ಎ ಬಿ ಸಿ ರಾಷ್ಟ್ರಗಳು
ರೋಮನ್ ಅಕ್ಷರಮಾಲೆಯ ಎ, ಬಿ ಮತ್ತು ಸಿ ಅಕ್ಷರಗಳಿಂದ ಆರಂಭವಾಗುವ ದಕ್ಷಿಣ ಅಮೆರಿಕನ್ ರಾಷ್ಟ್ರಗಳಾದ ಅರ್ಜೆಂಟೀನ್, ಬ್ರೆಜಿಲ್ ಮತ್ತು ಚಿಲಿ (ಎ.ಬಿ.ಸಿ. ಪವರ್ಸ್). ಪರಸ್ಪರ ಸ್ನೇಹ ಪ್ರಚೋದಕ ಭಾಷಣ, ಅಧಿಕೃತ ಸಂದರ್ಶನ ಮುಂತಾದುವುಗಳ ಮೂಲಕ ತಮ್ಮ ಮೈತ್ರಿ ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ ಇವು 1905ರಲ್ಲಿ ಅನೌಪಚಾರಿಕ ಸಂಘವೊಂದನ್ನು ಸ್ಥಾಪಿಸಿಕೊಂಡು ಮುಂದೆ 1915ರಲ್ಲಿ ಈ ಬಗ್ಗೆ ಅಧಿಕೃತ ಕೌಲೊಂದಕ್ಕೆ ಸಹಿ ಹಾಕಿದವು. ಇವು ಸ್ಥಾಪಿಸಿಕೊಂಡ ಈ ಸಂಘಕ್ಕೆ ಈ ಹೆಸರು ಬಂದಿದೆ. ತಂತಮ್ಮಲ್ಲಿ ಯುದ್ಧ ಪರಿಸ್ಥಿತಿಯೇನಾದರೂ ಉದ್ಭವಿಸಿದರೆ ಇದರ ಹಿಂದಿನ ಕಾರಣಗಳ ನಿಷ್ಪಕ್ಷಪಾತ ತನಿಖೆ ನಡೆಸದೆ ಪರಸ್ಪರ ಯುದ್ಧದಲ್ಲಿ ತೊಡಗಬಾರದೆಂದು ಈ ಕೌಲಿನ ರಾಷ್ಟ್ರಗಳು ಪ್ರತಿಜ್ಞೆ ಮಾಡಿದ್ದುವು. ದಕ್ಷಿಣ ಅಮೆರಿಕದ ವ್ಯವಹಾರಗಳಲ್ಲಿ ಅಮೆರಿಕ ಸಂಯುಕ್ತಸಂಸ್ಥಾನ ಹಸ್ತಕ್ಷೇಪಮಾಡದಂತೆ ತಡೆಯುವುದೂ ಈ ಸಂಘಟನೆಯ ಉದ್ದೇಶಗಳಲ್ಲೊಂದಾಗಿತ್ತು. ಆದರೆ ಇದರ ಉದ್ದೇಶಗಳು ಯಾವುವೂ ಅಷ್ಟೇನೂ ಫಲಪ್ರದವಾಗಲಿಲ್ಲ.[೧]
1914ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನಕ್ಕೂ ಮೆಕ್ಸಿಕೋವಿಗೂ ಯುದ್ಧ ನಡೆದಾಗ ಈ ಸಂಘದ ರಾಷ್ಟ್ರಗಳು ಇವುಗಳ ನಡುವೆ ರಾಜಿಮಾಡಿಸಲು ಯತ್ನಿಸಿದುವು. ನಯಾಗರ ಜಲಪಾತದ ಬಳಿ ಈ ಸಂಧಾನ ನಡೆಯಿತು. ಮೆಕ್ಸಿಕೋವಿನ ರಾಷ್ಟ್ರಪ್ರೇಮಿ ನಿಸ್ವಾರ್ಥಿ ಆದರ್ಶವಾದಿ ಅಧ್ಯಕ್ಷ ಡಾನ್ ಫ್ರಾನ್ಸಿಸ್ಕೊ ಮದೇರೊನನ್ನು ಕೊಲೆ ಮಾಡಿ ಅಧಿಕಾರಕ್ಕೆ ಬಂದಿದ್ದ ವಿಕ್ಟೋರಿಯಾನೂ ಹ್ಯೂವರ್ಟ್ ಅಮೆರಿಕ ಸಂಯುಕ್ತಸಂಸ್ಥಾನದ ಧ್ವಜಕ್ಕೆ ಸಲ್ಲಬೇಕಾಗಿದ್ದ ಗೌರವವನ್ನೂ ಸಲ್ಲಿಸದೆ ಹೋದ್ದರಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ವಿಲ್ಸನ್ ಆ ದೇಶದ ಬಂದರನ್ನು ಹಿಡಿದುಕೊಂಡಿದ್ದ. ಈ ನೀತಿಗೆ ಕೊನೆಯಲ್ಲಿ ಜಯ ಲಭಿಸಿತು. ಹ್ಯೂವರ್ಟ್ ಪದಚ್ಯುತನಾಗಿ ದೇಶಭ್ರಷ್ಟನಾದ. ಎ.ಬಿ.ಸಿ. ರಾಷ್ಟ್ರಗಳ ಮಧ್ಯಸ್ಥಿಕೆಯಿಂದಾಗಿ ಇವೆರಡು ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿಲ್ಲ.[೨]
ಹೊರಗಿನವರ ಕೈವಾಡವಿಲ್ಲದೆ ಪ್ರತಿಯೊಂದು ದೇಶವೂ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂಬ ತತ್ತ್ವ ನಯಾಗರ ಸಮ್ಮೇಳನದಲ್ಲಿ ಅಂಗೀಕೃತವಾಯಿತು. ಆದರೆ ಮುಂದೆ ಈ ತೀರ್ಮಾನವನ್ನು ಕಾರ್ಯಗತ ಮಾಡುವಲ್ಲಿ ಎ.ಬಿ.ಸಿ. ರಾಷ್ಟ್ರಗಳು ಆಸ್ಥೆ ವಹಿಸಲಿಲ್ಲ. 1933ರ ವರೆಗೆ ಈ ಸಂಘ ಯಾವ ಮಹತ್ತ್ವದ ಸಾಧನೆಯನ್ನೂ ಮಾಡಲಿಲ್ಲ. 1933ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ರೂಸವೆಲ್ಟನ ಸಲಹೆಯ ಮೇರೆಗೆ ಕ್ಯೂಬದಲ್ಲಿ ಶಾಂತಿಯುತ ಸರ್ಕಾರವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಇದು ಅಯಶಸ್ವಿಯಾದದ್ದಲ್ಲದೆ 1939ರಲ್ಲಿ ಇದು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು.
ಈ ತ್ರಿರಾಷ್ಟ್ರ ಸಂಘ ಮಹತ್ತ್ವವಾದದ್ದೇನನ್ನೂ ಸಾಧಿಸಲಾಗದಿದ್ದರೂ ಇದು ದೊಡ್ಡ ರಾಷ್ಟ್ರಗಳು ಸಣ್ಣ ರಾಷ್ಟ್ರಗಳ ವ್ಯವಹಾರಗಳಲ್ಲಿ ಕೈಹಾಕಬಾರದೆಂಬ ತತ್ತ್ವದ ಪ್ರತಿಪಾದನೆಯಾಗಿತ್ತು. ದಕ್ಷಿಣ ಅಮೆರಿಕನ್ ರಾಷ್ಟ್ರಗಳಿಗೂ ಆತ್ಮಾಭಿಮಾನವುಂಟೆಂಬುದನ್ನು ಇದು ಜಗತ್ತಿಗೆ ಸಾರಿತು.