ಎಸ್. ತಿಪ್ಪೇಸ್ವಾಮಿ

ಎಸ್. ತಿಪ್ಪೇಸ್ವಾಮಿ (ಅಕ್ಟೋಬರ್ ೨೪, ೧೯೪೨) ಮಹಾನ್ ಛಾಯಾಗ್ರಾಹಕರು. ಛಾಯಾಚಿತ್ರ ಪತ್ರಕರ್ತ, ವೈದ್ಯಕೀಯ ಛಾಯಾಗ್ರಹಣ, ಸಿನಿಮಾ, ಸ್ಥಿರ ಚಿತ್ರ, ಛಾಯಾಚಿತ್ರ ಶಿಕ್ಷಣ, ವನ್ಯಜೀವಿ ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಅವರದ್ದು ಅನನ್ಯ ಸೇವೆ.

ಎಸ್ ತಿಪ್ಪೇಸ್ವಾಮಿ
ಜನನಅಕ್ಟೋಬರ್ ೨೪, ೧೯೪೨
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರು
ಗಮನಾರ್ಹ ಕೆಲಸಗಳುಛಾಯಾಗ್ರಹಣ

ತಿಪ್ಪೇಸ್ವಾಮಿ ಅಕ್ಟೋಬರ್ ೨೪, ೧೯೪೨ರ ವರ್ಷದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆಲೂರಿಲ್ಲಿ ಜನಿಸಿದರು. ತಂದೆ ಸಿದ್ದಣ್ಣನವರು ಮತ್ತು ತಾಯಿ ಕರಿಯಮ್ಮನವರು. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣ ಪೂರೈಸಿದ ತಿಪ್ಪೇಸ್ವಾಮಿ ಅವರು ಚಿತ್ರದುರ್ಗದಲ್ಲಿ ಬಿಎಸ್‌ಸಿ ಪದವಿ ಪಡೆಯುವ ಹಂತದಲ್ಲಿ ಅವರಿಗೆ ಛಾಯಾಗ್ರಹಣದಲ್ಲಿ ಆಸಕ್ತಿ ಹುಟ್ಟಿಕೊಂಡಿತು.

ವಿಶ್ವಮನ್ನಣೆಗಳಿಸಿದ ಛಾಯಾಗ್ರಾಹಕ

ಬದಲಾಯಿಸಿ

ಕ್ರಮೇಣದಲ್ಲಿ ಛಾಯಾಗ್ರಹಣದಲ್ಲಿ ವೈಶಿಷ್ಟ್ಯತೆ ಸಾಧಿಸಿದ ತಿಪ್ಪೇಸ್ವಾಮಿ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಮಹಾನ್ ಛಾಯಾಗ್ರಾಹಕರೆನಿಸಿದರು. ಅವರಿಗೆ ೧೯೯೨ರಲ್ಲಿ ಗ್ರೇಟ್ ಬ್ರಿಟನ್‌ನ `ರಾಯಲ್ ಫೋಟೋಗ್ರಫಿ ಸೊಸೈಟಿ`ಯ ಫೆಲೋಶಿಪ್ (ಎಫ್‌ಆರ್‌ಪಿಎಸ್), ೧೯೯೫ರಲ್ಲಿ ಯುನೆಸ್ಕೊದ `ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್ ಫೋಟೋಗ್ರಫಿ` ಗೌರವ (ಇಎಫ್‌ಐಎಸಿ), ೨೦೦೦ದಲ್ಲಿ `ಕೊಲೀಗ್ ಸೊಸೈಟಿ ಕ್ಯಾಲಿಫೋರ್ನಿಯಾ`ದ ಗೌರವ ಫೆಲೋಶಿಪ್ (ಎಫ್‌ಐಸಿಎಸ್), ೨೦೧೧ರಲ್ಲಿ ಅಮೆರಿಕದ ‘ಎಫ್‌ಪಿಎಸ್‌ಎ` ಫೆಲೋಶಿಪ್ ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ ಮಟ್ಟದಲ್ಲಿ 250ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ವನ್ಯಜೀವಿ ಚಿತ್ರಗಳಿಗಾಗಿ ೩೫ ದೇಶಗಳ ನಡುವೆ ನಡೆದ ‘ವಿಶ್ವಕಪ್`ನಲ್ಲಿ ಪ್ರಶಸ್ತಿಯನ್ನು ೭ ಬಾರಿ ಪಡೆದ ಭಾರತೀಯ ತಂಡದ ಓರ್ವ ಛಾಯಾಗ್ರಾಹಕ ತಿಪ್ಪೇಸ್ವಾಮಿ.

ಆಧುನಿಕ ಛಾಯಾಗ್ರಹಣ ತಂತ್ರಜ್ಞಾನದ ಬಗ್ಗೆ

ಬದಲಾಯಿಸಿ

ಆಧುನಿಕ ತಂತ್ರಜ್ಞಾನದಲ್ಲೂ ಪರಿಣಿತರಾದ ತಿಪ್ಪೇಸ್ವಾಮಿ ಅವರು “ಆಧುನಿಕ ತಂತ್ರಜ್ಞಾನದಿಂದ ಉತ್ತಮ ಛಾಯಾಗ್ರಾಹಕನಿಗೆ ಅನುಕೂಲವಾಗಿದೆ. ಆದರೆ ಅವನ ಮಹತ್ವ ಕಡಿಮೆಯಾಗಿಲ್ಲ” ಎನ್ನುತ್ತಾರೆ

ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲರ ಬಳಿಯೂ ಡಿಜಿಟಲ್ ಕ್ಯಾಮೆರಾ ಇದೆ. ಮೊಬೈಲ್ ಪೋನ್‌ಗಳಲ್ಲಿಯೂ ಕ್ಯಾಮರಾ ಬಂದಿದೆ. ಇಂಥಹ ಸಂದರ್ಭದಲ್ಲಿ ಛಾಯಾಗ್ರಾಹಕನಿಗೆ ಬೆಲೆ ಇದೆಯೇ ಎಂಬುದಕ್ಕೆ ತಿಪ್ಪೇಸ್ವಾಮಿ “ಉತ್ತಮ ಛಾಯಾಗ್ರಾಹಕನಿಗೆ ಎಂದೂ ಬೇಡಿಕೆ ಕಡಿಮೆಯಾಗುವುದಿಲ್ಲ. ಕೈಯಲ್ಲಿ ಕ್ಯಾಮೆರಾ ಇದ್ದರೆ ಒಳ್ಳೆಯ ಛಾಯಾಗ್ರಾಹಕನಾಗುವುದು ಸಾಧ್ಯವಿಲ್ಲ. ಕಪ್ಪು ಬಿಳುಪು ಕಾಲದಿಂದ ಹಿಡಿದು ಈಗಿನ ಡಿಜಿಟಲ್ ಯುಗದವರೆಗೂ ಕ್ಯಾಮೆರಾ ಹಿಂದಿನ ಮನುಷ್ಯನೇ (ಮ್ಯಾನ್ ಬಿಹೈಂಡ್ ಕ್ಯಾಮೆರಾ) ಎಂದಿಗೂ ಮುಖ್ಯ” ಎನ್ನುತ್ತಾರೆ.

ಸಾಹಿತ್ಯ ಸಾಂಸ್ಕೃತಿಕ ತಿಳುವಳಿಕೆ ಮುಖ್ಯ

ಬದಲಾಯಿಸಿ

“ಉತ್ತಮ ಛಾಯಾಗ್ರಾಹಕರು ಈ ಮೊದಲೂ ಇದ್ದರು. ಈಗಲೂ ಇದ್ದಾರೆ. ಮಾಧ್ಯಮಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರಿಗೆ ನಮ್ಮ ಭಾಷೆ, ಸಂಸ್ಕೃತಿ, ಭಾಷಾ ಚಳವಳಿ, ಇತರ ಚಳವಳಿಗಳು, ಸ್ವಾತಂತ್ರ್ಯ ಹೋರಾಟ, ತುರ್ತು ಪರಿಸ್ಥಿತಿ ಹೋರಾಟಗಳ ಬಗ್ಗೆ ಮಾಹಿತಿ ಇರಬೇಕು. ಸಾಹಿತ್ಯ-ಸಾಂಸ್ಕೃತಿಕ ಲೋಕದ ಬಗ್ಗೆ ಗೊತ್ತಿರಬೇಕು. ಹಾಗಿದ್ದಾಗ ಮಾತ್ರ ಉತ್ತಮ ಚಿತ್ರಗಳನ್ನು ತೆಗೆಯಲು ಸಾಧ್ಯ” ಎನ್ನುತ್ತಾರೆ ತಿಪ್ಪೇಸ್ವಾಮಿ.

ವನ್ಯ ಛಾಯಾಗ್ರಹಣದಲ್ಲಿ ಪ್ರೀತಿ

ಬದಲಾಯಿಸಿ

ತಿಪ್ಪೇಸ್ವಾಮಿ ಅವರು ಸಿನಿಮಾ ಕ್ಷೇತ್ರದಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಮತ್ತು ವನ್ಯಜೀವಿ ಛಾಯಾಗ್ರಾಹಕರಾಗಿ ಹೆಸರು ಮಾಡಿದ್ದಾರೆ. ಈ ಕುರಿತಂತೆ ಹೇಳುವ ಅವರು “ನನ್ನ ಹೊಟ್ಟೆಪಾಡಿಗೆ ಮತ್ತು ಜನರ ಸಂಪರ್ಕ ಹೆಚ್ಚಳಕ್ಕೆ ನೆರವಾಗಿದ್ದು ಮಾಧ್ಯಮ ಕ್ಷೇತ್ರದ ಕೆಲಸ. ಸಿನಿಮಾದಿಂದಲೂ ಬಹಳ ಕಲಿತಿದ್ದೇನೆ. ಆದರೆ ನನಗೆ ಖುಷಿ ಕೊಟ್ಟಿದ್ದು ವನ್ಯಜೀವಿ ಛಾಯಾಗ್ರಹಣ. ಇದು ಆರೋಗ್ಯ, ಸಂತೋಷ, ನೆಮ್ಮದಿಯನ್ನು ಕೊಟ್ಟಿದೆ. ಆ ರೋಮಾಂಚನ ಬೇರೆಯದರಿಂದ ಸಿಗುವುದಿಲ್ಲ” ಎನ್ನುತ್ತಾರೆ.

೧೯೮೩ರಿಂದ ನಾನು ವನ್ಯಜೀವಿಗಳ ಚಿತ್ರಗಳನ್ನು ತೆಗೆಯುತ್ತಿದ್ದೇನೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಹೋಂ ವರ್ಕ್ ಬಹಳ ಮುಖ್ಯ. ಶೇ 80ರಷ್ಟು ಅಧ್ಯಯನ, ಶೇ 20ರಷ್ಟು ಮಾತ್ರ ಛಾಯಾಗ್ರಹಣ. ಪ್ರಾಣಿ, ಪಕ್ಷಿಗಳ ಚಲನವಲನ, ಗರ್ಭ ಧರಿಸುವ ಕಾಲ, ಓಡಾಡುವ ಕಾಲದ ಬಗ್ಗೆ ನಮಗೆ ಗೊತ್ತಿರಬೇಕು. ಈ ಬಗ್ಗೆ ಆಳವಾದ ಅಧ್ಯಯನ ನಡೆಸಬೇಕು. ಅಂದರೆ ಮಾತ್ರ ಉತ್ತಮ ದರ್ಜೆಯ ಚಿತ್ರಗಳನ್ನು ತೆಗೆಯುವುದು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ಅದೊಂದು ತಪಸ್ಸು. ತಪಸ್ಸು ಫಲಿಸಿದರೆ ವರ ಕೂಡ ಸಿಗುತ್ತದೆ.” ಹೀಗೆ ತಿಪ್ಪೇಸ್ವಾಮಿ ಅವರ ಚಿಂತನೆ ಸಾಗುತ್ತದೆ.

“ರಾಜ್ಯದಲ್ಲಿ ಹರಿಯುವ ಹಲವಾರು ನದಿ ದಡದಲ್ಲಿ ಎಂತಹ ವನ್ಯಜೀವಿಗಳಿವೆ! ನಮ್ಮ ಊರು ಕೇರಿಗಳಲ್ಲಿರುವ ಕೆರೆಗಳಿಗೂ ಅಪರೂಪದ ಪಕ್ಷಿಗಳು ಬರುತ್ತವೆ. ಅವುಗಳನ್ನು ಸೆರೆ ಹಿಡಿಯುವುದೇ ಆನಂದ.

ಮಾಹಿತಿ ಕೃಪೆ

ಬದಲಾಯಿಸಿ
  1. 5 ದಶಕಗಳ ಚಿತ್ರಯಾನ - ಪ್ರಜಾವಾಣಿ