ಎಡ್ವರ್ಡ್ ವಿಕ್ಟರ್ ಅಪಲ್‌ಟನ್
ಬ್ರಿಟನ್ನಿನ ಭೌತವಿಜ್ಞಾನಿಯಾಗಿದ್ದ ಎಡ್ವರ್ಡ್ ವಿಕ್ಟರ್ ಅಪಲ್‌ಟನ್‌ರವರು ೧೮೯೨ರ ಸೆಪ್ಟೆಂಬರ್ ೬ರಂದು ಜನಿಸಿದರು. ಅಪಲ್‌ಟನ್‌ರವರು ೧೯೧೮ರಿಂದ ೧೯೩೯ವರೆಗೆ ರೇಡಿಯೋ ತರಂಗಗಳ ಬಗ್ಗೆ ಪ್ರಯೋಗಗಳನ್ನು ನಡೆಸುವಾಗ, ನಮ್ಮ ಭೂಮಿಯ ಸ್ತರಗೋಳದ (stratosphere) ಮೇಲಿರುವ, ರೇಡಿಯೋತರಂಗಗಳ ಉಚ್ಛಮಟ್ಟದ ಆವೃತ್ತಿಗಳನ್ನು ಪ್ರತಿಫಲಿಸುವ ಅಯಾನುಗೋಳದ (ionosphere) ‘ಅಪಲ್‌ಟನ್ ಪದರ’ವನ್ನು ಕಂಡುಹಿಡಿದರು. ಈಗ ಆ ಪದರವನ್ನು ‘ಎಫ್. ಪದರ’ (F layer) ಎಂದು ಕರೆಯಲಾಗಿದೆ. ಅವರ ಈ ಸಂಶೋಧನೆಗೆ ೧೯೪೭ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಅಪಲ್‌ಟನ್‌ರವರು ಅಯಾನುಗೋಳದ ಆ ಆವೇಶಭರಿತ ಪದರದ ಬಗ್ಗೆ ಸಂಶೋಧನೆಗಳನ್ನು ಮುಂದುವರಿಸಿದರು. ಸೂರ್ಯನ ಸ್ಥಾನ ಮತ್ತು ಸೌರಕಲೆಯ ಆವರ್ತಗಳು ಆ ಪದರದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ನಿರೂಪಿಸಿದರು. ಆ ಪದರದ ಪ್ರತಿಫಲನ ಸಹಾಂಕಗಳು, ಇಲೆಕ್ಟ್ರಾನ್ ಸಾಂದ್ರತೆಗಳು ಮುಂತಾದ ವಿಷಯಗಳನ್ನು ಕೂಡ ಅವರ ಲೆಕ್ಕಾಚಾರ ಮಾಡಿದರು. ಅಲ್ಲದೆ ನಮ್ಮ ಭೂಮಿಯ ಅಯಸ್ಕಾಂತ ಕ್ಷೇತ್ರದಿಂದ ಆ ಪದರದ ಮೇಲೆ ತನ್ನ ಶಕ್ತಿಯ ಪ್ರಭಾವ ಹೇಗೆ ಬೀರುತ್ತಿದೆ ಎನ್ನುವ ವಿಷಯವನ್ನೂ ಸಹ ಅವರು ನಿರೂಪಿಸಿದರು. ಅವರ ಈ ಸಂಶೋಧನೆಗಳು ರೇಡಿಯೋ ಸಂವಹನ ಪ್ರಕ್ರಿಯೆಯ ಅಭಿವೃದ್ಧಿಗೆ ಮೂಲಭೂತ ಕೊಡುಗೆಯಾದವು. ಅಪಲ್‌ಟನ್‌ರವರು ೧೯೬೫ರ ಏಪ್ರಿಲ್ ೨೧ರಂದು ನಿಧನರಾದರು.