ಎಸ್ ನಂಜುಂಡಸ್ವಾಮಿ
ಎಸ್. ನಂಜುಂಡಸ್ವಾಮಿ (ಮಾರ್ಚ್ ೨೬, ೧೯೦೬ - ಡಿಸೆಂಬರ್ ೨೭ ೧೯೬೯) ಅವರು ಪ್ರಸಿದ್ಧ ಚಿತ್ರಕಾರರು.
ಎಸ್. ನಂಜುಂಡಸ್ವಾಮಿ | |
---|---|
ಜನನ | ಮಾರ್ಚ್ ೨೬, ೧೯೦೬ ಯರಗಂಬಳ್ಳಿ. ಯಳಂದೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ |
ಮರಣ | ಡಿಸೆಂಬರ್ ೨೭, ೧೯೬೯ |
ವೃತ್ತಿ | ಚಿತ್ರಕಾರರು |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಚಿತ್ರಕಲೆ |
ಜೀವನ
ಬದಲಾಯಿಸಿವರ್ಣಚಿತ್ರ, ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬಲ್ಲಿ ಮಾರ್ಚ್ 26, 1906ರ ವರ್ಷದಲ್ಲಿ ಜನಿಸಿದರು. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು, ಹೀಗಾಗಿ ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆಯಾಗಿತ್ತು.
ಸಾಧನೆ
ಬದಲಾಯಿಸಿಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ ಮಾಡಿ, ಮುಂಬಯಿ ಜೆ.ಜೆ. ಕಲಾಶಾಲೆಯಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ಮುಂದೆ ಜಯಚಾಮರಾಜೇಂದ್ರ ಕಲಾಶಾಲೆಯಲ್ಲಿ ಅಧ್ಯಾಪಕ ವೃತ್ತಿ ನಡೆಸಿದರು.
ರೇಖಾಚಿತ್ರ, ತೈಲಚಿತ್ರ, ವರ್ಣಚಿತ್ರಗಳಲ್ಲಿ ನಂಜುಡ ಸ್ವಾಮಿಯವರದು ಶ್ರೇಷ್ಠ ಸಾಧನೆ. ಪ್ರಕೃತಿ ಚಿತ್ರಗಳು, ಭೂ ದೃಶ್ಯಗಳಲ್ಲಿ ನೆರಳು-ಬೆಳಕಿನಾಟಗಳ ಸೌಂದರ್ಯವನ್ನು ಯಥಾವತ್ ಚಿತ್ರಿಸುವ ಕಲೆ ಸ್ವಾಮಿಯವರಿಗೆ ಕರಗತವಾಗಿತ್ತು. ಅವರ ಚಿತ್ರಗಳಲ್ಲಿ ಅವರದ್ದೇ ಎನ್ನುವಂತಹ ಪ್ರತ್ಯೇಕತೆ ವೈಶಿಷ್ಟ್ಯತೆಗಳು ಎದ್ದು ಕಾಣುವಂತಿತ್ತು.
ವಿಶಿಷ್ಟ ಕಲಾಕೃತಿಗಳು
ಬದಲಾಯಿಸಿಮೈಸೂರು ವಾಣಿ ವಿಲಾಸ ಮೊಹಲ್ಲದಲ್ಲಿರುವ ಮಹಾರಾಜ ಹೈಸ್ಕೂಲಿನ ಭಿತ್ತಿಯೊಂದರ ಮೇಲೆ ರಚಿತವಾಗಿರುವ ಶಾರದಾದೇವಿ ಚಿತ್ರ, ಕಬೀರ್ ತನ್ನ ಹೆಂಡತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ದೃಶ್ಯ, ವೃತ್ತಿ ಶಿಕ್ಷಣ ಶಾಲೆಯಲ್ಲಿ ರಾಜರ ಒಡ್ಡೋಲಗದ ದೃಶ್ಯಗಳು ಇವೇ ಮುಂತಾದವು ಜನರ ಕಣ್ಣಿಗೆ ನಿರಂತರವಾಗಿ ಕಾಣುವಂತಹ ಸ್ವಾಮಿಯವರ ಕಲಾವಂತಿಕೆಯ ನಿದರ್ಶನಗಳು. ಹಲವಾರು ಭಾವಚಿತ್ರಗಳ ರಚನೆಯಲ್ಲೂ ಅವರದ್ದು ಅದ್ವಿತೀಯ ಸಾಧನೆ ಎನಿಸಿದೆ. ಮೈಸೂರಿನ ವಸ್ತುಪ್ರದರ್ಶನ ಶಾಲೆಯ ಮೇಲೆ ರಚಿಸಲ್ಪಟ್ಟ ಜಯಚಾಮರಾಜ ಒಡೆಯರ ಚಿತ್ರ ಅಂದಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಕಥೆಗಳನ್ನು ಓದುವುದು, ಕೇಳುವುದು, ಕತೆ ಕೇಳಿದ ನಂತರ ಚಿತ್ರ ರಚನೆ ಮಾಡುವುದು ಅವರ ಹವ್ಯಾಸವೇನೋ ಎನಿಸುವಂತಿತ್ತು. ಅವರ ಇನ್ನಿತರ ಪ್ರಖ್ಯಾತ ಚಿತ್ರಗಳೆಂದರೆ ಅಶೋಕ ವನದಲ್ಲಿ ಸೀತಾದೇವಿ ರಾವಣನ ಕೈಸೆರೆಯಾಗಿದ್ದು, ಮಾಯಾಜಿಂಕೆಗೆ ಮೋಹಗೊಂಡ ಸೀತೆ ರಾಮನಲ್ಲಿ ತನ್ನ ಅಭೀಪ್ಸೆಯನ್ನು ವ್ಯಕ್ತಪಡಿಸುತ್ತಿರುವುದು ಮುಂತಾದವು.
ಶಿಲ್ಪಕಲಾ ಚಾತುರ್ಯ
ಬದಲಾಯಿಸಿಸ್ವಾಮಿಯವರದು ಆಡಂಬರವಿಲ್ಲದ ಸರಳ ಜೀವನ. ನಿವೃತ್ತಿಯ ನಂತರ ಒಂಟಿಕೊಪ್ಪಲಿನಲ್ಲಿದ್ದ ಮನೆಮಾರಿ ಹುಟ್ಟೂರಾದ ಯರಗಂಬಳ್ಳಿಗೆ. ಹೋಗಿ ಪುನಃ ವಾಪಸ್ಸು ಮೈಸೂರಿಗೆ ಬಂದರು. ಚಿತ್ರಕಲೆಯಲ್ಲಿ ಏಕತಾನತೆ ಮೂಡಿತು ಎಂದೆನಿಸಿದಾಗ ಗಂಧದ ಮತ್ತು ದಂತದಲ್ಲಿ ಮೂರ್ತಿಗಳ ಕೆತ್ತನೆ ಮಾಡಿದರು. ಬೇಲೂರಿನ ಶಿಲಾಬಾಲಿಕೆ ವಿಗ್ರಹಗಳು ಅವರಿಗೆ ಸ್ಫೂರ್ತಿ ನೀಡಿದ್ದವು.
ವಿದಾಯ
ಬದಲಾಯಿಸಿಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಸ್ವಾಮಿಯವರು ಡಿಸೆಂಬರ್ 27, 1969ರಲ್ಲಿ ಚಾಮುಂಡೇಶ್ವರಿ ಶಿಲಾ ವಿಗ್ರಹವನ್ನು ಕಡೆಯುತ್ತಿದ್ದಾಗ ಆ ಜಗನ್ಮಾತೆಯಲ್ಲೇ ಲೀನವಾದರೋ ಎಂಬಂತೆ ಈ ಲೋಕವನ್ನಗಲಿದರು.