ಎಚ್. ಎಂ. ಶಂಕರನಾರಾಯಣರಾವ್

ಪ್ರೊ. ಎಚ್. ಎಂ. ಶಂಕರನಾರಾಯಣರಾವ್ (ನವೆಂಬರ್ ೨೧, ೧೯೧೩ - ಸೆಪ್ಟೆಂಬರ್ ೧೭, ೧೯೯೭) ಕನ್ನಡ ನಾಡಿನ ಶ್ರೇಷ್ಠ ಪ್ರಕಾಶಕಾರಾಗಿ, ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಅನನ್ಯ ಸೇವೆ ಸಲ್ಲಿಸಿದ ಮಹಾನೀಯರಲ್ಲೊಬ್ಬರಾಗಿದ್ದಾರೆ. ಪುಸ್ತಕ ಪ್ರಕಟಣೆ ಎಂಬುದು ಕಷ್ಟಕರವೆನಿಸಿದ್ದ ೧೯೩೫-೧೯೯೦ರ ಅವಧಿಯಲ್ಲಿ, ಕನ್ನಡ ಕವಿಕಾವ್ಯ ಮಾಲೆ ಅಥವಾ ಶಾರದಾ ಮಂದಿರ ಪ್ರಕಾಶನ ಸಂಸ್ಥೆ ಕನ್ನಡದ ಬಹುತೇಕ ಎಲ್ಲ ಪ್ರಸಿದ್ಧ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿತು. ಈ ಸಂಸ್ಥೆ. ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ೪೦೦ ಕ್ಕೂ ಹೆಚ್ಚಿನದು. ಇದನ್ನು ಸ್ಥಾಪಿಸಿದವರು ಸ್ವತಃ ಸಾಹಿತಿಗಳೂ ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಎಚ್‌. ಎಂ. ಶಂಕರನಾರಾಯಣರಾವ್‌ ಅವರು.

ಎಚ್‌. ಎಂ. ಶಂಕರನಾರಾಯಣರಾವ್‌
ಜನನನವೆಂಬರ್ ೨೧, ೧೯೧೩
ಮರಣಸೆಪ್ಟೆಂಬರ್ ೧೭, ೧೯೯೭
ವೃತ್ತಿಪ್ರಾಧ್ಯಾಪಕರು, ಪ್ರಕಾಶಕರು, ಬರಹಗಾರರು

ಶಂಕರನಾರಾಯಣರಾವ್‌ ಅವರ ಮೂಲ ಊರು ದಾವಣಗೆರೆ ಜಿಲ್ಲೆಯ ಹರಿಹರ. ಅಲ್ಲಿನ ಹರಿಹರೇಶ್ವರ ದೇವಾಲಯದ ಅರ್ಚಕ ಮಲ್ಲಾರಿ ಭಟ್ಟ ಮತ್ತು ಭೀಮಕ್ಕ ಅವರ ಪುತ್ರರಾಗಿ ನವೆಂಬರ್‌ ೨೧, ೧೯೧೩ರಂದು ಜನಿಸಿದ ಇವರು. ತಂದೆಯಿಂದ ಸಂಸ್ಕೃತ ಮತ್ತು ವೇದ ಪಾಠಗಳನ್ನು ಕಲಿತರು. ಹರಿಹರ ಮತ್ತು ದಾವಣಗೆರೆಯಲ್ಲಿ ಪ್ರೌಢ ಶಿಕ್ಷಣದವರೆಗೆ ಪೂರೈಸಿದ ನಂತರ ಇವರು ಉನ್ನತ ಶಿಕ್ಷಣಕ್ಕೆ ಮೈಸೂರಿಗೆ ಬಂದರು. ಶಂಕರನಾರಾಯಣರಾವ್‌ ಮೈಸೂರು ಬಸ್‌ ನಿಲ್ದಾಣದಲ್ಲಿ ಇಳಿದಾಗ ಅವರ ಜೇಬಿನಲ್ಲಿ ಇದ್ದಿದ್ದು ನಾಲ್ಕಾಣೆಯ ಒಂದು ಬೆಳ್ಳಿ ಪಾವಲಿ ಮಾತ್ರ. ಆಗಿನ ಕಾಲದಲ್ಲಿ ಉಳಿದುಕೊಳ್ಳಲು ಸತ್ರಗಳಿದ್ದವು. ಹೊಟ್ಟೆ ತುಂಬ ಅನ್ನ ಹಾಕುತ್ತಿದ್ದ ವಾರದ ಮನೆಗಳಿದ್ದವು. ಪ್ರೊ.ಟಿ.ಎಸ್‌. ವೆಂಕಣ್ಣಯ್ಯ, ಡಾ. ಶ್ರೀಕಂಠಶಾಸ್ತ್ರಿ, ತೀ.ನಂ.ಶ್ರೀ., ಡಿ.ಎಲ್‌.ಎನ್‌., ಪ್ರೊ.ಎ. ಆರ್‌.ಕೃಷ್ಣಶಾಸ್ತ್ರಿ, ಕೆ.ವೆಂಕಟರಾಮಪ್ಪ, ಡಾ.ಎ.ಎನ್‌.ನರಸಿಂಹಯ್ಯ ಅವರಂತಹ ಶ್ರೇಷ್ಠ ಗುರುಗಳು ವಾರಾನ್ನದ ಅವಕಾಶ ದೊರಕಿಸಿದರು. ಊಟ ವಸತಿಯ ಸಮಸ್ಯೆ ಬಗೆಹರಿಯಿತು. ಆದರೆ ಶಿಕ್ಷಣದಲ್ಲಿ ಅರ್ಧ ರಿಯಾಯ್ತಿ ಮಾತ್ರ ಸಿಕ್ಕಿತ್ತು. ಪೂರ್ಣ ರಿಯಾಯಿತಿ ಸಿಗದೆ ಓದು ಮುಂದುವರಿಸುವುದು ಕಷ್ಟವಾಗಿತ್ತು. ರಾಯರು ಮಹಾರಾಜ ಕಾಲೇಜಿನ ಕಚೇರಿ ಮ್ಯಾನೇಜರ್‌ ಸೇತುರಾವ್‌ ಅವರನ್ನು ಕಂಡು ತಮ್ಮ ಕಷ್ಟವನ್ನು ತೋಡಿಕೊಂಡರು. ಅವರು ಸಹಾನುಭೂತಿಯಿಂದ ಆಲಿಸಿ ಕಾಲೇಜಿನ ಪ್ರಿನ್ಸಿಪಾಲರನ್ನು ನೋಡುವಂತೆ ಸೂಚಿಸಿದರು. ಪ್ರಿನ್ಸಿಪಾಲರು ಜೆ.ಸಿ.ರಾಲೊ. ರಂಗಿಯವರು. ಇವರನ್ನು ನೋಡುತ್ತಲೇ ‘what?’ ಎಂದು ಗರ್ಜಿಸಿದರು. ರಾಯರು ಬೆವತು ಹೋದರು. ಆದರೂ ಸಾಕಷ್ಟು ಧೈರ್ಯ ತಾಳಿ ‘Sir, I am on weekly meals’ ಎಂದು ಪೂರ್ಣಗೊಳಿಸುವಷ್ಟರಲ್ಲಿಯೇ ‘what Sethu rao, does this man take his food once a week’ ಎಂದು ರಾಲೊ ಜೋರಾಗಿಯೇ ಪ್ರಶ್ನಿಸಿದರು. ಒಡನೆಯೇ ‘yes sir’ ಎಂಬ ಮಾರುತ್ತರ ಬಂತು. ‘then grant him another half free ship’ ಎಂದು ವಿಷಯ ಮುಕ್ತಾಯ ಗೊಳಿಸಿದರು. ಅವರಿಗೆ ವಾರಾನ್ನದ ಕಲ್ಪನೆ ಹೊಸದು. ಅದಕ್ಕೆ ರಾಯರು ವಾರಕ್ಕೊಮ್ಮೆ ಊಟ ಮಾಡುತ್ತಾರೆ ಎಂದು ಭಾವಿಸಿದ್ದರು! ರಾಯರು ಕನ್ನಡ ಆನರ್ಸ್ ಓದುತ್ತಿದ್ದಾಗ ಇವರ ಸಹಪಾಠಿಗಳಾಗಿದ್ದವರು ಜಿ. ವೆಂಕಟಸುಬ್ಬಯ್ಯ ಮತ್ತು ರಾಜಶೇಖರಯ್ಯ. ಓದುತ್ತಿದ್ದಾಗಲೇ ರಾಜಶೇಖರಯ್ಯ ತೀರಿಕೊಂಡರು. ಇವರಿಬ್ಬರಿಗೆ ಕಿರಿಯರಾಗಿದ್ದ ಎಸ್‌. ವಿ. ಪರಮೇಶ್ವರ ಭಟ್ಟರು ಮರುವರ್ಷ ಆನರ್ಸ್ಗೆ ಸೇರಿದರು. ಆಮೇಲೆ ಈ ಮೂವರೂ ಒಟ್ಟಾಗಿಯೇ ಇರುತ್ತಿದ್ದರು. ಎಂ.ಎ. ಪದವೀಧರರಾದ ಮೇಲೆ ರಾಯರು ಮೈಸೂರಿನ ಬನುಮಯ್ಯ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಮುಂದೆ ೧೯೪೫ರಲ್ಲಿ ಶಾರದಾ ವಿಲಾಸ ಕಾಲೇಜು ಪ್ರಾರಂಭವಾದಾಗ ಪೂರ್ಣಕಾಲಿಕ ಉಪನ್ಯಾಸಕರಾಗಿ ಆಯ್ಕೆಗೊಂಡರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ೧೯೭೫ರಲ್ಲಿ ನಿವೃತ್ತರಾದರು.

ಪ್ರಕಾಶಕಾರಾಗಿ

ಬದಲಾಯಿಸಿ

೧೯೩೩ರಲ್ಲಿ, ಹಾಸನದಲ್ಲಿ ಮೊದಲ ಬಾರಿಗೆ ಬಿ. ಎಂ. ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆ ನಡೆದ ವಿವರಗಳು ರಾಯರಿಗೆ ತಿಳಿದವು. ಆಗ ತಾವೂ ಪುಸ್ತಕ ಬರೆಯಬೇಕು ಎಂಬ ಆಸೆ ಹೊತ್ತು ತಮ್ಮ ಪ್ರಿಯ ಕವಿಯಾಗಿದ್ದ ರಾಘವಾಂಕನ ಬಗ್ಗೆ ಸಣ್ಣ ಕೃತಿಯನ್ನು ರಚಿಸಿದರು. ಆದರೆ ಅದನ್ನು ಪ್ರಕಟಿಸುವವರು ಯಾರು? ತಾವೇ ಪ್ರಕಾಶಕರಾದರು. ಕನ್ನಡ ಕವಿಕಾವ್ಯ ಮಾಲೆಯ ಪ್ರಥಮ ಕುಸುಮ ಅರಳಿದ್ದು ಹೀಗೆ. ಶಂಕರನಾರಾಯಣರಾವ್‌ ಪ್ರಕಾಶಕರಾದ ಮೇಲೆ ಸಿದ್ಧಪ್ರಸಿದ್ಧ ಲೇಖಕರನ್ನು, ವಿದ್ವಾಂಸರನ್ನು ಅಳುಕಿನಿಂದಲೇ ‘ನನಗೊಂದು ಪುಸ್ತಕ ಕೊಡಿ. ಪ್ರಕಟಿಸುತ್ತೇನೆ’ ಎಂದು ಮನವಿ ಮಾಡಿದರು. ಅವರ ವ್ಯವಹಾರ ಕುಶಲತೆ ಎಷ್ಟೊಂದು ಫಲ ಕೊಟ್ಟಿತೆಂದರೆ ಸ್ವಲ್ಪ ಕಾಲದಲ್ಲಿಯೇ ಪ್ರಸಿದ್ಧ ಲೇಖಕರು ‘ನನ್ನದೊಂದು ಪುಸ್ತಕ ಪ್ರಕಟಿಸಿ’ ಎಂದು ಕೇಳತೊಡಗಿದರು. ಪ್ರಾಚೀನ ಕಾವ್ಯಗಳ ಪ್ರಕಟಣೆ, ಸಂಸ್ಕೃತದ ಎಲ್ಲ ಅಲಂಕಾರ ಕೃತಿಗಳನ್ನು ಅರ್ಥ, ಟಿಪ್ಪಣಿಗಳೊಂದಿಗೆ ಕನ್ನಡದಲ್ಲಿ ಪ್ರಕಟಿಸುವುದು, ವಾಚಕರ ಅಭಿರುಚಿ ಬೆಳೆಸುವಂತಹ ಗ್ರಂಥಗಳನ್ನು ಕಡಿಮೆ ಬೆಲೆಗೆ ನೀಡುವುದು ಕವಿಕಾವ್ಯ ಮಾಲೆಯ ಧ್ಯೇಯವಾಗಿತ್ತು. ಎ.ಆರ್. ಕೃಷ್ಣಶಾಸ್ತ್ರೀ, ಎ.ಎನ್‌. ಮೂರ್ತಿರಾವ್‌, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ತೀನಂಶ್ರೀ, ಡಿಎಲ್‌ಎನ್‌, ವೆಂಕಟಾಚಲ ಶಾಸ್ತ್ರೀ, ಚನ್ನವೀರ ಕಣವಿ, ಆರ್‌.ಸಿ. ಹಿರೇಮಠ, ಆನಂದ, ಅಶ್ವತ್ಥ, ಎಸ್‌.ವಿ. ರಂಗಣ್ಣ, ಪುತಿನ, ತರಾಸು, ದೇಜಗೌ, ಹಾಮನಾ, ಎಸ್‌.ವಿ. ಪರಮೇಶ್ವರ ಭಟ್ಟ, ಶ್ರೀರಂಗ – ಹೀಗೆ ಆಗಿನ ಕಾಲದ ಪ್ರಸಿದ್ಧ ಲೇಖಕರ ಕೃತಿಗಳನ್ನು ಶಾರದಾ ಮಂದಿರದಿಂದ ಪ್ರಕಟಿಸಿದರು.

ಮೆಚ್ಚುಗೆ ಪಡೆದ ಸಂಸ್ಥೆ

ಬದಲಾಯಿಸಿ

ಶಂಕರನಾರಾಯಣರಾವ್‌ ಅವರ ಪ್ರಕಟಣಾ ವೈಖರಿಯನ್ನು ಜಿ.ವೆಂಕಟಸುಬ್ಬಯ್ಯ ಅವರು– ‘ಪ್ರಕಟಣ ಶಾಸ್ತ್ರದಲ್ಲಿ ಪರಿಣಿತರಾದ ನಿಮಗೆ ನಾನು ಶಹಬ್ಭಾಸ್ಗಿರಿಯನ್ನು ಕೊಡಬೇಕಾಗಿಲ್ಲ. ಒಟ್ಟು ಕನ್ನಡ ನಾಡೇ ನಿಮ್ಮನ್ನು ಹೊಗಳುತ್ತದೆ. ವಿದ್ವಜ್ಜನರಿಗಂತೂ ನಿಮ್ಮ ಸಾಹಸವನ್ನು ಕಂಡು ರೋಮಾಂಚನ ವಾಗುತ್ತದೆ’ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ. ಶಾರದಾ ಮಂದಿರದಿಂದ ಪ್ರಕಟವಾದ ಪುಸ್ತಕಗಳ ಲೇಖಕರೆಲ್ಲರೂ ತಮಗೆ ಸಲ್ಲಬೇಕಾದ ಸಂಭಾವನೆ ತಪ್ಪದೆ ಸಂದಾಯವಾಗಿದೆ ಎಂದು ತೃಪ್ತಿಪಟ್ಟಿದ್ದಾರೆ. ‘ಪುಸ್ತಕದ ಮಾರಾಟಕ್ಕಾಗಿ ಕಾಯದೆ ಲೇಖಕರ ಹಣವನ್ನು ಮುಂಚೆಯೇ ಕೊಡುವ ಸ್ನೇಹ ಸೌಜನ್ಯವನ್ನು ಸ್ಮರಿಸಿಕೊಳ್ಳಬೇಕು’ ಎಂದು ಪ್ರೊ.ಕೆ.ವೆಂಕಟರಾಮಪ್ಪ ಹೇಳಿದರೆ ‘ಸಮಯಕ್ಕೆ ಸರಿಯಾಗಿ ಲೇಖಕನ ಗೌರವಧನ ತಲುಪುತ್ತಿದೆ’ ಎಂದು ಶ್ರೀರಂಗರು ಮೆಚ್ಚುಗೆಯ ಮಾತನಾಡಿದ್ದಾರೆ.

ಬರವಣಿಗೆ

ಬದಲಾಯಿಸಿ

ಶಂಕರನಾರಾಯಣರಾವ್‌ ಅವರು ಪ್ರಸಿದ್ಧರ ಕೃತಿಗಳನ್ನು ಪ್ರಕಟಿಸುವುದಲ್ಲದೆ ತಾವೂ ಕೂಡ ೨೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಹರಿಹರ ದೇವಾಲಯ ಕುರಿತ ಅವರ ಸಂಶೋಧನಾತ್ಮಕ ಕೃತಿ ವಿದ್ವಾಂಸರ ಗಮನ ಸೆಳೆದಿದೆ. ಕವಿ ರಾಘವಾಂಕ, ಚಂದ್ರಗುಪ್ತ ವಿಜಯ, ಕೆಂಪು ನಾರಾಯಣ, ಮುದ್ರೆಯುಂಗುರ, ಮೃಚ್ಛಕಟಿಕ ಪ್ರಕರಣ, ಕರ್ನಾಟಕ ಶಾಕುಂತಲ ನಾಟಕ, ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ, ಹರಿಹರ ದೇವಾಲಯ, ಯಶೋಧರ ಚರಿತೆ, ಮಧ್ಯಮ ವ್ಯಾಯಾಮ ಯೋಗ ಮುಂತಾದವು ಅವರ ಕೃತಿಗಳಲ್ಲಿ ಸೇರಿವೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಇವರ ಪ್ರಕಾಶನ ಸಂಸ್ಥೆಯಿಂದ ಹೊರಬಂದ ಹಲವಾರು ಗ್ರಂಥಗಳು ಕೇಂದ್ರ ಸಾಹಿತ್ಯ ಅಕಾಡಮಿ, ರಾಜ್ಯ ಸಾಹಿತ್ಯ ಅಕಾಡಮಿ ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿಗಳನ್ನು ಗಳಿಸಿದ್ದವು. ಇಷ್ಟೊಂದು ಸಾಧಿಸಿದ್ದ ಶಂಕರನಾರಾಯಣರಾಯರನ್ನು ಯಾವ ಸಂಸ್ಥೆ, ಅಕಾಡಮಿಗಳು ಗುರುತಿಸದೆ ಹೊದದ್ದು ವಿಷಾದನೀಯ ಸಂಗತಿ ಎಂದು ಕನ್ನಡ ಸಾಂಸ್ಕೃತಿಕ ಲೋಕದ ವಿದ್ವಾಮರ ಭಾವಿಸುವುದಿದೆ.

೧೯೯೭ರ ಸೆಪ್ಟೆಂಬರ್ ೧೭ರಂದು ತಮ್ಮ ೮೪ನೇ ವಯಸ್ಸಿನಲ್ಲಿ ಶಂಕರನಾರಾಯಣರಾವ್‌ ನಿಧನರಾದಾಗ ಕನ್ನಡದ ಪತ್ರಿಕೆಗಳು ‘ಶಂಕರನಾರಾಯಣರಾವ್‌ ಈಗ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದ್ದಾರೆ. ಆದರೆ ಅವರು ನಿರ್ಮಿಸಿದ ಶಾರದಾ ಮಂದಿರ, ಅಲ್ಲಿ ಅವರು ಬೆಳಗಿದ ಹಣತೆಗಳು ಜ್ಞಾನಪಿಪಾಸುಗಳಿಗೆ ಎಂದೆಂದಿಗೂ ದಾರಿದೀಪ’ ಎಂದು ಬಣ್ಣಿಸಿದವು.

ಮುಂದುವರೆದ ಪ್ರಕಾಶನ

ಬದಲಾಯಿಸಿ

ಪ್ರಸಕ್ತದಲ್ಲಿ ಶಂಕರನಾರಾಯಣರಾವ್ ಅವರು ಪುತ್ರ ಪ್ರೊ. ಎಚ್.ಎಸ್. ಹರಿಶಂಕರರು ಪ್ರಕಟಣಾಕಾರ‍್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರೊ. ಎಚ್.ಎಂ. ಶಂಕರನಾರಾಯಣರಾಯರ ಸ್ಮರಣೆಗಾಗಿ ೨೦೦೯ರಲ್ಲಿ ಪ್ರಕಟಗೊಂಡ ಕೃತಿ ‘ಶಂಕರ ಸ್ಮೃತಿ’.

ಆಕರಗಳು

ಬದಲಾಯಿಸಿ
  1. ಕಣಜ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
  2. ಶಂಕರನಾರಾಯಣರಾವ್ ನೂರರ ನೆನಪು