ಈ ಲೇಖನ ಹೂವಿನ ರಚನೆ ಬಗ್ಗೆ. ಎಸಳು ಶಬ್ದದ ಇನ್ನೊಂದು ಅರ್ಥವಾದ ಬೀಗದ ಕೈ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಎಸಳುಗಳು ಹೂವುಗಳ ಸಂತಾನೋತ್ಪತ್ತಿ ಸಂಬಂಧಿ ಭಾಗಗಳನ್ನು ಸುತ್ತುವರಿದ ಮಾರ್ಪಾಡುಗೊಂಡ ಎಲೆಗಳು. ಪರಾಗಸ್ಪರ್ಶಕಗಳನ್ನು ಆಕರ್ಷಿಸಲು ಇವು ಹಲವುವೇಳೆ ಉಜ್ವಲ ಬಣ್ಣಗಳನ್ನು ಹೊಂದಿರುತ್ತವೆ ಅಥವಾ ಅಸಾಮಾನ್ಯ ಆಕಾರವನ್ನು ಹೊಂದಿರುತ್ತವೆ. ಒಂದು ಹೂವಿನ ಎಲ್ಲ ಎಸಳುಗಳನ್ನು ಒಟ್ಟಾಗಿ ಎಸಳು ಸುತ್ತು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಸಳುಗಳ ಜೊತೆಗೆ ಸೆಪಲ್‍ಗಳೆಂದು ಕರೆಯಲ್ಪಡುವ ವಿಶೇಷ ಎಲೆಗಳ ಮತ್ತೊಂದು ಸಮೂಹವು ಇರುತ್ತದೆ. ಇವೆರಡೂ ಒಟ್ಟಾಗಿ ಪುಷ್ಪ ಪಾತ್ರೆಯನ್ನು ರಚಿಸುತ್ತವೆ ಮತ್ತು ಎಸಳು ಸುತ್ತಿನ ತಕ್ಷಣ ಕೆಳಗೆ ಇರುತ್ತವೆ. ಪುಷ್ಪ ಪಾತ್ರೆ ಮತ್ತು ಎಸಳು ಸುತ್ತುಗಳು ಒಟ್ಟಾಗಿ ಪುಷ್ಪದಳವನ್ನು ರಚಿಸುತ್ತವೆ. ಒಂದು ಹೂವಿನ ಎಸಳುಗಳು ಮತ್ತು ಸೆಪಲ್‍ಗಳನ್ನು ವ್ಯತ್ಯಾಸ ಮಾಡುವುದು ಕಷ್ಟವಾದಾಗ, ಅವುಗಳನ್ನು ಒಟ್ಟಾಗಿ ಟೆಪಲ್‍ಗಳೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಎಸಳುಗಳು ಪ್ರಾಣಿಗಳಿಂದ ಪರಾಗಸ್ಪರ್ಶ ಮಾಡಲ್ಪಡುವ ಹೂವುಗಳ ಅತ್ಯಂತ ಎದ್ದುಕಾಣುವ ಭಾಗಗಳಾಗಿರುತ್ತವೆಯಾದರೂ, ಹುಲ್ಲುಗಳಂತಹ ಗಾಳಿಯಿಂದ ಪರಾಗಸ್ಪರ್ಶ ಮಾಡಲ್ಪಡುವ ಪ್ರಜಾತಿಗಳು ಬಹಳ ಚಿಕ್ಕ ಎಸಳುಗಳನ್ನು ಹೊಂದಿರುತ್ತವೆ ಅಥವಾ ಅವುಗಳನ್ನು ಸಂಪೂರ್ಣವಾಗಿ ಹೊಂದಿರುವುದೇ ಇಲ್ಲ.

ಪ್ರತ್ಯೇಕ ಟೆಪಲ್‍ಗಳ ಎಸಳು ಸುತ್ತನ್ನು ಅಪೋಪೆಟಲಸ್ ಎಂದು ಕರೆಯಲಾಗುತ್ತದೆ. ಎಸಳು ಸುತ್ತಿನಲ್ಲಿ ಎಸಳುಗಳು ಒಂದರಿಂದ ಮತ್ತೊಂದು ಬೇರೆಬೇರೆಯಾಗಿದ್ದರೆ, ಆ ಸಸ್ಯವನ್ನು ಬಹುದಳೀಯ ಅಥವಾ ಬಿಡುದಳೀಯ ಎಂದು ಕರೆಯಲಾಗುತ್ತದೆ; ಎಸಳುಗಳು ಕನಿಷ್ಠಪಕ್ಷ ಭಾಗಶಃ ಒಟ್ಟಾಗಿ ಒಂದುಗೂಡಿದ್ದರೆ, ಆ ಸಸ್ಯವನ್ನು ಸಂಯುಕ್ತದಳೀಯ ಎಂದು ಕರೆಯಲಾಗುತ್ತದೆ. ಕೆಲವು ಸಸ್ಯಗಳಲ್ಲಿ ಎಸಳು ಸುತ್ತು ಒಂದು ನಳಿಕೆಯನ್ನು ರಚಿಸುತ್ತದೆ.

ಭಿನ್ನ ಪ್ರಜಾತಿಗಳಲ್ಲಿ ಎಸಳುಗಳು ಆಕರ್ಷಕ ರೀತಿಯಲ್ಲಿ ಭಿನ್ನವಾಗಿರಬಹುದು. ಒಂದು ಹೂವಿನಲ್ಲಿನ ಎಸಳುಗಳ ಸಂಖ್ಯೆಯು ಒಂದು ಸಸ್ಯದ ವರ್ಗೀಕರಣದ ಬಗ್ಗೆ ಸುಳಿವುಗಳನ್ನು ನೀಡಬಹುದು. ಉದಾಹರಣೆಗೆ, ಯೂಡಿಕಾಟ್‌ಗಳ ಹೂವುಗಳು ಬಹುತೇಕ ಬಾರಿ ನಾಲ್ಕು ಅಥವಾ ಐದು ಎಸಳುಗಳನ್ನು ಹೊಂದಿರುತ್ತವೆ ಮತ್ತು ಏಕದಳ ಸಸ್ಯದ ಹೂವುಗಳು ಮೂರು ಅಥವಾ ಆರು ಎಸಳುಗಳನ್ನು ಹೊಂದಿರುತ್ತವೆ. ಆದರೆ ಈ ನಿಯಮಕ್ಕೆ ಅನೇಕ ಅಪವಾದಗಳಿವೆ.[೧]

ಎಸಳು ಸುತ್ತು ಕೆಂದ್ರಾಪಸರಣವಾಗಿ ಅಥವಾ ಎರಡೂ ಕಡೆಗೆ ಸಮ್ಮಿತೀಯವಾಗಿರಬಹುದು. ಎಲ್ಲ ಎಸಳುಗಳು ಗಾತ್ರ ಮತ್ತು ಆಕಾರದಲ್ಲಿ ಮೂಲಭೂತವಾಗಿ ಸಮಾನವಾಗಿದ್ದರೆ, ಆ ಹೂವನ್ನು ಸುಸಮ್ಮಿತ ಅಥವಾ ಸಮಾನ ವಿಭಾಜ್ಯ ಎಂದು ಹೇಳಲಾಗುತ್ತದೆ. ಅನೇಕ ಹೂವುಗಳು ಕೇವಲ ಒಂದು ಸಮತಲದಲ್ಲಿ ಸಮ್ಮಿತೀಯವಾಗಿರುತ್ತವೆ. ಅವನ್ನು ಅನಿಯತ ಅಥವಾ ಯುಗ್ಮರೂಪಿ ಎಂದು ಹೇಳಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Soltis, Pamela S.; Douglas E. Soltis (2004). "The origin and diversification of angiosperms". American Journal of Botany. 91 (10): 1614–1626. doi:10.3732/ajb.91.10.1614. PMID 21652312. Archived from the original on 2010-06-21. Retrieved 2018-08-03.
"https://kn.wikipedia.org/w/index.php?title=ಎಸಳು&oldid=1124362" ಇಂದ ಪಡೆಯಲ್ಪಟ್ಟಿದೆ