಿ ತೋರಿಸಿದ. ಪ್ಯಾಶ್ಚರ್, ಕಾಕ್ ಇವರೊಡನೆ ಅಭ್ಯಸಿಸಿದವರೇ ರೋಗಗಳಿಗೆ ಕಾರಣಗಳಾದ ರೋಗಕಾರಕಗಳನ್ನು ಕಂಡುಹಿಡಿದರು. ಗಾಯಗಳಲ್ಲಿ ನಂಜಾಗುವುದನ್ನು ತಪ್ಪಿಸಲು, ಗ್ಲಾಸ್ಗೋದಲ್ಲಿದ್ದ ಜೋಸೆಫ್ ಲಿಸ್ಟರ್, ಪ್ಯಾಶ್ಚರನ ತತ್ತ್ವಗಳನ್ನು ಅನುಸರಿಸಿದ್ದರಿಂದ ಶಸ್ತ್ರವೈದ್ಯ ಚೆನ್ನಾಗಿ ಕೈಗೂಡಿದ್ದು ಇಡೀ ಶಸ್ತ್ರ ವೈದ್ಯದಲ್ಲೇ ಒಂದು ಹೊಸ ಯುಗ ಕಾಲಿಟ್ಟಿತು. ನೆಲ ಫಲವತ್ತಾಗಿರಬೇಕಾದರೆ, ಕೇವಲ ಸೂಕ್ಷ್ಮಜೀವಿಗಳ ಚಟುವಟಿಕೆಯಿಂದಲೇ ಎನ್ನುವುದು ಬೇಸಾಯದ ಶೋಧನೆಗಳಿಂದ ತೋರಿಬಂದಿತು. ಪ್ರಾಣಿಗಳ, ಗಿಡಮರಗಳ ಪ್ರಪಂಚಗಳಲ್ಲಿ ಸೋಂಕಿನ ರೋಗಗಳು ಗೊತ್ತಾದ ಸೂಕ್ಷ್ಮಜೀವಿಗಳಿಂದಲೇ ಏಳುವುದು ಖಚಿತವಾಯಿತು. ರೋಗನಿದಾನ (ಡಯಗ್ನೋಸಿಸ್), ಚಿಕಿತ್ಸೆಗಳ ವಿಧಾನಗಳು ಪ್ಯಾಶ್ಚರನ ಮೂಲ ಶೋಧನೆಗಳ ಪರಿಣಾಮ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಕಾರಣಗಳು

ಬದಲಾಯಿಸಿ

ಒಂದು ರೋಗ ಬರಿಸುವುದರಲ್ಲಿ ಒಂದು ಸೂಕ್ಷ್ಮಜೀವಿಯ ಗೊತ್ತಾದ ಪಾತ್ರವನ್ನು ಕಂಡುಕೊಳ್ಳುವುದರಲ್ಲಿ ಕಾಕ್ನ ಮೂರು ಮುಖ್ಯ ಮೂಲ ಸೂತ್ರಗಳು ಇಂದಿಗೂ ಹೆಸರಾಗಿವೆ-1 ಒಂದು ರೋಗ ಅನುಭವಿಸುವ ಒಬ್ಬೊಬ್ಬರಲ್ಲೂ ರೋಗಕಾರಕ ಜೀವಾಣುಗಳು ಇದ್ದೇ ತೀರಬೇಕು. ಯಾವ ಅಂಗದಲ್ಲಿ ಯಾವ ತೆರನ ರೋಗ ಹೇಗೆ ಕಾಣಿಸಿಕೊಂಡಿದೆ ಎನ್ನುವುದಕ್ಕೆ ತಕ್ಕಂತೆ ರೋಗಾಣುಗಳನ್ನು ಅರಸಬೇಕು. 2 ರೋಗ ಹತ್ತಿರುವ ಊತಕಗಳಿಂದ ರೋಗಾಣುಗಳನ್ನು ಬೇರ್ಪಡಿಸಿ ಹಲವಾರು ತಲೆಮಾರಿನ ಅಚ್ಚ ತಳಿಗಳನ್ನು ಎಬ್ಬಿಸಿ ಬೆಳೆಸುವಂತಿಬೇಕು. 3 ಅಚ್ಚ ತಳಿಯ ರೋಗಾಣುಗಳನ್ನು ಆ ರೋಗಕ್ಕೀಡಾಗುವ ಪ್ರಾಣಿಗೆ ಹತ್ತಿಸಿದರೆ ಆ ರೋಗ ಅದರಲ್ಲಿ ತಲೆದೋರಬೇಕು; ಆ ರೋಗದ ಪ್ರಾಣಿಯ ಊತಕಗಳಿಂದ ಅದೇ ರೋಗಾಣುಗಳನ್ನು ಹೊರತೆಗೆವಂತಿರಬೇಕು. ಬಹುಪಾಲು ಏಕಾಣುಜೀವಿಕ ರೋಗಗಳಲ್ಲಿ ಈ ಮೂಲಸೂತ್ರಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಆದರೆ, ಕುಷ್ಠರೋಗದಲ್ಲಿ 2, 3ನೆಯವನ್ನು ಈಗಲೀಗ ಬಲು ಕಷ್ಟದಿಂದ ಮಾತ್ರ ತೋರಬಹುದು. ಕುಷ್ಠ ರೋಗಿಗಳು ಎಲ್ಲರಲ್ಲೂ ಇದರ ರೋಗಾಣುಗಳು ಇದ್ದೇ ಇರುವುದರಿಂದ, ಮೂಲಸೂತ್ರ ರೀತಿಯಲ್ಲಿ ಅನುಮಾನವೇ ಇಲ್ಲ.

ಕೆಲವೇಳೆ (ರಿಕೆಟ್ಸನ ವಿಷಕಣಗಳ ಸೋಂಕುಗಳ ತೆರದಲ್ಲಿ ಇದ್ದಹಾಗೆ) ರೋಗಾಣುಗಳನ್ನು ಪ್ರಯೋಗಾಲಯದ ಕೃತಕ ಮಾಧ್ಯಮಗಳಲ್ಲಿ ಬೆಳೆಸುವುದು ಆಗಲಿಲ್ಲ. ಅಲ್ಲಿ ಈ ಮೂಲಸೂತ್ರಗಳೆಲ್ಲ ನಡೆಯದ್ದರಿಂದ, 2ನೆಯ ಮೂಲಸೂತ್ರದಲ್ಲಿ ಪ್ರಾಣಿಯ ಬದಲಾಗಿ ರೋಗಾಣುಗಳನ್ನು ಬೆಳೆಸಲು ಊತಕಗಳ ತಳಿವರಸೆಯನ್ನೂ (ಕಲ್ಚರ್) ಕೋಳಿಮರಿ ಪಿಂಡವನ್ನೂ ಬಳಸಬೇಕಾಯಿತು. ಸೂಕ್ಷ್ಮದರ್ಶಕದಲ್ಲೂ ಕಾಣದಿದ್ದು ಜೀವವಿರದ ವಸ್ತುಗಳಿಂದ ಬೇರೆಯಾಗಿ ಗುರುತಿಸಲಾಗದ ಸಣ್ಣ ವಿಷಕಣಗಳ ವಿಚಾರದಲ್ಲಿ ಮೊದಲನೆಯ ಮೂಲಸೂತ್ರವನ್ನು ಕೂಡ ತೋರುವುದು ಬಲುಕಷ್ಟ. ಇದಕ್ಕೆ ಸರಿಯಾದ ಉಪಾಯಗಳಾಗಿ, ಬಗೆಬಗೆಯ ಮಟ್ಟದ ಸೋಸಿಕಗಳಿಂದಲೂ ವಿಪರೀತ ವೇಗದಿಂದ ಸುತ್ತುವ ಅಪಕೇಂದ್ರಣ ಯಂತ್ರದಿಂದ (ಸೆಂಟ್ರಿಫ್ಯೂಜ್) ವಿಷಕಣಗಳ ಗಾತ್ರವೂ ಕೊಂಚಮಟ್ಟಿಗೆ ಆಕಾರವೂ ಗೊತ್ತಾಗುತ್ತವೆ. ಅಲ್ಲದೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ನೆರವೂ ಅಪಾರ. ಕಾಕ್ನ ಕಾಲದಿಂದೀಚೆಗೆ ರೋಗಕಾರಣಗಳಾದ ಜೀವಾಣುಗಳನ್ನು ಖಚಿತಪಡಿಸಲು ಹೊಸ ವಿಧಾನಗಳು ಬಂದಿವೆ. ರೋಗ ಹತ್ತಿದ ಮೇಲೆ ರಕ್ತದ ಹರಿವಿನಲ್ಲಿ ಪ್ರತಿ ರಕ್ಷಣೆಕೊಡುವ (ಇಮ್ಯುನೈಸಿಂಗ್) ವಸ್ತುಗಳು ಹುಟ್ಟಿ, ಅನುಮಾನವಿರುವ ರೋಗಾಣು ಅಂಟಣಿಸುವ (ಅಗ್ಲೂಟಿನೇಟಿಂಗ್) ಇಲ್ಲವೇ ಲಯಿಸುವ ಅದರ ಸೋಂಕು ಬಲ ಇಲ್ಲವೇ ವಿಷವನ್ನು ತಟಸ್ಥಗೊಳಿಸುವ (ನ್ಯೂಟ್ರಲೈಸಿಂಗ್) ಗುಣಗಳನ್ನು ತೋರುವುದರಿಂದ ರೋಗವನ್ನು ಕಂಡುಕೊಳ್ಳಬಹುದು.

ರೋಗಕಾರಕಗಳು

ಬದಲಾಯಿಸಿ

ಸಾಮಾನ್ಯವಾಗಿ, ಈ ಸೂಕ್ಷ್ಮಜೀವಿಗಳಲ್ಲಿ ಹಲವಾರು ಬಗೆಗಳಿರುವುವು. ಏಕಾಣುಜೀವಿಗಳಿಂದ ಏಳುವ ರೋಗಗಳಲ್ಲಿ ಮುಖ್ಯವಾದವನ್ನು ಲೇಖನದ ಕೊನೆಯಲ್ಲಿರುವ ವಿವರಪಟ್ಟಿಯಲ್ಲಿ ಕೊಟ್ಟಿದೆ. ರೋಗಕಾರಕ ಏಕಾಣುಜೀವಿಗಳ ಸೋಂಕು ಅಂಟಿಸುವ ಮೈ ಒಳನುಗ್ಗುವ ಬಲಗಳು ಒಂದೊಂದರದೂ ಒಂದೊಂದು ತೆರ. ಇವುಗಳಲ್ಲಿ ಬಹುಪಾಲು ಮೈಯೊಳಗೇ ವೃದ್ಧಿಗೊಂಡು ಒಳಜೀವಿವಿಷಗಳನ್ನು (ಎಂಡೊಟಾಕ್ಸಿನ್ಸ್‌) ಹೊರಬಿಡುವುವು. ಗಂಟಲಮಾರಿ, ಸೆಟೆಬೇನೆ ತೆರನ ಕೆಲವು ಮಾತ್ರ ಗಂಟಲಲ್ಲೋ ಗಾಯದಲ್ಲೋ ಒಂದೆಡೆಯಲ್ಲಿ ಹೊರಗೇ ಇದ್ದು ಸುರಿಸಿದ ಬಲು ಬಲವಾದ ಹೊರಜೀವಿವಿಷಗಳು (ಎಕ್ಸೊಟಾಕ್ಸಿನ್ಸ್‌) ರಕ್ತದ ಹರಿವಿನಲ್ಲಿ ಬೇರೆ ಭಾಗಗಳಿಗೆ ಸಾಗುತ್ತವೆ. ಊರುಬಾಡುಬೇನೆಯ ಕದಿರುಜೀವಿ (ಕ್ಯಾಸ್ಟ್ರಿಡಿಯಂ ಬಾಟುಲೈನಂ) ಪರಪಿಂಡಿ ಅಲ್ಲವೇ ಅಲ್ಲ. ಸರಿಯಾದ ಆವರಣದಲ್ಲಿರುವ ಆಹಾರದೊಳಗೆ ಇದು ಸೇರಿಬಿಟ್ಟರೆ ವೃದ್ಧಿಗೊಳ್ಳುತ್ತ ಹೊರಜೀವಿವಿಷವನ್ನು ಸುರಿಸುವುದರಿಂದ, ಇದರಿಂದೇಳುವ ರೋಗ ವಿಷವೇರಿಕೆಯೇ ಹೊರತು ಸೋಂಕು ಎನ್ನಿಸಿಕೊಳ್ಳದು.

ಸಾಮಾನ್ಯವಾಗಿ ಆತೊರ್ರ್‌ಪಾಡುಗಳ ಕರುಳಲ್ಲಿರುವ ಪುಟ್ಟ ಜೀವಾಣುಗಳಾದ ರಿಕೆಟ್ಸ ರೋಗಾಣುಗಳಲ್ಲಿ ಕೆಲವು ಮಾನವನಿಗೂ ಒಗ್ಗಿಕೊಂಡು, ಟೈಫಸ್ ಜ್ವರ, ರಾಕಿ ಪರ್ವತದ ಚುಕ್ಕೆ ಜ್ವರ, ಸುಟ್ಸುಗಮೂಷಿ, ಕ್ಯುಜ್ವರ, ಟ್ರೆಂಚ್ ಜ್ವರಗಳನ್ನು ಬರಿಸಬಲ್ಲವು. ಹೇನು ಕೂರೆಗಳು, ಚಿಗಟಗಳು, ಉಣ್ಣೆಗಳು, ನುಸಿಗಳಿಂದ ಮಾನವನಿಗೆ ಈ ಸೋಂಕುಗಳು ಸಾಗಿ ಬರುತ್ತವೆ. ವೈರಸ್ಕಣಗಳು ರಿಕೆಟ್ಸ್‌ ರೋಗಾಣುಗಳಿಗಿಂತಲೂ ಸಣ್ಣವು. ಸಾಧಾರಣ ಸೂಕ್ಷ್ಮದರ್ಶಕದಲ್ಲಿ ಇವು ಕಾಣಿಸವು. ಏಕಾಣುಜೀವಿಗಳ ಶೋಧಕಗಳ (ಫಿಲ್ಟರ್ಸ್) ಮೂಲಕ ತೂರುತ್ತವೆ. ಬದುಕಿರುವ ಊತಕಗಳಿಲ್ಲದಿದ್ದರೆ ಬೆಳೆಯವು. ಕೆಲವಂತೂ ಮಾನವನಲ್ಲಿ ಮಾತ್ರ ಪರಪಿಂಡಿಗಳಾಗಿ ಗೊತ್ತಾದ ರೋಗಗಳನ್ನು ಬರಿಸುತ್ತವೆ. ಇನ್ನು ಹಲವು ಪ್ರಾಣಿಗಳನ್ನು ಹತ್ತಿಕೊಂಡರೆ, ಮತ್ತೆ ಬೇರೆಯವು ಪ್ರಾಣಿ, ಮಾನವ ಇಬ್ಬರನ್ನೂ ಕಾಡುತ್ತವೆ. ಎಷ್ಟೋ ವೇಳೆ ಗಾಳಿಯ ಮೂಲಕ ತೇಲಿ ಬಂದರೂ ಕೀಟಗಳ ಕಡಿತದಿಂದಲೂ ಕೆಲವೇಳೆ ಆಹಾರ ಮಾರ್ಗವಾಗಿ ಒಳಸೇರಿ ಹಲವು ಬಗೆಗಳ ರೋಗವೇಳಿಸುವುವು.

ಹುಗುಳು (ತ್ರಷ್) ರೋಗದ ಬಿಳಿಯ ಕಾಯಿಕ (ಕಾಂಡಿಡ ಆಲ್ಬಿಕಾನ್ಸ್‌), ಇನ್ನೂ ಹಲವಾರು ಫುಪ್ಫುಸ ರೋಗಗಳಿಗೂ ಕಾರಣವಾಗುವಂಥ ಹುದುಗು ಜೀವಿಗಳೂ (ಯೀಸ್ಟ್‌) ಅದೇ ತೆರನ ಬೂಷ್ಟುಗಳೂ (ಫಂಗಸ್) ಮಾನವನಿಗೆ ರೋಗಕಾರಕಗಳು. ಹಲವಾರು ಅಣಬೆಗಳಲ್ಲಿ ತೀರ ಸಾಮಾನ್ಯವಾದ ಹುಳುಕಡ್ಡಿ (ಗಜಕಡ್ಡಿ) ತೆರನ ಎಷ್ಟೊ ಬೂಷ್ಟುಗಳೂ ರೋಗಕಾರಕಗಳು. ಒಂಟಿ ಊತಕ ಜೀವಿಗಳಾದ ಪ್ರೋಟೊಜೋóವಾಗಳಿಂದ ಬರುವ ರೋಗಗಳಲ್ಲಿ ಮಲೇರಿಯ, ಬೈರೊಡಲಿಬೇನೆ (ಟ್ರಿಪನೊಸೋಮಿಯಾಸಿಸ್). ಲೀಷ್ಮನ್ ಬೇನೆ (ಲೀಷ್ಮಾನಿಯಾಸಿಸ್), ಅಮೀಬ ಆಮಶಂಕೆಗಳಿವೆ. ಆಮಶಂಕೆ ಸೋಂಕು ಬಾಯ ಮೂಲಕ ಹರಡುವುದಾದರೂ ಉಳಿದವುಗಳ ಸೋಂಕು ಮಾನವನನ್ನು ಕಡಿದು ರಕ್ತಹೀರುವ ಕೀಟಗಳಿಂದ ಆಗುತ್ತದೆ. ಹರಡಿಕೆ:

ಸಾಂಕ್ರಾಮಿಕತೆ

ಬದಲಾಯಿಸಿ
ಜನರಲ್ಲಿ ಒಂದು ರೋಗ ಹರಡಿರುವುದಕ್ಕೆ, ರೋಗ ಹರಡುವ ರೀತಿ, ಸೋಂಕು ಅಂಟಿಸುವ ರೋಗಾಣುವಿನ ತೀವ್ರತೆ, ಸೋಂಕಿಗೊಡ್ಡಿರುವ ಜನರ ವಯಸ್ಸು, ಲಿಂಗ, ಕಸಬು, ಪೌಷ್ಟಿಕತೆ, ರೋಗನಿರೋಧಕ ಬಲ, ಹವಾಮಾನ ಮುಂತಾದವು ಕಾರಣವಾಗುವುವು. ಇವುಗಳಲ್ಲಿ ಒಂದೊಂದೂ ಏರುಪೇರಾಗಿರಬಹುದು. ಆದ್ದರಿಂದಲೇ, ಜನರಲ್ಲಿ ಒಂದು ಸೋಂಕು ಕಾಲಿಟ್ಟಿತೆಂದರೆ, ಇನ್ನಷ್ಟು ವಿವರಗಳು ದೊರೆವತನಕ ಏನಾಗಬಹುದೆಂದು ಖಚಿತವಾಗಿ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ಏಕಾಣುಜೀವಿಗಳು ಮೈ ಒಳಹೋಗಲು ಉಸಿರಾಟ ಮಂಡಲ, ಬಾಯಿ, ಮೈಮೇಲಿನ ಗಾಯಗಳು, ನೇರವಾಗಿ ಕೀಟಗಳ ಕಡಿತದ ತೆರನ ಚುಚ್ಚಿಕೆಗಳ ಮಾದರಿಯ ಹಲವಾರು ದಾರಿಗಳಿವೆ.

ಉಸಿರಾಟ ಮಂಡಲದ ಮೂಲಕ

ಬದಲಾಯಿಸಿ

ಮೂಗು, ಬಾಯಿ, ಗಂಟಲು ಲೋಳೆಪೊರೆಗಳ ಮೂಲಕ ಎಷ್ಟೊ ರೋಗಕಾರಕ ಏಕಾಣುಜೀವಿಗಳು ಒಳನುಗ್ಗಿ ರೋಗ ಬರಿಸುತ್ತವೆ. ಗಂಟಲಮಾರಿ ದಂಡಾಣುಜೀವಿ (ಬ್ಯಾಸಿಲಸ್), ಕೆಂಜ್ವರ (ಸ್ಕಾರ್ಲೆಟ್ ಫೀವರ್), ಮೆಂಡಿಕೆಯುರಿತಗಳಿಗೆ (ಟಾನ್ಸಿಲೈಟಿಸ್) ಕಾರಣವಾದ ಸರಕಾಯ್ಜೀವಿ (ಸ್ಟ್ರೆಪ್ಟೊಕಾಕಸ್), ನಾಯಿಕೆಮ್ಮಿನ ದಂಡಾಣುಜೀವಿ ಮುಖ್ಯವಾದವು. ಉಗುಳು, ಕೆಮ್ಮು, ಸೀನುಗಳಿಂದ ರೋಗಾಣುಗಳು ಸುತ್ತಲೂ ಹರಡುತ್ತಿರುವುದರಿಂದ ಈ ಬೇನೆಗಳಿಂದ ನರಳುತ್ತಿರುವವರು ಬೇರೆಯವರಿಗೆ ಸೋಂಕು ಅಂಟಿಸುವಂತಿರುವರು. ಫುಪ್ಪುಸಗಳ ಒಳಗೂ ಸೋಂಕು ಹತ್ತಿಸುವ ಕ್ಷಯ ದಂಡಾಣುಜೀವಿ, ನ್ಯುಮೊಕಾಕೈ ಸೊಂಕುಗಳಲ್ಲೂ ಅಷ್ಟೆ. ಕೆಮ್ಮಿದಾಗ ಉಗುಳು, ಎಂಜಲು, ಲೋಳೆಗೂಡಿದ ಬೇರೆಬೇರೆ ಗಾತ್ರಗಳ ಸಣ್ಣ ತುಂತುರುಗಳ ಧೂಳುಮೋಡವೇ ರಭಸದಿಂದ ಹೊರಬೀಳುವುದು. ಇದರಲ್ಲಿ ಬಲುಮಟ್ಟಿಗೆ ರೋಗಾಣುಗಳೂ ಇರುವುದರಿಂದ ಇದು ಇತರರ ಉಸಿರಲ್ಲಿ ಸೇರಿದರೆ ಸೋಂಕು ಅಂಟುತ್ತದೆ. ಕ್ಷಯರೋಗ ಹರಡುವುದರಲ್ಲಿ ಈ ವಿಧಾನದ ಪಾತ್ರವನ್ನು ಮೊದಲು ತೋರಿದವನು ಫ್ಲುಗ್ಗೆ (19ನೆಯ ಶತಮಾನದ ಕೊನೆ). ಕೆಮ್ಮು, ಉಗುಳುಗಳಲ್ಲಿನ ತುಂತುರುಗಳ ಮುಂದಿನ ಗತಿ ಏನಾಗುವುದೆಂಬುದು ಮುಖ್ಯವಾಗಿ ಅವುಗಳ ಗಾತ್ರಕ್ಕೆ ತಕ್ಕ ಹಾಗಿರುತ್ತದೆ. ಅವುಗಳ ಅಡ್ಡಗಲದ ವರ್ಗೀಕರಣಕ್ಕೆ ತಕ್ಕಂತೆ ಅವು ಕೆಳಗೆ ಬೀಳುವ ವೇಗ ಇರುವುದು. ದೊಡ್ಡ ದೊಡ್ಡ ಕಣಗಳು ತುಸು ದೂರ ಹಾರಿ ಬಿದ್ದು ಒಣಗಿ ಧೂಳಾಗುತ್ತವೆ. ಮಿಲಿಮೀಟರಿಗೂ ಕಿರಿಯವು ಮಾತ್ರ ಬಲು ಬೇಗನೆ ಆರಿಹೋಗಿ ನೆಲಕ್ಕೆ ಬೀಳದೆ ಗಾಳಿಯಲ್ಲಿ ತೇಲುಕಣಗಳಾಗಿ ಬಿಡುತ್ತವೆ. ಸಾಮಾನ್ಯ ಅನಿಲಗಳಂತೆ ಇವು ವರ್ತಿಸಿ ಗಾಳಿ ಬೀಸಿದಾಗ ಬಲುದೂರ ಸಾಗಬಲ್ಲವು. ಆದ್ದರಿಂದ ತುಂತುರುಗಳಲ್ಲಿ ಸೇರಿದ ಸೊಂಕು ಹರಡುವ ಕಣಗಳು ಕೆಮ್ಮು, ಸೀನುಗಳಲ್ಲಿ ನಿಂತವನ ಸುತ್ತ ಐದಾರು ಅಡಿಗಳ ದೂರದಲ್ಲಿ ನೆಲದ ಮೇಲೆ ಬೀಳುವುದರಿಂದ, ಕೇವಲ ಅಕ್ಕಪಕ್ಕಗಳಲ್ಲಿ ಇರುವವರಿಗೆ ಮಾತ್ರ ಹರಡಿಕೊಳ್ಳುತ್ತವೆ. ಅದೂ ಅಲ್ಲದೆ, ಈ ಕಣಗಳು ತುಂಬ ಏಕಾಣುಜೀವಿಗಳೂ ತುಂಬಿದ್ದು,

ಅವು ಪರಿಸರದ ಹಾನಿಗಳಿಗೆ ಸಿಕ್ಕಿಬೀಳದೆಯೇ ಇನ್ನೊಬ್ಬರಲ್ಲಿ ಬೇಗನೆ ಸೇರಿಕೊಳ್ಳಬಹುದು. ಸೋಂಕು ಹರಡಲು ಧೂಳು ಬಲು ಸಹಾಯಕಾರಿ. ಬಾಯ ಮೂಲಕ: ಬಾಯಲ್ಲಿ ಹೊಕ್ಕ ರೋಗಾಣುಗಳು ಜಠರ, ಕರುಳುಗಳಲ್ಲಿ ಏನಾದರೂ ಒಂದು ಬಗೆಯ ಉರಿತವೇಳಿಸುವುವು. ಇದರಿಂದ ಮಲ ಸಾಮಾನ್ಯವಾಗಿ ಸೋಂಕುಕಾರಕ ವಸ್ತುವಾಗುತ್ತದೆ. ಇದಕ್ಕೆ ಕೆಲವು ವಿನಾಯಿತಿಗಳಿವೆ. ಗಂಟಲಿಗೂ ಉಸಿರ್ನಾಳಕ್ಕೂ ಸಂಬಂಧವಿರುವುದರಿಂದ ಉಸಿರಾಟ ಮಂಡಲದ ಸೊಂಕಿನಿಂದ ಬರುವ ಕೆಂಜ್ವರ, ಗಂಟಲಮಾರಿ ತೆರನ ರೋಗಗಳು ರೋಗಿಯ ಎಂಜಲು, ಉಗುಳು ತಾಕಿರುವ ಆಹಾರವನ್ನು ತಿನ್ನುವುದರಿಂದಲೂ ಈ ರೋಗಾಣುಗಳ ಸೋಂಕು ಹತ್ತಿರುವ ಕೆಚ್ಚಲು ಇರುವ ಹಸುಗಳ ಹಾಲನ್ನು ಕಾಯಿಸದೆ ಕುಡಿಸುವುದರಿಂದಲೂ ಬರಬಹುದು. ಇನ್ನೊಂದು ವಿನಾಯಿತಿ ದನದ ಕ್ಷಯ ರೋಗಾಣು. ಹಾಲಿನಲ್ಲಿ ಇದನ್ನು ಸೇವಿಸಿದರೆ, ಗಂಟಲು ಇಲ್ಲವೇ ಕರುಳಿನ ಹಾಲುರಸದ (ಲಿಂಫ್ಯಾಟಿಕ್) ಊತಕದ ಮೂಲಕ ತೂರಿ ಕರುಳಿಗಿಂತಲೂ ಹೆಚ್ಚಾಗಿ, ದೂರದ ಮೂಳೆಗಳು, ಕೀಲುಗಳು, ಗ್ರಂಥಿಗಳು, ಮಿದುಳು ಪೊರೆಗಳು (ಮೆನಿಂಜೀಸ್) ಮತ್ತಿತರ ಅಂಗಗಳಲ್ಲಿ ರೋಗವಾಗಿ ಕಾಣಿಸಿಕೊಳ್ಳುತ್ತದೆ.

ಇವನ್ನೂ ಮತ್ತು ಬ್ರೂಸೆಲ್ಲೋಸಿಸ್ನಂಥ ಹಾಲಿನ ಮೂಲಕ ಪಸರಿಸುವ ಕಾಯಿಲೆಗಳನ್ನೂ ಬಿಟ್ಟು ಮಲಜನ್ಯವಾದ ಸೋಂಕು ಬಾಯ ಮೂಲಕ ಹರಡಲು ಮುಖ್ಯ ಕಾರಣಗಳು ಮೂರು-ಆಹಾರ, ನೊಣಗಳು ಮತ್ತು ಕೊಳಕು ಬೆರಳುಗಳು. ಕರುಳಿನಲ್ಲಿ ಸೊಂಕು ಹೊತ್ತಿರುವವರೂ ರೋಗಿಗಳೂ ಕಕ್ಕಸಿಗೆ ಹೋಗಿ ಬಂದ ಮೇಲೆ ಕೂಡಲೇ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳದಿದ್ದರೆ ಅವರ ಬೆರಳುಗಳಲ್ಲಿ, ಉಗುರು ಸಂದುಗಳಲ್ಲಿ ಸೊಂಕು ಅಂಟಿರುವುದರಿಂದ ಅವರು ಮುಟ್ಟಿದಲ್ಲೆಲ್ಲ ರೋಗದ ಸೊಂಕು ಹತ್ತಿಕೊಳ್ಳುವುದು. ಇದನ್ನು ತಾಕಿಸಿಕೊಂಡವರಿಗೂ ಅವರವರ ಬೆರಳುಗಳ ಮೂಲಕ ಬಾಯಿ, ಮೂಗುಗಳಿಗೆ ಸೇರಿ ಅಲ್ಲಿಂದ ಕರುಳಗಳನ್ನು ಹೊಗುವುದು. ಅಡುಗೆ ಮಾಡುವವರಲ್ಲೂ ಬಡಿಸುವವರಲ್ಲೂ ಸೋಂಕುಗಳು ಹೀಗೆ ಹತ್ತಿದ್ದರಂತೂ ಬಲು ಅಪಾಯಕರ. ಏಕೆಂದರೆ, ಕರುಳಲ್ಲಿ ಸೇರುವ ಏಕಾಣುಜೀವಿಗಳು ಬಹುಪಾಲು ಆಹಾರ ಪದಾರ್ಥಗಳಲ್ಲಿ ಹುಲುಸಾಗಿ ಬೆಳೆಯುತ್ತವೆ. ಆಹಾರವನ್ನು ಸರಿಯಾದ ಕಾವಿನಲ್ಲಿ ಇರಿಸಿದ್ದರೆ, ಏಕಾಣುಜೀವಿಗಳು ವಿಪುಲವಾಗಿ ಬೆಳೆಯುವುದರಿಂದ, ಅಂಥವನ್ನು ಸೇವಿಸಿದಲ್ಲಿ ರೋಗ ಹತ್ತುವುದು ಏನೂ ಹೆಚ್ಚಲ್ಲ. ಏಕಾಣುಜೀವಿಗಳು ದಂಡಿಯಾಗಿ ಬೆಳೆವ ಆಹಾರಗಳು ಗಂಜಿ, ಸಾರು ಮಾಂಸದ ತಿಂಡಿಗಳು ಮುಂತಾದವು. ಬೆರಳುಗಳಿಂದಲೇ ಅಲ್ಲದೆ, ಧೂಳು, ನೊಣಗಳಿಂದ ಕೂಡ ಸೋಂಕು ಅಂಟಬಹುದು. ಒಳಚರಂಡಿ ಸಾಗಣೆ ಏರ್ಪಾಡಿಲ್ಲದ ಊರುಗಳಲ್ಲಿ, ಎಲ್ಲೆಂದರಲ್ಲಿ ಮಲ ವಿಸರ್ಜಿಸುವುದರಿಂದ ನೆಲದ ಮೇಲೆ ಬಿದ್ದ ಮಲ ಒಣಗಿ ಧೂಳಾಗಿ ಗಾಳಿಯಲ್ಲಿ ಸೇರುವುದರಿಂದಲೂ ನೊಣಗಳಿಂದಲೂ ಆಹಾರ ಕೊಳಕಾಗಬಹುದು. ಒಳಚರಂಡಿ ನೀರು ಬಂದು ಸೇರುವ ಖಾರಿಗಳಲ್ಲಿರುವ ಚಿಪ್ಪು ಮೀನುಗಳಲ್ಲಿ ಮಾನವನ ಕರುಳಿನಲ್ಲಿರುವ ಏಕಾಣುಜೀವಿಗಳಿರುವುದು ಕಂಡು ಬಂದಿದೆ. ಆದ್ದರಿಂದ ಈ ಚಿಪ್ಪುಮೀನುಗಳಲ್ಲಿ ವಿಷಮಶೀತಜ್ವರದ (ಟೈಫಾಯ್ಡ್‌) ತೆರನ ರೋಗಾಣುಗಳಿದ್ದಲ್ಲಿ ತಿನ್ನುವವರಿಗೂ ಸೋಂಕು ಹತ್ತಬಹುದು. ಗಾಯಗಳ, ಚರ್ಮ ತರಚಿಕೆಗಳ ಮೂಲಕ: ಹೊರಗಿನ ಯಾವ ರೋಗಾಣುವೂ ಮೈಯ ಒಳಹೋಗದಂತೆ ದೇಹವನ್ನು ರಕ್ಷಿಸುವ ದೊಡ್ಡ ಸಾಧನವೇ ಚರ್ಮ. ಒಡೆಯದ, ಬಿರಿಯದ ಚರ್ಮವನ್ನು ಯಾವ ರೋಗಕಾರಕ ಜೀವಾಣುಗಳೂ ತೂರಿ ಒಳಹೋಗುವಂತಿಲ್ಲ. ಆದರೆ ಕೊಂಚ ತರಚಿಕೊಂಡರೂ ಇನ್ನೂ ಹೆಚ್ಚಾಗಿ ಗಾಯವಾಗಿದ್ದರೂ ಸೋಂಕಿನ ಜೀವಾಣುಗಳು ಚರ್ಮದೊಳಗೆ ನುಗ್ಗಿ ಚರ್ಮದಡಿಯ ಊತಕ, ಸ್ನಾಯುಗಳಲ್ಲಿ ನೆಲೆಸಬಹುದು; ಒಂದೆಡೆ ರೋಗವೆಬ್ಬಿಸಬಹುದು; ಹಾಲುರಸ, ರಕ್ತಗಳಲ್ಲಿ ಸಾಗಿ ದೂರದ ಅಂಗಗಳಲ್ಲಿ ವೃದ್ಧಿಗೊಳ್ಳಬಹುದು. ಚರ್ಮ ಇಲ್ಲವೇ ಲೋಳೆಪೊರೆ ಸೋಂಕು ಇರುವವರಿಗೆ ತಾಕಿದರೆ ಮೇಹರೋಗ ನೇರವಾಗಿ ಹತ್ತಿಕೊಳ್ಳಬಹುದು. ಚರ್ಮದ ಮೇಲೆ ಯಾವಾಗಲೂ ಇರುವ ಜೀವಿಗಳು ಕೆರೆದ, ಗೀಚಿದ, ತರಚಿಕೊಂಡ ಇಲ್ಲವೇ ಬಲವಾಗಿ ಒತ್ತಿದ ಕಡೆ ಒಳನುಗ್ಗಿ ಕೀವುಗೂಡಿಸಿ ಕುರುಗಳೇಳಿಸಬಹುದು.

ಕೀಟಗಳಿಂದ

ಬದಲಾಯಿಸಿ

ಕೆಲವು ರೋಗಗಳ ಹರಡಿಕೆಗೆ ರಕ್ತಹೀರುವ ಕೀಟಗಳು ಕಾರಣ. ಉದಾಹರಣೆಗೆ, ಮಲೇರಿಯ. ಈ ಕಾಯಿಲೆಯಲ್ಲಿ ರೋಗಿಯ ಚರ್ಮದಲ್ಲಿನ ಲೋಮನಾಳಗಳ ರಕ್ತದಲ್ಲಿನ ರೋಗಾಣುಗಳನ್ನು ಸೊಳ್ಳೆ ಕಚ್ಚಿ ಕುಡಿಯುತ್ತದೆ. ಕೀಟದಲ್ಲಿ ಇವು ವೃದ್ಧಿಗೊಂಡು ಕೆಲವು ದಿನಗಳಲ್ಲಿ ಜೊಲ್ಲು ಗ್ರಂಥಿಗಳಲ್ಲಿ ಸೇರಿಕೊಳ್ಳುತ್ತವೆ. ಸೊಳ್ಳೆ ಇನ್ನೊಬ್ಬರನ್ನು ಕಡಿದಾಗ ಮಲೇರಿಯ ರೋಗಾಣುಗಳು ಅವರಿಗೆ ಸಾಗುತ್ತವೆ. ಸೊಕ್ಕಿನ ಜ್ವರದಲ್ಲಿ ಸೋಂಕುಸಾಗಣೆ ಕೂರೆಗಳಿಂದಾಗುವುದು. ಕೂರೆಯ ಕರುಳಿನ ಗೋಡೆಯಲ್ಲಿ ಈ ಜ್ವರದ ರೋಗಾಣುಗಳೂ ಬೆಳೆದು ಅದರ ಮಲದಲ್ಲಿ ಹೊರಬೀಳುತ್ತವೆ. ಕೂರೆ ಕಡಿದೆಡೆ ಕೆರೆದುಕೊಂಡರೆ ಚರ್ಮ ಗಾಯವಾಗಿ ಈ ಮಲದಲ್ಲಿನ ರೋಗಾಣುಗಳು ಒಳನುಗ್ಗುತ್ತವೆ. ಕೀಟಗಳು ಸಾಗಿಸುವ ಸೋಂಕು ಬಹುಮಟ್ಟಿಗೆ ಪ್ರಾಣಿಗಳಲ್ಲೇ ಹೆಚ್ಚು; ಆಗಾಗ್ಗೆ ಮಾನವನಿಗೂ ಹರಡಿಕೊಳ್ಳುವುದು. ಆದರೆ ಮಲೇರಿಯ ತೆರನ ಕೆಲವು ರೋಗಗಳು ಮಾನವನಿಗೇ ಮೀಸಲು.

ರೋಗದ ಉಗ್ರತೆ, ಪ್ರತಿರಕ್ಷಣೆ: ಆತಿಥೇಯದ ಮೈಒಳಹೊಕ್ಕು, ಊತಕಗಳಲ್ಲಿ ವೃದ್ಧಿಗೊಂಡು ರೋಗ ಬರಿಸುವ, ಜೀವಾಣುವಿನ ಕಸುವೇ ಉಗ್ರತೆ. ಹೀಗಾಗುವುದು ಮೈಯಲ್ಲಿನ ರೋಗ ತಡೆವ ಬಲವಾದ ಪ್ರತಿರಕ್ಷಣೆಯ (ಇಮ್ಯೂನಿಟಿ) ಮಟ್ಟಕ್ಕೆ ತಕ್ಕಂತಿರುವುದು. ಪ್ರತಿರಕ್ಷಣೆ ಕಡಿಮೆ ಇದ್ದವನಿಗೆ ಒಂದು ಉಗ್ರ ರೋಗಾಣು ತಗುಲಿದರೆ ರೋಗ ಹತ್ತುತ್ತದೆ. ಪ್ರತಿರಕ್ಷಣೆ ಬಲವಾಗಿದ್ದವನಲ್ಲಿ ರೋಗಾಣುವಿನ ಆಟ ಏನೂ ನಡೆಯದಿರಬಹುದು. ರೋಗಾಣುವಿನ ಉಗ್ರತೆ, ಆತಿಥೇಯದ ಪ್ರತಿರಕ್ಷಣೆ ಎಂಬೀ ಪದಗಳು ಸಾಪೇಕ್ಷಕವೆಂದು ತಿಳಿಯಬೇಕು. ಒಂದು ಜೀವಾಣು ಏನೇನೂ ಉಗ್ರವಾಗಿಲ್ಲವೆಂದೋ ಒಬ್ಬ ಆತಿಥೇಯ ಯಾವ ರೋಗಾಣುವಿಗೂ ಜಗ್ಗುವುದಿಲ್ಲವೆಂದೋ ಹೇಳುವುದು ರೋಗಕಾರಕವಲ್ಲದ ಜೀವಾಣುಗಳಿಗೆ ಮಾತ್ರ. ಯಾವಾಗಲೂ ಜೀವಾಣುಗಳಲ್ಲಿ ಒಂದು ತಳಿಯದು ಇನ್ನೊಂದರಕ್ಕಿಂತ ಉಗ್ರವಾಗಿರಬಹುದು, ಇಲ್ಲವೇ ಒಬ್ಬ ಆತಿಥೇಯ ಇನ್ನೊಬ್ಬನಿಗಿಂತ ಚೆನ್ನಾಗಿ ರೋಗವನ್ನು ತಡೆದುಕೊಳ್ಳಬಹುದು. ಆದ್ದರಿಂದ ಆತಿಥೇಯನ ರೋಗನಿರೋಧಕ ಬಲವನ್ನು ಗಮನಿಸದೆ ಒಂದು ರೋಗಾಣು ಉಗ್ರವಾದದ್ದು ಎನ್ನುವಂತಿಲ್ಲ.

ರೋಗಾಣುಗಳ ಬೇರೆ ಬೇರೆ ಜಾತಿಗಳ ಉಗ್ರತೆಯೂ ಬೇರೆ ಬೇರೆ. ಅಲ್ಲದೇ ಒಂದೇ ಜೀವಾಣುವಿನ ಉಗ್ರತೆ ಬೇರೆ ಬೇರೆ ಕಾಲಗಳಲ್ಲಿ ಬದಲಾಯಿಸಬಹುದು. ಕಾಲು, ಬಾಯಿ ರೋಗದ ವಿಷಕಣದ ತೆರನ ಜೀವಾಣು ಮಾನವನಿಗೆ ರೋಗ ಹತ್ತಿಸುವುದೇ ಇಲ್ಲ. ಅದೇ ಮಾನವನ ಕ್ಷಯರೋಗಾಣು ಮಾನವನಿಗೆ ಸುಲಭವಾಗಿ ಅಂಟಿಕೊಳ್ಳುವುದು. ದಡಾರದ ವಿಷಕಣ ಮಾತ್ರ, ಪ್ರತಿರಕ್ಷಣೆಯಿಲ್ಲದೆ ಯಾರಿಗೆ ತಗುಲಿದರೂ ಉಗ್ರವಾದ ರೋಗವನ್ನೇ ಎಬ್ಬಿಸುತ್ತದೆ. ಆದ್ದರಿಂದ ಸೋಂಕು ಅಂಟಿದ್ದರ ಪರಿಣಾಮ, ರೋಗಾಣುವಿನ ಉಗ್ರತೆ, ಆತಿಥೇಯದ ಪ್ರತಿರಕ್ಷಣೆ ಸಮತೋಲಕ್ಕೆ ತಕ್ಕ ಹಾಗಿರುವುದು. ರೋಗ ತಡೆವ ಬಲ ಜೋರಾಗಿದ್ದವ ಸೋಂಕಿಗೆ ಇನಿತೂ ಜಗ್ಗದೆ, ನೆಲೆಯೂರಿ ಹಾನಿಗೊಳಿಸುವ ಮುಂಚೆಯೇ ರೋಗಾಣುಗಳನ್ನು ಹಾಳುಗೆಡವಬಹುದು. ಅಷ್ಟೊಂದು ಪ್ರತಿರಕ್ಷಣೆ ಇಲ್ಲದವನಲ್ಲಿ ರೋಗಾಣು ಊತಕಗಳಲ್ಲಿ ನೆಲೆಯೂರಬಹುದಾದರೂ ರೋಗ ಎಬ್ಬಿಸದಂತಾಗಬಹುದು. ಇಂಥವನು ಆರೋಗ್ಯವಾಹಕ (ಹೆಲ್ತ್‌ ಕ್ಯಾರಿಯರ್) ಎಂದೆನ್ನಿಸುವನು. ಪ್ರತಿರಕ್ಷಣೆ ಇನ್ನಷ್ಟು ಕಡಿಮೆ ಇದ್ದು ಕೊಂಚ ಜಗ್ಗುವಂತಿರುವವರಲ್ಲಿ ರೋಗಾಣು ಮೈ ಒಳಹೊಕ್ಕು ಒಂದಿಷ್ಟು ಚಟುವಟಿಕೆ ತೋರಿ ಕೊಂಚ ರೋಗದ ಲಕ್ಷಣಗಳು ತೋರುವಂತೆ ಮಾಡಿದರೂ ಕೊನೆಗೆ ಮೈಯೇ ಗೆಲ್ಲುತ್ತದೆ. ಸಹಜವಾಗಿ ಈಡಾಗುವವರಲ್ಲಿ ಊತಕದಲ್ಲಿ ರೋಗಾಣ ನೆಲೆಸಿ ವಿಪರೀತ ವೃದ್ಧಿಗೊಂಡು ವಿಷವನ್ನು ಹೊರಬಿಡುತ್ತ ಪುರ್ತಿ ರೋಗವನ್ನು ಬರಿಸುತ್ತದೆ. ಸಹಜವಾಗಿ ರೋಗವನ್ನು ತಡೆವ ಬಲ ಏನೇನೂ ಇಲ್ಲದೆ ರೋಗಕ್ಕೆ ಬಲು ಈಡಾಗುವವರಲ್ಲಂತೂ ರೋಗಾಣುಗಳು ಬೇಗನೆ ವೃದ್ಧಿಗೊಂಡು ರೋಗ ಇದ್ದಕ್ಕಿದ್ದಂತೆ ತಲೆದೋರುವುದು. ರೋಗಾಣುವಿನ ಸೋಂಕು ಹರಡುವ ತೀವ್ರತೆ ಆತಿಥೇಯದ ಪ್ರತಿರಕ್ಷಣೆಯ ಮಟ್ಟಕ್ಕೆ ತಕ್ಕಂತೆ ರೋಗಿಗೆ ಮಾರಕವಾಗುವುದು. ಕೆಲವು ರೋಗಗಳಂತೂ ಹೆಚ್ಚು ಬಲಿ ತೆಗೆದುಕೊಳ್ಳುತ್ತವೆ.

ರೋಗಾಣುಗಳ ತೀವ್ರತೆ ಕೂಡ ಆಗಾಗ್ಗೆ ಹೆಚ್ಚು ಕಡಿಮೆ ಆದಂತೆ ತೋರುವುದು. ಒಂದು ರೋಗ ಸಾಂಕ್ರಾಮಿಕ ಆದುದಕ್ಕೆ ಅದರ ರೋಗಾಣುವಿನ ಸೋಂಕು ಅಂಟಿಸುವ ತೀವ್ರತೆ ಹೆಚ್ಚಿದ್ದೇ ಕಾರಣವೆಂದು ಹೇಳಿಬಿಡಬಹುದಾದರೂ ಎಂದಿನಂತೆ ಹೀಗಾಗುವುದನ್ನು ಅನುಮಾನ ಇಲ್ಲದಂತೆ ರುಜುವಾತಿಸುವುದು ಕಷ್ಟವೇ. ಸಾಮಾನ್ಯವಾಗಿ ಒಂದು ಸ್ಥಾನಿಕ (ಎಂಡೆಮಿಕ್) ರೋಗ ಸಾಂಕ್ರಾಮಿಕ ಆಗುವುದಕ್ಕೆ ಮುಖ್ಯ ಕಾರಣ ಆಯಾ ಪ್ರದೇಶದ ಜನರಲ್ಲಿನ ಪ್ರತಿರಕ್ಷಣೆಯ ಕುಗ್ಗೇ ಆಗಿದೆ. ಬಹುಪಾಲು ನಾಗರಿಕ ನಾಡುಗಳಲ್ಲಿ ದಡಾರ ಎಳೆಯ ಮಕ್ಕಳಿಗೇ ತಾಕುತ್ತದೆ. ಇದರ ರೋಗಾಣು ಬಲು ಉಗ್ರವಾದದ್ದರಿಂದ, ಇದಕ್ಕೊಡ್ಡಿದ ಎಲ್ಲ ಮಕ್ಕಳಿಗೂ ಅಂಟುತ್ತದೆ. ಈ ರೋಗದಿಂದ ಮುಕ್ತರಾಗುವ ಮಕ್ಕಳು ಶಾಶ್ವತವಾಗಿ ಪ್ರತಿರಕ್ಷಣೆ ಪಡೆದಿರುವರು. ಆಗ ರೋಗ ಇಳಿದು ಹೋದರೆ, ಅದರ ರೋಗಾಣುವಿನ ಉಗ್ರತೆ ಕುಂದಿತೆಂದಲ್ಲ, ಈಡಾಗುವವರು ಇಲ್ಲದ್ದೇ ಕಾರಣ. ಮತ್ತೆ ಈ ರೋಗಕ್ಕೀಡಾಗುವವರು ವಯಸ್ಸಿಗೆ ಬರುವ ತನಕ, ಮುಂದಿನ ಸುಮಾರು ವರ್ಷವೆಲ್ಲ ರೋಗ ಅಡಗಿಯೇ ಇರುತ್ತದೆ. ಆದರೆ ಎಲ್ಲ ಸಾಂಕ್ರಾಮಿಕಗಳಿಗೂ ಇದೇ ಕಾರಣ ಹೇಳುವಂತಿಲ್ಲ. ಕೆಲವು ವರ್ಷಗಳಿಗೊಂದು ಬಾರಿ ನಾಡಿನ ಜನರಿಗೆ ಉರಿಶೀತ (ಇನ್ ಫ್ಲೂಯೆಂಜ) ತಾಕಿ ಎಷ್ಟೊ ಮಂದಿ ಬೇನೆ ಬಿದ್ದರೂ ಸಾವು ಕಡಿಮೆ. ಆದರೆ ಆಗಾಗ್ಗೆ, ಇದ್ದಕ್ಕಿದ್ದ ಹಾಗೆ ಪಿಡುಗು ಜೋರಾಗಿ ಬಹಳ ಮಂದಿಯನ್ನು ಬಲಿತೆಗೆದುಕೊಳ್ಳುವುದು. ಹೀಗೆ ಬಲು ಜೋರಾದ ಸಾಂಕ್ರಾಮಿಕ ಆಗುವುದರ 20 ವರ್ಷಗಳ ಹಿಂದೂ ಮುಂದೂ ಇದ್ದುದಕ್ಕಿಂತಲೂ ಉರಿಶೀತವನ್ನು ತಡೆವ ಬಲ ಇದ್ದಕ್ಕಿದ್ದಂತೆ 1918-19ರ ಸಾಂಕ್ರಾಮಿಕವಾದಾಗ ಇಳಿದುಹೋಗಿತ್ತೆಂದು ಊಹಿಸಲು ಕಾರಣಗಳೇ ಇಲ್ಲ. ಆದ್ದರಿಂದ ಆ ವಿಷಕಣದ ಬಲು ವಿಷಕರವಾದ ತಳಿ ಬೆಳೆದು ಹರಡಿರಬೇಕು.

ರೋಗ ತಲೆದೋರಲು ಇನ್ನಷ್ಟು ಕಾರಣಗಳು

ಬದಲಾಯಿಸಿ

ಜನರ ವಯಸ್ಸು, ಲಿಂಗ, ಕಸುಬುಗಳಿಗೂ ಸೋಂಕುಕಾರಕ ರೋಗಗಳಿಗೂ ಸಂಬಂಧವಿದೆ. ಎಷ್ಟೋ ರೋಗಗಳು ಚಿಕ್ಕಂದಿನಲ್ಲೆ ಅಂಟುತ್ತವೆ. ಆಮೇಲೆ ದೊಡ್ಡವರಾದಾಗ ಮತ್ತೆ ಅದೇ ರೋಗಗಳು ಅಂಟದ ಹಾಗೆ ತಡೆವಂತೆ ಪ್ರತಿರಕ್ಷಣೆ ಆಗಿರುತ್ತದೆ. ಅಂತೂ ಎಳೆತನದಲ್ಲಿ ಮಕ್ಕಳು ಬಹುಮಟ್ಟಿಗೆ ಅನೇಕ ರೋಗಗಳಿಗೆ ಈಡಾಗುವಂತಿರುವುವು. ಆದರೆ ಬೆಳೆದವರಲ್ಲೂ ವಿಷಮಜ್ವರದ ತೆರನ ಕೆಲವು ರೋಗಗಳು ಸಾಮಾನ್ಯ. ಮತ್ತೆ ಮುದಿತನದಲ್ಲಿ ಮೈಯಲ್ಲಿ ರೋಗ ತಡೆಯುವ ಬಲ ಕುಂದಿರುವುದು. ಹರೆಯದಲ್ಲಿ ಏನೂ ಕೆಡಕುಮಾಡದ ಸಣ್ಣ ಬೇನೆಗಳೇ ಆಗ ಅವರಿಗೆ ಮಾರಕವಾಗುತ್ತವೆ. ರೋಗಕ್ಕೆ ಈಡಾಗುವುದರಲ್ಲಿ ಹೆಣ್ಣು ಗಂಡುಗಳ ವ್ಯತ್ಯಾಸ ಅಷ್ಟಾಗಿಲ್ಲವಾದರೂ ಫುಪ್ಫುಸದ ಕ್ಷಯ ಹುಡುಗರಿಗಿಂತ ಹುಡುಗಿಯರಲ್ಲೇ ಹೆಚ್ಚು. ಕೆಲವು ರೋಗಗಳು ಆಯಾ ಕಸುಬುಗಳ ಕೆಲಸಗಾರರಿಗೆ ಅಂಟುತ್ತವೆ. ಪ್ರಾಣಿ ಚರ್ಮಗಳನ್ನು ಸಾಗಿಸುವ ಕೂಲಿಗಾರರಲ್ಲಿ ನೆರಡಿ (ಅಂತ್ರಾಕ್ಸ್‌) ರೋಗ ಸಾಮಾನ್ಯ ಕೋಲಾರದ ಚಿನ್ನದ ಗಣಿಗಳ ಆಳದಲ್ಲಿ 15-20 ವರ್ಷಗಳಷ್ಟು ಹೆಚ್ಚು ಕಾಲ ಕೆಲಸ ಮಾಡುವವರಲ್ಲಿ ಮೊದಲು ಸಿಲಿಕಬೇನೆ (ಸಿಲಿಕೋಸಿಸ್) ತಲೆದೋರಿ ಅನಂತರ ಸುಲಭವಾಗಿ ಕ್ಷಯ ಹತ್ತುವಂತೆ ಕೆಲವೇಳೆ ಕಸುಬಿನಿಂದ ರೋಗಕ್ಕೀಡಾಗುವುದು ಕಂಡುಬರುತ್ತದೆ.

ಪುಷ್ಟಿಯಾದ ಆಹಾರ ಇಲ್ಲವಾದರೆ ಸೋಂಕುಗಳಿಗೆ ಈಡಾಗುವುದು ಹೆಚ್ಚುವುದೆಂದು ಜನರಲ್ಲಿ ನಂಬಿಕೆ ಇರುವುದಾದರೂ ಕೂರಾದ (ಅಕ್ಯುಟ್) ಸೋಂಕುಕಾರಕ ರೋಗಗಳಲ್ಲಂತೂ ಪೌಷ್ಟಿಕ ಆಹಾರ ಅಷ್ಟೇನೂ ಪರಿಣಾಮಕಾರಿಯಲ್ಲ. ಪುಷ್ಟಿಗೊಂಡ ಮಕ್ಕಳಲ್ಲೂ ಬಡಕಲ ಮಗುವಿನಲ್ಲೂ ದಡಾರ ಸೋಂಕು ಹತ್ತುವುದರಲ್ಲಿ ಏನೇನೂ ವ್ಯತ್ಯಾಸವಿಲ್ಲದ್ದು ಒಂದು ಉದಾಹರಣೆ. ಇತರ ಸೋಂಕುರೋಗಗಳಿಗೂ ಇದನ್ನೇ ಹೇಳಬಹುದು. ಆದರೆ, ಆಹಾರದಲ್ಲಿ ಎ ಜೀವಾತಿನ ತೆರನ ಕೆಲವು ಅಂಶಗಳ ವಿಪರೀತ ಕೊರೆಗಳಿದ್ದರೆ ಮಾತ್ರ ರೋಗ ತಡೆವ ಬಲ ಇಳಿದು ಹೋಗುವುದು. ಅಲ್ಲದೆ ಯುರೋಪಿನ ಹರೆಯದವರಲ್ಲಿ ಒಳಗೆ ಹುದುಗಿರುವ ಕ್ಷಯರೋಗ ಪುಷ್ಟಿಗೆಟ್ಟವರಲ್ಲಿ ಹೊರದೋರುವುದು. ಆದ್ದರಿಂದ ಪುಷ್ಟಿಗೊಂಡಿದ್ದವರು ಯಾವ ಸೋಂಕುರೋಗಗಳಿಗೂ ಈಡಾಗರೆನ್ನುವುದು ಸರಿಯಲ್ಲ.

ಸೋಂಕುರೋಗ ಹರಡುವುದಕ್ಕೂ ಹವಾಗುಣಕ್ಕೂ ಇರುವ ಸಂಬಂಧವನ್ನು ಬಿಡಿಯಾಗಿ ಕಾಣುವಂತಿಲ್ಲ. ಉಷ್ಣ ದೇಶಗಳಲ್ಲಿ ಉಸಿರಾಟ ಮಂಡಲದ ರೋಗಗಳೂ ಹೆಚ್ಚು ಸಾಮಾನ್ಯ. ಆದರೆ ಉಷ್ಣ ದೇಶಗಳಲ್ಲಿ ಮಲ, ಕೊಚ್ಚೆಗಳ ಸಾಗಣೆ ಸರಿಯಾಗಿರದೆ ಸೋಂಕು ಅಂಟುವ ಅವಕಾಶಗಳೂ ಆಹಾರ ತಯಾರಿಸುವವರ ಕೊಳಕುತನವೂ ಚಳಿದೇಶದಲ್ಲಿ ಬೆಚ್ಚಗೆ ಬಹಳ ಮಂದಿ ತಂಡಗಳಲ್ಲಿ ಒಂದೆಡೆ ಸೇರುವುದೂ ಉಸಿರಾಟ ಮಂಡಲದ ಸೋಂಕುರೋಗಗಳು ಸುಲಭವಾಗಿ ಹರಡುವುದೂ ಕಾರಣಗಳು ಎನ್ನಬಹುದು. ಮಳೆ ಬಿದ್ದರೆ ಧೂಳು ಅಡಗುವುದರಿಂದ ದೂಳಿಂದ ಹರಡುವ ಸೋಂಕುರೋಗಗಳು ಮಳೆಗಾಲದಲ್ಲಿ ತಗ್ಗುತ್ತವೆ.

ಜನಾಂತರ ಸಾಂಕ್ರಾಮಿಕ ರೋಗಗಳು

ಬದಲಾಯಿಸಿ

ಎಷ್ಟೊ ಶತಮಾನಗಳಿಂದಲೂ ಒಂದು ರೋಗಾಣು ಒಂದು ನಾಡಿನಲ್ಲಿದ್ದು ನಾಗರಿಕರಿಗೆ ಎಲ್ಲೆಲ್ಲೂ ತಾಕುತ್ತಲೇ ಇದ್ದರೆ, ಕೊನೆಗೆ ಅದು ಬಹಳ ಮಂದಿಯನ್ನು ಸಾಯಿಸದೆ ಉಳಿಯುವ ಸಮತೋಲಕ್ಕೆ ಬಂದಿರುತ್ತದೆ. ಮೊದಮೊದಲ ತಲೆಮಾರುಗಳಲ್ಲಿರುವ ಈ ರೋಗಕ್ಕೆ ಈಡಾಗುವವರೆಲ್ಲ ಇದಕ್ಕೆ ಬಲಿಯಾಗಿ ಆಮೇಲೆ ಇದಕ್ಕೆ ಜಗ್ಗದ ವಂಶದವರೇ ಉಳಿದು ರೋಗ ಜನಾಂತರವಾಗಿರುವುದು. ಇಂಗ್ಲೆಂಡಿನಲ್ಲಿ ಕ್ಷಯ, ಉಪದಂಶಗಳು (ಸಿಫಿಲಿಸ್) ಇದರ ಉದಾಹರಣೆಗಳು.

ಜನಾಂತರವಾಗಿರುವ ಯಾವುದೇ ರೋಗ ಸಾಂಕ್ರಾಮಿಕವಾಗಬಹುದು. ಇದಕ್ಕೆ ಕಾರಣ ಏನು ಎಂಬುದು ಇನ್ನೂ ಚೆನ್ನಾಗಿ ತಿಳಿದಿಲ್ಲ. ಹಾಗಾಗಬೇಕಾದರೆ ಜನರಲ್ಲಿ ಈ ರೋಗಕ್ಕೆ ಈಡಾಗುವವರು ಸಾಕಷ್ಟು ಮಂದಿ ಇರಬೇಕು, ಸೋಂಕುಕಾರಕ ಜೀವಾಣು ಬಲು ಬೇಗನೆ ಎಲ್ಲರಲ್ಲೂ ಹಬ್ಬಿಕೊಳ್ಳಲು ಅನುಕೂಲವಿರಬೇಕು. ಉರಿಶೀತದ ತೆರನ ರೋಗದಲ್ಲಿ ಸಾಂಕ್ರಾಮಿಕ ಜೀವಾಣು ಬಲು ಮುಂಚೆ ಅಲ್ಲಲ್ಲಿ ಚೆಲ್ಲಿದಂತೆಲ್ಲ (ಸ್ಪೊರ್ಯಾಡಿಕ್) ಹೆಚ್ಚುಹೆಚ್ಚು ಮಂದಿಗಳಲ್ಲಿ ರೋಗ ತಲೆದೋರುವುದು. ಬಲು ಬೇಗನೆ ಕಾಯಿಲೆಗಳು ಕೊನೆಯ ಮಿತಿಗೇರಿ ಆಮೇಲೆ ನಿಧಾನವಾಗಿ ಮೊದಲಿನ ಇರವಿಗೆ ಇಳಿವುದು. ಈ ಏರಿಳಿತಗಳು ಒಂದೇ ವೇಗದಲ್ಲಿ ಇರುವುದರಿಂದ, ರೋಗಿಗಳ ಅಂಕಿಗಳನ್ನು ಒಂದು ಗ್ರಾಫಿüನಲ್ಲಿ ಬಿಡಿಸಿದರೆ ಗಂಟೆಯ ಆಕಾರ ತೋರುವುದು. ಸೋಂಕು ಅಂಟಿರುವ ನೀರು, ಹಾಲು, ಐಸ್ ಕ್ರೀಮ್ ಆಹಾರಗಳನ್ನು ಸೇವಿಸಿ ರೋಗಕ್ಕೆ ಅವಕಾಶ ಕೊಡುವ ಒಂದು ಭಾಗದ ಜನರಲ್ಲಿ ಮಾತ್ರ ತಲೆ ಹಾಕುವ ಸಾಂಕ್ರಾಮಿಕ ಎಂದರೆ ವಿಷಮಜ್ವರ. ಹೀಗೆ ಏಳುವ ಸಾಂಕ್ರಾಮಿಕಗಳು ಸಿಡಿದೆದ್ದಂತೆ ತಲೆದೋರುತ್ತವೆ. ಗ್ರಾಫಿನಲ್ಲಿ ಇದರ ರೋಗಿಗಳ ಅಂಕಿಗಳನ್ನು ಹಾಕಿದಾಗ, ವಕ್ರರೇಖೆಯ ತುದಿ ಚೂಪಾಗಿದ್ದು, ಏರುವ ಕಾಲು ಕಡಿದಾಗೂ ಮರುಚಲದ (ಸೆಕೆಂಡರಿ) ಸೋಂಕುಗಳೇಳುವುದರಿಂದ, ಇಳಿವ ಕಾಲು ಕೊಂಚ ಚಪ್ಪಟೆಯಾಗೂ ಇರುವುವು. ಸಾಂಕ್ರಾಮಿಕಗಳಾಗುವ ಕಾರಣಗಳು ಇನ್ನುಳಿದ ಎಷ್ಟೊ ರೋಗಗಳಲ್ಲಿ ಬೇರೆ ಬೇರೆ ಆಗಿವೆ.

ಸೋಂಕುಕಾರಕ ರೋಗಗಳ ಲಕ್ಷಣಗಳು

ಬದಲಾಯಿಸಿ
ಸೋಂಕುಕಾರಕ ಜೀವಾಣು ಮೈ ಒಳಹೊಕ್ಕಮೇಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಹಿಡಿವ ಉದ್ಭವನ (ಇಂಕ್ಯುಬೇಷನ್) ಕಾಲ ಒಂದೊಂದರಲ್ಲಿ ಒಂದೊಂದು ಬಗೆ. ಹೆಣವನ್ನು ಕೊಯ್ದು ಪರೀಕ್ಷಿಸುವಾಗ ಗಾಯವಾದರೆ ಸರಕಾಯ್ಜೀವಿಯ ನಂಜುರಕ್ತವಾಗಿ (ಸೆಪ್ಟಿಸೀಮಿಯ) 24 ತಾಸುಗಳಲ್ಲೇ ಸಾಯುವುದು ಇದ್ದಕ್ಕಿದ್ದ ಹಾಗೆ ಆಗುವುದರ ಉದಾಹರಣೆ. ಇನ್ನೊಂದು ಕೊನೆಯಲ್ಲಿರುವ ಕುಷ್ಠರೋಗದಲ್ಲಿ ಸೋಂಕು ಹತ್ತಿದ ಮೇಲೆ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಹಲವಾರು ವರ್ಷಗಳೇ ಹಿಡಿಯಬಹುದು. ದಡಾರದ ತೆರನ ದದ್ದುಗಳೇಳುವ ಮಕ್ಕಳ ಜ್ವರಗಳ ಉದ್ಭವನ ಕಾಲ 2-3 ವಾರಗಳವರೆಗೇ ಇರಬಹುದು. ನಾಯಿಹುಚ್ಚು, ಬ್ರುಸೆಲ್ಲಬೇನೆಗಳಲ್ಲಿ ಇದು 6 ವಾರಗಳಿಗೂ ಮೀರಿರುವುದು. ಕೆಲವೇಳೆ ಸೋಂಕು ಹತ್ತಿದಮೇಲೆ ಕ್ಷಯರೋಗ ಹೊರದೋರಲು ಒಂದೆರಡು ವರ್ಷಗಳೇ ಬೇಕು.

ದದ್ದುಗಳೇಳುವ ಜ್ವರಗಳಲ್ಲಿ, ಆತಿಥೇಯದಲ್ಲಿ ಸಾಕಷ್ಟು ಹಾನಿಗೊಳಿಸುವಂತೆ ವೃದ್ಧಿಗೊಳ್ಳುವ ರೋಗಾಣುವಿಗೆ ಹಿಡಿವ ವೇಳೆಯನ್ನು ಉದ್ಭವನ ಕಾಲ ಸೂಚಿಸಬಹುದು. ಸೋಂಕು ಹತ್ತಿದ ಕೆಲವೇ ವಾರಗಳಲ್ಲಿ ಕ್ಷಯರೋಗ ತಲೆದೋರಬಹುದಾದರೂ ಇದರಿಂದ ಹೆಚ್ಚಿನ ಪರೀಕ್ಷೆಗಳಿಂದ ಮಾತ್ರ ಪತ್ತೆ ಮಾಡಬಹುದಾದ, ಅವಿತ ಸೋಂಕೆದ್ದು, ಒಂದಷ್ಟು ಕಾಲ ಕಳೆದಮೇಲೆ ರೋಗ ಹೊರಗಾಣಬಹುದು, ಇಲ್ಲವೇ ಬರುಬರುತ್ತ ಅಣಗಿ ವಾಸಿಯಾಗಬಹುದು. ಪರಪಿಂಡಿಗೂ ಆತಿಥೇಯಕ್ಕೂ ನಡುವೆ ನಾಜೂಕಿನ ಸಮತೋಲ ಏರ್ಪಟ್ಟು ಸಹಜವಾಗಿರುವ ಮೈಯ ರೋಗ ತಡೆವ ಬಲದಲ್ಲಿ ಕೊಂಚ ಕಾಲ ಇಳುಗಡೆಯಾದರೂ ಏರುಪೇರಾಗುತ್ತದೆ.

ಯಾವ ಕೀಟದಿಂದಲೇ ಸೋಂಕು ಹತ್ತಿದರೂ ಮೈಯಲ್ಲಿನ ಊತಕಗಳಲ್ಲಿ ಪ್ರತಿಕ್ರಿಯೆಗಳ ಸಾಲುಗಳೇ ಏಳುತ್ತವೆ. ಉರಿತ ಇಂಥ ಒಂದು ಪ್ರತಿಕ್ರಿಯೆ. ಉರಿತದಲ್ಲಿ ಸೋಂಕನ್ನು ಒಂದೆಡೆಗೆ ಮಿತಿಗೊಳಿಸಿ ಒಳನುಗ್ಗಿರುವ ರೋಗಾಣುವನ್ನು ಹಾಳುಗೆಡಿಸುವಂತೆ ರಕ್ತನಾಳಗಳ, ರಕ್ತಕಣಗಳ ಬದಲಾವಣೆಗಳಾಗುತ್ತವೆ. ಬಹುಮಟ್ಟಿಗೆ ಎಲ್ಲ ಜೀವಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಬರುವ ಸಾಮಾನ್ಯ ಪ್ರತಿಕ್ರಿಯೆ ಉರಿತ. ಜೀವಾಣುಗಳು ಒಳಹೋಗುವುದರಿಂದಲೇ ಅಲ್ಲದೆ ಊತಕಗಳೊಳಕ್ಕೆ ಹೊರಗಿಂದ ಯಾವ ಕೆರಳಿಸುವ ವಸ್ತು ಸೇರಿದರೂ ಉರಿತವಾಗುತ್ತದೆ. ಆದರೆ ಜೀವಾಣುಗಳಿಂದೇಳುವ ಪ್ರತಿಕ್ರಿಯೆಗಳು ಮಾತ್ರ ಆಯಾ ಮಾದರಿಯ ಜೀವಾಣುವಿಗೆ ವಿಶಿಷ್ಟ. ಒಟ್ಟಾಗಿ ನವಿರುಜಾಲದ ಒಳಪೊರೆಯ ಮಂಡಲ (ರೆಟೆಕ್ಯುಲೋ-ಎಂಡೋತೀಲಿಯಲ್ ಸಿಸ್ಟಂ) ಎನಿಸಿಕೊಂಡ, ಮೈಯಲ್ಲಿರುವ ಕೆಲವು ಗೊತ್ತಾದ ಜೀವಕಣಗಳಲ್ಲಿ, ಸೋಂಕಿಗೆ ಕಾರಣವಾದ ಆಯಾ ಮಾದರಿಯ ರೋಗಾಣುವಿನ ಮೇಲೆ ವರ್ತಿಸುವ, ನಿರೋಧಕಗಳೆಂಬ (ಆಂಟಿಬಾಡೀಸ್) ಕೆಲವು ವಿಶೇಷ ಪದಾರ್ಥಗಳು ತಯಾರಾಗುತ್ತವೆ. ನಿರೋಧಕಕ್ಕೂ ಅದರ ಎದುರು ಸಮನಾಗಿ ರೋಗಾಣುವಿನಲ್ಲಿರುವ ನಿರೋಧಜನಕ (ಆಂಟಿಜನ್) ಎಂದಿರುವುದಕ್ಕೂ ಕೂಡಿಕೆ ತೀರ ವಿಶಿಷ್ಟ; ಅಂದರೆ ಇದು ಬೀಗ, ಕೀಲಿಯಂತಿರುವುದು. ರಕ್ತದಲ್ಲಿ ನಿರೋಧಕಗಳು ಸಾಕಷ್ಟಿದ್ದಲ್ಲಿ, ಹಲವಾರು ಬಗೆಗಳಲ್ಲಿ ರೋಗಾಣುಗಳ ಮೇಲೆ ವರ್ತಿಸಿ, ರಕ್ತ, ಊತಕಗಳಲ್ಲಿ ಯಾವಾಗಲೂ ಇರುವ ತೀನಿಕಣಗಳಿಗೆ (ಫ್ಯಾಗೊಸೈಟ್ಸ್‌) ಬಲಿಯಾಗುವ ಹಾಗೆ ಅವನ್ನು ಬದಲಿಸುತ್ತವೆ. ಹೀಗೆ ಗಳಿಸಿದ ವಿಶಿಷ್ಟ ಪ್ರತಿರಕ್ಷಣೆ ಬಾಳಿನುದ್ದಕ್ಕೋ ಕೆಲವೇ ಕಾಲವೋ ಉಳಿಯಬಹುದು. ಬಾಳಿನುದ್ದಕ್ಕೂ ಇದ್ದರೆ, ಅದೇ ರೋಗ ಮತ್ತೆ ಅಂಟುವಂತಿಲ್ಲ. ಕೊಂಚ ಕಾಲವಿದ್ದರೆ 2, 3, 4 ಬಾರಿಯಾದರೂ ಮೇಲಿಂದಮೇಲೆ ಸೋಂಕಿಗೆ ಈಡಾಗಬಹುದು.

ಬೇರೆ ಬೇರೆ ರೋಗಗಳಲ್ಲಿ ಗಳಿಸಿದ ಪ್ರತಿರಕ್ಷಣೆಯ ಮಟ್ಟ ಇರುವ ಕಾಲಗಳನ್ನು ನಿರ್ಧರಿಸುವ ಅಂಶಗಳ ವಿಚಾರದ ತಿಳಿವು ಏನೇನೂ ಸಾಲದು. ಸಾಮಾನ್ಯವಾಗಿ ಮೈಯೆಲ್ಲ ಹರಡಿಕೊಳ್ಳುವ ವಿಷಕಣಗಳ ಸೋಂಕಿನಿಂದ ಬಲವಾದ ಶಾಶ್ವತ ಪ್ರತಿರಕ್ಷಣೆ ಲಭಿಸುತ್ತದೆ. ಆದರೆ, ಏಕಾಣುಜೀವಿಗಳಿಂದೇಳುವ ಉಸಿರಾಟದ ಸೋಂಕಿನಿಂದ ಬಲವಿಲ್ಲದ ಪ್ರತಿರಕ್ಷಣೆ ಕೊಂಚ ಕಾಲ ಇದ್ದು ಹೋಗುವುದು.

ಹತೋಟಿ, ನಿರೋಧ

ಬದಲಾಯಿಸಿ

ಸೋಂಕಿನ ವಸ್ತುವಿನ ಪ್ರಮಾಣದ ಇಳುಗಡೆ, ಸೋಂಕು ಸಾಗಣೆಯ ಸಾಧನಗಳ ಹತೋಟಿ, ಆತಿಥೇಯದ ರೋಗ ತಡೆವ ಬಲದ ಹೆಚ್ಚಳಿಕೆ ಇವುಗಳಿಂದ ಸೋಂಕುಕಾರಕ ರೋಗಗಳು ಬಾರದಂತೆ ತಡೆಯಬಹುದು. ರೋಗ ಅಂಟಿಸುವ ವಸ್ತುವಿನ ಪ್ರಮಾಣವನ್ನು ಇಳಿಸುವ ಉಪಾಯಗಳು, ಸೋಂಕಿನ ವಸ್ತುವಿನ ಗುಣ, ಮೂಲಗಳಿಗೆ ತಕ್ಕಹಾಗೆ ಹಲತೆರನಾಗಿರುವುವು. ಕೈವಸ್ತ್ರ, ಕೆಲವೆಡೆ ಇಟ್ಟಿರುವ ಉಗುಳುದಾನಿಗಳ ಹೊರತಾಗಿ ಎಲ್ಲೆಂದರಲ್ಲಿ ಉಗುಳು, ಸೀನು, ಎಂಜಲು ತೆಮಡೆಗಳನ್ನು ಎಸೆಯಬಾರದು. ಸೋಂಕುರೋಗಿಗಳನ್ನು, ಬೇರೆಯಾಗಿ ಇರಿಸಬೇಕು. ವಾಹಕಿಗಳ ಕಸಬುಗಳಲ್ಲಿ ಯಾವ ಅಡ್ಡಿಯನ್ನೂ ಹಾಕಬೇಕಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಿ ಬೇರೆ ಇರಿಸಬೇಕಿಲ್ಲ. ಸಿಡುಬು ಕಾಲರ ರೋಗಿಗಳನ್ನು ಬೇರೆ ಇರಿಸಿದರೆ, ಯಾರೂ ಅಡ್ಡಿಪಡಿಸರು.

ಆದರೆ ಅದೇ ಕ್ಷಯರೋಗಿಗಳನ್ನು ಬೇರೆ ಇರಿಸುವುದಿರಲಿ, ಒಂದೆಡೆ ಕೂಡಿ ಹಾಕುವುದಕ್ಕೂ, ಯಾರಾದರೂ ಸರಿಯೇ, ಒಪ್ಪುವುದು ಇನ್ನೂ ಕಷ್ಟ. ಪ್ಲೇಗು, ಕಾಲರ, ಸಿಡುಬು. ಹಳದಿಜ್ವರದ ರೋಗಿಗಳಿರುವ ಹಡಗುಗಳಿಗೆ ಬಲವಂತವಾಗಿ ಕ್ವಾರಂಟೀನ್ (ನಲವತ್ತು ದಿನಗಳ ತಡೆ) ಹಾಕಿರಿಸಬಹುದು. ಇಲ್ಲೂ ಅಷ್ಟೇ, ಸಾಮಾಜಿಕ, ಹಣಕಾಸಿನ ಕಷ್ಟಗಳಿಂದ ಒಂದು ಮಿತಿಗೊಂಡ ರೂಪದ ಹೊರತಾಗಿ, ಈ ವಿಧಾನ ಜಾರಿಗೆ ತರುವುದು ಕಷ್ಟ. ಕಟ್ಟುನಿಟ್ಟಾಗಿ ಪಾಲಿಸುವುದಂತೂ ಆಗೇ ಆಗದು. ಮುಖ್ಯರಾದ ಕೆಲವರ ತುರ್ತಿನ ಕೆಲಸಗಳಿಗಾಗಿ ಆರೋಗ್ಯಪಾಲನೆಯ ನಿಯಮಗಳನ್ನು ಸಡಿಲಿಸಬೇಕಾಗುವುದು. ಕೊಂಚವಾದರೂ ಸಡಿಲಿಸಿ, ರೋಗಲಕ್ಷಣಗಳು ಹೊರಗೆ ತೋರದವರನ್ನು ಮುಂದೆ ಸಾಗಲು ಬಿಡಬಹುದು. ಅವರು ಹೋಗುವ ಸ್ಥಳದ ಆರೋಗ್ಯಾಧಿಕಾರಿಗೆ ಸುದ್ದಿ ಕೊಟ್ಟು, ಬೇನೆ ಬಿದ್ದರೆ ಕೂಡಲೇ ವೈದ್ಯರನ್ನು ಕಾಣುವಂತೆ ಸೂಚಿಸಬಹುದು. ಯಾರಲ್ಲಾದರೂ ರೋಗ ಕಾಣಿಸಿಕೊಂಡರೆ ಕೂಡಲೇ ರೋಗವನ್ನೂ ಗುರುತಿಸಿ ತಕ್ಕ ನಿರೋಧ ಕ್ರಮಗಳನ್ನೂ ಕೈಗೊಳ್ಳಬಹುದು.

ಕಾವಿನಿಂದಲೊ ರಾಸಾಯನಿಕ ಸೋಂಕು ನಾಶಕಗಳಿಂದಲೊ ಸೋಂಕಿನ ಕಾರಕಗಳನ್ನು ಕೆಲವು ಸಮಯಗಳಲ್ಲಿ ಮಾತ್ರ ಹಾಳುಮಾಡಬಹುದೇ ಹೊರತು, ಎಲ್ಲೆಲ್ಲೂ ಇದನ್ನು ಪಾಲಿಸುವಂತಿಲ್ಲ. ಗಾಳಿಯಲ್ಲಿ ಸಾಗಿಬರುವ ಸೋಂಕನ್ನು ತಡೆಯಲು ಕಟ್ಟಡಗಳಲ್ಲಿ ಹವೆಯಾಡುವಿಕೆ (ವೆಂಟಿಲೇಷನ್) ಬಲು ಮುಖ್ಯ ವಿಧಾನ. ಇದರಿಂದ ಗಾಳಿಯಲ್ಲಿರುವ ರೋಗಾಣುಗಳೂ ಕಡಿಮೆಯಾಗಿ, ಒಳಗೆ ವಾಸಿಸುವವನಿಗೆ ಒಂದೇ ಬಾರಿಗೆ ಅವನ ಊತಕಗಳು ತಡೆದುಕೊಳ್ಳುವಷ್ಟಕ್ಕಿಂತ ಹೆಚ್ಚಾಗಿರವು. ಚೊಕ್ಕತೆಯಿಂದ ಧೂಳಿಲ್ಲದಂತೆ ನೋಡಿಕೊಂಡರೆ ಬಲು ಅನುಕೂಲ. ಏಕಾಣುಜೀವಿಗಳನ್ನು ಬಿಸಿಲು ಹಾನಿಗೊಳಿಸುವುದರಿಂದ, ಮನೆಯೊಳಕ್ಕೆ ಸಾಕಷ್ಟು ಬಿಸಿಲೂ ಬೆಳಕೂ ಬೀಳುವಂತೆ ಕಿಟಕಿ, ಬಾಗಿಲುಗಳ ಪರದೆಗಳನ್ನು ಕಳಚಿಟ್ಟು ಮಾಮೂಲಿನಂತೆ ನೀರು, ಸಾಬೂನುಗಳನ್ನು ಬಳಸಬಹುದು. ಬಿಸಿಲು ಇಲ್ಲವಾದಾಗ ಅತಿನೇರಿಳೆ ಬೆಳಕಿನ ವಿಕಿರಣತೆಯಿಂದಲೂ ಸೋಂಕು ಕಳೆವ ಸಿಂಪಡಿಕೆಗಳನ್ನು (ಸ್ಪ್ರೇಸ್) ಆಗಾಗ್ಗೆ ಚಿಮುಕಿಸುವುದರಿಂದಲೂ ಕೋಣೆಯ ರೋಗಾಣುಗಳನ್ನು ಸಾಯಿಸಲು ಯತ್ನಿಸಬಹುದು. ಆದರೆ, ಇವು ಬಿಸಿಲು, ಹೊಸ ಗಾಳಿಗಳ ಸಮಕ್ಕೆ ಬಾರವು. ಸೋಂಕು ಕಾರಕಗಳ ಸಾಗಣೆಯ ಸಾಧನಗಳ ಹತೋಟಿಯನ್ನು ಕರುಳಿನ ರೋಗಗಳಲ್ಲಿ ಬಲು ಚೆನ್ನಾಗಿ ಜಾರಿಗೆ ತರಬಹುದು. ಮುಂದುವರಿದ ಹಲವು ನಾಡುಗಳಲ್ಲಿ ಒಳ್ಳೆಯ ನೀರಿನ ಪುರೈಕೆಯಿಂದ ಕಾಲರ ರೋಗದ ಹೆಸರಿಲ್ಲವಾಗಿದೆ. ವಿಷಮ ಜ್ವರದ ಹಾವಳಿಯೂ ತಗ್ಗಿದೆ. ಹಾಗೇ ಪಾಶ್ಚುರೀಕರಣದಿಂದಾಗಿ, ಹಾಲಿನಿಂದ ಸಾಗಿಬರುವ ರೋಗಗಳೂ ಇಲ್ಲವಾಗಿವೆ.

ಆಹಾರದ ಶುಚಿತ್ವವನ್ನು ಕುರಿತು ಬಲು ಎಚ್ಚರವಿರಬೇಕು. ಮಾಂಸಕ್ಕಾಗಿ ಕೊಲ್ಲುವ ಮೊದಲೇ ಕಡ್ಡಾಯವಾಗಿ ಪ್ರಾಣಿಗಳ ಪರೀಕ್ಷೆ ಆಗಬೇಕು. ಕಸಾಯಿಖಾನೆಗಳಲ್ಲಿ ಚೊಕ್ಕತೆ, ಕಚರಸಾಗಣೆ ಚೆನ್ನಾಗಿರಬೇಕು. ಕೊಂದಮೇಲೆ ಮಾಂಸದ ಪರೀಕ್ಷೆ ಪರಿಣತರಿಂದ ಆಗಬೇಕು. ಊಟ ತಿಂಡಿಗಳ ಮಂದಿರಗಳು, ವಿದ್ಯಾರ್ಥಿ ನಿಲಯ, ವಸತಿಗೃಹಗಳು ಮತ್ತು ಮನೆಗಳಲ್ಲಿ ಆಹಾರವನ್ನು ಮುಟ್ಟಿ ಅಡುಗೆ ಮಾಡುವವರು ಬಡಿಸುವವರು ಆರೋಗ್ಯನಿಯಮಗಳಂತೆ ತುಂಬ ಚೊಕ್ಕತೆ ಪಾಲಿಸಬೇಕು. ಆಹಾರದಿಂದ ರೋಗಗಳು ಬರದಿರಬೇಕಾದರೆ ಆಹಾರವನ್ನು ತಯಾರಿಸುವ ಕೂಡಿಡುವ ಪಾತ್ರೆಪಡಿಗಗಳು ಚೊಕ್ಕವಾಗಿರಬೇಕು. ಅವು ಎಂದಿಗೂ ಇಲಿ ಹೆಗ್ಗಣಗಳಿಗಾಗಲಿ, ನೊಣ, ಕೀಟಕಗಳಿಗಾಗಲಿ ಸಿಗುವಂತಿರಬಾರದು. ನಾಯಿಗಳಿಂದ ನಾಯಿಹುಚ್ಚು ಬರುವುದನ್ನು ಪುರ್ತಿ ತಪ್ಪಿಸಬೇಕಾದರೆ ಬೀದಿ ನಾಯಿಗಳೇ ಇಲ್ಲದಂತೆ ನೋಡಿಕೊಂಡು, ಹೊರನಾಡುಗಳಿಂದ ಬರುವವುಗಳ ಮೇಲೆ ಉಸ್ತುವಾರಿ ಇಡಬೇಕು. ಮೊಟ್ಟೆಯಿಟ್ಟು ಮರಿ ಮಾಡುವ ಜಾಗಗಳನ್ನು ಹಾಳು ಮಾಡುವುದರಿಂದಲೂ ವೈರಿಕೀಟಗಳನ್ನು ರಾಸಾಯನಿಕಗಳಿಂದ ಸಾಯಿಸುವುದರಿಂದಲೂ ಕಚ್ಚಿ ರಕ್ತ ಹೀರುವ ಕೀಟಗಳಿಂದೇಳುವ ರೋಗಗಳು ಬಲು ಮಟ್ಟಿಗೆ ಅಣಗಿವೆ.

ಒಳ್ಳೆಯ ಆಹಾರ, ಹೊತ್ತೊತ್ತಿನ ಊಟ, ಮೈ ಚೊಕ್ಕತೆ, ಹೊಸಗಾಳಿ, ಸಾಕಷ್ಟು ಕೈಕಾಲಾಡಿಕೆ, ಬೇಕಿರುವಷ್ಟು ನಿದ್ರೆ ಇವಾವುದರಲ್ಲೂ ಮಿತಿಗೆಡದಿರುವುದೇ ಮುಂತಾದ ಎಂದಿನ ಆರೋಗ್ಯ ಸೂತ್ರಗಳನ್ನು ಪಾಲಿಸಿದರೆ ರೋಗಕ್ಕೆ ಒಡ್ಡಿರುವ ಜನರ ರೋಗ ತಡೆವ ಬಲವನ್ನು ಕೊಂಚಮಟ್ಟಿಗೆ ಹೆಚ್ಚಿಸಬಹುದು. ಆದರೆ ಇವನ್ನು ಮಾತ್ರ ಪಾಲಿಸಿಬಿಟ್ಟರೇ ಸೋಂಕಂಟಿಸುವ ರೋಗಗಳಿಂದ ತಪ್ಪಿಸಿಕೊಂಡ ಹಾಗಲ್ಲ. ಚಿಕ್ಕಂದಿನಲ್ಲಿ ಬಗೆಬಗೆಯ ಸೋಂಕುಗಳಿಗೊಡ್ಡಿ ಅವುಗಳೆದುರು ಒಂದಿಷ್ಟಾದರೂ ಪ್ರತಿರಕ್ಷಣೆ ಗಳಿಸಿಕೊಂಡಿರುವ ಪಟ್ಟಣಗಳಲ್ಲಿನ ಸಣಕಲರಿಗಿಂತಲೂ ಹಳ್ಳಿಗಾಡಿಂದ ಬಂದ, ಬಲು ಕಟ್ಟುಮಸ್ತಾಗಿ ಬೆಳೆದವರೇ ಸೋಂಕು ರೋಗಗಳಿಗೆ ಸುಲಭವಾಗಿ ಈಡಾಗುವರು.

ಸೋಂಕು ರೋಗ ಹತ್ತಿ ಒಂದಷ್ಟು ಮಂದಿ ಸತ್ತು, ಉಳಿದವರಲ್ಲಿ ರೋಗ ತಡೆವ ಬಲ ಹೆಚ್ಚುವಂತೆ ಲಸಿಕೆಗಳನ್ನು ಹಾಕುವುದರಿಂದಲೂ ರೋಗಕ್ಕೆ ಒಡ್ಡಿರುವ ಜನರ ರೋಗ ತಡೆವ ಬಲವನ್ನು ಹೆಚ್ಚಿಸಬಹುದು. ರೋಗ ಬಾರದಂತೆ ತಡೆಯಲು ಇದರಂಥ ಉಪಾಯ ತಾತ್ವಿಕವಾಗಿ ಇನ್ನಿಲ್ಲ ಎನಿಸಿದರೂ ಇದನ್ನು ಮಾಡಿನೋಡುವಾಗ ಹಲವಾರು ತೊಡಕುಗಳೂ ಮಿತಿಗಳೂ ಎದುರಾಗುತ್ತವೆ. ಬಹುಮಟ್ಟಿಗೆ ರೋಗಗಳು ಬಾರದಂತೆ ತಡೆವ ಲಸಿಕೆಳು ಎಲ್ಲೊ ಕೆಲವು ರೋಗಗಳೆದುರು ಮಾತ್ರ ಇವೆ. ಉಳಿದವಕ್ಕಿಲ್ಲ; ಇದ್ದರೂ ಸಾಕಷ್ಟು ಬಲವಾಗಿಲ್ಲ. ಅದೂ ಅಲ್ಲದೆ, ಸೋಂಕು ರೋಗಗಳೇ ಬಾರದಂತೆ ತಡೆಗಟ್ಟಬೇಕಾದರೆ ಸೋಂಕಿಗೆ ಈಡಾಗುವಂತೆ ಇರುವವರೆಲ್ಲರಿಗೂ ಒಂದೊಂದು ರೋಗದ ಎದುರೂ ಲಸಿಕೆ ಹಾಕುವುದಲ್ಲದೆ, ಮತ್ತೆ ಮತ್ತೆ ಹಾಕುತ್ತಲೂ ಇರಬೇಕಾಗುತ್ತದೆ. ಸೇನೆಯಲ್ಲಂತೂ ಇದು ಸರಾಗವಾಗಿ ಕೈಗೂಡಬಹುದು. ಜನಸಾಮಾನ್ಯರಲ್ಲಿ ಆಗದು. ನಿಜವಾದ ರೋಗದಿಂದ ಬಂದುದಕ್ಕೆ ತಕ್ಕಂತೆ ಅದರ ಲಸಿಕೆಯಿಂದೇಳುವ ಪ್ರತಿರಕ್ಷಣೆಯ ಮಟ್ಟವೂ ಇರುವುದು. ಅಂದರೆ ಬಾಳಿನುದ್ದಕ್ಕೂ ಶಾಶ್ವತ ಪ್ರತಿರಕ್ಷಣೆ ಕೊಡುವ ಮತ್ತೆ ಮರುಕಳಿಸಿದ ರೋಗಗಳಲ್ಲಿ ಮಾತ್ರ ಲಸಿಕೆ ಹಾಕುವಿಕೆಯಿಂದ ಅನುಕೂಲವಿದೆ. ಸಿಡುಬು ಇದರ ಒಳ್ಳೆಯ ಉದಾಹರಣೆ.

ಹೊರಜೀವಿವಿಷವನ್ನು ಸುರಿಬಿಡುವ ಸೆಟೆಬೇನೆ, ಗಂಟಲಮಾರಿ ತೆರನ ಏಕಾಣುಜೀವಿಗಳಿಂದ ಏಳುವ ಹಲವು ರೋಗಗಳ ಎದುರೂ ಬಲವಾದ ಲಸಿಕೆಗಳಿವೆ. ಗಂಟಲ ಮಾರಿಯದಂತೂ ಚೆನ್ನಾಗಿ ಎದ್ದುಕಾಣುವಂಥದು. ಕೇವಲ ಮಗುವನ್ನು ಈ ರೋಗದಿಂದ ಕಾಪಿಡುವುದಲ್ಲದೆ, ಇಡೀ ನಾಡಿನಿಂದಲೇ ರೋಗವನ್ನು ಹೋಗಲಾಡಿಸಬಹುದು. ಈ ರೋಗಕ್ಕೀಡಾಗುವ ವಯಸ್ಸಿನವರನ್ನೂ ಸೇರಿಸಿಕೊಂಡು ಜನರಲ್ಲಿ ಸಾಕಷ್ಟು ಮಂದಿಗೆ ನಾಲ್ವರಲ್ಲಿ ಮೂವರಿಗಾದರೂ ಪ್ರತಿರಕ್ಷಣೆ ಪಡೆಯಲು ಲಸಿಕೆ ಹಾಕಬೇಕು. ಶಾಲಾ ಮಕ್ಕಳಿಗೆ ಸುಮಾರು 5 ವರ್ಷಗಳಿಗೊಮ್ಮೆಯಾದರೂ ಹಾಕದಿದ್ದಲ್ಲಿ ರೋಗ ಹರಡುತ್ತಲೇ ಇರುವುದು. ಇತರ ಏಕಾಣುಜೀವಿಗಳಿಂದ ಬರುವ ರೋಗಗಳ ಎದುರು ಲಸಿಕೆಗಳು ಅಷ್ಟು ಪರಿಣಾಮಕಾರಿಗಳಲ್ಲ. ವಿಷಮಜ್ವರ, ನಾಯಿ ಕೆಮ್ಮು, ಸೊಕ್ಕಿನಜ್ವರ, ಪ್ಲೇಗು, ಕಾಲರಗಳೆದುರು ಲಸಿಕೆಗಳಿದ್ದರೂ ಅವುಗಳಿಂದ ಲಭಿಸುವ ಪ್ರತಿರಕ್ಷಣೆ ಎಷ್ಟೇ ಬೇಕೆನಿಸಿದರೂ ಬಲವಾದುವಲ್ಲ. ಉಸಿರಾಟ ಮಂಡಲದ ರೋಗಗಳೆದುರು ಲಸಿಕೆಗಳಿಲ್ಲ. ತತ್ಕಾಲಕ್ಕೆ ರೋಗವನ್ನು ತಡೆವ ಬಲ ಕೊಡಲು ನಿರೋಧಕಲಸಿಕೆಗಳನ್ನು (ಆಂಟಿಸೀರಮ್) ಕೆಲವೇಳೆ ಕೊಡಬಹುದು.

ಗಂಟಲಮಾರಿ, ಸೆಟೆಬೇನೆ, ಅನಿಲದ ಅಳಿಕೊಳಪುಗಳಲ್ಲಿ (ಗ್ಯಾಸ್ ಗ್ಯಾಂಗ್ರೀನ್) ಮಾತ್ರ ಹೀಗೆ ಮಾಡಬಹುದು. ಇನ್ನಾವ ವಿಧಾನಗಳಿಂದಲೂ ಆಗದಿದ್ದರೆ, ಕೆಲವು ವೇಳೆ ದಿನವೂ ಮದ್ದುಗಳನ್ನು ಕೊಡುವುದರಿಂದ ಸಾಧಿಸಬಹುದು. ಕಳೆದ ಮಹಾಯುದ್ಧ ಕಾಲದಲ್ಲಿ ಮೆಪಕ್ರೀನ್ (ಆಟೆಬ್ರೀನ್) ಕೊಡುತ್ತಿದ್ದುದರಿಂದ ಮಲೇರಿಯ ಬರದಂತೆ ತಡೆಯಲು ಸಾಧ್ಯವಾಯಿತು. ಹಾಗೇ ಕೆಲವೆಡೆ ಸಲ್ಫೋನೇಮೈಡುಗಳನ್ನು ಕೊಡುತ್ತಿದ್ದುದರಿಂದ ಉಸಿರಾಟ ಮಂಡಲದ ಬೇನೆಗಳನ್ನು ತಡೆವುದಾಯಿತು. ಆದರೆ, ಮುಂದೆ ಸಲ್ಫೋನೇಮೈಡುಗಳಿಗೆ ಜಗ್ಗದ ರೋಗಾಣುಗಳ ತಳಿಗಳು ಬೆಳೆಯಬಹುದಾದ್ದರಿಂದ, ಈ ಮದ್ದುಗಳನ್ನು ಸುಮ್ಮನೆ ಯಾವಾಗಲೂ ಕೊಡುವುದು ಒಳ್ಳೆಯದಲ್ಲ.

ಚಿಕಿತ್ಸೆ

ಬದಲಾಯಿಸಿ

ಮೈ ಒಳ ಹೊಕ್ಕಿರುವ ಏಕಾಣುಜೀವಿಗಳ ನಾಶದೊಂದಿಗೆ, ರೋಗಿಯ ರೋಗಲಕ್ಷಣಗಳ ಶಮನ ಮಾಡುವುದೇ ಸೋಂಕುಕಾರಕ ರೋಗಗಳ ಚಿಕಿತ್ಸೆ. ಕುರುವಿನಲ್ಲಿದ್ದ ಹಾಗೆ ಎಲ್ಲಾದರೂ ಕೀವು ಸೇರಿದ್ದರೆ ಇಲ್ಲವೇ ರೋಗ ಒಂದೆಡೆ ನೆಲೆಸಿದ್ದರೆ ಅದನ್ನು ಹೋಗಲಾಡಿಸಲು ಶಸ್ತ್ರಕ್ರಿಯೆ ಮಾಡಬೇಕಾಗುತ್ತದೆ. ಆದರೆ ರೋಗ ಮೈಯಲ್ಲೆಲ್ಲ ಹರಡಿದ್ದಲ್ಲಿ ಬೇರೆ ವಿಧಾನಗಳಾಗಬೇಕು. ಗಂಟಲಮಾರಿ, ಸೆಟೆಬೇನೆಗಳ ತೆರನ ರೋಗಗಳಲ್ಲೆ ರೋಗಾಣುಗಳು ಸುರಿಬಿಡುವ ಜೀವಿವಿಷವನ್ನು ಸಾಕಷ್ಟು ಪ್ರಮಾಣಗಳಲ್ಲಿ ಜೀವಿವಿಷರೋಧಕಗಳಿಂದ (ಆಂಟಿಟಾಕ್ಸಿನ್ಸ್‌) ಸಯ್ಗೊಳಿಸಬಹುದು. ಬಲವಾದ ಹೊರ ಜೀವಿವಿಷವನ್ನು ಸುರಿಬಿಡದ ಜೀವಾಣುಗಳಿಂದೇಳುವ ರೋಗಗಳ ಚಿಕಿತ್ಸೆಯಲ್ಲಿ ಲಸಿಕೆಗಳಿಂದ ಅನುಕೂಲವಿಲ್ಲ. 1939ರಿಂದೀಚೆಗೆ ಸಲ್ಪೋನೇಮೈಡುಗಳೂ ಜೀವಿರೋಧಕಗಳೂ (ಆಂಟಿಬಂiೆÆೕಟಿಕ್ಸ್‌) ಜಾರಿಗೆ ಬಂದಾಗಿನಿಂದ ಸೋಂಕುಕಾರಕ ರೋಗಗಳ ಚಿಕಿತ್ಸೆಯಲ್ಲಿ ಕ್ರಾಂತಿಯೇ ಆಗಿದೆ. ಗಾಳಿಕಾಯ್ಜೀವಿಯ (Pಟಿemoಛಿoಛಿಛಿi), ಸರಕಾಯ್ಜೀವಿಯ (Sಣಡಿeಠಿಣoಛಿoಛಿಛಿi), ಮಿದುಳು ಪೊರೆಕಾಯ್ಜೀವಿಯ (ಮೆನಿಂಗೊಕಾಕಲ್), ರೇತುಕಾಯ್ಜೀವಿಯ (ಗಾನೊಕಾಕಲ್) ಸೋಂಕುಗಳ ಚಿಕಿತ್ಸೆಗೆ ಸಲ್ಫೋನೇಮೈಡುಗಳ ಪರಿಣಾಮಕಾರಿಗಳು.

ಸಲ್ಫೋನೇಮೈಡುಗಳು ಏಕಾಣುಜೀವಿಗಳ ಜೀವವಸ್ತು ಕರಣದಲ್ಲಿ ಅಡ್ಡಿಯಾಗಿ ಅವು ಬೆಳೆಯಲು ಬೇಕೇ ಬೇಕಿರುವ ಕೆಲವು ಪದಾರ್ಥಗಳನ್ನೂ ಬಳಸದಂತೆ ಮಾಡುತ್ತವೆ. ಏಕಾಣುಜೀವಿಗಳ ರೋಗಗಳ ಚಿಕಿತ್ಸೆಯಲ್ಲಿ ಬಲು ಮುಖ್ಯವಾದ ಜೀವಿರೋಧಕಗಳು ಪೆನಿಸಿಲಿನ್, ಸ್ಟ್ರೆಪ್ಟೊಮೈಸಿನ್, ಕ್ಲೋರಾಂಫೆನಿಕಾಲ್, ಕ್ಲೋರ್ ಟೆಟ್ರಸೈಕ್ಲೀನ್ (ಆರಿಯೊಮೈಸಿನ್), ಆಕ್ಸಿಟೆಟ್ರಸೈಕ್ಲೀನ್ (ಟೆರ್ರಮೈಸಿನ್). ಎಲ್ಲ ಏಕಾಣುಜೀವಿಗಳೂ ಈ ಮದ್ದುಗಳಿಗೆ ಮಣಿಯವು. ಒಂದೆರಡು ದೊಡ್ಡವನ್ನು ಬಿಟ್ಟರೆ ಯಾವ ವಿಷಕಣಗಳ ಸೋಂಕಿನೆದುರೂ ಸರಿಯಾದ ಮದ್ದೇ ಇಲ್ಲ. ಹೊಸ ಹೊಸ ಮದ್ದುಗಳಂತೂ ತಯಾರಾಗುತ್ತಲೇ ಇವೆ. ಬಹಳ ದಿನಗಳೂ ತಿಂಗಳುಗಳೂ ಕೊಡುತ್ತಲೇ ಇದ್ದರೆ, ಕೆಲವು ಏಕಾಣುಜೀವಿಗಳು ಸಲ್ಫೋನೇಮೈಡುಗಳಿಗೂ ಜೀವರೋಧಕಗಳಿಗೂ ಜಗ್ಗದಂತಾಗುವುವು. ಅಷ್ಟೇ ಅಲ್ಲದೆ, ಹೀಗೆ ಜಗ್ಗದ ರೋಗಾಣುಗಳ ತಳಿಗಳೇ ಬೆಳೆದು ಎಲ್ಲೆಲ್ಲೂ ಹಬ್ಬಿಕೊಂಡು ಹೊಸ ಮದ್ದುಗಳಿಗೂ ಮಣಿಯದಂತಾಗುತ್ತವೆ (ನೋಡಿ- ಉರಿತ) (ನೋಡಿ- ಏಕಾಣುಜೀವಿವಿಜ್ಞಾನ) (ನೋಡಿ- ತೀನಿ-ಕಣತೆ) (ನೋಡಿ- ಪರಪಿಂಡಿ-ಶಾಸ್ತ್ರ).

(ಡಿ.ಎಸ್.ಎಸ್.)



ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  • ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ